Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ನಿಕಾನೋರನೂ ಅವನ ಸೈನ್ಯದವರೂ ಯುದ್ಧದಲ್ಲಿ ಮಡಿದರೆಂಬ ಸುದ್ದಿಯನ್ನು ದೆಮೆತ್ರಿಯನು ಕೇಳಿ, ತನ್ನ ಬಲಾಢ್ಯ ಸೈನ್ಯದೊಂದಿಗೆ ಬಕ್ಕಿದಿಯ ಮತ್ತು ಅಲ್ಕಿಮ ಎಂಬವರನ್ನು ಮತ್ತೆ ಎರಡನೆಯ ಸಾರಿ ಜುದೇಯ ನಾಡಿಗೆ ವಿರುದ್ಧ ಕಳುಹಿಸಿದನು.
2 : ಅವರು ಗಿಲ್ಗಾಲಿನ ಮಾರ್ಗವಾಗಿ ಹೋಗಿ, ಅರಬೇಲದಲ್ಲಿರುವ ಮೆಸಾಲೋತಿನ ಎದುರಾಗಿ ತಳವೂರಿ ಅದನ್ನು ಹಿಡಿದುಕೊಂಡು, ಅಲ್ಲಿ ಬಹುಜನರನ್ನು ಸಂಹರಿಸಿದರು.
3 : ತರುವಾಯ 152ನೇ ವರ್ಷದ ಮೊದಲನೆಯ ತಿಂಗಳಲ್ಲಿ ಜೆರುಸಲೇಮಿನ ಎದುರಿಗೆ ಬೀಡುಬಿಟ್ಟರು.
4 : ಅಲ್ಲಿಂದ ಹೊರಟು ಇಪ್ಪತ್ತು ಸಾವಿರ ಕಾಲಾಳು ಎರಡು ಸಾವಿರ ರಾಹುತರೊಂದಿಗೆ ಬೆರೀಯಕ್ಕೆ ಹೋದರು.
5 : ಯೂದನು, ಆರಿಸಿ ತೆಗೆದ ಮೂರು ಸಾವಿರ ಜನರೊಂದಿಗೆ ಏಲಾತದಲ್ಲಿ ತಳವೂರಿದನು.
6 : ಶತ್ರುಗಳ ಮಹಾದಳವನ್ನು ಕಂಡು, ಅವರ ಜನಸಮೂಹವು ದೊಡ್ಡದಾಗಿದೆಯೆಂದು ತಿಳಿದು ಯೂದನ ಸೈನಿಕರು ಎದೆಗುಂದಿದರು; ಅನೇಕರು ಸೈನ್ಯವನ್ನು ಬಿಟ್ಟು ಜಾರಿಕೊಂಡರು; ಆದುದರಿಂದ ಎಂಟುನೂರು ಜನಕ್ಕಿಂತ ಹೆಚ್ಚು ಜನರು ಉಳಿಯಲಿಲ್ಲ.
7 : ಹೀಗೆ ಸೈನಿಕರು ಜಾರಿಕೊಂಡದ್ದನ್ನೂ ಯುದ್ಧವು ಮೈಮೇಲೆ ಬಂದುದನ್ನೂ ಯೂದನು ಕಂಡು ಮನಸ್ಸಿನಲ್ಲೇ ನೊಂದುಕೊಂಡನು; ಮೇಲಾಗಿ, ಪುನಃ ಅವರೆಲ್ಲರನ್ನು ಒಂದುಗೂಡಿಸುವುದಕ್ಕೆ ಸಮಯವೂ ಇರಲಿಲ್ಲ.
8 : ಇದನ್ನು ನೋಡಿ ನಿರಾಶೆಗೊಂಡು ತನ್ನ ಬಳಿಯಲ್ಲಿದ್ದವರಿಗೆ, “ನಾವು ಎದ್ದು ಶತ್ರುಗಳ ಮೇಲೆ ಬೀಳೋಣ; ಒಂದು ವೇಳೆ ಅವರೊಂದಿಗೆ ಕಾದಾಡಲು ಶಕ್ತರಾದೇವು,” ಎಂದು ಹೇಳಿದನು.
9 : ಅವರು, “ನಾವು ಹೇಗೂ ಶಕ್ತರಾಗಲಾರೆವು, ಈಗ ನಮ್ಮ ಜೀವವನ್ನು ಉಳಿಸಿಕೊಂಡು ಹೋಗಿ, ನಮ್ಮ ಸಹೋದರರೊಂದಿಗೆ ಮರಳಿಬಂದು, ಇವರೊಂದಿಗೆ ಯುದ್ಧಮಾಡೋಣ; ಏಕೆಂದರೆ ನಾವು ಬಹು ಸ್ವಲ್ಪ ಜನ ಉಳಿದುಕೊಂಡು ಇದ್ದೇವೆ,” ಎಂದು ಹೇಳಿ, ಅವನ ಮನಸ್ಸನ್ನು ಬದಲಾಯಿಸಲು ಯತ್ನಮಾಡಿದರು.
10 : ಅದಕ್ಕೆ ಯೂದನು, “ಹಾಗಾಗದಿರಲಿ; ಇವರಿಗೆ ಬೆನ್ನು ತೋರಿಸಿ ಓಡಿಹೋಗುವ ಹೀನಕಾರ್ಯವನ್ನು ನಾನು ಮಾಡಲಾರೆ. ನಮ್ಮ ಸಮಯವು ಬಂದದೇ ಆಗಿದ್ದರೆ, ನಮ್ಮ ಗೌರವವನ್ನು ಕಳೆದುಕೊಂಡು ನಿಂದೆಗೆ ಗುರಿಯಾಗುವುದಕ್ಕಿಂತ, ನಮ್ಮ ಸಹೋದರರಿಗೋಸ್ಕರ ಶೂರರಾಗಿ ಸಾಯೋಣ,” ಎಂದು ಹೇಳಿದನು.
11 : ಶತ್ರುದಳವು ಇವರನ್ನು ಎದುರಿಸುವುದಕ್ಕೆ ತಳಬಿಟ್ಟಿತು. ರಾಹುತರು ಎರಡು ಭಾಗವಾಗಿ ವಿಂಗಡಿಸಲ್ಪಟ್ಟರು; ಕವಣೆಯವರೂ ಬಿಲ್ಲುಗಾರರೂ ಬಲಾಢ್ಯರಾದ ಯೋಧಶ್ರೇಷ್ಠರೂ ಸೈನ್ಯದ ಮುಂಭಾಗದಲ್ಲಿ ಬರುತ್ತಿದ್ದರು; ಬಕ್ಕಿದಿಯನು ಬಲಪಕ್ಷದಲ್ಲಿದ್ದನು.
12 : ವ್ಯೂಹದ ಎರಡು ಪಕ್ಷಗಳೂ ಸಮೀಪಿಸುತ್ತಾ ಬರಲು ಅವರು ಕಹಳೆಗಳನ್ನು ಊದಿದರು.
13 : ಯೂದನ ಜನರೂ ಕಹಳೆಗಳನ್ನು ಊದಿದರು. ಸೈನ್ಯಗಳ ಗರ್ಜನೆಯಿಂದ ಭೂಮಿ ಕಂಪಿಸಿತು. ತರುವಾಯ ಕೈಗೆ ಕೈ ಹತ್ತಿತು. ಬೆಳಗಿನಿಂದ ಬೈಗಿನವರೆಗೆ ಘೋರ ಕದನವಾಯಿತು.
14 : ಬಕ್ಕಿದಿಯನೂ ಅವನ ಸೈನ್ಯಕ್ಕೆ ಮುಖ್ಯ ಆಧಾರವಾದ ದಂಡಾಳುಗಳೂ ಬಲಪಕ್ಷದಲ್ಲಿ ಇರುವುದನ್ನು ಯೂದನು ಕಂಡು, ತನ್ನ ಕೆಚ್ಚೆದೆಯ ವೀರರೊಂದಿಗೆ ಅತ್ತ ತಿರುಗಿದನು.
15 : ಅವನು ಬಲಭಾಗದಲ್ಲಿದ್ದವರನ್ನು ಸೋಲಿಸಿ, ಅಜೋತ ಗುಡ್ಡದವರೆಗೂ ಅವರನ್ನು ಬೆನ್ನಟ್ಟಿದನು.
16 : ಬಲಭಾಗದ ಸೈನ್ಯವು ಸೋತು ಓಡುವುದನ್ನು ಎಡ ಭಾಗದಲ್ಲಿದ್ದವರು ಕಂಡು, ಯೂದನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು.
17 : ಅಲ್ಲಿ ಘನಘೋರ ಕಾಳಗ ನಡೆಯಿತು. ಇಬ್ಬಣಗಳಲ್ಲಿಯೂ ಅನೇಕರು ಗಾಯಗೊಂಡು ಮಡಿದರು.
18 : ಯೂದನು ಮಡಿದನು; ಉಳಿದವರು ಓಡಿ ಹೋದರು.
19 : ಯೋನಾತನನು ಹಾಗು ಸಿಮೋನರು ತಮ್ಮ ಸಹೋದರನಾದ ಯೂದನನ್ನು ತೆಗೆದುಕೊಂಡು ಹೋಗಿ, ಮೋದೀನದಲ್ಲಿದ್ದ ತಮ್ಮ ಪೂರ್ವಜರ ಸಮಾಧಿಯಲ್ಲಿ ಭೂಸ್ಥಾಪನೆ ಮಾಡಿ, ಅಲ್ಲಿ ಅವನಿಗಾಗಿ ಗೋಳಾಡಿದರು.
20 : ಇಸ್ರಯೇಲರೆಲ್ಲರೂ ಅವನಿಗಾಗಿ ಬಹಳವಾಗಿ ಅತ್ತು ಪ್ರಲಾಪಿಸಿದ್ದಲ್ಲದೆ,
21 : “ಇಸ್ರಯೇಲರ ರಕ್ಷಣಾವೀರನೇ, ನೀನು ಹೇಗೆ ತಾನೆ ಹತನಾದೆ!” ಎಂದು ಹೇಳುತ್ತಾ ಬಹುದಿನಗಳವರೆಗೆ ಗೋಳಾಡಿದರು.
22 : ಯೂದನ ಚರಿತ್ರೆ, ಅವನು ಮಾಡಿದ ಯುದ್ಧಗಳು, ಶೂರಕೃತ್ಯಗಳು ಹಾಗು ಅವನ ದೊಡ್ಡಸ್ತಿಕೆಯ ವಿಷಯ ಇವೆಲ್ಲವನ್ನು ಇಲ್ಲಿ ಬರೆಯಲಾಗಿಲ್ಲ; ಅವು ಅಪಾರವಾಗಿವೆ.
22 : ಅರಸ ಅಲೆಕ್ಸಾಂಡರನಿಗೆ ಯೋನಾತನನ ಬೆಂಬಲ - ದೆಮೆತ್ರಿಯನ ಪತ್ರ ದೆಮೆತ್ರಿಯನು ಈ ಸುದ್ದಿಯನ್ನು ಕೇಳಿ ವ್ಯಸನಗೊಂಡು,
23 : ಯೂದನ ಮರಣಾನಂತರ ಅಧರ್ಮಿಗಳು ಇಸ್ರಯೇಲಿನ ಎಲ್ಲ ಪ್ರದೇಶಗಳಲ್ಲಿಯು ತಲೆ ಎತ್ತಿದರು. ಅಕ್ರಮ ನಡೆಸುವವರೆಲ್ಲರು ಬೆಳಕಿಗೆ ಬಂದರು.
24 : ಆ ದಿನಗಳಲ್ಲಿ ದೊಡ್ಡ ಬರವೂ ಕಾಣಿಸಿಕೊಂಡದ್ದರಿಂದ ನಾಡೆಲ್ಲಾ ಅವರ ಕಡೆ ಸೇರಿತು.
25 : ಬಕ್ಕಿದಿಯನು ಅಧರ್ಮಿಗಳನ್ನು ಆಯ್ದುಕೊಂಡು ಅವರನ್ನು ನಾಡಿನ ಒಡೆಯರನ್ನಾಗಿ ನೇಮಿಸಿದನು.
26 : 6ಇವರು ಯೂದನ ಸ್ನೇಹಿತರನ್ನು ವಂಚಿಸಿ, ಅವರನ್ನು ಬಕ್ಕಿದಿಯನ ಬಳಿಗೆ ತಂದರು; ಅವನು ಅವರ ಮೇಲೆ ಸೇಡು ತೀರಿಸಿಕೊಂಡು ಅವರನ್ನು ಅತಿಯಾಗಿ ಅವಮಾನಪಡಿಸಿದನು.
27 : ಇಸ್ರಯೇಲರಲ್ಲಿ ಹಿಂಸಾಚಾರಗಳು ಹೆಚ್ಚಾದವು; ಪ್ರವಾದಿಗಳು ಮರೆಯಾದ ಕಾಲದಿಂದಲೂ ಅಂಥ ಅನಾಚಾರಗಳು ಕಂಡುಬಂದಿರಲಿಲ್ಲ.
28 : ಹೀಗಿರಲಾಗಿ, ಯೂದನ ಸ್ನೇಹಿತರೆಲ್ಲರೂ ಕೂಡಿಕೊಂಡು ಯೋನಾತನನಿಗೆ,
29 : “ನಿನ್ನ ಅಣ್ಣ ಯೂದನು ಕಾಲವಾದಂದಿನಿಂದ ನಮ್ಮ ಶತ್ರುಗಳ ವಿರುದ್ಧ, ಬಕ್ಕಿದಿಯನ ವಿರುದ್ಧ ಹಾಗು ನಮ್ಮನ್ನು ಹಗೆಮಾಡುತ್ತಿರುವ ನಮ್ಮ ಜನಾಂಗದವರ ವಿರುದ್ಧ ಹೋರಾಡಲು ಅವನಂಥವರು ನಮ್ಮಲ್ಲಿ ಯಾರೂ ಇಲ್ಲ;
30 : ಆದುದರಿಂದ ನಮ್ಮ ಯುದ್ಧಗಳನ್ನು ನಡೆಸುವಂತೆ ನಿನ್ನನ್ನು ಇಂದು ಅವನ ಸ್ಥಳದಲ್ಲಿ ನಮ್ಮ ಒಡೆಯನನ್ನಾಗಿಯೂ ನಾಯಕನನ್ನಾಗಿಯೂ ನಾವು ಆಯ್ದುಕೊಂಡಿದ್ದೇವೆ,” ಎಂದು ಹೇಳಿದರು.
31 : ಅಂದು ಯೋನಾತನನು ರಾಜ್ಯದಾಡಳಿತವನ್ನು ವಹಿಸಿಕೊಂಡು ತನ್ನ ಅಣ್ಣ ಯೂದನ ಸ್ಥಾನದಲ್ಲಿ ನಿಂತನು.
32 : ಬಕ್ಕಿದಿಯನು ಇದನ್ನರಿತು ಯೋನಾತನನನ್ನು ಸಂಹರಿಸಲು ಯತ್ನಿಸಿದನು.
33 : ಈ ಸಂಗತಿ ಯೋನಾತನನಿಗೂ ಅವನ ಅಣ್ಣ ಸಿಮೋನನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಿಳಿದಾಗ, ಅವರು ತೆಕೋವ ಅಡವಿಗೆ ಓಡಿಹೋಗಿ, ಅಸ್ಪರ್ ಕೊಳದ ನೀರಿನ ಬಳಿಯಲ್ಲಿ ಬಿಡಾರ ಮಾಡಿದರು.
34 : ಬಕ್ಕಿದಿಯನ್ನು, ಸಬ್ಬತ್‍ದಿನದಲ್ಲೇ ಇದನ್ನರಿತು, ಅವನೂ ಅವನ ಸೈನ್ಯವೆಲ್ಲವೂ ಹೊರಟು ಬಂದು ಜೋರ್ಡನ್ ನದಿಯನ್ನು ದಾಟಿದರು.
35 : ಯೋನಾತನನು ತಮ್ಮಲ್ಲಿ ಹೆಚ್ಚಾಗಿದ್ದ ಗಂಟು ಮೂಟೆಗಳನ್ನೆಲ್ಲಾ ತನ್ನ ಸ್ನೇಹಿತರಾಗಿದ್ದ ನಬಾಯೋತಿನವರು ತಮ್ಮಲ್ಲಿ ಇಟ್ಟುಕೊಳ್ಳುವಂತೆ ಬಿನ್ನವಿಸುವುದಕ್ಕಾಗಿ ಜನಸ್ತೋಮದ ನಾಯಕನಾಗಿದ್ದ ತನ್ನ ಸಹೋದರನನ್ನು ಅವರ ಬಳಿಗೆ ಕಳುಹಿಸಿದನು.
36 : ಆದರೆ ಯಂಬ್ರಿಯ ಮಕ್ಕಳು ಮೇದೆಬಾದಿಂದ ಹೊರಬಂದು, ಯೊವಾನ್ನನನ್ನು ಹಿಡಿದು ಅವನಲ್ಲಿದ್ದುದೆಲ್ಲವನ್ನೂ ಕಿತ್ತುಕೊಂಡು ಹೋದರು.
37 : ಇದಾದ ಬಳಿಕ ಯಂಬ್ರಿಯನ ಮಕ್ಕಳು ದೊಡ್ಡ ಮದುವೆಯ ಸಮಾರಂಭದಲ್ಲಿ ಇದ್ದಾರೆಂದು ಹಾಗು ಕಾನಾನಿನ ಪ್ರಮುಖರಲ್ಲಿಯ ಒಬ್ಬನ ಮಗಳಾದ ವಧುವನ್ನು ನದಬಾತಿನಿಂದ ದೊಡ್ಡ ಪರಿವಾರದೊಡನೆ ತರುತ್ತಿದ್ದಾರೆ ಎಂದು ಯೋನಾತನನಿಗೂ ಅವನ ಅಣ್ಣ ಸಿಮೋನನಿಗೂ ಸುದ್ದಿ ತರಲಾಯಿತು.
38 : ಅವರು ತಮ್ಮ ತಮ್ಮನಾದ ಯೋವಾನ್ನನನ್ನು ಸ್ಮರಿಸಿಕೊಂಡು ಹೋಗಿ ಗುಡ್ಡದ ಮರೆಯಲ್ಲಿ ಅಡಗಿಕೊಂಡರು.
39 : ಅವರು ಕಣ್ಣೆತ್ತಿ ನೋಡಿದಾಗ, ಅಗೋ, ದೊಡ್ಡ ದಿಬ್ಬಣವನ್ನೂ ಬಹಳ ಸರಕನ್ನೂ ಕಂಡರು. ವರನು ತನ್ನ ಬಂಧುಮಿತ್ರರೊಡನೆ ಆ ಕಡೆಯವರನ್ನು ಎದುರುಗೊಳ್ಳಲಿಕ್ಕೆ ದಮ್ಮಡಿಗಳೊಂದಿಗೂ ಓಲಗದವರೊಂದಿಗೂ ಅನೇಕ ಆಯುಧಗಳೊಂದಿಗೂ ಬಂದನು.
40 : ಅವರು ತಾವು ಅಡಗಿಕೊಂಡಿದ್ದ ಸ್ಥಳದಿಂದ ಎದ್ದು ಬಂದು ಅವರನ್ನು ಸಂಹರಿಸಿದರು. ಅವರಲ್ಲಿ ಅನೇಕರು ಗಾಯಗೊಂಡು ಮರಣೋನ್ಮುಖಿಗಳಾಗಿ ಬಿದ್ದರು; ಉಳಿದವರು ಗುಡ್ಡಕ್ಕೆ ಓಡಿಹೋದರು. ಅವರ ವಸ್ತುಒಡವೆಗಳೆಲ್ಲಾ ಇವರ ಹಸ್ತಗತವಾದವು.
41 : ಮದುವೆಯು ಗೋಳಾಟವಾಗಿ ಮಾರ್ಪಟ್ಟಿತು. ಓಲಗನಾದವು ಆರ್ತನಾದವಾಯಿತು.
42 : ಅವರು ತಮ್ಮ ತಮ್ಮನ ನೆತ್ತರಕ್ಕೆ ಪೂರ್ತಿ ಸೇಡು ತೀರಿಸಿಕೊಂಡು ಜೋರ್ಡನ್ ನದಿಯ ಜವುಳಿನ ಕಡೆಗೆ ಹಿಂದಿರುಗಿದರು.
43 : ಬಕ್ಕಿದಿಯನು ಇದನ್ನು ಕೇಳಿ, ಸಬ್ಬತ್ ದಿನ ದೊಡ್ಡ ಸೈನ್ಯದೊಂದಿಗೆ ಜೋರ್ಡನ್ನಿನ ತೀರಕ್ಕೆ ಬಂದನು.
44 : ಯೋನಾತನನು ತನ್ನ ಸಂಗಡಿಗರಿಗೆ, “ನಾವು ಎದ್ದು ನಮ್ಮ ಪ್ರಾಣ ರಕ್ಷಣೆಗಾಗಿ ಯುದ್ಧಮಾಡೋಣ; ಏಕೆಂದರೆ ಇಂದಿನ ದಿನ ನಿನ್ನೆ ಮೊನ್ನೆಯಂತಿಲ್ಲ.
45 : ಯುದ್ಧವು ಮುಂದೆಯೂ ಇದೆ, ಹಿಂದೆಯೂ ಇದೆ. ಮೇಲಾಗಿ ಜೋರ್ಡನ್ ನದಿಯ ನೀರು ಈ ಕಡೆಗೂ ಇದೆ, ಆ ಕಡೆಗೂ ಇದೆ. ಇದು ಜವಳು, ಕಾಡು. ಆದುದರಿಂದ ಬೇರೆ ಕಡೆಗೆ ತಿರುಗಿಕೊಳ್ಳಲು ಇಲ್ಲಿ ಸ್ಥಳವಿಲ್ಲ.
46 : ನಿಮ್ಮ ಶತ್ರುಗಳ ಕೈಯಿಂದ ಬಿಡಿಸಬೇಕೆಂದು ದೇವರಿಗೆ ಮೊರೆಯಿಡಿ,” ಎಂದು ಹೇಳಿದನು.
47 : ಸಮರವು ಆರಂಭವಾಯಿತು. ಯೋನಾತನನು ಬಕ್ಕಿದಿಯನನ್ನು ಹೊಡೆಯುವುದಕ್ಕೆ ಅವನ ಮೇಲೆ ಬೀಳಲು ಅವನು ಹಿಂದೆ ಸರಿದು ಹೋದನು.
48 : ಆಗ ಯೋನಾತನನೂ ಅವನ ಸಂಗಡಿಗರೂ ಜೋರ್ಡನ್ ನದಿಯಲ್ಲಿ ಧುಮುಕಿ ಈಸಿಕೊಂಡು ಆಚೆ ದಡಕ್ಕೆ ಹೋದರು. ಅವರಾದರೋ ಇವರನ್ನು ಬೆನ್ನಟ್ಟಿಕೊಂಡು ಜೋರ್ಡನ್ ನದಿಯನ್ನು ದಾಟಿ ಇವರ ಮೇಲೆ ಬರಲಿಲ್ಲ.
49 : ಅಂದು ಬಕ್ಕಿದಿಯನ ಸೈನ್ಯದಲ್ಲಿ ಸುಮಾರು ಒಂದು ಸಾವಿರ ಜನರು ಸತ್ತುಬಿದ್ದರು.
50 : ಬಕ್ಕಿದಿಯನು ಜೆರುಸಲೇಮಿಗೆ ಹಿಂದಿರುಗಿದನು. ಜುದೇಯದೊಳಗಿದ್ದ ಜೆರಿಕೋವಿನ ಕೋಟೆಗು ಎಮ್ಮಾವು, ಬೇತ್‍ಹೋರೋನ್, ಬೇತೇಲ್, ತಿಮ್ನಾ, ಫರಾತೋನ್ ಮತ್ತು ತೇಫೋನ್ ಎಂಬ ಊರುಗಳಿಗೂ ಎತ್ತರವಾದ ಗೋಡೆಗಳನ್ನು ಕಟ್ಟಿಸಿದನು; ಬಾಗಿಲು ಅಗುಳಿಗಳನ್ನು ಇಡಿಸಿ, ಅವುಗಳನ್ನು ಭದ್ರಪಡಿಸಿದನು.
51 : ಅಲ್ಲಿ ಇಸ್ರಯೇಲರನ್ನು ಕಾಡುವುದಕ್ಕಾಗಿ ಅವನು ಕಾವಲುದಳವನ್ನು ಇರಿಸಿದನು.
52 : ಬೇತ್ಸೂರ್, ಗಜರಾಗಳನ್ನೂ ಜೆರುಸಲೇಮಿನ ಕೋಟೆಯನ್ನೂ ಭದ್ರಗೊಳಿಸಿ, ಅವುಗಳಲ್ಲಿ ಸೈನಿಕರನ್ನು ಇರಿಸಿದ್ದಲ್ಲದೆ ಆಹಾರವನ್ನೂ ಸಂಗ್ರಹಿಸಿ ಇಟ್ಟನು.
53 : ಇದಲ್ಲದೆ ಆ ನಾಡಿನ ಪ್ರಮುಖರ ಮಕ್ಕಳನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಅವರನ್ನು ಜೆರುಸಲೇಮಿನ ಕೋಟೆಯೊಳಗೆ ಕಾವಲಿನಲ್ಲಿ ಇರಿಸಿದನು.
54 : 150ನೇ ವರ್ಷದ ಎರಡನೆಯ ತಿಂಗಳು ಅಲ್ಕಿಮನು ಪವಿತ್ರಸ್ಥಾನದ ಒಳಗಿನ ಪ್ರಾಕಾರದ ಗೋಡೆಯನ್ನು ಕೆಡವಿಹಾಕಲು ಅಪ್ಪಣೆಯನ್ನಿತ್ತು ಪ್ರವಾದಿಗಳು ಮಾಡಿಸಿದ್ದ ಕೆಲಸಗಳನ್ನು ಕೆಡವಿಸಿದನು.
55 : ಅವನು ಇವುಗಳನ್ನು ಕೆಡವುದಕ್ಕೆ ಆರಂಭಿಸಿದಾಗಲೇ ಅವನಿಗೆ ಪೆಟ್ಟುಬಡಿಯಿತು. ಅವನ ಕೆಲಸಕ್ಕೆ ಅಡ್ಡಿಯಾಯಿತು; ಅವನ ಬಾಯಿ ನಿಂತುಹೋಯಿತು; ಅವನಿಗೆ ಪಾಶ್ರ್ವವಾಯು ಬಡಿದು ಮಾತಾಡಲಾರದವನಾದನು; ಆದುದರಿಂದ ತನ್ನ ಮನೆಯನ್ನು ಕುರಿತು ಯಾವ ಬಗೆಯ ವ್ಯವಸ್ಥೆಯನ್ನೂ ಮಾಡಲಾರದೆ ಹೋದನು.
56 : ಕಡೆಗೆ ಅಲ್ಕಿಮನು ಬಹು ಸಂಕಟಪಟ್ಟು ಕಾಲವಾದನು.
57 : ಅಲ್ಕಿಮನು ತೀರಿಕೊಂಡದ್ದನ್ನು ಬಕ್ಕಿದಿಯನು ಕಂಡು, ಅರಸನ ಬಳಿಗೆ ಹಿಂದಿರುಗಿದನು. ಅಂದಿನಿಂದ ಜುದೇಯ ನಾಡಿನಲ್ಲಿ ಎರಡು ವರ್ಷ ಸಮಾಧಾನವಿತ್ತು.
58 : ಆಗ ಅಧರ್ಮಿಗಳೆಲ್ಲರು ಸೇರಿ, “ಯೋನಾತನನೂ ಅವನ ಪಕ್ಷದವರೂ ನಿರ್ಭಯವಾಗಿ ಬದುಕುತ್ತಿದ್ದಾರೆ; ಆದುದರಿಂದ ನಾವೀಗ ಬಕ್ಕಿದಿಯನನ್ನು ಕರೆದುತರೋಣ; ಅವನು ಒಂದೇ ರಾತ್ರಿಯಲ್ಲಿ ಅವರನ್ನು ಸರೆಹಿಡಿದು ಬಿಡುವನು,” ಎಂದು ಆಲೋಚನೆಮಾಡಿಕೊಂಡರು.
59 : ಅವನ ಬಳಿಗೆ ಹೋಗಿ ಅವನೊಂದಿಗೆ ಮಾತಾಡಿದರು.
60 : ಅವನು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಹೊರಟು, ಯೋನಾತನನನ್ನೂ ಅವನ ಸಂಗಡ ಇದ್ದವರನ್ನೂ ಹಿಡಿದುಕೊಳ್ಳಬೇಕೆಂದು ಜುದೇಯದಲ್ಲಿದ್ದ ತನ್ನ ಸ್ನೇಹಿತರಿಗೆ ಗುಪ್ತವಾಗಿ ಪತ್ರಗಳನ್ನು ಕಳುಹಿಸಿದನು. ಆದರೆ ಗುಟ್ಟುರಟ್ಟಾಗಿ ಹೋಯಿತು. ಆದುದರಿಂದ ಇವರ ಆಟ ನಡೆಯಲಿಲ್ಲ.
61 : ಯೋನಾತನನ ಕಡೆಯವರು ಈ ದುಷ್ಟತನಕ್ಕೆ ಕಾರಣರಾದ ಆ ನಾಡಿನ ಸುಮಾರು ಐವತ್ತು ಜನರನ್ನು ಸೆರೆಹಿಡಿದು ಸಂಹರಿಸಿದರು.
62 : ತರುವಾಯ ಯೋನಾತನ, ಸಿಮೋನ ಮತ್ತು ಅವನ ಸಂಗಡಿಗರು ಅಲ್ಲಿಂದ ಹೊರಬಿದ್ದು ಅರಣ್ಯದಲ್ಲಿದ್ದ ಬೇತ್ಬಾಸಿಗೆ ಹೋಗಿ, ಕೆಡವಿ ಹಾಕಲಾಗಿದ್ದ ಅದರ ಗೋಡೆಗಳನ್ನು ತಿರುಗಿ ಕಟ್ಟಿ ಅವನ್ನು ಬಲಪಡಿಸಿದರು.
63 : ಬಕ್ಕಿದಿಯನು ಇದನ್ನು ಅರಿತು ತನ್ನ ಸಮೂಹವನ್ನೆಲ್ಲಾ ಕೂಡಿಸಿಕೊಂಡು, ಜುದೇಯದಲ್ಲಿದ್ದವರಿಗೆ ಸುದ್ದಿಯನ್ನು ತಿಳಿಸಿದನು.
64 : ಬೇತ್ಬಾಸಿಗೆ ಹೋಗಿ, ಅದರ ಎದುರಾಗಿ ಬೀಡುಬಿಟ್ಟುಕೊಂಡು ಅನೇಕ ದಿನಗಳವರೆಗೆ ಯುದ್ಧಮಾಡಿದನು ಹಾಗು ಯುದ್ಧ ಯಂತ್ರಗಳನ್ನು ಏರ್ಪಡಿಸಿದನು.
65 : ಯೋನಾತನನು ತನ್ನ ಅಣ್ಣ ಸಿಮೋನನನ್ನು ಪಟ್ಟಣದೊಳಗೆ ಬಿಟ್ಟು, ತಾನು ಕೆಲವು ಜನರೊಂದಿಗೆ ಬಯಲಿಗೆ ಬಂದನು.
66 : ಒದೋಮೇರಾನನ್ನೂ ಅವನ ಸಹೋದರರನ್ನೂ ಫಾಸಿರೋನನ ಮಕ್ಕಳನ್ನೂ ಅವರ ಗುಡಾರಗಳಲ್ಲಿಯೇ ಹೊಡೆದನು.
67 : ಆಮೇಲೆ ಈ ಜನರೂ ಆತನ ತಂಡಗಳಿಗೆ ಸೇರಿ ಕಾದಾಡತೊಡಗಿದರು. ಇತ್ತ ಸಿಮೋನನೂ ಅವನ ಸಂಗಡಿಗರೂ ಪಟ್ಟಣದ ಹೊರಗೆ ಬಂದು ಯುದ್ಧ ಯಂತ್ರಗಳಿಗೆ ಬೆಂಕಿಹಚ್ಚಿ ಬಕ್ಕಿದಿಯನೊಂದಿಗೆ ಯುದ್ಧಹೂಡಿದರು.
68 : ಅವನು ಅಪಜಯಹೊಂದಿದನು. ಅವರು ಅವನನ್ನು ನಜ್ಜು ಗುಜ್ಜು ಮಾಡಿದರು; ಅವನ ಆಲೋಚನೆಯೂ ದಾಳಿಯೂ ವ್ಯರ್ಥವಾದುವು.
69 : ಅವನು ತಮ್ಮ ನಾಡಿಗೆ ಬರಬೇಕೆಂದು ಸಲಹೆಕೊಟ್ಟ ಅಧರ್ಮಿಗಳ ಮೇಲೆ ಉರಿದೆದ್ದು ಅವರಲ್ಲಿ ಅನೇಕರನ್ನು ಸಂಹರಿಸಿದನು. ತರುವಾಯ ತನ್ನ ದೇಶಕ್ಕೆ ಹಿಂದಿರುಗುವ ಆಲೋಚನೆ ಮಾಡಿದನು.
70 : ಯೋನಾತನನು ಇದನ್ನರಿತು ಅವನ ಕಡೆಗೆ ರಾಯಭಾರಿಗಳನ್ನು ಕಳುಹಿಸಿ, ಶಾಂತಿಸಂಧಾನ ಮಾಡಿಕೊಂಡು ಸೆರೆಯಾಳುಗಳನ್ನು ಹಿಂದಿರುಗಿಸಬೇಕೆಂದು ಹೇಳಿಸಿದನು.
71 : ಅವನು ಅದಕ್ಕೆ ಒಪ್ಪಿಕೊಂಡು ಅವನು ಹೇಳಿಕಳುಹಿಸಿದಂತೆ ಮಾಡಿದುದಲ್ಲದೆ ತನ್ನ ಜೀವಮಾನಕಾಲವೆಲ್ಲಾ ಯಾವ ಹಾನಿಯನ್ನು ಮಾಡುವುದಿಲ್ಲವೆಂದು ಮಾತುಕೊಟ್ಟನು.
72 : ಬಕ್ಕಿದಿಯನು ಈ ಮೊದಲು ಜುದೇಯ ಪ್ರಾಂತ್ಯದಲ್ಲಿ ಸೆರೆಹಿಡಿದವರನ್ನು ಹಿಂದಕ್ಕೆ ಕಳುಹಿಸಿ ತನ್ನ ನಾಡಿಗೆ ಹೋದನು. ಅಂದಿನಿಂದ ಅವನು ಅವರ ಗಡಿಯ ಕಡೆಗೆ ಮರಳಿ ಸುಳಿಯಲೇ ಇಲ್ಲ.
73 : ಇಸ್ರಯೇಲಿನಲ್ಲಿ ಯುದ್ಧವು ನಿಂತು ಹೋಯಿತು. ಯೋನಾತನನು ಮಿಕ್ಮಾಷಿನಲ್ಲಿ ನೆಲಸಿದನು. ಅವನು ಜನಾಂಗವನ್ನು ಆಳತೊಡಗಿ ಇಸ್ರಯೇಲಿನಲ್ಲಿ ಅಧರ್ಮಿಗಳ ಹೆಸರೇ ಉಳಿಯದಂತೆ ಮಾಡಿದನು.

· © 2017 kannadacatholicbible.org Privacy Policy