1 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ಜೆರುಸಲೇಮ್ ನಗರವನ್ನು ಆಕ್ರಮಿಸಿದನು.
2 : ಆಗ ಜುದೇಯ ನಾಡಿನ ಅರಸ ಯೆಹೋಯಾಕೀಮನೊಂದಿಗೆ ಬೆನ್ಯಾಮೀನ ಕುಲದ ಮೊರ್ದೆಕೈಯೆಂಬ ಯೆಹೂದ್ಯನೊಬ್ಬನು ಸೆರೆಹೋದನು.
3 : ಮೊರ್ದೆಕೈಯನು ಯಾಯೀರ ಎಂಬವನ ಮಗ. ಯಾಯೀರನು ಕೀಷ ಮತ್ತು ಶಿಮಾಯ ವಂಶದ ಸಂತತಿಯವನು. ಮೊರ್ದೆಕೈಯನು ಪರ್ಷಿಯಾ ದೇಶದ ಶೂಷನ ನಗರದಲ್ಲಿ ಅಹಷ್ಟೇರೋಷ ರಾಜನ ಆಸ್ಥಾನದಲ್ಲಿ ಒಬ್ಬ ಮುಖ್ಯ ಅಧಿಕಾರಿಯಾಗಿದ್ದನು.
ಅಹಷ್ಟೇರೋಷನ ಆಳ್ವಿಕೆಯ ಎರಡನೇ ವರ್ಷದ, ನಿಸಾನ ಮಾಸದ ಮೊದಲನೇ ದಿನದಂದು ಮೊರ್ದೆಕೈಯನಿಗೆ ಒಂದು ಕನಸು ಬಿತ್ತು.
4 : ಇಗೋ, ಎಲ್ಲೆಲ್ಲೂ ಗದ್ದಲ ಹಾಗು ಗೊಂದಲ, ಗುಡುಗು ಮತ್ತು ಭೂಕಂಪ, ಭೂಮಿಯಲ್ಲೆಲ್ಲಾ ಕೋಲಾಹಲ ಕಂಡುಬಂದಿತು. ಆಗ ಎರಡು ಭೀಕರ ಘಟಸರ್ಪಗಳು ಕಾಣಿಸಿಕೊಂಡವು:
5 : ಅವು ಒಂದಕ್ಕೊಂದು ವಿರುದ್ಧ ಕಾಳಗಕ್ಕೆ ಸಜ್ಜಾಗಿ ನಿಂತಿದ್ದವು.
6 : ಘೋರವಾಗಿ ಗರ್ಜಿಸಿದವು. ಸಜ್ಜನರಿಂದ ಕೂಡಿದ ದೇವರ ರಾಷ್ಟ್ರದ ವಿರುದ್ಧ ಎಲ್ಲಾ ರಾಜ್ಯಗಳು ಯುದ್ಧಮಾಡಲು ಸಿದ್ಧವಾದವು.
7 : ಜಗತ್ತಿನಾದ್ಯಂತ ಕಾರ್ಗತ್ತಲೆ ಕವಿದಿತ್ತು. ಕಷ್ಟ ಸಂಕಟದ, ನಾಶಪರಿವಿನಾಶದ ಕರಾಳ ದಿನ ಆಗಿತ್ತು ಅದು.
8 : ದೇವರ ಸಜ್ಜನರೆಲ್ಲರಿಗೆ ಉಪದ್ರವವುಂಟಾಗಿ ತಮಗೇನಾಗುವುದೋ ಎಂಬ ಭೀತಿ ಅವರನ್ನು ಆವರಿಸಿತು. ಎಲ್ಲರು ಮರಣಕ್ಕೆ ಸಿದ್ಧರಾದರು;
9 : ದೇವರ ಸಹಾಯಕ್ಕಾಗಿ ಮೊರೆ ಇಟ್ಟರು. ಇದರ ಪರಿಣಾಮವಾಗಿ ಸಣ್ಣ ಬುಗ್ಗೆಯೊಂದು ಚಿಮ್ಮಿ ದೊಡ್ಡ ನದಿಯಾಗಿ ರಭಸದಿಂದ ಹರಿಯತೊಡಗಿತು.
10 : ಸೂರ್ಯೋದಯ ಆಗಿ ಬೆಳಗಾಯಿತು. ದೀನದಲಿತರು ಶಕ್ತಿಯುತರಾಗಿ ಸೊಕ್ಕಿನ ಶತ್ರುಗಳನ್ನು ಕಬಳಿಸಿದರು.
11 : ಮೊರ್ದೆಕೈ ಎಚ್ಚೆತ್ತನು. ಕನಸಿನಲ್ಲಿ ಕಂಡ ದೈವಯೋಜನೆಯನ್ನು ಚಿಂತಿಸಿದನು. ದಿನವಿಡೀ ಅದರ ಬಗ್ಗೆ ಆಲೋಚಿಸಿ ಅದರ ಅರ್ಥವನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದನು.
12 : ಮೊರ್ದೆಕೈ ಅರಮನೆಯ ಅಂಗಳದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದನು. ಅಲ್ಲಿ ರಾಜಕಂಚುಕಿಗಳಾದ ಗಬಥ ಮತ್ತು ತರ್ರಾ ಎಂಬ ಇಬ್ಬರು ಕಾವಲಿದ್ದರು.
13 : ಅವರು ಒಳಸಂಚು ಮಾಡುತ್ತಿರುವುದು ಕೇಳಿಬಂದಿತು. ಮೊರ್ದೆಕೈ ಅವರ ಮಾತುಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡನು. ಅವರಿಬ್ಬರು ಅರಸನನ್ನು ಕೊಲ್ಲಲು ಸಂಚು ಮಾಡುತ್ತಿರುವುದು ತಿಳಿದುಬಂದಿತು. ಕೂಡಲೆ ಮೊರ್ದೆಕೈ, ಅಹಷ್ಟೇರೋಷ ರಾಜನ ಬಳಿಗೆ ತೆರಳಿ ಕಂಚುಕಿಯರ ಒಳಸಂಚಿನ ಬಗ್ಗೆ ವರದಿ ಮಾಡಿದನು.
14 : ಅರಸ ಕಂಚುಕಿಯರನ್ನು ಕರೆಸಿ ಪ್ರಶ್ನಿಸಿದನು. ಅವರಿಬ್ಬರು ತಪ್ಪನ್ನು ಒಪ್ಪಿಕೊಂಡದ್ದರಿಂದ ಅವರಿಗೆ ಮರಣದಂಡನೆ ವಿಧಿಸಲಾಯಿತು
15 : ಈ ಘಟನೆಯನ್ನು ಅರಸನು ತನ್ನ ಅಧಿಕೃತ ಪುಸ್ತಕದಲ್ಲಿ ದಾಖಲೆಯಾಗಬೇಕೆಂದು ಆಜ್ಞಾಪಿಸಿದನು. ಮೊರ್ದೆಕೈಯನು ಕೂಡ ಇದನ್ನು ದಾಖಲೆ ಮಾಡಿಕೊಂಡನು.
16 : ಬಳಿಕ ಅರಸನು ಮೊರ್ದೆಕೈಯನ್ನು ತನ್ನ ಆಸ್ಥಾನದಲ್ಲಿ ಉನ್ನತ ಪದವಿಗೆ ನೇಮಿಸಿದನು. ಮಾತ್ರವಲ್ಲ, ಅವನು ಮಾಡಿದ ಉಪಕಾರಕ್ಕಾಗಿ ತಕ್ಕ ಬಹುಮಾನವನ್ನು ಕೊಟ್ಟನು.
17 : ಆಗ ಅಗಾಗನ ವಂಶದವನೂ ಹೆಮ್ಮೆದಾತನ ಮಗನೂ ಆದ ಹಾಮಾನನು ಆಸ್ಥಾನದಲ್ಲಿ ಗಣ್ಯಸ್ಥಾನವನ್ನು ಅಲಂಕರಿಸಿದ್ದನು. ಮೊರ್ದೆಕೈಯನು ರಾಜಕಂಚುಕಿಗಳ ಮರಣ ದಂಡನೆಗೆ ಕಾರಣನಾಗಿದ್ದರಿಂದ ಅವನಿಗೂ ಅವನ ಸ್ವಜನ ಯೆಹೂದ್ಯರಿಗೂ ಹಾನಿಯನ್ನು ಉಂಟುಮಾಡಲು ಅವನು ಹವಣಿಸಿದನು.