1 : ಮೂರು ವರ್ಷಗಳ ನಂತರ, ಸೆಲೆಯೂಕನ ಮಗ ದೆಮೆತ್ರಿಯನು ಸೈನ್ಯದೊಂದಿಗೂ ನೌಕಾಪಡೆಯೊಂದಿಗೂ ತ್ರಿಪೋಲಿ ಬಂದರಿನತ್ತ ಬಂದಿದ್ದಾನೆ ಎಂಬ ಸುದ್ದಿ ಯೂದನಿಗೂ ಅವನ ಸಂಗಡಿಗರಿಗೂ ತಿಳಿಯಿತು.
2 : ಇದಲ್ಲದೆ, ಅವನು ಅರಸನಾದ ಅಂತಿಯೋಕನನ್ನೂ ಅವನ ಪೋಷಕ ಲೂಸ್ಯನನ್ನೂ ಕೊಂದು, ರಾಜ್ಯವನ್ನೂ ವಶಪಡಿಸಿಕೊಂಡಿದ್ದಾನೆಂದು ವರದಿ ಮಾಡಲಾಗಿತ್ತು.
3 : ಆಗ, ಹಿಂದೊಮ್ಮೆ ಪ್ರಧಾನಯಾಜಕನಾಗಿದ್ದು ದಂಗೆಯ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಗ್ರೀಕ್ ಪದ್ಧತಿಯನ್ನು ಕೈಗೊಂಡು ಭ್ರಷ್ಟನಾಗಿದ್ದ ಅಲ್ಕಿಮ ಎಂಬಾತನೊಬ್ಬನಿದ್ದನು.
4 : ಇವನು ಪುನಃ ಬಲಿಪೀಠದ ಸೇವೆ ಕೈಗೊಂಡು ಸುರಕ್ಷಿತವಾಗಿರಲು ಬೇರಾವ ದಾರಿಯಿಲ್ಲ ಎಂದರಿತು 151ನೇ ವರ್ಷದಲ್ಲಿ ಅರಸ ದೆಮೆತ್ರಿಯನ ಬಳಿ ಹೋದನು. ಹೋದಾಗ, ಚಿನ್ನದ ಕಿರೀಟ, ತಾಳೆಗರಿ ಹಾಗು ಸಂಪ್ರದಾಯದ ಪ್ರಕಾರ ಮಹಾದೇವಾಲಯಕ್ಕೆ ಅರ್ಪಿಸಲಾದ ಕೆಲವು ಓಲಿವ್ ಮರದ ರೆಂಬೆಗಳನ್ನು ಅರಸನಿಗೆ ಕೊಡುಗೆಯಾಗಿ ಕೊಟ್ಟನು. ಆದರೆ ಅರಸನಿಗೆ ಏನನ್ನೂ ಹೇಳಲಿಲ್ಲ.
5 : ಸ್ವಲ್ಪ ಕಾಲದ ನಂತರ ಅವನ ಹುಚ್ಚು ಯೋಜನೆಯನ್ನು ಈಡೇರಿಸಿಕೊಳ್ಳಲು ಅವಕಾಶ ದೊರಕಿತು. ದೆಮೆತ್ರಿಯನು ತನ್ನ ಆಲೋಚನಾಸಭೆಗೆ ಅವನನ್ನು ಕರೆದು, “ಯೆಹೂದ್ಯರ ನಿಲುವೇನು? ಅವನ ಉದ್ದೇಶವೆಂಥದ್ದು?” ಎಂದೆಲ್ಲಾ ಕೇಳಿದನು.
ಅದಕ್ಕೆ ಅಲ್ಕಿಮನು:
6 : “ಯೂದ ಮಕ್ಕಬಿಯನ ನಾಯಕತ್ವದಲ್ಲಿರುವ ಯೆಹೂದ್ಯರನ್ನು ‘ಹಸಿದಿಯರು’ ಎಂದು ಕರೆಯುವುದುಂಟು; ಇವರು ಯುದ್ಧಶೂರರು, ದಂಗೆಯೆಬ್ಬಿಸುವವರು, ರಾಜ್ಯದ ಭದ್ರತೆಗೆ ಮಾರಕವಾಗಿರುವಂಥವರು,
7 : ಈ ಕಾರಣದಿಂದಲೇ ವಂಶಾನುಗತವಾಗಿ ನನಗೆ ಲಭಿಸಿದ್ದ ಪ್ರಧಾನ ಯಾಜಕನ ಪದವಿಯನ್ನು ಕಳೆದುಕೊಂಡಿದ್ದೇನೆ.
8 : ನಾನಿಲ್ಲಿ ಬಂದಿರುವ ಉದ್ದೇಶ ಎಂದರೆ ಮೊತ್ತಮೊದಲು ಅರಸರ ಹಿತದೃಷ್ಟಿಯಿಂದ; ಎರಡನೇದಾಗಿ ನನ್ನ ಯೆಹೂದ್ಯ ಬಾಂಧವರ ಮೇಲಿನ ಅಭಿಮಾನದಿಂದ; ಕಾರಣ, ಯೂದನ ಹಾಗು ಅವನ ಸಂಗಡಿಗರ ಹುಚ್ಚು ನೀತಿಯಿಂದಾಗಿ ಇಡೀ ರಾಷ್ಟ್ರ ದುರವಸ್ಥೆಗೊಳಗಾಗಿದೆ.
9 : ಈ ವಿಷಯದ ಬಗ್ಗೆ ಮಹಾಸ್ವಾಮಿಗಳು ವಿಚಾರಿಸಿ ಪರಿಶೀಲಿಸಿದ ನಂತರ, ತಾವು ಸರ್ವರೊಂದಿಗೆ ಪ್ರಸನ್ನತೆಯಿಂದ ವರ್ತಿಸುವಂತೆಯೇ, ನಮ್ಮ ರಾಷ್ಟ್ರದ ಹಾಗು ಶೋಷಣೆಗೀಡಾದ ನಮ್ಮ ಜನಾಂಗದ ಮೇಲೆ ಕರುಣೆ ತೋರಬೇಕೆಂದು ವಿನಂತಿಸುತ್ತೇನೆ.
10 : ಯೂದನು ಜೀವದಿಂದಿರುವವರೆಗೆ, ನಮ್ಮ ರಾಷ್ಟ್ರಕ್ಕೆ ಶಾಂತಿ ಲಭಿಸುವುದು ಅಸಾಧ್ಯ,” ಎಂದನು.
ಯೂದನನ್ನು ಎದುರಿಸಲು ನಿಕಾನೋರನ ನಿಯೋಗ
11 : ಅಲ್ಕಮನ ಭಾಷಣ ಮುಗಿದ ತಕ್ಷಣ, ಅರಸನ ಸಲಹೆಗಾರರು, ಈ ಅವಕಾಶವನ್ನು ಬಳಸಿಕೊಂಡು ದೆಮೆತ್ರಿಯನು ಯೆಹೂದ್ಯರ ಮೇಲೆ ಉದ್ರೇಕಗೊಳ್ಳುವಂತೆ ಮಾಡಿದರು; ಏಕೆಂದರೆ ಅವರು ಸಹ ಯೂದನನ್ನು ದ್ವೇಷಿಸುತ್ತಿದ್ದರು.
12 : ಆದುದರಿಂದ ಅರಸ ದೆಮೆತ್ರಯನು ಕೂಡಲೆ ಆನೆಗಳ ದಳದ ಅಧಿಕಾರಿಯಾಗಿದ್ದ ನಿಕಾನೋರನನ್ನು ಜುದೇಯದ ರಾಜ್ಯಪಾಲನನ್ನಾಗಿ ನೇಮಿಸಿ, ಜುದೇಯಕ್ಕೆ ಕಳುಹಿಸಿದನು.
13 : ಯೂದನನ್ನು ಕೊಲ್ಲಬೇಕು, ಅವನ ಹಿಂಬಾಲಕರನ್ನು ಚದರಿಸಬೇಕು; ವಿಶ್ವದಲ್ಲೆಲ್ಲ ದೊಡ್ಡದಾಗಿದ್ದ ಮಹಾದೇವಾಲಯಕ್ಕೆ ಅಲ್ಕಿಮನನ್ನು ಪ್ರಧಾನ ಯಾಜಕನನ್ನಾಗಿ ನೇಮಿಸಬೇಕು ಎಂದು ಅವನಿಗೆ ಆಜ್ಞೆ ಮಾಡಿದನು.
14 : ಜುದೇಯದಿಂದ ಗಡಿಪಾರಾಗಿ ಬಂದಿದ್ದ ಅನ್ಯಧರ್ಮೀಯರು ನಿಕಾನೋರನೊಂದಿಗೆ ಸೇರಲು ಗುಂಪುಗುಂಪಾಗಿ ಬಂದರು. ಯೆಹೂದ್ಯರ ದುರವಸ್ಥೆ ಹಾಗೂ ದೌರ್ಭಾಗ್ಯದಿಂದ ತಮಗೆ ಅನುಕೂಲವಾಗುವುದೆಂಬ ಯೋಚನೆ ಅವರಿಗಿತ್ತು.
15 : ನಿಕಾನೋರನು ಬರುತ್ತಿರುವನೆಂದೂ ಅವನಿಗೆ ಅನ್ಯಧರ್ಮೀಯರು ಒಂದಾಗಿ ಬೆಂಬಲ ನೀಡುತ್ತಿರುವರೆಂದೂ ಯೆಹೂದ್ಯರು ತಿಳಿದಾಗ, ತಮ್ಮ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು ಪ್ರಾರ್ಥಿಸಿದರು; ತಮ್ಮ ಜನರನ್ನೇ ಆರಿಸಿಕೊಂಡು, ಶಾಶ್ವತ ಸೊತ್ತಾಗಿ ಮಾಡಿಕೊಂಡು, ಆಪತ್ಕಾಲದಲ್ಲಿ ಬಹಿರಂಗವಾಗಿ ಒತ್ತಾಸೆ ಮಾಡಲು ನಿರಾಕರಿಸದ ದೇವರನ್ನು ಬೇಡಿಕೊಂಡರು.
16 : ಯೂದನ ಆಜ್ಞೆಯ ಪ್ರಕಾರ ಆ ಜನರು ತಕ್ಷಣವೇ ಅಲ್ಲಿಂದ ಹೊರಟು ಅದಾಸಾ ಎಂಬ ಗ್ರಾಮದ ಬಳಿ ಶತ್ರುವನ್ನು ಎದುರಿಸಲು ಹೋದರು.
17 : ಯೂದನ ಸಹೋದರ ಸಿಮೋನನು ನಿಕಾನೋರನ ವಿರುದ್ಧ ಹೋರಾಡಿದನು. ಆದರೆ ಶತ್ರುವಿನ ಅನಿರೀಕ್ಷಿತ ದಾಳಿಯ ನಿಮಿತ್ತ ಕ್ರಮೇಣ ಸ್ವಲ್ಪ ಸೋಲುಂಟಾಯಿತು.
18 : ಯೂದನೂ ಅವನ ಸೈನಿಕರೂ ಎಷ್ಟು ಶೌರ್ಯ ಉಳ್ಳವರು, ತಮ್ಮ ದೇಶಕ್ಕಾಗಿ ಎಷ್ಟು ಸ್ಥೈರ್ಯದಿಂದ ಹೋರಾಡುವಂಥವರು ಎಂಬುದನ್ನು ನಿಕಾನೋರನು ತಿಳಿದಿದ್ದನು. ಸಮಸ್ಯೆಯನ್ನು ಯುದ್ಧರಂಗದಲ್ಲಿ ರಕ್ತಪಾತಮಾಡಿ ಬಗೆಹರಿಸಲು ಇಚ್ಛಿಸಲಿಲ್ಲ.
19 : ಆದುದರಿಂದ ಸಂಧಾನಮಾಡಿ ವಾಗ್ಧಾನಗಳನ್ನು ವಿನಿಮಯಿಸಿಕೊಳ್ಳಲು ಪೊಸಿದೋನ್ಯ, ತಿಯೊದೋತ ಹಾಗೂ ಮತ್ತಾತ್ಯನನ್ನು ಯೆಹೂದ್ಯರ ಬಳಿಗೆ ಕಳುಹಿಸಿದನು.
20 : ಒಪ್ಪಂದದ ಅಂಶಗಳನ್ನು ವಿವರವಾಗಿ ಗಮನಿಸಿದ ನಂತರ ನಿಕಾನೋರನು ಅದರ ಬಗ್ಗೆ ತನ್ನ ಜನರಿಗೆ ತಿಳಿಸಿದಾಗ ಅವರೆಲ್ಲರೂ ಏಕ ಮನಸ್ಸಿನಿಂದ ಒಪ್ಪಿಕೊಂಡರು.
21 : ನಾಯಕರೆಲ್ಲ ಪ್ರತ್ಯೇಕವಾಗಿ ಸೇರಿ ಮಾತುಕತೆ ನಡೆಸಲು ದಿನವನ್ನು ಗೊತ್ತುಮಾಡಿದರು. ಪ್ರತಿಯೊಂದು ಸೈನ್ಯದ ಕಡೆಯಿಂದ ಗೌರವಸೂಚಕ ಸಿಂಹಾಸನಗಳನ್ನು ಆ ಸ್ಥಳಕ್ಕೆ ತಂದಿರಿಸಲಾಯಿತು.
22 : ಶತ್ರು ಒಂದು ವೇಳೆ ಅನಿರೀಕ್ಷಿತ ದ್ರೋಹವನ್ನು ಎಸಗಿದರೆ ಅದನ್ನು ಎದುರಿಸಲು ಯೂದನು ಸುಸಜ್ಜಿತ ಸೈನಿಕರನ್ನು ಗುಪ್ತವಾದ ಸ್ಥಳಗಳಲ್ಲಿ ಇರಿಸಿದ್ದನು. ಆದರೆ ನಾಯಕರಿಬ್ಬರೂ ಸೌಹಾರ್ದಯುತ ಮಾತುಕತೆ ನಡೆಸಿದರು.
23 : ನಿಕಾನೋರನು ಜೆರುಸಲೇಮಿನಲ್ಲಿ ಸ್ವಲ್ಪಕಾಲ ತಂಗಿದ್ದನು. ಯೆಹೂದ್ಯರಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ಬದಲಿಗೆ ತನ್ನ ಕಡೆಗೆ ಬಂದಿದ್ದ ಜನರನ್ನು ಹಿಂದಕ್ಕೆ ಕಳುಹಿಸಿಬಿಟ್ಟನು.
24 : ಯೂದನನ್ನು ಜೊತೆಯಲ್ಲಿಯೇ ಇರಿಸಿಕೊಂಡಿದ್ದನು; ಅವನನ್ನು ತನ್ನ ಆಪ್ತ ಸಂಗಡಿಗನನ್ನಾಗಿ ಮಾಡಿಕೊಂಡನು.
25 : ಯೂದನಿಗೆ ವಿವಾಹ ಮಾಡಿಕೊಳ್ಳಬೇಕೆಂದು ಸಲಹೆಯನ್ನು ಸಹ ಕೊಟ್ಟನು. ಅದರಂತೆಯೇ ಯೂದನು ವಿವಾಹ ಮಾಡಿಕೊಂಡು ಸಮಾಧಾನದಿಂದ ಜೀವನ ನಡೆಸಿದನು.
ಯೂದನ ಮೇಲೆ ತಿರುಗಿಬಿದ್ದ ನಿಕಾನೋರ
26 : ನಿಕಾನೋರನು ಮತ್ತು ಯೂದನು ಸಮಾಧಾನದಿಂದ ಬಾಳುತ್ತಿದ್ದುದನ್ನು ಅಲ್ಕಿಮನು ಕಂಡಾಗ ಒಪ್ಪಂದದ ನಕಲನ್ನು ತೆಗೆದುಕೊಂಡು ಅರಸ ದೆಮೆತ್ರಿಯನ ಬಳಿಗೆ ಹೋದನು. ರಾಜ್ಯದ ವಿರುದ್ಧ ದಂಗೆಯೆದ್ದ ಯೂದನನ್ನು ನಿಕಾನೋರನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾನೆಂದೂ ಈ ಕಾರಣ ನಿಕಾನೋರನು ಸರ್ಕಾರಕ್ಕೆ ವಿಧೇಯನಾಗಿಲ್ಲವೆಂದೂ ವರದಿ ಮಾಡಿದನು.
27 : ಅರಸನು ಉದ್ರೇಕಗೊಂಡು, ನಿಕಾನೋರನು ಮಾಡಿದ ಒಪ್ಪಂದ ತನಗೆ ತೃಪ್ತಿಕರವಾಗಿಲ್ಲವೆಂದೂ ಯೂದಮಕ್ಕಬಿಯನನ್ನು ಕೂಡಲೆ ಬಂಧಿಸಿ ಅಂತಿಯೋಕ್ಯಕ್ಕೆ ಕರೆದೊಯ್ಯಬೇಕೆಂದೂ ಪತ್ರ ಬರೆದನು.
28 : ಈ ಸಂದೇಶವು ನಿಕಾನೋರನಿಗೆ ತಲುಪಿದಾಗ ಅವನಿಗೆ ವ್ಯಥೆಯುಂಟಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಂತಾಯಿತು. ಯೂದನು ಯಾವ ತಪ್ಪನ್ನು ಮಾಡದಿದ್ದರೂ ಆ ಒಪ್ಪಂದವನ್ನು ಮುರಿಯಬೇಕಾಗಿ ಬಂತಲ್ಲಾ ಎಮದು ಅಸಮಾಧಾನವಾಯಿತು.
29 : ಅಂತೂ ಅರಸನ ವಿರುದ್ಧ ನಡೆಯುವಂತಿರಲಿಲ್ಲ. ಆದ್ದರಿಂದ ಯೂದನನ್ನು ಹಿಡಿಯಲು ಅವಕಾಶವನ್ನು ಎದುರು ನೋಡುತ್ತಿದ್ದನು.
30 : ನಿಕಾನೋರನ ನಿಲುವು ಗಂಭೀರವಾಗುತ್ತಿದೆ. ಅವನ ವರ್ತನೆ ಕ್ರಮೇಣ ಕಠಿಣವಾಗುತ್ತಿದೆಯೆಂಬುದನ್ನು ಮನಗಂಡ ಯೂದನು ಈ ಬದಲಾವಣೆ ಸದುದ್ದೇಶದಿಂದ ಕೂಡಿದ್ದಲ್ಲವೆಂದು ಅರಿತುಕೊಂಡು ಕೆಲವು ಜನರನ್ನು ಕೂಡಿಸಿಕೊಂಡು ನಿಕಾನೋರನಿಗೆ ಮರೆಯಾಗಿ ಅವಿತುಕೊಂಡನು.
31 : ಯೂದನು ತನಗಿಂತಲೂ ಹೆಚ್ಚು ಬುದ್ಧಿಶಾಲಿಯೆಂದು ಅರಿತ ನಿಕಾನೋರನು ಮಹಾಪವಿತ್ರ ದೇವಾಲಯಕ್ಕೆ ಹೋದನು. ಅಲ್ಲಿ ಯಾಜಕರು ಪದ್ಧತಿಯ ಪ್ರಕಾರ ಬಲಿಗಳನ್ನು ಅರ್ಪಿಸುತ್ತಿದ್ದರು; ಯೂದನನ್ನು ಹಿಡಿದುಕೊಡಬೇಕೆಂದು ಅವರಿಗೆ ಆಜ್ಞೆಮಾಡಿದನು.
32 : ಯಾಜಕರು, “ಅರಸನಿಗೆ ಬೇಕಾದ ಮನುಷ್ಯ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದರು.
33 : ನಿಕಾನೋರನು ಬಲಗೈಯನ್ನು ದೇವಾಲಯದ ಕಡೆ ಚಾಚಿ, “ಯೂದನನ್ನು ಬಂಧಿಸಿ ನನಗೆ ಕೊಡದಿದ್ದರೆ, ದೇವರ ಈ ಆಲಯವನ್ನು ನೆಲಸಮ ಮಾಡುತ್ತೇನೆ; ಬಲಿಪೀಠವನ್ನು ಕೆಡವಿ ಹಾಕುತ್ತೇನೆ; ದಿಯೊನಿಸಿಯಸ್ ದೇವರಿಗೆ ಭವ್ಯ ದೇವಾಲಯವನ್ನು ಕಟ್ಟಿಸುತ್ತೇನೆ ಎಂದು ಗಂಭೀರವಾದ ನುಡಿಗಳಿಂದ ಕಟ್ಟಿಸುತ್ತೇನೆ ಎಂದು ಗಂಭೀರವಾದ ನುಡಿಗಳಿಂದ ಎಚ್ಚರಿಸಿದನು.
34 : ಇಷ್ಟು ಹೇಳಿ ಅಲ್ಲಿಂದ ಹೊರಟೇ ಹೋದನು. ಯಾಜಕರಾದರೋ ಆಕಾಶದ ಕಡೆ ತಮ್ಮ ಕರಗಳನ್ನೆತ್ತಿ ರಾಷ್ಟ್ರವನ್ನು ನಿರಂತರವಾಗಿ ಕಾಪಾಡುವ ದೇವರಿಗೆ ಪ್ರಾರ್ಥನೆ ಮಾಡುತ್ತಾ,
35 : “ಸಕಲಮಾನವರ ಸರ್ವೇಶ್ವರಾ, ನಿಮಗೆ ಏನೂ ಬೇಕಾಗಿಲ್ಲವಾದರೂ ನಮ್ಮ ಒಂದಿಗೆ ನೆಲೆಸಲು ದೇವಾಲಯವೊಂದು ಇರಬೇಕೆಂದು ನಿಮ್ಮ ಚಿತ್ತವಾಗಿದೆ.
36 : ಆದುದರಿಂದ ಸಕಲ ಪರಿಶುದ್ಧತೆಯ ಮೂಲರಾದ ನೀವು ಇತ್ತೀಚೆಗೆ ತಾನೇ, ಶುದ್ಧೀಕರಿಸಲಾದ ಈ ಮಂದಿರವು ಪುನಃ ಮಲಿನವಾಗದಂತೆ ಕಾಪಾಡಿರಿ,” ಎಂದರು.
ರಾಷ್ಟ್ರಕ್ಕಾಗಿ ರಾಜಿಯನ ಪ್ರಾಣಾರ್ಪಾಣೆ
37 : ಜೆರುಸಲೇಮಿನ ಹಿರಿಯರಲ್ಲಿ ರಾಜಿಯ ಎಂಬವನೊಬ್ಬನಿದ್ದನು. ಇವನ ವಿಷಯವಾಗಿ ನಿಕಾನೋರನಿಗೆ ದೂರು ಬಂದಿತು. ಇವನು ತನ್ನ ಜನರಿಗೆ ಹಲವಾರು ವಿಧದಲ್ಲಿ ಸಹಾಯ ಮಾಡಿದ್ದನೆಂದೂ ಈ ಕಾರಣ ಅವನು ‘ಯೆಹೂದ್ಯರ ಪಿತ’ ಎಂಬ ಬಿರುದನ್ನು ಪಡೆದಿದ್ದನೆಂದೂ ವರದಿ ಆಗಿತ್ತು.
38 : ಯೆಹೂದ್ಯ ಧರ್ಮದ ಬಗ್ಗೆ ಅವನಿಗಿದ್ದ ಅಪಾರ ಶ್ರದ್ಧೆಯ ನಿಮಿತ್ತ ಹಿಂದೊಮ್ಮೆ ದಂಗೆಯ ಕಾಲದಲ್ಲಿ ಅವನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಧರ್ಮಕ್ಕಾಗಿ ಅವನು ಪ್ರಾಣತ್ಯಾಗಕ್ಕೂ ಹಿಂಜರಿಯದೆ ಇದ್ದನು.
39 : ನಿಕಾನೋರನು ಯೆಹೂದ್ಯರ ಮೇಲಿದ್ದ ದ್ವೇಷವನ್ನು ತೋರಿಸುವುದಕ್ಕಾಗಿ, ಆ ರಾಜಿಯನನ್ನು ಬಂಧಿಸಲು 500 ಸೈನಿಕರನ್ನು ಕಳುಹಿಸಿದ್ದನು.
40 : ಈ ಬಂಧನದಿಂದ ಯೆಹೂದ್ಯರಿಗೆ ಸರಿಯಾದ ದಂಡನೆ ಆಗುವುದೆಂದು ಯೋಚಿಸಿದ್ದನು.
41 : ಸೈನಿಕರು ರಾಜಿಯನಿದ್ದ ಬುರುಜನ್ನು ವಶಪಡಿಸಿಕೊಳ್ಳಲು ಹೋಗಿ ಸಭಾಂಗಣದ ಬಾಗಿಲನ್ನು ತೆರೆಯಲು ಹೋದಾಗ, ಬಾಗಿಲಿಗೆ ಬೆಂಕಿಯಿಡಬೇಕೆಂದು ನಿಕಾನೋರನ ಆಜ್ಞೆಯಾಗಿತ್ತು. ಅವರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದರಿತ ರಾಜಿಯು
42 : ಪಾಪಿಗಳ ಕೈಯಲ್ಲಿ ಬೀಳುವುದಕ್ಕಿಂತ ಗೌರವದಿಂದ ತಾನೇ ಸಾಯುವುದು ಲೇಸು ಎಂದು ಹೇಳಿ ಕತ್ತಿಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು.
43 : ಪರಿಸರದ ಒತ್ತಡದ ನಿಮಿತ್ತ, ಕತ್ತಿಯು ಅವನನ್ನು ಸರಿಯಾಗಿ ತಿವಿಯಲಿಲ್ಲ. ಸೈನಿಕರ ಗುಂಪು ದ್ವಾರದೊಳಕ್ಕೆ ನುಗ್ಗುತ್ತಿತ್ತು. ಅವನು ಧೈರ್ಯ ತುಂಬಿಕೊಂಡು ಗೋಡೆಯನ್ನು ಹತ್ತಿ ಜನರ ಗುಂಪಿನ ಮಧ್ಯೆ ನೆಗೆದುಬಿದ್ದನು.
44 : ಗುಂಪು ಹಿಂದಕ್ಕೆ ಸರಿಯಲು ರಾಜಿಯನು ನೆಲದ ಮೇಲೆ ಬಿದ್ದನು.
45 : ಇನ್ನೂ ಅವನಲ್ಲಿ ಜೀವ ಇತ್ತು. ಅವನು ಕೋಪದಿಂದ ಕೆರಳಿ ಮೇಲಕ್ಕೆದ್ದನು. ಗಾಯಗಳಿಂದ ರಕ್ತ ಚಿಮ್ಮುತ್ತಿತ್ತು. ಆದರೂ ತಟ್ಟನೆ ಒಂದು ಎತ್ತರವಾದ ಬಂಡೆಯನ್ನು ಹತ್ತಿದನು.
46 : ದೇಹದಿಂದ ರಕ್ತವು ಸಂಪೂರ್ಣವಾಗಿ ಹರಿದು ಹೋಗಿತ್ತು. ಜೀವವನ್ನೂ ಉಸಿರನ್ನೂ ಕೊಟ್ಟ ಸರ್ವೇಶ್ವರನಿಗೆ, ಪುನಃ ತನಗೆ ಅವನ್ನು ನೀಡಬೇಕೆಂದು ಪ್ರಾರ್ಥನೆ ಮಾಡಿ, ಕೈಯಿಂದ ಹೊಟ್ಟೆಯನ್ನು ಸೀಳಿ ಕರುಳನ್ನು ತೆಗೆದು ಜನರ ಗುಂಪಿನ ಮೇಲೆ ಎಸೆದುಬಿಟ್ಟನು. ಹೀಗೆ ರಾಜಿಯ ಪ್ರಾಣತ್ಯಾಗ ಮಾಡಿದನು.