1 : ಯೂದ ಮಕ್ಕಬಿಯನು
ತರುವಾಯ, ಮಕ್ಕಬಿ ಎಂದು ಹೆಸರುಗೊಂಡ ಯೂದನು ತಂದೆಗೆ ಬದಲಾಗಿ ಮುಂದಾಳಾಗಿ ನಿಂತನು.
2 : ಅವನ ಎಲ್ಲ ಸಹೋದರರು ಅವನಿಗೆ ಸಹಾಯಮಾಡಿದರು. ಅವರಂತೆಯೇ ಅವನ ತಂದೆಯನ್ನು ಹೊಂದುಕೊಂಡಿದ್ದ ಎಲ್ಲರೂ ಅವನಿಗೆ ಬೆಂಬಲವಿತ್ತರು.
3 : ಎಲ್ಲರು ಉತ್ಸಾಹದಿಂದ ಇಸ್ರಯೇಲರ ಪರವಾಗಿ ಯುದ್ಧಮಾಡಿದರು. ಯೂದನು ತನ್ನ ಜನರಿಗೆ ದೊಡ್ಡ ಕೀರ್ತಿಯನ್ನು ಸಂಪಾದಿಸಿಕೊಟ್ಟನು. ಅವನೇ ಒಬ್ಬ ಯೋಧನಂತೆ ಕವಚವನ್ನು ಹಾಕಿಕೊಂಡು, ಸಮರ ಶಸ್ತ್ರಾಸ್ತ್ರಗಳನ್ನು ಧರಿಸಿಕೊಂಡು, ಯುದ್ಧಕ್ಕೆ ಸನ್ನದ್ಧನಾಗಿ ಕತ್ತಿಯಿಂದ ತನ್ನ ಸೈನ್ಯವನ್ನು ರಕ್ಷಿಸುತ್ತಿದ್ದನು.
4 : ಅವನಿದ್ದನು ತನ್ನ ಕೆಲಸಕಾರ್ಯಗಳಲ್ಲಿ
ಕೇಸರಿಯಂತೆ
ಬೇಟೆಗಾಗಿ ಗರ್ಜಿಸುತ್ತಿದ್ದ ಸಿಂಹದ
ಮರಿಯಂತೆ.
5 : ಹುಡುಕುತ್ತಾ ಬೆನ್ನಟ್ಟುತ್ತಿದ್ದನು
ಅಧರ್ಮಿಗಳನು
ತನ್ನ ಜನಾಂಗವನು ಪೀಡಿಸುತ್ತಿದ್ದವರನು
ಸುಟ್ಟುಬಿಡುವನು
6 : ಅಧರ್ಮಿಗಳಂತು ಅವನಿಗೆ ಹೆದರಿ
ಹಿಪ್ಪೆಯಾದರು
ಅನಾಚಾರ ನಡೆಸುತ್ತಿದ್ದವರು
ತಲ್ಲಣಿಸಿಹೋದರು
ರಕ್ಷಣಾಕಾರ್ಯವೂ ಅವನಿಂದ ಕೈಗೂಡಿತು.
7 : ಕೆರಳಿಸಿದನವನು ಅನೇಕ ಅರಸರುಗಳನು
ಆನಂದಗೊಳಿಸಿದನು ತನ್ನ ಕೃತ್ಯಗಳಿಂದ
ಇಸ್ರಯೇಲನನು
ಸದಾ ಸ್ತುತ್ಯವಾದುದು ಅವನ ಸ್ಮರಣೆಯು!
8 : ತೊಲಗಿಸಿದನು ಇಸ್ರಯೇಲರ ಮೇಲಿದ್ದ
ಕೋಪವನ್ನೆಲ್ಲಾ
ಜುದೇಯದ ಊರುಕೇರಿಗಳನು ಸಂಚರಿಸುತ್ತಾ
ಅಧರ್ಮಿಗಳನ್ನು ಅವುಗಳಿಂದ ಹೊರದೂಡಿ
ಅಳಿಸಿಹಾಕುತ್ತಾ.
9 : ಈ ಪರಿ ನಾಡಿನಲ್ಲೆಲ್ಲಾ ಹೆಸರುವಾಸಿಯಾದನು
ನಿರ್ಗತಿಕರನು ಒಟ್ಟುಗೂಡಿಸಿದನು.
10 : ಇತ್ತ ಅಪೊಲ್ಲೋನಿಯಸ್ಸನು ಇಸ್ರಯೇಲರ ಮೇಲೆ ಯುದ್ಧಮಾಡಲು ಅನ್ಯರನೇಕರನ್ನು ಸಂಘಟನೆ ಮಾಡಿದನು. ಸಮಾರಿಯದೊಳಗಿಂದ ಒಂದು ದೊಡ್ಡ ಪಡೆಯನ್ನೇ ಕೂಡಿಸಿಕೊಂಡನು.
11 : ಯೂದನು ಇದನ್ನರಿತು ಅವನನ್ನು ಎದುರುಗೊಂಡು, ಸೋಲಿಸಿ, ಅವನನ್ನು ಕೊಂದು ಹಾಕಿದನು. ಅನೇಕರು ಸಾಯುವಷ್ಟು ಗಾಯಗೊಂಡರು; ಉಳಿದವರು ಪಲಾಯನ ಮಾಡಿದರು.
12 : ಇಸ್ರಯೇಲರು ಅವರ ಕೊಳ್ಳೆಯನ್ನು ತೆಗೆದುಕೊಂಡರು; ಯೂದನು ಅಪೊಲ್ಲೋನಿಯಸ್ಸನ ಖಡ್ಗವನ್ನು ತೆಗೆದುಕೊಂಡು ತನ್ನ ಜೀವಮಾನ ಕಾಲವೆಲ್ಲಾ ಅದರಿಂದಲೇ ಯುದ್ಧ ಮಾಡಿದನು.
13 : ಯೂದನು ನಂಬಿಗಸ್ತ ಜನರನ್ನೂ ಯುದ್ಧ ಸನ್ನದ್ಧರಾದವರನ್ನೂ ಒಟ್ಟಿಗೆ ಕೂಡಿಸಿದ್ದಾನೆಂಬ ಸುದ್ದಿಯನ್ನು ಸಿರಿಯಾದವರ ಸೇನಾನಿಯಾದ ಸೇರೋನನು ಕೇಳಿದನು.
14 : ರಾಜಾಜ್ಞೆಯನ್ನು ಮೀರಿದ ಯೂದನೊಂದಿಗೆ ಮತ್ತು ಅವನ ಅನುಯಾಯಿಗಳೊಂದಿಗೆ ಯುದ್ಧಮಾಡಿ, ರಾಜ್ಯದಲ್ಲೆಲ್ಲಾ ಕೀರ್ತಿಯನ್ನೂ ಹೆಸರನ್ನೂ ಗಳಿಸಿಕೊಳ್ಳುವೆನೆಂದುಕೊಂಡನು.
15 : ಇಸ್ರಯೇಲರ ಮೇಲೆ ಸೇಡುತೀರಿಸಿಕೊಳ್ಳಲು ಅನ್ಯಜನರ ದೊಡ್ಡದೊಂದು ಸೈನ್ಯವೇ ಅವನ ನೆರವಿಗೆ ಒದಗಿತು.
16 : ಅವನು ಬೇತ್‍ಹೋರೋನ್ ಎಂಬ ಘಟ್ಟದ ಮಾರ್ಗದ ಸಮೀಪಕ್ಕೆ ಬಂದನು. ಯೂದನು ಚಿಕ್ಕದೊಂದು ಗುಂಪಿನೊಡನೆ ಅವನಿಗೆ ಎದುರಾಗಲು ಹೊರಟನು.
17 : ಆದರೆ ಯೂದನ ಜನರು ತಮಗೆ ಎದುರಾಗಿ ಬರುತ್ತಿದ್ದ ಸೈನ್ಯವನ್ನು ಕಂಡು ಅವನಿಗೆ, “ಒಡೆಯಾ, ಸ್ವಲ್ಪ ಜನರಾದ ನಾವು ಇಂಥ ದೊಡ್ಡ ಮತ್ತು ಬಲಾಢ್ಯ ಸೈನ್ಯವನ್ನು ಎದುರಿಸುವುದು ಸಾಧ್ಯವೇ? ಮೇಲಾಗಿ ಇಡೀ ದಿನ ನಾವು ಕೂಳಿಲ್ಲದೆ ಬಳಲಿ ಬೆಂಡಾಗಿದ್ದೇವೆ,” ಎಂದರು.
18 : ಅದಕ್ಕೆ ಯೂದನು, “ಬಹು ಜನರು ಇದ್ದರೂ ಸ್ವಲ್ಪ ಜನರ ಕೈಯಲ್ಲಿ ಸಿಕ್ಕಿ ಬೀಳುವುದು ಕಷ್ಟವೇನೂ ಅಲ್ಲ; ಪರಲೋಕ (ದೇವರ) ದೃಷ್ಟಿಯಲ್ಲಿ ಹಲವರ ಕೈಯಿಂದ ಅಥವಾ ಕೆಲವರ ಕೈಯಿಂದ ರಕ್ಷಿಸುವುದು ಒಂದೇ.
19 : ಏಕೆಂದರೆ, ಯುದ್ಧದಲ್ಲಿ ಜಯ ಜನಸಮುದಾಯದಿಂದ ಆಗುವುದಿಲ್ಲ; ಆ ಶಕ್ತಿ ಪರಲೋಕದಿಂದಲೇ ಬರುವಂಥದು.
20 : ಮತಾಂಧತೆಯಿಂದ ಹಾಗು ಅಧಮತನದಿಂದ ನಮ್ಮ ಮೇಲೆ ಬಿದ್ದು ನಮ್ಮನ್ನೂ ನಮ್ಮ ಮಡದಿಮಕ್ಕಳನ್ನೂ ನಾಶಮಾಡಿ, ನಮ್ಮನ್ನು ಸುಲಿದುಕೊಂಡು ಹೋಗುವುದಕ್ಕೆ ಅವರು ಬರುತ್ತಿದ್ದಾರೆ.
21 : ನಾವಾದರೋ, ನಮ್ಮ ಪ್ರಾಣ ಹಾಗೂ ಧರ್ಮಗಳ ರಕ್ಷಣೆಗಾಗಿ ಹೋರಾಡುತ್ತಿದ್ದೇವೆ.
22 : ಹೀಗಿರುವುದರಿಂದ ದೇವರು ನಮ್ಮ ಕಣ್ಣೆದುರಿನಲ್ಲಿಯೇ ಅವರನ್ನು ಸಂಹಾರಮಾಡುವರು; ನೀವಾದರೋ ಅವರಿಗೆ ಬೆದರಬೇಡಿ!” ಎಂದು ಹೇಳಿದನು.
23 : ಅವನು ಮಾತಾಡುವುದನ್ನು ಮುಗಿಸಿದ ಕೂಡಲೆ ಅವರ ಮೇಲೆ ಬಿದ್ದನು. ಸೇರೋನನೂ ಅವನ ಸೈನ್ಯದವರೂ ಸೋತುಹೋದರು.
24 : ಅವನು ಬೇತ್ ಹೋರೋನಿನ ಇಳುಕಲಿನಿಂದ ಬಯಲಿಗೆ ಬೀಳುವವರೆಗೂ ಅವರನ್ನು ಬೆನ್ನಟ್ಟಿದನು. ಅವರಲ್ಲಿ ಸುಮಾರು ಎಂಟುನೂರು ಜನರು ಅಂದು ಹತರಾದರು; ಉಳಿದವರು ಫಿಲಿಷ್ಟಿಯರ ನಾಡಿಗೆ ಓಡಿಹೋದರು.
25 : ಬಳಿಕ ಯೂದನ ಮತ್ತು ಅವನ ಸಹೋದರರ ಭಯಭೀತಿ ಹಾಗು ಪ್ರಭಾವ ಅವರ ಸುತ್ತಮುತ್ತಲಿನ ಜನಾಂಗಗಳಲ್ಲಿ ಹಬ್ಬ ತೊಡಗಿತು.
26 : ಅವನ ಹೆಸರು ಅರಸನವರೆಗೂ ಹೋಯಿತು. ಪ್ರತಿಯೊಂದು ಜನಾಂಗದಲ್ಲೂ ಜನರು ಯೂದನ ಯುದ್ಧ ಸಾಮಥ್ರ್ಯವನ್ನೇ ಕುರಿತು ಮಾತಾಡಿಕೊಳ್ಳುತ್ತಿದ್ದರು.
27 : ರಾಜ್ಯಪಾಲನಾಗಿ ಲೂಸ್ಯನ ನೇಮಕ
ಈ ಮಾತುಗಳನ್ನು ಅಂತಿಯೋಕನು ಕೇಳಿ ಕಿಡಿಕಿಡಿಯಾದನು. ತನ್ನ ಸಾಮ್ರಾಜ್ಯದೊಳಗಿದ್ದ ಎಲ್ಲ ಸೈನ್ಯಗಳನ್ನೂ ಕರೆಯಿಸಿ, ಒಂದುಗೂಡಿಸಿ, ಒಂದು ಬಲಾಢ್ಯ ಸೈನ್ಯವನ್ನು ಸಂಗ್ರಹಿಸಿದನು.
28 : ತರುವಾಯ ತನ್ನ ಭಂಡಾರವನ್ನು ತೆರೆದು, ತನ್ನ ಸೈನ್ಯಕ್ಕೆಲ್ಲ ಒಂದು ವರ್ಷದ ವೇತನವನ್ನು ಮುಂಗಡವಾಗಿ ಹಂಚಿದನು; ಅಗತ್ಯಬಿದ್ದಾಗ ಸಿದ್ಧರಾಗಿರಬೇಕೆಂದು ಅವರಿಗೆ ಅಪ್ಪಣೆಮಾಡಿದನು.
29 : ಆಗ ತನ್ನ ಭಂಡಾರವೆಲ್ಲಾ ಬರಿದಾಯಿತೆಂದು ಅವನಿಗೆ ತಿಳಿಯಿತು. ಇದಲ್ಲದೆ, ಪುರಾತನ ಕಾಲದಿಂದಲು ವಾಡಿಕೆಯಲ್ಲಿದ್ದ ಧಾರ್ಮಿಕ ನಿಯಮಗಳನ್ನು ತೆಗೆದುಹಾಕುವ ಪ್ರಯತ್ನದ ಫಲವಾಗಿ ದೇಶದಲ್ಲೆಲ್ಲ ಅಂತಃಕಲಹಗಳೂ ಚಳುವಳಿಗಳೂ ಹರಡಿಕೊಂಡಿವೆ; ಆದ್ದರಿಂದಲೇ ಕಂದಾಯದ ಉತ್ಪನ್ನವೂ ಕಡಿಮೆಯಾಗಿದೆ ಎಂದು ಅವನಿಗೆ ಅರಿವಾಯಿತು.
30 : ಹಿಂದೆ ತಾನು ಕೊಡುಗೆಗಳನ್ನೂ ಸಂಬಳ – ಉಂಬಳಿಗಳನ್ನೂ ಕೊಡುತ್ತಾ, ತನ್ನ ಹಿಂದಿನ ಅರಸರುಗಳಿಗಿಂತ ಧಾರಾಳವಾಗಿ ಖರ್ಚು ಮಾಡುತ್ತಿದ್ದಂತೆ ಈಗ ಮಾಡಲು ಸಾಕಷ್ಟು ಇಲ್ಲ ಎಂಬುದನ್ನು ಕಂಡು ಬೆದರಿದನು, ತಬ್ಬಿಬ್ಬಾದನು.
31 : ಆದುದರಿಂದ ಪರ್ಷಿಯಾ ದೇಶಕ್ಕೆ ಹೋಗಿ ಆ ಸೀಮೆಗಳಿಂದ ಕಪ್ಪಕಾಣಿಕೆಗಳನ್ನು ಕೂಡಿಸಿ ದೊಡ್ಡ ನಿಧಿಯನ್ನು ಸಂಗ್ರಹಿಸಲು ನಿಶ್ಚಯಮಾಡಿದನು.
32 : ರಾಜಕಾರಣ ಪಟುವೂ ರಾಜವಂಶಜನೂ ಆದ ಲೂಸ್ಯನೆಂಬವನಿಗೆ ಈಜಿಪ್ಟಿನ ಗಡಿನಾಡಿನಿಂದ ಯೂಫ್ರೆಟಿಸ್ ನದಿಯವರೆಗಿದ್ದ ತನ್ನ ರಾಜ್ಯದ ಆಡಳಿತವನ್ನು ಒಪ್ಪಿಸಿದನು.
33 : ತಾನು ಹಿಂದಿರುಗಿ ಬರುವವರೆಗೆ ತನ್ನ ಮಗನಾದ ಅಂತಿಯೋಕನ ಸಂರಕ್ಷಣೆಯ ಭಾರವನ್ನೂ ಒಪ್ಪಿಸಿದನು.
34 : ಇದಲ್ಲದೆ, ತನ್ನ ಸೈನ್ಯದ ಅರ್ಧಭಾಗವನ್ನೂ ಆನೆಗಳನ್ನೂ ಅವನ ವಶಕ್ಕೆ ಕೊಟ್ಟನು. ತಾನು ಕೈಗೊಂಡಿದ್ದ ಎಲ್ಲಾ ಕಾರ್ಯಗಳನ್ನು, ಮುಖ್ಯವಾಗಿ ಜುದೇಯ ಮತ್ತು ಜೆರುಸಲೇಮಿನಲ್ಲಿದ್ದವರ ವಿಚಾರವನ್ನು ಅವನಿಗೆ ಒಪ್ಪಿಸಿದನು;
35 : ಅಂದರೆ, ಅವರ ಮೇಲೆ ದಂಡು ಕಳುಹಿಸಿ, ಇಸ್ರಯೇಲರನ್ನೂ ಜೆರುಸಲೇಮಿನಲ್ಲಿದ್ದ ಅವರ ಸಂತಾನವನ್ನೂ ಮೂಲ ಸಮೇತ ನಾಶಮಾಡಿ, ಅವರ ಸೊಕ್ಕನ್ನು ಮುರಿದು, ಅಲ್ಲಿಂದ ಅವರ ಗುರುತನ್ನೂ ತೆಗೆದುಹಾಕಬೇಕು.
36 : ಅವರ ಗಡಿ ನಾಡಿನಲ್ಲೆಲ್ಲ ಪರಕೀಯರು ವಾಸಿಸುವಂತೆ ಮಾಡಿ, ಆ ನಾಡನ್ನೆಲ್ಲ ಅವರಿಗೆ ಹಂಚಿಕೊಡಬೇಕು. ಈ ಎಲ್ಲ ಕೆಲಸವನ್ನು ಅವನಿಗೆ ಒಪ್ಪಿಸಿದನು.
37 : ತರುವಾಯ 147ನೆಯ ವರ್ಷ ಅರಸನು ಉಳಿದ ಅರ್ಧ ಸೈನ್ಯವನ್ನು ಕಟ್ಟಿಕೊಂಡು, ತನ್ನ ರಾಜಧಾನಿಯಾದ ಅಂತಿಯೋಕ್ಯದಿಂದ ಹೊರಟು, ಯೂಫ್ರೆಟಿಸ್ ನದಿಯನ್ನು ದಾಟಿ, ಮಲೆನಾಡಿನಲ್ಲಿ ಪ್ರಯಾಣ ಬೆಳೆಸಿದನು.
38 : ಇತ್ತ ಲೂಸ್ಯನು ಅರಸನ ಸ್ನೇಹಿತರಲ್ಲಿ ಬಲಾಢ್ಯರಾದ ಡೊರಿಮೆನೀಸನ ಮಗ ಪ್ತೊಲೆಮೇಯ, ನಿಕಾನೋರ್ ಹಾಗು ಗೊರ್ಗಿಯ ಎಂಬವರನ್ನು ಆಯ್ದುಕೊಂಡನು.
39 : ನಾಲ್ವತ್ತು ಸಾವಿರ ಕಾಲಾಳುಗಳನ್ನೂ ಏಳು ಸಾವಿರ ರಾಹುತರನ್ನೂ ಅವರ ವಶಕ್ಕೆ ಕೊಟ್ಟು, ಅರಸನ ಅಪ್ಪಣೆಯ ಮೇರೆಗೆ ಜುದೇಯ ನಾಡಿಗೆ ಹೋಗಿ, ಅದನ್ನು ಹಾಳುಮಾಡಬೇಕೆಂದು ಹೇಳಿಕಳುಹಿಸಿದನು.
40 : ಅವರು ತಮ್ಮ ಇಡೀ ಸೈನ್ಯದೊಂದಿಗೆ ಹೊರಟು, ಬಯಲುಸೀಮೆಯಲ್ಲಿದ್ದ ಎಮ್ಮಾವು ಎಂಬ ಊರಿನ ಬಳಿ ಬೀಡುಬಿಟ್ಟರು.
41 : ಆ ನಾಡಿನ ವರ್ತಕರು ಅವರ ಕೀರ್ತಿಯನ್ನು ಕೇಳಿ, ಸೆರೆ ಸಿಕ್ಕುವ ಇಸ್ರಯೇಲ್ ಮಕ್ಕಳನ್ನು ಗುಲಾಮರನ್ನಾಗಿ ಕೊಂಡುಕೊಳ್ಳುವ ಆಶೆಯಿಂದ ಬಹು ಬೆಳ್ಳಿಬಂಗಾರವನ್ನೂ ಬೇಡಿಗಳನ್ನೂ ತೆಗೆದುಕೊಂಡು ಅಲ್ಲಿನ ಚಾವಣಿಗೆ ಬಂದರು. ಅತ್ತ ಇದುಮೇಯ ಮತ್ತು ಫಿಲಿಷ್ಟಿಯರ ಸೈನ್ಯವೂ ಅವರನ್ನು ಕೂಡಿಕೊಂಡಿತು.
42 : ಇತ್ತ ಯೂದನೂ ಅವನ ಬಂಧುಗಳೂ ಕಷ್ಟಗಳು ಹೆಚ್ಚಾದುದನ್ನು, ಸೈನ್ಯಗಳು ತಮ್ಮ ಗಡಿಯಲ್ಲಿ ಬೀಡುಬಿಟ್ಟದ್ದನ್ನು ಮತ್ತು ತಮ್ಮ ಜನರನ್ನೆಲ್ಲ ನಿರ್ನಾಮಮಾಡಬೇಕೆಂದು ಅರಸನು ಕೊಟ್ಟ ಅಪ್ಪಣೆಯನ್ನು ಕುರಿತು ಪರಿಚಯಮಾಡಿಕೊಂಡರು.
43 : “ಬಿದ್ದು ಹೋದ ನಮ್ಮ ಜನರನ್ನು ಮೇಲಕ್ಕೆ ಎತ್ತೋಣ, ನಮ್ಮ ಜನರ ಪರವಾಗಿಯೂ ಮಹಾಪವಿತ್ರಾಲಯದ ಸಲುವಾಗಿಯೂ ಹೋರಾಡೋಣ,” ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು.
44 : ಬಳಿಕ ಯುದ್ಧ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೂ ದೇವರ ಕೃಪಾವರಗಳನ್ನು ಬೇಡಿಕೊಳ್ಳುವುದಕ್ಕೂ ಜನರೆಲ್ಲರೂ ಒಟ್ಟಿಗೆ ಸಭೆಸೇರಿದರು.
45 : ಜೆರುಸಲೇಮ್ ಅರಣ್ಯದಂತಿತ್ತು
ನಿವಾಸಿಗಳಿಲ್ಲದೆ
ಸ್ಥಳೀಯರು ಹೋಗಿಬರುವ ಸುಳಿವೇ
ಅಲ್ಲಿಲ್ಲದೆ.
ತುಳಿತಕ್ಕೆ ಈಡಾಗಿತ್ತು ಮಹಾಪವಿತ್ರಾಲಯ
ಕೋಟೆಯಲ್ಲಿದ್ದವರು ಪರದೇಶಿಯರೇ
ಪೇಟೆಯಲ್ಲಿ ವಾಸಿಸಿದ್ದವರೂ ಅನ್ಯರೇ.
ಮಾಯವಾಗಿತ್ತು ಇಸ್ರಯೇಲಿನಲ್ಲಿದ್ದ
ಉಲ್ಲಾಸ
ಅಲ್ಲಿರಲಿಲ್ಲ ಇನ್ನು ಕೊಳಲು ಕಿನ್ನರಿಗಳ
ಇಂಚರ !
46 : ಮಿಚ್ಛೆಯಲ್ಲಿ ಯೆಹೂದ್ಯರ ಸಜ್ಜು
ಜನರೆಲ್ಲರೂ ಕೂಡಿ, ಜೆರುಸಲೇಮಿಗೆ ಎದುರಾಗಿದ್ದ ಮಿಚ್ಛೆಗೆ ಬಂದರು. ಏಕೆಂದರೆ ಇಸ್ರಯೇಲರ ಪ್ರಾರ್ಥನಾಸ್ಥಳ ಮೊದಲು ಇದ್ದುದು ಅಲ್ಲಿಯೇ.
47 : ಆ ದಿನ ಅವರೆಲ್ಲರೂ ಉಪವಾಸ ಮಾಡಿ, ಗೋಣಿತಟ್ಟನ್ನು ಸುತ್ತಿಕೊಂಡು, ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡು, ಸಂತಾಪದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
48 : ಅನ್ಯರು ತಮ್ಮ ಮೂರ್ತಿಗಳಿಂದ ಭವಿಷ್ಯವನ್ನು ವಿಚಾರಿಸುತ್ತಿದ್ದ ಹಾಗೆ ಧರ್ಮಶಾಸ್ತ್ರವನ್ನು ತೆರೆದಿಟ್ಟು ವಿಚಾರಿಸಿದರು
49 : ಇದಲ್ಲದೆ, ಯಾಜಕರ ವಸ್ತ್ರಗಳನ್ನೂ ಪ್ರಥಮ ಫಲವನ್ನೂ ದಶಮಾಂಶವನ್ನೂ ತಂದರು; ವ್ರತದ ದಿನಗಳನ್ನು ಪೂರೈಸಿದ್ದ ನಜರೇಯರನ್ನು ಹುರಿದುಂಬಿಸಿದರು.
50 : ಆಕಾಶದ ಕಡೆಗೆ ಮುಖವೆತ್ತಿ, ಗಟ್ಟಿಯಾಗಿ ಹೀಗೆ ಮೊರೆಯಿಟ್ಟರು: “ಇವುಗಳನ್ನೆಲ್ಲಾ ನಾವೇನು ಮಾಡೋಣ?
51 : ನಿಮ್ಮ ಪವಿತ್ರ ಸ್ಥಳವು ತುಳಿತದಿಂದ ಹೊಲೆಯಾಗಿದೆ; ನಿಮ್ಮ ಯಾಜಕರು ದುಃಖಭಾರದಿಂದ ಕುಗ್ಗಿಹೋಗಿದ್ದಾರೆ.
52 : ಇಗೋ, ನಮ್ಮನ್ನು ನಾಶಮಾಡುವುದಕ್ಕೆ ಅನ್ಯರೆಲ್ಲಾ ನಮಗೆ ವಿರೋಧವಾಗಿ ಕೂಡಿ ಬಂದಿದ್ದಾರೆ;
53 : ನಮಗೆ ವಿರುದ್ಧ ಅವರು ಮಾಡಿದ ಆಲೋಚನೆಗಳನ್ನೆಲ್ಲಾ ನೀವು ಬಲ್ಲವರಾಗಿದ್ದೀರಿ.
54 : ನೀವು ನಮಗೆ ಸಹಾಯಕರಾಗದಿದ್ದರೆ ನಾವು ಅವರ ಮುಂದೆ ನಿಲ್ಲುವುದೆಂತು?” ಎಂದು ಹೇಳಿ, ತುತೂರಿಗಳನ್ನು ಊದಿ, ಗಟ್ಟಿಯಾಗಿ ಮೊರೆಯಿಟ್ಟರು
55 : ತರುವಾಯ, ಯೂದನು ಸಾವಿರ, ನೂರು, ಐವತ್ತು ಮತ್ತು ಹತ್ತು ಜನರ ಮೇಲೆ ಅಧಿಪತಿಗಳನ್ನು ನಿಯಮಿಸಿದನು.
56 : ಆಮೇಲೆ ಅವನು ಮನೆ ಕಟ್ಟುತ್ತಿದ್ದವರಿಗೂ, ಮದುವೆ ಮಾಡಿಕೊಳ್ಳುತ್ತಿದ್ದವರಿಗೂ ದ್ರಾಕ್ಷಿತೋಟ ನೆಡುತ್ತಿದ್ದವರಿಗೂ ಹಾಗೂ ರಣಹೇಡಿಗಳಿಗೂ ನಿಯಮಶಾಸ್ತ್ರಾನುಸಾರ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೋಗಲು ಅಪ್ಪಣೆಕೊಟ್ಟನು.
57 : ತರುವಾಯ ಸೈನ್ಯವು ಹೊರಟು ಎಮ್ಮಾವುನ ದಕ್ಷಿಣಕ್ಕೆ ಬೀಡುಬಿಟ್ಟಿತು
58 : ಯೂದನು ಅವರಿಗೆ, “ನಡುಕಟ್ಟಿ ನಿಲ್ಲಿ, ಶೂರರಾಗಿರಿ! ನಮ್ಮನ್ನೂ ನಮ್ಮ ಪವಿತ್ರಾಲಯವನ್ನೂ ಹಾಳುಮಾಡುವ ಉದ್ದೇಶದಿಂದ ಇಲ್ಲಿ ಬಂದು ನೆರೆದಿರುವ ಈ ಅನ್ಯರ ವಿರುದ್ಧ ಕಾದಾಡಲು ಬೆಳಿಗ್ಗೆ ಸಿದ್ಧರಾಗಿರಿ. ಏಕೆಂದರೆ, ನಮ್ಮ ಜನಾಂಗಕ್ಕೂ ಪವಿತ್ರಾಲಯಕ್ಕೂ ಒದಗಲಿರುವ ದುರ್ದೆಸೆಯನ್ನು ನೋಡುವುದಕ್ಕಿಂತ ಯುದ್ಧದಲ್ಲಿ ಮಡಿಯುವುದೇ ಲೇಸು. ಇದರ ಮೇಲೆ ದೇವರು ತಮಗೆ ಸರಿಕಂಡದ್ದನ್ನು ಮಾಡಲಿ!” ಎಂದು ಹೇಳಿದನು.