1 : ಎಲೀಯನು
ಆಮೇಲೆ ಪ್ರವಾದಿ ಎಲೀಯನೆದ್ದನು
ಬೆಂಕಿಯಂತೆ
ಉರಿಯಿತವನ ನುಡಿ ಪಂಜಿನಂತೆ.
2 : ಕ್ಷಾಮವನ್ನು ಬರಮಾಡಿದನಿವನು ಜನರ
ಮೇಲೆ
ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ.
3 : ಆಕಾಶವನ್ನೇ ಮುಚ್ಚಿಬಿಟ್ಟನು
ಸರ್ವೇಶ್ವರನ ಹೆಸರಿನಲ್ಲಿ
ಬೆಂಕಿಯಿಳಿಯುವಂತೆ ಮಾಡಿದನು
ಮೂರುಸಾರಿ.
4 : ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ
ನೀನು ಎಷ್ಟು ಘನವಂತನಾಗಿದ್ದೆ !
ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ?
5 : ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ,
ಪಾತಾಳದಿಂದ
ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ
ಶಕ್ತಿಯಿಂದ.
6 : ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು
ನೀನು
ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು
ನೀನು.
7 : ಸೀನಾಯಿನಲ್ಲಿ ಗದರಿಸಿಕೊಂಡವನು ನೀನು
ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ
ಕೇಳಿಸಿಕೊಂಡವನು ನೀನು.
8 : ಪ್ರತೀಕಾರ ಮಾಡುವುದಕ್ಕೆ ಅರಸರನ್ನು,
ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು
ಅಭಿಷೇಕಿಸಿದವನು ನೀನು.
9 : ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ
ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ.
10 : ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು
ಶಾಂತಪಡಿಸುವುದಕ್ಕಾಗಿ
ತಂದೆಯ ಹೃದಯವನ್ನು ಮಗನ ಕಡೆಗೆ
ತಿರುಗಿಸುವುದಕ್ಕಾಗಿ
ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ
ತರುವುದಕ್ಕಾಗಿ
ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು
ಬರೆದಿದೆ ನಿನ್ನ ವಿಷಯವಾಗಿ.
11 : ನಿನ್ನನು ನೋಡುವವರು ಧನ್ಯರು
ಪ್ರೀತಿಯಿಂದ ನಿಧನರಾದವರು ಧನ್ಯರು !
ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.
12 : ಎಲೀಷ
ಸುಳಿಗಾಳಿಯಿಂದ ಆವರಿಸಲ್ಪಟ್ಟವನು
ಎಲೀಯನು
ಅವನ ಆತ್ಮದಿಂದ ತುಂಬಿಕೊಂಡವನು
ಎಲೀಷನು.
ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ
ಯಾವ ಅರಸನ ಬೆದರಿಕೆಗು
ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ
ಇರಲಿಲ್ಲ ಯಾರಿಗು.
13 : ಇವನು ಸೋಲಲಿಲ್ಲ ಯಾವ ಮಾತಿಗು
ಇವನ ದೇಹ ಪ್ರವಾದಿಸಿತು ಸತ್ತ ಮೇಲೂ.
14 : ಜೀವಮಾನಕಾಲದಲ್ಲಿ ಎಸಗಿದನು
ಮಹತ್ಕಾರ್ಯಗಳನ್ನು
ಸತ್ತಮೇಲೂ ಅವನ ಕಾರ್ಯಗಳು
ಅಗಾಧವಾಗಿದ್ದವು.
15 : ಜನರು ಪಶ್ಚಾತ್ತಾಪಪಡಲಿಲ್ಲ
ನಾಡಿನಿಂದ ಕೊಳ್ಳೆಯಾಗಿ ಒಯ್ಯಲ್ಪಡುವ
ವರೆಗೂ ಪಾಪಗಳನ್ನು ಬಿಡಲಿಲ್ಲ.
ಹೀಗೆ ಚದರಿಹೋದರು ಭೂಮಿಯ ಮೇಲೆಲ್ಲಾ
ಆಗ ಉಳಿದುಕೊಂಡವರು ಕೆಲವರು ಮಾತ್ರ
ದಾವೀದನ ಗೋತ್ರದ ಒಬ್ಬ ಒಡೆಯನು
ಮಾತ್ರ;
16 : ಇವರಲ್ಲಿ ಕೆಲವರು ನಡೆದುಕೊಂಡರು
ದೇವರಿಗೆ ಮೆಚ್ಚಿಕೆಯಾಗಿ
ಇನ್ನು ಕೆಲವರು ಕಟ್ಟಿಕೊಂಡರು
ಪಾಪಗಳನ್ನು ಹೆಚ್ಚು ಹೆಚ್ಚಾಗಿ.
17 : ಹಿಜ್ಕೀಯ
ಹಿಜ್ಕೀಯನು ಭದ್ರಪಡಿಸಿದನು ಪಟ್ಟಣವನ್ನು
ಅದರೊಳಗೆ ನೀರನ್ನು ತರುವ ವ್ಯವಸ್ಥೆ
ಮಾಡಿದನು
ಕಬ್ಬಿಣದ ಹಾರೆಯಿಂದ ತೋಡಿಸಿದನು
ಬಂಡೆಯನ್ನು
ನೀರಿಗಾಗಿ ಕಟ್ಟಿಸಿದನು ಬಾವಿಗಳನ್ನು.
18 : ಸನ್ಹೇರೀಬನು ಬಂದನು ಇವನ ಕಾಲದಲ್ಲಿ
ಆದರೆ ತಾನು ಹಿಂದೆ ಉಳಿದು, ರಬ್ಷಾಕೆಯನ್ನು
ಕಳುಹಿಸಿದನು ಮುಂದಕೆ:
ಸಿಯೋನಿನ ವಿರುದ್ಧ ಕೈಯೆತ್ತಿದವನು ಇವನೇ
ಸೊಕ್ಕಿನಿಂದ ಅನೇಕ ವಿಷಯಗಳ ಬಗ್ಗೆ
ಕೊಚ್ಚಿಕೊಂಡವನು ಇವನೇ.
19 : ಜನರ ಹೃದಯಗಳೂ ಕೈಗಳೂ ನಡುಗಿದವು
ಆಗ
ಹೆರಿಗೆಯ ವೇದನೆಯಂತೆ ಯಾತನೆಗೆ
ಒಳಗಾದರು, ಅಕಟಾ !
20 : ದಯಾಮಯ ಸರ್ವೇಶ್ವರನಿಗೆ ಕೈಯೆತ್ತಿ
ಮೊರೆಯಿಟ್ಟರು
ಪರಿಶುದ್ಧ ಪ್ರಭು ಪರಲೋಕದಿಂದ
ಆ ಪ್ರಾರ್ಥನೆಯನ್ನಾಲಿಸಿದನು
ಯೆಶಾಯನ ಮುಖಾಂತರ ಅವರನ್ನು
ಕಾಪಾಡಿದನು.
21 : ಸರ್ವೇಶ್ವರನು ಅಸ್ಸೀರಿಯರ ಪಾಳೆಯವನ್ನು
ತಾಕಿದನು
ಆತನ ದೂತ ಅವರನ್ನು ಸಂಪೂರ್ಣವಾಗಿ
ನಾಶಪಡಿಸಿದನು.
22 : ಯೆಶಾಯ
ಹಿಜ್ಕೀಯನು ನಡೆದನು ದೇವರಿಗೆ
ಮೆಚ್ಚಿಗೆಯಾಗಿ
ತನ್ನ ಪೂರ್ವಜ ದಾವೀದನ ಮಾರ್ಗದಲ್ಲಿ
ನಡೆದನು ಸ್ಥಿರವಾಗಿ
ದರ್ಶನಗಳಲ್ಲಿ ಮಹಾತ್ಮ, ನಂಬಿಗಸ್ಥನಾಗಿ
ಪ್ರವಾದಿ ಯೆಶಾಯನ
ಅಪ್ಪಣೆಗನುಸಾರವಾಗಿ.
23 : ಈ ಯೆಶಾಯನ ಕಾಲದಲ್ಲೆ ಸೂರ್ಯನು
ಹಿಂದಕ್ಕೆ ಸರಿದುದು
ಇವನೇ ಅರಸನ ಜೀವನಾವಧಿ ಹೆಚ್ಚುವಂತೆ
ಮಾಡಿದವನು.
24 : ತನ್ನಲ್ಲಿದ್ದ ಶಕ್ತಿಯುತ ಚೈತನ್ಯದ ಮುಖಾಂತರ
ಕೊನೆಯಲ್ಲಿ ಸಂಭವಿಸಲಿರುವುದನ್ನು
ಕಂಡುಕೊಂಡ
ಸಿಯೋನಿನಲ್ಲಿ ಗೋಳಾಡುತ್ತಿದ್ದವರನ್ನು
ಸಂತೈಸಿದ.
25 : ಕಾಲಾಂತ್ಯದವರೆಗೆ ನೆರವೇರಬೇಕಾದವು
ಗಳನ್ನೂ ನಿಗೂಢ ವಿಷಯಗಳನ್ನೂ
ಅವು ತಲೆದೋರುವುದಕೆ ಮುಂಚಿತವಾಗಿಯೆ
ಈತ ಪ್ರಕಟಿಸಿದನು.