1 : ಯೋಷೀಯ
ನಮಗಿದೆ ಯೋಷೀಯನ ಸ್ಮರಣೆ
ಗಂಧಿಗರು ಮಿಶ್ರಮಾಡಿದ
ಬುಕ್ಕಿಟ್ಟಿನಂತೆ,
ಅವನ ಸವಿನೆನಪಿದೆ ಪ್ರತಿಯೊಬ್ಬರ ಬಾಯಲ್ಲಿ
ಮಧುರವಾದ ಜೇನಿನಂತೆ
ಮಧುಪಾನ ಕೂಟದಲ್ಲಿನ ಗಾಯನದಂತೆ.
2 : ಜನರ ಪರಿವರ್ತನೆಯ ವಿಷಯದಲ್ಲಿ
ಯಥಾರ್ಥವಾಗಿದ್ದನು
ಪಾಪದ ಅಸಹ್ಯಕೃತ್ಯಗಳನು ತೆಗೆದುಹಾಕಿದನು.
3 : ತನ್ನ ಹೃದಯವನ್ನು ದೇವರ
ಸತ್‍ಸಂಬಂಧದಲ್ಲಿ ಇಟ್ಟುಕೊಂಡನು
ದುರ್ಜನರ ದಿನಗಳಲ್ಲಿ ಸದ್ಧರ್ಮವನ್ನು
ಬಲಪಡಿಸಿದನು.
4 : ಯೆರೆಮೀಯ
ದಾವೀದ, ಹಿಜ್ಕೀಯ, ಯೋಷೀಯ
ಇವರನ್ನುಳಿದು, ಇತರರೆಲ್ಲ ತಪ್ಪಿತಸ್ಥರು
ಮಹೋನ್ನತನ ಧರ್ಮಶಾಸ್ತ್ರವನ್ನು ಮೀರಿ
ನಡೆದರು
ಜುದೇಯದ ಅರಸರು ಕಣ್ಮರೆಯಾಗಿ
ಹೋದರು.
5 : ಕಾರಣ, ವರ್ಗಾಯಿಸಿದರು ತಮ್ಮ
ಅಧಿಕಾರವನ್ನು ಬೇರೆಯವರಿಗೆ
ತಮ್ಮ ಗೌರವವನ್ನು ಹೊರಜನಾಂಗದವರಿಗೆ.
6 : ಬೆಂಕಿಯಿಕ್ಕಿದರವರು ಮಹಾ
ಪವಿತ್ರಾಲಯವಿದ್ದ ಶ್ರೀ ನಗರಕ್ಕೆ
ಹಾಳುಮಾಡಿದರು ಅದರ ಹಾದಿಬೀದಿಗಳನ್ನು,
ಯೆರೆಮೀಯನು ವಚನಿಸಿದಂತೆ.
7 : ಕೇಡನ್ನು ಬಯಸಿದರು ಆ ಯೆರೆಮೀಯನಿಗೆ
ಕಿತ್ತು ನಾಶಮಾಡುವುದಕ್ಕೆ, ಕೆಡವುದಕ್ಕೆ,
ಕಟ್ಟುವುದಕ್ಕೆ,
ಗರ್ಭದಿಂದಲೆ ಪ್ರತಿಷ್ಠೆ ಹೊಂದಿದ್ದ
ಆ ಪ್ರವಾದಿಗೆ.
8 : ಯೆಜೆಕಿಯೇಲ್
ಸರ್ವೇಶ್ವರನ ಮಹಿಮೆಯನ್ನು ದರ್ಶಿಸಿದವನೇ
ಯೆಜೆಕಿಯೇಲನು
ಕೆರೂಬಿಯರ ರಥದ ಮೇಲೆ ಬೆಳಗಿದಾ
ಮಹಿಮೆಯನ್ನಾತ ಕಂಡನು.
9 : ಬಾರಿ ಮಳೆಸುರಿಸಿ ಬಾಧೆಯಿತ್ತನು ಶತ್ರುಗಳಿಗೆ
ಒಳಿತನ್ನು ಮಾಡಲು ಮರೆಯಲಿಲ್ಲ
ಸನ್ಮಾರ್ಗದಲ್ಲಿದ್ದವರಿಗೆ.
10 : ಹನ್ನೆರಡು ಪ್ರವಾದಿಗಳು
ಹನ್ನೆರಡು ಪ್ರವಾದಿಗಳ ಎಲುಬುಗಳು ಮರಳಿ
ಚಿಗುರಲಿ ತಾವಿರುವಲ್ಲೆ
ಕಾರಣ, ಇಸ್ರಯೇಲರನ್ನು ಸಂತೈಸಿ,
ಶ್ರದ್ಧೆ ನಿರೀಕ್ಷೆಯಿಂದ ದುಡಿದು,
ಅವರಿಗಿತ್ತರು ಬಿಡುಗಡೆ.
11 : ಜೆರುಬ್ಬಾಬೆಲ ಮತ್ತು ಯೆಷೂವ
ಜೆರುಬ್ಬಾಬೆಲನನ್ನು ನಾವು
ಹೊಗಳುವುದಾದರು ಹೇಗೆ?
ಅವನು ಬಲಗೈಯ
ಮುದ್ರೆಯುಂಗುರದಂತಿದ್ದನವನಲ್ಲವೆ?
12 : ಯೋಚಾದಾಕನ ಮಗ ಯೆಷೂವನೂ ಇದ್ದನು
ಇವನಂತೆಯೆ.
ತಮ್ಮ ದಿನಗಳಲ್ಲಿ ದೇವಮಂದಿರವನ್ನು ಪುನಃ
ಕಟ್ಟಿದವರು ಇವರೇ.
ಸರ್ವೇಶ್ವರನಿಗೆ ಮೀಸಲಾದ ಆಲಯವನ್ನು
ಇವರು ನಿರ್ಮಿಸಿದರು
ಮಾತ್ರವಲ್ಲ, ಅದನ್ನು ಶಾಶ್ವತ ಮಹಿಮೆಗಾಗಿ
ಸಿದ್ಧಗೊಳಿಸಿದರು.
13 : ನೆಹೆಮಿಯ
ಅದರಂತೆಯೇ ಹಿರಿದಾದುದು ನೆಹೆಮಿಯನ
ಕೀರ್ತಿಯು
ಬಿದ್ದುಹೋದ ಗೋಡೆಗಳನ್ನು ಸರಿಯಾಗಿ
ಎಬ್ಬಿಸಿದವನು ಇವನು
ಕದಗಳನ್ನೂ ಅಗುಳಿಗಳನ್ನೂ ಮಾಡಿಸಿದನು
ನಮ್ಮ ಮನೆಗಳನ್ನು ಮರಳಿ ಕಟ್ಟಿಸಿದನು.
14 : ಹಿನ್ನೋಟ
ಹನೋಕನಂಥ ಮನುಷ್ಯನೇ ಸೃಷ್ಟಿಯಾಗಲಿಲ್ಲ
ಬುವಿಯ ಮೇಲೆ
ಏಕೆಂದರೆ ಒಯ್ಯಲ್ಪಟ್ಟನವನು ಬುವಿಯ
ಮೇಲಕ್ಕೆ.
15 : ಅಂತೆಯೇ ಜೋಸೆಫನಂಥ ಮನುಷ್ಯ
ಹುಟ್ಟಲಿಲ್ಲ
ಆಗಿದ್ದನವನು ತನ್ನ ಸಹೋದರರಿಗೆ ನಾಯಕ,
ಜನಾಂಗಕೆ ಆಧಾರ;
ಅವನ ಎಲುಬುಗಳಿಗೂ ದೊರಕಿತು ಮಹಾ
ಗೌರವ!
16 : ಶೇಮನೂ ಸೇತನೂ ಮಹಿಮಾನ್ವಿತರು ಎಲ್ಲ
ಮಾನವರೊಳು
ಆದಾಮನೇ ಶ್ರೇಷ್ಠನು ಸೃಷ್ಟಿಯಲ್ಲುಂಟಾದ
ಎಲ್ಲ ಜೀವಿಗಳೊಳು.