1 : ಇದಾದ ಸ್ವಲ್ಪಕಾಲದ ನಂತರ, ಅರಸನ ಪೋಷಕನು, ಸಂಬಂಧಿಯು ಹಾಗು ರಾಜ್ಯದ ಮುಖ್ಯಾಧಿಕಾರಿಯೂ ಆಗಿದ್ದ ಲೂಸ್ಯನ್ ಎಂಬವನು ಸಂಭವಿಸಿದ ಘಟನೆಗಳ ಬಗ್ಗೆ ವ್ಯಸನಾಕ್ರಾಂತನಾದನು.
2 : ಅವನು ಎಂಬತ್ತು ಸಾವಿರ ಸೈನಿಕರ ಪದಾತಿ ಪಡೆಯನ್ನು ಮತ್ತು ರಾಹುತರನ್ನು ಒಂದುಗೂಡಿಸಿ ಯೆಹೂದ್ಯರ ಮೇಲೆ ದಾಳಿ ಮಾಡಿದನು. ಜೆರುಸಲೇಮನ್ನು ಗ್ರೀಕರ ನಗರವನ್ನಾಗಿ ಮಾರ್ಪಡಿಸಬೇಕೆಂಬುದು ಅವನ ಉದ್ದೇಶವಾಗಿತ್ತು.
3 : ಇತರ ರಾಷ್ಟ್ರಗಳ ಪುಣ್ಯಕ್ಷೇತ್ರಗಳಂತೆ ಇಲ್ಲಿನ ಮಹಾದೇವಾಲಯಕ್ಕೆ ತೆರಿಗೆ ವಿಧಿಸುವುದು ಹಾಗು ಪ್ರತಿವರ್ಷ ಪ್ರಧಾನಯಾಜಕನ ಪದವಿಯನ್ನು ಹರಾಜು ಮಾಡುವುದು ಅವನ ಸಂಕಲ್ಪವಾಗಿತ್ತು.
4 : ಲೂಸ್ಯನು ತನ್ನ ಲಕ್ಷಾಂತರ ಪದಾತಿ ಸೈನ್ಯ, ಸಾವಿರಗಟ್ಟಳೆ ರಾಹುತರು ಹಾಗು ಎಂಬತ್ತು ಆನೆಗಳಿಂದ ಕೂಡಿದ ಪಡೆದ, ಇವುಗಳ ಬಗ್ಗೆ ಎಷ್ಟು ಅಹಂಕಾರ ಪಟ್ಟನೆಂದರೆ ದೇವರ ಶಕ್ತಿಯ ಬಗ್ಗೆ ಎಳ್ಳಷ್ಟೂ ಅವನಿಗೆ ಚಿಂತೆ ಇರಲಿಲ್ಲ.
5 : ಜುದೇಯ ನಾಡನ್ನು ಆಕ್ರಮಿಸಿ, ಜೆರುಸಲೇಮಿಗೆ ಮೂವತ್ತು ಕಿಲೋಮೀಟರ್ ದೂರವಿದ್ದ ಬೆತ್‍ಜೂರ್ ಎಂಬ ದುರ್ಗವನ್ನು ಮುತ್ತಿದನು.
6 : ಲೂಸ್ಯನು ದುರ್ಗಗಳನ್ನು ಮುತ್ತಿದ್ದಾನೆಂದು ಮಕ್ಕಬಿಯನೂ ಅವನ ಸಂಗಡಿಗರೂ ಕೇಳಿದಾಕ್ಷಣ, ಜನರೊಂದಿಗೆ ಸೇರಿ ಪ್ರಾರ್ಥನೆ ಮಾಡುತ್ತಾ ಕಣ್ಣೀರಿಟ್ಟು ಗೋಳಾಡಲಾರಂಭಿಸಿದರು; ಇಸ್ರಯೇಲನ್ನು ರಕ್ಷಿಸುವುದಕ್ಕಾಗಿ ಒಬ್ಬ ಒಳ್ಳೆಯ ದೂತನನ್ನು ಕಳುಹಿಸಬೇಕೆಂದು ಸರ್ವೇಶ್ವರನನ್ನು ವಿನಂತಿಸಿದರು.
7 : ಆಯುಧಗಳನ್ನು ತೆಗೆದುಕೊಳ್ಳುವುದರಲ್ಲಿ ಯೂದಮಕ್ಕಬಿಯನೇ ಮೊದಲನೆಯವನಾಗಿದ್ದನು. ತಮ್ಮ ಬಂಧು ಬಾಂಧವರಾದ ಯೆಹೂದ್ಯರ ಹಿತಕ್ಕಾಗಿ ತನ್ನೊಂದಿಗೆ ಪ್ರಾಣತ್ಯಾಗಕ್ಕೂ ಸಿದ್ಧರಾಗಿರಬೇಕೆಂದು ಇತರ ಸೈನಿಕರನ್ನು ಪ್ರಚೋದಿಸಿದನು. ಆಗ ಅವರು ಆಸಕ್ತಿಯಿಂದ ಒಟ್ಟಾಗಿ ನುಗ್ಗಿದರು.
8 : ಅವರು ಇನ್ನೂ ಜೆರುಸಲೇಮಿಗೆ ಹತ್ತಿರವಿದ್ದಾಗಲೇ ಬಿಳಿಯ ವಸ್ತ್ರಗಳನ್ನು ಧರಿಸಿ, ಚಿನ್ನದ ಆಯುಧಗಳನ್ನು ಝಳಪಿಸುತ್ತಿದ್ದ ಒಬ್ಬ ಕುದುರೆ ಸವಾರನು ಕಾಣಿಸಿಕೊಂಡನು.
9 : ಆಗ ಅವರೆಲ್ಲ ಒಟ್ಟಾಗಿ ಸೇರಿ ಕರುಣಾಳು ದೇವರಿಗೆ ಸ್ತುತಿ ಸಲ್ಲಿಸಿದಾಗ ಮನಸ್ಸಿನಲ್ಲಿ ಚೈತನ್ಯಭರಿತರಾದರು: ಆಗ ಕ್ರೂರಮನುಷ್ಯರನ್ನು ಮಾತ್ರವಲ್ಲ, ಒರಟಾದ ಕಾಡುಮೃಗಗಳನ್ನು ಸಹ ಎದುರಿಸಲು, ಕಬ್ಬಿಣದ ಗೋಡೆಗಳನ್ನೇ ಮುತ್ತಲು ಧೈರ್ಯಗೊಂಡರು.
10 : ತಮ್ಮ ಮೇಲೆ ಕರುಣೆಯಿಟ್ಟ ಸರ್ವೇಶ್ವರಸ್ವಾಮಿಯನ್ನು ತಮ್ಮ ಸಹಾಯಕರನ್ನಾಗಿ ಇಟ್ಟುಕೊಂಡು ಯೋಧರು ಪಂಕ್ತಿಪಂಕ್ತಿಗಳಾಗಿ ಮುಂದಕ್ಕೆ ಸಾಗಿದರು.
11 : ಸಿಂಹಗಳಂತೆ ಶತ್ರುಗಳ ಮೇಲೆ ನುಗ್ಗಿ 11,000 ಪದಾತಿ ಸೇನಾಳುಗಳನ್ನೂ 1,600 ರಾಹುತರನ್ನೂ ಸಂಹರಿಸಿದರು. ಇತರರು ಪ್ರಾಣ ರಕ್ಷಣೆಗಾಗಿ ಓಡಿಹೋಗಬೇಕಾಯಿತು.
12 : ಅವರಲ್ಲಿ ಅನೇಕರು ಗಾಯಗೊಂಡಿದ್ದರು; ಶಸ್ತ್ರಾಸ್ತ್ರಗಳನ್ನು ಬಿಸಾಡಿ ಪಲಾಯನ ಗೈದರು. ಲೂಸ್ಯನೇ ಹೇಡಿಯಂತೆ ತಲೆ ತಪ್ಪಿಸಿಕೊಂಡು ಓಡಬೇಕಾಯಿತು.
13 : ಲೂಸ್ಯನೇನೂ ದಡ್ಡನಾಗಿರಲಿಲ್ಲ. ವಿಧಿಯು ಯುದ್ಧದಲ್ಲಿ ತಿರುಗುಬಾಣವಾಗಿದ್ದನ್ನು ಕುರಿತು ಚಿಂತನೆಮಾಡಿದನು. ಬಲಾಢ್ಯ ದೇವರೇ ಯೆಹೂದ್ಯರ ಪಕ್ಷವಹಿಸಿದ್ದರಿಂದ, ಅವರನ್ನು ಜಯಿಸಲು ಅಸಾಧ್ಯವೆಂಬುದನ್ನು ಮನಗಂಡನು. ಆದುದರಿಂದ ಅವರಿಗೆ ಒಂದು ನಿಯೋಗವನ್ನು ಕಳುಹಿಸಿದನು.
14 : ತಾನು ನ್ಯಾಯವಾದ ಒಪ್ಪಂದಕ್ಕೆ ಬದ್ದನೆಂದೂ ಅರಸನ ಮನಸ್ಸನ್ನು ಅವರ ಪರವಾಗಿ ಒಲಿಸಲು ಪ್ರಯತ್ನಿಸುವನೆಂದೂ ಹೇಳಿ ಕಳುಹಿಸಿದನು.
15 : ಸಾಮಾನ್ಯ ಜನರ ಹಿತದೃಷ್ಟಿಯಿಂದ ಯೂದಮಕ್ಕಬಿಯನು ಲೂಸ್ಯನ ಯೋಜನೆಗೆ ಒಪ್ಪಿಗೆಯಿತ್ತನು. ಏಕೆಂದರೆ ಯೆಹೂದ್ಯರ ಪರವಾಗಿ ಮಕ್ಕಬಿಯನು ಲಿಖಿತ ರೂಪದಲ್ಲಿ ಲೂಸ್ಯನ ಮುಖಾಂತರ ಕೇಳಿದ್ದೆಲ್ಲವನ್ನು ರಾಜನು ಮಂಜೂರು ಮಾಡಿದ್ದನು.
16 : ಯೆಹೂದ್ಯರಿಗೆ ಲೂಸ್ಯನು ಬರೆದ ಪತ್ರದ ನಕಲಿದು:
ಯೆಹೂದ್ಯ ಜನರಿಗೆ ಲೂಸ್ಯನ ಶುಭಾಶಯಗಳು!
17 : ನೀವು ನಿಮ್ಮ ಪ್ರತಿನಿಧಿಗಳಾದ ಯೊವಾನ್ನ ಮತ್ತು ಅಬ್ಷಾಲೋಮರ ಮುಖಾಂತರ ಬರೆದು ಕಳುಹಿಸಿಕೊಟ್ಟ ಸಂದೇಶ ತಲುಪಿದೆ. ಅದರಲ್ಲಿರುವ ಅಂಶಗಳಿಗೆಲ್ಲ ನನ್ನ ಒಪ್ಪಿಗೆ ಅವಶ್ಯವೆಂದು ಕೇಳಿಕೊಂಡಿದ್ದಾರೆ.
18 : ಅರಸರ ಗಮನಕ್ಕೆ ತರಬೇಕಾದುದ್ದನ್ನೆಲ್ಲ ಅವರ ಮುಂದೆ ಇಟ್ಟಿದ್ದೇನೆ. ಸಾಧ್ಯವಾದುದ್ದಕ್ಕೆಲ್ಲ ಮಂಜೂರಾತಿ ನೀಡಲಾಗಿದೆ.
19 : ನೀವು ರಾಜ್ಯದ ಹಿತರಕ್ಷಣೆಗಾಗಿ ಮನಃಪೂರ್ವಕವಾಗಿ ಸಹಕಾರ ನೀಡುವುದಾದರೆ ನಿಮ್ಮ ಯೋಗಕ್ಷೇಮವನ್ನು ಮುಂದಕ್ಕೆ ನೋಡಿಕೊಳ್ಳಲು ತೀರಾ ಪ್ರಯತ್ನ ಮಾಡುತ್ತಾನೆ.
19 : ನೀವು ರಾಜ್ಯದ ಹಿತರಕ್ಷಣೆಗಾಗಿ ಮನಃಪೂರ್ವಕವಾಗಿ ಸಹಕಾರ ನೀಡುವುದಾದರೆ ನಿಮ್ಮ ಯೋಗಕ್ಷೇಮವನ್ನು ಮುಂದಕ್ಕೆ ನೋಡಿಕೊಳ್ಳಲು ತೀರಾ ಪ್ರಯತ್ನ ಮಾಡುತ್ತಾನೆ.
20 : ಈ ವಿಷಯಗಳ ಹಾಗು ಇತರ ವಿವರಗಳ ಬಗ್ಗೆ ನಿಮ್ಮೊಂದಿಗೆ ಸಮಾಲೋಚನೆ ಮಾಡುವುದಕ್ಕಾಗಿ ಈ ವ್ಯಕ್ತಿಗಳಿಗೂ ನನ್ನ ಪ್ರತಿನಿಧಿಗಳಿಗೂ ಸೂಕ್ತ ಆಜ್ಞೆಯನ್ನು ನೀಡಿದ್ದೇನೆ.
21 : ನಿಮಗೆ ಶುಭವಾಗಲಿ! 148ನೇ ವರ್ಷದ ಡಿಯೋಸ್‍ಕೊರಸ್ ತಿಂಗಳ 24ನೇ ದಿನದಂದು ಈ ಪತ್ರ ಬರೆದಿದ್ದೇನೆ.
22 : “ಸನ್ಮಾನ್ಯ ಸಹೋದರ ಲೂಸ್ಯನಿಗೆ ಅರಸ ಅಂತಿಯೋಕನ ಶುಭಾಶಯಗಳು!
23 : ಈಗ್ಗೆ, ನಮ್ಮ ತಂದೆಯವರು ದೈವಾಧೀನರಾದ್ದರಿಂದ, ನಮ್ಮ ರಾಜ್ಯದ ಪ್ರಜೆಗಳು ತಮ್ಮ ಸ್ವಂತ ವ್ಯವಹಾರಗಳಲ್ಲಿ ಯಾವ ತೊಂದರೆಯಿಲ್ಲದೆ ಕ್ಷೇಮದಿಂದಿರಬೇಕೆಂಬುದನ್ನು ನಾವು ಅಪೇಕ್ಷಿಸುತ್ತೇವೆ.
24 : ನಮ್ಮ ತಂದೆಯವರು ಗ್ರೀಕ್ ಆಚಾರಗಳನ್ನು ಜನರ ಮೇಲೆ ವಿಧಿಸುತ್ತಿದ್ದರು. ಇಂಥಾ ನೀತಿಯು ಯೆಹೂದ್ಯರಿಗೆ ಹಿಡಿಸಲಿಲ್ಲ. ಅವರ ಸ್ವಂತ ಆಚಾರವಿಚಾರಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಅಲ್ಲದೆ ಅವರ ಸ್ವಂತ ಆಚಾರಗಳನ್ನು ಕೈಗೊಳ್ಳಲು ಅನುಮತಿಯನ್ನು ಕೋರಿದ್ದಾರೆ.
25 : ಇತರ ಜನರಂತೆ ಅವರು ಸಹ ಯಾವ ತೊಂದರೆ ತಾಪತ್ರಯಗಳಿಲ್ಲದೆ ಬಾಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಎಂತಲೇ ಅವರ ಮಹಾ ದೇವಾಲಯವನ್ನು ಅವರಿಗೇ ಒಪ್ಪಿಸಿ ಬಿಡಬೇಕು. ಅವರ ಪೂರ್ವಜರ ಪದ್ಧತಿಯ ಪ್ರಕಾರ ಬದುಕಲು ಬಿಟ್ಟುಬಿಡಬೇಕು. ಇದು ರಾಜಾಜ್ಞೆ.
26 : ಈ ನನ್ನ ನಿರ್ಧಾರವನ್ನು ಕುರಿತು ಸಂಬಂಧಪಟ್ಟವರಿಗೆ ತಿಳಿಸಿರಿ. ನಮ್ಮ ಸೌಹಾರ್ದತೆಯ ವಾಗ್ದಾನವನ್ನು ಅವರಿಗೆ ನೀಡಿರಿ. ಅವರು ನಮ್ಮ ರಾಜನೀತಿಯನ್ನು ಅರಿತು ಸಂತೋಷ ಹಾಗು ಸಂತೃಪ್ತಿಯಿಂದ ತಮ್ಮ ಸ್ವಂತ ವ್ಯವಹಾರಗಳನ್ನು ನಡೆಸಿಕೊಂಡು ಹೋಗಲಿ.”
27 : ಯೆಹೂದ್ಯರಿಗೆ ಅರಸನು ಬರೆದ ಪತ್ರ ಹೀಗಿತ್ತು:
“ಯೆಹೂದ್ಯ ಶಾಸಕಸಭೆಗೂ ಇತರ ಎಲ್ಲ ಯೆಹೂದ್ಯರಿಗೂ ಅರಸ ಅಂತಿಯೋಕನ ಶುಭಾಶಯಗಳು!
28 : ನೀವು ಕ್ಷೇಮದಿಂದಿದ್ದೀರೆಂದು ನಮ್ಮ ನಿರೀಕ್ಷೆ. ಅದೇ ನಮ್ಮ ಬಯಕೆ. ನಾವು ಸಹ ಕ್ಷೇಮದಿಂದಿದ್ದೇವೆ.
29 : ನೀವು ನಿಮ್ಮ ಮನೆಗಳಿಗೆ ಹಿಂದಿರುಗಿ ನಿಮ್ಮ ಸ್ವಂತ ವ್ಯವಹಾರವನ್ನು ನೋಡಿಕೊಳ್ಳಬೇಕೆಂಬ ನಿಮ್ಮ ಬಯಕೆಯನ್ನು ಕುರಿತು ಮೆನೆಲಾವ್ಸನಿಂದ ನಮಗೆ ತಿಳಿದು ಬಂದಿದೆ.
30 : ಆದುದರಿಂದ, ‘ಕ್ಸಾಂತಿಕಸ್’ ತಿಂಗಳ ಮೂವತ್ತನೇ ದಿನದೊಳಗೆ ಮನೆಗೆ ಹಿಂದಿರುಗುವಂಥವರು ನಿರ್ಭಯದಿಂದಿರಬಹುದು.
31 : ಯೆಹೂದ್ಯರು ತಮ್ಮ ಊಟೋಪಚಾರ ವಿಷಯಗಳಲ್ಲಿ ತಮ್ಮ ಸ್ವಂತ ನಿಯಮಗಳನ್ನು ಪದ್ಧತಿ ಪ್ರಕಾರ ಪಾಲಿಸಲು ಅನುಮತಿ ನೀಡಿದ್ದೇವೆ. ತಿಳಿಯದೆ ಮಾಡಿದ ತಪ್ಪುಗಳಿಗಾಗಿ ಯಾವ ಯೆಹೂದ್ಯನನ್ನೂ ಬಾಧಿಸಬಾರದು.
32 : ನಿಮ್ಮ ಮನಸ್ಸಿಗೆ ನೆಮ್ಮದಿ ಇರಬೇಕೆಂದು ಮೆನೆಲಾವ್ಸನನ್ನು ಕಳುಹಿಸುತ್ತಿದ್ದೇನೆ. ನಿಮಗೆ ಶುಭವಾಗಲಿ!
33 : 148ನೇ ವರ್ಷದ ಕ್ಸಾಂತಿಕಸ್ ತಿಂಗಳು 15ನೇ ದಿನದಂದು ಈ ಪತ್ರ ಬರೆದಿರುತ್ತೇನೆ.”
ಯೆಹೂದ್ಯರಿಗೆ ರೋಮನ್ನರ ಪತ್ರ
34 : “ಯೆಹೂದ್ಯರಿಗೆ ರೋಮನ್ನರು ಸಹ ಒಂದು ಪತ್ರವನ್ನು ಬರೆದರು. ಅದರ ಒಕ್ಕಣೆ ಹೀಗಿದೆ:
“ಯೆಹೂದ್ಯರಿಗೆ ರೋಮಿನ ಪ್ರತಿನಿಧಿಗಳಾದ ಐದನೇ ಮೇಮಿಯಸ್, ಟೈಟಸ್ ಮಾನಿಲಿಯಸ್ ಹಾಗು ಮಾನಿಯುಸ್ ಸೆರ್‍ಜೆಯುಸ್ ಇವರು ಕೋರುವ ಶುಭಾಶಯಗಳು!
35 : ಅರಸನ ಸಂಬಂಧಿಯಾದ ಸನ್ಮಾನ್ಯ ಲೂಸ್ಯನು ನಿಮಗೆ ನೀಡಿರುವ ಸೌಲಭ್ಯಗಳನ್ನು ನಾವೂ ಮನಃಪೂರ್ವಕವಾಗಿ ಅನುಮೋದಿಸುತ್ತೇವೆ.
36 : ನಾವು ಈಗ ಅಂತಿಯೋಕಕ್ಕೆ ಹೋಗುವ ದಾರಿಯಲ್ಲಿರುವುದರಿಂದ ಲೂಸ್ಯನು ಅರಸನ ಅವಗಾಹನೆಗೆ ತಂದಿರುವ ವಿಷಯಗಳನ್ನು ಚೆನ್ನಾಗಿ ಮನನ ಮಾಡಿಕೊಂಡು ನಮಗೆ ಯಾರ ಕೈಯಲ್ಲಾದರೂ ನಿಮ್ಮ ಪ್ರತ್ಯುತ್ತರವನ್ನು ಬೇಗನೆ ಕಳಿಸಿಕೊಡಿ. ಆಗ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಾವೂ ಅದರ ವಿವರಣೆಯನ್ನು ಲೂಸ್ಯನಿಗೆ ನೀಡಬಹುದು.
37 : ಆದುದರಿಂದ, ನಿಮ್ಮ ನಿರ್ಧಾರವನ್ನು ನಾವು ತಿಳಿಯುವಂತೆ ಓಲೆಕಾರರನ್ನು ಬೇಗನೆ ಕಳುಹಿಸಿಕೊಡಿ.
38 : ನಿಮಗೆ ಶುಭವಾಗಲಿ! 148ನೇ ವರ್ಷದ ಕ್ಸಾಂತಿಕಸ್ ತಿಂಗಳ 15ನೇ ದಿನದಂದು ಈ ಪತ್ರ ಬರೆದಿದ್ದೇವೆ.”