1 : ಈ ಗ್ರಂಥವನ್ನು ಬರೆದವನು ನೇರಿಯನ ಮಗ ಬಾರೂಕನು. ನೇರಿಯನು ಮಹ್ಸೆಯನಿಗೆ, ಮಹ್ಸೆಯನು ಚಿದ್ಕೀಯನಿಗೆ, ಚಿದ್ಕೀಯನು ಅಸಾದಿಯನಿಗೆ, ಅಸಾದಿಯನು ಹೆಲ್ಕೀಯನಿಗೆ ಹುಟ್ಟಿದರು.
2 : ಬಾಬಿಲೋನಿಯರು ಜೆರುಸಲೇಮ್ ನಗರವನ್ನು ಆಕ್ರಮಿಸಿ ಸುಟ್ಟು ಹಾಕಿದನಂತರ ಬಾರೂಕನು ಈ ಗ್ರಂಥವನ್ನು ಐದನೇ ವರ್ಷದ, ಐದನೇ ತಿಂಗಳಿನ ಏಳನೇ ದಿನದಲ್ಲಿ ಬಾಬಿಲೋನಿನಲ್ಲಿ ರಚಿಸಿದನು.
3 : ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆಗಿದ್ದ ಯೆಕೋನ್ಯನಿಗೆ ಹಾಗು ಈ ಗ್ರಂಥದ ವಾಚನವನ್ನು ಆಲಿಸಲು ಕೂಡಿ ಬಂದ ಜನರೆಲ್ಲರಿಗೆ
4 : ಅಂದರೆ, ಪ್ರಮುಖರು, ಅರಸನ ಮಕ್ಕಳು, ಊರ ಹಿರಿಯರು, ನದಿಯ ತೀರದಲ್ಲಿ ನೆಲೆಸಿದ್ದ ಚಿಕ್ಕವರು, ದೊಡ್ಡವರು- ಇವರೆಲ್ಲರಿಗೆ ಕೇಳಿಸುವಂತೆ ಈ ಗ್ರಂಥವನ್ನು ಓದಿದನು.
5 : ಈ ವಾಚನವನ್ನು ಕೇಳಿದವರೆಲ್ಲರು ಅತ್ತರು. ಉಪವಾಸಮಾಡಿ, ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರು.
6 : ಅಲ್ಲದೆ ಪ್ರತಿ ಒಬ್ಬನು ತನ್ನ ಶಕ್ತಿಗನುಸಾರವಾಗಿ ಹಣವನ್ನು ಶೇಖರಿಸಿದನು.
7 : ಅದನ್ನು ಜೆರುಸಲೇಮಿನಲ್ಲಿದ್ದ ಹಿಲ್ಕೀಯನ ಮಗನೂ ಶಲ್ಲೂಮನ ಮೊಮ್ಮಗನೂ ಆದ ಯಾಜಕ ಯೆಹೋಯಾಕೀಮನಿಗೂ ಅವನೊಂದಿಗೆ ಜೆರುಸಲೇಮಿನಲ್ಲಿದ್ದ ಎಲ್ಲ ಜನರಿಗೂ ಕಳುಹಿಸಿದನು.
8 : ಅದೇ ಸಮಯದಲ್ಲಿ ದೇವಾಲಯದಿಂದ ಕೊಳ್ಳೆಹೊಡೆಯಲಾಗಿದ್ದ ಪಾತ್ರೆಗಳನ್ನು ಮರಳಿ ಜುದೇಯನಾಡಿಗೆ ಕಳುಹಿಸಬೇಕೆಂದು ಬಾರೂಕನು ಸಿವಾನ್ ‘ಮಾಸದ’ ಹತ್ತನೇ ದಿನದಂದು ತೆಗೆದಿಟ್ಟಿದ್ದನು.
9 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಯೆಹೋಯಾಕೀಮನನ್ನು, ಅಧಿಪತಿಗಳನ್ನು, ಸೆರೆಯಾಳುಗಳನ್ನು, ಯೋಧರನ್ನು ಹಾಗೂ ನಾಡಿನಲ್ಲಿದ್ದ ಜನಸಾಮಾನ್ಯರನ್ನು ಬಾಬಿಲೋನಿಗೆ ತೆಗೆದುಕೊಂಡು ಬಂದಾದಮೇಲೆ ಈ ಬೆಳ್ಳಿಪಾತ್ರೆಗಳನ್ನೂ ಯೋಷೀಯನ ಮಗ ಹಾಗೂ ಜುದೇಯದ ಅರಸ ಚಿದ್ಕೀಯನು ಮಾಡಿಸಿದ್ದನು.
ಜೆರುಸಲೇಮಿಗೆ ಜನರ ಪತ್ರ
10 : ಆ ಸಂದರ್ಭದಲ್ಲಿ ಜನರು ಬರೆದ ಪತ್ರದ ಒಕ್ಕಣೆ ಹೀಗಿದೆ: ನೋಡಿ; ನಾವು ನಿಮಗೆ ಹಣವನ್ನು ಕಳುಹಿಸಿದ್ದೇವೆ. ಈ ಹಣದಿಂದ ದಹನ ಬಲಿಪಶುಗಳು, ದೋಷಪರಿಹಾರಕ ಬಲಿಪಶುಗಳು, ಧೂಪನೈವೇದ್ಯಗಳು ಮುಂತಾದವುಗಳನ್ನು ಸಿದ್ಧಪಡಿಸಿಕೊಳ್ಳಿ; ಅದೆಲ್ಲವನ್ನು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಬಲಿಪೀಠದ ಮೇಲೆ ಅರ್ಪಿಸಿರಿ.
11 : ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಹಾಗು ಅವನ ಮಗ ಬೆಲ್ಚಚ್ಚರನ ಸುಕ್ಷೇಮವನ್ನು ಹಾರೈಸಿರಿ; ಭೂಮ್ಯಾಕಾಶಗಳು ಇರುವವರೆಗೂ ಅವರು ಬದುಕಿಬಾಳಲಿ ಎಂದು ಪ್ರಾರ್ಥಿಸಿರಿ.
12 : ಹೀಗೆ ಸರ್ವೇಶ್ವರ ನಮಗೆ ಒಲವನ್ನು ಅನುಗ್ರಹಿಸುವರು; ನಮ್ಮ ಕಣ್ಣುಗಳನ್ನು ಕಳೆಗೊಳಿಸುವರು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಹಾಗೂ ಅವನ ಮಗ ಬೆಲ್ಚಚ್ಚರನ ಆಶ್ರಯದಲ್ಲಿ ನಾವು ಬಾಳುವೆವು. ಬಹುದಿನಗಳವರೆಗೆ ಸೇವೆಗೈಯುವೆವು. ಅವರ ದೃಷ್ಟಿಯಲ್ಲಿ ನಮಗೆ ದಯೆ ದೊರಕುವುದು.
13 : ನಮ್ಮ ದೇವರಾಗಿರುವ ಸರ್ವೇಶ್ವರನಲ್ಲಿ ನಮಗೋಸ್ಕರವೂ ಪ್ರಾರ್ಥಿಸಿರಿ. ಕಾರಣ, ನಾವು ಅವರಿಗೆ ವಿರುದ್ಧವಾಗಿ ದ್ರೋಹಗೈದಿದ್ದೇವೆ. ನಮ್ಮ ಮೇಲೆ ಅವರಿಗಿರುವ ಕೋಪೋದ್ರೇಕಗಳು ಇದುವರೆಗೂ ತೊಲಗಲಿಲ್ಲ.
14 : ಇದಲ್ಲದೆ ಹಬ್ಬದ ದಿನದಲ್ಲೂ ಇತರ ನಿಯಮಿತ ದಿನಾಚರಣೆಗಳಲ್ಲೂ ನಾವು ಕಳುಹಿಸುತ್ತಿರುವ ಈ ಗ್ರಂಥವನ್ನು ನೀವು ಮಹಾ ದೇವಾಲಯದಲ್ಲಿ ಓದಿಹೇಳಬೇಕು ಮತ್ತು ಪಾಪನಿವೇದನೆ ಮಾಡಬೇಕು.
ಪಾಪನಿವೇದನೆ
15 : ನೀವು ಮಾಡಬೇಕಾದ ಪಾಪನಿವೇದನೆ ಹೀಗಿರಲಿ: ನಮ್ಮ ದೇವರಾದ ಸರ್ವೇಶ್ವರ ಸತ್ಯ ಸ್ವರೂಪರು; ನಾವಾದರೋ ಇಂದು ನಾಚಿಕೆಗೀಡಾಗಿದ್ದೇವೆ. ನಾವು ಮಾತ್ರವಲ್ಲ, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು, ನಮ್ಮ ಅರಸರು,
16 : ಅಧಿಪತಿಗಳು, ಪ್ರವಾದಿಗಳು, ನಮ್ಮ ಪೂರ್ವಜರು ಎಲ್ಲರೂ ಅಂತೆಯೇ ನಾಚಿಕೆಗೀಡಾಗಿದ್ದೇವೆ.
17 : ಏಕೆಂದರೆ ದೇವರ ಮುಂದೆ ನಾವು ಪಾಪಿಗಳು, ಅವರಿಗೆ ಅವಿಧೇಯರಾಗಿ ನಡೆದುಕೊಂಡಿದ್ದೇವೆ.
18 : ನಾವು ನಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡಲಿಲ್ಲ; ಅವರು ನಮಗೆ ಕೊಟ್ಟ ಆಜ್ಞೆಗಳನ್ನು ಪಾಲಿಸಲಿಲ್ಲ.
19 : ನಮ್ಮ ದೇವರಾದ ಸರ್ವೇಶ್ವರ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ದಿನದಿಂದ ಇಂದಿನವರೆಗೂ ನಾವು ಅವರಿಗೆ ಅವಿಧೇಯರಾಗಿಯೇ ನಡೆದುಕೊಂಡಿದ್ದೇವೆ. ಅವರ ಮಾತನ್ನು ಕೇಳದೆ ಉದಾಸೀನರಾಗಿದ್ದೇವೆ.
20 : ಆದುದರಿಂದಲೇ ಉಪದ್ರವಗಳು ನಮಗೆ ಅಂಟಿಕೊಂಡಿವೆ. ಹಾಲೂ ಜೇನೂ ಹರಿಯುವ ನಾಡನ್ನು ನಮಗೆ ಕೊಡುವುದಕ್ಕಾಗಿ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ನಮ್ಮ ದೇವರಾದ ಸರ್ವೇಶ್ವರಸ್ವಾಮಿ ತಮ್ಮ ದಾಸ ಮೋಶೆಯ ಮೂಲಕ ಹಾಕಿಸಿದ ಶಾಪ ನಮ್ಮನ್ನು ಇಂದಿಗೂ ಬಿಟ್ಟಿಲ್ಲ.
21 : ನಮ್ಮ ದೇವರಾದ ಸರ್ವೇಶ್ವರ ನಮ್ಮ ಬಳಿಗೆ ಕಳುಹಿಸಿದ ಪ್ರವಾದಿಗಳು ನುಡಿದ ದೈವೋಕ್ತಿಗಳನ್ನು ನಾವು ಆಲಿಸದೆ, ಅವರ ಮಾತಿಗೆ ಕಿವಿಗೊಡದೆ ಹೋದೆವು.
22 : ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬನು ಅವನವನ ಹೃದಯ ದುಷ್ಪ್ರೇರಣೆಗೆ ಒಳಪಟ್ಟು, ಅನ್ಯದೇವತೆಗಳಿಗೆ ಪೂಜೆಮಾಡಿದ್ದಾನೆ. ನಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ಮಾಡಿದ್ದಾನೆ.