Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಮಕ್ಕಬಿ


1 : ಮೊದಲೇ ಪ್ರಸ್ತಾಪಿಸಿದಂತೆ, (ದೇವಾಲಯದ ಹಣದ ಬಗ್ಗೆ ಅಪೊಲ್ಲೋನಿಯನಿಗೆ ವರದಿಮಾಡಿ ತನ್ನ ರಾಷ್ಟ್ರದ ಮೇಲೆ ಇಂಥ ಆಪತ್ತನ್ನು ಬರಮಾಡಿದ್ದ) ಸಿಮೋನನು ಓನೀಯನ ಮೇಲೆ ಮತ್ತೆ ಸುಳ್ಳು ಅಪರಾಧ ಹೊರಿಸಿದನು. ಹೆಲೆಯೋಡೊರಸನನ್ನು ಮಂಕು ಬಡಿಸಿ, ದುರಂತಕ್ಕೆ ಈಡಾಗುವಂತೆ ಮಾಡಿದವನು ಅವನೇ ಎಂದು ವಾದಿಸಿದನು.
2 : ನಗರಕ್ಕೆ ಎಷ್ಟೋ ಉಪಕಾರಗಳನ್ನು ಮಾಡಿದ್ದ, ತನ್ನ ಜನರನ್ನು ಕಾಪಾಡಿದ್ದ ಹಾಗು ನಿಯಮದ ಪಾಲನೆಯನ್ನು ಶ್ರದ್ಧೆಯಿಂದ ಜಾರಿಗೊಳಿಸಿದ್ದ ಓನೀಯನನ್ನು ರಾಜ್ಯಕ್ಕೆ ವಿರುದ್ಧನಾದ ದಂಗೆಕೋರನೆಂದು ದೂರಿದನು.
3 : ಅವನ ಹಗೆತನ ಯಾವ ಹಂತವನ್ನು ಮುಟ್ಟಿತೆಂದರೆ, ಸಿಮೋನನ ಆಪ್ತ ಕಾರಭಾರಿಗಳಲ್ಲೊಬ್ಬನು ಕೆಲವು ಕೊಲೆಗಳನ್ನು ಸಹ ಮಾಡಿದ್ದನು.
4 : ಪರಿಸ್ಥಿತಿ ಗಂಭೀರವಾಗಿದೆ ಎಂದು ಓನೀಯನು ಅರಿತುಕೊಂಡನು. ಸೆಲೆಸಿರಿಯಾ ಮತ್ತು ಫೆನೀಷಿಯಾದ ರಾಜ್ಯಪಾಲನಾದ ಅಪೊಲ್ಲೋನಿಯುಸ್ ಸಿಮೋನನ ದುಷ್ಟತನವನ್ನು ಪ್ರಚೋದಿಸಿದ್ದನು.
5 : ಆದುದರಿಂದ ಓನೀಯನು ರಾಜನ ಬಳಿಗೇ ಹೋದನು. ತನ್ನ ಸಹಪ್ರಜೆಗಳ ವಿರುದ್ಧ ದೂರು ಕೊಡುವುದಕ್ಕಲ್ಲ. ಬದಲಿಗೆ ಜನಸಾಮಾಯರ ಸಾಮಾಜಿಕ ಹಾಗೂ ವೈಯಕ್ತಿಕ ಕ್ಷೇಮವನ್ನು ಕಾಪಾಡುವುದಕ್ಕೆಂದೇ ಹೋದನು.
6 : ಅರಸನ ಮಧ್ಯಸ್ಥಿಕೆಯಿಲ್ಲದೆ, ಆಡಳಿತ ವ್ಯವಹಾರ ಶಾಂತಿಯುತ ರೀತಿಯಲ್ಲಿ ನಡೆಯಲು ಸಾಧ್ಯವಿಲ್ಲವೆಂದೂ ಸಿಮೋನನು ತನ್ನ ಹುಚ್ಚು ಕೆಲಸವನ್ನು ನಿಲ್ಲಿಸಲಾರನೆಂದೂ ಅವನು ಮನಗಂಡಿದ್ದನು. ಅನ್ಯಧರ್ಮೀಯರ ಸಂಪ್ರದಾಯಗಳ ಆಚರಣೆ
7 : ಸ್ವಲ್ಪಕಾಲದ ನಂತರ ಸೆಲ್ಯೂಕಸ್ ಅರಸನು ಸತ್ತುಹೋದನು. ಎಪಿಫನೆಸ್ ಎಂದು ಕರೆಯಲಾದ ಅಂತಿಯೋಕನು ರಾಜ್ಯದ ಗದ್ದುಗೆಯನ್ನೇರಿದನು; ಓನೀಯನ ಸಹೋದರ ಯಾಸೋನನು ಭ್ರಷ್ಟಾಚಾರದಿಂದ ಪ್ರಧಾನಯಾಜಕನಾದನು.
8 : ಅದಕ್ಕಾಗಿ ಅವನು ರಾಜನ ಬಳಿಗೆ ಹೋಗಿ 12,000 ಕಿಲೋಗ್ರಾಂ ಬೆಳ್ಳಿಯನ್ನು ಸದ್ಯಕ್ಕೆ ಲಂಚವಾಗಿ ಕೊಟ್ಟು, ಸ್ವಲ್ಪ ಕಾಲದ ನಂತರ ಇನ್ನೂ 5,000 ಕಿಲೋಗ್ರಾಂ ಬೆಳ್ಳಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದನು.
9 : ಇದಲ್ಲದೆ ಒಂದು ವ್ಯಾಯಾಮ ಶಾಲೆಯನ್ನೂ ಅದರಲ್ಲಿ ತರಪೇತು ಪಡೆಯಲು ಒಂದು ಯುವಕರ ಸಂಘವನ್ನೂ ಸ್ಥಾಪಿಸುವುದಕ್ಕೆ ಹಾಗೂ ಜೆರುಸಲೇಮಿನ ಯುವಕರು ‘ಅಂತಿಯೋಕದ ಪ್ರಜೆ’ ಎಂದು ದಾಖಲು ಮಾಡುವುದಕ್ಕೆ ರಾಜನಿಂದ ಅಪ್ಪಣೆ ದೊರೆತರೆ ಇನ್ನೂ 5,000 ಕಿಲೋಗ್ರಾಂ ಬೆಳ್ಳಿಯನ್ನು ಕೊಡುವುದಾಗಿಯೂ ಮಾತು ಕೊಟ್ಟಿದ್ದನು.
10 : ಅರಸನು ಒಪ್ಪಿಗೆಯನ್ನು ನೀಡಿದ ಕೂಡಲೆ ಯಾಸೋನನು ಅಧಿಕಾರವನ್ನು ವಹಿಸಿಕೊಂಡು, ಯೆಹೂದ್ಯರು ಗ್ರೀಕ್ ಪದ್ಧತಿಯನ್ನು ಅನುಸರಿಸಬೇಕೆಂದು ಒತ್ತಾಯಪಡಿಸಿದನು.
11 : 11ರೋಮನರೊಂದಿಗೆ ಸಂಧಾನ ಮಾಡುವ ರಾಯಭಾರವನ್ನು ವಹಿಸಿಕೊಂಡಿದ್ದ ಯುಪೊಲೇಮಸನ ಮಗ ಯೊವಾನ್ನನು ಯೆಹೂದ್ಯರಿಗೆ ಹಿತರಕವಾದ ಶಾಸನವನ್ನು ಪಡೆದಿದ್ದನು, ಹಾಗು ಅದನ್ನು ಜಾರಿಗೆ ತಂದಿದ್ದನು. ಇದನ್ನೆಲ್ಲಾ ಈ ಯಾಸೋನನು ರದ್ದುಗೊಳಿಸಿ, ಧರ್ಮಾನುಸಾರವಾದ ರೀತಿನೀತಿಗಳನ್ನು ಬಿಟ್ಟು, ಧರ್ಮಶಾಸ್ತ್ರಕ್ಕೆ ವಿರುದ್ಧವಾದ ಹೊಸ ಆಚರಣೆಗಳನ್ನು ಜಾರಿಗೆ ತಂದನು.
12 : ಕೋಟೆಯ ಪಕ್ಕದಲ್ಲೇ ಒಂದು ವ್ಯಾಯಾಮ ಶಾಲೆಯೊಂದನ್ನು ಕಟ್ಟಿಸಿದನು; ಅತಿ ಕುಲೀನ ಯೆಹೂದ್ಯ ಯುವಕರು ಗ್ರೀಕರ ಟೋಪಿ ಹಾಕಿಕೊಳ್ಳುವಂತೆ ಪ್ರಚೋದಿಸಿದನು.
13 : ಹೀಗೆ ವಿಶ್ವಾಸರಹಿತನು ಹಾಗೂ ಪ್ರಧಾನ ಯಾಜಕನೂ ಆಗಿದ್ದ ಯಾಸೋನನು ಮಿತಿಮೀರಿದ ಹೊಲೆಗೆಲಸಕ್ಕೆ ಕಾರಣನಾದನು. ಗ್ರೀಕರ ಸಂಸ್ಕøತಿ ಹೆಚ್ಚಾಗಿ ಪರಕೀಯರ ಅನುಕರಣೆ ಬೆಳೆಯುತ್ತಾ ಬಂದಿತು.
14 : ಇದರಿಂದಾಗಿ ಯಾಜಕರಿಗೆ ಪೀಠ ಸೇವೆಯಲ್ಲಿ ಆಸಕ್ತಿಯೇ ಇರಲಿಲ್ಲ. ಮಹಾದೇವಾಲಯವನ್ನು ತಾತ್ಸಾರಮಾಡಿ, ಬಲಿದಾನಗಳ ಚಿಂತೆಯನ್ನೇ ಬಿಟ್ಟು, ಎಸೆಚಕ್ರದ ಪಂದ್ಯಕ್ಕೆ ಸೂಚನಾ ಘಂಟೆಯಾದ ತಕ್ಷಣ, ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ನಿಷಿದ್ಧ ಎಣ್ಣೆಯನ್ನು ಸ್ವೀಕರಿಸಲು ಧಾವಿಸುತ್ತಿದ್ದರು.
15 : ಹೀಗೆ ಅವರ ಪೂರ್ವಜರು ಅಮೂಲ್ಯವೆಂದು ಪರಿಗಣಿಸುತ್ತಿದ್ದ ಎಲ್ಲವನ್ನೂ ಕಡೆಗಣಿಸಿ, ಗ್ರೀಕರ ಪ್ರತಿಷ್ಠಿತ ಪದ್ಧತಿಗಳೇ ಶ್ರೇಷ್ಠವೆಂದು ಎಣಿಸಿ ಅನುಸರಿಸುತ್ತಿದ್ದರು.
16 : ಈ ಕಾರಣದಿಂದ ಅವರ ಮೇಲೆ ಘೋರ ವಿಪತ್ತು ಬಂದೊದಗಿತು. ಯಾರ ಆಚಾರಗಳನ್ನು ಮೆಚ್ಚುತ್ತಿದ್ದರೋ, ಯಾರ ಪದ್ಧತಿಗಳನ್ನು ಅನುಕರಣೆ ಮಾಡಲು ಅಪೇಕ್ಷಿಸುತ್ತಿದ್ದರೋ, ಅವರೇ ಶತ್ರುಗಳಾಗಿ ಪರಿಣಮಿಸಿದರು, ಅವರೇ ಆ ಯೆಹೂದ್ಯರನ್ನು ಶಿಕ್ಷಿಸಲಾರಂಭಿಸಿದರು.
17 : ಏಕೆಂದರೆ ದೇವರ ಆಜ್ಞೆಗಳನ್ನು ತಾತ್ಸಾರಮಾಡುವುದು ಅಲ್ಪವಿಷಯವಲ್ಲ. ಇದನ್ನು ಈ ಕೆಳಕಂಡ ಘಟನೆಗಳು ಸ್ಪಷ್ಟೀಕರಿಸುವುವು: ಜೆರುಸಲೇಮಿನ ಮೇಲೆ ಸಿರಿಯನ್ನರ ಪ್ರಭಾವ
18 : ನಾಲ್ಕು ವರ್ಷಗಳಿಗೊಮ್ಮೆ ಟೈರ್ ನಗರದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಲ್ಲಿ ಒಮ್ಮೆ ಅರಸನೂ ಉಪಸ್ಥಿತನಿದ್ದನು.
19 : ಆಗ ದುಷ್ಟ ಯಾಸೋನನು ಕೆಲವು ಪ್ರತಿನಿಧಿಗಳನ್ನು ಕಳುಹಿಸಿದನು. ಈ ವ್ಯಕ್ತಿಗಳು ಹರ್ಕುಲಿಸ್ ದೇವರಿಗೆ ಬಲಿಅರ್ಪಣೆ ಮಾಡುವುದಕ್ಕೆಂದು 10,000 ಕಿಲೋಗ್ರಾಂ ಬೆಳ್ಳಿನಾಣ್ಯಗಳನ್ನು ತೆಗೆದುಕೊಂಡು ಹೋಗಿದ್ದರು. ಆ ಜೆರುಸಲೇಮಿನವರನ್ನು ‘ಅಂತಿಯೋಕದ ಪ್ರಜೆ’ಗಳೆಂದು ದಾಖಲು ಮಾಡಲಾಗಿತ್ತು. ಹಣವನ್ನು ತೆಗೆದುಕೊಂಡು ಹೋದವರಾದರೋ ಬಲಿಯರ್ಪಣೆಗೆ ಅದನ್ನು ಉಪಯೋಗಿಸಲು ಅನುಚಿತವೆಂದೆಣಿಸಿ ಬೇರೊಂದು ಉದ್ದೇಶಕ್ಕಾಗಿ ಬಳಸಲೆತ್ನಿಸಿದರು.
20 : ಹಣವನ್ನು ಕಳುಹಿಸಿದವನು ಹರ್ಕುಲಿಸ್ ದೇವರಿಗೆ ಬಲಿ ಅರ್ಪಿಸುವುದಕ್ಕೆಂದು ಉದ್ದೇಶಿಸಿದ್ದರೂ, ತೆಗೆದುಕೊಂಡು ಹೋದವರು ಅದರಿಂದ ಯುದ್ಧದ ಹಡಗುಗಳನ್ನು ತಯಾರಿಸುವುದು ಸೂಕ್ತವೆಂದು ನಿರ್ಧರಿಸಿದರು.
21 : ಫಿಲೋಮಿಟರ್ ಎಂಬವನಿಗೆ ರಾಜನಾಗಿ ಕಿರೀಟಧಾರಣೆಯಾಗುವ ಸಮಾರಂಭದಲ್ಲಿ ಭಾಗಿಯಾಗಲು ಮೆನೆಸ್ಥೆಯುಸನ ಮಗ ಅಪೊಲ್ಲೋನಿಯನು ಈಜಿಪ್ಟಿಗೆ ಕಳುಹಿಸಲ್ಪಟ್ಟನು; ಫಿಲೋಮಿಟರನು ತನ್ನ ಆಳ್ವಿಕೆಗೆ ವಿರೋಧಿಯಾಗಿದ್ದಾನೆಂದು ಅಂತಿಯೋಕನು ತಿಳಿದು, ತನ್ನ ಸುರಕ್ಷತೆಗಾಗಿ ಸೂಕ್ತ ಕ್ರಮವನ್ನು ಕೈಗೊಂಡನು. ಆದುದರಿಂದ ಅವನು ಮೊದಲು ಜೊಪ್ಪಕ್ಕೆ ಅನಂತರ ಜೆರುಸಲೇಮಿಗೆ ಪ್ರಯಾಣ ಮಾಡಿದನು.
22 : ಯಾಸೋನನೂ ನಗರದ ಜನರೂ ಅವನಿಗೆ ಆಡಂಬರವಾದ ಸ್ವಾಗತವನ್ನು ನೀಡಿದರು; ದೀವಟಿಗೆಗಳನ್ನು ಹಿಡಿದುಕೊಂಡು ಜಯಘೋಷ ಮಾಡಿದರು. ಜೆರುಸಲೇಮಿನಿಂದ ಅಂತಿಯೋಕನು ತನ್ನ ಸೈನ್ಯದೊಂದಿಗೆ ಫೆನೀಷಿಯಕ್ಕೆ ಹೋದನು. ಪ್ರಧಾನ ಯಾಜಕನಾಗಿ ಮೆನೆಲಾವ್ಸ್
23 : ಮೂರು ವರ್ಷಗಳಾದ ನಂತರ, ಈ ಮೊದಲೇ ಪ್ರಸ್ತಾಪಿಸಲಾದ ಸಿಮೋನ್ ಎಂಬವನ ಸಹೋದರ ಮೆನೆಲಾವ್ಸನನ್ನು ಯಾಸೋನನು ರಾಜನ ಬಳಿಗೆ ಕಳುಹಿಸಿದನು. ಅತೀ ಮುಖ್ಯವಾದ ವಿಷಯಗಳ ಬಗ್ಗೆ ರಾಜನಿರ್ಣಯವನ್ನು ತಿಳಿದು ಬರುವುದಕ್ಕಾಗಿಯೂ ರಾಜನಿಗೆ ಸಲ್ಲಿಸಬೇಕಾಗಿದ್ದ ಹಣವನ್ನು ಸಲ್ಲಿಸುವುದಕ್ಕಾಗಿಯೂ ಅವನನ್ನು ಕಳುಹಿಸಿದನು.
24 : ಮೆನೆಲಾವ್ಸನು ರಾಜನ ಮುಂದೆ ನಿಂತು ಅಧಿಕಾರ ದರ್ಪದಿಂದ ಅವನನ್ನು ಹೊಗಳಿ, ಯಾಸೋನನು ಕೊಟ್ಟಿದ್ದಕ್ಕಿಂತ ಹೆಚ್ಚಾಗಿ 10,000 ಕಿಲೋಗ್ರಾಂ ಬೆಳ್ಳಿನಾಣ್ಯವನ್ನು ಕೊಟ್ಟನು. ಇದರ ಪರಿಣಾಮವಾಗಿ, ಪ್ರಧಾನ ಯಾಜಕನ ಪದವಿಯನ್ನು ರಾಜನಿಂದ ದಕ್ಕಿಸಿಕೊಂಡನು.
25 : ರಾಜಾಜ್ಞೆಯನ್ನು ಪಡೆದಮೇಲೆ, ಪ್ರಧಾನ ಯಾಜಕತ್ವಕ್ಕೆ ಯಾವ ಅರ್ಹತೆಯೂ ಇಲ್ಲದೆ ಕೇವಲ ದಬ್ಬಾಳಿಕೆಯ ದೊರೆಯಂತೆ ಹಾಗೂ ಕಾಡುಮೃಗದ ಕ್ರೂರತ್ವದೊಂದಿಗೆ ಹಿಂದಿರುಗಿದನು.
26 : ಹೀಗೆ ತನ್ನ ಸ್ವಂತ ಸಹೋದರನನ್ನೇ ಪದಚ್ಯುತಿಗೊಳಿಸಿದ ಯಾಸೋನನು, ತಾನೇ ಇನ್ನೊಬ್ಬನಿಂದ ಪದಚ್ಯುತಿ ಹೊಂದಿದನು. ಅವನು ಅಮ್ಮೋನಿಯರ ದೇಶಕ್ಕೆ ಹೋಗಿ ಆಶ್ರಯ ಪಡೆಯಬೇಕಾಯಿತು.
27 : ಮೆನೆಲಾವ್ಸನು ಪ್ರಧಾನ ಯಾಜಕನಾಗಿ ಮುಂದುವರೆದರೂ, ರಾಜನಿಗೆ ವಾಗ್ದಾನ ಮಾಡಿದ ಹಣವನ್ನು ಸರಿಯಾಗಿ ಪಾವತಿ ಮಾಡಲಿಲ್ಲ.
28 : ಕೋಟೆಯ ದಳವಾಯಿಯಾಗಿದ್ದ ಸೊಸ್ರಾತನು ಹಣವನ್ನು ತೀರಿಸಬೇಕೆಂದು ಪದೇಪದೇ ಕೇಳುತ್ತಿದ್ದನು; ಕಾರಣ, ಕಂದಾಯ ವಸೂಲಿಯ ಜವಾಬ್ದಾರಿ ಅವನದಾಗಿತ್ತು. ಈ ಹಗರಣದಿಂದಾಗಿ ಅವರು ಇಬ್ಬರೂ ರಾಜನ ಮುಂದೆ ಬರಬೇಕೆಂದು ಆಜ್ಞೆಯಾಯಿತು.
29 : ಮೆನೆಲಾವ್ಸನು ತನ್ನ ಸಹೋದರ ಲಿಸಿಮಾಕಸನನ್ನು ತಾತ್ಕಾಲಿಕ ಪ್ರಧಾನಯಾಜಕತ್ವಕ್ಕೆ ನೇಮಿಸಿದನು; ಅಂತೆಯೇ ಸೊಸ್ರಾತನು ಸೈಪ್ರಸ್ಸಿನ ಕೂಲಿಪಡೆಗಳ ನಾಯಕನಾಗಿದ್ದ ಕ್ರೇಟನನ್ನು ತನ್ನ ಸ್ಥಾನದಲ್ಲಿರಿಸಿದನು. ಓನೀಯನ ಕೊಲೆ
30 : ಪರಿಸ್ಥಿತಿ ಹೀಗಿರುವಲ್ಲಿ, ಸಿಲಿಸಿಯಾದ ಟಾರ್ಸಸ್ ಮತ್ತು ಮಾಲ್ಲಸ್ ನಗರದ ಜನರು ದಂಗೆಯೆದ್ದರು. ಕಾರಣ ಈ ನಗರಗಳನ್ನು ಅರಸನ ಉಪಪತ್ನಿಯಾಗಿದ್ದ ಅಂತಿಯೋಕಿಸಳಿಗೆ ಉಡುಗೊರೆಯಾಗಿ ಕೊಡಲಾಗಿತ್ತು.
31 : ಆದುದರಿಂದ ಅರಸನು ಉನ್ನತ ಅಧಿಕಾರಿಗಳಲ್ಲೊಬ್ಬನಾದ ಅಂದ್ರೋನಿಕಸನನ್ನು ಆಸ್ಥಾನದಲ್ಲಿರಿಸಿ, ಸಮಸ್ಯೆಯನ್ನು ಬಗೆಹರಿಸಲು ಸಿಲಿಸಿಯಾಕ್ಕೆ ಧಾವಿಸಿದನು.
32 : ಮೆನೆಲಾವ್ಸನು ಈ ಅವಕಾಶವನ್ನು ಬಳಸಿಕೊಂಡು ದೇವಾಲಯದಿಂದ ಕೆಲವು ಚಿನ್ನದ ಪಾತ್ರೆಗಳನ್ನು ಕದ್ದು ಅಂದ್ರೋನಿಕಸನಿಗೆ ಉಡುಗೊರೆಯಾಗಿಕೊಟ್ಟನು. ಈಗಾಗಲೇ ಹಲವು ಪಾತ್ರೆಗಳನ್ನು ಟೈರ್ ಮತ್ತು ಇತರ ನಗರಗಳಿಗೆ ಕೊಟ್ಟುಬಿಟ್ಟಿದ್ದನು.
33 : ಓನಿಯನು ಇದರ ಕುರಿತು ತಿಳಿದಾಗ ಅಂತಿಯೋಕದ ಬಳಿಯಿದ್ದ ದಾಫ್ನೆ ದೇವಾಲಯದಲ್ಲಿ ಆಶ್ರಯಪಡೆದು, ಮೆನೆಲಾವ್ಸನ ಕೃತ್ಯಗಳನ್ನು ಬಹಿರಂಗವಾಗಿ ಹೊರಗೆಡಹಿದನು.
34 : ಆಗ ಮೆನೆಲಾವ್ಸನು ಅಂದ್ರೋನಿಕಸನನ್ನು ಗುಟ್ಟಾಗಿ ಕರೆಸಿ, ಓನೀಯನನ್ನು ಕೊಲ್ಲಬೇಕೆಂದು ಒತ್ತಾಯಿಸಿದನು. ಅಂದ್ರೋನಿಕಸನು ಓನೀಯನ ಬಳಿಗೆ ಬಂದು ವಂಚನೆಯಿಂದ ಪ್ರಮಾಣ ಮಾಡಿ, ಬಲಗೈಯಿಂದ ಓನೀಯನ ಕೈಕುಲುಕಿದನು. ಓನಿಯನು ಸಂಶಯ ಪಟ್ಟರೂ ಅವನನ್ನು ಪವಿತ್ರಾಲಯದಿಂದ ಹೊರ ಬರುವಂತೆ ಮಾಡಿ, ನ್ಯಾಯನೀತಿ ಎಂಬುದಕ್ಕೆ ಎಳ್ಳಷ್ಟೂ ಬೆಲೆಕೊಡದೆ ಒಂದೇ ಸಾರಿಗೆ ಹೊಡೆದು ಅವನನ್ನು ಕೊಂದು ಹಾಕಿದನು. ಅಂದ್ರೋನಿಕಸನಿಗಾದ ಶಿಕ್ಷೆ
35 : ಈ ಕಾರಣದಿಂದಾಗಿ, ಯೆಹೂದ್ಯರು ಮಾತ್ರವಲ್ಲ, ಅನೇಕ ಇತರ ರಾಷ್ಟ್ರಗಳವರು ಸಹ ಅನ್ಯಾಯವಾಗಿ ಹತನಾದ ಆ ಮನುಷ್ಯನ ಬಗ್ಗೆ ವ್ಯಥೆಪಟ್ಟರು, ಮತ್ತು ತೀವ್ರ ಕಳವಳವನ್ನು ವ್ಯಕ್ತಪಡಿಸಿದರು.
36 : ಅರಸನು ಸಿಲಿಸಿಯಾ ಪ್ರಾಂತ್ಯದಿಂದ ಹಿಂದಿರುಗಿದಾಗ ಓನೀಯನ ನಿಷ್ಕಾರುಣ್ಯ ಕೊಲೆಯ ವಿಷಯವಾಗಿ ನಗರದ ಯೆಹೂದ್ಯರು ಅವನ ಮೊರೆಹೊಕ್ಕರು. ಗ್ರೀಕರು ಸಹ ಈ ಅಪರಾಧವನ್ನು ಬಹುವಾಗಿ ಖಂಡಿಸಿದರು.
37 : ಆದುದರಿಂದ ಅಂತಿಯೋಕನು ಮನನೊಂದನು, ಕನಿಕರಪಟ್ಟನು. ಮೃತನಾದವನ ಸನ್ನಡತೆ ಹಾಗು ಸಂಯಮವನ್ನು ಸ್ಮರಿಸಿಕೊಂಡು ಕಣ್ಣೀರು ಸುರಿಸಿದನು.
38 : ಅನಂತರ ಕೋಪದಿಂದ ಕೆರಳಿ ಅಂದ್ರೋನಿಕಸನ ರಾಜವಸ್ತ್ರವನ್ನು ಬಲವಂತದಿಂದ ಕಿತ್ತು, ಹರಿದುಹಾಕಿದನು. ಬೆತ್ತಲೆಯಾಗಿ ಊರಿನ ಬೀದಿಗಳಲ್ಲಿ ಅವನನ್ನು ಮೆರವಣಿಗೆ ಮಾಡಿಸಿ, ಓನೀಯನ ಘೋರಕೊಲೆಯಾದ ಸ್ಥಳದಲ್ಲೇ ಅವನನ್ನು ಕೊಂದುಹಾಕಿದನು. ಹೀಗೆ ಸರ್ವೇಶ್ವರ ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಲಿಸಿಮಾಕನ ಕೊಲೆ
39 : ಏತನ್ಮಧ್ಯೆ ತನ್ನ ಸಹೋದರ ಮೆನೆಲಾವ್ಸನ ಬೆಂಬಲದಿಂದ ಜೆರುಸಲೇಮಿನ ಮಹಾ ದೇವಾಲಯದಲ್ಲಿ ಲಿಸಿಮಾಕನು, ಅನೇಕಸಾರಿ ದರೋಡೆ ಮಾಡಿದ್ದನು; ಹಲವಾರು ಚಿನ್ನದ ಪಾತ್ರೆಗಳು ನಾಪತ್ತೆ ಆಗಿದ್ದವು. ಈ ಸಮಾಚಾರ ಎಲ್ಲಾ ಕಡೆ ಹರಡಿತ್ತು. ಲಿಸಿಮಾಕನ ವಿರುದ್ಧ ಪ್ರತಿಭಟನೆ ಸೂಚಿಸಲು ಜನರು ಗುಂಪು ಸೇರಿದರು.
40 : ಕೋಪೋದ್ರೇಕಗೊಂಡ ಜನರನ್ನು ಹತೋಟಿಗೆ ತರಲು ಅಸಾಧ್ಯವಾಗಿತ್ತು. ಪರಿಸ್ಥಿತಿ ಗಂಭೀರವಾಗಿರಲು, ಜನರ ಮೇಲೆ ಮುತ್ತಿಗೆ ಹಾಕಲು ಲಿಸಿಮಾಕನು 3,000 ಸುಸಜ್ಜಿತ ಜನರನ್ನು ಕಳುಹಿಸಿದನು. ಅವರಿಗೆ ಅವ್ರಾನಸ್ ಎಂಬವನನ್ನು ನಾಯಕನಾಗಿ ನೇಮಿಸಲಾಗಿತ್ತು. ಅವ್ರಾನಸನಿಗೆ ವಯಸ್ಸಾಗಿತ್ತು. ಅವನು ಅಷ್ಟೇ ಮೂರ್ಖನು ಸಹ.
41 : ಲಿಸಿಮಾಕನು ತಮ್ಮ ಮೇಲೆ ಧಾಳಿ ಮಾಡುತ್ತಿದ್ದಾನೆಂದು ಯೆಹೂದ್ಯರು ಅರಿತಾಗ, ಕೆಲವರು ಕಲ್ಲು ತೂರಿದರು, ಇನ್ನು ಕೆಲವರು ಮರದ ತುಂಡುಗಳನ್ನು ಎಸೆದರು. ಮತ್ತೆ ಕೆಲವರು ಬಲಿಪೀಠದಿಂದ ಬೂದಿಯನ್ನು ತೆಗೆದುಕೊಂಡು ಲಿಸಿಮಾಕನ ಹಾಗು ಅವನ ಸಂಗಡಿಗರ ಮೇಲೆ ಚೆಲ್ಲಿದರು. ಇದರಿಂದ ಅವರೆಲ್ಲರೂ ಗಲಿಬಿಲಿಗೊಂಡರು.
42 : ತತ್ಪರಿಣಾಮವಾಗಿ, ಅವರಲ್ಲಿ ಅನೇಕರನ್ನು ಗಾಯಗೊಳಿಸಿದರು, ಕೆಲವರನ್ನು ಕೊಂದುಹಾಕಿದರು, ಮಿಕ್ಕ ಎಲ್ಲರನ್ನೂ ಓಡಿಸಿಬಿಟ್ಟರು. ಮಹಾ ದೇವಾಲಯದಲ್ಲಿ ಕನ್ನ ಹಾಕಿದ ಲಿಸಿಮಾಕನನ್ನು ಅದರ ಖಜಾನೆಯ ಬಳಿಯೇ ಕೊಂದುಹಾಕಿದರು. ಮೆನೆಲಾವ್ಸನ ವಿಚಾರಣೆ
43 : ಈ ಘಟನೆಯ ಬಗ್ಗೆ ಮೆನೆಲಾವ್ಸನ ಮೇಲೆ ಮೊಕದ್ದಮೆಯನ್ನು ಹೂಡಲಾಯಿತು.
44 : ಅರಸನು ಟೈರಿಗೆ ಬಂದಾಗ ಅವನ ಮುಂದೆ ದೂರನ್ನು ಸಾಬೀತುಮಾಡಲು ಜೆರುಸಲೇಮಿನ ಶಾಸಕ ಸಭೆಯವರು ಮೂರು ಮಂದಿ ಜನರನ್ನು ಕಳುಹಿಸಿಕೊಟ್ಟರು.
45 : ಸೋಲುವುದೇನೋ ಖಂಡಿತವೆಂದು ಅರಿತ ಮೆನೆಲಾವ್ಸನು ಅರಸನ ಮೇಲೆ ಪ್ರಭಾವಬೀರಿ ಒಲಿಸಿಕೊಳ್ಳಲು ದೊರಿಮೇನೆಯ ಮಗ ಪ್ತೊಲೆಮೇಯನಿಗೆ ಭಾರೀ ಮೊತ್ತದ ಲಂಚವನ್ನು ಕೊಡುವುದಾಗಿ ಮಾತುಕೊಟ್ಟನು.
46 : ಪ್ತೊಲೆಮೇಯನು ತಂಗಾಳಿಯನ್ನು ಸೇವಿಸಲೆಂದು ನ್ಯಾಯಾಲಯದಿಂದ ರಾಜನನ್ನು ಹೊರಕ್ಕೆ ಕರೆತಂದು, ಅವನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿದನು. ಮೆನೆಲಾವ್ಸನು ನಿರ್ದೋಷಿ ಎಂದು ತೀರ್ಪುನೀಡುವಂತೆ ಪುಸಲಾಯಿಸಿದನು. ಅಂತೆಯೇ ರಾಜನು, ಇಷ್ಟೆಲ್ಲಾ ದುಷ್ಕøತ್ಯಗಳಿಗೆ ಕಾರಣಕರ್ತನಾಗಿದ್ದ ಮೆನೆಲಾವ್ಸನ ವಿರುದ್ಧ ಜನರು ಹೂಡಿದ್ದ ಮೊಕದ್ದಮೆಗಳನ್ನು ವಜಾಮಾಡಿ
47 : ಅವನಿಗೆ ವಿರುದ್ಧ ದೂರು ತಂದಿದ್ದ ಮೂವರು ಮಂದಿಯನ್ನೇ ಗಲ್ಲಿಗೇರಿಸಲು ನಿರ್ಣಯಿಸಿದನು. ದುರದೃಷ್ಟವಶಾತ್, ಆ ಮೂವರುಮಂದಿ ದುರ್ಮರಣಕ್ಕೊಳಗಾದರು. ಕ್ರೂರ, ಶೀತಿಯನ್ನರ ಬಳಿ ಅವರು ದೂರುಕೊಟ್ಟಿದ್ದರೂ ಜಯಶೀಲರಾಗಬಹುದಾಗಿತ್ತು.
48 : ನಗರದ ಪರವಾಗಿ, ಗ್ರಾಮಗಳ ಪರವಾಗಿ ಹಾಗು ದೇವಾಲಯದ ಪವಿತ್ರ ಪಾತ್ರೆಗಳ ಪರವಾಗಿ, ವಾದಿಸಿದ ಈ ಮೂವರಿಗೆ ಅನ್ಯಾಯವಾದ ಶಿಕ್ಷೆಯಾಯಿತು.
49 : ಟೈರಿನ ಜನರು ಕೂಡ ಅವರ ಶವಸಂಸ್ಕಾರವನ್ನು ಆಡಂಬರವಾಗಿ ಈಡೇರಿಸಲು ನೆರವು ನೀಡಿದರು; ಅವರಿಗಾದ ಅನ್ಯಾಯವನ್ನು ಖಂಡಿಸಿದರು.
50 : ಆದರೆ, ದುರಾಶೆಯುಳ್ಳ ಅಧಿಕಾರಿಗಳ ಬೆಂಬಲದಿಂದ ತನ್ನ ಸ್ಥಾನದಲ್ಲಿ ಭದ್ರವಾಗಿದ್ದ ಮೆನೆಲಾವ್ಸನು ದಿನೇದಿನೇ ದುಷ್ಟನಾಗಿ ಸ್ವಜನರ ಮುಖ್ಯ ಶತ್ರುವಾಗಿ ಮಾರ್ಪಟ್ಟನು.

· © 2017 kannadacatholicbible.org Privacy Policy