Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ತ್ರಿಫೋನನು ಜುದೇಯ ನಾಡನ್ನು ಹೊಕ್ಕು, ಅದನ್ನು ಪೂರ್ತಿಯಾಗಿ ನಾಶಮಾಡಬೇಕೆಂದು ಬಲವಾದ ಸೈನ್ಯವನ್ನು ಶೇಖರಿಸಿದ್ದಾನೆಂಬ ಸಮಾಚಾರ ಸಿಮೋನನಿಗೆ ಮುಟ್ಟಿತು.
2 : ಇತ್ತ ಜನರು ಬಹಳವಾಗಿ ಅಂಜಿ ನಡುಗುತ್ತಿದ್ದಾರೆಂದು ತಿಳಿದು ಜೆರುಸಲೇಮಿಗೆ ಹೋಗಿ, ಜನರನ್ನೆಲ್ಲಾ ಒಟ್ಟಿಗೆ ಕೂಡಿಸಿ, ಅವರನ್ನು ಧೈರ್ಯಪಡಿಸಿದನು.
3 : ಅವರಿಗೆ, “ನಾನು, ನನ್ನ ಸಹೋದರರು ಹಾಗು ನನ್ನ ತಂದೆಯ ಮನೆಯವರು ನಮ್ಮ ಧರ್ಮದ ಮತ್ತು ಮಹಾದೇವಾಲಯದ ಪರವಾಗಿ ಮಾಡಿದ ಎಲ್ಲ ಕಾರ್ಯಗಳನ್ನೂ ಅನುಭವಿಸಿದ ಯುದ್ಧ, ಕಷ್ಟಗಳನ್ನೂ ನೀವು ಸ್ವತಃ ಬಲ್ಲವರಾಗಿದ್ದೀರಿ.
4 : ಇದರಿಂದಲೇ, ಇಸ್ರಯೇಲರ ಸಲುವಾಗಿ ನನ್ನ ಸಹೋದರರೆಲ್ಲರೂ ಅಳಿದು, ನಾನೊಬ್ಬನೇ ಉಳಿದುಕೊಂಡಿದ್ದೇನೆ.
5 : ಈಗ ಎಂತಹ ಕಷ್ಟಕಾಲ ಒದಗಿದರೂ ನನ್ನ ಪ್ರಾಣವನ್ನು ಉಳಿಸಿಕೊಳ್ಳುವುದು ನನ್ನಿಂದ ದೂರವಾಗಿರಲಿ.
6 : ನನ್ನ ಸಹೋದರರಿಗಿಂತ ನಾನು ಉತ್ತಮನಲ್ಲ; ಹೇಗಾದರೂ ನನ್ನ ಜನಾಂಗದ, ಮಹಾದೇವಾಲಯದ ಮತ್ತು ನಮ್ಮ ಮಡದಿ ಮಕ್ಕಳ ಪ್ರಯುಕ್ತ ನಾನು ಸೇಡು ತೀರಿಸಿಕೊಳ್ಳುವೆನು. ಏಕೆಂದರೆ ಅನ್ಯಜನಗಳೆಲ್ಲಾ ನಮ್ಮ ಮೇಲಿನ ದ್ವೇಷದಿಂದ ನಮ್ಮನ್ನು ಹಾಳುಮಾಡಲು ಕೂಡಿಕೊಂಡಿದ್ದಾರೆ,” ಎಂದು ಹೇಳಿದನು.
7 : ಈ ಮಾತುಗಳನ್ನು ಕೇಳಿ ಜನರ ಮನಸ್ಸು ಚೇತರಿಸಿಕೊಂಡಿತು.
8 : ಅವರು ಗಟ್ಟಿಯಾಗಿ ಕೂಗಿ, “ಯೂದನ ಮತ್ತು ನಿನ್ನ ತಮ್ಮ ಯೋನಾತನನ ಸ್ಥಾನದಲ್ಲಿ ನೀನೇ ನಮ್ಮ ನಾಯಕನಾಗಿರು
9 : ನೀನೇ ನಮ್ಮ ಯುದ್ಧವನ್ನು ನಡೆಸು; ನೀನು ಹೇಳುವುದೆಲ್ಲವನ್ನೂ ನಾವು ಮಾಡುತ್ತೇವೆ,” ಎಂದು ಉತ್ತರಕೊಟ್ಟರು.
10 : ಆಗ ಸಿಮೋನನು ಯೋಧರೆಲ್ಲರನ್ನೂ ಕೂಡಿಸಿಕೊಂಡು, ಲಘುವಾಗಿ ಜೆರುಸಲೇಮಿನ ಗೋಡೆಗಳನ್ನು ಕಟ್ಟಿ ಪೂರೈಸಿ, ಸುತ್ತಲೂ ಅವುಗಳನ್ನು ಭದ್ರಪಡಿಸಿದನು.
11 : ಅಬ್ಷಾಲೋಮನ ಮಗ ಯೋನಾತನನನ್ನು ಮಹಾ ಸೈನ್ಯದೊಡನೆ ಜೊಪ್ಪಕ್ಕೆ ಕಳುಹಿಸಿದನು. ಅವನು ಅದರೊಳಗಿದ್ದವರನ್ನೆಲ್ಲ ಹೊರಗೆ ಹಾಕಿ ಅಲ್ಲಿ ಬಿಡಾರ ಮಾಡಿದನು.
12 : ತ್ರಿಫೋನನು ಜುದೇಯ ನಾಡನ್ನು ಪ್ರವೇಶಿಸುವುದಕ್ಕಾಗಿ ಮಹಾಸೈನ್ಯದೊಂದಿಗೆ ಪ್ತೊಲೆಮಾಯವನ್ನು ಬಿಟ್ಟು ಹೊರಟನು. ಯೋನಾತನನು ಸಹ ಬಂಧಿಯಾಗಿ ಅವನ ಕೂಡ ಬಂದನು.
13 : ಸಿಮೋನನು ಬೈಲಿಗೆ ಎದುರಾಗಿ ಅದೀದದಲ್ಲಿ ಪಾಳೆಯ ಮಾಡಿಕೊಂಡನು.
14 : ತನ್ನ ತಮ್ಮ ಯೋನಾತನನ ಬದಲಾಗಿ ಸಿಮೋನನು ಎದ್ದಿದ್ದಾನೆಂದೂ ತನ್ನೊಂದಿಗೆ ಯುದ್ಧಹೂಡುವ ಹವಣಿಕೆಯಲ್ಲಿದ್ದಾನೆಂದೂ ತ್ರಿಫೋನನು ತಿಳಿದುಕೊಂಡು ಅವನ ಬಳಿಗೆ ರಾಯಭಾರಿಗಳನ್ನು ಕಳುಹಿಸಿದನು.
15 : ಅವನಿಗೆ, “ನಿನ್ನ ತಮ್ಮ ಯೋನಾತನನು ತನಗಿದ್ದ ಸ್ಥಾನಮಾನಗಳ ನಿಮಿತ್ತ ಅರಸನ ಭಂಡಾರಕ್ಕೆ ಸಲ್ಲಿಸಬೇಕಾಗಿದ್ದ ಹಣದ ಕಾರಣ ನಾವು ಅವನನ್ನು ಕೈದಿಯಾಗಿ ಇಟ್ಟುಕೊಂಡಿದ್ದೇವೆ.
16 : ಆದುದರಿಂದ ಈಗ ನೀನು 3000 ಕಿಲೋಗ್ರಾಂ ಬೆಳ್ಳಿಯನ್ನು ನಮಗೆ ಕಳುಹಿಸಿಕೊಡು; ಮತ್ತು ಅವನು ಬಿಡುಗಡೆ ಹೊಂದಿದನಂತರ ನಮ್ಮ ಮೇಲೆ ಮತ್ತೆ ಬೀಳದಂತೆ ಅವನ ಮಕ್ಕಳಲ್ಲಿ ಇಬ್ಬರನ್ನು ನಮ್ಮ ಕಡೆಗೆ ಒತ್ತೆಯಾಳಾಗಿ ಕಳುಹಿಸು; ಆಗ ನಾವು ಅವನನ್ನು ಬಿಡುಗಡೆ ಮಾಡುವೆವು,” ಎಂದು ಹೇಳಿದನು.
17 : ಅವರು ಮೋಸದಿಂದ ಹೀಗೆ ಮಾತಾಡುತ್ತಿದ್ದಾರೆಂದು ಸಿಮೋನನಿಗೆ ತಿಳಿದಿದ್ದರೂ ಅವನು ಹಣವನ್ನೂ ಮಕ್ಕಳನ್ನೂ ಕಳುಹಿಸಿದನು.
18 : ಜನರು, “ಇವನು ಹಣವನ್ನೂ ಮಕ್ಕಳನ್ನೂ ಕಳುಹಿಸಲಿಲ್ಲವಾದ್ದರಿಂದ ಅವನು ನಾಶವಾದನು,” ಎನ್ನಬಾರದೆಂದೂ ತಾನು ಈ ಕಾರಣ ಅವರ ದ್ವೇಷಕ್ಕೆ ಗುರಿಯಾಗಬಾರದೆಂದೂ ಆ ಮಕ್ಕಳನ್ನೂ 3000 ಕಿಲೋಗ್ರಾಂ ಬೆಳ್ಳಿಯನ್ನು ಕಳುಹಿಸಿದನು.
19 : ಆದರೆ ತ್ರಿಫೋನನು ವಂಚನೆಮಾಡಿ ಯೋನಾತನನನ್ನು ಬಿಡುಗಡೆಮಾಡಲೇ ಇಲ್ಲ.
20 : ಇದಾದ ಮೇಲೆ ತ್ರಿಫೋನನು ನಾಡನ್ನು ಆಕ್ರಮಿಸಿ, ಅದನ್ನು ನಾಶಮಾಡಲು ಬಂದನು. ಅದೊರಾಕ್ಕೆ ಹೋಗುವ ಮಾರ್ಗವಾಗಿ ಸುತ್ತುವರಿದೂ ಬಂದನು. ಸಿಮೋನನೂ ಅವನ ಸೈನ್ಯದವರೂ ಅವನು ಹೋದಲ್ಲೆಲ್ಲಾ ಪ್ರತಿಯೊಂದು ಸ್ಥಳದಲ್ಲಿ ಅವನಿಗೆ ಅಡ್ಡಬರುವಂತೆ ಹೋಗುತ್ತಿದ್ದರು.
21 : ಕೋಟೆಯಲ್ಲಿದ್ದವರು ತ್ರಿಫೋನಿನ ಬಳಿಗೆ ರಾಯಭಾರಿಗಳನ್ನು ಕಳುಹಿಸಿ, ಅರಣ್ಯ ಮಾರ್ಗವಾಗಿ ಬೇಗ ತಮ್ಮ ಕಡೆಗೆ ಬರಬೇಕೆಂದೂ ತಮಗೆ ದವಸಧಾನ್ಯಗಳನ್ನು ಒದಗಿಸಬೇಕೆಂದೂ ಹೇಳಿದರು.
22 : ತ್ರಿಫೋನನು ಹೋಗುವುದಕ್ಕೆ ತನ್ನ ಅಶ್ವಬಲವನ್ನೆಲ್ಲಾ ಸಜ್ಜುಗೊಳಿಸಿದನು. ಆ ದಿನ ರಾತ್ರಿ ಬಹಳ ಹಿಮಬಿದ್ದಿತ್ತು. ಹಿಮದ ನಿಮಿತ್ತ ಅಂದು ಹೊರಡಲು ಆಗಲಿಲ್ಲ. ಅವನು ಅಲ್ಲಿಂದ ಹೊರಟು ಗಿಲ್ಯಾದ ಸೀಮೆಗೆ ಬಂದನು.
23 : ಅವನು ಬಸ್ಕಾಮಾ ಊರಿಗೆ ಬಂದಾಗ ಯೋನಾತನನನ್ನು ಕೊಂದುಹಾಕಿದನು; ಅಲ್ಲಿಯೇ ಅವನಿಗೆ ಸಮಾಧಿ ಆಯಿತು.
24 : ಆಮೇಲೆ ತ್ರಿಫೋನನು ಹಿಂದಿರುಗಿ ತನ್ನ ನಾಡಿಗೆ ತೆರಳಿದನು.
25 : ಸಿಮೋನನು ತನ್ನ ತಮ್ಮ ಯೋನಾತನನ ಶವವನ್ನು ತರಿಸಿಕೊಂಡು ಅದನ್ನು ತನ್ನ ಪಿತೃಗಳ ಊರಾದ ಮೋದೀನದಲ್ಲಿ ಭೂಸ್ಥಾಪನೆಮಾಡಿದನು.
26 : ಇಸ್ರಯೇಲರೆಲ್ಲರೂ ಬಹಳವಾಗಿ ಗೋಳಾಡಿ, ಅವನಿಗಾಗಿ ಬಹುದಿನದವರೆಗೂ ಶೋಕಿಸಿದರು.
27 : ಸಿಮೋನನು ತನ್ನ ತಂದೆಯ ಮತ್ತು ಸಹೋದರರ ಸಮಾಧಿಯನ್ನು ಇಕ್ಕಡೆ ನುಣುಪಾದ ಕಲ್ಲುಗಳಿಂದ ಎಲ್ಲರಿಗೂ ಕಾಣುವಂತೆ ಎತ್ತರವಾಗಿ ಕಟ್ಟಿಸಿದನು.
28 : ಮತ್ತು ಅಲ್ಲಿ ತನ್ನ ತಂದೆ, ತಾಯಿ ಮತ್ತು ನಾಲ್ಕುಜನ ತಮ್ಮಂದಿರ ಸ್ಮಾರಕವಾಗಿ ಒಂದರ ಮುಂದೆ ಒಂದರಂತೆ ಶಂಕು ಸ್ತಂಭಗಳನ್ನು ನಿಲ್ಲಿಸಿದನು.
29 : ಒಳ್ಳೇ ಚಾಕಚಕ್ಯತೆಯಿಂದ ಅವುಗಳ ಸುತ್ತಲೂ ದೊಡ್ಡ ದೊಡ್ಡ ಕಂಬಗಳನ್ನು ನಿಲ್ಲಿಸಿ, ಆ ಕಂಬಗಳ ಮೇಲೆ ಶಾಶ್ವತ ಸ್ಮಾರಕವಾಗಿರಲೆಂದು ಎಲ್ಲ ತರದ ಆಯುಧಗಳನ್ನು ಮಾಡಿಸಿದನು; ಇದಲ್ಲದೆ, ಸಮುದ್ರದಲ್ಲಿ ಪ್ರಯಾಣ ಮಾಡುವವರೆಲ್ಲರಿಗೂ ಕಾಣಿಸುವಂತೆ ಆ ಆಯುಧಗಳ ಬಳಿಯಲ್ಲಿ ಹಡಗುಗಳನ್ನು ಕೆತ್ತಿಸಿದನು.
30 : ಮೋದೀನದಲ್ಲಿ ಹೀಗೆ ಕಟ್ಟಿಸಿದ ಸಮಾಧಿ ಇಂದಿನವರೆಗೂ ಇದೆ.
31 : ತ್ರಿಫೋನನು ಕಿರಿಯ ಅಂತಿಯೋಕನೊಂದಿಗೆ ಮೋಸದಿಂದ ನಡೆದುಕೊಂಡು ಅವನನ್ನು ಕೊಂದು ಅವನ ಸ್ಥಳದಲ್ಲಿ ಆಳಿದನು.
32 : ತಾನೇ ಏಷ್ಯದ ಕಿರೀಟವನ್ನು ಧರಿಸಿಕೊಂಡು ನಾಡಿಗೆ ದೊಡ್ಡ ವಿಪತ್ತನ್ನು ತಂದನು.
33 : ಸಿಮೋನನು ಜುದೇಯದ ದುರ್ಗಗಳನ್ನು ಕಟ್ಟಿಸಿ, ಅವುಗಳ ಸುತ್ತಲೂ ಎತ್ತರವಾದ ಬುರುಜುಗಳನ್ನು ನಿಲ್ಲಿಸಿ, ದೊಡ್ಡ ಗೋಡೆಗಳನ್ನು ಕಟ್ಟಿಸಿ, ಅವುಗಳಿಗೆ ಬಾಗಿಲು ಅಗುಳಿಗಳನ್ನು ಮಾಡಿಸಿದನು.
34 : ತ್ರಿಫೋನನು ಮಾಡಿದುದೆಲ್ಲವೂ ಸುಲಿಗೆಯೇ ಆಗಿದ್ದುದರಿಂದ ಸಿಮೋನನು ಕೆಲವು ಜನರನ್ನು ಆಯ್ಕೆಮಾಡಿ ನಾಡನ್ನು ಕಪ್ಪಕಾಣಿಕೆಗಳಿಂದ ಬಿಡುಗಡೆ ಮಾಡಬೇಕೆಂದು ಕೇಳಿಕೊಳ್ಳಲು ಅವರನ್ನು ಅರಸ ದೆಮೆತ್ರಿಯನ ಬಳಿಗೆ ಕಳುಹಿಸಿದನು.
35 : ಅರಸ ದೆಮೆತ್ರಿಯನು ಈ ರೀತಿ ಉತ್ತರಕೊಟ್ಟು ಕಳುಹಿಸಿದನು: ಅವನು ಬರೆದ ಕಗದ ಹೀಗಿದೆ:
36 : “ಪ್ರಧಾನಯಾಜಕನೂ ರಾಜಮೈತ್ರಿಯೂ ಆದ ಸಿಮೋನನಿಗೂ ಹಿರಿಯರಿಗೂ ಯೆಹೂದ್ಯ ಜನಾಂಗಕ್ಕೂ ರಾಜ ದೆಮೆತ್ರಿಯನ ವಂದನೆಗಳು!
37 : ತಾವು ಕಳುಹಿಸಿದ ಬಂಗಾರದ ಕಿರೀಟವೂ ಖರ್ಜೂರ ಕೊಂಬೆಯೂ ಬಂದು ಸೇರಿದವು. ನಾವು ನಿಮ್ಮೊಂದಿಗೆ ಸ್ಥಿರವಾದ ಶಾಂತಿಸಂಧಾನವನ್ನು ಮಾಡಿಕೊಳ್ಳಲು ಹಾಗು ನಿಮಗೆ ಸವಲತ್ತುಗಳನ್ನು ಕೊಡಬೇಕೆಂದು ನಮ್ಮ ಸರದಾರರಿಗೆ ಬರೆಯಲು ಸಿದ್ಧರಾಗಿದ್ದೇವೆ.
38 : ನಾವು ನಿಮ್ಮೊಂದಿಗೆ ಮಾಡಿರುವ ಪ್ರತಿಯೊಂದು ಒಪ್ಪಂದವೂ ಸ್ಥಿರವಾಗಿರುವುವು; ನೀವು ಕಟ್ಟಿಸಿದ ದುರ್ಗಗಳು ನಿಮ್ಮವೇ ಆಗಿರಲಿ. 39ಈವರೆಗೆ ಆದ ತಪ್ಪುನೆಪ್ಪುಗಳನ್ನೂ ನೀವು ಕೊಡಲು ತಪ್ಪಿದ ಕಪ್ಪವನ್ನೂ ಮನ್ನಿಸುತ್ತೇವೆ. ಇದಲ್ಲದೆ ಜೆರುಸಲೇಮಿನಲ್ಲಿ ಎತ್ತಲಾಗುತ್ತಿದ್ದ ಬೇರಾವ ಸುಂಕವಾದರು ಇನ್ನೂ ಉಳಿದಿದ್ದರೆ ಅದನ್ನು ಇನ್ನು ತೆರಬೇಕಾಗಿಲ್ಲ.
39 : ಈವರೆಗೆ ಆದ ತಪ್ಪುನೆಪ್ಪುಗಳನ್ನೂ ನೀವು ಕೊಡಲು ತಪ್ಪಿದ ಕಪ್ಪವನ್ನೂ ಮನ್ನಿಸುತ್ತೇವೆ. ಇದಲ್ಲದೆ ಜೆರುಸಲೇಮಿನಲ್ಲಿ ಎತ್ತಲಾಗುತ್ತಿದ್ದ ಬೇರಾವ ಸುಂಕವಾದರು ಇನ್ನೂ ಉಳಿದಿದ್ದರೆ ಅದನ್ನು ಇನ್ನು ತೆರಬೇಕಾಗಿಲ್ಲ.
40 : ಸೈನ್ಯ ಸಿಬ್ಬಂದಿಯಲ್ಲಿ ಸೇರಿಕೊಳ್ಳುವುದಕ್ಕೆ ತಕ್ಕವರಾದ ಜನರು ನಿಮ್ಮಲ್ಲಿ ಇದ್ದರೆ ಅವರು ಸೇರಿಕೊಳ್ಳಲಿ. ನಮ್ಮ ನಿಮ್ಮ ನಡುವೆ ಸಮಾಧಾನವಿರಲಿ.”
41 : 170ನೇ ವರ್ಷ ಅನ್ಯರು ಹೊರಿಸಿದ್ದ ನೊಗವನ್ನು ಇಸ್ರಯೇಲಿನ ಮೇಲಿಂದ ಕಿತ್ತು ಹಾಕಲಾಯಿತು.
42 : ಅಂದಿನಿಂದ ಜನರು, ‘ಘನ ಪ್ರಧಾನ ಯಾಜಕನು, ಯೆಹೂದ್ಯರ ಅಧಿಪತಿಯು ಹಾಗು ನಾಯಕನು ಆದ ಸಿಮೋನನ ಅಧಿಪತ್ಯದ ಮೊದಲನೇ ವರ್ಷದಲ್ಲಿ’ ಎಂದು ತಮ್ಮ ದಸ್ತಾವೇಜು ಹಾಗು ಕರಾರು ಪತ್ರಗಳಲ್ಲಿ ಬರೆಯಲಾರಂಭಿಸಿದರು.
43 : ಆ ದಿನಗಳಲ್ಲಿ ಸಿಮೋನನು ಗಜರಾದ ಮೇಲೆ ದಂಡೆತ್ತಿ ಹೋಗಿ ಮುತ್ತಿಗೆಹಾಕಿದನು. ಮುತ್ತಿಗೆಯ ಒಂದು ಯಂತ್ರವನ್ನು ಮಾಡಿಸಿ, ಪಟ್ಟಣದ ಸಮೀಪಕ್ಕೆ ತೆಗೆದುಕೊಂಡು ಬಂದು, ಒಂದು ಬುರುಜಿನ ಮೇಲೆ ಧಾಳಿಮಾಡಿ ಅದನ್ನು ಹಿಡಿದುಕೊಂಡನು.
44 : ಯಂತ್ರದಲ್ಲಿದ್ದವರು ಪಟ್ಟಣದೊಳಗೆ ಧುಮುಕಿದರು. ಆಗ ಪಟ್ಟಣದಲ್ಲೆಲ್ಲಾ ಕೋಲಾಹಲವೆದ್ದಿತು.
45 : ಅದರ ನಿವಾಸಿಗಳು ಭಯದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಮ್ಮ ಮಡದಿಮಕ್ಕಳೊಂದಿಗೆ ಕೋಟೆಯ ಗೋಡೆಯ ಮೇಲೆ ಏರಿಹೋಗಿ, ಗಟ್ಟಿಯಾಗಿ ಕೂಗುತ್ತಾ ತಮಗೆ ಸಹಾಯ ಮಾಡಬೇಕೆಂದು ಸಿಮೋನನಿಗೆ ಮೊರೆಯಿಟ್ಟರು.
46 : “ನಮ್ಮ ಕೆಟ್ಟತನಕ್ಕೆ ತಕ್ಕಂತೆ ನಮ್ಮನ್ನು ಶಿಕ್ಷಿಸದೆ ದಯಾಪೂರ್ವಕವಾಗಿ ನಡೆದುಕೋ,” ಎಂದು ಹೇಳಿದರು.
47 : ಸಿಮೋನನು ಅವರೊಂದಿಗೆ ಒಪ್ಪಂದ ಮಾಡಿಕೊಂಡು, ಯುದ್ಧವನ್ನು ನಿಲ್ಲಿಸಿ, ಅವರನ್ನು ಪಟ್ಟಣದ ಹೊರಗೆ ಹಾಕಿಸಿದನು. ತರುವಾಯ ಮೂರ್ತಿಗಳಿದ್ದ ಮನೆಗಳನ್ನು ಶುಚಿಮಾಡಿಸಿ ಹಾಡುತ್ತಾ ಹರಸುತ್ತಾ ನಗರವನ್ನು ಸೇರಿದನು.
48 : ಅನಂತರ ಅಲ್ಲಿದ್ದ ಹೊಲಸನ್ನೆಲ್ಲ ತೆಗೆದು ಹಾಕಿಸಿ, ಧರ್ಮಶಾಸ್ತ್ರವನ್ನು ಕೈಗೊಳ್ಳುವಂಥವರನ್ನೇ ಅದರಲ್ಲಿ ಇಟ್ಟನು. ಇದಲ್ಲದೆ, ಮೊದಲಿಗಿಂತಲೂ ಹೆಚ್ಚಾಗಿ ಅದನ್ನು ಭದ್ರಗೊಳಿಸಿ, ತನ್ನ ವಾಸಕ್ಕಾಗಿ ಅಲ್ಲಿಯೇ ಒಂದು ಮನೆಯನ್ನು ಕಟ್ಟಿಸಿದನು.
49 : ಇದರಿಂದ ಜೆರುಸಲೇಮಿನ ಕೋಟೆಯಲ್ಲಿ ಇದ್ದವರಿಗೆ ನಾಡಿನಲ್ಲಿ ಹೋಗಿ ಬರುವುದೂ ಕೊಂಡುಕೊಳ್ಳುವುದೂ ನಿಂತುಹೋಗಿ ಅವರು ಉಪವಾಸವಿದ್ದರು. ಅನೇಕರು ಕೂಳಿಲ್ಲದೆ ಸತ್ತುಹೋದರು. ಆಗ ತಮ್ಮೊಂದಿಗೆ ಸಂಧಾನ ಮಾಡಿಕೊಳ್ಳಬೇಕೆಂದು ಅವರು ಸಿಮೋನನನ್ನು ಬೇಡಿಕೊಂಡರು. ಅವನು ಒಪ್ಪಿದನು.
50 : ಬಳಿಕ ಅವರನ್ನು ಅಲ್ಲಿಂದ ಹೊರಗೆ ಅಟ್ಟಿ, ಅಲ್ಲಿದ್ದ ಹೊಲಸನ್ನೆಲ್ಲ ತೆಗೆಸಿ ಕೋಟೆಯನ್ನು ಶುದ್ಧಮಾಡಿಸಿದನು.
51 : 171ನೇ ವರ್ಷದ ಎರಡನೆಯ ತಿಂಗಳಿನ ಇಪ್ಪತ್ಮೂರನೆಯ ದಿನ ಇಸ್ರಯೇಲರ ಮಹಾ ಶತ್ರು ಅಳಿದನೆಂಬುದರ ನೆನಪಿಗಾಗಿ ಅವರು ಸ್ತೋತ್ರ ಸಲ್ಲಿಸುತ್ತಾ ಖರ್ಜೂರ ಗರಿ, ಕಿನ್ನರಿ, ತಾಳ, ತಂತಿವಾದ್ಯಗಳೊಂದಿಗೆ ಸಂಗೀತ ಕೀರ್ತನೆಗಳನ್ನು ಹಾಡುತ್ತಾ ಅದನ್ನು ಪ್ರವೇಶಿಸಿದರು.
52 : ಈ ದಿನವನ್ನು ಪ್ರತಿ ವರ್ಷವೂ ಬಹು ಸಂಭ್ರಮದಿಂದ ಆಚರಿಸಬೇಕೆಂದು ಅವನು ಆಜ್ಞೆ ಮಾಡಿದನು. ಇದಲ್ಲದೆ ದುರ್ಗದ ಪಕ್ಕದಲ್ಲಿದ್ದ ದೇವಾಲಯದ ದಿಬ್ಬವನ್ನು ಮೊದಲಿಗಿಂತಲೂ ಹೆಚ್ಚಾಗಿ ಭದ್ರಪಡಿಸಿ, ಅವನೂ ಅವನ ಜನರೂ ಅಲ್ಲಿಯೇ ವಾಸಮಾಡಿದರು.
53 : ತನ್ನ ಮಗ ಯೋವಾನನು ಕೆಚ್ಚೆದೆಯ ವೀರನೆಂದು ಸಿಮೋನನು ಅರಿತು ಅವನನ್ನೇ ದಂಡಿಗೆಲ್ಲ ನಾಯಕನನ್ನಾಗಿ ನೇಮಿಸಿ ತಾನು ಗಜರಾದಲ್ಲಿ ವಾಸಮಾಡಿದನು.

· © 2017 kannadacatholicbible.org Privacy Policy