Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಅರಸ ಅಂತಿಯೋಕನು ಮೆಸಪಟೋಮಿಯದಲ್ಲಿ ಸಂಚಾರಮಾಡುತ್ತಿದ್ದನು. ಪರ್ಷಿಯಾದಲ್ಲಿದ್ದ ಎಲಿಮಾ ಎಂಬಲ್ಲಿ ಒಂದು ಊರು ಸಿರಿಸಂಪತ್ತು. ಬೆಳ್ಳಿಬಂಗಾರಗಳಿಗೆ ಹೆಸರಾಗಿದೆ, ಅಲ್ಲಿದ್ದ ಒಂದು ದೇವಾಲಯ ಅಪಾರ ನಿಧಿಯುಳ್ಳದ್ದಾಗಿದೆ,
2 : ಮೊದಲು ಗ್ರೀಸ್ ದೇಶವನ್ನು ಆಳುತ್ತಿದ್ದ ಮ್ಯಾಸಿಡೋನಿಯದ ಅರಸ ಫಿಲಿಪ್ಪನ ಮಗ ಅಲೆಕ್ಸಾಂಡರನು ಬಿಟ್ಟುಹೋಗಿದ್ದ ಚಿನ್ನದ ಡಾಲೂ ಕವಚಗಳೂ ಅದರಲ್ಲಿಯೇ ಇವೆ ಎಂಬ ಸಮಾಚಾರವನ್ನು ಅವನು ಕೇಳಿದ್ದನು.
3 : ಆ ಊರನ್ನು ಹಿಡಿದುಕೊಂಡು ಸುಲಿಗೆ ಮಾಡಬೇಕೆಂಬ ಹವಣಿಕೆಯಿಂದ ಅಲ್ಲಿಗೆ ಬಂದನು. ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ.
4 : ಏಕೆಂದರೆ ಈ ಸುದ್ದಿ ಆ ಊರೊಳಗಿದ್ದ ಜನರಿಗೆ ಮುಟ್ಟಲು ಅವರು ಅವನ ಸಂಗಡ ಯುದ್ಧ ಮಾಡಿದರು. ಅವನು ಬಹು ವ್ಯಸನಕ್ರಾಂತನಾಗಿ ಅಲ್ಲಿಂದ ಕಾಲುಕಿತು, ಬಾಬಿಲೋನಿಗೆ ಹಿಂದಿರುಗಿದನು.
5 : ಇದಲ್ಲದೆ ಅಂತಿಯೋಕನು ಪರ್ಷಿಯಾದಲ್ಲಿದ್ದಾಗ ಒಬ್ಬನು ಬಂದು, ಅವನಿಗೆ ಹೀಗೆಂದು ವರದಿಮಾಡಿದನು: “ಜುದೇಯದ ವಿರುದ್ಧ ಹೋಗಿದ್ದ ಸೈನ್ಯವೆಲ್ಲಾ ಹಿಂದೂಡಲ್ಪಟ್ಟಿತು.
6 : ಮೊದಲು ಅಪಾರ ಬಲದೊಂದಿಗೆ ಹೋದ ಲೂಸ್ಯನು ನಾಚಿಕೆಗೀಡಾಗಿ ಹಿಂದಿರುಗಿದನು. ಅವನ ಸೈನ್ಯದವರು ಬಿಟ್ಟುಹೋಗಿದ್ದ ಎಲ್ಲವನ್ನು ಜುದೇಯದವರು ದೋಚಿಕೊಂಡು ಹೋದರು. ಆದುದರಿಂದ ಈಗ ಅವರು ಶಸ್ತ್ರಾಸ್ತ್ರಗಳುಳ್ಳವರಾಗಿ ಪರಾಕ್ರಮದ ವಿಷಯಗಳಲ್ಲಿ ಯಾವ ಕೊರತೆಯೂ ಇಲ್ಲದೆ ಬಲಾಢ್ಯರಾಗಿದ್ದಾರೆ.
7 : ಜೆರುಸಲೇಮಿನಲ್ಲಿದ್ದ ಬಲಿಪೀಠದ ಮೇಲೆ ನೀವು ಕಟ್ಟಿಸಿದ್ದ ‘ವಿನಾಶಕರ ವಿಕಟಮೂರ್ತಿ’ಯನ್ನು ಕೆಡವಿ ಹಾಕಿದ್ದಾರೆ. ದೇವಾಲಯದ ಸುತ್ತಲೂ ಮೊದಲಿನಂತೆ ಎತ್ತರವಾದ ಗೋಡೆಗಳನ್ನು ಕಟ್ಟಿಸಿದ್ದಾರೆ. ಇದಲ್ಲದೆ, ನಿಮಗೆ ಸೇರಿದ ಬೇತ್ಸೂರ ಊರನ್ನು ಭದ್ರಗೊಳಿಸಿದ್ದಾರೆ,” ಎಂದರು.
8 : ಅರಸನು ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತನಾದನು ಹಾಗು ಬಹು ಖಿನ್ನನಾದನು. ತಾನು ಹಾರೈಸಿದಂತೆ ಆಗದಿದ್ದುದನ್ನು ಕಂಡು ದುಃಖಕ್ರಾಂತನಾಗಿ ನೊಂದು, ಹಾಸಿಗೆ ಹಿಡಿದನು.
9 : ಅವನು ಬಹು ದುಃಖಿತನಾಗಿ ಇನ್ನು ಸಾಯುವುದೇ ಲೇಸೆಂದೆಣಿಸಿ ಅಲ್ಲಿಯೇ ಬಹುದಿನದವರೆಗೆ ನಿಂತುಬಿಟ್ಟನು.
10 : ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡನು.
11 : ಅವರಿಗೆ, “ನನ್ನ ಕಣ್ಣಿಗೆ ನಿದ್ರೆಯಿಲ್ಲ; ಚಿಂತೆಯಿಂದ ನನ್ನ ಅಂತರಂಗವು ಕುಂದಿಹೋಗಿದೆ. ನಾನು ನನ್ನ ಅಧಿಕಾರದಲ್ಲಿ ಮೆರೆಯುತ್ತಿದ್ದಾಗ ಜನೋಪಕಾರಿಯೂ ಪ್ರೀತಿ ಪಾತ್ರನೂ ಆಗಿದ್ದೆ; ಆದರೆ ಈಗ ಎಂತಹ ವಿಪತ್ತಿಗೆ ನಾನು ಗುರಿಯಾದೆ; ಎಂತಹ ಮಹಾ ಪ್ರವಾಹದಲ್ಲಿ ನಾನೀಗ ಸಿಕ್ಕಿಬಿದ್ದಿದ್ದೇನೆ!
12 : ಜೆರುಸಲೇಮಿನಲ್ಲಿ ನಾನು ನಡೆಸಿದ ಅತ್ಯಾಚಾರಗಳ ಸ್ಮರಣೆ ನನಗೀಗ ಬರುತ್ತಿದೆ. ಅಲ್ಲಿದ್ದ ಬೆಳ್ಳಿ ಬಂಗಾರದ ಪಾತ್ರೆಗಳನ್ನೆಲ್ಲ ನಾನು ಅಪಹರಿಸಿದೆ. ಕಾರಣವಿಲ್ಲದೆ ಜುದೇಯದ ನಿವಾಸಿಗಳನ್ನು ನಾಶಮಾಡುವುದಕ್ಕೆ ಜನರನ್ನು ಕಳುಹಿಸಿದೆ
13 : ಈ ಕಾರಣದಿಂದಲೇ, ಈಗ ನನ್ನ ಮೇಲೆ ಈ ವಿಪತ್ತು ಬಂದಿದೆ ಎಂದು ನನಗೀಗ ಗೊತ್ತಾಯಿತು. ಆದುದರಿಂದಲೇ ನಾನೀಗ ಚಿಂತಾನುತಾಪದಿಂದ ಪರದೇಶದಲ್ಲಿ ಸಾಯುತ್ತಿದ್ದೇನೆ,” ಎಂದು ಹೇಳಿ
14 : ತನ್ನ ಸ್ನೇಹಿತರಲ್ಲಿ ಒಬ್ಬನಾದ ಫಿಲಿಪ್ಪನೆಂಬವನನ್ನು ಕರೆದು, ಅವನಿಗೆ ತನ್ನ ರಾಜ್ಯವನ್ನೆಲ್ಲಾ ಒಪ್ಪಿಸಿದನು.
14 : ಇವರು, “ಆರೋನನ ವಂಶಜನಾದ ಯಾಜಕನೊಬ್ಬನು ಸೈನ್ಯದೊಂದಿಗೆ ಬಂದಿದ್ದಾನೆ, ಅವನು ಯಾವ ಅನ್ಯಾಯವನ್ನೂ ನಮಗೆ ಮಾಡಲಿಕ್ಕಿಲ್ಲ,” ಎಂದುಕೊಂಡರು.
15 : ತನ್ನ ಮುಕುಟವನ್ನು, ವಸ್ತ್ರ ಅಲಂಕಾರಗಳನ್ನು ಹಾಗು ಮುದ್ರೆಯುಂಗುರವನ್ನು ಅವನ ವಶಕ್ಕೆ ಕೊಟ್ಟು, ತನ್ನ ಮಗ ಅಂತಿಕೋಕನು ಅರಸನಾಗುವಂತೆ ಅವನನ್ನು ಸಾಕಿ ಬೆಳೆಸಬೇಕೆಂದು ಹೇಳಿ, ಅವನನ್ನು ಅವನ ಕೈಗೆ ಒಪ್ಪಿಸಿದನು.
16 : ಅರಸ ಅಂತಿಯೋಕನು 148ನೇ ವರ್ಷ ಅಲ್ಲಿಯೇ ಕಾಲವಾದನು.
17 : ಅರಸನ ಮರಣವಾರ್ತೆಯನ್ನು ಕೇಳಿದ ಲೂಸ್ಯನು, ತಾನು ಸಾಕಿ ಬೆಳೆಸಿದ ರಾಜಕುಮಾರ ಅಂತಿಯೋಕನನ್ನು ‘ಯೂಪಟೋರ್’ ಎಂಬ ಹೆಸರಿನಿಂದ ಪಟ್ಟಕ್ಕೆ ಏರಿಸಿದನು.
18 : ಅತ್ತ ಕೋಟೆಯಲ್ಲಿದ್ದವರು ಮಹಾ ಪರಿಶುದ್ಧಾಲಯದ ಸುತ್ತಮುತ್ತಲು ಇಸ್ರಯೇಲರನ್ನು ತಡೆಗಟ್ಟಿ, ಪದೇಪದೇ ಅವರನ್ನು ಪೀಡಿಸುತ್ತಿದ್ದರು. ಅನ್ಯರು ಬಲಗೊಳ್ಳುವುದನ್ನೇ ನೋಡುತ್ತಿದ್ದರು.
19 : ಯೂದನು ಅವರನ್ನು ನಾಶಮಾಡಿಬಿಡಬೇಕೆಂದು ಆಲೋಚಿಸಿ, ಅವರನ್ನು ಮುತ್ತುವುದಕ್ಕೆ ತನ್ನ ಜನರನ್ನೆಲ್ಲ ಕರೆದನು.
20 : 150ನೆಯ ವರ್ಷದಲ್ಲಿ ಎಲ್ಲರು ಒಂದುಗೂಡಿ ಅವರನ್ನು ಮುತ್ತಿದರು. ಯೂದನು ಮುತ್ತಿಗೆಯ ದಿಬ್ಬಗಳನ್ನೂ ಯುದ್ಧಯಂತ್ರಗಳನ್ನೂ ಮಾಡಿಸಿದನು.
21 : ಇತ್ತ ಮುತ್ತಲಾದವರಲ್ಲಿ ಕೆಲವರು ತಪ್ಪಿಸಿಕೊಂಡು ಹೊರಗೆ ಬಂದರು. ಆಗ ಅಧರ್ಮಿಗಳಾದ ಕೆಲವು ಜನ ಇಸ್ರಯೇಲರು ಅವರನ್ನು ಕೂಡಿಕೊಂಡು, ಅರಸನ ಬಳಿಗೆ ಹೋಗಿ ಅವನಿಗೆ,
22 : ಎಲ್ಲಿಯವರೆಗೆ ನೀವು ವ್ಯಾಜ್ಯ ತೀರಿಸಿ ನಮ್ಮ ಸಹೋದರರಿಗೆ ಮುಯ್ಯಿತೀರಿಸದೇ ಇರುವಿರಿ?
23 : ನಾವಾದರೋ ನಿಮ್ಮ ತಂದೆಗೆ ಸೇವೆಸಲ್ಲಿಸಿ, ಅವರ ನುಡಿಯಂತೆಯೇ ನಡೆದು, ಅವರ ಆಜ್ಞೆಗಳನ್ನು ಪಾಲಿಸಲು ಸಿದ್ಧರಾಗಿದ್ದೇವೆ.
24 : ಈ ಕಾರಣದಿಂದ ನಮ್ಮ ಜನಾಂಗದವರಲ್ಲಿ ಕೆಲವರು ಕೋಟೆಗೆ ಮುತ್ತಿಗೆ ಹಾಕಿ, ನಮಗೆ ಶತ್ರುಗಳಾಗಿ, ಕೈಗೆ ಸಿಕ್ಕವರನ್ನು ಕೊಂದು, ನಮ್ಮ ಆಸ್ತಿಯನ್ನೆಲ್ಲಾ ಲೂಟಿಮಾಡಿದರು.
25 : ನಮ್ಮ ಮೇಲೆ ಮಾತ್ರವಲ್ಲದೆ, ತಮ್ಮ ನಾಡಿನ ಮೇಲೆಲ್ಲಾ ಅವರು ಕೈಮಾಡಿದ್ದಾರೆ.
26 : ನೋಡಿ, ಅವರೀಗ ಜೆರುಸಲೇಮ್ ದುರ್ಗವನ್ನು ಹಿಡಿದುಕೊಳ್ಳಬೇಕೆಂದು ಅದಕ್ಕೆ ಮುತ್ತಿಗೆ ಹಾಕಿ, ಪವಿತ್ರಾಲಯವನ್ನೂ ಬೇತ್ಸೂರನ್ನೂ ಭದ್ರಗೊಳಿಸಿದ್ದಾರೆ.
27 : ಆದಷ್ಟು ಬೇಗ ನೀವು ಅವರಿಗೆ ಮುಂದಾಗದೇ ಹೋದರೆ ಇದಕ್ಕಿಂತಲೂ ಹೆಚ್ಚಿನ ಅನಾಹುತವನ್ನು ಮಾಡುವರು. ಆಗ ಅವರನ್ನು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನಿಮ್ಮಿಂದಾಗದೇ ಹೋದೀತು!” ಎಂದು ದೂರಿತ್ತರು.
28 : ಅರಸನು ಇದನ್ನು ಕೇಳಿ ಕೋಪಗೊಂಡನು. ತನ್ನ ಸ್ನೇಹಿತರಾದ ದಳವಾಯಿಗಳನ್ನೂ ಅಶ್ವಬಲದ ರಾಹುತರನ್ನೂ ಕರೆಯಿಸಿದನು.
29 : ಬೇರೆ ರಾಜ್ಯಗಳಿಂದಲೂ ದ್ವೀಪಗಳಿಂದಲೂ ಬಾಡಿಗೆಯ ದಳಗಳೂ ಅವನ ಬಳಿಗೆ ಬಂದವು.
30 : ಆಗ ಅವನ ಮೊತ್ತ ಪಡೆ ಒಂದು ಲಕ್ಷ ಕಾಲಾಳು, ಇಪ್ಪತ್ತು ಸಾವಿರ ರಾಹುತರು, ಯುದ್ಧಕ್ಕೆ ತರಬೇತು ಹೊಂದಿದ ಮೂವತ್ತೆರಡು ಆನೆಗಳು ಅಷ್ಟು ದೊಡ್ಡದಾಯಿತು.
31 : ಇವರೆಲ್ಲರು ಹೊರಟು, ಇದು ಮೇಯ ಮಾರ್ಗವಾಗಿ ಬಂದು ಬೇತ್ಸೂರಿನ ಬಳಿ ಬೀಡುಬಿಟ್ಟುಕೊಂಡು ಅನೇಕ ದಿನಗಳವರೆಗೆ ಹೋರಾಡಿದರು; ಯುದ್ಧಯಂತ್ರಗಳನ್ನು ಹೂಡಿದರು; ಆದರೆ ಬೇತ್ಸೂರಿನಲ್ಲಿ ಇದ್ದವರು ಹೊರಗೆ ಬಂದು ಅವುಗಳಿಗೆ ಬೆಂಕಿಹಚ್ಚಿ ಸುಟ್ಟುಬಿಟ್ಟು ಶೂರರಾಗಿ ಕಾದಾಡಿದರು.
32 : ಯೂದನು ಕೋಟೆಯ ಬಳಿಯಿಂದ ತನ್ನ ಸೈನ್ಯವನ್ನು ಸಾಗಿಸಿಕೊಂಡು ಬಂದು, ಅರಸನ ದಂಡಿನ ಎದುರಾಗಿ ಬೇತ್‍ಜಕರಿಯ ಎಂಬಲ್ಲಿ ಪಾಳೆಯ ಮಾಡಿದನು.
33 : ಮರುದಿನ ಅರಸನು ನಸುಕಿನಲ್ಲಿಯೇ ಎದ್ದು ಬೇತ್‍ಜಕರಿಯದ ಮಾರ್ಗವಾಗಿ ತನ್ನ ಸೈನ್ಯವನ್ನೆಲ್ಲ ಅತಿವೇಗದಿಂದ ಸಾಗಿಸಿದನು. ದಂಡಾಳುಗಳು ಯುದ್ಧ ಸನ್ನದ್ಧರಾಗಿ ತುತೂರಿಗಳನ್ನು ಊದಿದರು.
34 : ಆನೆಗಳನ್ನು ಯುದ್ಧಾಸಕ್ತವಾಗಿಸುವುದಕ್ಕಾಗಿ ದ್ರಾಕ್ಷಿ ಮತ್ತು ಬಾಕಾ ಹಣ್ಣಿನ ರಸವನ್ನು ಅವಕ್ಕೆ ಕುಡಿಸಿದರು; ವ್ಯೂಹಗಳಲ್ಲಿ ಆ ಆನೆಗಳನ್ನು ಹಂಚಿಕೊಟ್ಟರು.
35 : ಪ್ರತಿಯೊಂದು ಆನೆಯ ಬದಿಗೆ ಕವಚ, ಕಂಚಿನ ಶಿರಸ್ತ್ರಾಣಗಳಿಂದ ಸುಸಜ್ಜಿತರಾದ ಒಂದೊಂದು ಸಾವಿರ ಸೈನಿಕರನ್ನು ಇಟ್ಟರು. ಇವರಲ್ಲದೆ, ಕುಶಲರಾದ ಐನೂರು ಜನ ರಾಹುತರು ಪ್ರತಿಯೊಂದು ಆನೆಗೆ ನೇಮಕರಾಗಿದ್ದರು.
36 : ಎಲ್ಲೆಲ್ಲಿ ಆ ಮೃಗವಿತ್ತೋ ಅಲ್ಲಲ್ಲಿ ಅವರು ಮೊದಲೇ ಸಿದ್ಧರಾಗಿದ್ದರು ಮತ್ತು ಆ ಮೃಗ ಎತ್ತ ಹೋಗುತ್ತಿತ್ತೋ ಅತ್ತ ಅವರೂ ಹೋಗುತ್ತಿದ್ದರು. ಅದನ್ನು ಬಿಟ್ಟು ಅಗಲುತ್ತಿರಲಿಲ್ಲ.
37 : ಅವುಗಳ ಮೇಲೆ ಮೇಲ್ಚಪ್ಪರವುಳ್ಳ ಮರದ ಬಲವಾದ ಅಂಬಾರಿಗಳು, ಒಂದೊಂದು ಆನೆಯ ಮೇಲೆ ಒಂದೊಂದು ಇದ್ದವು. ಬಹು ಯುಕ್ತಿಯಿಂದ ಆ ಅಂಬಾರಿಗಳನ್ನು ಅವುಗಳ ಮೇಲೆ ಬಿಗಿದಿದ್ದರು. ಪ್ರತಿಯೊಂದರ ಮೇಲೆ, ಅದರ ಮಾಹುತನಾದ ಇಂಡಿಯದವನು ಇದ್ದನು. ಅಲ್ಲದೆ ಅವುಗಳ ಮೇಲೆ ಯುದ್ಧಮಾಡಬಲ್ಲ ಮೂವರು ಜನ ಯೋಧರು ಇದ್ದರು
38 : ಇವರು ಪಂಕ್ತಿವ್ಯೂಹಗಳ ಮರೆಯಲ್ಲಿದ್ದು ಕೊಂಡು ಶತ್ರುಗಳಲ್ಲಿ ಭಯಹುಟ್ಟಿಸುತ್ತಿದ್ದರು. ಉಳಿದ ಅಶ್ವಬಲವನ್ನು ಸೈನ್ಯದ ಎರಡು ಭಾಗಗಳ ಆಚೆಯೂ ಈಚೆಯೂ ಇರಿಸಿದ್ದನು.
39 : ಬಂಗಾರ, ಹಿತ್ತಾಳೆಯ ಗುಬುಟುಗಳ ಮೇಲೆ ಸೂರ್ಯನ ಪ್ರಕಾಶವು ಬಿದ್ದಾಗ, ಅವುಗಳ ನಿಮಿತ್ತ ಗುಡ್ಡಗಳೇ ಪ್ರಕಾಶಿಸಿ, ಉರಿಯುವ ಪಂಜುಗಳಂತೆ ಹೊಳೆಯುತ್ತಿದ್ದವು.
40 : ಅರಸನ ದಂಡಿನ ಕೆಲವು ಭಾಗ ಎತ್ತರವಾದ ಗುಡ್ಡಗಳ ಮೇಲೆಯೂ ಇನ್ನು ಕೆಲವರು ಕೆಳಗಡೆಯೂ ಹರಡಿಕೊಂಡಿದ್ದು ಭದ್ರವಾಗಿಯೂ ಕ್ರಮಬದ್ಧವಾಗಿಯೂ ಬರುತ್ತಿದ್ದರು.
41 : ಸೈನ್ಯವು ಬಹಳ ದೊಡ್ಡದಾಗಿತ್ತು, ಬಲಾಢ್ಯವೂ ಆಗಿತ್ತು. ಆ ಸೈನಿಕರ ಸದ್ದನ್ನು, ಅದು ಮುಂದೆ ನಡೆದಾಗ ಆಗುತ್ತಿದ್ದ ಕಾಲ್ಸಪ್ಪಳವನ್ನು ಹಾಗು ಆಯುಧಗಳ ಫಣಫಣ ಶಬ್ದವನ್ನು ಕೇಳಿದವರೆಲ್ಲರು ನಡುಗಿದರು.
42 : ಯೂದನೂ ಅವನ ಸೈನ್ಯವೂ ಸಮೀಪಿಸಿ ಯುದ್ಧಮಾಡಲು, ಅರಸನ ದಳದಲ್ಲಿ ಆರುನೂರು ಜನರು ಮಡಿದರು.
43 : ಅವರಾನ ಎಂದು ಹೆಸರಿಸಲಾಗಿದ್ದ ಎಲ್ಲಾಜಾರನು, ರಾಜಯೋಗ್ಯವಾದ ಎದೆ ಕವಚದಿಂದ ಅಲಂಕೃತವಾಗಿದ್ದ ಹಾಗು ಉಳಿದ ಎಲ್ಲ ಆನೆಗಳಿಗಿಂತಲೂ ಎತ್ತರವಾಗಿದ್ದ ಒಂದು ಆನೆಯನ್ನು ಕಂಡನು.
44 : ಅದರ ಮೇಲೆ ಅರಸನಿರುವಂತೆ ಕಾಣಿಸಿತು. ಎಲ್ಲಾಜಾರನು ತನ್ನ ಜನರನ್ನು ರಕ್ಷಿಸಿ ಕೀರ್ತಿಗಳಿಸುವ ಸಮಯವು ಇದೇ ಎಂದು ನೆನಸಿ,
45 : ಅವನ ಮೇಲೆ ಏರಿಹೋಗ ಬೇಕೆಂದು ಧೈರ್ಯದಿಂದ ಪಂಕ್ತಿವ್ಯೂಹದೊಳಗೆ ನುಗ್ಗಿ, ಎಡಬಲದಲ್ಲಿದ್ದವರನ್ನು ಹೊಡೆಯುತ್ತಾ ಬರಲು ಅವರು ಆಚೆ ಈಚೆ ಚದರಿದರು.
46 : ಆಗ ಎಲ್ಲಾಜಾರನು ಆನೆಯ ಬುಡಕ್ಕೆ ನುಗ್ಗಿ, ಕೆಳಗಿನಿಂದ ಅದನ್ನು ಇರಿದು ಕೊಂದನು. ಅದು ನೆಲಕ್ಕುರುಳಿ ಅವನ ಮೇಲೆಯೇ ಬಿದ್ದದ್ದರಿಂದ ಅವನೂ ಅಲ್ಲೆ ಸತ್ತನು.
47 : ಆಗ ಯೆಹೂದ್ಯರು, ಶತ್ರು ಸಾಮ್ರಾಜ್ಯದ ಬಲವನ್ನೂ ಅದರ ದೌಡಿನ ಭೀಕರತೆಯನ್ನೂ ಕಂಡು ಅಲ್ಲಿಂದ ಹಿಂದಕ್ಕೆ ಸರಿದರು.
48 : ಅರಸನ ಸೈನಿಕರು ಯೆಹೂದ್ಯರನ್ನು ಎದುರುಗೊಳ್ಳಲು ಜೆರುಸಲೇಮಿಗೆ ಹೋದರು. ಅರಸನು ಜುದೇಯದ ಎದುರಿಗೆ ಹಾಗು ಸಿಯೋನ್ ಗಿರಿಯ ಎದುರಿಗೆ ಬೀಡುಬಿಟ್ಟುಕೊಂಡನು.
49 : ಬೇತ್ಸೂರಿನವರೊಂದಿಗೆ ಅವನು ಸಂಧಾನ ಮಾಡಿಕೊಂಡನು. ಆಗ ನಾಡಿಗೆ ‘ಸಬ್ಬತ್’ ಇದ್ದುದರಿಂದ ಮುತ್ತಿಗೆಯನ್ನು ಎದುರಿಸಲು ಅವರಿಗೆ ಆಹಾರವಿರಲಿಲ್ಲ. ಆದುದರಿಂದ ಅವರು ಪಟ್ಟಣವನ್ನು ಬಿಟ್ಟು ಹೊರಗೆ ಬಂದರು.
50 : ಹೀಗೆ ಅರಸನು ಬೇತ್ಸೂರನ್ನು ಕೈವಶಮಾಡಿಕೊಂಡು ಅದನ್ನು ಕಾಯುವುದಕ್ಕೆ ಸೈನ್ಯವನ್ನು ಇಟ್ಟನು.
51 : ಅವನು ಮಹಾಪವಿತ್ರಾಲಯದ ಎದುರಾಗಿ ಅನೇಕ ದಿನಗಳವರೆಗೆ ಬೀಡು ಬಿಟ್ಟುಕೊಂಡನು, ಮತ್ತು ಅಲ್ಲಿ ಮುತ್ತಿಗೆಯ ದಿಬ್ಬಗಳನ್ನೂ ಯುದ್ಧಯಂತ್ರಗಳನ್ನೂ ಬೆಂಕಿ ಕಲ್ಲುಗಳನ್ನೊಗೆಯುವ ಯಂತ್ರಗಳನ್ನೂ ಭಲ್ಲೆಗಳನ್ನೆಸೆಯುವ ಯಂತ್ರಗಳನ್ನೂ ಕಲ್ಲುಬೀಸುವ ಯಂತ್ರಗಳನ್ನೂ ನಿಲ್ಲಿಸಿದನು.
52 : ಯೆಹೂದ್ಯರು ಸಹ ಅವರ ಯಂತ್ರಗಳಿಗೆ ಪ್ರತಿಯಾಗಿ ತಮ್ಮ ಯಂತ್ರಗಳನ್ನಿಟ್ಟುಕೊಂಡು ಬಹುದಿನಗಳವರೆಗೆ ಹೋರಾಡಿದರು.
53 : ಆ ವರ್ಷ ಏಳನೇ ವರ್ಷ ಆಗಿದ್ದುದರಿಂದ ಪವಿತ್ರಾಲಯದಲ್ಲಿ ಆಹಾರ ಇರಲಿಲ್ಲ, ಅದು ಮಾತ್ರವಲ್ಲ ಅನ್ಯದೇಶಗಳಿಂದ ಜುದೇಯಕ್ಕೆ ಆಶ್ರಯಕ್ಕಾಗಿ ಬಂದವರು ಅಲ್ಲಿ ಉಳಿದಿದ್ದ ಧಾನ್ಯಸಂಗ್ರಹವನ್ನೆಲ್ಲಾ ತೀರಿಸಿಬಿಟ್ಟಿದ್ದರು.
54 : ಇದಲ್ಲದೆ, ಪವಿತ್ರಾಲಯದಲ್ಲಿ ಸ್ವಲ್ಪ ಜನರು ಮಾತ್ರ ಉಳಿದುಕೊಂಡಿದ್ದರು; ಏಕೆಂದರೆ ಬರವು ಪ್ರಬಲವಾಗಿದ್ದುದರಿಂದ ಪ್ರತಿಯೊಬ್ಬನು ತನ್ನ ತನ್ನ ಸ್ಥಳಕ್ಕೆ ಚದರಿಹೋಗಿದ್ದನು.
55 : ಅರಸ ಅಂತಿಯೋಕನು ಇನ್ನೂ ಬದುಕಿರುವಾಗ ತನ್ನ ಮಗ ಅಂತಿಯೋಕನು ಅರಸನಾಗುವಂತೆ ಅವನಿಗೆ ತರಬೇತು ನೀಡಲು ನಿಯಮಿಸಿದ್ದ ಫಿಲಿಪ್ಪನು ಪರ್ಷಿಯಾ ಮತ್ತು ಮೇದ್ಯದಿಂದ ಹಿಂದಿರುಗಿ ಬಂದಿರುವನೆಂದು ಲೂಸ್ಯನಿಗೆ ತಿಳಿಯಿತು.
56 : ಅವನು ಅರಸನ ಸಂಗಡ ಹೋಗಿದ್ದ ಸೈನ್ಯವನ್ನು ತನ್ನ ಸಂಗಡ ತಂದಿದ್ದಾನೆಂದೂ ತಾನೇ ರಾಜ್ಯಾಧಿಕಾರವಹಿಸಲು ಹವಣಿಸುತ್ತಾ ಇದ್ದಾನೆಂದೂ ಅವನಿಗೆ ತಿಳಿದುಬಂದಿತು.
57 : ಎಂದೇ ಲೂಸ್ಯನು ತಡಮಾಡದೆ ಹಿಮ್ಮೆಟ್ಟಲು ಸಿದ್ಧನಾದನು. ಅವನು ಅರಸನಿಗೂ ದಳಾವಾಯಿಗಳಿಗೂ ಸೈನಿಕರಿಗೂ, “ನಾವಿಲ್ಲಿ ದಿನದಿನಕ್ಕೆ ಕ್ಷೀಣವಾಗುತ್ತಿದ್ದೇವೆ, ಆಹಾರವೂ ಕಡಿಮೆ ಆಗುತ್ತಿದೆ. ನಾವು ಮುತ್ತಿಗೆ ಹಾಕಿರುವ ಸ್ಥಳವೂ ಬಲವಾದ ದುರ್ಗವಾಗಿದೆ ಮತ್ತು ರಾಜ್ಯದ ಆಡಳಿತದ ಭಾರವೂ ನಮ್ಮ ಮೇಲೆ ಬಿದ್ದುಕೊಂಡಿದೆ.
58 : ಹೀಗಿರುವುದರಿಂದ ನಾವೀಗ ನಯ ವಿನಯದಿಂದ ಇವರೊಂದಿಗೂ ಇವರ ಯೆಹೂದ್ಯ ಜನಾಂಗದೊಂದಿಗೂ ಸಂಧಾನ ಮಾಡಿಕೊಳ್ಳೋಣ;
59 : ಮತ್ತು ಅವರು ಮೊದಲಿನಂತೆ ತಮ್ಮ ಸ್ವಧರ್ಮದ ಪ್ರಕಾರ ನಡೆದುಕೊಳ್ಳಬಹುದು ಎಂದು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳೋಣ, ಏಕೆಂದರೆ ನಾವು ತೆಗೆದು ಹಾಕಿದ ಅವರ ನಿಬಂಧನೆಗಳ ದೆಸೆಯಿಂದಲೇ ಅವರು ಕೋಪಗೊಂಡು ಇವುಗಳನ್ನೆಲ್ಲಾ ಮಾಡಿದ್ದಾರೆ,” ಎಂದು ಹೇಳಿದನು.
60 : ಈ ಮಾತು ಅರಸನಿಗೂ ಅವನ ಸೇನಾಧಿಪತಿಗಳಿಗೂ ಹಿಡಿಸಿತು. ಅವನು ಸಂಧಾನಕ್ಕಾಗಿ ಅವರ ಕಡೆಗೆ ಜನರನ್ನು ಕಳುಹಿಸಿದನು; ಅವರೂ ಅದಕ್ಕೆ ಸಮ್ಮತಿಸಿದರು.
61 : ಅರಸನೂ ಅವನ ಅಧಿಕಾರಿಗಳೂ ಪ್ರಮಾಣಮಾಡಿದ ಮೇಲೆ ದುರ್ಗದಲ್ಲಿದ್ದವರು ಅಲ್ಲಿಂದ ಹೊರಗೆ ಬಂದರು.
62 : ತರುವಾಯ ಅರಸನು ಸಿಯೋನ್ ಗುಡ್ಡದ ಮೇಲೆ ಹೋದನು; ಆದರೆ ಆ ಸ್ಥಳ ಅಭೇದ್ಯ ಆಗಿರುವುದನ್ನು ಕಂಡಾಗ ತಾನು ಮಾಡಿದ ಪ್ರಮಾಣವನ್ನು ಮುರಿದು, ಅಲ್ಲಿದ್ದ ಆವರಣದ ಗೋಡೆಯನ್ನು ಕೆಡವಲು ಅಪ್ಪಣೆ ಮಾಡಿದನು.
63 : ಅನಂತರ ತುರ್ತಾಗಿ ಅಲ್ಲಿಂದ ಅಂತಿಯೋಕ್ಯಕ್ಕೆ ಬಂದನು. ಅಲ್ಲಿ ಫಿಲಿಪ್ಪನು ಒಡೆತನ ಮಾಡುತ್ತಿದ್ದುದನ್ನು ಕಂಡು ಅವನೊಂದಿಗೆ ಯುದ್ಧಮಾಡಿ ಬಲವಂತವಾಗಿ ಪಟ್ಟಣವನ್ನು ಕೈವಶಮಾಡಿಕೊಂಡನು.

· © 2017 kannadacatholicbible.org Privacy Policy