1 : ಬಾಬಿಲೋನಿನಲ್ಲಿ ಯೋವಾಕೀಮನೆಂಬ ಒಬ್ಬ ವ್ಯಕ್ತಿ ಇದ್ದ. ಅವನು ಹಿಲ್ಕೀಯನ ಮಗಳಾದ ಸುಸನ್ನಳನ್ನು ಮದುವೆಯಾದ.
2 : ಆಕೆ ಬಹಳ ಚೆಲುವೆ. ದೇವರಲ್ಲಿ ಆಕೆಗೆ ಅಧಿಕ ಭಯಭಕ್ತಿ. ಅವಳ ತಂದೆತಾಯಿಗಳು ಕೂಡ ನೀತಿವಂತರು.
3 : ಮೋಶೆಯ ಧರ್ಮಶಾಸ್ತ್ರಾನುಸಾರ ಆಕೆಗೆ ಸುಶಿಕ್ಷಣವನ್ನು ಕೊಟ್ಟಿದ್ದರು.
4 : ಯೋವಾಕೀಮನು ಬಹು ಧನವಂತನಾಗಿದ್ದ. ಅವನ ಮನೆಯ ಪಕ್ಕದಲ್ಲೇ ಅವನದೊಂದು ತೋಟವಿತ್ತು. ಯೆಹೂದ್ಯರಲ್ಲಿ ಸಾಕಷ್ಟು ಜನ ಅವನಲ್ಲಿಗೆ ಬಂದು ಹೋಗುತ್ತಿದ್ದರು. ಏಕೆಂದರೆ ಅವನು ಎಲ್ಲರಿಗಿಂತಲು ಗೌರವಾನ್ವಿತನಾಗಿದ್ದ.
5 : ಆ ವರ್ಷ ಜನನಾಯಕರಲ್ಲಿ ಇಬ್ಬರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. “ದುಷ್ಟತನ ಬಂದಿರುವುದು ಬಾಬಿಲೋನಿನಿಂದ ಹಾಗು ‘ಜನರನ್ನಾಳುವವರು’ ಎನಿಸಿಕೊಂಡ ಹಿರಿಯ ನ್ಯಾಯಾಧೀಶರಿಂದ” ಎಂಬ ಸರ್ವೇಶ್ವರ ನುಡಿ ಅವರ ನಡತೆಗೆ ಅನ್ವಯಿಸುತ್ತಿತ್ತು.
6 : ಅವರು ಹೆಚ್ಚಾಗಿ ಯೋವಾಕೀಮನ ಮನೆಯಲ್ಲೇ ತಂಗುತ್ತಿದ್ದರು. ಅಲ್ಲಿದ್ದ ಇವರ ಬಳಿಗೆ ವ್ಯಾಜ್ಯವಿದ್ದವರೆಲ್ಲರು ಬರುತ್ತಿದ್ದರು.
7 : ಮಧ್ಯಾಹ್ನ ಜನರು ಹೊರಟುಹೋದ ಮೇಲೆ ಸುಸನ್ನಳು ತನ್ನ ಗಂಡನ ತೋಟಕ್ಕೆ ವಿಹಾರಕ್ಕೆಂದು ಹೋಗುತ್ತ ಇದ್ದಳು.
8 : ಹೀಗೆ ಅವಳು ಪ್ರತಿದಿನ ಹೋಗುತ್ತಿದ್ದುದನ್ನು ಗಮನಿಸುತ್ತಿದ್ದ ಈ ಇಬ್ಬರು ನ್ಯಾಯಾಧೀಶರು ಆಕೆಯನ್ನು ಕಾಮದೃಷ್ಟಿಯಿಂದ ನೋಡತೊಡಗಿದರು.
9 : ಅವರ ಬುದ್ಧಿ ವಕ್ರವಾಯಿತು. ಸ್ವರ್ಗದತ್ತವಾಗಲಿ ನ್ಯಾಯಬದ್ಧವಾದ ತೀರ್ಪಿನತ್ತವಾಗಲಿ ಅವರ ಮನಸ್ಸು ಹರಿಯಲಿಲ್ಲ. ಅವರಿಬ್ಬರೂ ಅವಳ ಮೇಲಿನ ಮೋಹದಿಂದ ಪೀಡಿತರಾದರು.
10 : ಆದರೂ ತಮ್ಮೊಳಗಿನ ತಾಪವನ್ನು ಒಬ್ಬರಿಗೊಬ್ಬರು ತಿಳಿಯಗೊಡಲಿಲ್ಲ.
11 : ಏಕೆಂದರೆ ಅವಳ ಸಹವಾಸಕ್ಕಾಗಿ ತಮ್ಮಲ್ಲಿದ್ದ ಹಂಬಲವನ್ನು ಹೊರಪಡಿಸಲು ಹೇಸುತ್ತಿದ್ದರು.
12 : ಆದರೂ ಪ್ರತಿದಿನ ಅವಳನ್ನು ನೋಡಲು ಕಾತುರದಿಂದ ಕಾದಿರುತ್ತಿದ್ದರು.
13 : ಒಮ್ಮೆ ಅವರಲ್ಲಿ ಒಬ್ಬನು ಇನ್ನೊಬ್ಬನಿಗೆ, “ಊಟದ ಸಮಯ ಆಯಿತು; ಮನೆಗೆ ಹೋಗೋಣ,” ಎಂದನು.
14 : ಹೊರಗೆ ಹೋದ ಮೇಲೆ ಒಬ್ಬರನ್ನೊಬ್ಬರು ಬೀಳ್ಕೊಟ್ಟರು. ಆದರೆ ಮರಳಿ ಅದೇ ಸ್ಥಳಕ್ಕೆ ಬಂದರು. ತಿರುಗಿ ಬಂದ ಕಾರಣವನ್ನು ಪರಸ್ಪರ ವಿಚಾರಿಸುತ್ತಾ ತಮ್ಮಲ್ಲಿದ್ದ ದುರಾಶೆಯನ್ನು ಒಪ್ಪಿಕೊಂಡರು. ಅಲ್ಲದೆ, ಸುಸನ್ನಳು ಒಬ್ಬಳೇ ಇರುವಾಗ ತಮ್ಮಿಬ್ಬರೂ ಅವಳನ್ನು ಭೇಟಿಯಾಗಬಹುದಾದ ಸಮಯವನ್ನು ಗೊತ್ತುಮಾಡಿಕೊಂಡರು.
15 : ಹೀಗೆ ಅವರು ತಕ್ಕ ಸಮಯಕ್ಕಾಗಿ ಕಾದುಕೊಂಡಿರುವಾಗ ಒಮ್ಮೆ ಸುಸನ್ನಳು ಎಂದಿನಂತೆ ಇಬ್ಬರು ದಾಸಿಯರೊಂದಿಗೆ ತೋಟಕ್ಕೆ ಹೋದಳು. ಸೆಕೆಯಾಗಿದ್ದುದರಿಂದ ಅಲ್ಲೆ ಸ್ನಾನ ಮಾಡ ಬಯಸಿದಳು.
16 : ಮರೆಯಲ್ಲಿ ಅವಿತುಕೊಂಡು ಆಕೆಯನ್ನು ಕಣ್ಣಿಟ್ಟು ನೋಡುತ್ತಿದ್ದ ಆ ಇಬ್ಬರು ಹಿರಿಯರನ್ನು ಬಿಟ್ಟರೆ ಮತ್ತೆ ಯಾರೂ ಅಲ್ಲಿರಲಿಲ್ಲ.
17 : ಆಕೆ ದಾಸಿಯರಿಗೆ, “ಎಣ್ಣೆಯನ್ನೂ ಸುಗಂಧತೈಲವನ್ನೂ ತೆಗೆದುಕೊಂಡು ಬನ್ನಿ; ತೋಟದ ಬಾಗಿಲನ್ನು ಮುಚ್ಚಿ, ನಾನು ಸ್ನಾನ ಮಾಡಿಕೊಳ್ಳಬೇಕು,” ಎಂದಳು.
18 : ಆಕೆ ಹೇಳಿದಂತೆಯೇ ದಾಸಿಯರು ಮಾಡಿದರು. ತೋಟದ ಬಾಗಿಲನ್ನು ಮುಚ್ಚಿಕೊಂಡು, ತರಲು ಹೇಳಿದ್ದ ವಸ್ತುಗಳನ್ನು ತೆಗೆದುಕೊಂಡು ಬರಲು ಪಕ್ಕದ ಬಾಗಿಲಿಂದ ಹೊರಗೆಹೋದರು. ಆ ಹಿರಿಯರು ಅವಿತುಕೊಂಡಿದ್ದರಿಂದ ಅವರನ್ನು ದಾಸಿಯರು ನೋಡಲಿಲ್ಲ.
ಮೋಹಮತ್ತರಾದ ನ್ಯಾಯಾಧೀಶರು
19 : ದಾಸಿಯರು ಹೊರಗೆ ಹೋದ ಬಳಿಕ ಆ ಇಬ್ಬರು ಹಿರಿಯರು ಎದ್ದು ಸುಸನ್ನಳ ಹತ್ತಿರಕ್ಕೆ ಓಡಿಬಂದರು.
20 : ಅವಳಿಗೆ, “ನೋಡು, ನಮ್ಮನ್ನು ಯಾರೂ ನೋಡದಂತೆ ತೋಟದ ಬಾಗಿಲು ಹಾಕಿದೆ. ನಾವು ನಿನ್ನಲ್ಲಿ ಮೋಹಿತರಾಗಿದ್ದೇವೆ. ಆದ್ದರಿಂದ ನಮಗೆ ಸಮ್ಮತಿಸು, ನಮ್ಮೊಂದಿಗೆ ಸಂಭೋಗಿಸು.
21 : ಇಲ್ಲವಾದರೆ, ಒಬ್ಬ ಯುವಕ ನಿನ್ನ ಸಂಗಡ ಇದ್ದನೆಂದೂ ಅದಕ್ಕಾಗಿಯೇ ನೀನು ದಾಸಿಯರನ್ನು ಹೊರಗೆ ಕಳಿಸಿದೆ ಎಂದೂ ನಾವು ನಿನಗೆ ವಿರುದ್ಧ ಸಾಕ್ಷಿ ಹೇಳುತ್ತೇವೆ,” ಎಂದರು.
22 : ಅದಕ್ಕೆ ಸುಸನ್ನಳು ನಿಟ್ಟುಸಿರಿಡುತ್ತಾ, “ನಾನು ದೊಡ್ಡ ಬಿಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಈ ಕೆಟ್ಟ ಕೆಲಸವನ್ನು ನಾನು ಮಾಡಿದೆನಾದರೆ, ಮರಣ ದಂಡನೆ ನನಗೆ ಕಟ್ಟಿಟ್ಟ ಬುತ್ತಿ; ಮಾಡದಿದ್ದರೆ ನಿಮ್ಮ ಕೈಯಿಂದ ಪಾರಾಗಲಾರೆ
23 : ಇಂತಿರಲು ಸರ್ವೇಶ್ವರನ ಕಣ್ಮುಂದೆ ಪಾಪಮಾಡುವುದಕ್ಕಿಂತ, ಅದನ್ನು ಮಾಡದೆ ನಿಮ್ಮ ಕೈಗೆ ಸಿಕ್ಕಿ ಬೀಳುವುದೇ ನನಗೆ ಲೇಸು,” ಎಂದುಕೊಂಡಳು.
24 : ಹೀಗೆಂದ ಮೇಲೆ ಸುಸನ್ನಳು ಗಟ್ಟಿಯಾಗಿ ಕಿರಿಚಿಕೊಂಡಳು. ಆ ಹಿರಿಯರಿಬ್ಬರೂ ಅವಳಿಗೆ ವಿರುದ್ಧ ಅಬ್ಬರಿಸಿದರು.
25 : ಅವರಲ್ಲಿ ಒಬ್ಬನು ಓಡಿಹೋಗಿ ತೋಟದ ಬಾಗಿಲನ್ನು ತೆರೆದನು.
26 : ಇತ್ತ ಮನೆಯ ಆಳುಗಳು ತೋಟದಲ್ಲಿನ ಕೂಗಾಟವನ್ನು ಕೇಳಿ, ಆಕೆಗೆ ಏನಾಯಿತೋ ಎಂದು ನೋಡಲು ಪಕ್ಕದ ಬಾಗಿಲಿನಿಂದ ಒಳಕ್ಕೆ ನುಗ್ಗಿ ಬಂದರು.
27 : ಹಿರಿಯರು ತಮ್ಮ ಕತೆಯನ್ನು ವರದಿಮಾಡಿದರು. ಅದನ್ನು ಕೇಳಿದ ನೌಕರರು ಬಹಳವಾಗಿ ಸಂಕೋಚಪಟ್ಟರು. ಏಕೆಂದರೆ ಸುಸನ್ನಳನ್ನು ಕುರಿತು ಇಂಥ ವರದಿಯನ್ನು ಅವರು ಎಂದೂ ಕೇಳಿರಲಿಲ್ಲ.
ನ್ಯಾಯಾಧೀಶರಿಂದಲೇ ಸುಳ್ಳುಸಾಕ್ಷಿ!
28 : ಮಾರನೆಯ ದಿನ ಜನರು ಸುಸನ್ನಳ ಗಂಡನಾದ ಯೋವಾಕೀಮನ ಬಳಿಗೆ ಸೇರಿಬಂದರು. ಅವರೊಡನೆ ಆ ಹಿರಿಯರಿಬ್ಬರು ಆಕೆಯನ್ನು ಮರಣದಂಡನೆಗೆ ಗುರಿಮಾಡಿಸಲೇಬೇಕೆಂದು ಪಟ್ಟುಹಿಡಿದರು.
29 : “ಹಿಲ್ಕೀಯನ ಮಗಳೂ ಯೋವಾಕೀಮನ ಹೆಂಡತಿಯೂ ಆದ ಸುಸನ್ನಳನ್ನು ಕರೆಯಿಸಿರಿ,” ಎಂದು ಜನರಿಗೆ ಸಂಬೋಧಿಸಿದರು. ಆಕೆಗೆ ಕರೆ ಕಳಿಸಲಾಯಿತು.
30 : ಅವಳು ತನ್ನ ತಂದೆ, ತಾಯಿ, ಮಕ್ಕಳು ಮತ್ತು ತನ್ನ ಬಂಧು ಬಳಗದವರೊಂದಿಗೆ ಅಲ್ಲಿಗೆ ಬಂದಳು.
31 : ಸುಸನ್ನಳು ಅತಿ ಕೋಮಲೆ, ನೋಡಲಿಕ್ಕೆ ಬಲು ಚೆಲುವೆ.
32 : ಆ ದುಷ್ಟರು ಆಕೆಯ ಸೌಂದರ್ಯವನ್ನು ಕಣ್ತುಂಬ ನೋಡಿ ನಲಿಯಬೇಕೆಂಬ ಆಶೆಯಿಂದ ಆಕೆ ಹಾಕಿಕೊಂಡಿದ್ದ ಮುಸುಕನ್ನು ತೆಗೆಯಿಸಲು ಹೇಳಿದರು.
33 : ಆದರೆ ಆಕೆಯ ಬಂಧುಬಳಗದವರು ಹಾಗು ಆಕೆಯ ಪರಿಚಯ ಇದ್ದವರು ಕಣ್ಣೀರಿಟ್ಟರು.
34 : ತರುವಾಯ ಆ ಹಿರಿಯರಿಬ್ಬರು ಜನರ ನಡುವೆ ನಿಂತುಕೊಂಡು ಆಕೆಯ ತಲೆಯಮೇಲೆ ತಮ್ಮ ಕೈಗಳನ್ನಿಟ್ಟರು.
35 : ಅವಳಾದರೋ ದುಃಖಿಸುತ್ತಾ ಆಕಾಶದ ಕಡೆಗೆ ದಿಟ್ಟಿಸಿ ನೋಡಿದಳು. ಅವಳ ಹೃದಯ ಸರ್ವೇಶ್ವರನನ್ನು ನೆಚ್ಚಿಕೊಂಡಿತ್ತು.
36 : ಆಗ ಆ ಹಿರಿಯರು, “ನಾವಿಬ್ಬರೇ ತೋಟದಲ್ಲಿ ತಿರುಗಾಡುತ್ತಿದ್ದಾಗ ಇವಳು ಇಬ್ಬರು ದಾಸಿಯರೊಂದಿಗೆ ಒಳಗೆ ಬಂದಳು. ತೋಟದ ಬಾಗಿಲನ್ನು ಮುಚ್ಚಿದಳು. ಬಳಿಕ ದಾಸಿಯರನ್ನು ಕಳಿಸಿಬಿಟ್ಟಳು.
37 : ಆಮೇಲೆ ಅಲ್ಲಿಯೇ ಅವಿತುಕೊಂಡಿದ್ದ ಯುವಕನೊಬ್ಬನು ಇವಳ ಬಳಿಗೆ ಬಂದು ಇವಳೊಡನೆ ಮಲಗಿಕೊಂಡನು.
38 : ಅದೇ ಸಮಯಕ್ಕೆ ಅಲ್ಲಿಯೇ ತೋಟದ ಒಂದು ಮೂಲೆಯಲ್ಲಿದ್ದ ನಾವು ಈ ದುರಾಚಾರವನ್ನು ಕಂಡು ಅವರ ಬಳಿಗೆ ಓಡಿಬಂದೆವು.
39 : ಆದರೆ ಆ ಯುವಕನನ್ನು ಹಿಡಿಯಲು ನಮ್ಮಿಂದ ಆಗಲಿಲ್ಲ. ಅವನು ನಮಗಿಂತ ಬಲಿಷ್ಠ. ಬಾಗಿಲು ತೆರೆದು, ಹೊರಗೆ ಜಿಗಿದು ಓಡಿಹೋದ.
40 : ಇವಳನ್ನು ಹಿಡಿದುಕೊಂಡು, ‘ಆ ಯುವಕನು ಯಾರು?’ ಎಂದು ಕೇಳಿದೆವು. ಆದರೆ ಇವಳು ಹೇಳಲಿಲ್ಲ. ಇದೇ ನಾವು ಮಾಡುವ ಆಪಾದನೆ,” ಎಂದರು.
41 : ಅವರು ಜನರ ಹಿರಿಯರು ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು.
42 : ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, “ನಿತ್ಯರಾದ ದೇವರೇ, ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು, ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ.
43 : ಇವರು ನನಗೆ ವಿರುದ್ಧ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು,” ಎಂದು ಮೊರೆ ಇಟ್ಟಳು.
ದಾನಿಯೇಲನಿಂದ ಸುಸನ್ನಳ ಬಿಡುಗಡೆ
44 : ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು.
45 : ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು.
46 : ದಾನಿಯೇಲನು, “ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ,” ಎಂದು ಕೂಗಿ ಹೇಳಿದನು.
47 : ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, “ನೀನು ಆಡಿದ ಮಾತಿನ ಮರ್ಮವೇನು?” ಎಂದು ವಿಚಾರಿಸಿದರು.
48 : ಅವನು ಅವರ ಮಧ್ಯೆ ನಿಂತು, “ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ? ಪರೀಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ, ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ?
49 : ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ,” ಎಂದು ಹೇಳಿದನು.
50 : ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕರು ದಾನಿಯೇಲನಿಗೆ, “ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು ನಿನಗೆ ಕೊಟ್ಟಂತಿದೆ!” ಎಂದರು.
51 : ಆಗ ದಾನಿಯೇಲನು, “ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು ಇವರನ್ನು ಪರೀಕ್ಷಿಸುತ್ತೇನೆ,” ಎಂದನು.
52 : ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, “ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ.
53 : ‘ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು’ ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನಿರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ.
54 : ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು, ನನಗೆ ತಿಳಿಸು,” ಎಂದನು. ಅದಕ್ಕೆ ಅವನು, “ಬಗಿನಿ ಮರದ ಅಡಿಯಲ್ಲಿ,” ಎಂದು ಉತ್ತರವಿತ್ತನು.
55 : ಅದಕ್ಕೆ ದಾನಿಯೇಲನು, “ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ,” ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು.
56 : ಬಳಿಕ ಎರಡನೆಯವನನ್ನು ಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, “ಯೆಹೂದ ವಂಶಕ್ಕೆ ಅಯೋಗ್ಯನಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು. ಕಾಮವು ನಿನ್ನ ಮನಸ್ಸನ್ನು ಕೆಡಿಸಿತು.
57 : ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ.
58 : ಈಗ ಹೇಳು, ‘ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?” ಎಂದನು. ಅವನು, ‘ಕಡವಾಲ ಮರದ ಕೆಳಗೆ’ ಎಂದು ಉತ್ತರಕೊಟ್ಟ.
59 : ಆಗ ದಾನಿಯೇಲನು, “ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ದಾನೆ,” ಎಂದು ನುಡಿದನು.
60 : ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು.
61 : ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳುಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದುನಿಂತು ಪ್ರತಿಭಟಿಸಿದರು.
62 : ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ, ಅಂದು ಸುರಕ್ಷಿತವಾಯಿತು.
63 : ಹಿಲ್ಕೀಯನು ಮತ್ತು ಅವನ ಹೆಂಡತಿಯು ತಮ್ಮ ಮಗಳು ಸುಸನ್ನಳ ಪರವಾಗಿ ದೇವರನ್ನು ಸ್ತುತಿಸಿದರು. ಆಕೆಯ ಗಂಡನೂ ಬಂಧುಬಳಗದವರೂ ಸೇರಿ ಅಂತೆಯೇ ಸ್ತುತಿಮಾಡಿದರು. ಏಕೆಂದರೆ ಯಾವ ಅವಲಕ್ಷಣವೂ ಅವಳಲ್ಲಿ ಕಂಡು ಬರಲಿಲ್ಲ.
64 : ಅಂದಿನಿಂದ ದಾನಿಯೇಲನು ಜನರ ದೃಷ್ಟಿಯಲ್ಲಿ ಮಹಾಪುರುಷನಾದ.