Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಮಕ್ಕಬಿ


1 : ಆ ದಿನಗಳಲ್ಲಿ (ನಾಲ್ಕನೇ) ಅಂತಿಯೋಕನು ಈಜಿಪ್ಟಿನ ಮೇಲೆ ಎರಡನೇ ಬಾರಿ ದಾಳಿಮಾಡಿದನು.
2 : ಆಗ ಸುಮಾರು 40 ದಿನಗಳವರೆಗೂ ಜೆರುಸಲೇಮಿನ ಜನರು ವಿಚಿತ್ರವಾದ ದರ್ಶನಗಳನ್ನು ಕಂಡರು; ಬಂಗಾರದ ವಸ್ತ್ರಗಳನ್ನು ಧರಿಸಿಕೊಂಡಿದ್ದ ಕುದುರೆಸವಾರರು ಕೈಗಳಲ್ಲಿ ಭರ್ಜಿಗಳನ್ನೂ ಕತ್ತಿಗಳನ್ನೂ ಹಿಡಿದುಕೊಂಡು ಆಕಾಶದಲ್ಲಿ ಓಡಾಡುತ್ತಿದ್ದರು.
3 : ಆ ರಾಹುತರು ಗುರಾಣಿಗಳನ್ನು ಹಿಡಿದು, ಈಟಿಗಳನ್ನು ಝಳಪಿಸುತ್ತಾ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡಿ ಕಾಳಗ ಮಾಡುತ್ತಿದ್ದರು. ಅವರ ಶಸ್ತ್ರಗಳು ವಿವಿಧವಾಗಿದ್ದವು. ಕುದುರೆಗಳ ಲಗಾಮುಗಳು ಚಿನ್ನದ್ದಾಗಿದ್ದವು.
4 : ಈ ದರ್ಶನಗಳು ಶುಭಶಕುನವಾಗಲೆಂದು ಪ್ರತಿಯೊಬ್ಬರು ಪ್ರಾರ್ಥನೆ ಮಾಡುತ್ತಿದ್ದರು. ಜೆರುಸಲೇಮಿಗೆ ಯಾಸೋನನ ಮುತ್ತಿಗೆ
5 : ಆಗ ಅಂತಿಯೋಕನು ಸತ್ತನೆಂದು ಸುಳ್ಳು ಸಮಾಚಾರ ಹರಡಿತು. ಯಾಸೋನನು ಸುಮಾರು ಒಂದು ಸಾವಿರ ಸೈನಿಕರೊಂದಿಗೆ ಜೆರುಸಲೇಮಿಗೆ ಅನಿರೀಕ್ಷಿತವಾಗಿ ಹೋಗಿ ನಗರದ ಮೇಲೆ ಮುತ್ತಿಗೆ ಹಾಕಿದನು. ಕೋಟೆಗೋಡೆಗಳ ಮೇಲಿದ್ದ ಸೈನಿಕರನ್ನು ಚದರಿಸಿ ನಗರವನ್ನು ವಶಪಡಿಸಿಕೊಳ್ಳಲಾಯಿತು. ಮೆನೆಲಾವ್ಸನು ದುರ್ಗದಲ್ಲಿ ಆಶ್ರಯಪಡೆದನು.
6 : ಯಾಸೋನನೂ ಅವನ ಸೈನಿಕರೂ ನಿರ್ದಯೆಯಿಂದ ಸ್ವಂತಜನರನ್ನೇ ಸಾಯಿಸುತ್ತಿದ್ದರು. ಸ್ವಜನರ ಮೇಲೆ ಗಳಿಸಿದ ಜಯ ತೀರಾ ಅವಮಾನಕರವಾದ ಸೋಲೆಂದು ಯಾಸೋನನಿಗೆ ಹೊಳೆಯಲಿಲ್ಲ. ಸ್ವಂತ ಜನರು ಅವನಿಂದ ಸೋತರೆಂಬುದನ್ನು ಎಣಿಸದೆ, ಅದು ತಾನು ಶತ್ರುಗಳ ಮೇಲೆ ಗಳಿಸಿದ ವಿಜಯ ಸಾಧನೆಯೆಂದು ಭಾವಿಸಿದನು.
7 : ಆದರೆ ಯಾಸೋನನು ಆಡಳಿತವನ್ನು ವಹಿಸಿಕೊಳ್ಳಲಿಲ್ಲ. ಅಂತ್ಯದಲ್ಲಿ, ಪಿತೂರಿಯಿಂದ ಅಪಕೀರ್ತಿಯನ್ನೇ ತಂದುಕೊಂಡು ಅಮ್ಮೋನಿಯರ ದೇಶಕ್ಕೆ ಪಲಾಯನ ಮಾಡಿದನು.
8 : ಕೊನೆಗೆ ಅವನಿಗೆ ದುರವಸ್ಥೆಯೇ ಕಾದಿತ್ತು. ಅರಬ್ಬೀಯರ ಅರಸ ಅರೇತನ ಮುಂದೆ ಅವನ ಮೇಲೆ ದೂರುಕೊಡಲಾಯಿತು. ಅವನು ನಗರದಿಂದ ನಗರಕ್ಕೆ ಓಡಿಹೋಗಬೇಕಾಯಿತು. ಎಲ್ಲರೂ ಅವನ ಮೇಲೆ ಬೀಳುತ್ತಿದ್ದರು. ಕಾನೂನನ್ನು ಉಲ್ಲಂಘಿಸುವವನು, ತನ್ನ ಸ್ವಂತ ಜನರನ್ನು ಕೊಲೆ ಮಾಡಿದವನು ಎಂದು ಅವನನ್ನು ಹಂಗಿಸುತ್ತಿದ್ದರು. ಕೊನೆಯಲ್ಲಿ ಅವನು ಈಜಿಪ್ಟಿಗೆ ಪಲಾಯನಗೈದನು.
9 : ಅಲ್ಲಿಂದ, ಯೆಹೂದ್ಯರ ಸಂಬಂಧಿಕರಾದ ಸ್ಪಾರ್ಟನರಲ್ಲಿ ಆಶ್ರಯ ದೊರಕುವುದೆಂಬ ನಿರೀಕ್ಷೆಯಿಂದ, ಗ್ರೀಸಿಗೆ ಹೋದನು. ಅಂತಿಮವಾಗಿ, ಹಲವಾರು ಮಂದಿ ಸೆರೆಹೋಗಲು ಕಾರಣನಾಗಿದ್ದ ಈತನು ತಾನೇ ಪರಕೀಯ ನಾಡಿನಲ್ಲಿ ಸೆರೆಯಾಳಾಗಿ ಸಾಯಬೇಕಾಯಿತು.
10 : ಯಾಸೋನನು ಎಷ್ಟೋ ಜನರನ್ನು ಸಾಯಿಸಿ ಅವರ ಶವಗಳನ್ನು ಸಮಾಧಿ ಮಾಡಿಸಲಿಲ್ಲ. ಆದರೆ ಈಗ ಅವನೇ ಶವಸಂಸ್ಕಾರವಿಲ್ಲದೆ ಸಾಯಬೇಕಾಯಿತು. ಅವನ ಪೂರ್ವಜರ ಸಮಾಧಿಯಲ್ಲಿ ಅವನ ಭೂಸ್ಥಾಪನೆಯಾಗಲಿಲ್ಲ.
11 : ನಡೆದ ಘಟನೆಗಳ ಸುದ್ದಿ ಅರಸನಿಗೆ ಮುಟ್ಟಲು, ಜುದೇಯ ನಾಡೇ ದಂಗೆಯೆದ್ದಿದೆ ಎಂದು ಅವನು ಭಾವಿಸಿದನು. ಕಾಡುಮೃಗದಂತೆ ಉದ್ರೇಕಗೊಂಡು, ಅವನು ಈಜಿಪ್ಟಿನಿಂದ ಹೊರಟು ಬಿರುಗಾಳಿಯಂತೆ ಜೆರುಸಲೇಮ್ ನಗರವನ್ನು ವಶಪಡಿಸಿಕೊಂಡನು.
12 : ಸಿಕ್ಕಿದವರನ್ನೆಲ್ಲ ಕ್ರೂರವಾಗಿ ಕಡಿದುಹಾಕಬೇಕು. ಮನೆಯೊಳಗೆ ಹೋಗುವವರನ್ನು ಅಲ್ಲೇ ಸಾಯಿಸಿಬಿಡಬೇಕು ಎಂದು ಸೈನಿಕರಿಗೆ ಆಜ್ಞೆಮಾಡಿದನು.
13 : ಹೀಗೆ ಹಿರಿಯರು-ಕಿರಿಯರು, ಎಲ್ಲರು ಕತ್ತಿಗೆ ತುತ್ತಾದರು. ಬಾಲಕ-ಬಾಲಕಿಯರು, ಮಹಿಳೆಯರು ಹತರಾದರು; ಪುಟ್ಟ ಹೆಣ್ಣುಮಕ್ಕಳು, ಶಿಶುಗಳು ಎಲ್ಲರೂ ಸತ್ತು ಹೋದರು.
14 : ಮೂರು ದಿನಗಳೊಳಗೆ 80,000 ಜನರು ನಾಶವಾದರು. ಸುಮಾರು 40,000 ಮಂದಿ ಹೋರಾಟದಲ್ಲೇ ಮಡಿದರು: ಅಷ್ಟೇ ಜನರನ್ನು ಗುಲಾಮರನ್ನಾಗಿ ಮಾರಾಟಮಾಡಲಾಯಿತು.
15 : ಇಷ್ಟಾಗಿದ್ದರೂ ಸಾಲದೆಂದು ಅಂತಿಯೋಕನು ಲೋಕಪ್ರಸಿದ್ಧವಾದ ಅತಿ ಪವಿತ್ರ ಮಹಾದೇವಾಲಯವನ್ನು ಧೈರ್ಯದಿಂದ ಪ್ರವೇಶಿಸಿದನು. ಧರ್ಮಕ್ಕೂ ಜನರಿಗೂ ದ್ರೋಹಿಯಾಗಿದ್ದ ಮೆನೆಲಾವ್ಸನು ಅವನಿಗೆ ಮಾರ್ಗದರ್ಶನ ನೀಡುತ್ತಿದ್ದನು.
16 : ಮಲಿನವಾದ ತನ್ನ ಕರಗಳಿಂದ ಪವಿತ್ರ ಪಾತ್ರೆಗಳನ್ನು ಅಲ್ಲಿಂದ ತೆಗೆದುಕೊಂಡನು; ಇತರ ಅರಸರುಗಳು ದೇವಾಲಯದ ಮಹಿಮೆಗಾಗಿ, ಕ್ಷೇತ್ರದ ಯಶಸ್ಸಿಗಾಗಿ, ದಾನಮಾಡಿದ್ದ ವಸ್ತುಗಳನ್ನೆಲ್ಲ ಹೊಲೆಯಾದ ಕೈಗಳಿಂದ ಅಪಹರಿಸಿಕೊಂಡನು.
17 : ಅಂತಿಯೋಕನು ಇದರಿಂದ ಬಹುವಾಗಿ ಪುಳಕಿತನಾದನು. ‘ನಗರನಿವಾಸಿಗಳ ಪಾಪಗಳ ನಿಮಿತ್ತ ದೇವರಿಗೆ ಕೋಪವುಂಟಾಗಿದೆ; ಈ ಕಾರಣದಿಂದಲೇ ಆ ಪುಣ್ಯಕ್ಷೇತ್ರದ ಬಗ್ಗೆ ಅವರಿಗೆ ಕಾಳಜಿಯಿಲ್ಲದಂತಾಗಿದೆ’ ಎಂದು ಅಂತಿಯೋಕನು ತಿಳಿದುಕೊಳ್ಳಲಿಲ್ಲ.
18 : ಅವರು ಅಷ್ಟೊಂದು ಪಾಪಗಳನ್ನು ಮಾಡಿರದಿದ್ದರೆ, ಅರಸ ಸೆಲ್ಯೂಕಸ್ ಕಳುಹಿಸಿದ್ದ ಹೆಲೆಯೋಡೊರಸನು ದೇವಾಲಯದ ಖಜಾನೆಯನ್ನು ನೋಡಲು ಹೋಗಿದ್ದಾಗ ಅವನಿಗೆ ಸಂಭವಿಸಿದ್ದಂತೆ ಅಂತಿಯೋಕನಿಗೂ ಅಂಥ ದುಂಡಾವರ್ತಿಯ ಕಾರ್ಯಕ್ಕೆ ಕೈಹಾಕದಂತೆ ಛಡಿಯೇಟು ಸಿಕ್ಕುತ್ತಿತ್ತು.
19 : ಆದರೆ ದೇವರು ತಮ್ಮ ಮಹಾದೇವಾಲಯಕ್ಕಾಗಿ ರಾಷ್ಟ್ರವನ್ನು ಆರಿಸಿಕೊಳ್ಳಲಿಲ್ಲ, ಬದಲಿಗೆ ರಾಷ್ಟ್ರದ ಜನತೆಗಾಗಿ ಮಹಾದೇವಾಲಯವನ್ನು ಸ್ಥಾಪಿಸಿದರು.
20 : 20ಆದುದರಿಂದ ಆ ಮಹಾದೇವಾಲಯ ಜನರ ಕಷ್ಟಸಂಕಟಗಳಲ್ಲಿ ಭಾಗಿಯಾದಂತೆ ಸಕಾಲದಲ್ಲಿ ಜನರ ಸುಯೋಗದಲ್ಲಿ ಭಾಗಿಯಾಯಿತು. ಸರ್ವಶಕ್ತ ದೇವರ ಕೋಪದ ನಿಮಿತ್ತ ಅದನ್ನು ಕೈಬಿಡಲಾಯಿತಾದರೂ ಪುನಃ ಮಹೋನ್ನತರ ಕೋಪ ಶಮನವಾದಾಗ ಸರ್ವಮಹಿಮೆಯೊಂದಿಗೆ ಅದನ್ನು ಪೂರ್ವಸ್ಥಿತಿಗೆ ತರಲಾಯಿತು. ಜೆರುಸಲೇಮಿನ ಮೇಲೆ ಮತ್ತೊಮ್ಮೆ ದಾಳಿ
21 : ಅಂತಿಯೋಕನು ದೇವಾಲಯದಿಂದ 62,000 ಕಿಲೋಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಬೇಗನೆ ಅಂತಿಯೋಕ್ಯಕ್ಕೆ ಹಿಂದಿರುಗಿದನು. ಅವನು ಎಷ್ಟು ಅಹಂಕಾರಪಟ್ಟನೆಂದರೆ, ನೆಲದಲ್ಲಿ ಹಡಗನ್ನು ಚಲಿಸುವುದು ಹಾಗು ಸಮುದ್ರವನ್ನು ಕಾಲುನಡೆಯಲ್ಲಿ ದಾಟುವುದು ತನ್ನಿಂದ ಸಾಧ್ಯವೆಂದು ಕೊಚ್ಚಿಕೊಳ್ಳುತ್ತಿದ್ದನು.
22 : ಜನರನ್ನು ದಂಡಿಸುವುದಕ್ಕೆ ಅಧಿಕಾರಿಗಳನ್ನು ನೇಮಿಸಿದನು. ತನ್ನನ್ನು ನೇಮಿಸಿದವನಿಗಿಂತಲೂ ಹೆಚ್ಚು ಕ್ರೂರಿಯಾದ ಫಿಲಿಪ್ಪನನ್ನು ಜೆರುಸಲೇಮಿಗೆ ನೇಮಿಸಿದನು. ಫಿಲಿಪ್ಪನು ಫ್ರೀಜಿಯದವನು.
23 : ಅಂದ್ರೋನಿಕ ಅರಸನನ್ನು ಗೆರೆಜೀಮಿಗೆ ನೇಮಿಸಿದನು; ಮಾತ್ರವಲ್ಲ, ಸ್ವಂತ ಜನರ ಮೇಲೆ ಇತರರಿಗಿಂತಲೂ ಹೆಚ್ಚು ದಬ್ಬಾಳಿಕೆ ನಡೆಸುವಂಥ ಮೆನೆಲಾವ್ಸನನ್ನೂ ನೇಮಿಸಿದನು. ಯೆಹೂದ್ಯರನ್ನು ಅಂತಿಯೋಕನು ಎಷ್ಟು ದ್ವೇಷಿಸುತ್ತಿದ್ದನೆಂದರೆ;
24 : ಯುವಜನರನ್ನು ಸಾಯಿಸಬೇಕು; ಹೆಂಗಸರನ್ನೂ ಮಕ್ಕಳನ್ನೂ ಗುಲಾಮರನ್ನಾಗಿ ಮಾರಬೇಕು ಎಂಬ ಆಜ್ಞೆಯಿತ್ತು, ಅದಕ್ಕಾಗಿ ಸೇನಾಧಿಕಾರಿಯಾಗಿದ್ದ ಅಪೊಲ್ಲೋನಿಯನನ್ನು 22,000 ಕೂಲಿ ಸೈನಿಕರೊಂದಿಗೆ ಮಿಸಿಯಾದಿಂದ ಜೆರುಸಲೇಮಿಗೆ ಕಳುಹಿಸಿದನು.
25 : ಅಪೊಲ್ಲೋನಿಯನು ಜೆರುಸಲೇಮಿಗೆ ಬಂದಾಗ ಶಾಂತಿ ನಿಯೋಗಕ್ಕಾಗಿ ಬಂದಿರುವಂತೆ ನಟಿಸಿದನು. ಸಬ್ಬತ್ ದಿನದವರೆಗೆ ಕಾದುಕೊಂಡಿದ್ದನು. ಪವಿತ್ರದಿನದಂದು ಜನರು ವಿಶ್ರಾಂತಿ ದಿನವನ್ನು ಆಚರಿಸುತ್ತಿದ್ದಾಗ, ಸಶಸ್ತ್ರ ಸೈನಿಕರನ್ನು ಬೀದಿಗಳಲ್ಲಿ ನಡೆಸಿದನು. ಅವರನ್ನು ನೋಡಲು ಹೊರಬಂದವರನ್ನು ತಟ್ಟನೆ ಕತ್ತಿಯಿಂದ ಕೊಂದರು; ಅನಂತರ ಆ ಸೈನಿಕರು ನಗರದೊಳಕ್ಕೆ ನುಗ್ಗಿ ಅನೇಕ ಜನರನ್ನು ಸಾಯಿಸಿದರು.
26 : ಆದರೆ ಮಕ್ಕಬಿಯನೆಂದು ಕರೆಯಲಾದ ಯೂದನು ಒಂಬತ್ತು ಜನರೊಂದಿಗೆ ಮರಳುಗಾಡಿಗೆ ತಪ್ಪಿಸಿಕೊಂಡು ಹೋದನು. ಅವನೂ ಅವನ ಸಂಗಡಿಗರೂ ಕಾಡುಮೃಗಗಳಂತೆ ಗುಡ್ಡಗಳಲ್ಲಿ ತಂಗಿದ್ದರು. ಮೈಲಿಗೆಯಾಗದಂತೆ ಅಲ್ಲಿ ಬೆಳೆಯುವ ಗಿಡಮೂಲಿಕೆಗಳನ್ನು ಮಾತ್ರ ತಿನ್ನುತ್ತಿದ್ದರು.

· © 2017 kannadacatholicbible.org Privacy Policy