1 : ಮಹಾಯಾಜಕ ಸಿಮೋನ್
ಮಹಾಯಾಜಕನೂ ಒನೀಯನ
ಮಗನೂ ಆದ ಸಿಮೋನನು
ತನ್ನ ಜೀವನಕಾಲದಲ್ಲಿ ದೇವಮಂದಿರವನ್ನು
ಜೀರ್ಣೋದ್ಧಾರ ಮಾಡಿದನು
ತನ್ನ ದಿನಗಳಲ್ಲಿ ಮಹಾದೇವಾಲಯವನ್ನು
ಭದ್ರಪಡಿಸಿದನು.
2 : ಕಟ್ಟಿಸಿದನವನು ಅಸ್ತಿವಾರದಿಂದ ಹಿಡಿದು
ಇಮ್ಮಡಿಗೋಡೆಯನ್ನು ಪೂರ್ತಿಯಾಗಿ
ಮಹಾದೇವಾಲಯದ ಆವರಣದ ಗೋಡೆಯ
ಕಟ್ಟಿಸಿದನು ಎತ್ತರವಾಗಿ.
3 : ಇವನ ಕಾಲದಲ್ಲಿ ತೋಡಿ ಕಂಡು
ಹಿಡಿಯಲಾಯಿತು
‘ಕಂಚಿನ ಕಡಲು’ ಎಂಬ ಪಾತ್ರೆಯನ್ನು.
4 : ತನ್ನ ಜನಾಂಗವು ಸೋತುಹೋಗಬಾರದೆಂದು
ಆಲೋಚನೆ ಮಾಡಿದನು
ಮುತ್ತಿಗೆಯ ಕಾಲಕ್ಕಾಗಿ ಪಟ್ಟಣವನ್ನು
ಭದ್ರಪಡಿಸಿದನು.
5 : ಘನ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದನು
ಪವಿತ್ರಾಲಯದಿಂದ ಹೊರಬಂದಾಗ,
ಜನರು ಅವನ ಸುತ್ತಲೂ ಸೇರಿಬಂದಾಗ!
6 : ಅವನಿದ್ದನು ಮೋಡಗಳ ಮಧ್ಯೆ ಬೆಳಗುವ
ಬೆಳಗಿನ ಚುಕ್ಕೆಯಂತೆ, ಪೂರ್ಣಚಂದ್ರನಂತೆ,
7 : ಮಹೋನ್ನತನ ಆಲಯದ ಮೇಲೆ ಹೊಳೆದ
ಸೂರ್ಯನಂತೆ,
ಘನಮೇಘಗಳ ಮಧ್ಯೆ ಮೆರೆಯುವ
ಮಳೆಬಿಲ್ಲಿನಂತೆ,
8 : ವಸಂತಕಾಲದ ಗುಲಾಬಿ ಹೂಗಳಂತೆ
ಬುಗ್ಗೆಯ ಬಳಿಯಲ್ಲಿರುವ ನೈದಿಲೆಯಂತೆ
ಬೇಸಿಗೆಯಲಿ ಎದ್ದ ಧೂಪಮರದ
ಅಂಕುರದಂತೆ;
9 : ಧೂಪದ ಪಾತ್ರೆಯಲ್ಲಿ ಉರಿಯುವ
ಸಾಂಬ್ರಾಣಿಯಂತೆ
ಚಿನ್ನದ ತಗಡಿನಿಂದ ಮಾಡಿದ ರತ್ನಖಚಿತ
ಪಾತ್ರೆಯಂತೆ;
10 : ಕಂಗೊಳಿಸುತ್ತಿದ್ದನು ಫಲವನ್ನು ಬಿಡುವ
ಓಲಿವ್ ಮರದಂತೆ
ಮುಗಿಲು ಮುಟ್ಟುವ ಹಾಗೆ ಬೆಳೆದ
ತುರಾಯಿ ಮರದಂತೆ.
11 : ವೈಭವದ ವಸ್ತ್ರವನ್ನು ಗೌರವಯುತ
ಪದಕವನ್ನು ಧರಿಸಿಕೊಂಡಾಗ
ಪವಿತ್ರ ವೇದಿಕೆಯ ಮೇಲೆ ಅವುಗಳೊಂದಿಗೆ
ಏರಿದಾಗ
ಪವಿತ್ರ ಸ್ಥಳದ ಆವರಣಕ್ಕೆ ಅವನೊಂದು
ಭೂಷಣವಾಗಿದ್ದ.
12 : ಯಾಜಕರ ಕೈಯಿಂದ ಅರ್ಪಣಾ
ಭಾಗಗಳನ್ನು ತೆಗೆದುಕೊಂಡಿರಲು
ವೇದಿಕೆಯ ಅಗ್ನಿಕುಂಡದ ಬಳಿ ನಿಂತಿರಲು
ಇತರ ಯಾಜಕರು ಅವನ ಸುತ್ತ
ನಿಲ್ಲುತ್ತಿದ್ದರು.
ಆಗ ಕಂಡುಬಂದನವನು ಲೆಬನೋನಿನ
ದೇವದಾರು ಮರದಂತೆ
ಸುತ್ತು ನಿಂತವರಿದ್ದರು ಖರ್ಜೂರ ಮರದ
ಕಾಂಡಗಳಂತೆ.
13 : ಆರೋನನ ಪುತ್ರರೆಲ್ಲರು ನಿಂತು
ಕೊಳ್ಳುತ್ತಿದ್ದರು
ಇಸ್ರಯೇಲರ ಸಭೆಯ ಸಮ್ಮುಖದಲಿ
ಘನತೆ ಗೌರವದಿಂದ ಸರ್ವೇಶ್ವರನಿಗೆ
ಅರ್ಪಣೆಗಳ ಹಿಡಿದು ಕೈಯಲ್ಲಿ.
14 : ಬಲಿಪೀಠದ ಬಳಿ ಆರಾಧನೆಯನ್ನು
ಮುಗಿಸಿದ ಬಳಿಕ
ಮಹೋನ್ನತನೂ ಸರ್ವಶಕ್ತನೂ ಆದವಗೆ
ಕಾಣಿಕೆಯನ್ನು ಸಮರ್ಪಿಸಿದ ನಂತರ
ಬಟ್ಟಲಿಗೆ ಕೈಹಾಕಿ, ದ್ರಾಕ್ಷಿಯ ರಸವನೆತ್ತಿ
ಸುರಿಯುತ್ತಿದ್ದನ್ನು ವೇದಿಯ ಬುಡಕೆ
ಮಹೋನ್ನತನೂ ಸಕಲರ ಅರಸನೂ
ಆದಾತನಿಗೆ ಸುಗಂಧವಾಗಿರುವಂತೆ.
15 : ಬಲಿಪೀಠದ ಬಳಿ ಆರಾಧನೆಯನ್ನು
ಮುಗಿಸಿದ ಬಳಿಕ
ಮಹೋನ್ನತನೂ ಸರ್ವಶಕ್ತನೂ ಆದವಗೆ
ಕಾಣಿಕೆಯನ್ನು ಸಮರ್ಪಿಸಿದ ನಂತರ
ಬಟ್ಟಲಿಗೆ ಕೈಹಾಕಿ, ದ್ರಾಕ್ಷಿಯ ರಸವನೆತ್ತಿ
ಸುರಿಯುತ್ತಿದ್ದನ್ನು ವೇದಿಯ ಬುಡಕೆ
ಮಹೋನ್ನತನೂ ಸಕಲರ ಅರಸನೂ
ಆದಾತನಿಗೆ ಸುಗಂಧವಾಗಿರುವಂತೆ.
16 : ತರುವಾಯ ಆರೋನನ ಪುತ್ರರು
ಆರ್ಭಟಿಸುತ್ತಿದ್ದರು
ತಗಡಿನ ತುತೂರಿಗಳನ್ನು ಊದುತ್ತಿದ್ದರು
ಮಹೋನ್ನತನನ್ನು ಆತನ ಎದುರಿನಲ್ಲೇ
ಜ್ಞಾಪಕಪಡಿಸಲೆಂದು
ಎಲ್ಲರಿಗೂ ಕೇಳಿಸುವಂತೆ ಮಹಾಧ್ವನಿ
ಗೈಯುತ್ತಿದ್ದರು.
17 : ಕೂಡಲೇ ಜನರೆಲ್ಲರೂ ನೆಲದಮೇಲೆ
ಬೀಳುತ್ತಿದ್ದರು ಬೋರಲಾಗಿ
ತಮ್ಮ ಮಹೋನ್ನತ, ಸರ್ವಶಕ್ತ
ಸರ್ವೇಶ್ವರನನ್ನು ಆರಾಧಿಸುವುದಕ್ಕಾಗಿ.
18 : ಆತನನು ಕೊಂಡಾಡುತ್ತಿದ್ದರು ಗಾಯಕರು
ಸ್ವರವೆತ್ತಿ
ಇಡೀ ದೇವಮಂದಿರದಲ್ಲಿ ಕೇಳಿಸುತ್ತಿತ್ತಾ
ರಾಗವು ಇಂಪಾಗಿ.
19 : ಆರಾಧನೆ ಮುಗಿಯುವವರೆಗೆ ಜನರು
ಪ್ರಾರ್ಥಿಸುತ್ತಿದ್ದರು ಆ ಕರುಣಾ
ಸಾಗರನನ್ನು,
ಆ ಮಹೋನ್ನತನನ್ನು ಬೇಡಿಕೊಂಡು
ಮುಗಿಸುತ್ತಿದ್ದರು ಆರಾಧನೆಯನ್ನು.
20 : ಬಳಿಕ ಕೆಳಗಿಳಿದು ತನ್ನ ಕೈಗಳನ್ನೆತ್ತುತ್ತಿದ್ದನು,
ಇಸ್ರಯೇಲ್ ಸಭೆಗೆ
ದೇವರ ಆಶೀರ್ವಾದವನ್ನು ನೀಡುವುದಕ್ಕೆ
ಆತನ ಶ್ರೀನಾಮವನ್ನು ಉಚ್ಚರಿಸುವುದಕ್ಕೆ.
21 : ತಲೆ ಬಾಗುತ್ತಿದ್ದರು ಜನರು ಮತ್ತೊಮ್ಮೆ
ಮಹೋನ್ನತನ ಆಶೀರ್ವಾದವನ್ನು
ಸ್ವೀಕರಿಸುವುದಕ್ಕೆ.
22 : ಪ್ರಬೋಧನೆ
ಈಗ ನೀವೆಲ್ಲರು ಕೊಂಡಾಡಿ ದೇವರನ್ನು
ಆತ ನಡೆಸುವನು ಮಹತ್ಕಾರ್ಯಗಳನ್ನು
ಎಲ್ಲೆಡೆಗಳಲ್ಲು
ಹುಟ್ಟಿನಿಂದ ನಮ್ಮ ದಿನಗಳನ್ನು ಹೆಚ್ಚಿಸು
ವಂಥವನು ಆತನು.
ಕೊಂಡಾಡಿ, ತನ್ನ ಕರುಣೆಗನುಸಾರ
ನಮ್ಮೊಂದಿಗೆ ವರ್ತಿಸುವಾ ದೇವರನ್ನು.
23 : ಆತನು ನಮಗೆ ಉಲ್ಲಾಸದ ಹೃದಯವನ್ನು
ದಯಪಾಲಿಸಲಿ
ನಮ್ಮ ದಿನಗಳಲ್ಲಿ ಶಾಂತಿಯನ್ನು ಅನುಗ್ರಹಿಸಲಿ
ಅದು ಇಸ್ರಯೇಲರಲ್ಲಿ ಶಾಶ್ವತವಾಗಿರಲಿ!
24 : ಹೀಗೆ ಆತನ ಕೃಪೆ ನಮ್ಮಲ್ಲಿ ದೃಢವಾಗಿರಲಿ
ತನ್ನ ಕಾಲದಲ್ಲಿ ಆತ ನಮ್ಮನು ಬಿಡುಗಡೆ
ಮಾಡಲಿ !
25 : ಎರಡು ಜನಾಂಗಗಳ ವಿಷಯದಲ್ಲಿ
ಸಿಟ್ಟುಗೊಂಡಿದೆ ನನ್ನ ಆತ್ಮ
ಮೂರನೆಯದು ಜನಾಂಗವೇ ಅಲ್ಲ.
26 : ಸಮಾರ್ಯದ ಗುಡ್ಡದ ಮೇಲೆ
ಕುಳಿತಿರುವವರು,
ಫಿಲಿಷ್ಟಿಯರು ಹಾಗು ಶೆಕೆಮಿನಲ್ಲಿ ವಾಸಿಸುವ
ಮೂಢರು.
27 : ವಿದಾಯ ವಂದನೆ
ಜೆರುಸಲೇಮಿನ ಸಿರಾಖ ಎಲ್ಲಾಜಾರನ ಮಗ
ಯೆಷೂವನೆಂಬ ನಾನು
ಈ ಗ್ರಂಥದಲ್ಲಿ ಜ್ಞಾನವನ್ನು, ವಿವೇಕವನ್ನು,
ಸುಶಿಕ್ಷಣವನ್ನು ಬರೆದಿರುವೆನು;
ನನ್ನ ಹೃದಯದಿಂದ ಸುಜ್ಞಾನವನ್ನು
ಸುರಿಸಿರುವೆನು.
28 : ಇವುಗಳನ್ನು ಅನುಸರಿಸುವವನು ಧನ್ಯನು !
ಇವುಗಳನ್ನು ತನ್ನ ಹೃದಯದಲ್ಲಿ
ಇಟ್ಟುಕೊಳ್ಳುವವನು ಜಾಣನು.
29 : ಇದರಂತೆ ನಡೆದರೆ ಸರ್ವವಿಷಯಗಳಲ್ಲೂ
ಬಲ್ಲಿದನಾಗುವನು
ಸರ್ವೇಶ್ವರನ ಪ್ರಭೆಯೇ ಅವನಿಗೆ ಮಾರ್ಗದರ್ಶಿ
ಆಗಿರುವುದು.