Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಈಜಿಪ್ಟಿನ ಅರಸನು ಸಮುದ್ರತೀರದ ಮರಳಿನೋಪಾದಿಯಲ್ಲಿದ್ದ ಮಹಾಸೈನ್ಯವನ್ನೂ ಅನೇಕ ಹಡಗುಗಳನ್ನೂ ಶೇಖರಿಸಿಕೊಂಡು, ಮೋಸದಿಂದ ಅಲೆಕ್ಸಾಂಡರನ ರಾಜ್ಯವನ್ನು ಆಕ್ರಮಿಸಿ, ಅದನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳಬೇಕೆಂದು ಹವಣಿಸಿದನು.
2 : ಅವನು ಹೊರಟು ಶಾಂತಿಯುತ ಮಾತುಗಳಿಂದ ಸಿರಿಯಾಕ್ಕೆ ಬಂದನು. ಅಲ್ಲಿಯ ನಿವಾಸಿಗಳು ತಮ್ಮ ಪಟ್ಟಣಗಳ ಬಾಗಿಲುಗಳನ್ನು ತೆರೆದು ಅವನನ್ನು ಎದುರುಗೊಂಡರು; ಏಕೆಂದರೆ ಅವನು ತನ್ನ ಮಾವನಾದ್ದರಿಂದ ಅವನನ್ನು ಎದುರುಗೊಳ್ಳಬೇಕೆಂದು ಅಲೆಕ್ಸಾಂಡರನು ಅಪ್ಪಣೆ ಮಾಡಿದ್ದನು.
3 : ಪ್ತೊಲೆಮೇಯನು ತಾನು ಸೇರಿದ ಪ್ರತಿಯೊಂದು ನಗರದಲ್ಲಿಯೂ ತನ್ನ ರಕ್ಷಣ ಸೈನ್ಯವನ್ನು ಇರಿಸುತ್ತಾ ಬಂದನು.
4 : ಆದರೆ ಅವನು ಅಜೋತಿನ ಸಮೀಪಕ್ಕೆ ಬಂದಾಗ ಬೆಂಕಿಯಿಂದ ಸುಡಲಾಗಿದ್ದ ದಾಗೋನನ ಗುಡಿಯನ್ನು, ಕೆಡವಿ ಹಾಳುಗೈದ ಅಜೋತ ಮತ್ತು ಅದರ ನೆರೆಹೊರೆಯ ಗ್ರಾಮಗಳನ್ನು, ಹೊರಗೆ ಬಿಸಾಡಲಾಗಿದ್ದ ಗ್ರಾಮಗಳನ್ನು, ಹೊರಗೆ ಬಿಸಾಡಲಾಗಿದ್ದ ಶವಗಳನ್ನು ಹಾಗೂ ಯುದ್ಧದಲ್ಲಿ ಅಗ್ನಿಗೆ ಆಹುತಿಯಾದ ದೇಹಗಳನ್ನು ಅವನಿಗೆ ತೋರಿಸಲಾಯಿತು. ಇವುಗಳನ್ನು ಅವನು ಹೋಗುವ ಹಾದಿಯಲ್ಲೆ ಕೂಡಿಹಾಕಿದ್ದರು.
5 : ಯೋನಾತನನ ಮೇಲೆ ದೂರು ತರುವ ಉದ್ದೇಶದಿಂದ ಅವನು ಮಾಡಿದ ಈ ಘಟನೆಗಳನ್ನೆಲ್ಲಾ ಅವನಿಗೆ ತಿಳಿಸಿದರು;
6 : ಅರಸನು ಸುಮ್ಮನಿದ್ದನು. ಯೋನಾತನನು ಆಡಂಬರದಿಂದ ಅರಸನನ್ನು ಜೊಪ್ಪದಲ್ಲಿ ಎದುರುಗೊಂಡನು. ಅವರು ಒಬ್ಬರನ್ನೊಬ್ಬರು ವಂದಿಸಿದರು; ಅಂದು ಅಲ್ಲಿಯೇ ತಂಗಿದರು.
7 : ಯೋನಾತನನು ಯೆಲ್ಯೂತರಸ್ ನದಿಯವರೆಗೂ ಅರಸನೊಂದಿಗೆ ಹೋಗಿ ಜೆರುಸಲೇಮಿಗೆ ಹಿಂದಿರುಗಿದನು.
8 : ಆದರೆ ಅರಸ ಪ್ತೊಲೆಮೇಯ ಸಮುದ್ರತೀರದಲ್ಲಿರುವ ಸೆಲ್ಯೂಕ್ಯದವರೆಗೆ ಕರಾವಳಿಯ ಪಟ್ಟಣಗಳನ್ನೆಲ್ಲಾ ಕೈವಶಮಾಡಿಕೊಂಡನು. ಅಲೆಕ್ಸಾಂಡರನನ್ನು ಕುರಿತು ಕುತಂತ್ರಗಳನ್ನು ಯೋಚಿಸ ತೊಡಗಿದನು.
9 : ಅರಸ ದೆಮೆತ್ರಿಯನ ಬಳಿಗೆ ರಾಯಭಾರಿಗಳನ್ನು ಕಳುಹಿಸಿ, “ಬಾ, ನಾವು ಪರಸ್ಪರ ಸಂಧಿಮಾಡಿಕೊಳ್ಳೋಣ; ಅಲೆಕ್ಸಾಂಡರನಿಗೆ ಕೊಡಲಾದ ನನ್ನ ಮಗಳನ್ನು ನಿನಗೆ ಕೊಡುತ್ತೇನೆ; ನೀನು ನಿನ್ನ ತಂದೆಯ ರಾಜ್ಯವನ್ನು ಆಳುವೆ.
10 : ಅವನು ನನ್ನನ್ನು ಕೊಲ್ಲಲು ಹವಣಿಸಿದನು. ಇಂಥವನಿಗೆ ನನ್ನ ಮಗಳನ್ನು ಕೊಟ್ಟುದಕ್ಕೆ ನಾನೀಗ ವ್ಯಸನಪಡುತ್ತಿದ್ದೇನೆ,” ಎಂದು ಹೇಳಿದನು.
11 : ಅವನು ರಾಜ್ಯದ ಮೇಲಿನ ಲೋಭದಿಂದ ಅಲೆಕ್ಸಾಂಡರನ ಮೇಲೆ ದೋಷಾರೋಪಣೆ ಮಾಡಿದನು.
12 : ತನ್ನ ಮಗಳನ್ನು ಅವನಿಂದ ಕಿತ್ತುಕೊಂಡು ದೆಮೆತ್ರಿಯನಿಗೆ ಕೊಟ್ಟನು. ಇದರಿಂದ ಅಲೆಕ್ಸಾಂಡರನ ಮನಸ್ಸು ಕೆಟ್ಟಿತು. ಅವರ ವೈರತ್ವವು ಬಹಿರಂಗವಾಯಿತು.
13 : ಪ್ತೊಲೆಮೇಯನು ಅಂತಿಯೋಕ್ಯದೊಳಗೆ ಹೊಕ್ಕು ಏಷ್ಯದ ಕಿರೀಟವನ್ನೂ ಧರಿಸಿಕೊಂಡನು; ಹೀಗೆ ಅವನು ಎರಡು ಕಿರೀಟಗಳನ್ನು ಧರಿಸಿ ಕೊಂಡವನಾದನು.
14 : ಒಂದು ಈಜಿಪ್ಟಿನದು, ಇನ್ನೊಂದು ಏಷ್ಯದ್ದು. ಆ ಸಮಯಕ್ಕೆ ಸಿಲಿಸಿಯಾದವರು ದಂಗೆಯೆಬ್ಬಿಸಿದ್ದರಿಂದ ಅರಸ ಅಲೆಕ್ಸಾಂಡರನು ಅಲ್ಲೆ ಇದ್ದನು.
15 : ಅಲೆಕ್ಸಾಂಡರನು ಈ ಸುದ್ದಿಯನ್ನು ಕೇಳಿ, ಪ್ತೊಲೆಮೇಯನ ಮೇಲೆ ಯುದ್ಧಕ್ಕೆ ಹೋದನು.
16 : ಆದರೆ ಪ್ತೊಲೆಮೇಯ ತನ್ನ ಮಹಾಸೈನ್ಯವನ್ನು ನಡೆಸಿಕೊಂಡು ಹೋಗಿ, ಮಹಾಬಲದಿಂದ ಅವನನ್ನು ಪರಾಜಯಗೊಳಿಸಿದನು.
17 : ಜಬ್ದಿಯೇಲನೆಂಬ ಅರಬ್ಬಿಯನು ಅಲೆಕ್ಸಾಂಡರನ ರುಂಡವನ್ನು ಕತ್ತರಿಸಿ ಅದನ್ನು ಪ್ತೊಲೆಮೇಯನ ಬಳಿಗೆ ಕಳುಹಿಸಿದನು.
18 : ಇದಾದ ಮೂರು ದಿನಗಳ ನಂತರ ಪ್ತೊಲೆಮೇಯನು ತೀರಿಕೊಂಡನು. ಅವನ ಕೋಟೆಗಳಲ್ಲಿದ್ದವರು ಅಲ್ಲಿಯ ನಿವಾಸಿಗಳಿಂದ ಸಂಹರಿಸಲ್ಪಟ್ಟರು.
19 : 167ನೇ ವರ್ಷ ದೆಮೆತ್ರಿಯನು ರಾಜನಾದನು.
20 : ಆ ದಿನಗಳಲ್ಲಿ ಯೋನಾತನನು ಜೆರುಸಲೇಮಿನಲ್ಲಿದ್ದ ಕೋಟೆಯನ್ನು ಕೈವಶಮಾಡಿಕೊಳ್ಳಬೇಕೆಂದು ಜುದೇಯದವರನ್ನು ಕೂಡಿಸಿದನು; ಅದರ ಎದುರಿಗೆ ಅನೇಕ ಯುದ್ಧಯಂತ್ರಗಳನ್ನು ನಿಲ್ಲಿಸಿದನು.
21 : ಇತ್ತ ಸ್ವಂತ ಜನಾಂಗವನ್ನೇ ಹಗೆಮಾಡುತ್ತಿದ್ದ ಕೆಲವು ಮಂದಿ ಅಧರ್ಮಿಗಳು ಅರಸನ ಬಳಿಗೆ ಹೋಗಿ, “ಯೋನಾತನನು ಕೋಟೆಗೆ ಮುತ್ತಿಗೆ ಹಾಕುತ್ತಿದ್ದಾನೆ,” ಎಂದು ವರದಿಮಾಡಿದರು.
22 : ಇದನ್ನು ಕೇಳಿ ಅವನು ಕೋಪಗೊಂಡು, ಪ್ತೊಲೆಮಾಯಕ್ಕೆ ಹೊರಟುಬಂದನು. ಕೋಟೆಯನ್ನು ಮುತ್ತಬಾರದೆಂದೂ ಆದಷ್ಟು ಬೇಗ ಪ್ತೊಲೆಮಾಯಕ್ಕೆ ಬಂದು ತನ್ನನ್ನು ಕಂಡು ಮಾತಾಡಬೇಕೆಂದೂ ಯೋನಾತನನಿಗೆ ಕಾಗದ ಬರೆದನು.
23 : ಯೋನಾತನನು ಅದನ್ನು ಕೇಳಿ, ಮುತ್ತಿಗೆಯನ್ನು ಹಾಗೆಯೇ ಮುಂದುವರಿಸಬೇಕೆಂದು ಅಪ್ಪಣೆಯನ್ನಿತ್ತನು. ಇಸ್ರಯೇಲರ ಹಿರಿಯರಲ್ಲಿಯೂ ಯಾಜಕರಲ್ಲಿಯೂ ಕೆಲವರನ್ನು ಆಯ್ದುಕೊಂಡು, ತನ್ನನ್ನೇ, ಗಂಡಾಂತರಕ್ಕೆ ಗುರಿಮಾಡಿಕೊಂಡು,
24 : ಬೆಳ್ಳಿ, ಬಂಗಾರ, ಉಡುಗೊರೆ ಮೊದಲಾದ ಅನೇಕ ಕಾಣಿಕೆಗಳನ್ನು ತೆಗೆದುಕೊಂಡು ಅರಸನನ್ನು ಕಾಣಲು ಪ್ತೊಲೆಮಾಯಕ್ಕೆ ಹೋದನು. ಅಲ್ಲಿ ಅವನ ಮೆಚ್ಚುಗೆಗೆ ಪಾತ್ರನಾದನು.
25 : ಅವನ ಜನಾಂಗದ ಧರ್ಮಗೆಟ್ಟ ಕೆಲವು ಜನರು ಅವನ ಮೇಲೆ ದೂರುತಂದರು.
26 : ಅರಸನು, ತನ್ನ ಹಿಂದಿನವರು ಅವನಿಗೆ ಹಿಂದೆ ಮಾಡಿದಂತೆ ಮಾಡಿ, ತನ್ನ ಸ್ನೇಹಿತರೆದುರಿನಲ್ಲೆ ಅವನನ್ನು ಘನತೆಗೇರಿಸಿದನು.
27 : ಅವನಿಗೆ ಪ್ರಧಾನಯಾಜಕತ್ವವನ್ನೂ ಈ ಮೊದಲು ಇದ್ದ ಎಲ್ಲ ಪದವಿಗಳನ್ನೂ ದೃಢೀಕರಿಸಿದನು. ತನ್ನ ಮುಖ್ಯ ಸ್ನೇಹಿತರಲ್ಲಿ ಅವನೂ ಗಣ್ಯನಾಗುವಂತೆ ಮಾಡಿದನು.
28 : ಯೋನಾತನನು, ಜುದೇಯವನ್ನೂ, ಸಮಾರಿಯದ ಮೂರು ಪ್ರಾಂತ್ಯಗಳನ್ನೂ ಕಂದಾಯ ಮುಕ್ತಮಾಡಬೇಕೆಂದು ಕೇಳಿಕೊಂಡಿದ್ದನಲ್ಲದೆ, ತಾನು ಒಟ್ಟಿಗೆ ಹತ್ತು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಡುವುದಾಗಿ ಮಾತುಕೊಟ್ಟನು.
29 : ಅರಸನು ಅದಕ್ಕೆ ಸಮ್ಮತಿಸಿ, ಈ ಎಲ್ಲಾ ಸಂಗತಿಗಳನ್ನು ಕುರಿತು ಯೋನಾತನನಿಗೆ ಈ ರೀತಿ ಪತ್ರ ಬರೆದನು:
30 : “ಸಹೋದರನಾದ ಯೋನಾತನನಿಗೂ ಯೆಹೂದ್ಯ ಜನಾಂಗಕ್ಕೂ ಅರಸನಾದ ದೆಮೆತ್ರಿಯನು ಮಾಡುವ ವಂದನೆಗಳು!
31 : ನಿಮ್ಮ ವಿಷಯದಲ್ಲಿ ನಮ್ಮ ಬಂಧುವಾದ ಲಾಸ್ತೆನೀಸನಿಗೆ ನಾವು ಬರೆದ ಕಾಗದವನ್ನು ನೀವೂ ನೋಡಬೇಕೆಂದು ಅದರ ಪ್ರತಿಯನ್ನು ಕಳುಹಿಸಿದ್ದೇವೆ.
32 : ತಂದೆಯಂತಿರುವ ಲಾಸ್ತೆನೀಸನಿಗೆ ಅರಸ ದೆಮೆತ್ರಿಯನು ಮಾಡುವ ವಂದನೆಗಳು!
33 : ನಮ್ಮ ಮಿತ್ರರೂ ನಮಗೆ ನ್ಯಾಯ ಆದುದನ್ನೇ ಮಾಡುವವರೂ ಆದ ಯೆಹೂದ್ಯ ಜನಾಂಗಕ್ಕೆ ಅವರು ನಮ್ಮ ಮೇಲಿರಿಸಿದ ಅಭಿಮಾನದ ನಿಮಿತ್ತ ನಾವು ಅವರಿಗೆ ಹಿತಗೈಯಬೇಕೆಂದು ನಿರ್ಣಯಿಸಿದ್ದೇವೆ.
34 : ಆದುದರಿಂದ ನಾವು ಅವರಿಗೆ ಜುದೇಯ ಪ್ರಾಂತ್ಯವನ್ನು ಮತ್ತು ಸಮಾರಿಯದಿಂದ ತೆಗೆದು ಜುದೇಯಕ್ಕೆ ಸೇರಿಸಿದ ಅಫೈರೆಮ, ಲುದ್ದ, ರಾಮಾಥಯಿಮ್ ಎಂಬೀ ಮೂರು ಜಿಲ್ಲೆಗಳನ್ನು ಬಿಟ್ಟುಕೊಡುವಂತೆ ವ್ಯವಸ್ಥೆ ಮಾಡಿದ್ದೇವೆ. ಅವರಿಗೆ ಸೇರಿದ್ದೆಲ್ಲವನ್ನೂ ಅಂದರೆ, ಈ ಮೊದಲು ಅರಸನು ಅವರಿಂದ ವರ್ಷ ವರ್ಷಕ್ಕೆ ತೆಗೆದುಕೊಳ್ಳುತ್ತಿದ್ದ ಭೂಮಿಯ ಫಲಗಳ ಮತ್ತು ಹಣ್ಣು ಮರಗಳ ಫಲಗಳ ಭಾಗವನ್ನು ನಾವು ಇನ್ನು ಮೇಲೆ ತೆಗೆದುಕೊಳ್ಳದೆ ಅವುಗಳನ್ನು ಜೆರುಸಲೇಮಿನಲ್ಲಿ ಬಲಿದಾನ ಮಾಡುವವರೆಲ್ಲರಿಗೆ ಬಿಟ್ಟುಕೊಡುತ್ತೇವೆ.
35 : ನಮಗೆ ಸಂಬಂಧಿಸಿದ ಉಳಿದ ಸಂಗತಿಗಳನ್ನು ಕುರಿತು ಅಂದರೆ, ದಶಮಾಂಶ, ನಮಗೆ ಸಂಬಂಧಿಸಿದ ತೆರಿಗೆ, ಉಪ್ಪಿನ ಕಂದಾಯ, ಅರಸನಿಗೆ ಸಲ್ಲತಕ್ಕ ಕಪ್ಪ, ಇವೆಲ್ಲವನ್ನು ಇಂದಿನಿಂದ ಅವರಿಗೇ ಬಿಟ್ಟುಕೊಟ್ಟಿದ್ದೇವೆ.
36 : ಈ ಮಾತುಗಳಲ್ಲಿ ಒಂದನ್ನಾದರೂ ಇಂದಿನಿಂದ ಎಂದೆಂದಿಗೂ ತೆಗೆದು ಹಾಕಲಾಗುವುದಿಲ್ಲ.
37 : ಆದುದರಿಂದ ಈ ವಿಷಯಗಳ ಪ್ರತಿಯೊಂದನ್ನು ಮಾಡುವುದಕ್ಕೆ ಎಚ್ಚರಿಕೆವಹಿಸಿರಿ, ಮತ್ತು ಆ ಪ್ರತಿಯನ್ನು ಯೋನಾತನನಿಗೂ ತೋರಿಸಿರಿ. ಅದನ್ನು ಪರಿಶುದ್ಧ ಪರ್ವತದ ಮೇಲೆ ಯೋಗ್ಯವಾದ ಮತ್ತು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಹಚ್ಚುವಂತಾಗಲಿ!”
38 : ದೇಶದಲ್ಲೆಲ್ಲಾ ಸಮಾಧಾನವಿರುವುದನ್ನೂ ವಿರೋಧವಿಲ್ಲದಿರುವುದನ್ನೂ ದೆಮೆತ್ರಿಯನು ಕಂಡು, ಅನ್ಯಜನಗಳ ದ್ವೀಪಗಳಿಂದ ಕೂಡಿಸಿದ್ದ ಪರಕೀಯ ಸೈನ್ಯದ ಹೊರತಾಗಿ, ಉಳಿದೆಲ್ಲ ಸೈನಿಕರನ್ನೂ ಅವರವರ ಮನೆಗೆ ಕಳುಹಿಸಿಬಿಟ್ಟನು. ಅವನ ಪೂರ್ವಿಕರ ಸೈನ್ಯದವರೆಲ್ಲರು ಅವನನ್ನು ಹಗೆಮಾಡತೊಡಗಿದರು.
39 : ಇದಕ್ಕೆ ಮುಂಚೆ ಅಲೆಕ್ಸಾಂಡರನ ಕಡೆಗಿದ್ದ ತ್ರಿಫೋನನೂ ಇವರಲ್ಲಿ ಒಬ್ಬನಾಗಿದ್ದನು. ಇವನ ಸೈನಿಕರೆಲ್ಲರೂ ದೆಮೆತ್ರಿಯನ ಮೇಲೆ ಗೊಣಗುಟ್ಟುತ್ತಿದ್ದುದನ್ನು ಕಂಡು ಅಲೆಕ್ಸಾಂಡರನ ಚಿಕ್ಕ ಬಾಲಕನ ಸಂರಕ್ಷಕನಾಗಿದ್ದ ಅರಬ್ಬಿಯನಾದ ಇಮಲ್ಕುವಿನ ಬಳಿಗೆ ಹೋಗಿ,
40 : ಅವನು ತನ್ನ ತಂದೆಯ ಸ್ಥಳದಲ್ಲಿ ರಾಜ್ಯವಾಳುವಂತೆ ಅವನನ್ನು ತನಗೆ ಒಪ್ಪಿಸಬೇಕೆಂದು ಬಲವಂತ ಮಾಡಿದನು. ಇದಲ್ಲದೆ, ದೆಮೆತ್ರಿಯನು ಮಾಡಿದುದೆಲ್ಲವನ್ನೂ ಅವನನ್ನು ಹಗೆಮಾಡುತ್ತಿದ್ದ ಅವನ ಸೈನಿಕರಲ್ಲಿದ್ದ ದ್ವೇಷವನ್ನೂ ಅವನಿಗೆ ತಿಳಿಸಿದನು, ಮತ್ತು ಅಲ್ಲಿಯೇ ಬಹುಕಾಲ ಉಳಿದುಕೊಂಡನು.
41 : ಯೋನಾತನನು ದೆಮೆತ್ರಿಯನಿಗೆ, “ಜೆರುಸಲೇಮಿನ ಕೋಟೆಯಲ್ಲಿದ್ದವರನ್ನೂ ದುರ್ಗಗಳಲ್ಲಿದ್ದವರನ್ನೂ ಹೊರಗೆ ಹಾಕಬೇಕು,” ಎಂದು ಹೇಳಿಕಳುಹಿಸಿದನು. ಏಕೆಂದರೆ ಅವರು ನಿತ್ಯವೂ ಇಸ್ರಯೇಲರ ಸಂಗಡ ಕಾದಾಡುತ್ತಿದ್ದರು.
42 : ದೆಮೆತ್ರಿಯನು ಯೋನಾತನನಿಗೆ, “ನಾನು ಅದನ್ನು ನಿನಗಾಗಿ ಮಾಡುತ್ತೇನೆ; ಮಾತ್ರವಲ್ಲ ಸದವಕಾಶ ದೊರೆತಾಗ ನಿನಗೂ ನಿನ್ನ ಜನಾಂಗಕ್ಕೂ ಬಹಳ ಸನ್ಮಾನ ಮಾಡುವೆನು.
43 : ಆದರೆ ಸದ್ಯ ನನ್ನ ಪರವಾಗಿ ಯುದ್ಧ ಮಾಡುವುದಕ್ಕೆ ನಿನ್ನ ಜನರನ್ನು ಕಳುಹಿಸಿದರೆ ಬಹಳ ಉಪಕಾರ ಮಾಡಿದಂತಾಗುವುದು. ಏಕೆಂದರೆ ನನ್ನ ಸೈನಿಕರೆಲ್ಲರು ಬಂಡುಹೂಡಿದ್ದಾರೆ,” ಎಂದು ಹೇಳಿಕಳುಹಿಸಿದನು
44 : ಯೋನಾತನನು ಮೂರು ಸಾವಿರ ಜನ ವೀರರನ್ನು ಅಂತಿಯೋಕ್ಯಕ್ಕೆ ಕಳುಹಿಸಿದನು. ಅವರು ಅರಸನ ಬಳಿಗೆ ಬರಲು, ಅರಸನು ಸಂತೋಷಪಟ್ಟನು.
45 : ಆದರೆ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಜನ ಪಟ್ಟಣಿಗರು, ಪಟ್ಟಣದ ನಡುವೆ ಕೂಡಿಬಂದು, ಅರಸನನ್ನು ಕೊಂದುಹಾಕಬೇಕೆಂದು ಹವಣಿಸಿದ್ದರು.
46 : ಅರಸನು ಅರಮನೆಯ ಪ್ರಾಕಾರದೊಳಗೆ ಓಡಿಹೋದನು. ಊರಜನರು ಊರೊಳಗಿನ ಎಲ್ಲ ಹಾದಿಗಳನ್ನೂ ಮುಚ್ಚಿ ಕಾಯತೊಡಗಿದರು.
47 : ಅರಸನು ತನಗೆ ನೆರವಾಗಬೇಕೆಂದು ಯೆಹೂದ್ಯರನ್ನು ಕರೆದನು. ಅವರೆಲ್ಲರೂ ಒಮ್ಮೆಲೇ ಅವನ ಬಳಿಗೆ ಕೂಡಿ ಬಂದರು. ತರುವಾಯ ಊರೊಳಗೆಲ್ಲಾ ಚದರಿಕೊಂಡು ಸುಮಾರು ಒಂದು ಲಕ್ಷ ಜನರನ್ನು ಕೊಂದುಹಾಕಿದರು
48 : ಆಮೇಲೆ ಪಟ್ಟಣಕ್ಕೆ ಬೆಂಕಿ ಹಚ್ಚಿ, ಅದನ್ನು ಸುಟ್ಟು, ಸೂರೆಗೈದು ಅರಸನನ್ನು ಸಂರಕ್ಷಿಸಿದರು.
49 : ಯೆಹೂದ್ಯರು ತಮ್ಮಿಷ್ಟದಂತೆ ಪಟ್ಟಣವನ್ನು ಕೈವಶಮಾಡಿಕೊಂಡದ್ದನ್ನು ಊರಿನವರು ಕಂಡು, ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ಅರಸನಿಗೆ ಕೂಗಿ ಮೊರೆಯಿಟ್ಟು, “ನಮಗೆ ನಿಮ್ಮ ಬಲಗೈ ಕೊಡಿ.
50 : ಯೆಹೂದ್ಯರು ನಮ್ಮ ವಿರೋಧವಾಗಿಯೂ ನಮ್ಮ ಪಟ್ಟಣದ ಮೇಲೆಯೂ ಯುದ್ಧಮಾಡುವುದನ್ನು ನಿಲ್ಲಿಸಿಬಿಡಲಿ,” ಎಂದು ಬೇಡಿಕೊಂಡರು.
51 : ಅವರು ತಮ್ಮ ಆಯುಧಗಳನ್ನು ಬಿಸಾಡಿ ಬಿಟ್ಟು ಸಂಧಾನಮಾಡಿಕೊಂಡರು. ಯೆಹೂದ್ಯರು ಅರಸನ ಹಾಗು ರಾಜ್ಯದಲ್ಲಿದ್ದವರೆಲ್ಲರ ಮುಂದೆ ಗೌರವಹೊಂದಿ ಬಹಳ ಸುಲಿಗೆಯನ್ನು ಎತ್ತಿಕೊಂಡು ಜೆರುಸಲೇಮಿಗೆ ಹಿಂದಿರುಗಿದರು.
52 : ಇತ್ತ ಅರಸ ದೆಮೆತ್ರಿಯನು ತನ್ನ ರಾಜ್ಯದ ಸಿಂಹಾಸನವನ್ನೇರಿದನು. ಅಂದಿನಿಂದ ದೇಶದಲ್ಲೆಲ್ಲಾ ಸಮಾಧಾನವಿತ್ತು.
53 : ಆದರೆ ಇವನು ಯೋನಾತನನಿಗೆ ಹೇಳಿದ್ದುದೆಲ್ಲಾ ಸುಳ್ಳೇ ಆಯಿತು. ಇವನು ಯೋನಾತನನಿಗೆ ವಿಮುಖನಾಗಿ ಅವನು ತನಗೆ ಮಾಡಿದ್ದ ಎಲ್ಲಾ ಉಪಕಾರಗಳಿಗೆ ಯಾವ ಪ್ರತ್ಯುಪಕಾರವನ್ನೂ ಮಾಡದೆ ಅವನನ್ನು ಬಹಳವಾಗಿ ಬಾಧಿಸಿದನು.
54 : ಇದಾದ ಮೇಲೆ ತ್ರಿಫೋನನು ಬಾಲಕನಾದ ಅಂತಿಯೋಕನನ್ನು ತನ್ನ ಸಂಗಡ ಕರೆದುಕೊಂಡು ಹಿಂದಿರುಗಿದನು; ಕಿರೀಟಧಾರಣ ಮಾಡಿಕೊಂಡು ಅಳತೊಡಗಿದನು.
55 : ದೆಮೆತ್ರಿಯನು ವಜಾಮಾಡಿದ ಸೈನಿಕರೆಲ್ಲರು ಇವನನ್ನು ಕೂಡಿಕೊಂಡು ಅವನೊಂದಿಗೆ ಯುದ್ಧ ಹೂಡಿದರು. ಅವನು ಸೋತು ಓಡಿಹೋದನು.
55 : ಇದಾದ ಮೇಲೆ ತ್ರಿಫೋನನು ಬಾಲಕನಾದ ಅಂತಿಯೋಕನನ್ನು ತನ್ನ ಸಂಗಡ ಕರೆದುಕೊಂಡು ಹಿಂದಿರುಗಿದನು; ಕಿರೀಟಧಾರಣ ಮಾಡಿಕೊಂಡು ಅಳತೊಡಗಿದನು.
56 : ತ್ರಿಫೋನನು ಆನೆಗಳನ್ನು ಹಿಡಿದುಕೊಂಡು ಅಂತಿಯೋಕ್ಯವನ್ನು ಕೈವಶಮಾಡಿಕೊಂಡನು.
57 : ಬಾಲಕ ಅಂತಿಯೋಕನು ಯೋನಾತನನಿಗೆ ಕಾಗದ ಬರೆದು, “ಪ್ರಧಾನ ಯಾಜಕತ್ವವನ್ನು ನಿನಗೆ ಸ್ಥಿರಪಡಿಸಿದ್ದೇನಲ್ಲದೆ
58 : ಇದಲ್ಲದೆ, ಬಂಗಾರದ ಭೋಜನ ಪಾತ್ರೆಗಳನ್ನು ಕಳುಹಿಸಿ, ಬಂಗಾರದ ಪಾತ್ರೆಯಲ್ಲಿ ಕುಡಿಯುವುದಕ್ಕೂ ರಾಜವಸ್ತ್ರಗಳನ್ನು ಧರಿಸಿಕೊಳ್ಳುವುದಕ್ಕೂ ಬಂಗಾರದ ಒಡ್ಯಾಣವನ್ನು ಧರಿಸಿಕೊಳ್ಳುವುದಕ್ಕೂ ಅವನಿಗೆ ಅಪ್ಪಣೆಕೊಟ್ಟನು.
59 : ಯೋನಾತನನ ಅಣ್ಣ ಸಿಮೋನನನ್ನು ಟೈರ್ ಘಟ್ಟದಿಂದ ಈಜಿಪ್ಟಿನ ಗಡಿಯವರೆಗಿನ ನಾಡಿಗೆಲ್ಲಾ ಸರದಾರನನ್ನಾಗಿ ನೇಮಿಸಿದನು.
60 : ಯೋನಾತನನು ಹೊರಟು ನದಿಯನ್ನು ದಾಟಿ, ಅದರಾಚೆಯ ಪಟ್ಟಣಗಳಲ್ಲೆಲ್ಲಾ ಸಂಚಾರಮಾಡಿದನು. ಆಗ ಸಿರಿಯಾ ಪ್ರಾಂತ್ಯದ ದಳಗಳೆಲ್ಲಾ ಸಹಾಯಾರ್ಥವಾಗಿ ಅವನ ಬಳಿಗೆ ಕೂಡಿಬಂದವು. ಅವನು ಅಷ್ಕೆಲೋನಿಗೆ ಬಂದಾಗ ಅಲ್ಲಿಯ ನಿವಾಸಿಗಳು ಆದರದಿಂದ ಅವನನ್ನು ಸ್ವಾಗತಿಸಿದರು.
61 : ಅಲ್ಲಿಂದ ಅವನು ಗಾಜಕ್ಕೆ ಬಂದನು. ಗಾಜದವರು ಅವನನ್ನು ಹೊರಗೆ ನಿಲ್ಲಿಸಲು, ಅವನು ಅದಕ್ಕೆ ಲಗ್ಗೆ ಹಚ್ಚಿದನು. ಅದರ ನೆರೆಹೊರೆಯ ಗ್ರಾಮಗಳನ್ನು ಸುಟ್ಟುಬಿಟ್ಟನು
62 : ಆಗ ಗಾಜದವರು ಯೋನಾತನನನ್ನು ಬೇಡಿಕೊಂಡರು. ಅವನು ಅವರಿಗೆ ಸ್ನೇಹಹಸ್ತವನ್ನು ನೀಡಿ, ಅವರ ಮುಖ್ಯಸ್ಥರ ಮಕ್ಕಳನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು, ಜೆರುಸಲೇಮಿಗೆ ಕಳುಹಿಸಿದನು. ಅಲ್ಲಿಂದ ಅವನು ಆ ಸೀಮೆಯನ್ನು ಹಾದು ದಮಸ್ಕಸ್‍ವರೆಗೆ ಹೋದನು.
63 : ತನ್ನನ್ನು ಅಧಿಕಾರದಿಂದ ತಳ್ಳಬೇಕೆಂಬ ಉದ್ದೇಶದಿಂದ ದೆಮೆತ್ರಿಯನ ಸರದಾರರು ದೊಡ್ಡ ದಂಡಿನೊಡನೆ ಗಲಿಲೇಯದ ಕಾದೇಶಿಗೆ ಬಂದಿದ್ದಾರೆಂಬ ವರ್ತಮಾನವನ್ನು ಯೋನಾತನನು ಕೇಳಿದನು.
64 : ತನ್ನ ಅಣ್ಣ ಸಿಮೋನನನ್ನು ಸ್ವದೇಶದಲ್ಲಿಯೇ ಬಿಟ್ಟು, ಅವರನ್ನು ಎದುರಿಸಲು ತಾನತ್ತ ತೆರಳಿದನು.
65 : ಸಿಮೋನನು ಬೇತ್ಸೂರೆಯ ಎದುರಾಗಿ ಪಾಳೆಯಮಾಡಿಕೊಂಡು, ಬಹುದಿನಗಳವರೆಗೆ ಅಲ್ಲಿ ಯುದ್ಧಮಾಡುತ್ತಾ ಅದನ್ನು ಮುತ್ತಿದನು.
66 : ಅವರು ಸಂಧಾನ ಬೇಡಿಕೊಂಡದ್ದರಿಂದ ಅವನು ಒಪ್ಪಿ, ಅವರನ್ನು ಅಲ್ಲಿಂದ ಹೊರಗೆ ಹಾಕಿ, ಆ ಪಟ್ಟಣವನ್ನು ಕೈವಶಮಾಡಿಕೊಂಡು, ಅದರಲ್ಲಿ ರಕ್ಷಣಾ ಸೈನ್ಯವನ್ನಿಟ್ಟನು.
67 : ಯೋನಾತನನೂ ಅವನ ದಂಡೂ ಗೆನ್ನಜರೇತ್ ಸರೋವರದ ಬಳಿ ಬಿಡಾರ ಮಾಡಿಕೊಂಡು ನಸುಕಿನಲ್ಲಿಯೇ ಹಜೋರ್ ಬಯಲಿಗೆ ಬಂದರು.
68 : ಆಗ ಅನ್ಯದೇಶಿಯ ಸೈನ್ಯವು ಅವನನ್ನು ಸಂಧಿಸಿತು. ಇವರು ಅವನಿಗಾಗಿ ಹೊಂಚುಹಾಕಿಕೊಂಡು ಕುಳಿತವರನ್ನು ಗುಡ್ಡದಲ್ಲಿಯೇ ಬಿಟ್ಟು ತಾವೇ ನೇರವಾಗಿ ಅವನಿಗೆ ಎದುರಾದರು.
69 : ಹೊಂಚು ಹಾಕಿದವರು ತಮ್ಮ ಸ್ಥಳದಿಂದ ಹೊರಬಿದ್ದು ಯೋನಾತನನ ಮೇಲೆ ಬೀಳಲು, ಅವನ ಕಡೆಯವರೆಲ್ಲರೂ ಓಡಿಹೋದರು.
70 : ಸೈನ್ಯದ ಸರದಾರರಾಗಿದ್ದ ಅಬ್ಷಾಲೋಮನ ಮಗ ಮತ್ತಾತೀಯ, ಖಲ್ದಿಯ ಮಗ ಯೂದ ಇವರ ಹೊರತಾಗಿ ಯಾರೂ ಉಳಿಯಲಿಲ್ಲ.
71 : ಯೋನಾತನನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣೆರಚಿಕೊಂಡು ಪ್ರಾರ್ಥಿಸಿದನು.
72 : ತರುವಾಯ ಮರಳಿ ಯುದ್ಧಮಾಡಿ ಅವರನ್ನು ಸದೆಬಡಿದನು; ಅವರು ಓಡಿ ಹೋದರು.
73 : ಅವನಿಂದ ಓಡಿಹೋಗುತ್ತಿದ್ದ ಅವನ ಜನರು ಹಿಂದಿರುಗಿ ಬಂದು ಅವನೊಂದಿಗೆ ಶತ್ರುಗಳ ಬಿಡಾರವಿದ್ದ ಕಾದೇಶಿನವರೆಗೂ ಅವರನ್ನು ಬೆನ್ನಟ್ಟಿ ಅಲ್ಲಿ ಬಿಡಾರ ಮಾಡಿದರು.
74 : ಅಂದು ಆ ಅನ್ಯದೇಶಿಯ ಸೈನ್ಯದಲ್ಲಿ ಸುಮಾರು ಮೂರು ಸಾವಿರ ಜನರು ಮಡಿದರು. ಯೋನಾತನನು ಜೆರುಸಲೇಮಿಗೆ ಹಿಂದಿರುಗಿದನು.

· © 2017 kannadacatholicbible.org Privacy Policy