1 : ಇದಾದ ಕೆಲವು ದಿನಗಳನಂತರ ಅರಸನ ಕೋಪವು ಶಾಂತವಾದಾಗ, ಅವನು ವಷ್ಟಿರಾಣಿಯನ್ನು, ಆಕೆಯ ವರ್ತನೆಯನ್ನು, ಆಕೆಯ ವಿರುದ್ಧ ತಾನು ನೀಡಿದ್ದ ತೀರ್ಪನ್ನು ಜ್ಞಾಪಿಸಿಕೊಂಡನು.
2 : ಅವನ ಸೇವೆ ಮಾಡುತ್ತಿದ್ದ ರಾಜ ಪರಿವಾರದವರು ಅವನಿಗೆ – “ಅರಸನಿಗೋಸ್ಕರ ಸುಂದರ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆ ಆಗಬೇಕು.
3 : ಇದಕ್ಕಾಗಿ ರಾಜ್ಯದ ಎಲ್ಲಾ ಸಂಸ್ಥಾನಗಳಿಗೂ ಅಧಿಕಾರಿಗಳನ್ನು ಕಳುಹಿಸಬೇಕು. ಇವರು ಸುರಸುಂದರಿಯರಾದ ಕನ್ಯೆಯರನ್ನೆಲ್ಲಾ ಶೂಷನ್ ನಗರಕ್ಕೆ ಕರೆತಂದು ಅಂತಃಪುರದಲ್ಲಿ ಸೇರಿಸಿ ಕೂಡಿಸಿ ಅಂತಃಪುರಪಾಲಕನೂ ರಾಜಕಂಚುಕಿಯೂ ಆದ ಹೇಗೈಯ ವಶಕ್ಕೆ ಒಪ್ಪಿಸಬೇಕು. ಇವನು ಅವರಿಗೆ ಸೌಂದರ್ಯ ವರ್ಧಕ ಸಾಧನಗಳನ್ನು, ಲೇಪನದ್ರವ್ಯಗಳನ್ನು ಕೊಡುವಂತೆ ವ್ಯವಸ್ಥೆ ಮಾಡಬೇಕು.
3 : ಇಬ್ಬರು ಸೇವಕಿಯರನ್ನು ಕರೆದುಕೊಂಡಳು. ಒಬ್ಬಳು ಪಕ್ಕದಲ್ಲಿದ್ದು ಅವಳನ್ನು ಒರಗಿಸಿಕೊಂಡಿರಲಾಗಿ,
4 : ಯಾವ ಕನ್ಯೆಯು ಅರಸನಿಗೆ ಸುಪ್ರೀತಳಾಗಿ ಕಾಣುವಳೋ ಅವಳು ವಷ್ಟಿರಾಣಿಯ ಬದಲಾಗಿ ಪಟ್ಟದರಸಿ ಆಗಬೇಕು,” ಎಂದು ಹೇಳಿದರು. ಅವರ ಈ ಸಲಹೆ ಅರಸನಿಗೆ ಸೂಕ್ತವೆಂದು ತೋರಿಬರಲು ಅವನು ಅದೇ ಪ್ರಕಾರ ಮಾಡಿದನು.
5 : ಶೂಷನ್ ನಗರದಲ್ಲಿ ಮೊರ್ದೆಕೈ ಎಂಬ ಯೆಹೂದ್ಯನೊಬ್ಬನು ವಾಸಿಸುತ್ತಿದ್ದನು. ಇವನು ಬೆನ್ಯಾಮೀನ್ ಕುಲದ ಕೀಷನ ಮರಿಮಗನು, ಶಿಮ್ಗಿಯ ಮೊಮ್ಮಗನು, ಯಾಯೀರನ ಮಗನೂ ಆಗಿದ್ದನು.
6 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಂದ ಸೆರೆಹಿಡಿಯಲಾದ ಯೆಹೂದ ಅರಸನಾದ ಯೆಕೋನ್ಯನ ಜೊತೆಗೆ ಜೆರುಸಲೇಮಿನಲ್ಲಿ ಸೆರೆಹಿಡಿಯಲಾದವರಲ್ಲಿ ಇವನೂ ಒಬ್ಬನಾಗಿದ್ದನು.
7 : ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳನ್ನು (ಆಕೆಯ ಇನ್ನೊಂದು ಹೆಸರು ಹದೆಸ್ಸಾ) ತನ್ನ ಸ್ವಂತ ಮಗಳಂತೆ ಸ್ವೀಕರಿಸಿ ಸಾಕುತ್ತಿದ್ದನು. ಈಕೆ ಬಲು ರೂಪಸಿ ಹಾಗು ಲಾವಣ್ಯವತಿ ಆಗಿದ್ದಳು.
8 : ಅರಸನ ನಿರ್ಣಯದ ಪ್ರಕಾರ ರಾಜಾಜ್ಞೆಯು ಎಲ್ಲೆಡೆ ಪ್ರಕಟವಾಯಿತು. ಅನೇಕ ಮಂದಿ ಕನ್ಯೆಯರನ್ನು ಶೂಷನ್ ನಗರಕ್ಕೆ ಕರೆತಂದು ಅಂತಃಪುರಪಾಲಕನಾದ ಹೇಗೈಯನ ವಶಕ್ಕೆ ಒಪ್ಪಿಸಲಾಯಿತು. ಇಂಥವರಲ್ಲಿ ಎಸ್ತೇರಳೂ ಒಬ್ಬಳು.
9 : ಎಸ್ತೇರಳು ಹೇಗೈಯನ ಮೆಚ್ಚುಗೆಯನ್ನು ಗಳಿಸಿ ಅವನ ದಯೆಗೆ ಪಾತ್ರಳಾದಳು. ಈ ಕಾರಣದಿಂದ ಅವನು ಆಕೆಗೆ ತಕ್ಕ ಸೌಂದರ್ಯವರ್ಧಕ ಲೇಪನದ್ರವ್ಯಗಳನ್ನು ಹಾಗು ಉತ್ತಮ ಭೋಜನಾಂಶವನ್ನೂ ಕೊಟ್ಟು ಆಕೆಯನ್ನೂ ಆಕೆಯ ಸೇವೆಗೆ ಆರಿಸಿದ ಏಳುಮಂದಿ ದಾಸಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.
10 : ತನ್ನ ಸ್ವಜನರ ಹಾಗೂ ಬಂಧು ಬಳಗದವರ ಬಗ್ಗೆ ಎಸ್ತೇರಳು ಯಾರಿಗೂ ತಿಳಿಸಿರಲಿಲ್ಲ. ತಿಳಿಸಬಾರದೆಂದು ಮೊರ್ದೆಕೈ ವಿಧಿಸಿದ್ದನು.
11 : ಸ್ತೇರಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಮೊರ್ದೆಕೈ ಪ್ರತಿದಿನ ಅಂತಃಪುರದ ಅಂಗಳದ ಬಳಿ ಬಂದು ಹೋಗುತ್ತಿದ್ದನು.
12 : ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಶ್ರೀಗಂಧ ತೈಲದ ಪ್ರಯೋಗದಲ್ಲಿ ಆರು ತಿಂಗಳು, ಹಾಗೂ ಕಾಂತಿವರ್ಧಕ ಪರಿಮಳ ದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಗಳು ಹೀಗೆ ಒಂದು ವರ್ಷ ಕಳೆಯಿತು. ಇದಾದನಂತರ ಪದ್ಧತಿಯ ಪ್ರಕಾರ ಸಿಂಗಿರಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ತನ್ನ ಸರದಿಯಂತೆ ಅರಸನ ಬಳಿಗೆ ಹೋಗಬೇಕಿದ್ದಿತ್ತು.
13 : ಹೀಗೆ ತನ್ನ ಸರದಿ ಬಂದಾಗ ತನ್ನೊಡನೆ ತೆಗೆದುಕೊಂಡು ಹೋಗಲು ಇಷ್ಟ ಪಡುವುದನ್ನೆಲ್ಲಾ ಆಕೆಗೆ ಒದಗಿಸಲಾಗುತ್ತಿತ್ತು.
14 : ಆಕೆ ರಾಜನಿವಾಸಕ್ಕೆ ಸಾಯಂಕಾಲ ಹೋದವಳು ಮಾರನೆಯ ದಿನ ಬೆಳಿಗ್ಗೆ ಅರಸನ ಉಪಪತ್ನಿಗಳ ಪಾಲಕನಾದ ಶವಷ್ಗಜನೆಂಬ ರಾಜ ಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರುವಳು. ಅರಸನು ಅವಳನ್ನು ಬಯಸಿ ಅವಳ ಹೆಸರು ಹಿಡಿದು ಕರೆಕಳುಹಿಸಿದ ಹೊರತು ಅವಳು ಪುನಃ ಅರಸನ ಬಳಿಗೆ ಹೋಗುವಂತಿರಲಿಲ್ಲ.
15 : ಹೀಗೆ ಅರಸನ ಬಳಿಗೆ ಹೋಗಲು ಮೊರ್ದೆಕೈಯ ದತ್ತುಮಗಳೂ ಅವನ ಚಿಕ್ಕಪ್ಪನಾದ ಅಬಿಹೈಲನ ಮಗಳೂ ಆದ ಎಸ್ತೇರಳ ಸರದಿ ಬಂದಾಗ ಅಂತಃಪುರದ ಪಾಲಕ ಹೇಗೈ ರಾಜಕಂಚುಕಿ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ನೋಡಿದವರೆಲ್ಲರೂ ಆಕೆಯನ್ನು ಬಹುವಾಗಿ ಮೆಚ್ಚುತ್ತಿದ್ದರು.
16 : ಅರಸ ಅಹಷ್ಟೇರೋಷನ ಆಳ್ವಿಕೆಯ ಏಳನೇ ವರ್ಷದ ಹತ್ತನೆ ತಿಂಗಳಾದ ಪುಷ್ಯ ಮಾಸದಲ್ಲಿ (‘ತೇಬೆತ್’ ಮಾಸದಲ್ಲಿ) ಆಕೆಯನ್ನು ಅರಸನ ಬಳಿಗೆ ಕರೆತರಲಾಯಿತು.
17 : ಅರಸನು, ಎಲ್ಲಾ ಸ್ತ್ರೀಯರಿಗಿಂತಲೂ ಹೆಚ್ಚಾಗಿ ಎಸ್ತೇರಳನ್ನೇ ಮೆಚ್ಚಿಕೊಂಡನು. ಎಲ್ಲ ಕನ್ಯೆಯರ ಪೈಕಿ ಆಕೆ ಅರಸನ ವಿಶೇಷ ದಯೆಗೂ ಪ್ರೀತಿಗೂ ಪಾತ್ರಳಾದಳು. ಈ ಕಾರಣ, ಅರಸನು ಆಕೆಯ ತಲೆಯ ಮೇಲೆ ರಾಜಮುಕುಟವನ್ನಿಟ್ಟು ವಷ್ಟಿರಾಣಿಗೆ ಬದಲಾಗಿ ಆಕೆಯನ್ನು ತನ್ನ ಪಟ್ಟದರಸಿಯನ್ನಾಗಿ ಆರಿಸಿಕೊಂಡನು.
18 : ತನ್ನ ಎಲ್ಲಾ ಪದಾಧಿಕಾರಿಗಳಿಗೂ ಪರಿವಾರದವರಿಗೂ ಎಸ್ತೇರಳ ಗೌರವಾರ್ಥವಾಗಿ ಒಂದು ಭಾರೀ ಔತಣವನ್ನು ಏರ್ಪಡಿಸಿದನು. ತನ್ನ ಎಲ್ಲಾ ಸಂಸ್ಥಾನಗಳಲ್ಲಿ, ಸೆರೆಯಲ್ಲಿದ್ದ ಬಂಧಿತರಿಗೆ ಬಿಡುಗಡೆಯನ್ನು ಘೋಷಿಸಿದನು. ರಾಜಮರ್ಯಾದೆಗೆ ತಕ್ಕಂತೆ ಪ್ರಜೆಗಳಿಗೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
19 : ರಾಜನ ಪ್ರಾಣರಕ್ಷಿಸಿದ ಮೊರ್ದೆಕೈ
ಕನ್ಯೆಯರನ್ನು ಎರಡನೆಯ ಸಾರಿ ಕುಳ್ಳರಿಸುವಾಗ, ಮೊರ್ದೆಕೈ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಕೊಂಡಿದ್ದನು.
20 : ಮೊರ್ದೆಕೈಯ ಆದೇಶದಂತೆ ಎಸ್ತೇರಳು, ತನ್ನ ಬಂಧುಬಳಗದವರ ಬಗ್ಗೆಯಾಗಲಿ ಸ್ವಜನರ ಬಗ್ಗೆಯಾಗಲಿ ಯಾರಿಗೂ ತಿಳಿಸಿರಲಿಲ್ಲ. ಮೊರ್ದೆಕೈಯ ಆರೈಕೆಯಲ್ಲಿದ್ದಾಗ ಆಕೆ ಯಾವ ರೀತಿ ನಡೆದುಕೊಂಡಿದ್ದಳೋ ಹಾಗೆಯೆ ಪ್ರಸ್ತುತಕಾಲದಲ್ಲೂ ಆತನ ಆಜ್ಞೆಯನ್ನು ಪಾಲಿಸುತ್ತಿದ್ದಳು.
21 : ಆ ದಿನಗಳಲ್ಲಿ ಮೊರ್ದೆಕೈ, ಎಂದಿನಂತೆ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತುಕೊಂಡಿದ್ದಾಗ ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬಿಬ್ಬರು ರಾಜ ಕಂಚುಕಿಗಳು ಅರಸನ ವಿರುದ್ಧ ಕೈಯೆತ್ತಬೇಕೆಂದು ಒಳಸಂಚು ಮಾಡಿದರು.
22 : ಈ ವಿಷಯ ಮೊರ್ದೆಕೈಗೆ ತಿಳಿದುಬಂದಾಗ, ಆತನು ಅದನ್ನು ಎಸ್ತೇರಳಿಗೆ ತಿಳಿಸಿದನು. ರಾಣಿಯು ಅವನ ಹೆಸರನ್ನು ಅರಸನಿಗೆ ಹೇಳಿ ಅವರು ನಡೆಸುತ್ತಿದ್ದ ಆ ಪಿತೂರಿ ಬಗ್ಗೆ ತಿಳಿಸಿದಳು.
23 : ಈ ವಿಷಯ ವಿಚಾರಣೆಗೆ ಬಂದು ಅದು ಸತ್ಯಸಂಗತಿಯೆಂದು ರುಜುವಾತಾಗಲು, ಆ ಇಬ್ಬರು ಪಿತೂರಿಗಾರರನ್ನು ಗಲ್ಲಿಗೇರಿಸಲಾಯಿತು. ಆ ಸಂಗತಿಯನ್ನು ರಾಜನ ದಿನಚರಿಯ ಪುಸ್ತಕದಲ್ಲಿ ಬರೆದಿಡಲಾಯಿತು.