1 : ಹನನ್ಯ, ಮಿಶಾಯೇಲ್ ಹಾಗು ಅಜರ್ಯ ಎಂಬವರು ದೇವರನ್ನು ಸ್ತುತಿಸುತ್ತಾ ಸರ್ವೇಶ್ವರನ ಗುಣಗಾನ ಮಾಡುತ್ತಾ ಬೆಂಕಿಯ ನಡುವೆ ತಿರುಗಾಡುತ್ತಿದ್ದರು.
2 : ಆಗ ಅಜರ್ಯನು ಬೆಂಕಿಯ ನಡುವೆ ನಿಂತುಕೊಂಡು ಗಟ್ಟಿಯಾಗಿ ಕೂಗಿ ಹೀಗೆಂದು ಪ್ರಾರ್ಥನೆ ಮಾಡಿದ:
3 : ನಮ್ಮ ಪೂರ್ವಜರ ದೇವರಾದ
ಹೇ, ಸರ್ವೇಶ್ವರಾ,
ನೀವು ಸ್ತುತ್ಯಾರ್ಹರು, ವಂದನೀಯರು
ನಿಮ್ಮ ನಾಮ ಸದಾ - ಸರ್ವದಾ
ಮಹಿಮಾಯುತ.
4 : ನೀವು ನಮಗೆ ಗೈದವುಗಳೆಲ್ಲ
ಧರ್ಮಸಮ್ಮತವಾದುವು
ನಿಮ್ಮ ಕಾರ್ಯ, ಸತ್ಯ, ನಿಮ್ಮ ಮಾರ್ಗ,
ನ್ಯಾಯ; ನಿಮ್ಮ ತೀರ್ಪು, ಯಥಾರ್ಥ.
5 : ನೀವು ನಮ್ಮ ಮೇಲೂ
ನಮ್ಮ ಪೂರ್ವಜರ ಶ್ರೀನಗರವಾದ
ಜೆರುಸಲೇಮಿನ ಮೇಲೂ
ಬರಮಾಡಿರುವುದೆಲ್ಲ ಸರಿಯಾದುವು.
ನಮ್ಮ ಪಾಪದ ನಿಮಿತ್ತ,
ಸತ್ಯ ಹಾಗೂ ನ್ಯಾಯವಾದುದನ್ನೆ
ಬರಮಾಡಿದ್ದೀರಿ!
6 : ಏಕೆಂದರೆ ನಿಮಗೆ ವಿಮುಖರಾಗಿ ಪಾಪ
ಮಾಡಿದೆವು,
ದ್ರೋಹಗೈದೆವು, ಎಲ್ಲ ವಿಷಯದಲ್ಲೂ
ತಪ್ಪುಮಾಡಿದೆವು.
7 : ನಿಮ್ಮ ಆಜ್ಞೆಗಳನ್ನು ಆಲಿಸಲಿಲ್ಲ, ಪಾಲಿಸಲಿಲ್ಲ
ನಮ್ಮ ಒಳಿತಿಗಾಗಿ ಕಟ್ಟಳೆಯಿಟ್ಟವುಗಳನ್ನು
ನಡೆಸಲಿಲ್ಲ.
8 : ನೀವು ನಮ್ಮ ಮೇಲೆ ಬರಮಾಡಿರುವುದೆಲ್ಲವೂ
ನಮಗೆ ವಿಧಿಸಿದ ಪ್ರತಿಯೊಂದು ಶಿಕ್ಷೆಯೂ
ಯಥಾರ್ಥವಾಗಿಯೇ ಇವೆ.
9 : ಧರ್ಮಹೀನರಾದ ವೈರಿಗಳ ಕೈಗೆ
ಅತ್ಯಂತ ನಾಸ್ತಿಕರಾದವರ ಕೈಗೆ
ನಮ್ಮನ್ನು ಒಪ್ಪಿಸಿಬಿಟ್ಟಿದ್ದೀರಿ.
ಜಗದಲ್ಲೇ ದುಷ್ಟನೂ ಅನೀತಿವಂತನೂ
ಆದವನ ಕೈಗೆ ನಮ್ಮನ್ನು ಕೊಟ್ಟಿದ್ದೀರಿ.
10 : ನಿಮ್ಮ ಶರಣರೂ ಭಕ್ತರೂ ಆದ ನಮಗೆ
ನಾಚಿಕೆ, ನಿಂದೆ, ಅವಮಾನಗಳು ಕವಿದಿವೆ,
ನಾವೀಗ ಬಾಯಿ ಮುಚ್ಚಿಕೊಳ್ಳಬೇಕಾಗಿದೆ.
11 : ಆದರೂ ನಿಮ್ಮ ನಾಮದ ಪ್ರಯುಕ್ತ
ನಮ್ಮನ್ನು ಎಂದೆಂದಿಗೂ ತ್ಯಜಿಸಬೇಡಿ,
ನಿಮ್ಮ ಒಡಂಬಡಿಕೆಯನ್ನು ರದ್ದುಗೊಳಿಸಬೇಡಿ.
12 : ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ
ನಿಮ್ಮ ದಾಸ ಇಸಾಕನ,
ನಿಮ್ಮ ಭಕ್ತ ಯಕೋಬನ ಪ್ರಯುಕ್ತ
ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ.
13 : ಇವರಿಗೆ, “ನಿಮ್ಮ ಸಂತಾನವನ್ನು ಆಕಾಶದ
ನಕ್ಷತ್ರಗಳಂತೆ
ಸಮುದ್ರ ತೀರದ ಮರಳಿನಂತೆ
ಅಸಂಖ್ಯವಾಗಿಸುವೆ”
ಎಂದು ನೀವು ವಾಗ್ದಾನ ಮಾಡಿದಿರಲ್ಲವೆ?
14 : ಒಡೆಯಾ, ಉಳಿದ ರಾಷ್ಟ್ರಗಳಿಗಿಂತ ನಾವು
ಕನಿಷ್ಟರಾಗಿಬಿಟ್ಟೆವು,
ನಮ್ಮ ಪಾಪಗಳ ಕಾರಣ
ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು.
15 : ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ,
ನಾಯಕರಿಲ್ಲ;
ಹೋಮವಿಲ್ಲ, ಬಲಿದಾನವಿಲ್ಲ,
ನೈವೇದ್ಯವಿಲ್ಲ, ಧೂಪವಿಲ್ಲ.
ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು
ಸ್ಥಳವೂ ಇಲ್ಲ;
16 : ಆದರೂ ಪಶ್ಚಾತ್ತಾಪದ ಹೃದಯ, ದೀನಮನ
ನಿಮಗೆ ಅಂಗೀಕೃತವಾಗಲಿ.
17 : ಹೋತಹೋರಿಗಳ, ಸಾವಿರಾರು ಕೊಬ್ಬಿದ
ಕುರಿಮರಿಗಳ ದಹನಬಲಿದಾನದಂತೆ
ನಮ್ಮೀ ಅಂತರಂಗದ ಬಲಿ ನಿಮಗಿಂದು
ಅಂಗೀಕೃತವಾಗಲಿ.
ಪೂರ್ಣ ಹೃದಯದಿಂದ ನಾವು ನಿಮ್ಮನ್ನು
ಹಿಂಬಾಲಿಸುವಂತೆ ಅನುಗ್ರಹಿಸಿರಿ.
ಏಕೆಂದರೆ ನಿಮ್ಮಲ್ಲಿ ನಂಬಿಕೆಯಿಡುವವರಿಗೆ
ಆಶಾಭಂಗವಾಗುವುದಿಲ್ಲ.
18 : ಪೂರ್ಣ ಹೃದಯದಿಂದ ನಿಮ್ಮನ್ನೀಗ
ಹಿಂಬಾಲಿಸುತ್ತೇವೆ
ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ
ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ.
19 : ನಮ್ಮನ್ನು ನಿರಾಶೆಗೊಳಿಸಬೇಡಿ
ನಿಮ್ಮ ಸೈರಣೆಗೆ ತಕ್ಕಂತೆ, ನಿಮ್ಮ ಕೃಪಾತಿಶಯದ
ಪ್ರಕಾರ
ನಮ್ಮ ಸಂಗಡ ವರ್ತಿಸಿ.
20 : ಸರ್ವೇಶ್ವರಾ, ನಿಮ್ಮ ಮಹತ್ಕಾರ್ಯಗಳ
ಮೂಲಕ ನಮ್ಮನ್ನು ಬಿಡುಗಡೆಮಾಡಿ
ನಿಮ್ಮ ಹೆಸರಿಗೆ ಹೊಸ ಕೀರ್ತಿ ಬರುವಂತೆ ಮಾಡಿ
ನಿಮ್ಮ ದಾಸರಾದ ನಮಗೆ ಕೇಡು –
ಬಗೆಯುವರೆಲ್ಲರು
ವಿಸ್ಮಯಗೊಳ್ಳುವಂತೆ ಮಾಡಿ.
21 : ಅವರು ತಮ್ಮ ಶಕ್ತಿಸಾಮಥ್ರ್ಯವನ್ನು ಕುರಿತು
ನಾಚಿಕೆಪಡಲಿ
ಅವರ ಬಲ ಕುಂದಿಹೋಗಲಿ.
22 : ನೀವೇ ಅದ್ವಿತೀಯ ದೇವರು
ವಿಶ್ವವ್ಯಾಪ್ತ ಮಹಿಮೆಯುಳ್ಳ ಸರ್ವೇಶ್ವರ
ಎಂಬುದನ್ನು ಅವರು ಅರಿತುಕೊಳ್ಳಲಿ.
23 : ಅವರನ್ನು ಆವಿಗೆಯೊಳಗೆ ಹಾಕಿದ ಅರಸನ ಸೇವಕರು ಬೆಂಕಿಗೆ ಕಲ್ಲೆಣ್ಣೆ, ರಾಳ, ಸೆಣಬು, ಚಕ್ಕೆಗಳನ್ನು ಹಾಕಿ ಅದು ಹೆಚ್ಚುಹೆಚ್ಚಾಗಿ ಉರಿಯುವಂತೆ ಮಾಡುವುದನ್ನು ನಿಲ್ಲಿಸಲಿಲ್ಲ.
24 : ಆದುದರಿಂದ ಜ್ವಾಲೆ ಆವಿಗೆಯ ಮೇಲೆ ನಾಲ್ವತ್ತೊಂಬತ್ತು ಮೊಳ ಮೇಲಕ್ಕೇರಿತ್ತು.
25 : ಅದು ಹರಡಿಕೊಂಡು ಆವಿಗೆಯ ಸುತ್ತಲಿದ್ದ ಬಾಬಿಲೋನಿಯರನ್ನೆಲ್ಲ ಸುಟ್ಟು ಭಸ್ಮಮಾಡಿತು.
26 : ಆದರೆ ಸರ್ವೇಶ್ವರನ ದೂತನು ಆವಿಗೆಯೊಳಗೆ ಇಳಿದು ಬಂದು, ಅಜರ್ಯ ಮತ್ತು ಅವನ ಸಂಗಡಿಗರ ಪಕ್ಕದಲ್ಲೇ ನಿಂತನು.
27 : ಅಗ್ನಿಜ್ವಾಲೆಯನ್ನು ಅವಿಗೆಯ ಹೊರಗೆ ಹೊಡೆದು ಅದರ ನಡುವೆ ತಣ್ಣಗಿರುವ ಸಿಳ್ಳುಗಾಳಿ ಬೀಸುವಂತೆ ಮಾಡಿದನು. ಈ ಕಾರಣ ಬೆಂಕಿಯ ಉರಿ ಅವರನ್ನು ಸೋಂಕಲಿಲ್ಲ; ಅವರಿಗೆ ಯಾವ ಹಾನಿಯಾಗಲಿ, ಕಷ್ಣವಾಗಲಿ ಉಂಟಾಗಲಿಲ್ಲ.
28 : ಆ ಮೂವರು ಯುವಕರು ಆವಿಗೆಯಿಂದಲೆ ದೇವರ ಗುಣಗಾನ ಮಾಡುತ್ತಾ, ಹೊಗಳುತ್ತಾ ಹೀಗೆಂದು ಸ್ತುತಿಸಿದರು:
29 : ನಮ್ಮ ಪೂರ್ವಜರ ದೇವರಾದ ಸರ್ವೇಶ್ವರಾ,
ನೀವು ಪರಮಪೂಜ್ಯರು, ಎಂದೆಂದಿಗೂ
ಮಹೋನ್ನತರು.
30 : ಮಹಿಮಾಯುತವಾದ ನಿಮ್ಮ ನಾಮ
ಸ್ತುತ್ಯಾರ್ಹವಾದುದು,
ಪರಮಪೂಜ್ಯವಾದುದು, ಎಂದೆಂದಿಗೂ
ಮಹಾ ಘನತರವಾದುದು.
31 : ಪರಮ ವೈಭವದಿಂದ ಕೂಡಿದ ಮಂದಿರದಲ್ಲಿ
ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು:
ನೀವು ಪರಮಪೂಜ್ಯರು, ಎಂದೆಂದಿಗೂ
ಮಹೋನ್ನತರು.
32 : ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ
ಸ್ತೋತ್ರ!
ಕೆರೂಬಿಗಳ ಮೇಲೆ ಆಸೀನರಾಗಿರುವ ನಿಮಗೆ
ಸ್ತೋತ್ರ!
ನೀವು ಪರಮ ಪೂಜ್ಯರು, ಎಂದೆಂದಿಗೂ
ಮಹೋನ್ನತರು.
33 : ನಿಮ್ಮ ಸಾಮ್ರಾಜ್ಯದ ಸಿಂಹಾಸನದ
ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ:
ನೀವು ಪರಮ ಪೂಜ್ಯರು, ಎಂದೆಂದಿಗೂ
ಮಹೋನ್ನತರು.
34 : ಗಗನ ಮಂಡಲದಲ್ಲಿ ಸ್ತೋತ್ರಪಾತ್ರರು: ನೀವು
ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು.
35 : ಸರ್ವೇಶ್ವರನ ಸಕಲ ಸೃಷ್ಟಿಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
36 : ದೇವರ ದಿವ್ಯದೂತರೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
37 : ಆಕಾಶಗಳೇ, ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
38 : ಆಕಾಶದ ಮೇಲಿರುವ ಸಕಲ ಜಲರಾಶಿಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
39 : ಸರ್ವೇಶ್ವರನ ಸಕಲ ಶಕ್ತಿಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
40 : ಸೂರ್ಯಚಂದ್ರರೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
41 : ಆಕಾಶಮಂಡಲದಲ್ಲಿರುವ ನಕ್ಷತ್ರಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
42 : ಮಳೆಮಂಜುಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
43 : ಗಾಳಿಬಿರುಗಾಳಿಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
44 : ಬೆಂಕಿ ಝಳಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
45 : ಶೀತೋಷ್ಣಗಳೇ, ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
46 : ಇಬ್ಬನಿ, ಹಿಮಪಾತಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
47 : ಚಳಿ ಬೇಸಿಗೆಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
48 : ಮಂಜು ಹಿಮಗಡ್ಡೆಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
49 : ಹಗಲು ಇರುಳುಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
50 : ಬೆಳಕು ಕತ್ತಲುಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
51 : ಮಿಂಚು ಮೋಡಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
52 : ಧರಣಿಮಂಡಲವು ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
53 : ಬೆಟ್ಟಗುಡ್ಡಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
54 : ಇಳೆಯಲ್ಲಿ ಬೆಳೆಯುವ ಎಲ್ಲಾ ಗಿಡಮರಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
55 : ಕಡಲು ಹೊಳೆಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
56 : ಬುಗ್ಗೆ ಚಿಲುಮೆಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
57 : ಜಲಚರಗಳೇ, ತಿಮಿಂಗಿಲಗಳೇ,
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
58 : ಆಕಾಶದ ಪಕ್ಷಿಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
59 : ಕಾಡು ಮೃಗಗಳೇ, ದನಕರುಗಳೇ
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
60 : ಮಾನವ ಜನಾಂಗಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
61 : ಇಸ್ರಯೇಲ್ ನಾಡೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
62 : ಸರ್ವೇಶ್ವರನ ಯಾಜಕರೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
63 : ಸರ್ವೇಶ್ವರನ ದಾಸರೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
64 : ಸಜ್ಜನರ ಜೀವಾತ್ಮಗಳೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
65 : ಸಂತರೇ, ದೀನಮನಸ್ಕರೇ, ಸರ್ವೇಶ್ವರನನ್ನು
ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
66 : ಹನನ್ಯ, ಅಜರ್ಯ, ಮಿಶಾಯೇಲರೇ
ಸರ್ವೇಶ್ವರನನ್ನು ಕೊಂಡಾಡಿ,
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.
ಏಕೆಂದರೆ ಅವರು ಪಾತಾಳದಿಂದ ನಮ್ಮನ್ನು
ಬಿಡುಗಡೆ ಮಾಡಿದ್ದಾರೆ;
ಮರಣದ ಹಿಡಿತದಿಂದ ತಪ್ಪಿಸಿದ್ದಾರೆ;
ಆವಿಗೆಯ ಮಧ್ಯೆಯಿಂದ, ಉರಿಯುವ
ಜ್ವಾಲೆಯಿಂದ,
ಹೌದು, ಬೆಂಕಿಯ ಒಡಲೊಳಗಿಂದ
ನಮ್ಮನ್ನು ಬಿಡಿಸಿ ರಕ್ಷಿಸಿದ್ದಾರೆ.
67 : ಸರ್ವೇಶ್ವರಸ್ವಾಮಿಗೆ ಧನ್ಯವಾದ ಸಲ್ಲಿಸಿ!
ಅವರು ಒಳ್ಳೆಯವರು, ಅವರ ಪ್ರೀತಿ ಶಾಶ್ವತ!
68 : ಸರ್ವೇಶ್ವರನನ್ನು ಆರಾಧಿಸುವವರೇ,
ದೇವಾದಿದೇವರನ್ನು ಕೊಂಡಾಡಿ,
ಅವರನ್ನು ಕೀರ್ತಿಸಿ,
ಅವರಿಗೆ ಕೃತಜ್ಞತಾಸ್ತುತಿಗೈಯಿರಿ.
ಅವರ ಪ್ರೀತಿ ಅನವರತ!