Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಮತ್ತಾತಿಯನ ಧರ್ಮನಿಷ್ಠೆ ಆ ದಿನಗಳಲ್ಲಿ ಮತ್ತಾತಿಯ ಎಂಬ ಒಬ್ಬನಿದ್ದನು. ಇವನು ಜೆರುಸಲೇಮಿನ ಯೆಹೋಯಾರೀಬನ ಸಂತತಿಗೆ ಸೇರಿದ ಯಾಜಕ ಸಿಮೆಯೋನನ ಮೊಮ್ಮಗ ಹಾಗು ಯೊವಾನ್ನನ ಮಗ. ಈ ಮತ್ತಾತಿಯನು ಮೋದಿನ್ ಎಂಬಲ್ಲಿ ವಾಸಮಾಡುತ್ತಿದ್ದನು.
2 : ಇವನಿಗೆ ಐವರು ಮಕ್ಕಳು: ಗದ್ದೀ ಎಂಬ ಯೊವಾನ್ನ
3 : ತಸ್ಸೀ ಎಂಬ ಸಿಮೋನ,
4 : ಮಕ್ಕಬಿ ಎಂಬ ಯೂದ,
5 : ಅವ್ರಾನ್ ಎಂಬ ಎಲ್ಲಾಜರ್ ಮತ್ತು ಅಫಸ್ ಎಂಬ ಯೋನಾತನ ಇವರೇ.
6 : ಜುದೇಯದಲ್ಲೂ ಜೆರುಸಲೇಮಿನಲ್ಲೂ ನಡೆಯುತ್ತಿದ್ದ ದೇವದೂಷಣಾಕಾರ್ಯಗಳನ್ನು ಮತ್ತಾತಿಯನು ನೋಡಿದ್ದನು.
7 : ಆಗ ಅವನು ಮನಮರುಗಿ: “ಅಯ್ಯೋ ನಾನು ಹುಟ್ಟಿದುದೇಕೆ? ನನ್ನ ಜನರ ಹಾಗು ಪರಿಶುದ್ಧ ನಗರದ ಅಳಿವನ್ನು ನಾನು ನೋಡಬೇಕಾಯಿತಲ್ಲಾ; ಊರು ಶತ್ರುವಶವಾದ ಮೇಲೆ ನಾನಿಲ್ಲಿ ವಾಸಮಾಡಬೇಕಾಯಿತಲ್ಲಾ; ಮಹಾಪವಿತ್ರಾಲಯವೂ ಪರಕೀಯರ ಪಾಲಾಯಿತಲ್ಲಾ;
8 : ಪವಿತ್ರಾಲಯ ಮಾನಹೀನ ಮನುಷ್ಯನಂತಾಯಿತಲ್ಲಾ;
9 : ಅದರ ಅಮೂಲ್ಯ ಪಾತ್ರೆಗಳು ಕೊಳ್ಳೆಯಾದುವಲ್ಲಾ; ಅದರ ಹಸುಗೂಸುಗಳೂ ಹಾದಿಬೀದಿಯಲ್ಲಿ ಹತವಾದುವಲ್ಲಾ;
10 : ಅದರ ಯುವಕರು ವೈರಿಗಳ ಕತ್ತಿಗೆ ತುತ್ತಾದರಲ್ಲಾ; ಅದರ ಅರಮನೆಗಳನ್ನು ವಶಪಡಿಸಿಕೊಳ್ಳದ ಜನಾಂಗವುಂಟೇ? ಅದರ ಕೊಳ್ಳೆಯನ್ನು ಹಂಚಿಕೊಳ್ಳದ ಜನಾಂಗವುಂಟೇ?
11 : ಸುಲಿಗೆಯಾಗಿ ಹೋಯಿತು ಅದರ ಸಿಂಗಾರವೆಲ್ಲಾ ಸ್ವಾತಂತ್ರ್ಯವಿಲ್ಲದ ತೊತ್ತಿನಂತಾಯಿತು ನಗರವೆಲ್ಲಾ;
12 : ನಶಿಸಿಹೋಗಿವೆ ನೋಡಿ, ನಮ್ಮ ಒಡವೆ ವಸ್ತುಗಳು ನಮ್ಮ ಸರ್ವಸೌಂದರ್ಯ ವೈಭವಾದಿಗಳು;
13 : ಅನ್ಯರು ಅವುಗಳನ್ನು ಅಶುದ್ಧಮಾಡಿದ ಮೇಲೆ ಇನ್ನು ನಾವು ಜೀವಿಸುವುದಾದರು ಏತಕ್ಕೆ?”
14 : ಹೀಗೆ ಮನನೊಂದುಕೊಂಡರು ಮತ್ತಾತಿಯನು ಮತ್ತು ಅವನ ಮಕ್ಕಳು. ಮಾತ್ರವಲ್ಲ, ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಣಿತಟ್ಟನ್ನು ಉಟ್ಟುಕೊಂಡು ಬಹಳವಾಗಿ ಗೋಳಾಡಿದರು. ಮೋದೀನ್ ಊರಿನಲ್ಲಿ ವಿಷಮ ಪರೀಕ್ಷೆ
15 : ಅದೇ ಸಮಯಕ್ಕೆ ಧರ್ಮವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು.
16 : ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು. ಮತ್ತಾತಿಯನೂ ಅವನ ಮಕ್ಕಳೂ ಅಲ್ಲಿಗೆ ಬಂದರು.
17 : ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, “ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು.
17 : ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, “ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ನಿನ್ನ ಮಕ್ಕಳ ಹಾಗು ಬಂಧುಬಳಗದವರ ಬೆಂಬಲ ನಿನಗಿದೆ.
18 : ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು, ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೋ; ಆಗ ನೀನೂ ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ, ಬಂಗಾರ ಮತ್ತಿತರ ಸಂಭಾವನೆಗಳನ್ನು ಗೌರವಾರ್ಥವಾಗಿ ಕೊಡಲಾಗುವುದು,” ಎಂದು ಹೇಳಿದರು.
19 : ಆಗ ಮತ್ತಾತಿಯನು ಉದ್ವೇಗದಿಂದ, “ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ;
20 : ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತೃಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ.
21 : ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ;
22 : ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ,” ಎಂದು ಗಟ್ಟಿಯಾಗಿ ಹೇಳಿದನು.
23 : ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು.
24 : ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು.
25 : ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದುಹಾಕಿದನು; ಆ ಜಗಲಿಯನ್ನೂ ಕೆಡವಿಹಾಕಿದನು.
26 : ಸಾಲು ಎಂಬವನ ಮಗ ಜಿಮ್ರಿಯೆಂಬವನಿಗೆ ಫಿನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು.
27 : ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, “ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ,” ಎಂದು ಕರೆಕೊಟ್ಟನು.
28 : ಅನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು.
29 : ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು.
30 : ಅವರೊಂದಿಗೆ ಅವರ ಮಡದಿ ಮಕ್ಕಳು, ದನಕರುಗಳೂ ಹೊರಟವು. ಅವರಿಗೆ ಬಂದೊದಗಿದ ಕಷ್ಟಸಂಕಟಗಳು ಅಷ್ಟು ಅಗಾಧವಾಗಿದ್ದವು. ಅರಸನ ಅಪ್ಪಣೆಯನ್ನು ಉಲ್ಲಂಘಿಸಿದ ಕೆಲವು ಜನರು ಅಡವಿಯಲ್ಲಿನ ಗುಪ್ತಸ್ಥಳಗಳಿಗೆ ಹೋಗುತ್ತಿದ್ದಾರೆಂಬ ಸುದ್ದಿ ಜೆರುಸಲೇಮಿನಲ್ಲಿದ್ದ ಅಂದರೆ, ದಾವೀದ ನಗರದಲ್ಲಿದ್ದ ಅಧಿಪತಿಗಳಿಗೂ ಸೈನಿಕರಿಗೂ ಮುಟ್ಟಿತು.
31 : ಕೂಡಲೆ ಅವರು ಆ ಜನರನ್ನು ಬೆನ್ನಟ್ಟಿ, ಸಂಧಿಸಿ, ಅವರಿಗೆ ಎದುರಾಗಿಯೇ ಪಾಳೆಯ ಮಾಡಿದರು.
32 : ಸಬ್ಬತ್ ದಿನದಲ್ಲೇ ಅವರಿಗೆ ವಿರುದ್ಧ ಯುದ್ಧ ಸನ್ನದ್ಧರಾದರು.
33 : “ನಡೆದದ್ದು ನಡೆದು ಹೋಯಿತು, ಈಗಲಾದರೂ ಹೊರಗೆಬಂದು ಅರಸನ ಅಪ್ಪಣೆ ಮೇರೆಗೆ ನಡೆಯಿರಿ; ಆಗ ನೀವು ಬದುಕುವಿರಿ,” ಎಂದು ಆ ಜನರನ್ನು ಪುಸಲಾಯಿಸಿದರು.
34 : ಅದಕ್ಕೆ ಅವರು, “ನಾವು ಹೊರಗೆ ಬರುವುದಿಲ್ಲ; ಅರಸನ ಮಾತಿನಂತೆ ನಡೆದು ಸಬ್ಬತ್‍ದಿನವನ್ನು ಅಪವಿತ್ರ ಮಾಡುವುದಿಲ್ಲ,” ಎಂದು ಉತ್ತರಕೊಟ್ಟರು.
35 : ಕೂಡಲೇ ಶತ್ರುಗಳು ಅವರ ಮೇಲೆ ಯುದ್ಧ ಮಾಡಲಾರಂಭಿಸಿದರು.
36 : ಯೆಹೂದ್ಯರೋ ಅದಕ್ಕೆ ಯಾವ ಪ್ರತೀಕಾರವನ್ನೂ ತೋರಿಸಲಿಲ್ಲ. ಆ ಶತ್ರುಗಳ ಮೇಲೆ ಒಂದು ಕಲ್ಲನ್ನೂ ಬೀಸಲಿಲ್ಲ. ತಾವಿದ್ದ ಗುಪ್ತಸ್ಥಳಗಳನ್ನು ಮುಚ್ಚಿಕೊಳ್ಳಲೂ ಇಲ್ಲ.
37 : ಬದಲಿಗೆ ಅವರು, “ನಾವು ನಿರ್ದೋಷಿಗಳು, ನಿರ್ದೋಷಿಗಳಾಗಿಯೇ ಪ್ರಾಣಬಿಡೋಣ; ನೀವಾದರೋ ವಿಚಾರಣೆಮಾಡದೆ ನಮ್ಮನ್ನು ಕೊಲ್ಲುತ್ತಾ ಇದ್ದೀರಿ; ಇದಕ್ಕೆ ಆಕಾಶ ಭೂಮಿಗಳೇ ಸಾಕ್ಷಿ,” ಎಂದುಕೊಂಡರು.
38 : ಶತ್ರುಗಳು ಹೊರಗೆ ಬಂದು ಸಬ್ಬತ್‍ದಿನದಲ್ಲೇ ಅವರಿಗೆ ವಿರುದ್ಧ ಯುದ್ಧ ಹೂಡಿದರು. ಆ ದಿನ ತಮ್ಮ ಮಡದಿ ಮಕ್ಕಳ ಹಾಗು ದನಕರುಗಳ ಸಮೇತ ಹತರಾದ ಯೆಹೂದ್ಯರು ಸುಮಾರು ಸಾವಿರ ಮಂದಿ.
39 : ಮತ್ತಾತಿಯನ ಹಾಗು ಅವನ ಸಂಗಡಿಗರ ಧರ್ಮನಿಷ್ಠೆ ಮತ್ತಾತಿಯನೂ ಅವನ ಸ್ನೇಹಿತರೂ ಈ ಸುದ್ದಿಯನ್ನು ಕೇಳಿ ಸತ್ತವರಿಗಾಗಿ ಬಹಳವಾಗಿ ಗೋಳಾಡಿದರು.
40 : “ನಮ್ಮ ಪ್ರಾಣರಕ್ಷಣೆಗಾಗಿ ಹಾಗು ಆಜ್ಞಾವಿಧಿಗಳ ಪರವಾಗಿ ನಮ್ಮ ಸಹೋದರರಂತೆ ನಾವೂ ಈ ಅನ್ಯಜನರ ಸಂಗಡ ಯುದ್ಧಮಾಡದೆ ಬಿಟ್ಟರೆ ಇವರು ಸ್ವಲ್ಪ ಕಾಲದಲ್ಲೇ ನಮ್ಮನ್ನೂ ನಾಶಮಾಡಿ, ನಾವು ಭೂಮಿಯ ಮೇಲಿಂದ ಕಣ್ಮರೆಯಾಗುವಂತೆ ಮಾಡುವರು,” ಎಂದು ಒಬ್ಬರ ಸಂಗಡ ಒಬ್ಬರು ಮಾತಾಡಿಕೊಂಡರು.
41 : ಹೀಗೆ ಎಲ್ಲರೂ ಸಮಾಲೋಚನೆ ಮಾಡಿ, “ಸಬ್ಬತ್ ದಿನದಲ್ಲಿ ಯಾರಾದರು ನಮ್ಮ ವಿರುದ್ಧ ಯುದ್ಧಮಾಡಲು ಬಂದರೆ ನಾವೂ ಯುದ್ಧ ಮಾಡಬೇಕು; ಗುಪ್ತಸ್ಥಳಗಳಲ್ಲಿ ನಮ್ಮ ಸಹೋದರರು ಸತ್ತುಹೋದಂತೆ ನಾವೂ ಸಾಯಬಾರದು,” ಎಂದು ತೀರ್ಮಾನಿಸಿಕೊಂಡರು.
42 : ಇದಾದಮೇಲೆ ಇಸ್ರಯೇಲರ ಬಲಾಢ್ಯ ಪುರುಷರಾದ ಹಸಿದಿಯರ ಗುಂಪೊಂದು ಇವರನ್ನು ಕೂಡಕೊಂಡಿತು. ಇವರಲ್ಲಿ ಪ್ರತಿಯೊಬ್ಬನು ಧರ್ಮಶಾಸ್ತ್ರಕ್ಕಾಗಿ ತನ್ನನ್ನೇ ಸಮರ್ಪಿಸಿಕೊಂಡಿದ್ದನು.
43 : ಅಂತೆಯೇ ಹಿಂಸೆಬಾಧೆಗಳಿಂದ ತಲೆತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಜನರೆಲ್ಲರು ಅವರನ್ನು ಸೇರಿಕೊಂಡು ಅವರಿಗೆ ಬೆಂಬಲವಾದರು.
44 : ಹೀಗೆ ಅವರು ಒಂದು ಸೈನ್ಯವನ್ನೇ ಕಟ್ಟಿಕೊಂಡು ಕೋಪೋದ್ರೇಕದಿಂದ ಪಾಪಾತ್ಮರೂ ಅಧರ್ಮಿಗಳೂ ಆದವರ ಮೇಲೆ ದಾಳಿಮಾಡಿದರು. ತಪ್ಪಿಸಿಕೊಂಡವರು ಆಶ್ರಯಕ್ಕಾಗಿ ಅನ್ಯಜನಗಳ ಬಳಿಗೆ ಓಡಿಹೋದರು.
45 : ಮತ್ತಾತಿಯನು ಮತ್ತು ಅವನ ಸ್ನೇಹಿತರು ಸುತ್ತಮುತ್ತಲು ಹೋಗಿ ಯಜ್ಞವೇದಿಗಳನ್ನು ಕೆಡವಿಹಾಕಿದರು.
46 : ಇಸ್ರಯೇಲಿನ ಪ್ರದೇಶಗಳಲ್ಲಿ ಸಿಕ್ಕಿದಷ್ಟು ಸುನ್ನತಿಯಿಲ್ಲದ ಮಕ್ಕಳನ್ನು ಹಿಡಿದು ಬಲವಂತವಾಗಿ ಅವರಿಗೆ ಸುನ್ನತಿಮಾಡಿದರು.
47 : ಸೊಕ್ಕಿನ ಅಧಿಕಾರಿಗಳನ್ನು ಬೆನ್ನಟ್ಟಿ ವಿಜಯ ಸಾಧಿಸಿದರು.
48 : ಅನ್ಯರ ಕೈಯಿಂದಲೂ ಅರಸನ ಕೈಯಿಂದಲೂ ಧರ್ಮವನ್ನು ಬಿಡುಗಡೆಮಾಡಿದರು. ಪಾಪಾತ್ಮರು ಜಯಗಳಿಸಲು ಬಿಡಲಿಲ್ಲ.
49 : ಮತ್ತಾತಿಯನ ಮರಣ ಮತ್ತಾತಿಯನ ಮರಣಕಾಲ ಸಮೀಪಿಸಿತು. ಅವನು ತನ್ನ ಮಕ್ಕಳನ್ನು ಕರೆದು, “ಸೊಕ್ಕು, ನಿಂದೆ ದೂಷಣೆಗಳು ಹೆಚ್ಚುತ್ತಿರುವ ಕಾಲವಿದು; ನಮ್ಮ ಅವನತಿಯ ಸಮಯ; ಕೋಪ ವಿಕೋಪಕ್ಕೆ ಏರುವ ವೇಳೆ.
50 : ಆದುದರಿಂದ, ನನ್ನ ಮಕ್ಕಳೇ, ಧರ್ಮಶಾಸ್ತ್ರದ ಅಭಿಮಾನಿಗಳಾಗಿರಿ. ನಿಮ್ಮ ಪಿತೃಗಳ ಒಡಂಬಡಿಕೆಗಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಾಗಿರಿ.
51 : ನಮ್ಮ ಪೂರ್ವಜರು ಅವರವರ ಕಾಲದಲ್ಲಿ ಮಾಡಿದ ಕಾರ್ಯಗಳನ್ನು ಸ್ಮರಣೆಗೆ ತಂದುಕೊಳ್ಳಿ. ನೀವೂ ಮಹಾಕೀರ್ತಿಯನ್ನು ಸಂಪಾದಿಸಿಕೊಳ್ಳಿ, ಶಾಶ್ವತವಾದ ಹೆಸರನ್ನು ಗಳಿಸಿಕೊಳ್ಳಿ.
52 : “ಅಬ್ರಹಾಮನು ಪರೀಕ್ಷೆಗೆ ಗುರಿಯಾದಾಗ ನಂಬಿಗಸ್ತನಾಗಿ ಕಂಡುಬರಲಿಲ್ಲವೆ? ಅದು ಸತ್ಸಂಬಂಧವಾಗಿ ಪರಿಗಣಿಕೆಯಾಗಲಿಲ್ಲವೆ?
53 : ಜೋಸೆಫನು ತನ್ನ ಇಕ್ಕಟ್ಟಿನ ಕಾಲದಲ್ಲಿ ದೇವರ ಆಜ್ಞೆಯನ್ನು ಪಾಲಿಸಿದ; ಆದುದರಿಂದಲೆ ಈಜಿಪ್ಟಿಗೆ ದೊರೆಯಾದ.
54 : ನಮ್ಮ ತಂದೆ ಫಿನೆಹಾಸನು ಮಹಾಭಿಮಾನಿಯಾಗಿದ್ದ; ಆದ್ದರಿಂದಲೆ ಶಾಶ್ವತ ಯಾಜಕತ್ವದ ಒಡಂಬಡಿಕೆಯನ್ನು ಪಡೆದುಕೊಂಡ.
55 : ಯೆಹೋಶುವನು ದೇವರ ಮಾತಿನಂತೆ ನಡೆದ; ಆದ್ದರಿಂದಲೆ ಇಸ್ರಯೇಲರಲ್ಲಿ ನ್ಯಾಯಸ್ಥಾಪಕನಾದ.
56 : ಕಾಲೇಬನು ಸಭೆಯಲ್ಲಿ ಸಾಕ್ಷಿಕೊಟ್ಟ; ಆದ್ದರಿಂದಲೆ ನಾಡಿನಲ್ಲಿ ಸೊತ್ತನ್ನು ಪಡೆದುಕೊಂಡ.
57 : ದಾವೀದನು ಕರುಣೆ ತೋರಿಸಿದ; ಆದ್ದರಿಂದಲೆ ಸಾಮ್ರಾಜ್ಯದ ಸೊತ್ತನ್ನು ಶಾಶ್ವತವಾಗಿ ಪಡೆದುಕೊಂಡ.
58 : ಎಲೀಯನು ಧರ್ಮಶಾಸ್ತ್ರದ ವಿಷಯದಲ್ಲಿ ಅತ್ಯಾಸಕ್ತಿಯುಳ್ಳವನಾಗಿದ್ದ; ಆದ್ದರಿಂದಲೆ ಪರಲೋಕಕ್ಕೆ ಒಯ್ಯಲ್ಪಟ್ಟ.
59 : ಹನನ್ಯ, ಅಜರ್ಯ, ಮಿಶಾಯೇಲರು ನಂಬಿಗಸ್ತರಾಗಿದ್ದರು; ಆದ್ದರಿಂದಲೆ ಬೆಂಕಿಯಿಂದ ಸುರಕ್ಷಿತರಾದರು
60 : ದಾನಿಯೇಲನು ನಿರ್ದೋಷಿಯಾಗಿದ್ದ; ಆದ್ದರಿಂದಲೆ ಸಿಂಹಗಳ ಬಾಯಿಂದ ಸುರಕ್ಷಿತನಾದ.
61 : ಹೀಗೆ ಆಯಾ ತಲೆಮಾರುಗಳನ್ನು ಆಲೋಚಿಸಿ ದೇವರ ಮೇಲೆ ನಿರೀಕ್ಷೆಯಿಡುವವರು ಎಂದಿಗೂ ನಿರ್ಬಲರಾಗುವುದಿಲ್ಲವೆಂದು ತಿಳಿಯಿರಿ.
62 : ಪಾಪಾತ್ಮನ ಮಾತುಗಳಿಗೆ ಅಂಜಬೇಡಿ; ಅವನ ಗೌರವ ತಿಪ್ಪೆಹುಳುಗಳ ಪಾಲಾಗುವುದು.
63 : ಇಂದು ಅವನು ಮೇಲೇರುತ್ತಾನೆ; ನಾಳೆ ಯಾವ ರೀತಿಯಲ್ಲೂ ಕಾಣದೆಹೋಗುತ್ತಾನೆ; ಕಾರಣ, ತನ್ನ ಮಣ್ಣಿಗೆ ಮರಳುತ್ತಾನೆ; ಅವನ ಆಲೋಚನೆಗಳೆಲ್ಲಾ ಲಯವಾಗುತ್ತವೆ.
64 : ಮಕ್ಕಳೇ, ನೀವಾದರೋ ಧೈರ್ಯದಿಂದಿರಿ ಧರ್ಮಶಾಸ್ತ್ರದ ಬಗ್ಗೆ ಶೂರರಾಗಿರಿ ಇದರಲ್ಲೆ ನೀವು ಕೀರ್ತಿಯನ್ನು ಪಡೆಯುವಿರಿ.
65 : “ನಿಮ್ಮ ಅಣ್ಣ ಸಿಮೋನನು ವಿಚಾರವಂತನೆಂದು ನಾನು ಬಲ್ಲೆ; ಯಾವಾಗಲು ಅವನ ಮಾತಿಗೆ ಗಮನದಿಂದ ಕಿವಿಗೊಡಿ. ಅವನು ನಿಮಗೆ ತಂದೆಯಂತೆ ಇರುವನು.
66 : ಯೂದ ಮಕ್ಕಬಿಯನು ಯೌವನಾರಭ್ಯ ಗಟ್ಟಿಗ ಮತ್ತು ಬಲಶಾಲಿ. ಅವನು ನಿಮ್ಮ ಸೇನಾನಾಯಕನಾಗಿ ಇರಲಿ. ಅವನೇ ನಿಮ್ಮ ಜನರ ಯುದ್ಧಗಳನ್ನು ನಡೆಸುವನು.
67 : ಧರ್ಮಶಾಸ್ತ್ರದ ಅಧೀನರನ್ನೆಲ್ಲ ನಿಮ್ಮ ಕಡೆಗೆ ಸೇರಿಸಿಕೊಂಡು ನಿಮ್ಮ ಜನಾಂಗಕ್ಕೆ ಆದ ಅನ್ಯಾಯದ ಸೇಡನ್ನು ತೀರಿಸಿಕೊಳ್ಳಿ. ಅನ್ಯರಿಗೆ ಮುಯ್ಯಿತೀರಿಸಿರಿ.
68 : ಧರ್ಮಶಾಸ್ತ್ರದ ನಿಬಂಧನೆಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳಿ.”
69 : ಹೀಗೆ ಮತ್ತಾತಿಯನು ತನ್ನ ಮಕ್ಕಳನ್ನು ಆಶೀರ್ವದಿಸಿ, ನಿಧನನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. 146ನೇ ವರ್ಷದಲ್ಲಿ ಅವನು ಕಾಲವಾದನು. ಅವನ ಮಕ್ಕಳು ಮೋದೀನದಲ್ಲಿದ್ದ ಅವರ ಪೂರ್ವಜರ ಸಮಾಧಿಯಲ್ಲೇ ಅವನ ಪಾರ್ಥಿವ ಶರೀರವನ್ನು ಭೂಸ್ಥಾಪನೆ ಮಾಡಿದರು. ಅವನಿಗಾಗಿ ಇಸ್ರಯೇಲರೆಲ್ಲರು ಬಹಳ ಶೋಕತಪ್ತರಾಗಿ ಮರುಗಿದರು.

· © 2017 kannadacatholicbible.org Privacy Policy