1 : ಪ್ರಧಾನ ಯಾಜಕ ಓನೀಯನು ಬಹಳ ಭಕ್ತಿವಂತ, ಪಾಪಕೃತ್ಯಗಳನ್ನು ಬಹಳವಾಗಿ ಹೇಸುತ್ತಿದ್ದ. ಆದುದರಿಂದ ಪವಿತ್ರನಗರದಲ್ಲಿ ಶಾಂತಿಸಮಾಧಾನ ನೆಲೆಸಿತ್ತು. ಅಲ್ಲದೆ ವಿಧಿ ನಿಯಮಗಳನ್ನು ಜನರು ಪ್ರಾಮಾಣಿಕವಾಗಿ ಅನುಸರಿಸುತ್ತಿದ್ದರು.
2 : ಹೀಗಿರಲಾಗಿ, (ಸಿರಿಯಾ ಹಾಗು ಈಜಿಪ್ಟಿನ) ಅರಸರುಗಳು ಮತ್ತು ದೇಶದ ಮುಖಂಡರು ಮಹಾದೇವಾಲಯಕ್ಕೆ ಅತ್ಯುತ್ತಮವಾದ ಕೊಡುಗೆಗಳನ್ನಿತ್ತು ಗೌರವಸಲ್ಲಿಸಿದ್ದರು.
3 : ಏಷ್ಯಾದ ಅರಸ ಸೆಲ್ಯೂಕಸನು ಸಹ ಪೂಜೆ ಪುರಸ್ಕಾರಗಳಿಗೂ ಬಲಿಯರ್ಪಣೆಗಳಿಗೂ ಆಗುತ್ತಿದ್ದ ವೆಚ್ಚವನ್ನು ತನ್ನ ರಾಜ್ಯಾದಾಯದಿಂದಲೇ ಭರಿಸಿಕೊಡುತ್ತಿದ್ದನು.
4 : ಆದರೆ ದೇವಾಲಯದ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಬೆನ್ಯಾಮೀನನ ಗೋತ್ರದ ಸಿಮೋನ್ ಎಂಬವನಿಗೂ ಪ್ರಧಾನ ಯಾಜಕ ಓನೀಯನಿಗೂ ನಗರದ ಮಾರುಕಟ್ಟೆಯ ಕಾನೂನು ವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯವಿತ್ತು.
5 : ಓನೀಯನೊಂದಿಗೆ ಮಾಡಿದ ವಾದದಲ್ಲಿ ಸೋತುಹೋಗಿದ್ದರಿಂದ ಸಿಮೋನನು ಸೆಲೇಸಿರಿಯಾ ಹಾಗು ಫೆನೀಷಿಯ ನಾಡುಗಳ ರಾಜ್ಯಪಾಲನಾಗಿದ್ದ ತಾರ್ಸಸ್ಸನ ಮಗ ಅಪೊಲ್ಲೋನಿಯನ ಬಳಿಗೆ ಹೋಗಿ,
6 : “ಜೆರುಸಲೇಮಿನ ದೇವಾಲಯದ ಬೊಕ್ಕಸ ಹೇರಳವಾದ ಹಣದಿಂದ ತುಂಬಿದೆ; ಅದನ್ನು ಎಣಿಸುವುದಕ್ಕೂ ಅಸಾಧ್ಯವಾಗಿದೆ; ಅಷ್ಟೊಂದು ಹಣ ಬಲಿಯರ್ಪಣೆಗೆ ಅನಾವಶ್ಯಕವಾದುದ್ದರಿಂದ ಅದನ್ನು ಅರಸನ ಮೇಲ್ವಿಚಾರಣೆಗೆ ಒಳಪಡಿಸಬೇಕು,” ಎಂದು ದೂರಿತ್ತನು.
ಜೆರುಸಲೇಮಿನಲ್ಲಿ ಹೆಲೆಯೋಡೊರಸ್
7 : ಅಪೊಲ್ಲೋನಿಯನು ಅರಸನಿಗೆ ಹಣದ ವಿಷಯವನ್ನು ತಿಳಿಯಪಡಿಸಿದಾಗ, ಅರಸನು ತನ್ನ ಮುಖ್ಯಮಂತ್ರಿ ಹೆಲೆಯೋಡೊರಸನನ್ನು ಕರೆದು, “ಹೋಗಿ ಆ ಹಣವನ್ನು ತೆಗೆದುಕೊಂಡು ಬಾ,” ಎಂದು ಆಜ್ಞಾಪಿಸಿದನು.
8 : ಹೆಲೆಯೋಡೊರಸನು ರಾಜಾಜ್ಞೆಯನ್ನು ಈಡೇರಿಸಲು ತಕ್ಷಣ ಹೊರಟನು; ಆದರೆ ಸೆಲೆಸಿರಿಯಾ ಮತ್ತು ಫೆನಿಷಿಯಾ ನಗರಗಳ ತನಿಖಾಧಿಕಾರಿಯ ಸೋಗಿನಿಂದ ಪ್ರಯಾಣ ಮಾಡಿದನು.
9 : ಅವನು ಜೆರುಸಲೇಮನ್ನು ತಲುಪಿದಾಗ, ನಗರದ ಪ್ರಧಾನ ಯಾಜಕನಿಂದ ಅವನಿಗೆ ಸುಸ್ವಾಗತ ಲಭಿಸಿತು. ಬಳಿಕ ತಾನು ಬಂದ ಕಾರಣವನ್ನು ತಿಳಿಸಿ, ಪರಿಸ್ಥಿತಿ ನಿಜವೋ ಎಂದು ವಿಚಾರಿಸಿದನು.
10 : ಪ್ರಧಾನ ಯಾಜಕನು ಉತ್ತರಿಸುತ್ತಾ, “ವಿಧವೆಯರಿಗೂ ಅನಾಥರಿಗೂ ಮೀಸಲಾದ ಹಣ ಠೇವಣಿ ಇಡಲಾಗಿದೆ.
11 : ಅದರ ಜೊತೆ, ಅಗ್ರಗಣ್ಯನಾದ ತೊಬೀಯನ ಮಗ ಹಿರ್ಕಾನುಸನ ಹಣವೂ ಸೇರಿದೆ. ಅವುಗಳ ಮೊತ್ತ 13,000 ಕಿಲೋಗ್ರಾಮ್ ಬೆಳ್ಳಿ ಮತ್ತು 6,500 ಕಿಲೋಗ್ರಾಮ್ ಚಿನ್ನವಾಗುತ್ತದೆ. ಹೀಗಿರಲು, ದುಷ್ಟ ಸಿಮೋನನು ನೀಡಿದ ಹೇಳಿಕೆ ಸತ್ಯಕ್ಕೆ ದೂರವಾದದ್ದು.
12 : ಪುಣ್ಯಕ್ಷೇತ್ರದ ಪವಿತ್ರತೆಯಲ್ಲಿ, ಲೋಕವಿಖ್ಯಾತ ಮಹಾದೇವಾಲಯದ ಸತ್ಯತೆ ಹಾಗು ಧಾರ್ಮಿಕತೆಯಲ್ಲಿ ನಂಬಿಕೆಯಿಟ್ಟ ಜನರಿಗೆ ಮೋಸಮಾಡಿ ಆ ಹಣವನ್ನು ತೆಗೆದು ಇತರರಿಗೆ ಕೊಡುವುದು ಎಂದಿಗೂ ಸಾಧ್ಯವಿಲ್ಲ,” ಎಂದು ಹೇಳಿದನು.
ಮಹಾದೇವಾಲಯವನ್ನು ಪ್ರವೇಶಿಸಲು ಯೋಜನೆ
13 : ಆದರೂ ರಾಜಾಜ್ಞೆಯನ್ನು ಈಡೇರಿಸಲು ಬದ್ಧನಾದ ಹೆಲೆಯೋಡೊರಸ್ ಹೇಗಾದರೂ ಮಾಡಿ ಹಣವನ್ನು ವಶಪಡಿಸಿಕೊಂಡು ರಾಜನ ಖಜಾನೆಗೆ ಸೇರಿಸಬೇಕಾಗಿದೆ ಎಂದು ಒತ್ತಿ ಹೇಳಿದನು.
14 : ಆದುದರಿಂದ ಅವನು ನೇರವಾಗಿ ನಿಧಿಯನ್ನು ಪರೀಕ್ಷಿಸಲು ದಿನವನ್ನು ಗೊತ್ತುಮಾಡಿ ಮಹಾದೇವಾಲಯವನ್ನು ಪ್ರವೇಶಿಸಿದನು. ಇದರಿಂದ ನಗರದಲ್ಲೆಲ್ಲಾ ದೊಡ್ಡ ಗೊಂದಲ ಉಂಟಾಯಿತು.
15 : ಯಾಜಕರು, ತಮ್ಮ ಯಾಜಕ ವಸ್ತ್ರಗಳನ್ನು ಧರಿಸಿಕೊಂಡು, ಬಲಿಪೀಠದ ಮುಂದೆ ಸಾಷ್ಟಾಂಗವೆರಗಿ, ಕಾಣಿಕೆಗಳ ಹಾಗು ಠೇವಣಿಗಳ ಬಗ್ಗೆ ನಿಯಮಗಳನ್ನಿತ್ತ ದೇವರಿಗೆ ಮೊರೆಯಿಟ್ಟರು: ಠೇವಣಿಗಳನ್ನು ಕೊಟ್ಟವರ ಹಿತಕ್ಕಾಗಿ ಸುರಕ್ಷಿತವಾಗಿರಿಸಬೇಕೆಂದು ಪ್ರಾರ್ಥನೆಮಾಡಿದರು.
16 : ರಧಾನಯಾಜಕನ ಮನಸ್ಸು ತತ್ತರಿಸಿತು; ಮುಖ ಬಿಳಿಚಿಕೊಂಡಿತು; ಅವನ ದೇಹ ನಡುಗಲಾರಂಭಿಸಿತು. ಅವನ ಹೃದಯ ಅಷ್ಟು ಕಂಗೆಟ್ಟಿತ್ತು. ಈ ದೃಶ್ಯ ನಿಜಕ್ಕೂ ಹೃದಯವಿದ್ರಾವಕವಾಗಿತ್ತು.
17 : ರಧಾನಯಾಜಕನ ಮನಸ್ಸು ತತ್ತರಿಸಿತು; ಮುಖ ಬಿಳಿಚಿಕೊಂಡಿತು; ಅವನ ದೇಹ ನಡುಗಲಾರಂಭಿಸಿತು. ಅವನ ಹೃದಯ ಅಷ್ಟು ಕಂಗೆಟ್ಟಿತ್ತು. ಈ ದೃಶ್ಯ ನಿಜಕ್ಕೂ ಹೃದಯವಿದ್ರಾವಕವಾಗಿತ್ತು.
18 : ಮಹಾದೇವಾಲಯ ಅಪವಿತ್ರತೆಗೆ ಈಡಾಗದಂತೆ ಪ್ರಾರ್ಥಿಸಲು ಜನರು ಗುಂಪುಗುಂಪಾಗಿ ಓಡಿಬಂದರು.
19 : ಹೆಂಗಸರು ಬರೀ ಗೋಣಿತಟ್ಟಿನ ಲಂಗಗಳನ್ನುಟ್ಟುಕೊಂಡು ಬೀದಿಗಳಲ್ಲಿ ಗುಂಪುಗೂಡಿದರು, ಮನೆಯಿಂದ ಹೊರಕ್ಕೆ ಎಂದೂ ಬಾರದ ಯುವತಿಯರು ಬಾಗಿಲ ಬಳಿಯಲ್ಲೂ ನಗರದ ಗೋಡೆಯ ಬಳಿಯಲ್ಲೂ ಸೇರಿದರು. ಇನ್ನೂ ಕೆಲವರು ಕಿಟಕಿಗಳ ಮೂಲಕ ದುರುಗುಟ್ಟಿ ನೋಡಿದರು.
20 : ಇವರೆಲ್ಲರು ಸ್ವರ್ಗದತ್ತ ತಮ್ಮ ಕರಗಳನ್ನು ಎತ್ತಿ ಪ್ರಾರ್ಥಿಸಿದರು.
21 : ಇತ್ತ ಅತೀವ ಬಿಕ್ಕಟ್ಟಿನಲ್ಲೂ ಯಾತನೆಯಲ್ಲೂ ಸಿಕ್ಕಿಕೊಂಡ ಪ್ರಧಾನಯಾಜಕನು; ಅತ್ತ ಭ್ರಮೆಗೊಂಡು ಮೊಕ್ಕಡೆಯಾಗಿ ನೆಲದಮೇಲೆ ಬಿದ್ದಿದ್ದ ನಗರದ ನಿವಾಸಿಗಳ; ಎಂಥಾ ಚಿಂತಾಜನಕ ದೃಶ್ಯ!
ಸರ್ವೇಶ್ವರನಿಂದ ಅಪೂರ್ವ ರಕ್ಷಣೆ
22 : ಜನರೆಲ್ಲರು ಹೀಗೆ ವಿಶ್ವಾಸದಿಂದ ಕಾಣಿಕೆಗಳ ಭದ್ರತೆಗಾಗಿ, ಠೇವಣಿಯಿಟ್ಟವರ ಹಿತಕ್ಕಾಗಿ, ಸರ್ವಶಕ್ತ ಸರ್ವೇಶ್ವರನನ್ನು ಪ್ರಾರ್ಥನೆ ಮಾಡುತ್ತಾ ಇರುವಾಗ
23 : ಹೆಲೆಯೋಡೊರಸನು ತನ್ನ ನಿರ್ಧರಿತ ಯೋಜನೆಯನ್ನು ಈಡೇರಿಸತೊಡಗಿದನು.
24 : ಅವನು ಅಂಗರಕ್ಷಕರೊಂದಿಗೆ ಖಜಾನೆಯೊಳಕ್ಕೆ ಬಂದಾಕ್ಷಣವೇ, ಆಧ್ಯಾತ್ಮಿಕ ಶಕ್ತಿಗಳ ಒಡೆಯರಾದ ಸರ್ವೇಶ್ವರ ನೀಡಿದ ದರ್ಶನದ ಪರಿಣಾಮವಾಗಿ ಹೆಲೆಯೋಡೊರಸನೊಂದಿಗೆ ಪ್ರವೇಶಿಸಿದವರೆಲ್ಲ ಭಯಭ್ರಾಂತರಾದರು, ನಿಬ್ಬೆರಗಾದರು!
25 : ಆ ದರ್ಶನದಲ್ಲಿ ಒಂದು ಕುದುರೆಯೂ ಅದರ ಸವಾರನೂ ಕಾಣಿಸಿಕೊಂಡನು. ಕುದುರೆಯ ಲಗಾಮು ಅಪೂರ್ವ ವಸ್ತುಗಳಿಂದ ಅಲಂಕೃತವಾಗಿದ್ದು, ಸವಾರನು ಬಂಗಾರದ ವಜ್ರಕವಚವನ್ನು ತೊಟ್ಟಿದ್ದನು. ದೃಶ್ಯವು ನಿಜಕ್ಕೂ ಭಯಂಕರವಾಗಿತ್ತು! ಇದ್ದಕ್ಕಿದ್ದಂತೆ ಆ ಕುದುರೆ, ಹೆಲೆಯೋಡೊರಸನ ಕಡೆಗೆ ನುಗ್ಗಿ ಮುಂಗಾಲಿನಿಂದ ಒದೆಯಿತು.
26 : ಹೆಲೆಯೋಡೊರಸನು ಇಬ್ಬರು ಬಲಾಢ್ಯ ಹಾಗು ಆಕರ್ಷಕ ಯುವಕರನ್ನು ಕಂಡನು. ಅವರು ಅಮೂಲ್ಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಅವರಲ್ಲಿ ಒಬ್ಬನು ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ನಿಂತುಕೊಂಡು ಹೆಲೆಯೋಡೊರಸನನ್ನು ನಿರ್ದಯೆಯಿಂದ ಹೊಡೆದು ಅತಿಯಾಗಿ ಘಾಯಗೊಳಿಸಿದರು.
27 : ತಕ್ಷಣವೇ ಅವನು ನೆಲದ ಮೇಲೆ ಬಿದ್ದು ಮೂರ್ಛೆಹೋದನು.
28 : ಅವನ ಜನರು ಬಂದು ಅವನನ್ನು ಹಾಸಿಗೆಯಲ್ಲಿ ಹೊತ್ತುಕೊಂಡು ಹೋದರು. ಸ್ವಲ್ಪ ಹೊತ್ತಿಗೆ ಮುಂಚೆಯೇ ಜನರ ದೊಡ್ಡ ಗುಂಪಿನೊಂದಿಗೆ, ಅಂಗರಕ್ಷಕರ ಜೊತೆಯಲ್ಲೇ ರಾಜಾರೋಷವಾಗಿ ಖಜಾನೆಯ ಕೋಣೆಯನ್ನು ಪ್ರವೇಶಿಸಿದ ಹೆಲೆಯೋಡೊರಸನು, ಈಗ ನಿಸ್ಸಹಾಯಕನಾಗಿ ಹಾಸಿಗೆಯಲ್ಲಿ ಕೊಂಡೊಯ್ಯಲ್ಪಟ್ಟನು. ದೇವರ ಮಹಿಮಾಶಕ್ತಿ ಎಂತಹುದೆಂದು ಅವರೆಲ್ಲರಿಗೆ ವೇದ್ಯವಾಯಿತು!
ಹೆಲೆಯೋಡೊರಸನಿಗಾಗಿ ಓನೀಯನ ಪ್ರಾರ್ಥನೆ
29 : ಹೆಲೆಯೋಡೊರಸನಿಗೆ ಮಾತಾಡಲು ಅಸಾಧ್ಯವಾಗಿತ್ತು. ಪುನಶ್ಚೇತನಗೊಳ್ಳುವ ನಿರೀಕ್ಷೆಯೇ ಇರಲಿಲ್ಲ. ದೇವರ ಶಕ್ತಿಪ್ರದರ್ಶನ ಅಷ್ಟು ಪ್ರಬಲವಾಗಿತ್ತು!
30 : ಹೀಗೆ ಸರ್ವಶಕ್ತ ದೇವರು ತಮ್ಮ ಪವಿತ್ರಾಲಯವನ್ನು ಸಂರಕ್ಷಿಸಿದರು; ಕೆಲವೇ ನಿಮಿಷಗಳಿಗೆ ಮುಂಚೆ ಭಯವೂ ಭ್ರಮೆಯೂ ತುಂಬಿದ ವಾತಾವರಣದಲ್ಲಿ ಸಂತೋಷವನ್ನೂ ಸಂತೃಪ್ತಿಯನ್ನೂ ತಂದರು. ಇದಕ್ಕಾಗಿ ಯೆಹೂದ್ಯರು ಆ ಸರ್ವಶಕ್ತ ದೇವರನ್ನು ಹಾಡಿ ಹೊಗಳಿದರು.
31 : ಹೆಲೆಯೋಡೊರಸನ ಕೆಲವು ಸ್ನೇಹಿತರು ಓನೀಯನ ಬಳಿಗೆ ಬಂದು, ಮರಣದ ದವಡೆಯಲ್ಲಿದ್ದ ಆ ಮನುಷ್ಯನ ಪ್ರಾಣವನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಬೇಕೆಂದು ವಿನಂತಿಸಿದರು.
32 : ಅಂತೆಯೇ ದೇವರು ಹೆಲೆಯೋಡೊರಸನನ್ನು ಕಾಪಾಡಬೇಕೆಂದು ಓನೀಯನು ಬಲಿಯನ್ನು ಅರ್ಪಿಸಿದನು. ಯೆಹೂದ್ಯರು ಕುತಂತ್ರದಿಂದ ಹೆಲೆಯೋಡೊರಸನನ್ನು ಸಾಯಿಸಲು ಪ್ರಯತ್ನಿಸಿದರೆಂದು ರಾಜನು ಶಂಕಿಸಬಾರದೆಂದು ಹಾಗೆ ಮಾಡಿದನು.
33 : ರಧಾನಯಾಜಕನು ಪರಿಹಾರ ಬಲಿಯನ್ನು ಅರ್ಪಿಸುತ್ತಿದ್ದಾಗ, ಪುನಃ ಅದೇ ಯುವಕರು ಅದೇ ತರಹದ ಬಟ್ಟೆಯನ್ನು ಧರಿಸಿಕೊಂಡು, ಹೆಲೆಯೋಡೊರಸನಿಗೆ ದರ್ಶನವಿತ್ತರು. ಅವರು ಅವನಿಗೆ, “ಪ್ರಧಾನ ಯಾಜಕ ಓನೀಯನಿಗೆ ಕೃತಜ್ಞತೆಯನ್ನು ಸಲ್ಲಿಸು; ಕಾರಣ – ಆತನ ನಿಮಿತ್ತವೇ ಸರ್ವೇಶ್ವರ ನಿನಗೆ ಪ್ರಾಣದಾನ ಮಾಡಿದ್ದಾರೆ.
34 : ನಿನ್ನನ್ನು ಶಿಕ್ಷಿಸಿದವರು ಸ್ವರ್ಗೀಯ ದೇವರು; ಈಗ ಅವರ ಮಹೋನ್ನತ ಶಕ್ತಿಯನ್ನು ಎಲ್ಲಾ ಜನರಿಗೆ ಸಾರು,” ಎಂದು ಹೇಳಿ ಅದೃಶ್ಯರಾದರು.
ಹೆಲೆಯೋಡೊರಸನಿಂದ ಧನ್ಯವಾದ
35 : ಅನಂತರ ಹೆಲೆಯೋಡೊರಸನು ಸರ್ವೇಶ್ವರನಿಗೆ ಬಲಿಯನ್ನು ಅರ್ಪಿಸಿದನು. ತನ್ನ ಜೀವವನ್ನು ಕಾಪಾಡಿದ ಆ ಉದ್ಧಾರಕನಿಗೆ ದೊಡ್ಡ ಹರಕೆಗಳನ್ನು ಹೊತ್ತನು. ಓನೀಯನನ್ನು ಬೀಳ್ಕೊಟ್ಟು ತನ್ನ ಸೈನ್ಯದೊಂದಿಗೆ ಅರಸನ ಬಳಿಗೆ ಹಿಂದಿರುಗಿದನು.
36 : ಸ್ವತಃ ಕಣ್ಣಾರೆ ಕಂಡ ಮಹೋನ್ನತ ದೇವರ ಕಾರ್ಯಗಳನ್ನು ಕುರಿತು ಜನರಿಗೆ ವರದಿಮಾಡಿದನು.
37 : ಮತ್ತೊಂದು ನಿಯೋಗವನ್ನು ಜೆರುಸಲೇಮಿಗೆ ಕಳುಹಿಸುವುದಕ್ಕೆ ಯಾವ ವ್ಯಕ್ತಿ ಅರ್ಹನಾಗಿರಬಹುದು?” ಎಂದು ಅರಸನು ವಿಚಾರಿಸಿದನು. ಅದಕ್ಕೆ ಹೆಲೆಯೋಡೊರಸನು,
38 : “ನಿಮಗೆ ಶತ್ರುವಾಗಲೀ, ನಿಮ್ಮ ರಾಜ್ಯಾಡಳಿತಕ್ಕೆ ವಿರುದ್ಧ ದಂಗೆಯೆದ್ದ ವ್ಯಕ್ತಿಯಾಗಲೀ ಇದ್ದರೆ, ಅಂಥವನನ್ನು ಅಲ್ಲಿಗೆ ಕಳುಹಿಸಿರಿ; ಅವನು ಸಂಪೂರ್ಣವಾಗಿ ಹೊಡೆತವನ್ನು ತಿಂದು ಹಿಂದಿರುಗುವನು; ಅದು ಸಹ ಹಿಂದಿರುಗಲು ಬದುಕಿದ್ದರೆ ಮಾತ್ರ. ಏಕೆಂದರೆ, ನಿಜವಾಗಿಯೂ ಆ ಸ್ಥಳದಲ್ಲಿ ಯಾವುದೋ ದೈವಿಕ ಶಕ್ತಿ ಇದೆ.
39 : ಸ್ವರ್ಗದಲ್ಲಿ ವಾಸವಾಗಿರುವಂಥ ದೇವರು ಆ ಸ್ಥಳವನ್ನು ಸ್ವತಃ ತಾವೇ ಕಾಪಾಡುತ್ತಿದ್ದಾರೆ; ನೆರವನ್ನು ನೀಡುತ್ತಿದ್ದಾರೆ; ಅದಕ್ಕೆ ಅಪಾಯ ಒಡ್ಡುವವರನ್ನು ಬಡಿದು ನಾಶಗೊಳಿಸುತ್ತಾರೆ,” ಎಂದನು.
40 : ಹೆಲೆಯೋಡೊರಸನ ಯಾತ್ರೆಯ ಪರಿಣಾಮವಾಗಿ ದೇವಾಲಯದ ಖಜಾನೆ ಹೀಗೆ ಸುರಕ್ಷಿತವಾಯಿತು.