1 : “ಜೆರುಸಲೇಮ್ ಮತ್ತು ಜುದೇಯ ಪ್ರಾಂತ್ಯದ ಯೆಹೂದ್ಯ ಸಹೋದರರಿಂದ ಈಜಿಪ್ಟಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಶುಭಾಶಯ ಹಾಗೂ ದೀರ್ಘಶಾಂತಿ!
2 : “ದೇವರು ನಿಮಗೆ ಒಳಿತನ್ನು ಮಾಡಲಿ; ತಮ್ಮ ಪ್ರಾಮಾಣಿಕ ದಾಸರಾದ ಅಬ್ರಹಾಮ್, ಇಸಾಕ್ ಮತ್ತು ಯಕೋಬರೊಂದಿಗೆ ದೇವರು ಮಾಡಿದ ಒಡಂಬಡಿಕೆಯನ್ನು ನೀವು ನೆನಪಿಗೆ ತಂದುಕೊಳ್ಳಿರಿ.
3 : “ದೇವರು ನಿಮಗೆ ಒಳಿತನ್ನು ಮಾಡಲಿ; ತಮ್ಮ ಪ್ರಾಮಾಣಿಕ ದಾಸರಾದ ಅಬ್ರಹಾಮ್, ಇಸಾಕ್ ಮತ್ತು ಯಕೋಬರೊಂದಿಗೆ ದೇವರು ಮಾಡಿದ ಒಡಂಬಡಿಕೆಯನ್ನು ನೀವು ನೆನಪಿಗೆ ತಂದುಕೊಳ್ಳಿರಿ.
4 : ಅವರ ಧರ್ಮಶಾಸ್ತ್ರದ ನಿಯಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಲು ನಿಮ್ಮ ಹೃದಯವನ್ನು ತೆರೆಯಲಿ. ನಿಮಗೆ ಶಾಂತಿ ಸಮಾಧಾನವನ್ನು ದಯಪಾಲಿಸಲಿ.
5 : ಅವರು ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಟ್ಟು ಪಾಪಕ್ಷಮೆ ನೀಡಲಿ. ಕಷ್ಟಕಾಲದಲ್ಲಿ ನಿಮ್ಮನ್ನು ಕೈಬಿಡದೆ ಕಾಪಾಡಲಿ!
6 : ಈ ಉದ್ದೇಶದಿಂದ ನಾವು ನಿಮಗೋಸ್ಕರ ಪ್ರಾರ್ಥನೆ ಮಾಡುತ್ತಿದ್ದೇವೆ.
7 : “169ನೇ ವರ್ಷದಲ್ಲಿ ಎರಡನೇ ದೆಮೆತ್ರಿಯನು ಸಿರಿಯಾದ ಅರಸನಾಗಿದ್ದಾಗ, ನಾವು ನಿಮಗೊಂದು ಪತ್ರ ಕಳುಹಿಸಿದೆವು. ಪವಿತ್ರ ನಾಡಿನಲ್ಲಿ, ಯಾಸೋನನು ಅಧಿಕಾರಿಗಳ ವಿರುದ್ಧ ದಂಗೆಯೆದ್ದು, ರಾಜ್ಯವನ್ನು ಬಿಟ್ಟು ತೆರಳಿದ ನಂತರ ನಮಗುಂಟಾದ ಚಿತ್ರಹಿಂಸೆಯ ಹಾಗು ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ನಿಮಗೆ ಆ ಪತ್ರದಲ್ಲಿ ವಿವರಿಸಿದೆವು.
8 : ಯಾಸೋನ್ ಮತ್ತು ಅವನ ಸಂಗಡಿಗರು ದೇವಾಲಯದ ಬಾಗಿಲುಗಳಿಗೆ ಬೆಂಕಿಯಿಟ್ಟರು. ನಿರಪರಾಧಿಗಳನ್ನು ಹತಮಾಡಿದರು. ಆಗ ನಾವು ದೇವರಲ್ಲಿ ಮೊರೆಯಿಟ್ಟೆವು; ಅವರು ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟರು. ನಾವು ಬಲಿಯನ್ನೂ ಧಾನ್ಯನೈವೇದ್ಯಗಳನ್ನೂ ದೇವರಿಗೆ ಅರ್ಪಿಸಿದೆವು. ಮಹಾದೇವಾಲಯದಲ್ಲಿ ದೀಪಗಳನ್ನು ಉರಿಸಿ, ರೊಟ್ಟಿಯನ್ನು ವೇದಿಕೆಯಲ್ಲಿ ಇರಿಸಿದೆವು.
9 : ಆದುದರಿಂದ, ನಮ್ಮ ಪರ್ಣ ಕುಟೀರಗಳ ಹಬ್ಬದಂತೆ ನೀವು ಸಹ ಕಿಸ್ಲೇವ್ ತಿಂಗಳಲ್ಲಿ ಹಬ್ಬವನ್ನು ಆಚರಿಸಬೇಕೆಂದು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಈ ಪತ್ರವನ್ನು 188ನೇ ವರ್ಷದಲ್ಲಿ ಬರೆಯಲಾಗಿದೆ.”
ಅರಿಸ್ಟೋಬುಲನಿಗೆ ಪತ್ರ
(ಅರಸ ಅಂತಿಯೋಕನ ಮರಣ)
10 : “ಜೆರುಸಲೇಮ್ ಮತ್ತು ಜುದೇಯದಲ್ಲಿ ಇರುವ ಯೆಹೂದ್ಯರಿಂದ, ಯೆಹೂದ್ಯ ಶಾಸಕ ಸಭೆಯಿಂದ ಹಾಗು ಯೂದ ಮಕ್ಕಬಿಯನಿಂದ ಅಭಿಷಿಕ್ತ ಯಾಜಕರ ವಂಶಕ್ಕೆ ಸೇರಿದವನು ಹಾಗೂ ಅರಸ ಪ್ತೊಲೆಮೇಯನ ಗುರುವು ಆದ ಅರಿಸ್ಟೋಬುಲನಿಗೆ: ಅಂತೆಯೇ ಈಜಿಪ್ಟಿನಲ್ಲಿ ಇರುವ ಯೆಹೂದ್ಯ ಬಾಂಧವರಿಗೆ ಶುಭಾಶಯ ಹಾಗು ಯೋಗಕ್ಷೇಮವನ್ನು ಕೋರುತ್ತೇವೆ.
11 : “ನಾವು ದೇವರಿಗೆ ವಂದನೆಗಳನ್ನು ಸಲ್ಲಿಸುತ್ತೇವೆ. ಅವರು ನಮಗೆ ಸಕಾಲದಲ್ಲಿ ನೆರವಿತ್ತು ಘೋರ ಆಪತ್ತಿನಿಂದ ನಮ್ಮನ್ನು ಪಾರುಮಾಡಿದ್ದಾರೆ. ಇಷ್ಟು ದೊಡ್ಡ ಅರಸನಿಗೆ ಎದುರಾಗಿ ನಿಂತು ಯುದ್ಧಮಾಡಲು ನಮಗೆ ಧೈರ್ಯವನ್ನು ನೀಡಿದ್ದಾರೆ.
12 : ದೇವರೇ ಆ ಶತ್ರುವನ್ನು ಪವಿತ್ರ ನಗರದಿಂದ ಹೊರಕ್ಕಟ್ಟಿದರು.
13 : ಅರಸ ಅಂತಿಯೋಕನು ಪರ್ಷಿಯಾ ನಾಡನ್ನು ಸೇರಿದಾಗ, ಅವನ ಸೈನ್ಯವನ್ನು ಸೋಲಿಸಲು ಅಸಾಧ್ಯವಾಗಿತ್ತು. ಆದರೆ ನಾನೆಯ ದೇವತೆಯ ಗುಡಿಯಲ್ಲಿ ಅವರು ತುಂಡು ತುಂಡಾಗಿ ಕಡಿಯಲ್ಪಟ್ಟರು. ಅಲ್ಲಿನ ಪೂಜಾರಿಗಳ ತಂತ್ರೋಪಾಯದಿಂದ ಅದು ಸಾಧ್ಯವಾಯಿತು.
14 : ನಾನೆಯ ಆ ದೇವತೆಯನ್ನು ವಿವಾಹ ಮಾಡಿಕೊಂಡು ಆ ಗುಡಿಯಲ್ಲಿದ್ದ ನಿಧಿನಿಕ್ಷೇಪಗಳನ್ನು ವರದಕ್ಷಿಣೆಯಾಗಿ ದಕ್ಕಿಸಿಕೊಳ್ಳಬೇಕೆಂಬ ಉಪಾಯದಿಂದ ಅರಸ ಅಂತಿಯೋಕ ತನ್ನ ಅತಿ ನಂಬಿಕಸ್ಥ ಸಲಹೆಗಾರರೊಂದಿಗೆ ನಾನೆಯ ದೇವಾಲಯಕ್ಕೆ ಹೋಗಿದ್ದನು.
15 : ಪೂಜಾರಿಗಳು ಭಂಡಾರದಲ್ಲಿನ ನಿಧಿನಿಕ್ಷೇಪಗಳನ್ನು ಹೊರಗೆ ತಂದಿಟ್ಟ ನಂತರ ಅಂತಿಯೋಕನು ಅವುಗಳನ್ನು ದೋಚಿಕೊಳ್ಳಲು ತನ್ನ ಸಂಗಡಿಗರೊಂದಿಗೆ ದೇವಾಲಯದೊಳಕ್ಕೆ ಹೋದನು. ಆಗ ಪೂಜಾರಿಗಳು ಹಿಂದಿನಿಂದ ಬಾಗಿಲುಗಳನ್ನು ಮುಚ್ಚಿಬಿಟ್ಟರು.
16 : ಮಾಳಿಗೆಯಲ್ಲಿನ ರಹಸ್ಯ ಕಿಂಡಿಗಳ ಮೂಲಕ ಅವನ ಮೇಲೂ ಅವನ ಸಂಗಡಿಗರ ಮೇಲೂ ಕಲ್ಲುಗಳನ್ನು ತೂರಿ ಅವರನ್ನೆಲ್ಲ ಕೊಂದುಹಾಖಿದರು; ಅವರ ಕೈ ಕಾಲುಗಳನ್ನು ಕಡಿದುಹಾಕಿ, ತಲೆಗಳನ್ನು ಬೇರ್ಪಡಿಸಿ, ಕೆಳಗೆ ನಿಂತಿದ್ದ ಜನರ ಕಡೆಗೆ ಎಸೆದುಬಿಟ್ಟರು.
17 : ಆ ಅಕ್ರಮಿಗಳಿಗೆ ಸರಿಯಾಗಿ ಶಾಸ್ತಿಮಾಡಿದ ದೇವರಿಗೆ ಸ್ತುತಿಯಾಗಲಿ! ಎಲ್ಲ ವಿಧದಲ್ಲೂ ಅವರಿಗೆ ಸ್ತುತಸಲ್ಲಲಿ!
ಅಳಿಯದೆ ಉಳಿದ ಪವಿತ್ರಾಗ್ನಿ
18 : “ಕಿಸ್ಲೇವಿನ ಮಾಸದ 25ನೇ ದಿನ ನಾವು ಮಹಾದೇವಾಲಯದ ಶುದ್ಧೀಕರಣದ ಹಬ್ಬವನ್ನು ಕೊಂಡಾಡುತ್ತೇವೆ. ಪರ್ಣಕುಟೀರಗಳ ಹಬ್ಬದಂತೆಯೇ ಆ ಹಬ್ಬವನ್ನು ಸಹ ನೀವು ಆಚರಿಸುವಂತೆ ನಿಮಗೆ ಇದನ್ನು ಕುರಿತು ತಿಳಿಸುವುದು ಒಳ್ಳೆಯದೆಂದು ನಮಗೆ ತೋರುತ್ತದೆ. ಮಹಾದೇವಾಲಯವನ್ನೂ ಬಲಿಪೀಠವನ್ನೂ ಪುನಃ ಕಟ್ಟಿದ ಸಮಯದಲ್ಲಿ, ನೆಹೆಮೀಯನು ಬಲಿಯರ್ಪಣೆ ಮಾಡಿದಾಗ, ಅಗ್ನಿ ಕಾಣಿಸಿಕೊಂಡ ಘಟನೆಯನ್ನು ನೀವು ಆಗ ನೆನಪಿಗೆ ತಂದುಕೊಂಡಂತಾಗುತ್ತದೆ.
19 : “ನಮ್ಮ ಪೂರ್ವಜರು ಪರ್ಷಿಯಾ ನಾಡಿಗೆ ಸೆರೆಯಾಗಿ ಕೊಂಡೊಯ್ಯಲ್ಪಟ್ಟಾಗ ಕೆಲವು ಶ್ರದ್ಧೆಯುಳ್ಳ ಯಾಜಕರು ಬಲಿಪೀಠದಿಂದ ಅಗ್ನಿಯನ್ನು ತೆಗೆದುಕೊಂಡು ರಹಸ್ಯವಾಗಿ ನೀರಿಲ್ಲದ ಬಾವಿಯೊಂದರಲ್ಲಿ ಅಡಗಿಸಿಟ್ಟರು. ಅದನ್ನು ಯಾರೂ ಕಂಡುಹಿಡಿಯದಷ್ಟು ರಹಸ್ಯವಾಗಿತ್ತು.
20 : ಕೆಲವು ವರ್ಷಗಳ ನಂತರ, ದೈವೇಚ್ಛೆಗನುಗುಣವಾಗಿ ಪರ್ಷಿಯಾದ ಅರಸನು ನೆಹೆಮೀಯನನ್ನು ಜೆರುಸಲೇಮಿಗೆ ಮರಳಿ ಕಳುಹಿಸಿದಾಗ, ಯಾಜಕರ ಸಂತಾನದವರಿಗೆ ಅಗ್ನಿಯನು ಹುಡುಕಬೇಕೆಂದು ಹೇಳಿದನು. ಅವರಿಗೆ ಆ ಅಗ್ನಿ ಸಿಕ್ಕಲಿಲ್ಲವೆಂದೂ ಅದಕ್ಕೆ ಬದಲು ಎಣ್ಣೆಯಂತಿರುವ ದ್ರವಮಾತ್ರ ಸಿಕ್ಕಿದೆಯೆಂದೂ ನಮಗೆ ವರದಿಮಾಡಿದರು. ಅದನ್ನೆ ಸ್ವಲ್ಪ ತೆಗೆದುಕೊಂಡು ತರಬೇಕೆಂದು ನೆಹೆಮೀಯನು ಅವರಿಗೆ ಹೇಳಿದನು.
21 : “ಬಲಿವಸ್ತುಗಳನ್ನೆಲ್ಲ ಪೀಠದ ಮೇಲೆ ತಂದಿಟ್ಟಾಗ, ಆ ದ್ರವವನ್ನು ಕಟ್ಟಿಗೆಯ ಹಾಗು ಬಲಿವಸ್ತುವಿನ ಮೇಲೆ ಸುರಿಯಬೇಕೆಂದು ನೆಹೆಮೀಯನು ಯಾಜಕರಿಗೆ ಹೇಳಿದನು.
22 : ಯಾಜಕರು ಹಾಗೆಯೇ ಮಾಡಿದಾಗ ಸ್ವಲ್ಪಹೊತ್ತಿನಲ್ಲೇ ಮೇಘಗಳ ಹಿಂದಿನಿಂದ ಸೂರ್ಯನು ಕಾಣಿಸಿಕೊಂಡನು. ತಕ್ಷಣವೇ, ಪೀಠದ ಮೇಲೆ ಇದ್ದುದೆಲ್ಲವೂ ಬೆಂಕಿಯಿಂದ ಉರಿಯಲು ಆರಂಭಿಸಿತು. ಅದನ್ನು ನೋಡಿ ಎಲ್ಲರೂ ಅವಾಕ್ಕಾದರು.
23 : ಆ ಅಗ್ನಿಯು ಬಲಿಯನ್ನು ದಹಿಸುತ್ತಿರುವಾಗ, ಪ್ರಧಾನಯಾಜಕ ಯೋನಾತನನು ಪ್ರಾರ್ಥನೆಯನ್ನು ಪ್ರಾರಂಭಿಸಿದನು. ನೆಹೆಮೀಯನೂ ಸಭಿಕರೆಲ್ಲರೂ ಪ್ರತ್ಯುತ್ತರವಿತ್ತರು.
ನೆಹೆಮೀಯನ ಪ್ರಾರ್ಥನೆ
24 : “ನೆಹೆಮೀಯನ ಪ್ರಾರ್ಥನೆ ಹೀಗಿತ್ತು: ‘ಸರ್ವೇಶ್ವರನಾದ ದೇವರೇ, ಸಕಲವನ್ನೂ ಸೃಷ್ಟಿಸಿದ ಪ್ರಭುವೇ, ನೀವು ಭಯಭಕ್ತಿಗೆ ಪಾತ್ರರು, ಸರ್ವಶಕ್ತರು! ಆದರೂ ಕರುಣಾಳು ಹಾಗು ಸತ್ಯ ಸ್ವರೂಪಿ. ನೀವೊಬ್ಬರೇ ಅರಸರು, ದಯಾಪರರು.
25 : ನೀವಲ್ಲದೆ ಬೇರಾರೂ ಕೃಪಾಳು, ನ್ಯಾಯವಂತರು ಇಲ್ಲ. ನೀವು ಸರ್ವಶಕ್ತರು, ಸದಾಕಾಲಕ್ಕೂ ಇರುವವರು. ಇಸ್ರಯೇಲನ್ನು ಸಕಲ ಆಪತ್ತಿನಿಂದ ಬಿಡುಗಡೆಮಾಡಲು ಸದಾ ಸಿದ್ಧರು. ನಮ್ಮ ಪೂರ್ವಜರನ್ನು ನಿಮ್ಮ ಸ್ವಕೀಯ ಪ್ರಜೆಯನ್ನಾಗಿ ಆರಿಸಿಕೊಂಡಿರಿ, ಶುದ್ಧೀಕರಿಸಿದಿರಿ.
26 : ಇಸ್ರಯೇಲ್ ಸಮಾಜದ ಪರವಾಗಿ ನಾವು ಅರ್ಪಿಸುತ್ತಿರುವ ಬಲಿದಾನವನ್ನು ಅಂಗೀಕರಿಸಿರಿ. ನೀವು ಆರಿಸಿಕೊಂಡ ಪ್ರಜೆಯನ್ನು ಕಾಪಾಡಿ, ನಮ್ಮನ್ನು ನಿಮ್ಮ ಪ್ರಜೆಯನ್ನಾಗಿ ಪವಿತ್ರೀಕರಿಸಿರಿ.
27 : ಪರಕೀಯ ರಾಜ್ಯಗಳಲ್ಲಿ ಅಡಿಯಾಳಾಗಿರುವ ನಮ್ಮ ಜನರನ್ನು ಬಿಡುಗಡೆ ಮಾಡಿರಿ. ಚದರಿಹೋದ ನಮ್ಮ ಬಾಂಧವರನ್ನು ಒಂದುಗೂಡಿಸಿರಿ. ಚಿತ್ರಹಿಂಸೆಗೂ ತಾತ್ಸಾರಕ್ಕೂ ಗುರಿಯಾಗಿರುವ ನಮ್ಮ ಜನತೆಯ ಮೇಲೆ ಕರುಣೆ ತೋರಿರಿ. ಹೀಗೆ ಸರ್ವರಾಷ್ಟ್ರಗಳವರು ಇದನ್ನು ಕಂಡು ನೀವೇ ನಮ್ಮ ದೇವರೆಂದು ತಿಳಿದುಕೊಳ್ಳುವರು.
28 : ಉದ್ಧಟತನದಿಂದ, ಅಹಂಕಾರದಿಂದ ಮೆರೆದು ನಮ್ಮನ್ನು ಶೋಷಿಸುವಂಥವರು ಸಂಕಟಕ್ಕೆ ಒಳಗಾಗುವಂತೆ ಮಾಡಿರಿ.
29 : ಮೋಶೆಯು ಮುಂತಿಳಿಸಿದ ಪ್ರಕಾರ ನಿಮ್ಮ ಜನರನ್ನು ನಿಮ್ಮ ಪವಿತ್ರ ನಾಡಿನಲ್ಲಿ ನೆಲೆಗೊಳಿಸಿರಿ.’
ಪವಿತ್ರ ದ್ರವ ದೊರಕಿದ ಸ್ಥಳ – ಅರಸನಿಗೆ ಪುಣ್ಯಕ್ಷೇತ್ರ
30 : “ಆ ಅಗ್ನಿಯು ಬಲಿಯನ್ನು ದಹಿಸುವವರೆಗೂ ಯಾಜಕರು ಭಕ್ತಿಗೀತೆಗಳನ್ನು ಹಾಡಿದರು.
31 : ಎಲ್ಲವೂ ಸುಟ್ಟು ಬೂದಿಯಾದ ನಂತರ, ಮಿಕ್ಕಿದ್ದ ದ್ರವವನ್ನು ಕೆಲವು ದೊಡ್ಡಕಲ್ಲುಗಳ ಮೇಲೆ ಸುರಿಯಲು ನೆಹೆಮೀಯನು ಆಜ್ಞೆ ಇತ್ತನು.
32 : ತಕ್ಷಣವೇ ಧಗಧಗನೆ ಬೆಂಕಿ ಉರಿಯಿತು. ಅದನ್ನು ಪೀಠದ ಮೇಲಿನ ಅಗ್ನಿ ಆವರಿಸಿತು.
33 : “ನಡೆದ ಈ ಘಟನೆ ಎಲ್ಲಾಕಡೆ ಸುದ್ದಿಯಾಯಿತು. ಸೆರೆಹೋಗುವ ಮುನ್ನ ಯಾಜಕರು ಮರೆಯಾಗಿ ಅಗ್ನಿಯನ್ನು ಅಡಗಿಸಿಟ್ಟಿದ್ದ ಸ್ಥಳದಲ್ಲಿ ಒಂದು ಅಪೂರ್ವವಾದ ದ್ರವ ಕಂಡುಬಂದಿದೆ ಎಂದು ಪರ್ಷಿಯಾದ ಅರಸನಿಗೆ ಗೊತ್ತಾಯಿತು. ಅಂತೆಯೇ, ನೆಹೆಮೀಯನು ಹಾಗು ಅವನ ಸಂಗಡಿಗರು ಬಲಿಯನ್ನು ಪೀಠದ ಮೇಲೆ ದಹಿಸುವುದಕ್ಕೆ ಆ ದ್ರವವನ್ನು ಬಳಸಿದರೆಂದು ಇವನಿಗೆ ತಿಳಿಯಿತು.
34 : ಅರಸನು ಈ ವಿಷಯವನ್ನು ಪರಿಶೀಲನೆಗೆ ಒಳಪಡಿಸಿದನು. ಸಂಗತಿ ನಿಜವೆಂದು ಕಂಡುಬಂದದ್ದರಿಂದ, ಅವನು ಆ ಸ್ಥಳದ ಸುತ್ತಲೂ ಬೇಲಿ ಹಾಕಿಸಿ, ಅದನ್ನು ಪುಣ್ಯಕ್ಷೇತ್ರವನ್ನಾಗಿ ಮಾರ್ಪಡಿಸಿದನು.
35 : ಈ ಪುಣ್ಯಕ್ಷೇತ್ರದಿಂದ ಹೇರಳವಾದ ಧನ ಉತ್ಪತ್ತಿಯಾಯಿತು. ಅರಸನು ತನಗೆ ಬೇಕಾದವರಿಗೆ ಕೊಡುಗೆಗಳನ್ನು ನೀಡಲು ಈ ಹಣವನ್ನು ಬಳಸಿಕೊಂಡನು.
36 : ಆ ಅಪೂರ್ವವಾದ ದ್ರವಕ್ಕೆ ನೆಹೆಮೀಯನು ಮತ್ತು ಅವನ ಸಂಗಡಿಗರು ‘ನೆಫ್ತರ್’ ಎಂದು ಹೆಸರಿಟ್ಟರು. ಆದರೆ ಅನೇಕರು ಅದನ್ನು ‘ನಪ್ತ’ ಎಂದು ಕರೆಯಲಾರಂಭಿಸಿದರು.