1 : ಜೆರುಸಲೇಮೇ, ಕಳಚಿಬಿಡು ನಿನ್ನ
ಶೋಕಾರ್ಥ ವಸ್ತ್ರಗಳನ್ನು
ಧರಿಸಿಕೋ ನಿತ್ಯಕ್ಕೆಂದು ದೇವರಿಂದ ಬರುವ
ಪ್ರಭಾವದ ಸೊಬಗನ್ನು.
2 : ತೊಟ್ಟುಕೋ ದೇವರಿಂದ ಬರುವ
ನೀತಿಯೆಂಬ ನಿಲುವಂಗಿಯನ್ನು
ಇಟ್ಟುಕೋ ತಲೆಯ ಮೇಲೆ
ಮಹಿಮೆಯೆಂಬ ಮುಕುಟವನ್ನು.
3 : ದೇವರೇ ನಿನ್ನ ತೇಜಸ್ಸನ್ನು ಹರಡುವರು
ಆಕಾಶದಡಿಯಿರುವ ಎಲ್ಲ ದಿಕ್ಕುಗಳಿಗು.
4 : ‘ನೀತಿಯಿಂದ ಶಾಂತಿ’, ‘ಭಕ್ತಿಯಿಂದ ಕೀರ್ತಿ’
ಎಂದು
ದೇವರೇ ನಿನ್ನನ್ನು ಹೆಸರಿಸುವರು
ಎಂದೆಂದಿಗು.
5 : ಜೆರುಸಲೇಮೇ, ಎದ್ದೇಳು, ಉನ್ನತಸ್ಥಾನದಲ್ಲಿ
ನಿಲ್ಲು
ಪೂರ್ವಾಭಿಮುಖವಾಗಿ ತಿರುಗಿಸು
ನಿನ್ನ ಕಣ್ಣುಗಳನ್ನು.
ದೇವರು ತಮ್ಮನ್ನು ನೆನೆಸಿಕೊಂಡರೆಂದು
ಹಿಗ್ಗುತಿಹರು ನಿನ್ನ ಮಕ್ಕಳು
ಪರಮಪಾವನನ ನುಡಿಯಂತೆ ಪೂರ್ವ ಪಶ್ಚಿಮ
ದಿಂದ ಕೂಡಿಬರುತಿಹರು ನೋಡು.
6 : ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ
ಅವರು ನಿನ್ನ ಬಿಟ್ಟುಹೋದರು.
ಈಗ ವೈಭವದಿಂದ ಹೊರಟು,
ಸಿಂಹಾಸನಾರೂಢರಾದವರಂತೆ
ಬರುತ್ತಿಹರು
ದೇವರೇ ಅವರನ್ನು ನಿನ್ನ ಬಳಿಗೆ
ಬರಮಾಡುತ್ತಿಹರು.
7 : ಇಸ್ರಯೇಲ್ ದೈವಪ್ರಭೆಯಲಿ ಸುರಕ್ಷಿತವಾಗಿ
ಸಾಗಬೇಕೆಂದು
ಅದಕ್ಕಾಗಿ ಉನ್ನತಬೆಟ್ಟಗಳು, ನೆಲೆಯಾದ
ಗುಡ್ಡಗಳು ತಗ್ಗಬೇಕೆಂದು
ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ
ನೆಲಸಮವಾಗಬೇಕೆಂದು
ದೇವರೇ ನೇಮಕಮಾಡಿರುವರು.
8 : ಆ ದೇವರ ಅಪ್ಪಣೆಯ ಪ್ರಕಾರ
ಇಸ್ರಯೇಲಿಗೆ
ನೆರಳು ನೀಡುವುವು ಕಾಡುಗಳು,
ಸುಗಂಧವಾಸನೆಯನ್ನು ಬೀರುವುವು
ಗಿಡಮರಗಳು.
9 : ದೇವರು ಇಸ್ರಯೇಲನ್ನು ನಡೆಸುವರು ತಮ್ಮ
ಮಹಿಮೆ ಪ್ರಕಾಶದಲ್ಲೆ
ಹರುಷದೊಡನೆ ತಮ್ಮಿಂದ ಬರುವ ಕರುಣೆ
ಹಾಗು ನ್ಯಾಯನೀತಿಗಳೊಡನೆ.