1 : “ಬಲಿಪೀಠದ ಅಗ್ನಿಯನ್ನು ಮರೆಯಲ್ಲಿ ಇಡಲು ಪ್ರವಾದಿ ಯೆರೆಮೀಯನು ಸೆರೆ ಹೋಗಲಿದ್ದ ಜನರಿಗೆ ಆಜ್ಞಾಪಿಸಿದ್ದನೆಂದು ಪುರಾತನ ದಾಖಲೆಗಳಿಂದ ವೇದ್ಯವಾಗುತ್ತದೆ.
2 : ದೇವರ ಧರ್ಮಶಾಸ್ತ್ರವನ್ನು ಕುರಿತು ಬೋಧನೆ ಮಾಡಿದ ನಂತರ, ‘ಸರ್ವೇಶ್ವರನ ಆಜ್ಞೆಗಳನ್ನು ಮರೆಯಬಾರದು; ಅನ್ಯಧರ್ಮೀಯರ ನಾಡಿನಲ್ಲಿರುವ ಬೆಳ್ಳಿಬಂಗಾರದಿಂದ ಮಾಡಿದ ಹಾಗೂ ಆಭರಣಗಳಿಂದ ಅಲಂಕೃತವಾದ ವಿಗ್ರಹಗಳಿಗೆ ಮಾರುಹೋಗಿ ದಾರಿತಪ್ಪಿ ನಡೆಯಬಾರದು’ ಎಂಬುದಾಗಿ ಸೆರೆಹೋದ ಜನರಿಗೆ ಯೆರೆಮೀಯನು ಎಚ್ಚರಿಕೆ ನೀಡಿದ್ದನೆಂದು ಸಹ ಆ ದಾಖಲೆಗಳಿಂದ ತಿಳಿದು ಬರುತ್ತದೆ.
3 : ಇವೇ ಮುಂತಾದ ಮಾತುಗಳಿಂದ ಜನರು ಧರ್ಮಶಾಸ್ತ್ರವನ್ನು ತಮ್ಮ ಹೃನ್ಮನಗಳಿಂದ ತೊರೆದುಬಿಡಬಾರದೆಂದು ಪ್ರವಾದಿಯು ಪ್ರಚೋದಿಸಿದ್ದನು.
4 : “ಆ ದಾಖಲೆಗಳಿಂದ ನಾವು ಅರಿಯತಕ್ಕ ಇನ್ನೊಂದು ವಿಷಯ ಯಾವುದೆಂದರೆ: ಪ್ರವಾದಿ ಯೆರೆಮೀಯನಿಗೆ ಕೇಳಿಬಂದ ದೈವವಾಣಿಯ ಪ್ರಕಾರ, ದೇವದರ್ಶನ ಗುಡಾರವನ್ನು ಮತ್ತು ಒಡಂಬಡಿಕೆಯ ಮಂಜೂಷವನ್ನು ಅವನು ಹೋದೆಡೆಯೆಲ್ಲಾ ಹಿಂದೆಯೇ ಹೊತ್ತುಕೊಂಡು ಹೋಗಬೇಕಾಗಿತ್ತು; ದೇವರು ವಾಗ್ದಾನ ಮಾಡಿದ ನಾಡನ್ನು ಯಾವ ಬೆಟ್ಟದ ಮೇಲಿಂದ ಮೋಶೆಗೆ ತೋರಿಸಿದರೋ, ಆ ಬೆಟ್ಟಕ್ಕೆ ಕೊಂಡೊಯ್ಯಬೇಕಾಗಿತ್ತು.
5 : ಯೆರೆಮೀಯನು ಆ ಬೆಟ್ಟವನ್ನು ಸೇರಿದಾಗ ಅಲ್ಲಿ ಒಂದು ಗುಹೆಯನ್ನು ಕಂಡನು. ದೇವದರ್ಶನದ ಗುಡಾರವನ್ನು, ಒಡಂಬಡಿಕೆಯ ಮಂಜೂಷವನ್ನು ಹಾಗೂ ಧೂಪವೇದಿಕೆಯನ್ನು ಆ ಗುಹೆಯಲ್ಲಿಟ್ಟು ಅದರ ದ್ವಾರವನ್ನು ಮುಚ್ಚಿ ಭದ್ರಪಡಿಸಿದ್ದನು.
6 : “ಯೆರೆಮೀಯನನ್ನು ಹಿಂಬಾಲಿಸಿದ ಕೆಲವರು ಆ ದಾರಿಯ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಆದರೆ ಆ ಗುಹೆಯನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.
7 : ಇದನ್ನು ಅರಿತ ಯೆರೆಮೀಯನು ಅವರನ್ನು ಗದರಿಸುತ್ತಾ: ‘ದೇವರು ಕರುಣೆತೋರಿ ತಮ್ಮ ಜನರನ್ನು ಪುನಃ ಒಟ್ಟುಗೂಡಿಸುವವರೆಗೂ ಆ ಸ್ಥಳ ಅಜ್ಞಾತವಾಗಿರಬೇಕು.
8 : ಆಗ ಇವುಗಳನ್ನು ದೇವರು ಬಹಿರಂಗ ಪಡಿಸುವರು; ಮೋಶೆಯ ಕಾಲದಲ್ಲಿ ದೇವರು ತೋರಿಸಿದಂತೆ ಸರ್ವೇಶ್ವರನ ತೇಜಸ್ಸು ಹಾಗು ಮೇಘ ಕಂಡುಬರುತ್ತವೆ. ಸೊಲೊಮೋನನ ಕಾಲದಲ್ಲಿ ಸಹ ಮಹಾದೇವಾಲಯವು ಪ್ರತಿಷ್ಠಾಪಿತವಾಗಲಿ ಎಂದು ಪ್ರಾರ್ಥಿಸಿದಾಗ ಇದೇ ರೀತಿ ಸಂಭವಿಸಿತ್ತು ಎಂದು ಹೇಳಿದ್ದನು.
ಸೊಲೊಮೋನನೂ ಹಬ್ಬವನ್ನು ಆಚರಿಸಿದನು
9 : “ಮಹಾದೇವಾಲಯವನ್ನು ಕಟ್ಟಿ ಪೂರೈಸಿದ ಸಂದರ್ಭದಲ್ಲಿ ಅದನ್ನು ಪ್ರತಿಷ್ಠಾಪಿಸುವಾಗ, ಜ್ಞಾನಿಯಾದ ಸೊಲೊಮೋನನು ಬಲಿದಾನವನ್ನು ಅರ್ಪಿಸಿದನು ಎಂಬುದು ದಾಖಲೆಯಿಂದ ಗೊತ್ತಾಗುತ್ತದೆ.
10 : ಮೋಶೆ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡಿದಾಗ ಆಕಾಶದಿಂದ ಅಗ್ನಿ ಇಳಿದು ಬಂದು, ಬಲಿಯನ್ನು ದಹಿಸಿದ ಪ್ರಕಾರವೇ, ಸೊಲೊಮೋನನು ಪ್ರಾರ್ಥನೆ ಮಾಡಿದಾಗ ಅಗ್ನಿ ಇಳಿದು ಬಂದು ಬಲಿಯನ್ನೆಲ್ಲ ದಹಿಸಿಬಿಟ್ಟಿತು.
11 : ಪಾಪಪರಿಹಾರಕ್ಕಾಗಿ ಅರ್ಪಿಸಿದ ಬಲಿಯನ್ನು ಯಾರೂ ಭುಜಿಸಲಿಲ್ಲ. ಆದ್ದರಿಂದ ಆ ಅಗ್ನಿಯೇ ಅದನ್ನು ದಹಿಸಿಬಿಟ್ಟಿತೆಂದು ಮೋಶೆ ಹೇಳಿದ್ದನು.
12 : ಸೊಲೊಮೋನನು ಅಂತೆಯೇ ಆ ಹಬ್ಬವನ್ನು ಎಂಟು ದಿನಗಳವರೆಗೆ ಕೊಂಡಾಡಿದನು.
ನೆಹೆಮೀಯನ ಪುಸ್ತಕ ಭಂಡಾರ
13 : “ಈ ಘಟನೆಗಳನ್ನು ರಾಜ್ಯದ ದಾಖಲೆಗಳಲ್ಲೂ ಮತ್ತು ನೆಹೆಮೀಯನ ದಿನಚರಿ ಪುಸ್ತಕಗಳಲ್ಲೂ ವರದಿಮಾಡಲಾಗಿದೆ. ನೆಹೆಮೀಯನು ಪುಸ್ತಕ ಭಂಡಾರವೊಂದನ್ನು ಸ್ಥಾಪಿಸಿದ್ದನು. ರಾಜರುಗಳ ಹಾಗು ಪ್ರವಾದಿಗಳ ಕುರಿತ ಪುಸ್ತಕಗಳನ್ನು, ದಾವೀದನ ಕೃತಿಗಳನ್ನು, ಕಾಣಿಕೆಗಳ ವಿಷಯವಾಗಿ ರಾಜರುಗಳು ಬರೆದ ಪತ್ರಗಳನ್ನು ಈ ಮುಂತಾದುವುಗಳನ್ನು ಅದರಲ್ಲಿ ಶೇಖರಿಸಿದ್ದನು.
14 : ಅದೇ ಪ್ರಕಾರ, ನಮಗೆ ಸಂಭವಿಸಿದ ಯುದ್ಧದ ಸಂದರ್ಭದಲ್ಲಿ ಕಳೆದುಹೋದ ಆ ಪುಸ್ತಕಗಳನ್ನು ಯೂದ ಮಕ್ಕಬಿಯನು ಸಂಗ್ರಹಿಸಿದನು. ಅವು ಈಗ ನಮ್ಮಲ್ಲಿವೆ.
15 : ಅವು ನಿಮಗೆ ಬೇಕಾದಲ್ಲಿ, ಜನರನ್ನು ಕಳುಹಿಸಿರಿ, ನಾವು ಅವರ ಮುಖಾಂತರ ಕಳುಹಿಸಿಕೊಡುತ್ತೇವೆ.
ಹಬ್ಬವನ್ನು ಕೊಂಡಾಡಲು ಆಹ್ವಾನ
16 : “ಮಹಾದೇವಾಲಯದ ಶುದ್ಧೀಕರಣದ ಹಬ್ಬವನ್ನು ನಾವೀಗ ಕೊಂಡಾಡುವುದರಿಂದ ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇವೆ. ದಯವಿಟ್ಟು ನೀವು ಈ ಹಬ್ಬವನ್ನು ಆಚರಿಸಬೇಕೆಂದು ವಿನಂತಿಸುತ್ತೇವೆ.
17 : ದೇವರೇ ನಮ್ಮನ್ನು ರಕ್ಷಿಸಿದವರು; ನಮ್ಮ ಬಾಧ್ಯತೆಯ ನಾಡನ್ನು ಮರಳಿ ಕೊಟ್ಟವರು; ರಾಜ್ಯ, ಯಾಜಕತ್ವ ಮತ್ತು ಶುದ್ಧೀಕರಣ ವಿಧಿಗಳನ್ನು ಪುನಃ ಕೊಟ್ಟವರೂ ಅವರೇ.
18 : ಧರ್ಮಶಾಸ್ತ್ರದಲ್ಲಿ ಅವರು ನೀಡಿದ ವಾಗ್ದಾನದ ಪ್ರಕಾರ ಅವರು ಇದೆಲ್ಲವನ್ನು ಮಾಡಿರುವರು. ಶೀಘ್ರದಲ್ಲಿ ದೇವರು ನಮಗೆ ದಯೆತೋರಿ ಲೋಕದ ಎಲ್ಲೆಡೆಗಳಿಂದ ನಮ್ಮನ್ನು ಆ ಮಹಾ ಪವಿತ್ರದೇವಾಲಯದಲ್ಲಿ ಒಂದುಗೂಡಿಸುವರೆಂಬ ನಂಬಿಕೆ ನನಗಿದೆ; ಅವರು ನಮ್ಮನ್ನು ಘೋರ ಆಪತ್ತುಗಳಿಂದ ಕಾಪಾಡಿದ್ದಾರೆ. ನಮ್ಮ ಮಹಾದೇವಾಲಯವನ್ನು ಶುದ್ಧೀಕರಿಸಿದ್ದಾರೆ.”
ಗ್ರಂಥಕರ್ತನ ಮುನ್ನುಡಿ
19 : ಸಿರೇನಿನ ಯಾಸೋನನು, ಮಕ್ಕಬಿಯನಾದ ಯೂದನ ಹಾಗು ಅವನ ಸಹೋದರರ ಕಥೆಯನ್ನು ಮತ್ತು ಮಹಾದೇವಾಲಯದ ಶುದ್ಧೀಕರಣ ಹಾಗು ಬಲಿಪೀಠದ ಪ್ರತಿಷ್ಠಾಪನೆ ಕುರಿತ ವಿಷಯವನ್ನು ಐದು ಸಂಪುಟಗಳಲ್ಲಿ ದಾಖಲುಮಾಡಿದ್ದಾನೆ.
20 : ಹಾಗೆಯೇ ಅಂತಿಯೋಕ ಎಪಿಫನೆಸ್ ಮತ್ತು ಅವನ ಮಗ ಯೂಪತೋರ್ ಎಂಬವರ ವಿರುದ್ಧ ಮಾಡಿದ ಯುದ್ಧದ ಬಗ್ಗೆ ವರದಿ ಮಾಡಿದ್ದಾನೆ.
21 : ಅದೇ ಪ್ರಕಾರ, ಯೆಹೂದ್ಯ ಧರ್ಮಕ್ಕಾಗಿ ಧೈರ್ಯದಿಂದ ಹೋರಾಡಿದವರು ಕಂಡ ದಿವ್ಯದರ್ಶನಗಳು ಸಹ ದಾಖಲಾಗಿವೆ. ನಮ್ಮ ಜನರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರು ಅನ್ಯರ ಇಡೀ ನಾಡನ್ನು ಧ್ವಂಸಗೊಳಿಸಿ, ಅನ್ಯರ ಬರ್ಬರ ಪಡೆಗಳನ್ನು ನಿರ್ನಾಮಗೊಳಿಸಿದರು.
22 : ಅವರು ಲೋಕದಲ್ಲೆಲ್ಲ ಪ್ರಖ್ಯಾತವಾದ ಮಹಾದೇವಾಲಯವನ್ನು ಪುನರಾಕ್ರಮಿಸಿಕೊಂಡರು; ಜೆರುಸಲೇಮ್ ನಗರವನ್ನು ಬಿಡುಗಡೆಮಾಡಿದರು; ರದ್ದಾಗಲಿದ್ದ ವಿಧಿನಿಯಮಗಳನ್ನು ಪುನಃ ಜಾರಿಗೆ ತಂದರು. ಸರ್ವೇಶ್ವರಸ್ವಾಮಿ ಅವರಿಗೆ ತೋರಿದ ಅಪಾರ ಕೃಪೆಯಿಂದ ಇದೆಲ್ಲ ಸಾಧ್ಯವಾಯಿತು.
23 : ಈ ವೃತ್ತಾಂತವನ್ನೆಲ್ಲ ಸಿರೇನಿನ ಯಾಸೋನನು ಐದು ಸಂಪುಟಗಳಲ್ಲಿ ಬರೆದಿಟ್ಟಿದ್ದಾನೆ. ನಾನು ಅದೆಲ್ಲವನ್ನು ಒಂದೇ ಗ್ರಂಥದಲ್ಲಿ ಸಂಕ್ಷಿಪ್ತವಾಗಿ ಬರೆಯಲು ಪ್ರಯತ್ನಿಸುತ್ತಿದ್ದೇನೆ.
24 : ಅತ್ಯಧಿಕವಾದ ಅಂಕಿಅಂಶಗಳು, ಚಾರಿತ್ರಿಕ ವಿವರಗಳು ಓದುಗರಿಗೆ ಬೇಸರವನ್ನುಂಟುಮಾಡಬಹುದು.
25 : ಆದುದರಿಂದ ಓದಲಿಚ್ಛಿಸುವವರನ್ನು ಮೆಚ್ಚಿಸುವಂತೆ, ಬಾಯಿಪಾಠ ಮಾಡುವವರಿಗೆ ಸುಲಭಸಾಧ್ಯವಾಗುವಂತೆ, ಒಟ್ಟಾರೆ ಎಲ್ಲಾ ಓದುಗರಿಗೆ ಉಪಯುಕ್ತವಾಗುವಂತೆ ಈ ಗ್ರಂಥವನ್ನು ಬರೆಯಲು ಪ್ರಯತ್ನಸಿದ್ದೇನೆ.
26 : ಸಂಕ್ಷಿಪ್ತವಾಗಿ ಬರೆಯುವ ಕಾರ್ಯವನ್ನು ಕೈಗೊಂಡಿರುವ ನನಗೆ ಇದೇನೂ ಸರಳವಾದ ವಿಷಯವಲ್ಲ. ಬೆವರು ಸುರಿಸಿ, ನಿದ್ರೆಯಿಲ್ಲದೆ ಕೆಲಸ ಮಾಡಬೇಕಾಗಿದೆ.
27 : ಬೇರೆ ಬೇರೆ ರುಚಿಯಿಂದ ಕೂಡಿದ ಅತಿಥಿಗಳಿಗೆ ತೃಪ್ತಿತರುವ ಔತಣವನ್ನು ತಯಾರಿಸುವುದು ಎಷ್ಟು ಕಷ್ಟಕರವಾದ ಕೆಲಸವೋ ಅಂಥ ಕೆಲಸವನ್ನು ಕೈಗೊಂಡಿದ್ದೇನೆ.
28 : ಪ್ರತಿಯೊಂದು ಅಂಶದ ಸತ್ಯತೆಯನ್ನು ಮೂಲ ಗ್ರಂಥಕರ್ತರಿಗೆ ಬಿಟ್ಟು ಘಟನೆಗಳ ಸಾರಾಂಶವನ್ನು ಮಾತ್ರ ನೀಡಲು ಇಲ್ಲಿ ಪ್ರಯತ್ನ ಮಾಡುತ್ತೇನೆ.
29 : ಹೊಸಮನೆಯೊಂದನ್ನು ಕಟ್ಟುವವನು ಇಡೀ ಕಟ್ಟಡದ ವಿವರಗಳನ್ನು ಗಮನಿಸಬೇಕಾಗುತ್ತದೆ. ಬಣ್ಣ ಬಳಿಯುವವನಾದರೋ ಕಟ್ಟಡದ ಅಲಂಕಾರವನ್ನು ಮಾತ್ರ ಗಮನಿಸುತ್ತಾನೆ. ನನ್ನದು ಬಣ್ಣ ಬಳಿಯುವವರ ಕೆಲಸವೆಂದೇ ಎಣಿಸಿಕೊಳ್ಳಿ.
30 : ಮೂಲಚರಿತ್ರಗಾರನು ಈ ವಿಷಯದಲ್ಲಿ ಸ್ವಾಮಿತ್ವವನ್ನು ಹೊಂದಿರಬೇಕು. ಎಲ್ಲಾ ದೃಷ್ಟಿಕೋನಗಳಿಂದ ವಿಷಯವನ್ನು ಚರ್ಚೆ ಮಾಡಬೇಕು. ಕೂಲಂಕುಷವಾಗಿ ವಿವರಿಸಬೇಕು. ಇದು ಅವನ ಕರ್ತವ್ಯ.
31 : ಆದರೆ ಅದೇ ಕಥನವನ್ನು ಪುನಃ ರಚಿಸುವವನಿಗೆ ವಿಷಯಗಳನ್ನು ಸಂಕ್ಷೇಪಿಸುವುದಕ್ಕೂ ಸವಿಸ್ತಾರವಾದ ಬರವಣಿಗೆಯನ್ನು ತ್ಯಜಿಸುವುದಕ್ಕೂ ಅನುಮತಿ ನೀಡಬೇಕು.
32 : ಇದೀಗ ಚರಿತ್ರೆಯನ್ನು ಪ್ರಾರಂಭಿಸೊಣ. ಮುನ್ನುಡಿಯಾಗಿ ಇದುವರೆಗೆ ಬರೆದದ್ದು ಸಾಕು. ಚರಿತ್ರೆಯನ್ನೇ ಸಂಕ್ಷೇಪಿಸುವಾಗ ಮುನ್ನುಡಿಯನ್ನು ಉದ್ದ ಮಾಡುವುದು ಹುಚ್ಚುತನ.