Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಮೇಲ್ಕಂಡ ಪತ್ರದ ನಕಲು ಇದು: “ಭಾರತ (ಇಂಡಿಯಾ) ದೇಶದಿಂದ ಮೊದಲುಗೊಂಡು ಇಥಿಯೋಪಿಯಾ ದೇಶದವರೆಗೆ ವಿಸ್ತರಿಸಿರುವ 127 ಪ್ರಾಂತ್ಯಗಳ ಅಧಿಪತಿಗಳಿಗೂ ಅವರ ಕೈಕೆಳಗಿರುವ ಅಧಿಕಾರಿಗಳಿಗೂ ಅಹಷ್ಟೇರೋಷ ಮಹಾರಾಜ ಪತ್ರ ಬರೆದು ತಿಳಿಸುವುದೇನೆಂದರೆ:
2 : “ನಾನು ಹಲವಾರು ರಾಷ್ಟ್ರಗಳನ್ನು ಜಯಿಸಿ ಲೋಕಾಧಿಪತಿಯಾಗಿದ್ದರೂ ನನ್ನ ಪ್ರಜೆಗಳು ಶಾಂತಿಯಿಂದ ಬಾಳಬೇಕೆಂದು ನಿರ್ಧರಿಸಿದ್ದೇನೆ. ಈ ನಿರ್ಧಾರವನ್ನು ಕೈಗೊಂಡಿದ್ದು ಅಧಿಕಾರದ ವ್ಯಾಮೋಹದಿಂದಲ್ಲ. ಪ್ರಜೆಗಳನ್ನು ನ್ಯಾಯದಿಂದಲೂ ಕರುಣೆಯಿಂದಲೂ ಪರಿಪಾಲಿಸಬೇಕೆಂಬ ಬಯಕೆಯಿಂದ; ನನ್ನ ರಾಜ್ಯದಲ್ಲಿ ಇರುವ ಪ್ರಜೆಗಳು ಸುಕ್ಷೇಮದಿಂದ ಬಾಳಬೇಕು; ನನ್ನ ರಾಜ್ಯದಲ್ಲಿ ಶಾಂತಿ ಸಮಾಧಾನ ನೆಲೆಯಾಗಿ ಇರಬೇಕು; ಪ್ರಯಾಣಿಕರು ಎಲ್ಲೆಡೆ ನಿರ್ಭೀತಿಯಿಂದ ಸಂಚರಿಸುವಂತಿರಬೇಕು; ಎಲ್ಲರೂ ಬಯಸುವ ನೆಮ್ಮದಿ ನಮ್ಮ ರಾಜ್ಯದಲ್ಲಿ ಪುನರ್ ಸ್ಥಾಪಿತವಾಗಬೇಕು.
3 : “ನನ್ನ ಈ ನಿರ್ಧಾರವನ್ನು ಹೇಗೆ ಕಾರ್ಯರೂಪಕ್ಕೆ ತರುವುದು ಎಂದು ನನ್ನ ಸಲಹೆಗಾರರೊಡನೆ ಸಮಾಲೋಚಿಸಿದೆ.
4 : ಸೂಕ್ತವಾದ ಸಲಹೆ ನೀಡುವುದರಲ್ಲಿ ಅತಿ ನಿಪುಣನು, ವಿವೇಕಿಯು, ಪ್ರಾಮಾಣಿಕಸ್ಥನು ಎಂದು ಹೆಸರುವಾಸಿಯಾದ ಹಾಗು ನನ್ನ ರಾಜ್ಯದಲ್ಲೇ ದ್ವಿತೀಯ ಸ್ಥಾನವನ್ನು ಅಲಂಕರಿಸಿರುವ ಹಾಮಾನನು: ‘ಲೋಕದ ಎಲ್ಲಾ ರಾಜ್ಯಗಳ ಮಧ್ಯೆ ಹರಡಿದ್ದರೂ ಅವುಗಳಿಂದ ಪ್ರತ್ಯೇಕವಾಗಿಯೇ ಉಳಿದಿರುವ ಒಂದು ಜನಾಂಗ ಇದೆ. ಇತರ ಜನಾಂಗಗಳವರ ನೀತಿ ನಿಯಮಗಳಿಗೆ ವ್ಯತಿರಿಕ್ತವಾದವುಗಳನ್ನು ಈ ಜನಾಂಗ ಅನುಸರಿಸುತ್ತದೆ. ಅರಸನ ಆಜ್ಞೆಗಳನ್ನಂತೂ ಅದು ನಿರಂತರವಾಗಿ ಉಲ್ಲಂಘಿಸುತ್ತಾ ಬರುತ್ತಿದೆ. ಇದರಿಂದಾಗಿ, ನಾವೆಲ್ಲರು ಬಹುವಾಗಿ ಅಪೇಕ್ಷಿಸುತ್ತಿರುವ ರಾಜ್ಯದ ಸುಭದ್ರತೆಯನ್ನು ಕಾಪಾಡಲು ಮಾಡುವ ಪ್ರಯತ್ನಗಳೆಲ್ಲ ವಿಫಲವಾಗುತ್ತಿವೆ,’ ಎಂದು ತಿಳಿಸಿದನು.
5 : “ಈ ವಿಚಿತ್ರವಾದ ಜನರು ಇಡೀ ಮಾನವ ಕುಲಕ್ಕೆ ವಿರೋಧವಾಗಿದ್ದು, ಪ್ರತ್ಯೇಕವಾದ ನಿಯಮಗಳನ್ನು ಪಾಲಿಸುತ್ತಾರೆ. ಇವರು ನಿಜಕ್ಕೂ ದೇಶದ್ರೋಹಿಗಳು, ಅಕ್ರಮಿಗಳು, ನಮ್ಮ ರಾಜ್ಯದ ಸುಭದ್ರತೆಗೆ ಮಾರಕವಾದವರು.
6 : ಈ ಕಾರಣದಿಂದ, ನಮ್ಮ ಪ್ರಧಾನ ಮಂತ್ರಿಯಾದ ಹಾಮಾನನು ಸೂಚಿಸಿರುವ ಈ ದುಷ್ಟ ಜನರನ್ನು ಒಂದೇ ದಿನದಲ್ಲಿ, ಅಂದರೆ ಹನ್ನೆರಡನೇ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೇ ದಿನದಲ್ಲಿ, ಹೆಂಗಸರು ಮಕ್ಕಳು ಎನ್ನದೆ, ಈ ಎಲ್ಲಾ ಯೆಹೂದ್ಯರನ್ನು ದಯೆದಾಕ್ಷಿಣ್ಯವಿಲ್ಲದೆ ಕತ್ತಿಯಿಂದ ಸಂಹರಿಸಬೇಕು.
7 : ಇಷ್ಟು ದೀರ್ಘ ಕಾಲದವರೆಗೆ ಹೇಯವಾದ ದುಷ್ಕøತ್ಯಗಳನ್ನು ಎಸಗುತ್ತಾ ಬಂದಿರುವ ಈ ಜನರು ಒಂದೇ ದಿನದಲ್ಲಿ ಕ್ರೂರವಾಗಿ ಹತರಾಗಬೇಕು. ತತ್ಪರಿಣಾಮವಾಗಿ ನಮ್ಮ ರಾಜ್ಯ ಇನ್ನು ಮುಂದೆ ಸುಭದ್ರವೂ ಸುರಕ್ಷಿತವೂ ಆಗುವುದು.”

· © 2017 kannadacatholicbible.org Privacy Policy