1 : ಯೊವಾನನು ಜಗರದಿಂದ ಬಂದು, ಕೆಂಡೆಬಿಯನು ಏನು ನಡೆಸಿದ್ದಾನೆ ಎಂಬುದನ್ನು ತನ್ನ ತಂದೆ ಸಿಮೋನನಿಗೆ ತಿಳಿಸಿದನು.
2 : ಸಿಮೋನನು ತನ್ನಿಬ್ಬರು ಹಿರಿಯ ಮಕ್ಕಳಾದ ಯೂದನನ್ನೂ ಯೊವಾನ್ನನನ್ನೂ ಕರೆದು, ಅವರಿಗೆ, “ನಾನೂ ನನ್ನ ಸಹೋದರರೂ ನನ್ನ ತಂದೆಯ ಮನೆಯವರೂ ನಮ್ಮ ಯೌವನಾರಭ್ಯ ಈ ದಿನದವರೆಗೂ ಇಸ್ರಯೇಲರ ಯುದ್ಧಗಳನ್ನು ನಡೆಸುತ್ತಾ ಬಂದಿದ್ದೇವೆ. ಅನೇಕಾವರ್ತಿ ನಾವು ಇಸ್ರಯೇಲರನ್ನು ಬಿಡುಗಡೆಮಾಡಲು ಮಾಡಿದ ನಮ್ಮ ಯತ್ನಗಳೆಲ್ಲವೂ ಕೈಗೂಡಿದವು.
3 : ನಾನೀಗ ಮುದುಕನಾಗಿದ್ದೇನೆ. ನೀವಾದರೋ ದೇವರ ದಯೆಯಿಂದ ಪ್ರಾಯಕ್ಕೆ ಬಂದಿದ್ದೀರಿ. ನೀವು ನನ್ನ ಮತ್ತು ನನ್ನ ತಮ್ಮನ ಸ್ಥಳದಲ್ಲಿದ್ದು ನಮ್ಮ ಜನಾಂಗಕ್ಕಾಗಿ ಹೋಗಿ ಯುದ್ಧಮಾಡಿ; ಪರಲೋಕದಿಂದ ಬರುವ ಸಹಾಯವು ನಿಮ್ಮ ಸಂಗಡ ಇರಲಿ,” ಎಂದು ಹೇಳಿದನು.
4 : ಯೊವಾನ್ನನು ಆ ನಾಡಿನಿಂದ ಇಪ್ಪತ್ತು ಸಾವಿರ ಯೋಧರನ್ನೂ ರಾಹುತರನ್ನೂ ಆಯ್ದುಕೊಂಡನು. ಅವರು ಕೆಂಡೆಬಿಯನ ವಿರೋಧವಾಗಿ ಹೊರಟು ಮೋದೀನದಲ್ಲಿ ತಂಗಿದರು.
5 : ಬೆಳಿಗ್ಗೆ ಎದ್ದು ಬಂದು ನೋಡಲಾಗಿ ಕಾಲಾಳುಗಳ ಮತ್ತು ಕುದುರೆ ಸವಾರರ ಮಹಾಸೈನ್ಯವೊಂದು ಅವರ ಎದುರಿಗೆ ಬರುವುದು ಕಾಣಿಸಿತು.
6 : ಆದರೆ ಇಬ್ಬಣಗಳ ನಡುವೆ ಹಳ್ಳವೊಂದಿತ್ತು. ಯೊವಾನ್ನನೂ ಅವನ ಜನರೂ ಶತ್ರುವಿನ ಎದುರಿಗೆ ಪಾಳೆಯ ಮಾಡಿದರು. ಅವನ ಜನರು ಹಳ್ಳವನ್ನು ದಾಟಿ ಹೋಗಲು ಅಂಜುತ್ತಿರುವುದನ್ನು ಕಂಡು ತಾನೇ ಮೊದಲು ಅದನ್ನು ದಾಟಿ ಹೋದನು. ಜನರು ಅದನ್ನು ಕಂಡು ತಾವೂ ಅವನ ಹಿಂದೆ ದಾಟಿದರು.
7 : ಜನರನ್ನು ಎರಡು ಭಾಗವಾಗಿ ವಿಂಗಡಿಸಿ, ಕಾಲಾಳುಗಳ ನಡುವೆ ರಾಹುತರನ್ನು ನಿಲ್ಲಿಸಿದನು. ಆದರೆ ಶತ್ರುಗಳ ರಾಹುತರು ಹೇರಳವಾಗಿದ್ದರು.
8 : ಅವರು ಕೊಂಬುಗಳನ್ನು ಊದಿದರು. ಕೆಂಡೆಬಿಯನೂ ಅವನ ಸೈನ್ಯವೂ ಪರಾಜಯ ಹೊಂದಿದರು. ಅವರಲ್ಲಿ ಅನೇಕರು ಗಾಯಗೊಂಡು ನೆಲಕ್ಕುರುಳಿದರು; ಉಳಿದವರು ದುರ್ಗಗಳಿಗೆ ಓಡಿಹೋದರು.
9 : ಅದೇ ಸಮಯಕ್ಕೆ ಯೊವಾನ್ನನ ತಮ್ಮ ಯೂದನೂ ಗಾಯಗೊಂಡನು. ಆದರೆ ಯೊವಾನ್ನನು, ಕೆಂಡೆಬಿಯನು ಕಟ್ಟಿದ್ದ ಕಿದ್ರೋನಿನವರೆಗೆ ಬರುವ ತನಕ ಅವರನ್ನು ಬೆನ್ನಟ್ಟಿದನು.
10 : ಅವರು ಅಜೋತಿನ ಅಡವಿಯಲ್ಲಿದ್ದ ಬುರುಜುಗಳಿಗೆ ಓಡಿಹೋದರು. ಅವನು ಆ ಊರನ್ನು ಬೆಂಕಿಯಿಂದ ಸುಟ್ಟುಬಿಟ್ಟನು. ಅವರಲ್ಲಿ ಸುಮಾರು ಎರಡು ಸಾವಿರ ಜನರು ಸತ್ತರು. ಯೊವಾನ್ನನು ಸಮಾಧಾನದಿಂದ ಜುದೇಯಕ್ಕೆ ಹಿಂದಿರುಗಿದನು.
11 : ಅಬೂಬನ ಮಗ ಪ್ತೊಲೆಮೇಯನು ಜೆರಿಕೋವಿನ ಬಯಲುಸೀಮೆಯ ಮೇಲೆ ಸರದಾರನಾಗಿ ನೇಮಕವಾಗಿದ್ದನು. ಅವನಲ್ಲಿ ಬಹಳ ಬೆಳ್ಳಿ ಬಂಗಾರವಿತ್ತು.
12 : ಪ್ರಧಾನಯಾಜಕನ ಅಳಿಯನೂ ಅವನಾಗಿದ್ದನು.
13 : ಉಬ್ಬಿದ ಮನಸ್ಸು ಉಳ್ಳವನಾಗಿ ಆ ಪ್ರಾಂತ್ಯವನ್ನು ಆತನೇ ವಶಮಾಡಿಕೊಳ್ಳಬೇಕೆಂದು ಇಷ್ಟಪಟ್ಟನು.
14 : ಸಿಮೋನನನ್ನೂ ಅವನ ಮಕ್ಕಳನ್ನೂ ನಿರ್ಮೂಲ ಮಾಡಬೇಕೆಂದು ಮೋಸದ ಹಂಚಿಕೆ ಮಾಡಿದನು. ಸಿಮೋನನು ತನ್ನ ನಾಡಿನಲ್ಲಿದ್ದ ಪಟ್ಟಣಗಳಿಗೆ ಭೇಟಿಕೊಟ್ಟು ಅವು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳುತ್ತಿದ್ದನು. ಹೀಗಿರುವಲ್ಲಿ 177ನೇ ವರ್ಷದ ಹನ್ನೊಂದನೆಯ ತಿಂಗಲಾದ ಶೆಬಾತ್ ತಿಂಗಳು ಅವನೂ ಅವನ ಮಕ್ಕಳಾದ ಮತ್ತಾತಿಯನೂ ಯೂದನೂ ಜೆರಿಕೋವಿಗೆ ಬಂದರು.
15 : ಅಬೂಬನ ಮಗನು ತಾನು ಕಟ್ಟಿಸಿದ ದೋಕ್ ಎಂಬ ಚಿಕ್ಕ ದುರ್ಗದಲ್ಲಿ ಅವರನ್ನು ಕಪಟದಿಂದ ಸ್ವೀಕರಿಸಿದನು; ಅವರಿಗಾಗಿ ಒಳ್ಳೆ ಪಾನಗೋಷ್ಠಿಯನ್ನು ಏರ್ಪಡಿಸಿದನು; ಅಲ್ಲೇ ಜನರನ್ನು ಅಡಗಿಸಿಟ್ಟಿದ್ದನು.
16 : ಹೀಗಿರಲಾಗಿ, ಸಿಮೋನನೂ ಅವನ ಮಕ್ಕಳೂ ಕುಡಿದು ಮತ್ತರಾದ ಮೇಲೆ ಪ್ತೊಲೆಮೇಯ ಹಾಗೂ ಅವನ ಜನರೂ ಎದ್ದು ತಮ್ಮ ಆಯುಧಗಳನ್ನು ತೆಗೆದುಕೊಂಡು ಪಾನಗೋಷ್ಠಿಯಲ್ಲೇ ನುಗ್ಗಿ ಸಿಮೋನನ ಮೇಲೆ ಬಿದ್ದು ಅವನನ್ನೂ ಅವನಿಬ್ಬರು ಮಕ್ಕಳನ್ನೂ ಅವನ ಕೆಲವು ಸೇವಕರನ್ನೂ ಸಂಹರಿಸಿದರು.
17 : ಪ್ತೊಲೆಮೇಯನು ಮಹಾಪಾತಕ ಗೈದನು; ಒಳಿತಿಗೆ ಪ್ರತಿಯಾಗಿ ಕೇಡನ್ನು ಮಾಡಿದನು.
18 : ಈ ಸಂಗತಿಗಳನ್ನೆಲ್ಲಾ ಅರಸನಿಗೆ ಬರೆದುಕಳುಹಿಸಿ, ತನ್ನ ಸಹಾಯಕ್ಕಾಗಿ ಸೈನ್ಯವನ್ನು ಕಳುಹಿಸಬೇಕು; ಹೀಗಾದಲ್ಲಿ ಅವರ ನಾಡನ್ನೂ ಪಟ್ಟಣಗಳನ್ನೂ ನಿಮ್ಮ ಸ್ವಾಧೀನ ಮಾಡಿಕೊಡುವೆ ಎಂಬುದಾಗಿ ಅರಿಕೆಮಾಡಿದನು.
19 : ಯೊವಾನ್ನನನ್ನೂ ನಿರ್ಮೂಲ ಮಾಡುವುದಕ್ಕೆ ಇತರರನ್ನು ಗಜರಕ್ಕೆ ಕಳುಹಿಸಿದನು; ಸಹಸ್ರಾಧಿಪತಿಗಳಿಗೆ, “ನನ್ನ ಬಳಿಗೆ ಬಂದು ಬೆಳ್ಳಿ, ಬಂಗಾರ, ಬಹುಮಾನಾದಿಗಳನ್ನು ತೆಗೆದುಕೊಳ್ಳಿರೆಂದು ಪತ್ರಬರೆದು ಕಳುಹಿಸಿದನು.
20 : ಜೆರುಸಲೇಮನ್ನೂ ದೇವಾಲಯದ ದಿಬ್ಬವನ್ನೂ ಹಿಡಿದುಕೊಳ್ಳುವುದಕ್ಕೆ ಬೇರೆ ಕೆಲವರನ್ನೂ ಕಳುಹಿಸಿದನು. ಇತ್ತ ಒಬ್ಬನು ಗಜರಕ್ಕೆ ಓಡಿಹೋಗಿ ಯೊವಾನ್ನನಿಗೆ,
21 : “ನಿನ್ನ ತಂದೆಯೂ ತಮ್ಮಂದಿರೂ ನಾಶವಾದರು, ನಿನ್ನನ್ನೂ ಕೊಲ್ಲುವುದಕ್ಕೆ ಅವನು ಜನರನ್ನು ಕಳುಹಿಸಿದ್ದಾನೆ,” ಎಂದು ತಿಳಿಸಿದನು.
22 : ಅವನು ಇದನ್ನು ಕೇಳಿದಾಗ ಬಹಳ ಆಶ್ಚರ್ಯಗೊಂಡನು. ತನ್ನನ್ನು ಕೊಲ್ಲುವುದಕ್ಕೆ ಬಂದವರನ್ನು ಹಿಡಿಸಿ, ಕೊಂದು ಹಾಕಿಸಿದನು; ಏಕೆಂದರೆ ತನ್ನನ್ನು ಸಂಹರಿಸುವುದಕ್ಕೆ ಅವರು ಹವಣಿಸುತ್ತಿದ್ದಾರೆಂಬುದು ಅವನಿಗೆ ತಿಳಿದಿತ್ತು.
23 : ಯೊವಾನ್ನನ ಉಳಿದ ಚರಿತ್ರೆ, ಅವನು ಮಾಡಿದ ಶೂರಕೃತ್ಯಗಳು ಹಾಗು ಕಟ್ಟಿದ ಗೋಡೆ ಮುಂತಾದ ಕಾರ್ಯಗಳು ಮತ್ತು ಅವನ ತಂದೆಯ ತರುವಾಯ ಅವನು ಪ್ರಧಾನ ಯಾಜಕನಾಗಿ ನೇಮಕವಾದಂದಿನಿಂದ ಸಾಧಿಸಿದ ಎಲ್ಲವು ಪ್ರಧಾನಯಾಜಕರ ಕಾಲವೃತ್ತಾಂತದಲ್ಲಿ ಲಿಖಿತವಾಗಿವೆ.
45 : ಅದರ ನಿವಾಸಿಗಳು ಭಯದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಮ್ಮ ಮಡದಿಮಕ್ಕಳೊಂದಿಗೆ ಕೋಟೆಯ ಗೋಡೆಯ ಮೇಲೆ ಏರಿಹೋಗಿ, ಗಟ್ಟಿಯಾಗಿ ಕೂಗುತ್ತಾ ತಮಗೆ ಸಹಾಯ ಮಾಡಬೇಕೆಂದು ಸಿಮೋನನಿಗೆ ಮೊರೆಯಿಟ್ಟರು.