1 : ಸಾಮಾನ್ಯ ಜಾಣತನ
ವಾದಿಸಬೇಡ ಬಲಶಾಲಿಯೊಂದಿಗೆ
ಸಿಕ್ಕಿಬಿದ್ದೀಯೆ ಅವನ ಕೈಯೊಳಗೆ !
2 : ಸಿರಿವಂತನೊಂದಿಗೆ ಹೋರಾಡಬೇಡ
ನಿನಗಿಂತಲೂ ಅವನಿಗಿದೆ ಹೆಚ್ಚಾದ ಐಶ್ವರ್ಯ.
ಚಿನ್ನವು ಅನೇಕರನ್ನು ವಿನಾಶಕ್ಕೆ ಒಯ್ದಿದೆ
ಅಂತೆಯೇ ಅರಸರ ತಲೆಯನ್ನೂ ಕೆಡಿಸಿದೆ.
3 : ಬಾಯಿಬಡುಕನೊಂದಿಗೆ ವಾದಿಸಬೇಡ
ಉರಿವ ಅವನ ಬೆಂಕಿಗೆ ಎಣ್ಣೆ ಹೊಯ್ಯಬೇಡ.
4 : ಕುಚೋದ್ಯ ಮಾಡಬೇಡ ಉದ್ಧಟನೊಂದಿಗೆ
ಅವನು ನಿನ್ನ ಹಿರಿಯರನ್ನೂ ಈಡು
ಮಾಡಿಯಾನು ಅವಮಾನಕ್ಕೆ.
5 : ಹಂಗಿಸಬೇಡ ಪಾಪಕ್ಕೆ ವಿಮುಖರಾಗುವವರನ್ನು
ಮರೆಯದಿರು ನಾವೆಲ್ಲ ಶಿಕ್ಷೆಗೆ
ಪಾತ್ರರೆಂಬುದನು.
6 : ಮುಪ್ಪಿನವರನ್ನು ಅವಮಾನಪಡಿಸದಿರು
ನಮ್ಮಲ್ಲಿಯೂ ಕೆಲವರು ಮುದುಕರಾಗಬಹುದು!
7 : ಸತ್ತವನನ್ನು ಕಂಡು ಸಂತೋಷಪಡಬೇಡ
ನಾವೆಲ್ಲರೂ ಸಾಯಬೇಕೆಂಬುದನ್ನು
ಮರೆಯಬೇಡ
8 : ಅಲಕ್ಷ್ಯಮಾಡಬೇಡ ಬುದ್ಧಿವಂತರ
ಸಂಭಾಷಣೆಯನು
ಮನನಮಾಡಿಕೊ ಅಂಥವರ
ಜ್ಞಾನೋಕ್ತಿಗಳನು
ಏಕೆನೆ, ಗಳಿಸುವೆ ಅವರಿಂದ ಸುಬೋಧೆಯನು
ಕಲಿಯುವೆ ಘನವಂತರಿಗೆ ಸೇವೆಮಾಡುವ
ರೀತಿಯನು.
9 : ಹಿರಿಯರ ಮಾತುಕತೆಗಳನ್ನು ಅಲಕ್ಷಿಸಬೇಡ,
ಅವರು ಸಹ ಕಲಿತುಕೊಂಡರಲ್ಲವೆ
ತಮ್ಮ ಹಿರಿಯರಿಂದ?
10 : ಪಾಪಿಯ ಬೆಂಕಿಯನ್ನು ಹೊತ್ತಿಸದಿರು
ಅವನ ಕಿಚ್ಚಿನಲ್ಲಿ ಬೆಂದು ಹೋಗದಿರು.
11 : ಸಿಟ್ಟಿನಿಂದ ಎದ್ದೇಳಬೇಡ
ಧರ್ಮನಿಂದಕನ ಎದುರಿನಲ್ಲಿ
ಅವನು ನಿನ್ನ ಹಿಡಿಯಲು ಹವಣಿಸಿಯಾನು
ಮಾತಿನಲ್ಲಿ.
12 : ಸಾಲ ಕೊಡಬೇಡ ನಿನಗಿಂತ ಬಲಿಷ್ಠನಿಗೆ
ಕೊಟ್ಟರೆ, ಕಳಕೊಂಡವನಂತಿರುವೆ.
13 : ಶಕ್ತಿಮೀರಿ ಹೊಣೆಯಾಗಿ ನಿಲ್ಲಬೇಡ ಯಾರಿಗೂ
ನಿಂತರೆ ಸಿದ್ಧನಾಗಿರು ಆ ಸಾಲವನ್ನು
ತೀರಿಸಲು.
14 : ದಾವಾ ಹಾಕಬೇಡ ನ್ಯಾಯಾಧಿಪತಿಗೆ
ವಿರುದ್ಧವಾಗಿ
ಅವನ ಸ್ಥಾನನೋಡಿ, ತೀರ್ಪು ಕೊಟ್ಟಾರು
ಅವನ ಪರವಾಗಿ.
15 : ಪ್ರಯಾಣಮಾಡಬೇಡ ದುಡುಕುವ
ವ್ಯಕ್ತಿಯೊಂದಿಗೆ
ಅವನು ಗುರಿಪಡಿಸಿಯಾನು ನಿನ್ನನ್ನು ದುಃಖಕೆ;
ಅವನು ಮಾಡುವನು ತನ್ನ ಮನಸ್ಸಿಗೆ ಬಂದಂತೆ
ಅವನ ಅವಿವೇಕತನದಿಂದ ನೀನೂ
ಹಾಳಾಗುವೆ ಅವನೊಂದಿಗೆ.
16 : ಕಲಹ ಮಾಡಬೇಡ ಕೋಪಿಷ್ಠನೊಂದಿಗೆ
ಏಕಾಂತದಲಿ ಹೋಗಬೇಡ ಅವನ ಜೊತೆಗೆ;
ರಕ್ತಕ್ಕೆ ಬೆಲೆಯಿಲ್ಲ ಅವನ ದೃಷ್ಟಿಯಲಿ
ನಿನ್ನನ್ನು ಬಡಿದುಬಿಟ್ಟಾನು ನೆರವೇ ಇಲ್ಲದ
ಸ್ಥಳದಲಿ.
17 : ಮೂರ್ಖನೊಂದಿಗೆ ಸಮಾಲೋಚನೆ
ಮಾಡಬೇಡ
ಏಕೆಂದರೆ ಅವನು ಗುಟ್ಟನ್ನು ಮುಚ್ಚಿಡಲಾರ.
18 : ಗುಟ್ಟಿನ ಕೆಲಸ ಮಾಡಬೇಡ ಅಪರಿಚಿತನ
ಮುಂದೆ
ನಾಳೆ ಏನು ಮಾಡಿಯಾನೆಂಬುದು ನೀನರಿಯೆ.
19 : ನಿನ್ನ ಹೃದಯವನ್ನು ತೆರೆಯಬೇಡ
ಕಂಡಕಂಡವರಿಗೆ
ಅವರು ಪ್ರತೀಕಾರ ಮಾಡಿಯಾರು ನಿನಗೆ.