Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ರೋಮನರೊಂದಿಗೆ ಒಪ್ಪಂದ ಯೂದನು ರೋಮನರ ಕೀರ್ತಿಯನ್ನು ಕೇಳಿದ್ದನು. ಅವರು ಪರಾಕ್ರಮಿಗಳಾಗಿರುವುದಲ್ಲದೆ ತಮ್ಮನ್ನು ಕೂಡಿಕೊಳ್ಳುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ; ತಮ್ಮ ಬಳಿಗೆ ಬರುವವರೊಂದಿಗೆ ಸ್ನೇಹ ಬೆಳೆಸುತ್ತಾರೆ; ಎಂದು ಕೇಳಿದ್ದನು.
2 : ಅಲ್ಲದೆ ಅವರು ಬಲಾಢ್ಯರು; ಗಾಲ್ ದೇಶದವರೊಡನೆ ಯುದ್ಧಗಳನ್ನು ನಡೆಸುತ್ತಿದ್ದರು ಎಂದೂ ಅವರ ಸಾಹಸಕಾರ್ಯಗಳ ಬಗ್ಗೆ ತಿಳಿದುಕೊಂಡನು. ಆ ದೇಶದವರನ್ನು ಜಯಿಸಿ, ತಮಗೆ ಕಪ್ಪ ಕೊಡುವವರನ್ನಾಗಿ ಮಾಡಿಕೊಂಡರೆಂದೂ ಅವನಿಗೆ ತಿಳಿದುಬಂದಿತು.
3 : ಸ್ಪೇನ್ ದೇಶದಲ್ಲಿಯೂ ಅವರು ಮಾಡಿದ ಕಾರ್ಯಗಳು ಅಂದರೆ, ಅಲ್ಲಿರುವ ಬೆಳ್ಳಿಬಂಗಾರದ ಗಣಿಗಳನ್ನು ಹೇಗೆ ಅವರು ತಮ್ಮ ಸ್ವಾಧೀನಮಾಡಿಕೊಂಡರು;
4 : ಆ ದೇಶವು ತಮ್ಮ ದೇಶದಿಂದ ಬಹುದೂರ ಆಗಿದ್ದರೂ ಅವರು ಹೇಗೆ ತಮ್ಮ ಸಂಕಲ್ಪದಿಂದಲೂ ಉತ್ಸಾಹದಿಂದಲೂ ಅದನ್ನು ತಮ್ಮ ವಶಪಡಿಸಿಕೊಂಡರು, ಧರೆಯ ರಾಜರುಗಳನ್ನು ಹೇಗೆ ಅವರು ಸದೆಬಡಿದು ನಾಶವಾಗುವ ಮಟ್ಟಿಗೆ ಸೋಲಿಸಿದರೆಂದು, ಉಳಿದವರು ಹೇಗೆ ಅವರಿಗೆ ಕಪ್ಪ ಕೊಡುತ್ತಿರುವರು ಎಂದೆಲ್ಲಾ ತಿಳಿದು ಬಂದಿತು.
5 : ಇದಲ್ಲದೆ, ಫಿಲಿಪ್ಪನನ್ನೂ ಮ್ಯಾಸಿಡೋನಿಯದ ರಾಜನಾದ ಪರ್ಸಿಯಸ್ಸನನ್ನೂ ತಮ್ಮ ಮೇಲೆ ಕೈಯೆತ್ತಿದವರನ್ನೂ ಹೇಗೆ ಅವರು ಯುದ್ಧದಲ್ಲಿ ಸೋಲಿಸಿ ನಾಶಗೊಳಿಸಿದರೆಂದೂ ತಿಳಿದುಕೊಂಡನು.
6 : ಮೇಲಾಗಿ ಏಷ್ಯಾದ ಮಹಾಪ್ರಭುವಾಗಿದ್ದ ಅಂತಿಯೋಕನು ಒಂದುನೂರ ಇಪ್ಪತ್ತು ಆನೆ, ಅಶ್ವ ಹಾಗು ರಥಗಳ ಸಮೇತವಾಗಿ ದೊಡ್ಡ ಸೈನ್ಯದೊಂದಿಗೆ ತಮ್ಮ ಮೇಲೆ ಯುದ್ಧಕ್ಕೆ ಬಂದಾಗ
7 : ಹೇಗೆ ಅವನನ್ನು ಸೋಲಿಸಿ ಸಜೀವವಾಗಿ ಸೆರೆಹಿಡಿದು ಅವನೂ ಅವನ ತರುವಾಯ ಆಳುವವರೂ ಅತಿಹೆಚ್ಚು ಕಪ್ಪಕೊಡುವಂತೆ ಮಾಡಿದರು;
8 : ಅದಲ್ಲದೆ, ಒತ್ತೆಯಾಳುಗಳಾಗಿ ಕೆಲವರನ್ನೂ ಭೂಮಿಯನ್ನೂ ಅಂದರೆ ಇಂಡಿಯಾ, ಮೇದ್ಯ, ಲುದ್ಯ ಮತ್ತು ಅವರ ಒಳ್ಳೊಳ್ಳೇ ಪ್ರದೇಶಗಳನ್ನೂ ಕೊಡುವಂತೆ ಮಾಡಿ, ಅವುಗಳನ್ನು ತೆಗೆದುಕೊಂಡು ಅರಸ ಯುಮೆನೀಸನಿಗೆ ಹೇಗೆ ಕೊಟ್ಟರೆಂದೂ ತಿಳಿದು ಬಂದಿತು.
9 : ಅಷ್ಟು ಮಾತ್ರವಲ್ಲ, ಗ್ರೀಸಿನವರು ಒಳಸಂಚು ಮಾಡಿಕೊಂಡು ತಮ್ಮನ್ನು ನಾಶಗೊಳಿಸಲು ಇದ್ದಾರೆಂದು ತಿಳಿದಾಗ, ತಮ್ಮ ದಳವಾಯಿ ಒಬ್ಬನನ್ನು ಅವರ ಮೇಲೆ ಯುದ್ಧಮಾಡಲು ಕಳುಹಿಸಿದರು;
10 : ಅವರಲ್ಲನೇಕರು ಗಾಯಗೊಂಡು ಮರಣೋಣ್ಮುಖಿಗಳಾಗಿ ಬಿದ್ದುಕೊಳ್ಳುವಂತೆ ಮಾಡಿದುದಲ್ಲದೆ ಅವರ ಮಡದಿಮಕ್ಕಳನ್ನು ಸೆರೆಹಿಡಿದುಕೊಂಡು ಅವರನ್ನು ಸುಲಿಗೆಮಾಡಿದರು; ಅವರ ಪ್ರಾಂತ್ಯಗಳನ್ನು ಗೆದ್ದು, ಅವರ ದುರ್ಗಗಳನ್ನು ಕೆಡವಿದರು; ಅವರನ್ನು ಸೂರೆಗೈದು ಇಂದಿನವರೆಗೂ ಹೇಗೆ ದಾಸತ್ವದಲ್ಲಿಟ್ಟಿದ್ದಾರೆ ಎಂದೂ ಅವನಿಗೆ ತಿಳಿದುಬಂದಿತು.
11 : ಮೇಲಾಗಿ, ಉಳಿದ ರಾಜ್ಯಗಳ ದ್ವೀಪನಿವಾಸಿಗಳಲ್ಲಿ ಯಾರು ಯಾರು ಅವರ ಮೇಲೇರಿ ಬಂದರೋ ಅವರೆಲ್ಲರನ್ನೂ ಸೋಲಿಸಿ ಹೇಗೆ ತಮ್ಮ ದಾಸರನ್ನಾಗಿ ಮಾಡಿಕೊಂಡರಾದರೂ,
12 : ತಮ್ಮ ಮಿತ್ರರೊಂದಿಗೂ ತಮ್ಮ ಆಶ್ರಯದಲ್ಲಿದ್ದವರೊಂದಿಗೂ ಹೇಗೆ ಪ್ರೇಮದಿಂದ ವರ್ತಿಸುತ್ತಾ ಬಂದಿದ್ದಾರೆಂದೂ, ದೂರದಲ್ಲಿಯೂ ಸಮೀಪದಲ್ಲಿಯೂ ಇರುವ ರಾಜ್ಯಗಳನ್ನು ಹೇಗೆ ತಮ್ಮ ವಶಕ್ಕೆ ತೆಗೆದುಕೊಂಡರೆಂದೂ ಅವರ ಕೀರ್ತಿಯನ್ನು ಕೇಳಿದವರೆಲ್ಲರೂ ಅವರಿಗೆ ಹೇಗೆ ಭಯಪಡುತ್ತಿದ್ದಾರೆಂದೂ ತಿಳಿದುಬಂದಿತು.
13 : ಇದೂ ಅಲ್ಲದೆ, ಅವರು ಯಾರಿಗೆ ನೆರವಾಗಿ ಅರಸೊತ್ತಿಗೆಯನ್ನು ಕೊಡಲು ಇಷ್ಟಪಡುವರೋ ಅವರನ್ನು ಅರಸರನ್ನಾಗಿ ಮಾಡುವರೆಂದೂ ತಮಗೆ ಇಷ್ಟವಿಲ್ಲದವರನ್ನು ತಳ್ಳಿಹಾಕುವರೆಂದೂ ಇದರಿಂದ ಅವರು ಬಹು ಉನ್ನತಿಗೇರಿರುವರೆಂದೂ
14 : ಇಷ್ಟೆಲ್ಲ ಮಾಡಿದರೂ ಅವರಲ್ಲಿ ಯಾರೂ ಎಂದೂ ಕಿರೀಟವನ್ನು ಧರಿಸಿಕೊಳ್ಳಲಿಲ್ಲವೆಂದೂ, ತಮ್ಮ ದೊಡ್ಡಸ್ತಿಕೆಯನ್ನು ತೋರಿಸುವುದಕ್ಕೆ ಸಕಲಾತಿಯನ್ನು ತೊಡಲಿಲ್ಲವೆಂದೂ ತಿಳಿದುಬಂದಿತು.
15 : ಮೇಲಾಗಿ, ಅವರು ಒಂದು ಶಾಸನ ಸಭಾಮಂದಿರವನ್ನು ಮಾಡಿಕೊಂಡಿರುವರೆಂದೂ, ದಿನದಿನವೂ ಮುನ್ನೂರ ಇಪ್ಪತ್ತು ಜನ ಅಲ್ಲಿ ಕೂಡಿ ಬಂದು ಜನಸಮೂಹದ ಪರವಾಗಿ ಆಲೋಚನೆ ಮಾಡಿ ಅವರ ಹಿತಕ್ಕಾಗಿ ವ್ಯವಸ್ಥೆ ಮಾಡುವರೆಂದೂ
16 : ತಮ್ಮನ್ನು ಆಳುವಂತೆಯೂ ತಮ್ಮ ದೇಶದ ಮೇಲೆಲ್ಲಾ ಅಧಿಪತಿಯಾಗಿರುವಂತೆಯೂ ಪ್ರತಿವರ್ಷ ಅವರು ಒಬ್ಬೊಬ್ಬ ಮನುಷ್ಯನನ್ನು ಇಟ್ಟುಕೊಂಡು ಎಲ್ಲರೂ ಆತನ ಮಾತಿನಂತೆ ನಡೆದುಕೊಳ್ಳುವರೆಂದೂ, ಅವರಲ್ಲಿ ಯಾವ ದ್ವೇಷಾಸೂಯೆಗಳೂ ಇರುವುದಿಲ್ಲವೆಂದೂ ಅವನಿಗೆ ತಿಳಿದುಬಂದಿತು.
17 : ಯೂದನು ಇದನ್ನೆಲ್ಲಾ ಅರಿತು ಹಕೋಚನ ಮೊಮ್ಮಗನೂ ಯೋವಾನನ ಮಗನೂ ಆದ ಯುಪೊಲಿಮನನ್ನು ಮತ್ತು ಎಲ್ಲಾಜಾರನ ಮಗ ಜೋಸೆಫನನ್ನು ಆಯ್ದುಕೊಂಡು ರೋಮನರೊಂದಿಗೆ ಸ್ನೇಹದ ಮತ್ತು ಒಕ್ಕೂಟದ ಒಪ್ಪಂದವನ್ನು ಮಾಡಿಕೊಳ್ಳುವುದಕ್ಕಾಗಿ ಅವರನು ರೋಮ್‍ನಗರಕ್ಕೆ ಕಳುಹಿಸಿದನು.
18 : ಇದಲ್ಲದೆ, ತಮ್ಮ ಮೇಲೆ ಹೊರಿಸಲಾಗಿರುವ ನೊಗವನ್ನು ತಮ್ಮಿಂದ ತೆಗೆಸಿಹಾಕಬೇಕೆಂದು ಹೇಳಿಕಳುಹಿಸಿದನು. ಏಕೆಂದರೆ ಗ್ರೀಕ್ ಸಾಮ್ರಾಜ್ಯವು ಇಸ್ರಯೇಲರನ್ನು ದಾಸತ್ವದಲ್ಲಿಟ್ಟಿದೆ ಎಂಬುದನ್ನು ಅವರು ಮನಗಂಡಿದ್ದರು.
19 : ಅವರಿಬ್ಬರು ರೋಮಿಗೆ ಹೋದರು. ಪ್ರಯಾಣವು ಸುದೀರ್ಘವಾಗಿತ್ತು. ಅಲ್ಲಿ ಅವರು ಶಾಸನಾ ಸಭಾಮಂದಿರವನ್ನು ಸೇರಿ, ಹೀಗೆಂದು ಸಂಬೋಧಿಸಿದರು:
20 : “ಮಕ್ಕಬಿ ಎಂದು ಕರೆಯಲಾಗುವ ಯೂದನು, ಅವನ ಸಹೋದರರು ಹಾಗು ಯೆಹೂದ ಜನಸಮೂಹವು ನಿಮ್ಮೊಂದಿಗೆ ಸಹಕಾರದ ಒಪ್ಪಂದವನ್ನೂ ಸಂಧಾನವನ್ನೂ ಮಾಡಿಕೊಳ್ಳುವಂತೆಯೂ ನಾವು ನಿಮ್ಮ ಸಹಕಾರಿಗಳೆಂದೂ ಸ್ನೇಹಿತರೆಂದೂ ಲಿಖಿತವಾಗುವಂತೆಯೂ ನಮ್ಮನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ.”
21 : ಈ ಸಲಹೆ ಆ ರೋಮನರ ದೃಷ್ಟಿಯಲ್ಲಿ ಸಮಂಜಸವಾಗಿ ಕಂಡಿತು. 22ಅವರು ತಾಮ್ರಫಲಕದ ಮೇಲೆ ಮರುತ್ತರ ಬರೆದು ಇದು ಸಂಧಾನದ ಮತ್ತು ಪರಸ್ಪರ ಸಹಕಾರದ ಗುರುತಾಗಿ ಅವರ ಬಳಿಯಲ್ಲಿರಲೆಂದು ಜೆರುಸಲೇಮಿಗೆ ಕಳುಹಿಸಿದರು. ಆ ಲೇಖನದ ಪ್ರತಿ ಹೀಗಿದೆ:
22 : ಅವರು ತಾಮ್ರಫಲಕದ ಮೇಲೆ ಮರುತ್ತರ ಬರೆದು ಇದು ಸಂಧಾನದ ಮತ್ತು ಪರಸ್ಪರ ಸಹಕಾರದ ಗುರುತಾಗಿ ಅವರ ಬಳಿಯಲ್ಲಿರಲೆಂದು ಜೆರುಸಲೇಮಿಗೆ ಕಳುಹಿಸಿದರು. ಆ ಲೇಖನದ ಪ್ರತಿ ಹೀಗಿದೆ:
23 : “ರೋಮನರಿಗೂ ಯೆಹೂದ್ಯ ಜನಾಂಗಕ್ಕೂ ಸಾಗರದ ಮೇಲೂ ಭೂಮಿಯ ಮೇಲೂ ಎಂದೆಂದಿಗೂ ಶುಭವಿರಲಿ!
24 : ಖಡ್ಗವೂ ಶತ್ರುವೂ ಅವರಿಂದ ದೂರವಾಗಿರಲಿ. ಆದರೆ ಒಂದು ವೇಳೆ ಮೊದಲು ರೋಮನರ ಮೇಲಾಗಲಿ, ಅವರ ಸಾಮ್ರಾಜ್ಯದಲ್ಲಿರುವ ಅವರ ಮಿತ್ರ ಪಕ್ಷದವರ ಮೇಲಾಗಲಿ, ಯುದ್ಧ ಪ್ರಾಪ್ತವಾದಲ್ಲಿ
25 : ಯೆಹೂದ್ಯ ಜನಾಂಗವು ಸಂದರ್ಭಾನುಸಾರ ಪೂರ್ಣ ಮನಸ್ಸಿನಿಂದ ಮಿತ್ರರಂತೆ ಅವರಿಗೆ ನೆರವಾಗಬೇಕು.
26 : ಯುದ್ಧ ಹೂಡಿದವರಿಗೆ, ರೋಮಿನ ತೀರ್ಮಾನದ ಪ್ರಕಾರ, ಆಹಾರ, ಆಯುಧ, ಹಣ, ಹಡಗು ಇವುಗಳಾವುವನ್ನೂ ಒದಗಿಸಬಾರದು, ಕೊಡಿಸಲೂಬಾರದು; ಪ್ರತಿಯಾಗಿ ಏನನ್ನೂ ತೆಗೆದುಕೊಳ್ಳದೆ, ಅವರು ಈ ಒಪ್ಪಂದದಂತೆ ನಡೆದುಕೊಳ್ಳಬೇಕು.
27 : ಅದೇ ಮೇರೆಗೆ, ಒಂದು ವೇಳೆ ಯುದ್ಧವು ಯೆಹೂದ್ಯ ಜನಾಂಗದ ಮೇಲೆ ಬಂದುದ್ದಾದರೆ ರೋಮನರು ಮಿತ್ರ ಪಕ್ಷದವರಂತೆ ಸಂದರ್ಭಾನುಸಾರ ಪೂರ್ಣ ಮನಸ್ಸಿನಿಂದ ಅವರಿಗೆ ಸಹಾಯ ನೀಡುವರು.
28 : ಅವರ ಶತ್ರುಗಳ ಮಿತ್ರರಿಗೆ, ರೋಮಿನ ತೀರ್ಮಾನದ ಪ್ರಕಾರ, ಆಹಾರ, ಆಯುಧ, ಹಣ, ಹಡಗು ಇವುಗಳಾವುವನ್ನೂ ಕೊಡಲಾಗುವುದಿಲ್ಲ. ಅವರು ತಮ್ಮಲ್ಲಿ ಆದ ಒಪ್ಪಂದವನ್ನು ಮುಚ್ಚು ಮರೆ-ಮೋಸವಿಲ್ಲದೆ ಕಾಪಾಡಿಕೊಳ್ಳುವರು.
29 : ಈ ಮಾತುಗಳ ಪ್ರಕಾರ ರೋಮನರು ಯೆಹೂದ್ಯ ಜನರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
30 : ಆದರೆ ಇನ್ನು ಮುಂದಕ್ಕೆ ಒಂದು ಪಕ್ಷದವರು, ಇಲ್ಲವೆ ಇನ್ನೊಂದು ಪಕ್ಷದವರು, ಇದರಲ್ಲಿ ಏನನ್ನಾದರೂ ಕೂಡಿಸುವ, ಇಲ್ಲವೆ ಕಳೆಯುವ ಆಲೋಚನೆ ಮಾಡಿಕೊಂಡಲ್ಲಿ, ಅವರ ಇಷ್ಟಾನುಸಾರ ಹಾಗೆ ಮಾಡಬಹುದು. ಹೀಗೆ ಕೂಡಿಸಿದ್ದು ಕಳೆದದ್ದು ಸ್ಥಿರವಾಗಿರುವುದು.
31 : ದೆಮೆತ್ರಿಯನು ಅವರಿಗೆ ಕೊಡುತ್ತಿರುವ ಕಿರುಕುಳದ ಸಂಬಂಧವಾಗಿ ನಾವು ಅವನಿಗೆ, “ನಮ್ಮ ಮಿತ್ರರೂ ನಮ್ಮ ಪಕ್ಷದವರೂ ಆದ ಯೆಹೂದ್ಯರ ಮೇಲೆ ನಿನ್ನ ನೊಗವನ್ನೇಕೆ ಭಾರವಾಗಿರಿಸುವೆ?
32 : ಅವರು ಮತ್ತೆ ನಿನ್ನ ಮೇಲೆ ದೂರು ತಂದಲ್ಲಿ ಅವರ ನ್ಯಾಯವನ್ನು ಹಿಡಿದು ನಿನ್ನ ಸಂಗಡ ಸಾಗರದ ಮೇಲೆಯೂ ಯುದ್ಧ ಮಾಡುವೆವು ಎಂದು ಬರೆದಿದ್ದೇವೆ.”

· © 2017 kannadacatholicbible.org Privacy Policy