1 : ಗೊರ್ಗಿಯನು ಐದು ಸಾವಿರ ಕಾಲಾಳುಗಳನ್ನೂ ಒಂದು ಸಾವಿರ ಶ್ರೇಷ್ಠ ರಾಹುತರನ್ನೂ ತೆಗೆದುಕೊಂಡು ರಾತ್ರಿಯಲ್ಲಿ ತನ್ನ ಸ್ಥಳ ಬಿಟ್ಟನು. ತಾನು ಯೆಹೂದ್ಯರ ಮೇಲೆ ದಾಳಿ ಮಾಡಿ, ಅವರನ್ನು ಅನಿರೀಕ್ಷಿತವಾಗಿ ಸಂಹರಿಸಬೇಕೆಂದಿದ್ದನು.
2 : ಕೋಟೆಯಲ್ಲಿದ್ದ ಜನರು ಅವನಿಗೆ ಮಾರ್ಗದರ್ಶಕರಾಗಿದ್ದರು.
3 : ಯೂದನು ಈ ಸುದ್ದಿಯನ್ನು ಕೇಳಿ,
4 : ಅವನೂ ಅವನ ಯೋಧರೂ ಶತ್ರುಪಡೆಗಳು ಪಾಳೆಯವನ್ನು ಬಿಟ್ಟು ಚದರಿರುವಾಗಲೇ ಎಮ್ಮಾವುನಲ್ಲಿದ್ದ ಅರಸನ ದಂಡವನ್ನು ಹೊಡೆಯಬೇಕೆಂದು ಹೊರಟರು
5 : ಗೊರ್ಗಿಯನು ರಾತ್ರಿಯಲ್ಲಿ ಯೂದನ ಚಾವಣಿಗೆ ಬಂದನು. ಆದರೆ ಅಲ್ಲಿ ಯಾರನ್ನೂ ಕಾಣಲಿಲ್ಲ. ಆಮೇಲೆ ಇವರು ತಮಗೆ ಅಂಜಿ ಓಡಿಹೋಗುತ್ತಿದ್ದಾರೆಂದು ನೆನಸಿ, ಗುಡ್ಡಗಳಲ್ಲಿ ಅವರನ್ನು ಹುಡುಕಿದನು.
6 : ಬೆಳಗಾಗುತ್ತಲೇ ಯೂದನು ತನ್ನ ಮೂರು ಸಾವಿರ ಸೈನಿಕರೊಂದಿಗೆ ಬಯಲು ಪ್ರದೇಶದಲ್ಲಿ ಕಾಣಿಸಿಕೊಂಡನು; ಆದರೆ ಅವರ ಬಳಿ ತಕ್ಕ ಕವಚಗಳಾಗಲಿ, ಕತ್ತಿಗಳಾಗಲಿ ಇರಲಿಲ್ಲ.
7 : ಬದಲಿಗೆ, ಅನ್ಯರ ಶಿಬಿರದಲ್ಲಿ ಬಲವಾದ ವ್ಯೂಹ ರಚಿಸಲಾಗಿತ್ತು; ಅವರು ಯುದ್ಧದಲ್ಲಿ ನಿಪುಣರಾಗಿಯೇ ಕಂಡುಬಂದರು.
8 : ಯೂದನು ತನ್ನ ಸಂಗಡ ಇದ್ದವರಿಗೆ, “ಅವರ ಸಂಖ್ಯೆಯನ್ನು ನೋಡಿ ಅಂಜಬೇಡಿ, ಅವರ ದಾಳಿಗೆ ಹೆದರಬೇಡಿ.
9 : ಫರೋಹನು ತನ್ನ ಸೈನ್ಯದೊಂದಿಗೆ ನಮ್ಮ ಪೂರ್ವಜರನ್ನು ಬೆನ್ನಟ್ಟಿ ಬಂದಾಗ, ಅವರು ಕೆಂಪು ಸಮುದ್ರದಲ್ಲಿ ಹೇಗೆ ರಕ್ಷಿಸಲ್ಪಟ್ಟರೆಂಬುದನ್ನು ಸ್ಮರಿಸಿಕೊಳ್ಳಿ.
10 : ನಾವೀಗ ದೇವರಿಗೆ ಮೊರೆಯಿಡೋಣ; ಅವರು ನಮ್ಮನ್ನು ಆಲೈಸಿ, ನಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನೆದುಕೊಂಡು, ಈ ದಿನ ನಮ್ಮ ಕಣ್ಮುಂದೆಯೇ ಆ ಸೈನ್ಯವನ್ನು ನಾಶಗೊಳಿಸಬಹುದು.
11 : ಹೀಗೆ, ಇಸ್ರಯೇಲರನ್ನು ವಿಮೋಚಿಸಿ ಕಾಪಾಡುವಾತನು ಒಬ್ಬನಿದ್ದಾನೆ ಎಂದು ಅನ್ಯರೆಲ್ಲರೂ ಅರಿತುಕೊಳ್ಳುವರು,” ಎಂದು ಹೇಳಿದನು.
12 : ಅನ್ಯರು ಕಣ್ಣೆತ್ತಿ ಇಸ್ರಯೇಲರು ತಮಗೆದುರಾಗಿ ಬರುತ್ತಿರುವುದನ್ನು ಕಂಡರು.
13 : ಅವರು ಯುದ್ಧಮಾಡುವುದಕ್ಕಾಗಿ ತಮ್ಮ ಪಾಳೆಯವನ್ನು ಬಿಟ್ಟು ಹೊರಡಲು, ಯೂದನ ಸಂಗಡ ಇದ್ದವರೂ ತುತೂರಿಗಳನ್ನು ಊದಿದರು.
14 : ಕೈಗೆ ಕೈ ಹತ್ತಲಾಗಿ ಅನ್ಯರು ಸೋತು ಬಯಲಿನ ಕಡೆಗೆ ಓಡಿಹೋದರು. ಹಿಂಬಾಗದ ಸೈನ್ಯವೆಲ್ಲಾ ಕತ್ತಿಗೆ ತುತ್ತಾಯಿತು.
15 : ಇಸ್ರಯೇಲರು ಅವರನ್ನು ಗಜರಾ, ಇದುಮೇಯದ ಬಯಲು, ಅಜೋತು ಮತ್ತು ಜಾಮ್ನಿಯದವರೆಗೂ ಬೆನ್ನಟ್ಟಿ ಹೋದರು.
16 : ಅಂದು ಅವರಲ್ಲಿ ಮೂರು ಸಾವಿರ ಜನರು ಹತರಾದರು. ತರುವಾಯ ಯೂದನೂ ಅವನ ದಳವೂ ಬೆನ್ನಟ್ಟುವುದನ್ನು ಬಿಟ್ಟು ಹಿಂದಿರುಗಿದರು.
17 : ಅವನು ತನ್ನವರಿಗೆ, “ಈಗಲೇ ಕೊಳ್ಳೆಗಾಗಿ ಆಶೆ ಪಡಬೇಡಿ, ನಾವು ಇನ್ನೂ ಯುದ್ಧ ಮಾಡುವುದಿದೆ.
18 : ಗೊರ್ಗಿಯನೂ ಅವನ ದಂಡೂ ನಮ್ಮ ಸಮೀಪ ಗುಡ್ಡಗಳಲ್ಲಿಯೇ ಇದ್ದಾರೆ. ಆದುದರಿಂದ ಈಗ ವೈರಿಗಳನ್ನು ಎದುರಿಸಿ ನಿಲ್ಲಿ; ಅವರೊಂದಿಗೆ ಕಾದಾಡಿರಿ; ಆಮೇಲೆ ಧೈರ್ಯದಿಂದ ಕೊಳ್ಳೆಗೆ ಕೈ ಹಾಕಿ,” ಎಂದು ಹೇಳಿದನು.
19 : ಯೂದನು ಈ ಮಾತುಗಳನ್ನು ಹೇಳಿ ಮುಗಿಸುತ್ತಿರುವಾಗಲೇ ಶತ್ರುಗಳ ಒಂದು ಭಾಗ ಗುಡ್ಡದ ಮೇಲೆ ನಿಂತುಕೊಂಡು ನೋಡುತ್ತಿರುವುದು ಕಂಡಿತು.
20 : ಅವರು, ತಮ್ಮ ಸೈನ್ಯ ಪಲಾಯನ ಗೈದುದನ್ನೂ ತಮ್ಮ ಶಿಬಿರಕ್ಕೆ ಬೆಂಕಿ ಹಚ್ಚಿದುದನ್ನೂ ಕಂಡರು. ಆಡುತ್ತಿದ್ದ ಹೊಗೆಯೇ ನಡೆದುದನ್ನು ತೋರಿಸಿತು. ಅವರು ಈ ಘಟನೆಗಳನ್ನು ಕಂಡು ಭಯಭ್ರಾಂತರಾದರು.
21 : ಇದಲ್ಲದೆ, ಯೂದನ ಸೈನ್ಯವು ತಿರುಗಿ ಸಮರಕ್ಕೆ ಸಿದ್ಧವಾಗಿ ಬಯಲಲ್ಲಿ ನಿಂತಿರುವುದನ್ನು ಕಂಡು,
22 : ಎಲ್ಲರೂ ಫಿಲಿಷ್ಟಿಯರ ನಾಡಿಗೆ ಓಡಿಹೋದರು.
23 : ಯೂದನು ಅವರ ಶಿಬಿರವನ್ನು ಕೊಳ್ಳೆಹೊಡೆಯಲು ಬಂದನು. ಅಂದು ಅವರಿಗೆ ಬಹಳ ಬೆಳ್ಳಿ ಬಂಗಾರವೂ ನೀಲಿ ಮತ್ತು ನೇರಳೆ ಬಣ್ಣದ ರೇಶ್ಮೆಯ ವಸ್ತ್ರಗಳೂ ಅಪಾರ ಸಂಪತ್ತೂ ಸಿಕ್ಕಿತು.
24 : ಅವರು ಮನೆಗೆ ಹಿಂದಿರುಗಿ ಬಂದು ದೇವರನ್ನು ಸ್ತುತಿಸಿದರು; “ಆತ ಕರುಣಾಮೂರ್ತಿ, ಆತನ ಅಚಲ ಪ್ರೀತಿ ಶಾಶ್ವತ” ಎಂದು ಹೇಳುತ್ತಾ ಆತನನ್ನು ಕೊಂಡಾಡಿದರು.
25 : ಅಂದು ಇಸ್ರಯೇಲರಿಗೆ ಮಹಾವಿಮೋಚನೆ ದೊರಕಿತು.
26 : ತಪ್ಪಿಸಿಕೊಂಡು ಹೋದ ಅನ್ಯರು ಲೂಸ್ಯನ ಬಳಿಗೆ ಬಂದು ನಡೆದ ಸಂಗತಿಯನ್ನೆಲ್ಲ ತಿಳಿಸಿದರು.
27 : ಅವನು ಇದನ್ನು ಕೇಳಿ, ದಿಗ್ಭ್ರಮೆಗೊಂಡು ಧೈರ್ಯಗೆಟ್ಟನು. ಏಕೆಂದರೆ ಇಸ್ರಯೇಲರಿಗೆ ತಾನು ಮಾಡಬೇಕೆಂದಿದ್ದ ಶಾಸ್ತಿಯಾಗಲಿ, ಅರಸನು ಆಜ್ಞಾಪಿಸಿದವುಗಳಾಗಲಿ ನೆರವೇರಲಿಲ್ಲ.
28 : ಮಾರನೆಯ ವರ್ಷ ಅವನು, ಇಸ್ರಯೇಲರನ್ನು ನಿಗ್ರಹಿಸಬೇಕೆಂದು ಅರವತ್ತು ಸಾವಿರ ಕಾಲಾಳುಗಳನ್ನೂ ಐದು ಸಾವಿರ ರಾಹುತರನ್ನೂ ಕೂಡಿಸಿದನು.
29 : ಅವರು ಎದೋಮಿಗೆ ಬಂದು ಬೇತ್ಸೂರ ಎಂಬಲ್ಲಿ ಬೀಡುಬಿಟ್ಟರು. ಯೂದನು ಹತ್ತು ಸಾವಿರ ಜನರೊಡನೆ ಅವರನ್ನು ಎದುರಿಸಿದನು.
30 : ಶತ್ರುದಳವು ಬಹು ಬಲಾಢ್ಯವಾಗಿರುವುದನ್ನು ಕಂಡು ಹೀಗೆ ಪ್ರಾರ್ಥಿಸಿದನು: “ಹೇ ಇಸ್ರಯೇಲರ ಉದ್ಧಾರಕನೇ, ತಾವು ಸುವಂದ್ಯರು! ಬಲಾಢ್ಯನೊಬ್ಬನ ಉಪಟಳವನ್ನು ನಿಮ್ಮ ದಾಸ ದಾವೀದನ ಮೂಲಕ ಅಡಗಿಸಿದವರು! ಫಿಲಿಷ್ಟಿಯರ ಸೈನ್ಯವನ್ನು ಸೌಲನ ಮಗ ಯೋನಾತನನ ಹಾಗು ಅವನ ಆಯುಧ ವಾಹಕನ ಕೈಗೆ ಕೊಟ್ಟವರು!
31 : ಈ ಸೈನ್ಯವನ್ನು ನಿಮ್ಮ ಜನರಾದ ಇಸ್ರಯೇಲರ ಕೈಗೆ ಕೊಟ್ಟು ಬಿಡಿ. ಶತ್ರುಗಳು ತಾವು ತಂದ ಸೈನ್ಯದ ಹಾಗೂ ರಾಹುತರ ನಿಮಿತ್ತ ನಾಚಿಕೊಳ್ಳುವಂತಾಗಲಿ.
32 : ಅವರನ್ನು ಹೇಡಿಗಳನ್ನಾಗಿ ಮಾಡಿ; ಅವರ ಶಕ್ತಿಯನ್ನೂ ಧೈರ್ಯವನ್ನೂ ಕುಂದಿಸಿಬಿಡಿ. ಅವರು ತಮ್ಮ ನಾಶವನ್ನು ಕಂಡು ನಡುಗಲಿ.
33 : ನಿಮ್ಮನ್ನು ಪ್ರೀತಿಸುವವರ ಕತ್ತಿಯಿಂದ ಅವರನ್ನು ಸಂಹಾರ ಮಾಡಿ ನಿಮ್ಮ ನಾಮಮಹತ್ತನ್ನು ನೋಡುವವರೆಲ್ಲರೂ ನಿಮಗೆ ಕೃತಜ್ಞತಾಸ್ತುತಿ ಸಲ್ಲಿಸುವಂತಾಗಲಿ!” ಎಂದನು.
34 : ಆಮೇಲೆ ಅವರು ಯುದ್ಧವನ್ನು ಆರಂಭಿಸಿದರು. ಅಂದು ಲೂಸ್ಯನ ಸೈನ್ಯದಲ್ಲಿ ಐದುಸಾವಿರ ಜನರು ಹತರಾದರು
35 : ಅವರ ಕಣ್ಣೆದುರಿನಲ್ಲಿಯೇ ಶತ್ರುಗಳು ನೆಲಕ್ಕುರುಳಿದರು. ಲೂಸ್ಯನು, ತನ್ನ ಸೈನ್ಯವು ಕಾಲ್ದೆಗೆದುದನ್ನೂ ತಮ್ಮನ್ನು ಎದುರಿಸಿದ ಯೂದನ ಅನುಯಾಯಿಗಳಲ್ಲಿ ತುಂಬಿದ್ದ ಧೈರ್ಯವನ್ನೂ ಅವರು ಮಾನದಿಂದ ಜೀವಿಸುವುದಕ್ಕೂ ಸಾಯುವುದಕ್ಕೂ ಸಿದ್ಧರಾಗಿದ್ದುದನ್ನೂ ಕಂಡು, ತನ್ನ ಸೈನ್ಯವನ್ನು ಜಮಾಯಿಸಿಕೊಂಡು ಅಂತಿಯೋಕ್ಯಕ್ಕೆ ಹಿಂದಿರುಗಿದನು. ಅದಕ್ಕಿಂತಲೂ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಜುದೇಯದ ಮೇಲೆ ದಂಡೆತ್ತಿ ಹೋಗಬೇಕೆಂದು ಬಾಡಿಗೆಯ ಸೈನ್ಯವನ್ನು ಕೂಡಿಸಿದನು.
36 : ಇತ್ತ ಯೂದನೂ ಅವನ ಬಂಧುಗಳೂ, “ನಮ್ಮ ಶತ್ರುಗಳಂತೂ ಸೋತುಹೋದರು; ನಾವಿನ್ನು ಪವಿತ್ರಾಲಯವನ್ನು ಶುಚಿಮಾಡುವುದಕ್ಕೆ ಹೋಗೋಣ; ಅದನ್ನು ಹೊಸದಾಗಿ ಪ್ರತಿಷ್ಠಿಸೋಣ,” ಎಂದುಕೊಂಡರು.
37 : ಸೈನ್ಯವೆಲ್ಲಾ ಮರಳಿ ಕೂಡಿಬರಲು, ಅವರೆಲ್ಲರು ಸಿಯೋನ್ ಗಿರಿಗೆ ಹೋದರು.
38 : ಅಲ್ಲಿಗೆ ಹೋಗಿ ನೋಡುವಾಗ ಪವಿತ್ರಾಲಯವು ಹಾಳಾಗಿಹೋಗಿತ್ತು; ಬಲಿಪೀಠವು ಅಮಂಗಲವಾಗಿತ್ತು; ಮಹಾದ್ವಾರಗಳು ಸುಟ್ಟು ಹೋಗಿದ್ದವು; ಅಡವಿಯಲ್ಲಿ, ಇಲ್ಲವೇ ಗುಡ್ಡಗಳಲ್ಲಿ, ಬೆಳೆಯುವಂತೆ ಅದರ ಪ್ರಾಕಾರದಲ್ಲೆಲ್ಲ ಗಿಡಗಂಟಿಗಳು ಬೆಳೆದಿದ್ದವು; ಯಾಜಕರ ಕೋಣೆಗಳನ್ನು ಕೆಡವಲಾಗಿತ್ತು.
39 : ಇದನ್ನೆಲ್ಲ ಕಂಡು, ಅವರು ಸಿಟ್ಟಿನಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ಬಹಳವಾಗಿ ಗೋಳಾಡಿ, ತಮ್ಮ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡರು.
40 : ನೆಲದಮೇಲೆ ಬೋರಲು ಬಿದ್ದು, ಘೋಷಣೆ ಹಾಕಿ, ತುತೂರಿಗಳನ್ನು ಊದಿ, ದೇವರಿಗೆ ಮೊರೆಯಿಟ್ಟರು.
41 : ತರುವಾಯ ಯೂದನು, ತಾನು ದೇವಾಲಯವನ್ನು ಶುಚಿಮಾಡುವವರೆಗೆ, ಕೋಟೆಯಲ್ಲಿದ್ದವರ ಸಂಗಡ ಕಾದಾಡುವುದಕ್ಕೆ ಕೆಲವು ಜನರನ್ನು ನೇಮಿಸಿದನು.
42 : ಧರ್ಮಶಾಸ್ತ್ರ ಪಾಲನೆಯಲ್ಲಿ ಆನಂದಪಡುತ್ತಿದ್ದ ನಿರ್ದೋಷಿಗಳಾದ ಕೆಲವು ಯಾಜಕರನ್ನು ಆರಿಸಿಕೊಂಡನು.
43 : ಇವರು ಪವಿತ್ರಾಲಯವನ್ನು ಶುದ್ಧೀಕರಿಸಿದರು, ಮತ್ತು ಹೊಲೆಯಾಗಿದ್ದ ಕಲ್ಲುಗಳನ್ನೆಲ್ಲ ತೆಗೆದುಕೊಂಡು ಹೋಗಿ, ಅಶುದ್ಧ ಸ್ಥಳದಲ್ಲಿ ಬಿಸಾಡಿದರು.
44 : ಅನಂತರ ಅಶುದ್ಧವಾಗಿದ್ದ ದಹನ ಬಲಿಪೀಠವನ್ನು ಏನು ಮಾಡಬೇಕೆಂದು ಆಲೋಚನೆಮಾಡಿದರು.
45 : ಆಗ ಅವರಿಗೆ ಒಂದು ಒಳ್ಳೆಯ ಆಲೋಚನೆ ಹೊಳೆಯಿತು; ಅದು ನಿಂದೆಗೆ ಕಾರಣವಾಗುವುದು; ಆದುದರಿಂದ ಅದನ್ನು ಕೆಡವಿಬಿಡಬೇಕೆಂದೇ ತೀರ್ಮಾನಿಸಿದರು. ಅದರಂತೆ ಅದನ್ನು ಕೆಡವಿಬಿಟ್ಟರು.
46 : ಅದರ ಕಲ್ಲುಗಳನ್ನು ಕುರಿತು ಉತ್ತರ ಹೇಳುವುದಕ್ಕೆ ಒಬ್ಬ ಪ್ರವಾದಿ ಏಳುವವರೆಗೆ ಅವು ಇರಲಿ ಎಂದು ಹೇಳಿ, ಅವುಗಳನ್ನು ಆಲಯವಿದ್ದ ಗುಡ್ಡದಲ್ಲಿಯೇ, ಅನುಕೂಲವಾದ ಸ್ಥಳದಲ್ಲಿ ಇಟ್ಟರು.
47 : ಆಮೇಲೆ ಅವರು ಧರ್ಮಶಾಸ್ತ್ರದ ಪ್ರಕಾರ ಹೊಸ ಒರಟುಮೊರಟು ಕಲ್ಲುಗಳನ್ನು ತೆಗೆದುಕೊಂಡು, ಮೊದಲಿನದರಂತೆ ಹೊಸದೊಂದು ಬಲಿಪೀಠವನ್ನು ಕಟ್ಟಿದರು.
48 : ಇದಲ್ಲದೆ ಪವಿತ್ರಸ್ಥಾನವನ್ನೂ ಆಲಯದ ಒಳಭಾಗವನ್ನೂ ಕಟ್ಟಿ, ಪ್ರಾಕಾರಗಳನ್ನು ಹಸನು ಮಾಡಿದರು.
49 : ಹೊಸ ಪವಿತ್ರ ಪಾತ್ರೆಗಳನ್ನೂ ಮಾಡಿಸಿದರು. ದೀಪವೃಕ್ಷವನ್ನು, ದಹನಬಲಿಪೀಠವನ್ನು, ಧೂಪಪೀಠವನ್ನು ಹಾಗು ಮೇಜನ್ನು ಆಲಯದೊಳಗೆ ತಂದಿಟ್ಟರು.
50 : ತರುವಾಯ ಧೂಪಪೀಠದ ಮೇಲೆ ಸಾಂಬ್ರಾಣಿಯನ್ನು ಸುಟ್ಟು, ದೀಪವೃಕ್ಷದಲ್ಲಿದ್ದ ದೀವಿಗೆಗಳನ್ನು ಹಚ್ಚಿ, ದೇವಾಲಯವನ್ನು ಬೆಳಗಿಸಿದರು.
51 : ಮೇಜಿನ ಮೇಲೆ ನೈವೇದ್ಯದ ರೊಟ್ಟಿಗಳನ್ನು ತಂದಿಟ್ಟರು; ಪರದೆಗಳನ್ನು ಇಳಿಬಿಟ್ಟರು; ಈ ರೀತಿ ತಮ್ಮ ಕೆಲಸವನ್ನೆಲ್ಲ ಪೂರ್ತಿ ಮಾಡಿದರು.
52 : ಅವರು 148ನೇ ವರ್ಷದ ಒಂಬತ್ತನೆಯ ತಿಂಗಳಾದ ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸ ನಸುಕಿನಲ್ಲಿಯೇ ಎದ್ದು
53 : ತಾವು ಹೊಸದಾಗಿ ರಚಿಸಿದ್ದ ದಹನಬಲಿಪೀಠದ ಮೇಲೆ ಧರ್ಮಶಾಸ್ತ್ರಕ್ಕೆ ಸರಿಯಾಗಿ ಬಲಿಯನ್ನು ಅರ್ಪಿಸಿದರು.
54 : ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಅನ್ಯರು ಅದನ್ನು ಹೊಲೆಮಾಡಿದ್ದರೋ ಅದೇ ದಿನ ಗಾಯನ, ವೀಣೆ, ಕಿನ್ನರಿ, ತಾಳಗಳ ಸಂಭ್ರಮದಿಂದ ಅದನ್ನು ಹೊಸದಾಗಿ ಪ್ರತಿಷ್ಠಿಸಿದರು.
55 : ಜನರೆಲ್ಲರು ಬೋರಲು ಬಿದ್ದು, ತಮಗೆ ಜಯವನ್ನು ಕೊಟ್ಟ ದೇವರನ್ನು ಕೊಂಡಾಡಿ ಆರಾಧಿಸಿದರು.
56 : ಬಲಿಪೀಠದ ಪ್ರತಿಷ್ಠೆಯ ಹಬ್ಬವನ್ನು ಎಂಟು ದಿನಗಳವರೆಗೆ ಆಚರಿಸಿದರು. ಉಲ್ಲಾಸದಿಂದ ದಹನಬಲಿಗಳನ್ನು ಅರ್ಪಿಸಿದರು. ವಿಮೋಚನಾ ಮತ್ತು ಕೃತಜ್ಞತಾಸ್ತುತಿಯ ಬಲಿಯನ್ನು ಅರ್ಪಿಸಿದರು.
57 : ದೇವಾಲಯದ ಮುಂಭಾಗವನ್ನು ಚಿನ್ನದ ಮುಕುಟಗಳಿಂದಲೂ ಸಣ್ಣ ಸಣ್ಣ ಗುಬುಟುಗಳಿಂದಲೂ ಶೃಂಗರಿಸಿ, ಅದರ ಮಹಾದ್ವಾರಗಳನ್ನೂ ಯಾಜಕರ ಕೋಣೆಗಳನ್ನೂ ಪ್ರತಿಷ್ಠಿಸಿ, ಅವುಗಳಿಗೆ ಕದಗಳನ್ನು ಹಚ್ಚಿದರು.
58 : ಜನರಲ್ಲಿ ಉತ್ಸಾಹವು ತುಂಬಿತು; ಅನ್ಯ ಜನರಿಂದಾಗಿದ್ದ ಅಪಮಾನವು ದೂರ ಆಯಿತು.
59 : ತರುವಾಯ ಯೂದನು, ಅವನ ಬಂಧುಗಳು ಹಾಗು ಇಸ್ರಯೇಲರ ಸಭೆಯೆಲ್ಲವು ಕೂಡಿ, ಬಲಿಪೀಠದ ಪ್ರತಿಷ್ಠೆಯ ದಿನಗಳನ್ನು ಪ್ರತಿವರ್ಷ ಇದೇ ಕಾಲದಲ್ಲಿ ಅಂದರೆ, ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸದಿಂದ ಎಂಟು ದಿನಗಳವರೆಗೆ ಅತಿ ಸಂಭ್ರಮ ಸಂತೋಷದಿಂದ ಆಚರಿಸಬೇಕೆಂದು ಗೊತ್ತುಮಾಡಿದರು.
60 : ಹಿಂದೆ ಅನ್ಯಜನರು ಬಂದು ಸಿಯೋನ್ ಗಿರಿಯನ್ನು ತುಳಿದಾಡಿದಂತೆ ಮುಂದೆ ಮಾಡಲು ಸಾಧ್ಯವಾಗಬಾರದೆಂದು ಅದರ ಸುತ್ತಲೂ ಎತ್ತರವಾದ ಗೋಡೆಯನ್ನೂ ಬಲವಾದ ಬುರುಜುಗಳನ್ನೂ, ಆ ಕಾಲದಲ್ಲೇ ಕಟ್ಟಿಸಿದರು.
61 : ಇದುಮೇಯರ ಉಪಟಳದಿಂದ ಜನರು ಸುರಕ್ಷಿತವಾಗಿರಲೆಂದು ಅದನ್ನು ಕಾಯುವುದಕ್ಕೆ ಒಂದು ಸೈನ್ಯವನ್ನು ಇಟ್ಟಿದ್ದಲ್ಲದೆ ಬೇತ್ಸೂರನ್ನೂ ಭದ್ರಗೊಳಿಸಿದರು