1 : ಲಜ್ಜಾಪಮಾನಗಳು ಕೆಟ್ಟ ಹೆಸರಿನಿಂದ
ಬರುತ್ತವೆ.
ಎರಡು ನಾಲಗೆಯುಳ್ಳ ಪಾಪಿಗಳ ಗತಿ
ಇಂತಹುದೇ.
2 : ಆಶಾಪಾಶದಿಂದ ಉಬ್ಬಿಹೋಗಬೇಡ
ಮನಸ್ಸು ಬಂದಂತೆ
ನಿನ್ನ ಹೃದಯವನ್ನು ಅವು ಸೀಳಿಬಿಟ್ಟಾವು
ಹೋರಿಯಂತೆ.
3 : ನಿನ್ನ ಎಲೆಗಳನ್ನು ನೀನೇ ತಿಂದು ಫಲವನ್ನು
ಹಾಳುಮಾಡಿಕೊಳ್ಳುವೆ
ಅಂತಿಮವಾಗಿ, ಒಣಗಿದ ಬರಲುಮರದಂತೆ
ನಿಂತುಕೊಳ್ಳುವೆ.
4 : ಯಾವನಲ್ಲಿ ಕೆಟ್ಟ ಮನಸ್ಸಿದೆಯೋ
ಅದು ಕೆಡಿಸುವುದು ಅವನನ್ನೆ
ಅವನನ್ನು ನಗೆಗೀಡು ಮಾಡುವುದದು
ವೈರಿಗಳ ಎದುರಿನಲ್ಲೆ.
5 : ಸವಿನುಡಿ ಹೆಚ್ಚಿಸುವುದು ಸ್ನೇಹಿತರನ್ನು
ಸರಳ ನುಡಿ ಹೆಚ್ಚಿಸುವುದು ಸತ್ಕಾರವನ್ನು.
6 : ಸಮಾಧಾನದಿಂದ ವರ್ತಿಸು ಹಲವರೊಡನೆ
ಸಲಹೆಗಾರ ಮಾತ್ರ ನಿನಗಿರಲಿ
ಸಾವಿರದಲ್ಲೊಬ್ಬನೇ.
7 : ಸ್ನೇಹಬೆಳೆಸುವ ಮುನ್ನ ವ್ಯಕ್ತಿಯನ್ನು ಪರೀಕ್ಷಿಸು
ಯಾರನ್ನೂ ಕೂಡಲೇ ನಂಬಿಬಿಡಲು
ಅವಸರಪಡದಿರು.
8 : ಸ್ನೇಹಬೆಳೆಸುವ ಗೆಳೆಯರಿದ್ದಾರೆ ಸಮಯ
ಸಾಧಕರಾಗಿ
ಕೈಕೊಡುವರವರು ನಿನಗೆ ಕಷ್ಟಕಾಲದಲಿ.
9 : ಇಂದು ಗೆಳೆಯ, ನಾಳೆ ಶತ್ರು ಆಗುವವನೂ
ಇದ್ದಾನೆ
ಇಂಥವನು ನಿನ್ನೊಡನೆ ಜಗಳವಾಡಿ
ನಿನ್ನ ಮಾನಕಳೆಯುತ್ತಾನೆ.
10 : ಸಹವಾಸ ಮಾಡುವವರಿದ್ದಾರೆ
ನಿನ್ನ ತಿಂಡಿ ತೀರ್ಥಕ್ಕಾಗಿ
ನಿನ್ನ ಸಂಗಡ ಇರುವುದಿಲ್ಲ ಕಷ್ಟದಲ್ಲಿ
ಸಹಾಯ ಮಾಡಲಿಕ್ಕಾಗಿ.
11 : ನಿನ್ನ ಸುಖದ ದಿನಗಳಲ್ಲಿ
ಪ್ರಾಣಸ್ನೇಹಿತನಂತಿರುವನು
ನಿನ್ನ ಆಳುಹೋಳುಗಳನ್ನು ಬೆದರಿಸಿ
ಕೆಲಸಮಾಡಿಸಿಕೊಳ್ಳುವನು
12 : ನಿನ್ನ ದುಃಖದ ದಿನಗಳಲ್ಲಿ
ವಿರೋಧಿಯಾಗುವನು
ತನ್ನ ಮುಖವನ್ನು ನಿನ್ನಿಂದ ಮರೆಸಿಕೊಳ್ಳುವನು.
13 : ನಿನ್ನ ವೈರಿಗಳಿಂದ ಆದಷ್ಟು ದೂರವಿರು
ನಿನ್ನ ಸಂಗಡಿಗರ ವಿಷಯದಲ್ಲಿ
ಎಚ್ಚರಿಕೆಯಿಂದಿರು.
14 : ನಂಬಿಗಸ್ಥ ಗೆಳೆಯ,
ಸುರಕ್ಷಿತ ಆಶ್ರಯಗಿರಿಯಂತೆ
ಅಂಥವನು ಸಿಕ್ಕುವುದು ಸಂಪತ್ತಿನ
ನಿಧಿ ಸಿಕ್ಕಿದಂತೆ.
15 : ಯಾವುದೂ ಸಾಟಿಯಿಲ್ಲ ನಂಬಿಕಸ್ಥ
ಗೆಳೆಯನಿಗೆ
ಅಷ್ಟಿಷ್ಟಲ್ಲ ಅಂಥವನ ಶ್ರೇಷ್ಠತೆ.
16 : ನಂಬಿಕಸ್ಥ ಗೆಳೆಯ ಸಂಜೀವಿನಿಯಂತೆ
ಸಿಗುವನವನು ದೇವರಿಗೆ
ಭಯಪಡುವವನಿಗೆ.
17 : ದೇವಭಕ್ತನು ಸ್ನೇಹಿತನನ್ನು ಆಪ್ತನನ್ನಾಗಿಸಿ
ಕೊಳ್ಳುವನು,
ಏಕೆಂದರೆ ತನ್ನಂತೆಯೇ ಅವನನ್ನು ಕಂಡು
ಭಾವಿಸುವನು.
18 : ಸುಜ್ಞಾನದಿಂದ ಕಲಿಕೆ
ಮಗನೇ, ತಾರುಣ್ಯದಿಂದಲೆ ಆರಿಸಿಕೊ
ಶಿಕ್ಷಣವನು,
ಕೂದಲು ನರೆಯುವತನಕ ಹೊಂದುವೆ
ಸುಜ್ಞಾನವನು.
19 : ಜ್ಞಾನದ ಕೃಷಿಮಾಡು ಉತ್ತು ಬಿತ್ತುವ
ರೈತನಂತೆ
ಉತ್ತಮ ಫಲಕ್ಕಾಗಿ ಕಾದುಕೊಂಡಿರುವವನಂತೆ.
ಅದರ ಕೃಷಿ ಶ್ರಮವು ಅಲ್ಪ
ಅದರಿಂದ ಲಭಿಸುವ ಫಲವು ತ್ವರಿತ;
20 : ನಿಷ್ಠೂರವಾಗಿರುವುದದು ಶಿಕ್ಷಣವಿಲ್ಲದವರಿಗೆ
ಅದರ ನೆಲೆ ಹಿಡಿಸದು ವಿವೇಕಹೀನರಿಗೆ;
21 : ವಿವೇಕಹೀನನಿಗೆ ಭಾರವದು ಬಂಡೆಯಂತೆ
ತಳ್ಳಿಹಾಕುವನದನ್ನು ತಡಮಾಡದೆ.
22 : ಶಿಕ್ಷಣ ತನ್ನ ಹೆಸರಿಗೆ ತಕ್ಕಂತೆ ಕಠಿಣ
ಆಗದದು ಎಲ್ಲರಿಗೂ ಪ್ರತ್ಯಕ್ಷ.
23 : ಮಗನೇ, ಆಲಿಸು ನನ್ನ ನೀತಿಯ ನುಡಿಯನು
ಅಲ್ಲಗಳೆಯಬೇಡ ನನ್ನ ಸಲಹೆಯನು.
24 : ನಿನ್ನ ಕಾಲುಗಳಿಗೆ ಕಟ್ಟು ಸುಜ್ಞಾನದ
ಸಂಕೋಲೆಗಳನು
ನಿನ್ನ ಕೊರಳಲ್ಲಿ ಧರಿಸಿಕೊ
ಅದರ ಸರಪಣಿಯನು.
25 : ಹೊತ್ತುಕೊ ಅದನ್ನು ನಿನ್ನ ಹೆಗಲಮೇಲೆ
ಮರುಗಬೇಡ ಅದರ ಬಂಧನಗಳಿಗೆ.
26 : ಅದರ ನೆರೆ ಸೇರು ಪೂರ್ಣ ಹೃದಯದಿಂದ
ಅದರ ಸದಾಚಾರವನ್ನು ಕಾಪಾಡು
ಪೂರ್ಣಶಕ್ತಿಯಿಂದ.
27 : ವೇದ್ಯವಾಗುವುದದು ಲವಲವಿಕೆಯಿಂದ
ಹುಡುಕಿದರೆ
ಕಳೆದುಕೊಳ್ಳಬೇಡ ಅದು ನಿನ್ನ ಕೈವಶವಾದ
ಮೇಲೆ.
28 : ಕೊನೆಯಲ್ಲಿ ದೊರಕುವುದು ನಿನಗೆ
ಅದರಿಂದ ವಿಶ್ರಾಂತಿ
ಆಗ ಅದು ಪರಿಣಮಿಸುವುದು ನಿನಗೆ
ಆನಂದವಾಗಿ.
29 : ಅದರ ಸಂಕೋಲೆಗಳು ಇರುವುವು ನಿನಗೆ
ಬಲವಾದ ಕವಚದಂತೆ
ಅದರ ಎಳೆಯ ಕೊಂಬೆಗಳು ಶೋಭಾಯಮಾನ
ನಿಲುವಂಗಿಗಳಂತೆ.
30 : ಅದರ ಮೇಲಿರುವುದು ಚಿನ್ನದ ಆಭರಣ
ಅದರ ಕಟ್ಟು ಪಟ್ಟಿಗಳೆಲ್ಲವು ನೀಲಾಂಬರ.
31 : ಧರಿಸಿಕೊಳ್ಳುವೆ ನೀನದನ್ನು ಸುಂದರ
ನಿಲುವಂಗಿಯಂತೆ
ಹಾಕಿಕೊಳ್ಳುವೆ ಅದನ್ನು ಸಂತಸದ ಹಾರದಂತೆ.
32 : ಮಗನೇ, ಶಿಕ್ಷಣ ನಿನಗೆ ಲಭ್ಯ,
ನೀನು ಇಷ್ಟಪಟ್ಟರೆ;
ಜಾಣನಾಗುವೆ ನೀನು ಮನಸ್ಸಿಟ್ಟು ಕಲಿತರೆ.
33 : ಪಡೆದುಕೊಳ್ಳುವೆ ಅದನ್ನು ಆಲಿಸಲು ಒಲಿದರೆ
ಬುದ್ಧಿವಂತನಾಗುವೆ ಅದಕ್ಕೆ ಕಿವಿಗೊಟ್ಟರೆ
34 : ಹಿರಿಯರ ಗುಂಪಿಗೆ ಸೇರಿಕೊಂಡಿರು
ಜ್ಞಾನಿಯಾದವನಿಗೆ ಅಂಜಿಕೊಂಡಿರು.
35 : ಸದಾ ಸಿದ್ಧನಾಗಿರು ಒಳ್ಳೆಯ ಮಾತುಕತೆ
ಕೇಳಲು
ನಿನ್ನ ಕಿವಿಗೆ ಬೀಳದೆ ಹೋಗದಿರಲಿ
ಜ್ಞಾನೋಕ್ತಿಗಳು.
36 : ಜ್ಞಾನಿಯನ್ನು ಕಂಡಾಗ, ಅವನಲ್ಲಿಗೆ
ಹೋಗಿ ಬಾ ಲವಲವಿಕೆಯಿಂದ,
ಅವನ ಬಾಗಿಲ ಮೆಟ್ಟಲುಗಳು ಸವೆದುಹೋಗಲಿ
ನಿನ್ನ ಪಾದಗಳಿಂದ.
37 : ನಿನ್ನ ಮನಸ್ಸು ನಾಟಿರಲಿ ಸರ್ವೇಶ್ವರನ
ವಿಧಿನಿಯಮಗಳ ಮೇಲೆ
ನಿರಂತರ ಮನನ ಮಾಡುತ್ತಿರು ಆತನ
ಆಜ್ಞೆಗಳನ್ನೆ.
ಸ್ಥಿರಗೊಳಿಸುವನಾತ ನಿನ್ನ ಹೃದಯವನ್ನು
ದಯಪಾಲಿಸುವನಾತ ನೀನಾಶಿಸುವ
ಜ್ಞಾನಾಮೃತವನ್ನು.