1 : 151ನೇ ವರ್ಷದಲ್ಲಿ ಸೆಲೂಕ್ಯನ ಮಗ ದೆಮೆತ್ರಿಯನು ರೋಮಿನಿಂದ ಬಂದು, ಕೆಲವು ಜನರ ಸಹಾಯದಿಂದ ಸಮುದ್ರತೀರದಲ್ಲಿದ್ದ ಒಂದು ಊರನ್ನು ಹಿಡಿದುಕೊಂಡು, ಅಲ್ಲಿ ಆಳಲಾರಂಭಿಸಿದನು.
2 : ಅವನು ತನ್ನ ಪೂರ್ವಜರ ರಾಜಧಾನಿಯಲ್ಲಿ ಕಾಲಿಟ್ಟಾಗ ಅವನ ಸೈನಿಕರು ಅಂತಿಯೋಕನನ್ನೂ ಲೂಸ್ಯನನ್ನೂ ಹಿಡಿದು ಅವನ ಬಳಿಗೆ ತರಬೇಕೆಂದಿದ್ದರು.
3 : ಈ ಸಂಗತಿ ಅವನಿಗೆ ತಿಳಿದುಬರಲು ಅವನು ಅವರಿಗೆ, “ಅವರ ಮುಖಗಳನ್ನು ನನಗೆ ತೋರಿಸಬೇಡಿ,” ಎಂದು ಹೇಳಿದನು.
4 : ಅವನ ಸೈನಿಕರು ಅವರನ್ನು ಕೊಂದುಹಾಕಿದರು. ಹೀಗೆ ದೆಮೆತ್ರಿಯನು ತನ್ನ ರಾಜ್ಯದ ಸಿಂಹಾಸನವನ್ನೇರಿದನು.
5 : ಆಗ ಇಸ್ರಯೇಲರಲ್ಲಿ ಪುಂಡರೂ ಅಧರ್ಮಿಗಳೂ ಆಗಿದ್ದವರೆಲ್ಲರೂ ಅವನ ಬಳಿಗೆ ಬಂದರು. ಮಹಾ ಯಾಜಕನಾಗಬೇಕೆಂದು ಹವಣಿಸುತ್ತಿದ್ದ ಅಲ್ಕಿಮನೆಂಬವನು ಅವರ ಮುಂದಾಳಾಗಿದ್ದನು.
6 : ಇವರು ಬಂದು ತಮ್ಮ ಜನಾಂಗದ ವಿಷಯದಲ್ಲಿ ಅರಸನ ಮುಂದೆ ದೂರು ಹೇಳಿದರು: “ಯೂದನೂ ಅವನ ಬಂಧುಗಳೂ ನಿಮ್ಮ ಸ್ನೇಹಿತರೆಲ್ಲರನ್ನೂ ನಾಶಮಾಡಿದ್ದಲ್ಲದೆ ನಮ್ಮನ್ನೂ ನಮ್ಮ ನಾಡಿನಿಂದ ಚದರಿಸಿಬಿಟ್ಟಿದ್ದಾರೆ.
7 : ಆದುದರಿಂದ ಯಾರ ಮೇಲೆ ನಿಮ್ಮ ನಂಬಿಕೆ ಇದೆಯೋ ಅಂತಹ ಒಬ್ಬನನ್ನು ನೀವೀಗ ಕಳುಹಿಸಿಕೊಡಿ; ನಮ್ಮಲ್ಲಿಯು ಹಾಗು ಅರಸನ ನಾಡಿನಲ್ಲಿಯು ಅವರು ಎಷ್ಟು ಹಾವಳಿ ಮಾಡಿದ್ದಾರೆ ಎಂಬುದನ್ನು ಮತ್ತು ಆ ನಿಮ್ಮ ಸ್ನೇಹಿತರನ್ನೂ ಅವರಿಗೆ ನೆರವಾದವರನ್ನೂ ಹೇಗೆ ದಂಡಿಸಿದ್ದಾರೆ ಎಂಬುದನ್ನು ಅವನೇ ನೋಡಲಿ,” ಎಂದರು.
8 : ಆಗ ಅರಸನು ಬಕ್ಕಿದಿಯ ಎಂಬವನನ್ನು ಈ ಕೆಲಸಕ್ಕಾಗಿ ಆಯ್ದುಕೊಂಡನು. ಇವನು ಅರಸನ ಸ್ನೇಹಿತರಲ್ಲೊಬ್ಬನು, ಹೊಳೆಯ ಆಚೆಯಲ್ಲಿದ್ದ ಪ್ರಾಂತ್ಯದ ಒಡೆಯ ಹಾಗು ಅರಸನ ರಾಜ್ಯದಲ್ಲಿ ಘನವಂತನೂ ರಾಜಭಕ್ತಿಯುಳ್ಳವನೂ ಆಗಿದ್ದನು.
9 : ಅರಸನು ಇವನನ್ನೂ, ಇವನೊಂದಿಗೆ ಆ ಧರ್ಮಭ್ರಷ್ಟ ಅಲ್ಕಿಮನನ್ನೂ ಕಳುಹಿಸಿದನು. ಅಲ್ಕಿಮನಿಗೆ ಪ್ರಧಾನ ಯಾಜಕತ್ವದ ಆಶ್ವಾಸನೆ ಕೊಟ್ಟು, ಇಸ್ರಯೇಲ್ ಜನರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಆಜ್ಞಾಪಿಸಿದ್ದನು.
10 : ಅಲ್ಕಿಮನು ಮಹಾಸೈನ್ಯದೊಂದಿಗೆ ಹೊರಟು ಜುದೇಯ ನಾಡಿಗೆ ಬಂದನು; ಒಳಗೆ ಮೋಸವಿಟ್ಟುಕೊಂಡು, ಯೂದನ ಮತ್ತು ಅವನ ಬಂಧುಗಳ ಬಳಿಗೆ ಸುದ್ಧಿಗಾರರ ಮೂಲಕ ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸಿದನು.
11 : ಆದರೆ ಅವರು ಅವನ ಮಾತುಗಳಿಗೆ ಲಕ್ಷ್ಯಕೊಡಲಿಲ್ಲ. ಏಕೆಂದರೆ ಅವನು ಮಹಾಸೈನ್ಯ ಸಮೇತವಾಗಿ ಬಂದಿದ್ದಾನೆಂಬುದನ್ನು ಅವರು ಆಗಲೇ ಅರಿತುಕೊಂಡಿದ್ದರು.
12 : ಆಗ ಕೆಲವು ಜನ ಶಾಸ್ತ್ರಿಗಳು ಕೂಡಿಕೊಂಡು ಅಲ್ಕಿಮನ ಮತ್ತು ಬಕ್ಕಿದಿಯನ ಬಳಿಗೆ ಹೋಗಿ, ನ್ಯಾಯಕ್ಕಾಗಿ ಯತ್ನಮಾಡಿದರು.
13 : ಅವರೊಂದಿಗೆ ಸಂಧಾನ ಮಾಡಿಕೊಳ್ಳಲು ಯತ್ನಿಸಿದ ಇಸ್ರಯೇಲರಲ್ಲಿ ಹಸಿದಿಯರು ಮೊದಲಿಗರು.
14 : ಇವರು, “ಆರೋನನ ವಂಶಜನಾದ ಯಾಜಕನೊಬ್ಬನು ಸೈನ್ಯದೊಂದಿಗೆ ಬಂದಿದ್ದಾನೆ, ಅವನು ಯಾವ ಅನ್ಯಾಯವನ್ನೂ ನಮಗೆ ಮಾಡಲಿಕ್ಕಿಲ್ಲ,” ಎಂದುಕೊಂಡರು.
15 : ಅವನಾದರೊ ಅವರೊಂದಿಗೆ ಸಮಾಧಾನದ ಮಾತುಗಳನ್ನಾಡಿ, “ನಾವು ನಿಮಗಾಗಲಿ, ನಿಮ್ಮ ಸ್ನೇಹಿತರಿಗಾಗಲಿ ಯಾವ ಕೇಡನ್ನೂ ಮಾಡುವವರಲ್ಲ,” ಎಂದು ಪ್ರಮಾಣ ಪೂರ್ವಕವಾಗಿ ಹೇಳಿದನು.
16 : ಅವರು ಅವನ ಮಾತಿನಲ್ಲಿ ವಿಶ್ವಾಸವಿಟ್ಟರು. ಆದರೆ ಅವನು ಅವರಲ್ಲಿ ಅರವತ್ತು ಜನರನ್ನು ಹಿಡಿಸಿ, ಒಂದೇ ದಿನದಲ್ಲಿ ಕೊಂದುಹಾಕಿಸಿದನು.
17 : ಹೀಗೆ ಕೀರ್ತನೆಕಾರನು ಬರೆದ ಈ ಮಾತುಗಳು ನೆರವೇರಿದವು: “ನಿನ್ನ ಭಕ್ತರ ಮಾಂಸವನ್ನು ಅವರು ಬಿಸಾಡಿದರು, ಜೆರುಸಲೇಮಿನ ಸುತ್ತಲು ಅವರ ರಕ್ತವನ್ನು ಚೆಲ್ಲಿದರು; ಅವರ ಶವಗಳನ್ನು ಹೂಣಿಡುವವರು ಯಾರೂ ಇರಲಿಲ್ಲ!”
18 : ಇದರಿಂದ ಯೆಹೂದ್ಯರೆಲ್ಲರಲ್ಲಿ ಹೆದರಿಕೆ ಬೆದರಿಕೆ ಉಂಟಾಗಿ ಅವರು, “ಇವರಲ್ಲಿ ಸತ್ಯವೂ ಇಲ್ಲ, ನ್ಯಾಯವೂ ಇಲ್ಲ; ಇವರು ತಾವು ಮಾಡಿಕೊಂಡ ಒಡಂಬಡಿಕೆಯನ್ನೆ ಇಟ್ಟುಕೊಂಡ ಆಣೆಯನ್ನೇ ಮುರಿದಿದ್ದಾರೆ,” ಎಂದುಕೊಂಡರು.
19 : ಬಕ್ಕಿದಿಯನು ಜೆರುಸಲೇಮನ್ನು ಬಿಟ್ಟು ಬೆಜೆತ್ ಎಂಬಲ್ಲಿ ಬೀಡುಬಿಟ್ಟನು. ತನ್ನನ್ನು ಬಿಟ್ಟುಹೋಗಿದ್ದ ಅನೇಕರನ್ನೂ ಯೆಹೂದ್ಯರಲ್ಲಿ ಕೆಲವರನ್ನೂ ಹಿಡಿದುತರಿಸಿ, ಕೊಂದು, ಒಂದು ದೊಡ್ಡ ಕಣಿವೆಯಲ್ಲಿ ಹಾಕಿಸಿದನು.
20 : ತರುವಾಯ ಅಲ್ಕಿಮನಿಗೆ ಆ ಪ್ರಾಂತ್ಯವನ್ನು ಒಪ್ಪಿಸಿ, ಅವನ ನೆರವಿಗೆಂದು ಒಂದು ದಳವನ್ನು ಅಲ್ಲಿಟ್ಟು, ಬಕ್ಕಿದಿಯನು ಅರಸನ ಬಳಿಗೆ ಹಿಂದಿರುಗಿದನು.
21 : ಅಲ್ಕಿಮನು ಮುಖ್ಯಯಾಜಕನ ಉದ್ಯೋಗವನ್ನು ದೊರಕಿಸಿಕೊಳ್ಳಲು ಪ್ರಯಾಸಪಟ್ಟನು.
22 : ಇದಲ್ಲದೆ, ಸ್ವಜನರಿಗೆ ಕಂಡಕರಾದವರೆಲ್ಲರು ಅವನನ್ನು ಕೂಡಿಕೊಂಡು ಜುದೇಯ ಪ್ರಾಂತ್ಯವನ್ನು ತಮ್ಮ ಕೈವಶಮಾಡಿಕೊಂಡು, ಇಸ್ರಯೇಲಿನಲ್ಲಿ ಬಹಳ ಕೇಡುಮಾಡಿದರು.
23 : ಅಲ್ಕಿಮನೂ ಅವನ ಗುಂಪಿನವರೂ ಅನ್ಯರು ಮಾಡುವುದಕ್ಕಿಂತ ಹೆಚ್ಚಾದ ಕೇಡನ್ನು ಇಸ್ರಯೇಲ್ ಜನತೆಗೆ ಮಾಡಿದ್ದನ್ನು ಯೂದನು ನೋಡಿದನು.
24 : ಜುದೇಯದ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆಲ್ಲಾ ಹೋಗಿ, ಆ ಜನರನ್ನೂ ತನ್ನನ್ನು ಅಗಲಿ ಹೋಗಿದ್ದವರನ್ನೂ ದಂಡಿಸಿ, ಅವರು ಇನ್ನು ಊರುಬಿಟ್ಟು ಆಚೆಹೋಗದಂತೆ ಮಾಡಿದನು.
25 : ಯೂದನೂ ಅವನ ದಂಡಿನವರೂ ಬಲಗೊಂಡದ್ದನ್ನೂ ಅವರನ್ನು ತಡೆಯುವುದಕ್ಕೆ ತನ್ನ ಕೈಯಿಂದಾಗದೆಂಬುದನ್ನೂ ಅಲ್ಕಿಮನು ಮನಗಂಡು, ಅರಸನ ಬಳಿಗೆ ಹಿಂದಿರುಗಿ ಹೋಗಿ ಅವರ ಮೇಲೆ ದೂರುಹೇಳಿದನು.
26 : ಅರಸನು ಯೆಹೂದ್ಯರನ್ನು ನಾಶಮಾಡುವುದಕ್ಕೆ ಅಪ್ಪಣೆಕೊಟ್ಟನು. ಸನ್ಮಾನ್ಯ ಸಾಮಂತರಲ್ಲೊಬ್ಬನೂ, ಇಸ್ರಯೇಲರನ್ನು ದ್ವೇಷಿಸುತ್ತಿದ್ದವನೂ ಹಾಗು ಅವರ ಶತ್ರುವೂ ಆಗಿದ್ದ ನಿಕಾನೋರ್ ಎಂಬವನನ್ನು ಕಳುಹಿಸಿಕೊಟ್ಟನು.
27 : ನಿಕಾನೋರನು ದೊಡ್ಡ ಸೈನ್ಯದೊಂದಿಗೆ ಜೆರುಸಲೇಮಿಗೆ ಬಂದು, ಯೂದನಿಗೂ ಅವನ ಬಂಧುಗಳಿಗೂ ಮೋಸದಿಂದ ಈ ಸಂಧಾನದ ಮಾತುಗಳನ್ನು ಹೇಳಿಕಳುಹಿಸಿದನು:
28 : “ನಿಮ್ಮ ಹಾಗು ನಮ್ಮ ನಡುವೆ ಯುದ್ಧವಾಗದಿರಲಿ; ಸಮಾಧಾನದಿಂದ ನಿಮ್ಮ ಮುಖಗಳನ್ನು ನೋಡುವುದಕ್ಕೆ ಕೆಲವೇ ಜನರನ್ನು ನನ್ನ ಸಂಗಡ ಕರೆದುಕೊಂಡು ಬರುತ್ತಿದ್ದೇನೆ.”
29 : ಹೀಗೆಂದು ಅವನು ಯೂದನ ಬಳಿಗೆ ಬರಲು, ಅವರು ಸಮಾಧಾನದಿಂದ ಒಬ್ಬರನ್ನೊಬ್ಬರು ವಂದಿಸಿದರು. ಆದರೆ ಯೂದನನ್ನು ಬಲಾತ್ಕಾರದಿಂದ ಹಿಡಿದುಕೊಂಡು ಹೋಗುವುದಕ್ಕೆ ಶತ್ರುಕಡೆಯವರು ಸಿದ್ಧರಾಗಿದ್ದರು.
30 : ಈ ಸಂಗತಿ, ಅಂದರೆ ಮೋಸಮಾಡುವುದಕ್ಕಾಗಿಯೇ ನಿಕಾನೋರನು ತನ್ನ ಬಳಿಗೆ ಬಂದಿದ್ದಾನೆಂದು ಯೂದನಿಗೆ ತಿಳಿಯಲು, ಅವನು ಭಯಪಟ್ಟು, ನಿಕಾನೋರನನ್ನು ಪುನಃ ಭೇಟಿಯಾಗಲು ಇಷ್ಟಪಡಲಿಲ್ಲ.
31 : ತನ್ನ ತಂತ್ರವು ಬಯಲಿಗೆ ಬಿದ್ದಿತೆಂಬುದನ್ನು ನಿಕಾನೋರನು ತಿಳಿದು ಕಫಾರ್ಸಲಾಮದ ಬಳಿ ಯುದ್ಧದಲ್ಲೆ ಯೂದನನ್ನು ಸಂಧಿಸಲು ಹೋದನು.
32 : ಅಂದು ನಿಕಾನೋರನ ಪಕ್ಷದವರು ಐನೂರು ಮಂದಿ ಹತರಾದರು; ಉಳಿದವರು ದಾವೀದ ನಗರದೊಳಗೆ ಓಡಿಹೋದರು.
33 : ಮಹಾದೇವಾಲಯ ಕೆಡವಲು ಬೆದರಿಕೆ
ಈ ಘಟನೆಗಳಾದ ಮೇಲೆ ನಿಕಾನೋರನು ಸಿಯೋನ್ ಗುಡ್ಡಕ್ಕೆ ಹೋದನು. ಅಲ್ಲಿ ಯಾಜಕರಲ್ಲಿ ಕೆಲವರು ಹಾಗು ಜನಾಂಗದ ಹಿರಿಯರಲ್ಲಿ ಕೆಲವರು ಸಮಾಧಾನದಿಂದ ಅವನನ್ನು ವಂದಿಸುವುದಕ್ಕೂ ಅರಸನಿಗಾಗಿ ದಹನಬಲಿಯರ್ಪಣೆ ಆಗುತ್ತಿದೆ ಎಂದು ಅವನಿಗೆ ತೋರಿಸುವುದಕ್ಕೂ ಪವಿತ್ರಾಲಯದೊಳಗಿಂದ ಹೊರಗೆ ಬಂದರು.
34 : ಅವನಾದರೋ ಅವರನ್ನು ಅವಮಾನಗೊಳಿಸಿ, ಬಿರುನುಡಿಗಳನ್ನಾಡಿದನು.
35 : “ನೀವು ಆ ಯೂದನನ್ನೂ ಅವನ ಸಂಗಡಿಗರನ್ನೂ ಈಗ ನನ್ನ ಕೈಗೆ ಒಪ್ಪಿಸದಿದ್ದರೆ ನಾನು ಮುಂದೆ ಎಂದಾದರೂ ಸುರಕ್ಷಿತವಾಗಿ ಇಲ್ಲಿ ಬಂದಲ್ಲಿ, ಈ ಆಲಯವನ್ನು ಸುಟ್ಟು ಸೂರೆಮಾಡುವೆನು,” ಎಂದು ಅವರಿಗೆ ಹೇಳಿ ಬಹು ಕೋಪದಿಂದ ಪಣತೊಟ್ಟು, ಸಿಟ್ಟಿನಲ್ಲಿಯೇ ಅಲ್ಲಿಂದ ಹೊರಟುಹೋದನು.
36 : ತರುವಾಯ ಯಾಜಕರು ಒಳಗೆ ಹೋಗಿ ಬಲಿಪೀಠದ ಮತ್ತು ಬಲಿಪೀಠದ ಮತ್ತು ದೇವಾಲಯದ ಮುಂದೆ ನಿಂತುಕೊಂಡು ಅಳುತ್ತಾ,
37 : “ಸ್ವಾಮೀ, ಈ ಆಲಯವನ್ನು ನಿಮ್ಮ ಹೆಸರಿನಿಂದ ಕರೆಯಬೇಕೆಂದೂ ಇದು ನಿಮ್ಮ ಜನರ ಪ್ರಾರ್ಥನೆ ಹಾಗು ವಿಜ್ಞಾಪನೆಗಳ ಆಲಯ ಆಗಿರಲೆಂದೂ ನೀವು ಇದನ್ನು ಆಯ್ದುಕೊಂಡಿರಿ;
38 : ಈ ಮನುಷ್ಯನನ್ನೂ ಅವನ ಸೈನ್ಯವನ್ನೂ ದಂಡಿಸಿರಿ; ಅವರು ಕತ್ತಿಗೆ ತುತ್ತಾಗಲಿ; ಅವರಾಡಿದ ದೂಷಣೆಯ ಮಾತುಗಳನ್ನು ನೆನಪಿಗೆ ತಂದುಕೊಂಡು ಅವರನ್ನು ಇನ್ನು ಬದುಕಗೊಡಿಸಬೇಡಿ,” ಎಂದರು.
39 : ಅದಾಸಾದಲ್ಲಿ ಮಹಾ ದಿನ
ನಿಕಾನೋರನು ಜೆರುಸಲೇಮಿನಿಂದ ಹೊರಟು ಬೇತ್‍ಹೋರೋನಿಗೆ ಹೋಗಿ ಅಲ್ಲಿ ತಳವೂರಿದನು. ಅಲ್ಲಿ ಸಿರಿಯ ಪ್ರಾಂತ್ಯದ ಸೈನ್ಯವೊಂದು ಅವನನ್ನು ಕೂಡಿಕೊಂಡಿತು.
40 : ಯೂದನು ಮೂರು ಸಾವಿರ ಜನರೊಂದಿಗೆ ಅದಾಸಾ ಎಂಬಲ್ಲಿ ಬೀಡುಬಿಟ್ಟನು.
41 : ಆಗ ಯೂದನು ಪ್ರಾರ್ಥಿಸಿ, “ಸ್ವಾವಿೂ, ಅರಸನು ಕಳುಹಿಸಿದವರು ದೂಷಣೆಯ ಮಾತುಗಳನ್ನಾಡಿದಾಗ ನಿಮ್ಮ ದೂತನು ಹೊರಟು ಬಂದು ಅವರಲ್ಲಿ ಲಕ್ಷದ ಎಂಬತ್ತೈದು ಸಾವಿರ ಜನರನ್ನು ಸದೆಬಡಿದನು.
42 : ಅದರಂತೆ ಈ ಸೈನ್ಯವನ್ನು ಇಂದು ನಮ್ಮ ಕಣ್ಣೆದುರಿನಲ್ಲಿಯೇ ಧ್ವಂಸಮಾಡಿ. ಇದರಿಂದ ಅವರು ನಿಮ್ಮ ಪವಿತ್ರಾಲಯದ ವಿರುದ್ಧ ದೂಷಣೆಯ ಮಾತುಗಳನ್ನಾಡಿದ್ದರಿಂದಲೇ ಹೀಗಾಯಿತೆಂದು ಉಳಿದವರಿಗೆ ಗೊತ್ತಾಗಲಿ, ಅವನ ದುಷ್ಟತನಕ್ಕೆ ಸರಿಯಾಗಿ ಅವನಿಗೆ ತೀರ್ಪುಕೊಡಿ,” ಎಂದು ಹೇಳಿದನು.
43 : ಫಾಲ್ಗುಣ ಮಾಸದ ಹದಿಮೂರನೆಯ ದಿವಸ ಎರಡು ಸೈನ್ಯಗಳ ನಡುವೆ ಕದನವಾಯಿತು. ನಿಕಾನೋರನ ಸೈನ್ಯದವರು ಧ್ವಂಸವಾದರು. ಸಂಗ್ರಾಮದಲ್ಲಿ ಮೊದಲು ಹತನಾದವನು ಅವನೇ.
44 : ನಿಕಾನೋರನು ಬಿದ್ದುದನ್ನು ಅವನ ಸೈನಿಕರು ಕಂಡು, ಕೈಯಲ್ಲಿದ್ದ ಆಯುಧಗಳನ್ನು ಬಿಸಾಡಿ ಓಡಿಹೋದರು.
45 : ಯೂದನ ಸೈನಿಕರು ಒಂದು ದಿನದ ಪ್ರಯಾಣವಾಗುವಷ್ಟು ದೂರ, ಅಂದರೆ ಅದಾಸಾದಿಂದ ಗಜೇರದವರೆಗೆ, ಅವರನ್ನು ಬೆನ್ನಟ್ಟಿಹೋದರು. ಹೋಗುವಾಗ ಅವರು ಯೆಹೂದ್ಯರಿಗೆ ಸೂಚನೆ ಕೊಡುವುದಕ್ಕಾಗಿ ತಮ್ಮ ತುತೂರಿಗಳನ್ನು ಊದಿದರು.
46 : ಇದನ್ನು ಕೇಳಿದೊಡನೆ ಜುದೇಯದ ಹಳ್ಳಿಪಳ್ಳಿಗಳೊಳಗಿಂದ ಜನರು ಬಂದು ಶತ್ರುಗಳನ್ನು ಅಡ್ಡಗಟ್ಟಿದರು. ಅವರು ಹಿಂದಕ್ಕೆ ತಿರುಗಲು, ಬೆನ್ನಟ್ಟಿದವರ ಕತ್ತಿಗೆ ಆಹುತಿಯಾಗಿ ಒಬ್ಬರೂ ಉಳಿಯದಂತೆ ಎಲ್ಲರೂ ಹತರಾದರು.
47 : ತರುವಾಯ ಯೂದನ ಜನರು ಅವರ ಆಯುಧಗಳನ್ನೂ ಕೊಳ್ಳೆಯನ್ನೂ ಸುಲಿಗೆಮಾಡಿಕೊಂಡು, ನಿಕಾನೋರನ ತಲೆಯನ್ನೂ ಅಂದು ಸೊಕ್ಕಿನಿಂದ ಚಾಚಿದ ಬಲಗೈಯನ್ನೂ ಕತ್ತರಿಸಿ, ಅವುಗಳನ್ನು ಒಯ್ದು ಜೆರುಸಲೇಮಿನ ಎದುರಿಗೆ ತೂಗುಹಾಕಿದರು.
48 : ಇದಕ್ಕಾಗಿ ಜನರು ಬಹಳವಾಗಿ ಹಿಗ್ಗಿ, ಆ ದಿನವನ್ನು ಬಹು ಸಂಭ್ರಮದಿಂದ ಕಳೆದರು.
49 : ಪ್ರತಿವರ್ಷ ಆ ದಿನವನ್ನು, ಅಂದರೆ ಫಾಲ್ಗುಣ ಮಾಸದ ಹದಿಮೂರನೇ ದಿನವನ್ನು ಮಹಾದಿನವೆಂದು ಆಚರಿಸಬೇಕೆಂದು ನೇಮಕಮಾಡಿದರು. 50ಹೀಗೆ ಕೆಲಕಾಲದವರೆಗೆ ಜುದೇಯ ಪ್ರಾಂತ್ಯದಲ್ಲಿ ಶಾಂತಿ ನೆಲಸಿತು.