Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಮಕ್ಕಬಿ


1 : ಅಲೆಕ್ಸಾಂಡರ್ ಮಹಾಶಯ ಮ್ಯಾಸಿಡೋನಿಯದವನೂ ಫಿಲಿಪ್ಪನ ಮಗನೂ ಆದ ಅಲೆಕ್ಸಾಂಡರನು ಸೈಪ್ರಸ್ಸಿನಿಂದ ಬಂದು ಪರ್ಷಿಯನ್ನರ ಮತ್ತು ಮೇದ್ಯರ ರಾಜನಾಗಿದ್ದ ಡೇರಿಯಸ್ಸನನ್ನು ಸೋಲಿಸಿದನು. ಅವನ ಸಿಂಹಾಸನವನ್ನು ಆಕ್ರಮಿಸಿಕೊಂಡನು.
2 : ಗ್ರೀಸ್ ದೇಶದ ರಾಜನಾಗಿದ್ದ ಇವನು ಅನೇಕ ಯುದ್ಧಗಳನ್ನು ಮಾಡಿ, ಕೋಟೆಕೊತ್ತಲಗಳನ್ನು ಸ್ವಾಧೀನಮಾಡಿಕೊಂಡು, ಸ್ಥಳೀಯ ರಾಜರನ್ನು ಸಂಹರಿಸಿದ್ದನು.
3 : ಭೂಮಿಯ ತುತ್ತತುದಿಯವರೆಗೂ ದಂಡಯಾತ್ರೆ ಕೈಗೊಂಡು ರಾಷ್ಟ್ರಗಳನ್ನು ಒಂದಾದ ಮೇಲೆ ಒಂದಾಗಿ ಸುಲಿಗೆ ಮಾಡಿದನು. ಇಡೀ ಜಗತ್ತೆ ಇವನ ಮುಂದೆ ಮಾತೆತ್ತದಂತಾಯಿತು. ಹೀಗೆ ಘನತೆಯಿಂದ ಘನತೆಗೆ ಏರಿದ ಇವನು ಬಹಳವಾಗಿ ಉಬ್ಬಿಹೋದನು.
4 : ಬಲಾಢ್ಯ ಸೈನ್ಯ ಇವನಿಗಿತ್ತು. ನಾನಾ ರಾಷ್ಟ್ರ, ಜನಾಂಗ ಹಾಗು ಅರಸರು ಇವನಿಗೆ ಅಧೀನರಾಗಿ ಕಪ್ಪ ಕಾಣಿಕೆ ಸಲ್ಲಿಸುವವರಾದರು.
5 : ಹೀಗಿರಲು ಇವನು ಅಸ್ವಸ್ಥನಾದನು. ತನ್ನ ಮರಣಕಾಲ ಸಮೀಪಿಸಿತೆಂದು ತಿಳಿದುಕೊಂಡನು.
6 : ಆದ್ದರಿಂದ ಯೌವನಾರಭ್ಯ ತನ್ನ ಜೊತೆಯಲ್ಲೇ ಬೆಳೆದ ಗೌರವಾನ್ವಿತ ಅಧಿಕಾರಿಗಳನ್ನು ಕರೆದು, ತಾನು ಜೀವಂತನಾಗಿರುವಾಗಲೇ ತನ್ನ ಸಾಮ್ರಾಜ್ಯವನ್ನೆಲ್ಲ ಅವರಿಗೆ ಹಂಚಿಕೊಟ್ಟನು.
7 : ಅಲೆಕ್ಸಾಂಡರನು ಹನ್ನೆರಡು ವರ್ಷ ರಾಜ್ಯವಾಳಿ ಕಾಲವಾದನು.
8 : ಅವನ ಅಧಿಕಾರಿಗಳು ತಮ್ಮ ತಮ್ಮ ಪ್ರಾಂತ್ಯಗಳಲ್ಲೇ ರಾಜ್ಯಭಾರ ಮಾಡತೊಡಗಿದರು.
9 : ಅವನ ಮರಣಾನಂತರ ಅವರೆಲ್ಲರು ಕಿರೀಟಧಾರಣೆ ಮಾಡಿಕೊಂಡರು. ಅವರ ತರುವಾಯ ಅವರ ಮಕ್ಕಳೂ ಅನೇಕ ವರ್ಷಗಳವರೆಗೆ ಹಾಗೆಯೇ ಮಾಡಿದರು. ನಾಡಿನಲ್ಲಿ ಅನೇಕ ದುಷ್ಟತನಕ್ಕೂ ಕಾರಣರಾದರು.
10 : ಅಂತಿಯೋಕ ಎಪಿಫನೆಸ್ ಮತ್ತು ಧರ್ಮಭ್ರಷ್ಟರಾದ ಯೆಹೂದ್ಯರು (2 ಮಕ್ಕಬಿ 4.7-17) ಈ ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬವನು. ಇವನು ‘ಅಂತಿಯೋಕ’ ಎಂಬ ರಾಜನ ಮಗ; ರೋಂ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ 137ರಲ್ಲಿ ಇವನು ಪಟ್ಟಕ್ಕೆ ಬಂದ.
11 : ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, “ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ; ನಾವು ಅವರಿಂದ ಬೇರೆಯಾದಾಗಿನಿಂದ ಬಹಳ ಸಂಕಟಗಳಿಗೆ ಈಡಾಗಿದ್ದೇವೆ,” ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು.
12 : ಹಲವರಿಗೆ ಈ ಸಲಹೆ ಹಿತರಕವಾಗಿಯೇ ಕಂಡಿತು.
13 : ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು.
14 : ಪರಿಣಾಮವಾಗಿ, ಅವರು ಹೋಗಿ ಅನ್ಯಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಾಯಾಮ ಶಾಲೆಯನ್ನು ಕಟ್ಟಿಸಿದರು.
15 : ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ಯಜನರೊಡನೆ ಮಿಶ್ರವಾದರು, ದುಷ್ಟತನಕ್ಕೆ ದಾಸರಾದರು.
16 : ಈಜಿಪ್ಟಿನ ಮೇಲೆ ಅಂತಿಯೋಕನ ಧಾಳಿ ರಾಜ್ಯದಲ್ಲೆಲ್ಲಾ ತನ್ನ ಪರಿಪಾಲನೆ ಸುಸ್ಥಿರ ಆಗಿರುವುದನ್ನು ಕಂಡ ಅಂತಿಯೋಕನು ಈಜಿಪ್ಟನ್ನೂ ಆಳಬೇಕೆಂದು ಅಪೇಕ್ಷಿಸಿದನು.
17 : ರಥ, ಆನೆ, ರಾಹುತ, ನಾವಿಕರನ್ನೊಳಗೊಂಡ ಮಹಾಸೈನ್ಯದೊಡನೆ ಈಜಿಪ್ಟಿನ ಮೇಲೆ ದಂಡೆತ್ತಿ ಹೋದನು.
18 : ಈಜಿಪ್ಟಿನ ಅರಸ ಪ್ತೊಲೆಮೇಯನೊಡನೆ ಯುದ್ಧ ನಡೆಯಿತು. ಪ್ತೊಲೆಮೇಯನು ಸೋತು ಪಲಾಯನ ಗೈದನು. ಸೈನಿಕರನೇಕರು ಗಾಯಗೊಂಡು ಸತ್ತರು
19 : ಅಂತಿಯೋಕನ ಸೈನಿಕರು ಈಜಿಪ್ಟಿನ ಅನೇಕ ಕೋಟೆಕೊತ್ತಲಗಳನ್ನು ಸ್ವಾಧೀನಪಡಿಸಿಕೊಂಡರು; ಈಜಿಪ್ಟನ್ನು ಸೂರೆಮಾಡಿದರು.
20 : ಮಹಾದೇವಾಲಯದ ಸುಲಿಗೆ ಹೀಗೆ ಈಜಿಪ್ಟನ್ನು 143ನೇ ವರ್ಷದಲ್ಲಿ ಜಯಿಸಿದ ಮೇಲೆ ಅಂತಿಯೋಕನು ಮಹಾಸೈನ್ಯದೊಡನೆ ಇಸ್ರಯೇಲಿನ ವಿರುದ್ಧ ದಂಡೆತ್ತಿ ಬಂದು ಜೆರುಸಲೇಮ್ ಪಟ್ಟಣಕ್ಕೆ ಮುತ್ತಿಗೆಹಾಕಿದನು.
21 : ಸೊಕ್ಕಿನಿಂದ ಪವಿತ್ರ ಮಹಾದೇವಾಲಯವನ್ನೇ ಹೊಕ್ಕು, ಅದರೊಳಗಿದ್ದ ಚಿನ್ನದ ಪೀಠವನ್ನು, ದೀಪವೃಕ್ಷವನ್ನು, ಅದಕ್ಕೆ ಸಂಬಂಧಿಸಿದ ಎಲ್ಲ ಉಪಕರಣಗಳನ್ನು, ನೈವೇದ್ಯದ ರೊಟ್ಟಿಗಳನ್ನು ಇಡುವ ಮೇಜನ್ನು, ಪಾನದ್ರವ್ಯಗಳನ್ನು ಅರ್ಪಿಸುವುದಕ್ಕೆ ಇಟ್ಟಿದ್ದ ಬಟ್ಟಲುಗಳನ್ನು, ಹರಿವಾಣಗಳನ್ನು, ಚಿನ್ನದ ಧೂಪಾರತಿಗಳನ್ನು, ಅಲ್ಲಿದ್ದ ತೆರೆಯನ್ನು, ಕಿರೀಟಗಳನ್ನೂ ತೆಗೆದುಕೊಂಡನು.
22 : ಇವೂ ಅಲ್ಲದೆ ದೇವಾಲಯದ ಮುಂಭಾಗವನ್ನು ಶೃಂಗರಿಸಿದ್ದ ಚಿನ್ನದ ಎಲ್ಲ ಒಡವೆ ವಸ್ತುಗಳನ್ನು ಕೆತ್ತಿಸಿ ತೆಗೆದುಕೊಂಡನು.
23 : ಇವುಗಳಲ್ಲದೆ, ಅಲ್ಲಿದ್ದ ಬೆಳ್ಳಿ ಬಂಗಾರದ ಅಮೂಲ್ಯ ಪಾತ್ರೆಗಳನ್ನು ಹುದುಗಿಸಿಟ್ಟಿದ್ದ ನಿಧಿಯನ್ನೂ ತೆಗೆದುಕೊಂಡನು.
24 : ಇವುಗಳನ್ನೆಲ್ಲ ತೆಗೆದುಕೊಂಡು ಸ್ವದೇಶಕ್ಕೆ ಹಿಂದಿರುಗುವುದಕ್ಕೆ ಮುಂಚೆ ಅಲ್ಲಿ ಅನೇಕರನ್ನು ಕೊಲೆಮಾಡಿದನಲ್ಲದೆ ದುರಹಂಕಾರದ ಮಾತುಗಳನ್ನೂ ಆಡಿದನು.
25 : ಆಗ ನಾಡಿನಾದ್ಯಂತ ಇಸ್ರಯೇಲಿಗಾಗಿ ಶೋಕಾಚರಣೆಯಿತ್ತು:
26 : ದುಃಖದಿಂದ ನರಳಿದರು ಅರಸರು, ಹಿರಿಯರು ಸೊರಗಿಹೋದರು ಯುವಕಯುವತಿಯರು ಕಳೆಗುಂದಿಹೋದರು ಹೆಂಗಳೆಯರೆಲ್ಲರು.
27 : ಅತ್ತು ಪ್ರಲಾಪಿಸಿದನು ಪ್ರತಿಯೊಬ್ಬ ಮದುಮಗನು ಶೋಕಭಾರದಿಂದ ಕುಸಿದಳು ಮನೆಯ ಮದುಮಗಳು.
28 : ನಾಡಿಗೆ ನಾಡೇ ಮರುಗಿತು ತನ್ನ ನಿವಾಸಿಗಳಿಗಾಗಿ ಇಸ್ರಯೇಲಿನ ಇಡೀ ಕುಟೀರ ನಾಚಿತು ಮುಖಮಾಚಿ.
29 : ಕಪ್ಪವಸೂಲಿಯ ಸೋಗು - ನಗರದ ಲೂಟಿ ಇದಾಗಿ ಎರಡು ವರ್ಷಗಳಾದನಂತರ ಅರಸ ಅಂತಿಯೋಕನು ಕಪ್ಪವಸೂಲಿಗಾಗಿ ಮುಖ್ಯಾಧಿಕಾರಿಯನ್ನು ಜುದೇಯದ ಪಟ್ಟಣಗಳಿಗೆ ಕಳುಹಿಸಿದನು. ಇವನು ದೊಡ್ಡ ಜನಸಮೂಹದೊಂದಿಗೆ ಜೆರುಸಲೇಮಿಗೆ ಬಂದನು.
30 : ಅವನ ಹೃದಯ ಕಪಟದಿಂದ ಕೂಡಿತ್ತಾದರೂ ಅಲ್ಲಿಯ ಜನರೊಂದಿಗೆ ಮೊದಮೊದಲು ಶಾಂತಿ ಸಮಾಧಾನದ ಮಾತುಗಳನ್ನು ಆಡಿದನು. ಜನರು ಅವನನ್ನು ನಂಬಿದರು. ತರುವಾಯ ಅವನು ತಟ್ಟನೆ ಪಟ್ಟಣದ ಮೇಲೆ ಬಿದ್ದು ಲೂಟಿ ಮಾಡಿದನು; ಇಸ್ರಯೇಲರ ಬಹುಜನರನ್ನು ಸಂಹರಿಸಿದನು.
31 : ಪಟ್ಟಣವನ್ನು ಸೂರೆಮಾಡಿ, ಅದಕ್ಕೆ ಬೆಂಕಿಹಚ್ಚಿ, ಮನೆಗಳನ್ನೂ ಕೋಟೆಯ ಗೋಡೆಯನ್ನೂ ಕೆಡವಿಬಿಟ್ಟನು.
32 : ಇದಲ್ಲದೆ, ಅಲ್ಲಿನ ಹೆಂಗಸರನ್ನೂ ಮಕ್ಕಳನ್ನೂ ಸೆರೆಹಿಡಿದು, ಅವರ ದನಕರುಗಳನ್ನು ಅವನೂ ಅವನ ಪರಿವಾರದವರೂ ವಶಪಡಿಸಿಕೊಂಡರು.
33 : ತರುವಾಯ ಅವರು ಬಲವಾದ ಗೋಡೆ ಹಾಗು ಬುರುಜುಗಳನ್ನು ಕಟ್ಟಿ, ದಾವೀದ ನಗರವನ್ನು ಮತ್ತೆ ನಿರ್ಮಿಸಿದರು. ಅದೇ ಅವರಿಗೆ ದುರ್ಗವಾಯಿತು.
34 : ಧರ್ಮಮೀರಿ ನಡೆಯುತ್ತಿದ್ದ ದುಷ್ಕರ್ಮಿಗಳನ್ನು ಅದರೊಳಗೆ ತಂದಿರಿಸಿಕೊಂಡು ತಮ್ಮ ಪಕ್ಷವನ್ನು ಬಲಪಡಿಸಿಕೊಂಡರು.
35 : ಅಲ್ಲೇ ಆಯುಧಗಳನ್ನೂ ಆಹಾರಸಾಮಾಗ್ರಿಗಳನ್ನೂ ಕೂಡಿಸಿಟ್ಟುಕೊಂಡರು. ಜೆರುಸಲೇಮಿನಿಂದ ದೋಚಿಕೊಂಡಿದ್ದ ಕೊಳ್ಳೆಯನ್ನೆಲ್ಲಾ ಅಲ್ಲೇ ಇರಿಸಿಕೊಂಡರು. ಹೀಗೆ ಆ ದುರ್ಗ, ನಗರಕ್ಕೆ ಮಹಾ ವಿಪತ್ತಾಗಿ ಮಾರ್ಪಟ್ಟಿತು.
36 : ಅದಾಯಿತು ಒಂದು ಹೊಂಚುಪಡೆ ಮಹಾಪವಿತ್ರಾಲಯಕ್ಕೆ ನಿತ್ಯವೈರಿಗಳಾಗಿ ನಿಂತರವರು ಇಸ್ರಯೇಲರಿಗೆ.
37 : ನಿರಪರಾಧಿಗಳ ನೆತ್ತರನು ಸುರಿಸಿದರಾ ಪವಿತ್ರಾಲಯದ ಸುತ್ತಲು ಹೊಲಸು ಕೃತ್ಯಗಳಿಂದ ಅಮಂಗಲ ಮಾಡಿದರಾ ಆಲಯವನು
38 : ಎಂದೇ ಊರುಬಿಟ್ಟು ಓಡಿದರು ಜೆರುಸಲೇಮಿನ ಜನ ಅದಾಯಿತು ಮಣ್ಣಿನ ಮಕ್ಕಳಿಗೆ ಪರಸ್ಥಳ. ಪರಕೀಯರಿಗೆ ವಾಸಸ್ಥಳ.
39 : ಮಾರ್ಪಟ್ಟವು, ಪವಿತ್ರಾಲಯ ಅರಣ್ಯವಾಗಿ ಹಬ್ಬಗಳು ಗೋಳಾಟವಾಗಿ, ಸಬ್ಬತ್‍ಗಳು ನಿಂದೆದೂಷಣೆಗಳಾಗಿ ಕೀರ್ತಿಗೌರವಗಳು ಅವಮಾನ ಅಪಹಾಸ್ಯಗಳಾಗಿ.
40 : ಹಿರಿದಾದ ಖ್ಯಾತಿ ತಿರುಗಿತು ಅವಹೇಳನಕೆ ಉನ್ನತ ಸ್ಥಿತಿ ಇಳಿಯಿತು ಅಧೋಗತಿಗೆ.
41 : ಅನ್ಯಧರ್ಮೀಯರ ಪೂಜಾಪದ್ಧತಿ ತರುವಾಯ ಅರಸ ಅಂತಿಯೋಕನು, “ಎಲ್ಲರು ಒಂದೇ ಜನಾಂಗದಂತೆ ಬಾಳಬೇಕು;
42 : ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು,” ಎಂದು ಪ್ರಕಟಿಸಿದನು.
43 : ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ, ಮೂರ್ತಿಗಳಿಗೆ ಬಲಿ ಅರ್ಪಿಸಿದರು; ಸಬ್ಬತ್‍ದಿನವನ್ನು ಅಪವಿತ್ರಗೊಳಿಸಿದರು.
44 : ಅರಸನು ಜೆರುಸಲೇಮಿನಲ್ಲೂ ಜುದೇಯದ ಇತರ ಊರುಗಳಲ್ಲೂ ವಾಸಿಸುತ್ತಿದ್ದ ಜನರಿಗೆ ತನ್ನ ಸುದ್ದಿಗಾರರ ಮೂಲಕ ಓಲೆಗಳನ್ನು ಕಳುಹಿಸಿ ಹೀಗೆಂದು ತಿಳಿಸಿದನು: “ನೀವು ನಿಮ್ಮ ನಾಡಿಗೆ ಪರಕೀಯವಾದ ನಿಬಂಧನೆಗಳಿಗೆ ಒಳಗಾಗಬೇಕು.
45 : ಪವಿತ್ರಾಲಯದಲ್ಲಿ ಅರ್ಪಿತವಾಗುವ ಎಲ್ಲ ದಹನಬಲಿ, ಯಜ್ಞ, ಪಾನದ್ರವ್ಯಾರ್ಪಣೆಗಳನ್ನು ನಿಲ್ಲಿಸಿಬಿಡಬೇಕು; ಸಬ್ಬತ್‍ದಿನಗಳನ್ನೂ ಹಬ್ಬಗಳನ್ನೂ ಪವಿತ್ರ ಎಂದು ಆಚರಿಸಬೇಕಾಗಿಲ್ಲ;
46 : ಪವಿತ್ರ ಸ್ಥಾನವನ್ನೂ ಪೂಜ್ಯ ವ್ಯಕ್ತಿಗಳನ್ನೂ ಗೌರವಿಸಬೇಕಾಗಿಲ್ಲ;
47 : ವಿಗ್ರಹಗಳಿಗೆ ಮಂಟಪಗಳನ್ನೂ ಗುಡಿಗುಡಾರಗಳನ್ನೂ ಕಟ್ಟಿಸಬೇಕು; ಹಂದಿಯ ಮಾಂಸದ ಮತ್ತು ಇತರ ಅಶುದ್ಧ ಪ್ರಾಣಿಗಳ ಯಜ್ಞಗಳನ್ನು ಅಲ್ಲಿ ಅರ್ಪಿಸಬೇಕು;
48 : ಮಕ್ಕಳಿಗೆ ಸುನ್ನತಿ ಮಾಡಿಸಬಾರದು; ಎಲ್ಲ ಬಗೆಯ ಧಾರ್ಮಿಕ ನಿಯಮ ಹಾಗು ಶುದ್ಧಾಚರಣೆಗಳನ್ನು ತೊರೆದುಬಿಡಬೇಕು;
49 : ಹೀಗೆ ಧರ್ಮಶಾಸ್ತ್ರವನ್ನು ಮರೆತು ಎಲ್ಲ ವಿಧಿನಿಯಮಗಳನ್ನು ಬದಲುಮಾಡಿಕೊಳ್ಳಬೇಕು;
50 : ಅರಸನ ಈ ಶಾಸನಕ್ಕೆ ಸರಿಯಾಗಿ ಯಾರು ನಡೆದುಕೊಳ್ಳುವುದಿಲ್ಲವೋ ಅವರಿಗೆ ಮರಣ ದಂಡನೆ ಆಗುವುದು,” ಎಂದು ಅರುಹಿಸಿದನು.
51 : ಇದೇ ಮೇರೆಗೆ ತನ್ನ ರಾಜ್ಯದ ಎಲ್ಲಾ ಕಡೆಗೂ ಬರೆದು ಕಳುಹಿಸಿದನು. ಎಲ್ಲಾ ಜನರ ಮೇಲೆಯೂ ಮೇಲ್ವಿಚಾರಕರನ್ನು ನೇಮಿಸಿದನು. ಜುದೇಯದ ಊರುಗಳಲ್ಲಿ, ಒಂದಾದ ಮೇಲೊಂದು ಎಲ್ಲರು ಅನ್ಯಧರ್ಮೀಯ ಯಜ್ಞಗಳನ್ನು ಒಪ್ಪಿಸಬೇಕೆಂದು ಆಜ್ಞಾಪಿಸಿದನು.
52 : ಯೆಹೂದ್ಯರಲ್ಲಿ ಅನೇಕರು ಧರ್ಮಶಾಸ್ತ್ರವನ್ನು ಮೀರಿ, ಅನ್ಯರೊಂದಿಗೆ ಕೂಡಕೊಂಡು, ನಾಡಿನಲ್ಲಿ ಆ ದುಷ್ಟತನವನ್ನು ನಡೆಸಲು ಹಿಂಜರಿಯಲಿಲ್ಲ.
53 : ಇದರಿಂದಾಗಿ, ಧರ್ಮನಿಷ್ಠ ಇಸ್ರಯೇಲರು ಆಶ್ರಯ ದೊರೆತಲ್ಲಿಗೆ ಹೋಗಿ ಅವಿತುಕೊಳ್ಳಬೇಕಾಯಿತು.
54 : 145ನೇ ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು ‘ವಿನಾಶಕರ ವಿಕಟ ಮೂರ್ತಿ’ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು.
55 : ಮನೆಯ ಬಾಗಿಲುಗಳಲ್ಲೂ ಊರಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು.
56 : ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು.
57 : ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು.
58 : ಹೀಗೆ ಪಟ್ಟಣಗಳಲ್ಲಿ ಸಿಕ್ಕಿಬಿದ್ದ ಇಸ್ರಯೇಲರೆಲ್ಲರಿಗು, ತಿಂಗಳಾದ ಮೇಲೆ ತಿಂಗಳು, ಅಧಿಕಾರಬಲದಿಂದ ಶಿಕ್ಷೆ ವಿಧಿಸುತ್ತಾ ಬಂದನು
59 : ಇದಲ್ಲದೆ, ದೇವರ ಬಲಿಪೀಠದ ಮೇಲೆ ಕಟ್ಟಲಾಗಿದ್ದ ವಿಗ್ರಹವೇದಿಕೆಯ ಮೇಲೆ, ಅದೇ ತಿಂಗಳಿನ ಇಪ್ಪತ್ತೈದನೆಯ ದಿನದಂದು ಆ ದುಷ್ಟ ಜನರು ಬಲಿಯನ್ನು ಅರ್ಪಿಸಿದರು.
60 : ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಿದ್ದ ತಾಯಂದಿರನ್ನೆಲ್ಲಾ ರಾಜಾಜ್ಞೆಗನುಸಾರ ಕೊಂದುಹಾಕಿ, ಆ ಕೂಸುಗಳನ್ನು ಅವರ ಕುತ್ತಿಗೆಗೇ ನೇತು ಹಾಕಿದರು.
61 : ಅವರ ಮನೆಗಳನ್ನು ಹಾಳುಮಾಡಿ, ಸುನ್ನತಿಮಾಡಿದವರನ್ನು ಸಂಹರಿಸಿದರು.
62 : ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ಧ ಆಹಾರವನ್ನು ತಿನ್ನಲು ನಿರಾಕರಿಸಿದರು.
63 : ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ಧರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು.
64 : ಆಗ ಭೀಕರ ಕೋಪಾಗ್ನಿ ಇಸ್ರಯೇಲಿನ ಮೇಲೆ ಉರಿಯ ಹತ್ತಿತು.

· © 2017 kannadacatholicbible.org Privacy Policy