“ಎಸ್ತೇರಳು” ಎಂಬ ಬೈಬಲಿನ ಗ್ರಂಥವನ್ನು ಮೂಲದಲ್ಲಿ ಹಿಬ್ರು ಹಾಗು ಗ್ರೀಕ್ ಭಾಷೆಯಲ್ಲಿ ಬರೆದಿದೆ. ಎರಡು ಮೂಲಗಳನ್ನೂ ಹೋಲಿಸಿ ನೋಡಿದಾಗ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ; ಹಿಬ್ರು ಮೂಲಕ್ಕಿಂತ ಗ್ರೀಕ್ ಮೂಲದಲ್ಲಿ ಹೆಚ್ಚು ವಿವರಗಳು ಇವೆ. ಘಟನೆಗಳ ಕಾಲ ಒಂದೇ ಆಗಿದ್ದರೂ, ಗ್ರೀಕ್ ವಿಭಾಗದಲ್ಲಿ ವಿವಿಧ ಹೆಸರುಗಳಿರುವುದನ್ನೂ, ಧಾರ್ಮಿಕ ವಿಷಯಗಳಿಗೆ ಹೆಚ್ಚು ಒತ್ತುಕೊಟ್ಟಿರುವುದನ್ನೂ ವಾಚಕರು ಗಮನಿಸಬಹುದು.
ಹಿಬ್ರು ಮೂಲದಲ್ಲಿ ಕಾಣದ, ಗ್ರೀಕ್ ವಿಭಾಗದಲ್ಲಿ ಮಾತ್ರ ಕಾಣುವ ವಿಷಯಗಳನ್ನು ಕನ್ನಡ ಅಂಕೆ 1ರಿಂದ 6ರವರೆಗೆ ಸ್ಪಷ್ಟವಾಗಿ ವಿಂಗಡಿಸಲಾಗಿದೆ. ಇದು ವಿಭಿನ್ನವಾದ ಮುನ್ನುಡಿ ಹಾಗೂ ಮುಕ್ತಾಯಗಳನ್ನು ಒಳಗೊಂಡಿದೆ. ದಾಖಲೆಗಳ ಅಧಿಕೃತ ನಿರೂಪಣೆ, ಪ್ರಾರ್ಥನೆ ಮತ್ತು ಅದರ ಪ್ರತಿಫಲ ಮುಂತಾದ ಧಾರ್ಮಿಕ ವಿಷಯಗಳ ಪ್ರಸ್ತಾಪ, ಗ್ರೀಕ್ ವಿಭಾಗದಲ್ಲಿ ಕಂಡುಬರುವ ಪ್ರಮುಖ ಅಂಶಗಳಾಗಿವೆ. ಈ ಗ್ರಂಥ ರಚನೆಯ ಕಾಲ ಕ್ರಿ.ಪೂ. ಎರಡನೆಯ ಶತಮಾನದ ಪೂರ್ವಾರ್ಧಭಾಗ.