Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಹಲವಿಧ ಬುದ್ಧಿಮತಿಗಳು ಕೆಟ್ಟದ್ದನ್ನು ಬಿಟ್ಟುಬಿಡು; ನಿನಗೆ ಯಾವ ಕೇಡೂ ತಟ್ಟದು.
2 : ದುಷ್ಟನಿಂದ ದೂರವಿರು; ಬಿಟ್ಟುಹೋಗುವನವನು ನಿನ್ನನು.
3 : ಮಗನೇ, ಬಿತ್ತನೆ ಮಾಡಬೇಡ ಅಧರ್ಮವೆಂಬ ನೇಗಿಲು ಗೆರೆಗಳಲಿ ಆಗ ಕೊಯಿಲು ಮಾಡುವುದಿಲ್ಲ ಏಳರಷ್ಟು ಅದರಲಿ.
4 : ಸರ್ವೇಶ್ವರನಿಂದ ಉನ್ನತ ಪದವಿಯನ್ನು ಹುಡುಕಬೇಡ ಅರಸನಿಂದ ಗೌರವಸ್ಥಾನವನ್ನು ಅರಸಬೇಡ.
5 : ನೀತಿವಂತನೆಂದು ತೋರಿಸಿಕೊಳ್ಳಬೇಡ ಸರ್ವೇಶ್ವರನ ಸನ್ನಿಧಿಯಲಿ ನಿನ್ನ ಪಾಂಡಿತ್ಯಕ್ಕಾಗಿ ಕೊಚ್ಚಿಕೊಳ್ಳಬೇಡ ಅರಸನ ಎದುರಿನಲಿ.
6 : ಪ್ರಯತ್ನಪಡಬೇಡ ನ್ಯಾಯಾಧೀಶನಾಗಲು ನಿನ್ನ ಶಕ್ತಿ ಸಾಲದಿರಬಹುದು ಅಧರ್ಮವನ್ನು ನಿರ್ಮೂಲಗೊಳಿಸಲು.
7 : ಊರಜನರ ವಿರುದ್ಧ ದ್ರೋಹ ಮಾಡಬೇಡ ಜನರ ಎದುರಿನಲ್ಲಿ ನಿನ್ನನ್ನೇ ತಗ್ಗಿಸಿಕೊಳ್ಳಬೇಡ.
8 : ಕೂಡಿಸಬೇಡ ಪಾಪಕ್ಕೆ ಪಾಪ, ಒಂದಕ್ಕಾದರೂ ತಪ್ಪದು ನಿನಗೆ ದಂಡ.
9 : ಹೇಳಿಕೊಳ್ಳಬೇಡ ನೀನರ್ಪಿಸುವ ಕಾಣಿಕೆಗಳನ್ನು ದೇವನೀಕ್ಷಿಸುವನೆಂದು ಮಹೋನ್ನತನಿಗೆ ನೀನರ್ಪಿಸುವ ಬಲಿಗಳನ್ನು ಆತ ಸ್ವೀಕರಿಸುವನೆಂದು.
10 : ಪ್ರಾರ್ಥನೆ ಮಾಡುವಾಗ ಬೇಸರಪಡಬೇಡ ದಾನಧರ್ಮ ಮಾಡುವುದನ್ನು ಅಲಕ್ಷಿಸಬೇಡ.
11 : ದುಃಖಿತರನ್ನು ಕಂಡು ಹಾಸ್ಯ ಮಾಡಬೇಡ ತಗ್ಗಿಸುವಾತನಿಗೆ ಏರಿಸಲೂ ಸಾಧ್ಯ.
12 : ಸುಳ್ಳು ಕಲ್ಪಿಸಬೇಡ ಸಹೋದರನಿಗೆ ವಿರೋಧವಾಗಿ ಅಂತೆಯೇ ನಿನ್ನ ಸ್ನೇಹಿತನಿಗೆ ವಿರೋಧವಾಗಿ.
13 : ಸುಳ್ಳು ಎಂಥದ್ದೇ ಇರಲಿ, ಅದರ ಹವ್ಯಾಸಬೇಡ ಹಿತವಾಗದು ನಿನಗೆ ಇಂಥ ಹವ್ಯಾಸದಿಂದ.
14 : ಮಿತಿಮೀರಿ ಮಾತಾಡಬೇಡ ಹಿರಿಯರ ಮಧ್ಯೆ ಪ್ರಾರ್ಥನೆಯ ಸಮಯದಲ್ಲಿ ಬೇಕಿಲ್ಲ ಮಾತಿನ ಪುನರಾವರ್ತನೆ.
15 : ಹೀನೈಸಬೇಡ ಕಾಯಕಷ್ಟವನು, ಒಕ್ಕಲುತನವನು ನೇಮಿಸಿರುವನು ಅವುಗಳನು ಪರಾತ್ಪರನು.
16 : ಸೇರಿಕೊಳ್ಳಬೇಡ ಪಾಪಾತ್ಮರ ಗುಂಪಿಗೆ ದಂಡನೆ ಬಂದೇ ತೀರುವುದು ಅಧರ್ಮಿಗಳಿಗೆ.
17 : ನಿನ್ನನ್ನೇ ಬಹಳವಾಗಿ ತಗ್ಗಿಸಿಕೊ ದೇವಕೋಪಾಗ್ನಿ ವಿಳಂಬವಾಗದೆಂದು ನೆನಸಿಕೊ.
18 : ಇತರರೊಂದಿಗೆ ಒಡನಾಟ ಸ್ನೇಹಿತನಿಗೆ ಪ್ರತಿಯಾಗಿ ಇನ್ನಾವ ಆಸ್ತಿಯನ್ನೂ ಆರಿಸಿಕೊಳ್ಳಬೇಡ ನಂಬಿಕಸ್ಥ ಸಹೋದರನಿಗೆ ಬದಲು ಓಫೀರಿನ ಚಿನ್ನವನ್ನೂ ಆಯ್ದುಕೊಳ್ಳಬೇಡ.
19 : ಬುದ್ಧಿ ಸುಗುಣಗಳಿಂದ ಕೂಡಿದ ಹೆಂಡತಿಯನು ಕಳೆದುಕೊಳ್ಳಬೇಡ ಅವಳ ಶೀಲ ಬಂಗಾರಕ್ಕಿಂತಲೂ ಅಮೂಲ್ಯ.
20 : ಕೇಡು ಬಗೆಯಬೇಡ ನಂಬಿಕೆಯಿಂದ ದುಡಿಯುವ ಮನೆಯಾಳಿಗೆ, ತನ್ನನ್ನೇ ಸಂಪೂರ್ಣವಾಗಿ ಒಪ್ಪಿಸಿಕೊಂಡ ಕೂಲಿಯಾಳಿಗೆ.
21 : ಒಳ್ಳೆಯ ಮನೆಯಾಳನ್ನು ಕಾಣು ಪ್ರೀತಿಯಿಂದ ಅವನ ಬಿಡುಗಡೆಯ ಬಗ್ಗೆ ವರ್ತಿಸದಿರು ವಂಚನೆಯಿಂದ.
22 : ನಿನಗೆ ದನಕರುಗಳುಂಟೋ? ಇದ್ದರೆ ಅವುಗಳ ಕಡೆ ಲಕ್ಷ್ಯವಿರಲಿ ನಿನಗೆ ಪ್ರಯೋಜನಕರವಾಗಿದ್ದರೆ ಅವು ನಿನ್ನ ಬಳಿಯಲ್ಲೇ ಇರಲಿ.
23 : ಮಡದಿ ಮಕ್ಕಳು ನಿನಗೆ ಮಕ್ಕಳಿದ್ದಾರೆಯೇ? ಶಿಕ್ಷಣ ನೀಡು ಅವರಿಗೆ ಅವರನ್ನು ಸ್ವಾಧೀನದಲ್ಲಿಟ್ಟುಕೊ ಬಾಲ್ಯದಿಂದಲೆ.
24 : ನಿನಗೆ ಹೆಣ್ಣುಮಕ್ಕಳಿದ್ದಾರೆಯೇ? ಅವರ ದೇಹವನು ಕಾಪಾಡು ಹೆಚ್ಚಿನ ಮಮತೆಯಿಂದ ಸ್ವೇಚ್ಛೆಯಾಗಿರಲು ಬಿಡದಿರು.
25 : ನಿನ್ನ ಮಗಳನ್ನು ಮದುವೆ ಮಾಡಿಕೊಡು; ಅದೊಂದು ಮುಖ್ಯ ಕಾರ್ಯ ಮುಗಿದಂತೆ. ಆದರೆ ಆಕೆಯನ್ನು ಕೊಡಬೇಕು ಬುದ್ಧಿವಂತನಾದವನಿಗೆ.
26 : ನಿನ್ನ ಮೆಚ್ಚಿಗೆಗೆ ತಕ್ಕ ಹೆಂಡತಿಯಿದ್ದರೆ, ಅವಳನ್ನು ಓಡಿಸಬೇಡ ನಿನಗೆ ಪ್ರೀತಿಯಿಲ್ಲದೆ ಹೋದರೆ, ಅಂಥವಳನ್ನು ನಂಬಬೇಡ.
27 : ಹೆತ್ತವರು ಹೃತ್ಪೂರ್ವಕವಾಗಿ ತಂದೆಯನ್ನು ಸನ್ಮಾನಿಸು ತಾಯಿಯ ಪ್ರಸವವೇದನೆಯನ್ನು ಮರೆಯದಿರು.
28 : ನೆನಪಿರಲಿ, ನೀನು ಜನ್ಮತಾಳಿದ್ದು ಅವರಿಂದಲೇ ಅಲ್ಲವೆ? ನಿನಗೆ ಅವರು ಮಾಡಿದ್ದಕ್ಕೆ ಪ್ರತಿಯಾಗಿ ಏನು ಈಡು ಕೊಡಬಲ್ಲೆ?
29 : ಯಾಜಕರು ಪೂರ್ಣಹೃದಯದಿಂದ ದೇವರಿಗೆ ಭಯಪಡು ಆತನ ಯಾಜಕರಿಗೆ ಸನ್ಮಾನ ಮಾಡು.
30 : ಪೂರ್ಣಶಕ್ತಿಯಿಂದ ಪ್ರೀತಿಸು ನಿನ್ನ ಸೃಷ್ಟಿಕರ್ತನನು ಬಿಟ್ಟು ಹೋಗಬೇಡ ಆತನ ದಾಸರನು.
31 : ದೇವರಿಗೆ ಭಯಪಡು; ಯಾಜಕರಿಗೆ ಮರ್ಯಾದೆ ಕೊಡು. ಪ್ರಥಮ ಫಲ, ಪ್ರಾಯಶ್ಚಿತ್ತ ಬಲಿ, ತೊಡೆಯ ಕಾಣಿಕೆ ಶುದ್ಧೀಕರಣ ಬಲಿ, ಪವಿತ್ರ ವಸ್ತುಗಳ ಪ್ರಥಮ ಕೊಡುಗೆ ಇವುಗಳನ್ನು ಸಲ್ಲಿಸು ಆ ಯಾಜಕರಿಗೆ ನಿನಗೆ ವಿಧಿಸಲ್ಪಟ್ಟ ಮೇರೆಗೆ.
32 : ದೀನ-ದಲಿತರು ಬಡವನಿಗೆ ಕೊಡುಗೆ ನೀಡು ಧಾರಾಳವಾಗಿ ಈ ಪರಿ ಆಶೀರ್ವಾದ ಪಡೆವೆ ಪರಿಪೂರ್ಣವಾಗಿ.
33 : ದಾನಮಾಡು ಎಲ್ಲ ಜೀವಾತ್ಮಗಳಿಗೆ ದಯೆತೋರದೆ ಇರಬೇಡ ಸತ್ತವನಿಗೆ.
34 : ದೂರ ಹೋಗಬೇಡ ಅಳುವವರಿಂದ ದುಃಖಪಡು ದುಃಖಿಸುವವರ ಸಂಗಡ.
35 : ಆಲಸ್ಯವಾಗಬಾರದು ವ್ಯಾಧಿಗ್ರಸ್ತರಿಗೆ ನೀಡುವ ಭೇಟಿಯಿಂದ ಪ್ರೀತಿಪಾತ್ರನಾಗುವೆ ನೀನು ಇಂಥ ಸತ್ಕಾರ್ಯಗಳಿಂದ.
36 : ನಿನ್ನ ಅಂತ್ಯವನು ಸ್ಮರಿಸಿಕೊ ಎಲ್ಲ ವ್ಯವಹಾರಗಳಲ್ಲು ಆಗ ನೀನು ಪಾಪದಲ್ಲಿ ಬೀಳುವುದಿಲ್ಲ ಎಂದಿಗು.

· © 2017 kannadacatholicbible.org Privacy Policy