1 : ಮಹಿಳೆಯರು
ಸಂಶಯಬೇಡ ನಿನ್ನ ಹೆಂಡತಿಯ ಬಗ್ಗೆ
ನಿನ್ನ ವಿರುದ್ಧ ಕೆಟ್ಟಪಾಠ ಕಲಿಸಬೇಡ
ಅವಳಿಗೆ.
2 : ನಿನ್ನ ಪ್ರಾಣವನ್ನು ಒಪ್ಪಿಸಬೇಡ ಸ್ತ್ರೀಯ ಕೈಗೆ
ತುಳಿದುಬಿಟ್ಟಾಳು ಅವಳು ನಿನ್ನನ್ನೆ.
3 : ಹೋಗಬೇಡ ವೇಶ್ಯೆಯ ಬಳಿಗೆ
ಸಿಕ್ಕಿಬಿದ್ದೀಯೆ ಅವಳ ಪಾಶದಲ್ಲೆ.
4 : ಗಾಯಕಿಯ ಸಂಗವನ್ನು ಬೆಳೆಸದಿರು
ಅವಳ ಯತ್ನಗಳಿಗೆ ಸಿಕ್ಕಿಬೀಳದಿರು.
5 : ಯುವತಿಯ ಮೇಲೆ ಕಣ್ಣಿಡಬೇಡ
ಅವಳ ನಿಮಿತ್ತ ತೆರಬೇಕಾದೀತು ದಂಡ.
6 : ಜಾರಸ್ತ್ರೀಯರ ಮೇಲೆ ಮನಸ್ಸಿಡಬೇಡ
ಹೀಗೆ ಸೊತ್ತೆಲ್ಲವನ್ನೂ ಕಳೆದುಕೊಳ್ಳಬೇಡ.
7 : ಊರ ಬೀದಿಗಳಲಿ ನಡೆವಾಗ ಅತ್ತಿತ್ತ ದೃಷ್ಟಿ
ಬೀರದಿರು
ಅಲ್ಲಿನ ನಿರ್ಜನ ಸ್ಥಳಗಳಲ್ಲಿ ತಿರುಗಾಡದಿರು.
8 : ನಿನ್ನ ದೃಷ್ಟಿಯನ್ನು ಹೊರಳಿಸಿಬಿಡು
ಚೆಲುವೆಯಿಂದ
ಪರಸ್ತ್ರೀಯ ಮೇಲೆ ಕಣ್ಣಿಡಬೇಡ
ಆಕೆಯ ಚೆಲುವಿನ ನಿಮಿತ್ತ.
ಅನೇಕರು ಮೋಸಹೋಗಿರುವರು
ಸ್ತ್ರೀ ಸೌಂದರ್ಯದಿಂದ
ಬೆಂಕಿಯಂತೆ ಮೋಹ ಉದ್ರೇಕಗೊಳ್ಳುವುದು
ಅದರಿಂದ.
9 : ಊಟಮಾಡಬೇಡ ಗಂಡನುಳ್ಳ
ಗರತಿಯರೊಂದಿಗೆ
ಕುಡಿದು ಮತ್ತನಾಗಬೇಡ ಅವಳೊಂದಿಗೆ.
ಒಂದು ವೇಳೆ ನಿನ್ನ ಮನಸ್ಸು ಒಲಿದೀತು
ಆಕೆಯ ಕಡೆಗೆ
ವಿನಾಶಕ್ಕೆ ನಿನ್ನನ್ನು ಒಯ್ದೀತು ಅಂಥ ಬಯಕೆ.
10 : ಇತರರೊಂದಿಗೆ ಒಡನಾಟ
ಬಿಟ್ಟುಬಿಡಬೇಡ ಹಳೆಯ ಗೆಳೆಯನನ್ನು
ಅವನಿಗೆ ಸಮಾನನಲ್ಲ ಹೊಸಬನು.
ಹೊಸ ಗೆಳೆಯನು ಹೊಸ ದ್ರಾಕ್ಷಾರಸವಿದ್ದಂತೆ
ಅದನ್ನು ಆನಂದದಿಂದ ಕುಡಿಯುವೆ
ಹಳೆಯದಾದಾಗಲೆ.
11 : ಅಸೂಯೆಪಡಬೇಡ ದುರಾಚಾರಿಯ
ಏಳಿಗೆಯನ್ನು ಕಂಡು
ಏನಾದೀತೆಂಬುದನ್ನು ನೀನರಿಯೆ ಅವನ
ಅಂತ್ಯ ಗತಿಯು.
12 : ಸಂತೋಷಿಸಬೇಡ ದುರುಳರು ಮೆಚ್ಚುವ
ವಸ್ತುಗಳಲಿ
ದಂಡನೆಯಾಗದೆ ಅವರು ಸಮಾಧಿ
ಸೇರರೆಂಬುದು ನೆನಪಿನಲ್ಲಿರಲಿ.
13 : ದೂರವಿರು ನಿನ್ನನ್ನು ಕೊಲ್ಲಲು
ಅಧಿಕಾರವುಳ್ಳವನಿಂದ
ಆಗ ಸ್ವಂತತ್ರನಾಗಿರುವೆ ಮರಣಭಯದ
ಶಂಕೆಯಿಂದ;
ತಪ್ಪುಮಾಡದಿರು ಅವನ ಬಳಿಯಲ್ಲಿ;
ತೆಗೆದಾನು ಅವನು ನಿನ್ನ ಪ್ರಾಣವನ್ನು
ತಿಳಿದುಕೋ ಬಲೆಬೀಸಿರುವಲ್ಲಿ
ನೀ ಹೋಗುತ್ತಿರುವೆಯೆಂಬುದನ್ನು,
ಊರ ಕೋಟೆಯ ಮೇಲೆ
ನಡೆಯುತ್ತಿರುವೆಯೆಂಬುದನ್ನು.
14 : ನೆರೆಯವನನ್ನು ಅರ್ಥಮಾಡಿಕೊ
ನಿನ್ನ ಶಕ್ತಿಯ ಮೇರೆಗೆ
ಸಮಾಲೋಚನೆ ನಡೆಸು ಬುದ್ಧಿವಂತನೊಂದಿಗೆ.
15 : ನಿನ್ನ ಮಾತುಕತೆ ನಡೆಯಲಿ
ಬುದ್ಧಿವಂತರೊಂದಿಗೆ
ಮಾತನಾಡು ಮಹೋನ್ನತರ ಧರ್ಮ
ಶಾಸ್ತ್ರವನ್ನು ಕುರಿತೆ.
16 : ಸಜ್ಜನರು ನಿನ್ನೊಂದಿಗೆ ಉಣ್ಣಲಿ, ಕುಡಿಯಲಿ
ದೇವರ ಭಯಭಕ್ತಿಯಲ್ಲೇ ನಿನಗೆ
ಹೆಚ್ಚಳವಿರಲಿ.
17 : ಕಲೆಬಲ್ಲವನ ಕೆಲಸದ ನಿಮಿತ್ತ ಕಲಾಕೃತಿ
ಯನ್ನು ಹೊಗಳುತ್ತಾರೆ
ಜನನಾಯಕನು ತನ್ನ ಭಾಷಣದಿಂದ
ಜ್ಞಾನಿಯೆನಿಸಿಕೊಳ್ಳುತ್ತಾನೆ.
18 : ಬಾಯಿಬಡುಕನು ತನ್ನೂರಿಗೆ ಅಪಾಯಕರ
ಮಾತಿನಲ್ಲಿ ದುಡುಕುವವನು ದ್ವೇಷಕರ.