1 : ಅನುಬಂಧ
ವಂದನಾಗೀತೆ
ಹೇ ಸರ್ವೇಶ್ವರಾ, ಅರಸರೇ,
ಸ್ತುತಿಸುವೆ ನಾ ನಿಮ್ಮನ್ನು
ನನ್ನ ರಕ್ಷಕರಾದ ದೇವರೇ, ಕೊಂಡಾಡುವೆ
ನಾ ನಿಮ್ಮನ್ನು
ಸ್ತುತಿಸುವೆ ನಾ ನಿಮ್ಮ ನಾಮವನ್ನು.
2 : ನೀವೇ ನನ್ನ ಪಾಲಕ ಹಾಗು ಸಹಾಯಕ
ನಿಮ್ಮ ನೆರವಿಂದ ನನ್ನ ದೇಶ ಪಾರಾಗಿದೆ
ವಿನಾಶದಿಂದ,
ವಂಚಿಸುವ ನಾಲಿಗೆಯ ಕುಯುಕ್ತಿಯಿಂದ,
ಸುಳ್ಳಾಡುವ ತುಟಿಗಳಿಂದ.
ನನ್ನ ಬಳಿ ನಿಂತವರೆದುರಿನಲ್ಲಿ ನೀವಾಗಿರುವಿರಿ
ನನ್ನ ಸಹಾಯಕ.
3 : ಕಾಪಾಡಿದಿರಿ ನನ್ನನ್ನು ನಿಮ್ಮ ಪರಮ
ಕಾರುಣ್ಯದ ನಿಮಿತ್ತ
ನಿಮ್ಮ ನಾಮದ ಮಹತ್ತಿನ ಪ್ರಯುಕ್ತ.
ರಕ್ಷಿಸಿದಿರಿ, ನನ್ನ ಹಾಳುಮಾಡಲು ಹಲ್ಲು
ಕಡಿಯುತ ಸಜ್ಜಾಗಿದ್ದವರಿಂದ;
ರಕ್ಷಿಸಿದಿರಿ, ನನ್ನ ಜೀವತೆಗೆಯಲು
ಹವಣಿಸುತ್ತಿದ್ದವರ ಕೈಯಿಂದ,
ನನಗೆ ಬಂದೊದಗಿದ್ದ ಅನೇಕಾನೇಕ
ಕಷ್ಟಗಳಿಂದ.
4 : ನನ್ನ ಉಳಿಸಿದಿರಿ ಸುತ್ತುವರಿದ,
ಉಸಿರುಗಟ್ಟಿಸುವ ಉರಿಯಿಂದ,
ನಾನೇ ಹೊತ್ತಿಸಿದ ಬೆಂಕಿಯಿಂದ.
5 : ಕಾಪಾಡಿದಿರಿ ಪಾತಾಳಗರ್ಭದ
ಅಂತರಾಳದಿಂದ
ಹೊಲೆನಾಲಿಗೆಯಿಂದ, ಸುಳ್ಳುನುಡಿಗಳಿಂದ,
ಅರಸನೆದುರಿಗೆ ಚಾಡಿಹೇಳಿದ ದುರ್ಜನರ
ನಾಲಿಗೆಯಿಂದ.
ನನ್ನ ಆತ್ಮ ಸಮೀಪವಾಗಿತ್ತು ಮರಣಕ್ಕೆ
ನನ್ನ ಪ್ರಾಣವು ಹತ್ತಿರವಾಗಿತ್ತು
ಕೆಳಪಾತಾಳಕ್ಕೆ.
6 : ಕಾಪಾಡಿದಿರಿ ಪಾತಾಳಗರ್ಭದ
ಅಂತರಾಳದಿಂದ
ಹೊಲೆನಾಲಿಗೆಯಿಂದ, ಸುಳ್ಳುನುಡಿಗಳಿಂದ,
ಅರಸನೆದುರಿಗೆ ಚಾಡಿಹೇಳಿದ ದುರ್ಜನರ
ನಾಲಿಗೆಯಿಂದ.
ನನ್ನ ಆತ್ಮ ಸಮೀಪವಾಗಿತ್ತು ಮರಣಕ್ಕೆ
ನನ್ನ ಪ್ರಾಣವು ಹತ್ತಿರವಾಗಿತ್ತು
ಕೆಳಪಾತಾಳಕ್ಕೆ.
7 : ಬಳಸಿಬಂದಿರಲವರು ನನ್ನ ಸುತ್ತಲು
ನನಗಿರಲಿಲ್ಲ ಸಹಾಯಕರಾರು
ನಿರೀಕ್ಷಿಸಿದೆ ನಾ ಮನುಜರ ಸಹಾಯವನು;
ಅದು ಸಿಕ್ಕದೆ ಹೋಯಿತು.
8 : ಆಗ ಸರ್ವೇಶ್ವರಾ, ನೆನೆಸಿಕೊಂಡೆ ನಾ ನಿಮ್ಮ
ಕೃಪೆಯನ್ನು
ಯುಗಯುಗಾಂತರಕ್ಕು ಇರುವ ನಿಮ್ಮ ಕಾರ್ಯ
ಸಾಧನೆಯನ್ನು.
ನಿಮ್ಮನ್ನು ನಿರೀಕ್ಷಿಸಿಕೊಂಡಿರುವವರನ್ನು
ಬಿಡಿಸುವವರು ನೀವು
ಶತ್ರುಗಳ ಕೈಯಿಂದವರನ್ನು ರಕ್ಷಿಸುವವರು
ನೀವು.
9 : ಭೂಮಿಯಿಂದ ಮೇಲಕ್ಕೇರಿಸಿದಿರಿ
ನನ್ನ ಮನವಿಯನ್ನು
ಬೇಡಿಕೊಳ್ಳಲು, ರಕ್ಷಿಸಿದಿರಿ
ಮರಣದಿಂದೆನ್ನನ್ನು.
10 : ನನ್ನೊಡೆಯನ ತಂದೆಯಾದ ಸರ್ವೇಶ್ವರನಿಗೆ
ಮೊರೆಯಿಟ್ಟೆನು
ನನ್ನ ಕಷ್ಟಕಾಲದೊಳು, ಸೊಕ್ಕಿನವರ ವಿರುದ್ಧ,
ಸಹಾಯವಿಲ್ಲದ ತರುಣದೊಳು
ನನ್ನನ್ನು ಕೈಬಿಡಬೇಡವೆಂದು ಕೇಳಿಕೊಂಡೆನು.
11 : ಎಡೆಬಿಡದೆ ನಾ ಕೀರ್ತಿಸುವೆ ನಿನ್ನ ನಾಮವನು
ಕೃತಜ್ಞತಾ ಸ್ತುತಿಯೊಡನೆ ನಿಮ್ಮನು
ಕೊಂಡಾಡುವೆನು.
ನೀವಾಲಿಸಿದಿರಿ ನನ್ನ ಮನವಿಯನ್ನು.
12 : ವಿನಾಶದಿಂದ ನನ್ನನ್ನು ರಕ್ಷಿಸಿದಿರಿ
ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ
ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ;
ನಿಮ್ಮ ನಾಮವನ್ನು ಸರ್ವೇಶ್ವರಾ,
ಕೊಂಡಾಡುವೆ.
13 : ಸುಜ್ಞಾನದ ಅನ್ವೇಷಣೆ
ನಾನಿನ್ನೂ ಎಳೆಯವನಾಗಿದ್ದಾಗ,
ದೇಶಾಂತರ ಹೋಗುವುದಕ್ಕೆ ಮುನ್ನ
ಬಹಿರಂಗ ಪ್ರಾರ್ಥನೆಯಲ್ಲಿ
ಜ್ಞಾನವನ್ನರಸಿದೆನಯ್ಯಾ.
14 : ಮಹಾಮಂದಿರದ ಎದುರಿನಲ್ಲಿ ನಾನದನ್ನು
ಕೇಳಿಕೊಂಡೆ
ಕಡೆಯವರೆಗೂ ಅದನ್ನು ಹುಡುಕಿದೆ.
15 : ದ್ರಾಕ್ಷಿ ಹೂಬಿಡುವ ಕಾಲದಿಂದ
ಫಲಬಿಡುವ ತನಕ
ಜ್ಞಾನದಲ್ಲಿ ಆನಂದಿಸಿತು ನನ್ನ ಹೃದಯ
ಸರಳತೆಯಲ್ಲೇ ನಡೆಯಿತು ನನ್ನ ಪಾದ
ನಾನದನ್ನು ಅರಸುತ್ತಾ ಬಂದೆ ಯೌವನದಿಂದ.
16 : ನನ್ನ ಕಿವಿಯನ್ನು ಕೊಂಚ ಬಾಗಿಸಿ,
ಅದನ್ನು ಸ್ವೀಕರಿಸಿದೆ
ಅದರಿಂದ ಒಳ್ಳೆಯ ಶಿಕ್ಷಣವನ್ನು
ಪಡೆದುಕೊಂಡೆ.
17 : ಆದುದರಿಂದ ನಾ ಮುಂದುವರಿದೆ
ಸುಜ್ಞಾನ ನೀಡುವಾತನನ್ನು ನಾ ಕೊಂಡಾಡುವೆ.
18 : ಅದನ್ನು ಅಭ್ಯಾಸಿಸಲು ನಿಶ್ಚಯಮಾಡಿದೆ
ಒಳಿತನ್ನು ಕುರಿತು ಆಸಕ್ತನಾದೆ
ನಾನೆಂದಿಗೂ ಆಶಾಭಂಗಪಡೆ.
19 : ಹೋರಾಡಿತು ನನ್ನಾತ್ಮ ಅದನ್ನು ಗಳಿಸಲು
ನಿಷ್ಠೆಯಿಂದಿದ್ದೆ ನನ್ನ ಕಾರ್ಯಕಷ್ಟದೊಳು
ನನ್ನ ಕೈಯೆತ್ತಿದೆ ಆಕಾಶದ ಕಡೆಗೆ
ನನ್ನ ಅಜ್ಞಾನಕ್ಕಾಗಿ ನಾನೇ ಹಲುಬಿಕೊಂಡೆ.
20 : ಇಚ್ಛೆಯಿಂದ ನಾನದರ ಮೇಲೆ ಮನಸ್ಸಿಟ್ಟೆ
ನಿರ್ಮಲತೆಯಲ್ಲಿ ಅದನ್ನು ಕಂಡುಕೊಂಡೆ
ಮೊದಲಿನಿಂದಲೇ ಅದರೊಂದಿಗೆ ಸೇರುವ
ಬುದ್ಧಿಯನ್ನು ಪಡೆದೆ
ಇನ್ನು ನಾನೆಂದಿಗೂ ಅದನ್ನು ಕೈಬಿಡಲಾರೆ.
21 : ನನ್ನ ಅಂತರಂಗ ಚಿಂತಿಸಿತು ಅದನ್ನು
ಅರಸುವುದಕ್ಕಾಗಿ
ಒಳ್ಳೆಯ ಸ್ವಾಸ್ತ್ಯವನ್ನು ಪಡೆದುಕೊಂಡೆ
ಅದರಿಂದಾಗಿ.
22 : ಪ್ರತಿಫಲವಾಗಿ ಕೊಟ್ಟರು ಸರ್ವೇಶ್ವರ
ನನಗೆ ವಾಕ್ಚಾತುರ್ಯವನ್ನು
ಆದುದರಿಂದಲೇ ಕೊಂಡಾಡುವೆ ನಾನವರನ್ನು.
23 : ಅಶಿಕ್ಷಿತರೇ, ನನ್ನ ಬಳಿಗೆ ಬನ್ನಿ
ಶಿಕ್ಷಣದ ಮನೆಯಲ್ಲಿ ತಂಗಿ.
24 : ಈ ವಿಚಾರದಲ್ಲಿ ನಮಗೆ ಕೊರತೆಯಿದೆ
ಎಂದು ನೀವು ಹೇಳುವುದೇಕೆ?
ನಿಮ್ಮ ಆತ್ಮಗಳು ಬಹಳವಾಗಿ
ದಾಹಗೊಂಡಿರುವುದೇಕೆ?
25 : ನಾನು ಬಾಯ್ದೆರೆದು ಮಾತಾಡಿದೆ
ನೀವದನ್ನು ತೆಗೆದುಕೊಳ್ಳಿ ಹಣವಿಲ್ಲದೆ.
26 : ನಿಮ್ಮ ಕೊರಳನ್ನು ಒಡ್ಡಿ ಅದರ ನೊಗಕ್ಕೆ
ದೊರಕಲಿ ಸುಶಿಕ್ಷಣ ನಿಮ್ಮ ಆತ್ಮಕ್ಕೆ
ದೊರಕಲಿದೆ ಅದು ನಿಮ್ಮ ಸಮೀಪದಲ್ಲೆ.
27 : ಕಣ್ಣಾರೆ ನೋಡಿರಿ ನೀವಿದನ್ನು:
‘ನಾಪಟ್ಟ ದುಡಿಮೆ ಅಲ್ಲ, ಪಡೆದ ವಿಶ್ರಾಂತಿ
ಬಹಳ’ ಎಂಬುದನ್ನು.
28 : ಪಡೆದುಕೊಳ್ಳಿ ಶಿಕ್ಷಣವನ್ನು ಬೆಳ್ಳಿಯಿಂದ
ಗಳಿಸಿಕೊಳ್ಳಿ ಬಂಗಾರವನ್ನು ಅದರಿಂದ.
29 : ಆನಂದಿಸಲಿ ನಿಮ್ಮಾತ್ಮ ಸರ್ವೇಶ್ವರನ
ಕೃಪೆಯಲ್ಲಿ
ನಾಚಿಕೆಪಡದಿರಿ ಆತನನ್ನು
ಕೊಂಡಾಡುವುದರಲ್ಲಿ.
30 : ಕಾರ್ಯಸಾಧಿಸಿರಿ ಕಾಲಬರುವ ಮುಂಚೆ
ಪ್ರತಿಫಲವನ್ನೀಯುವನಾತ
ಸೂಕ್ತ ಕಾಲದಲ್ಲೆ.