1 : ಮೊರ್ದೆಕೈ ಮಾಡಿದ ಪ್ರಾರ್ಥನೆ
ಸರ್ವೇಶ್ವರಸ್ವಾಮಿಯ ಅದ್ಭುತ ಕಾರ್ಯಗಳನ್ನು ನೆನಸಿಕೊಂಡು, ಮೊರ್ದೆಕೈ ಹೀಗೆಂದು ಪ್ರಾರ್ಥಿಸಿದನು:
2 : ಸರ್ವೇಶ್ವರಾ, ಸಕಲಕ್ಕೂ ಒಡೆಯನಾದ
ದೇವರೇ,
ಸರ್ವಸೃಷ್ಟಿಯೂ ತಮಗೆ ಅಧೀನವಾಗಿದೆ,
ಪ್ರತಿಭಟಿಸುವವರೇ ಇಲ್ಲ,
ಇಸ್ರಯೇಲನ್ನು ರಕ್ಷಿಸಲು ನಿರ್ಧರಿಸುವ
ತಮಗೆ.
3 : ಭೂಪರಗಳನ್ನುಂಟುಮಾಡಿದವರೂ ತಾವೇ
ಎಲ್ಲಾ ಅತಿಶಯ ಸೃಷ್ಟಿಗಳನ್ನು
ನಿರ್ಮಿಸಿದವರೂ ತಾವೇ,
ವಿಶ್ವಕ್ಕೆಲ್ಲ ಒಡೆಯರು ತಾವೊಬ್ಬರೇ,
ಸರ್ವೇಶ್ವರಾ, ಪ್ರತಿಭಟಿಸುವವರಿಲ್ಲ ತಮಗೆ.
4 : ಸರ್ವೇಶ್ವರಾ, ಸರ್ವಜ್ಞಾನ ಸಂಪನ್ನರೇ,
ನಾ ಮಣಿಯಲು ನಿರಾಕರಿಸಿದೆ ಗರ್ವಿಯಾದ
ಹಾಮಾನನಿಗೆ.
5 : ನಾ ಮಾಡಿದ್ದು ಗರ್ವ, ಹೆಮ್ಮೆ, ಅಧಿಕಾರ
ವ್ಯಾಮೋಹದಿಂದಲ್ಲವೆಂದು ತಮಗೆ ತಿಳಿದಿದೆ.
ಇಸ್ರಯೇಲರಿಗೆ ಸಂರಕ್ಷಣೆ ದೊರಕಿತ್ತಾದರೆ
ಸಂತೋಷದಿಂದ ನಾನು ಮುತ್ತಿಡುತ್ತಿದ್ದೆ ಅವನ
ಪಾದಕೆ.
6 : ಈ ಪರಿ ನಾ ವರ್ತಿಸಲು ಕಾರಣ ಒಂದೇ:
ಮಾನವ ಗೌರವಕ್ಕಿಂತ ಅತಿ ಮುಖ್ಯ ದೇವರ
ಮಹಿಮೆ.
7 : ದೇವಾ, ತಮಗಲ್ಲದೆ ಇನ್ನಾರಿಗೂ ಸಲ್ಲಿಸಲಾರೆ
ಆರಾಧನೆ
ಅಹಂಕಾರದಿಂದ ಪ್ರೇರಿತವಾದುದಲ್ಲ
ನನ್ನೀ ವರ್ತನೆ.
8 : ಹೇ ದೇವರಾದ ಸರ್ವೇಶ್ವರಾ,
ಅರಸನೇ, ಅಬ್ರಹಾಮನ ದೇವಾ,
ಕಾಪಾಡಿ ನಿಮ್ಮೀ ಪ್ರಜೆಗಳ
9 : ಪಿತೂರಿ ಮಾಡಿಹರು ನಮ್ಮನ್ನು
ನಾಶಗೊಳಿಸಲು
ಹವಣಿಸಿಹರು ಪೂರ್ವಜರ ಸೊತ್ತನ್ನು
ಕಬಳಿಸಲು.
10 : ನಿರ್ಲಕ್ಷಿಸಬೇಡಿ ತಮ್ಮ ಸ್ವಂತ ಸೊತ್ತನ್ನು
ಈಜಿಪ್ಟಿನಿಂದ ತಾವೇ ಸ್ವತಃ
ವಿಮೋಚಿಸಿದವರನ್ನು.
ಆಲಿಸಿ ನನ್ನೀ ಪ್ರಾರ್ಥನೆ, ದಯೆತೋರಿ ತಮ್ಮ
ಪ್ರಜೆಗೆ
ನಮ್ಮ ದುಃಖವ ನೀಗಿಸಿ ಉಪಶಮನವನು
ನೀಡೆಮಗೆ.
ಈ ಪರಿ, ನಾವು ತಮ್ಮ ನಾಮವನ್ನು ಕೀರ್ತಿಸು
ವಂತೆ ಮಾಡಿ
ತಮ್ಮ ಸ್ತುತಿಮಾಡುವ ಜನರು ಅಳಿಯದಂತೆ
ಕಾಪಾಡಿ.
11 : ಇಸ್ರಯೇಲಿನ ಜನರೆಲ್ಲರು ತಮ್ಮ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ದೇವರಿಗೆ ಮೊರೆ ಇಟ್ಟರು; ಏಕೆಂದರೆ, ಮರಣಭಯದಿಂದ ಅವರು ತತ್ತರಿಸಿಹೋಗಿದ್ದರು.
12 : ಎಸ್ತೇರಳ ಪ್ರಾರ್ಥನೆ
ಮರಣಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶ್ವರನ ಆಶ್ರಯವನ್ನು ಕೋರಿದಳು.
13 : ತನ್ನ ಆಡಂಬರದ ಉಡುಗೆತೊಡುಗೆಯನ್ನು ತೆಗೆದಿಟ್ಟುಕೊಂಡಳು. ಅಮೂಲ್ಯ ಸುಗಂಧ ದ್ರವ್ಯಗಳ ಬದಲು ಧೂಳನ್ನೂ ಬೂದಿಯನ್ನೂ ತಲೆಗೆ ಹಚ್ಚಿಕೊಂಡಳು.
14 : ಕಠಿಣವಾದ ದೇಹ ದಂಡನೆಯಿಂದ ಕುಗ್ಗಿ ಹೋದಳು. ಗೆಲುವಿನ ವಸ್ತ್ರಾಭರಣಗಳನ್ನು ಬದಿಗಿತ್ತು, ಶೋಕತಪ್ತಳಾಗಿ ಕೂದಲನ್ನು ಬಿಟ್ಟುಕೊಂಡಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆಮಾಡುತ್ತಾ ಈ ಪರಿ ಮೊರೆಯಿಟ್ಟಳು:
15 : ನನ್ನ ಸರ್ವೇಶ್ವರಾ, ಅರಸನೇ, ತಾವೊಬ್ಬರೇ
ದೇವರು
ಒಬ್ಬಂಟಿಗಳು ನಾನು, ತಾವೇ ನನಗೆ ನೆರವು.
ನನ್ನ ಪ್ರಾಣಕ್ಕೆ ಗಂಡಾಂತರ ಬಂದಿಹ
ಈ ವೇಳೆಯಲಿ
ತಮ್ಮನ್ನಲ್ಲದೆ, ಯಾರನ್ನು ಆಶ್ರಯಿಸಲಿ?
16 : ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಿಂದ
ಇಸ್ರಯೇಲನ್ನು
ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ,
ನಮ್ಮ ಪೂರ್ವಜರನ್ನು.
ತಪ್ಪದೆ ಈಡೇರಿಸಿದಿರಿ ತಮ್ಮ ವಾಗ್ದಾನಗಳನ್ನು
ಕುಟುಂಬದವರಿಂದ ಬಾಲ್ಯದಿಂದಲೇ
ನಾ ಕಲಿತ ಈ ಪಾಠವನ್ನು.
17 : ಪಾಪಮಾಡಿದೆವು, ನಾವು ದ್ರೋಹವೆಸಗಿದೆವು
ತಮಗೆ
ಪೂಜೆಯನು ಸಲ್ಲಿಸಿದೆವು ಅನ್ಯ ದೇವರುಗಳಿಗೆ
ಎಂತಲೆ, ಒಪ್ಪಿಸಿದಿರಿ ನಮ್ಮನು ಶತ್ರುಗಳ ಕೈಗೆ
18 : ಸರ್ವೇಶ್ವರಾ, ತಾವು ನೀತಿವಂತರು!
19 : ನಮ್ಮ ಗುಲಾಮಗಿರಿಯನ್ನು ಕಂಡೂ
ತೃಪ್ತರಾಗಲಿಲ್ಲಾ ಶತ್ರುಗಳು.
20 : ತಮ್ಮನ್ನು ಸ್ತುತಿಸುವವರನ್ನು ನಾಶಮಾಡಲು,
ತಮ್ಮ ಪೂಜೆಯನ್ನು ನಿರ್ಮೂಲಮಾಡಲು,
ತಮ್ಮ ಮಂದಿರದ, ತಮ್ಮ ಪೀಠದ ಘನತೆಗೆ
ಕುಂದು ತರಲು,
21 : ಅನರ್ಹದೇವತೆಗಳನ್ನು ಸ್ತುತಿಸಲು,
ನಶ್ವರ ರಾಜರನ್ನು ಪೂಜಿಸಲು
ತಮ್ಮ ದೇವತೆಗಳಿಗೆ ಪ್ರಮಾಣಮಾಡಿರುವರು
ಇವರು.
22 : ಸರ್ವೇಶ್ವರಾ, ತಮ್ಮ ಪ್ರಭುತ್ವವನ್ನೊಪ್ಪಿಸದಿರಿ
ಶೂನ್ಯ ದೇವತೆಗಳಿಗೆ
ಗುರಿಪಡಿಸಬೇಡಿ ನಮ್ಮನ್ನು ಶತ್ರುಗಳ
ಪರಿಹಾಸ್ಯಕ್ಕೆ.
ಅವರ ಯೋಜನೆಗಳು ಮಾರಕವಾಗಲಿ
ಅವರಿಗೇ.
ನಮ್ಮ ಪರಿವಿನಾಶಕ್ಕೆ ಸಂಚುಮಾಡಿದಾ ವ್ಯಕ್ತಿ
ಅವನಿಗೇ ಎಚ್ಚರಿಕೆಯ ಗುರುತಾಗಲಿ.
23 : ಸರ್ವೇಶ್ವರಾ, ನಮ್ಮನ್ನು ತಂದುಕೊಳ್ಳಿ
ನೆನಪಿಗೆ
ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ ನಮಗೆ
ರಾಜಾಧಿರಾಜ, ಒಡೆಯ ತಾವು
ಸಕಲ ದೇವರುಗಳಿಗೆ.
24 : ಕರುಣಿಸಿ, ಸಿಂಹರಾಜನ ಮುಂದೆ ನಿಂತು ನಾ
ವಾದಿಸುವಂತೆ
ಈ ರಾಜನು ಶತ್ರು ಹಾಮಾನನನ್ನು
ದ್ವೇಷಿಸುವಂತೆ
ಆ ಶತ್ರು ಹಾಗು ಅವನ ಸಂಗಡಿಗರು
ನಾಶವಾಗುವಂತೆ.
25 : ಸರ್ವೇಶ್ವರಾ ರಕ್ಷಿಸಿ ನೆರವಿತ್ತು ಈ
ಒಬ್ಬಂಟಿಗಳಿಗೆ,
ಯಾರನ್ನು ಆಶ್ರಯಿಸಲಿ ನಾನು, ತಮ್ಮನ್ನಲ್ಲದೆ?
26 : ಸರ್ವೇಶ್ವರಾ, ಬಲ್ಲಿರಲ್ಲವೆ ತಾವೆಲ್ಲವನು?
ತೃಣೀಕರಿಸುವೆ ನಾನು ದುರುಳರ ವೈಭವವನು
ಹೇಸುವೆ ಅನ್ಯರ ಹಾಗು ಸುನ್ನತಿರಹಿತರ
ಸಂಸರ್ಗವನು
ಅರಿತಿರುವಿರಿ ತಾವು ಇವೆಲ್ಲವನು.
27 : ಸರ್ವೇಶ್ವರಾ, ಬೇರಾವ ವಿಧಿಯಿಲ್ಲ ಎನಗೆ
ಆಸ್ಥಾನದಲ್ಲಿ ಕಿರೀಟ ಧರಿಸುವುದು
ಅಸಹ್ಯವೆನಗೆ
ಕೊಳಕು ಬಟ್ಟೆಯಂತಿದೆ ಅದು ನನ್ನ ಪಾಲಿಗೆ
ಇತರ ದಿನಗಳಲಿ ಹಾಕುವೆ ಅದನು ಮೂಲೆಗೆ.
28 : ಸೇರಿಲ್ಲ ನಾನೆಂದೂ ಹಾಮಾನನ ಊಟದ
ಪಂಕ್ತಿಗೆ
ಹೋಗಿಲ್ಲ ನಾನು ರಾಜನ ಔತಣಕೂಟಕೆ
ದೇವತೆಗಳಿಗರ್ಪಿತವಾದ ದ್ರಾಕ್ಷಾರಸವನು
ಕುಡಿದಿಲ್ಲ ಈವರೆಗೆ
29 : ಸರ್ವೇಶ್ವರಾ, ಅಬ್ರಹಾಮನ ದೇವರೇ,
ನಾನಿಲ್ಲಿಗೆ ಬಂದ ದಿನದಿಂದ ಇಂದಿನವರೆಗೆ
ನನಗಿತ್ತೆ ಸಂತಸ ಸಂತೃಪ್ತಿ,
ಅದುವೆ ಸಾಕೆನಗೆ.
30 : ಓ ದೇವಾ, ಸಕಲ ಸೃಷ್ಟಿಗಳ ಒಡೆಯಾ,
ತಮ್ಮ ಜನರ ಈ ಪ್ರಾರ್ಥನೆಯನು
ಆಲಿಸಯ್ಯಾ
ನಂಬಿಕೆಗೆಟ್ಟು ನರಳುವವರ ಮೊರೆಯನ್ನು
ಕೇಳಯ್ಯಾ
ಅಕ್ರಮಿಗಳಿಂದ ನಮ್ಮನ್ನು ಕಾಪಾಡಯ್ಯಾ
ನನಗಿರುವ ಭಯವನು ತೊಲಗಿಸಯ್ಯಾ.