Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ನಾತಾನನು ಮತ್ತು ದಾವೀದನು ಇವನ ತರುವಾಯ ದಾವೀದನ ಕಾಲದೊಳು ನಾತಾನನು ಎದ್ದನು ಪ್ರವಾದನೆ ಮಾಡಲು.
2 : ಶಾಂತಿ ಬಲಿಪಶುವಿನಿಂದ ಕೊಬ್ಬನ್ನು ಬೇರ್ಪಡಿಸುವಂತೆ ಇಸ್ರಯೇಲರಿಂದ ಮೀಸಲಾದವನು ದಾವೀದನೆ.
3 : ಸಿಂಹಗಳನ್ನು ಆಡಿಸಿದನಿವನು ಆಡುಮರಿಗಳಂತೆ ಕರಡಿಗಳೊಂದಿಗೆ ಆಡಿದನು ಕುರಿಮರಿಗಳೊಂದಿಗೆ ಆಡುವಂತೆ.
4 : ಈತನೇ ಅಲ್ಲವೆ ತಾರುಣ್ಯದಲಿ ಕವಣೆಕಲ್ಲನು ಕೈಗೆತ್ತಿಕೊಂಡವನು? ಬಲಾಢ್ಯನೂ ಜಂಬಕೋರನೂ ಆದ ಗೊಲ್ಯಾತನನ್ನು ಸಂಹರಿಸಿ ನೆಲಕ್ಕುರುಳಿಸಿದವನು? ಈ ಪರಿ ತನ್ನ ಜನಾಂಗದ ಅವಮಾನವನ್ನು ಹೋಗಲಾಡಿಸಿದವನು?
5 : ಇವನು ಮೊರೆಯಿಡಲು ಮಹೋನ್ನತ ಸರ್ವೇಶ್ವರನಿಗೆ ಶಕ್ತಿ ನೀಡಿದನಾತ ಇವನ ಭುಜಬಲಕ್ಕೆ ಯುದ್ಧವೀರನಾದ ಆ ವ್ಯಕ್ತಿಯನ್ನು ಸಂಹರಿಸುವುದಕ್ಕೆ ತನ್ನ ಜನಾಂಗದವರ ಕೀರ್ತಿಪತಾಕೆಯನು ಮೇಲೆತ್ತುವುದಕ್ಕೆ.
6 : ಎಂತಲೇ ಜನರು ಗೌರವಿಸಿದರವನನು ‘ಹತ್ತು ಸಾವಿರಗಟ್ಟಲೆ’ ಕೊಂದುದಕ್ಕಾಗಿ ಹೊಗಳಿದರವನನ್ನು ಸರ್ವೇಶ್ವರನ ಆಶೀರ್ವಾದಗಳಿಗಾಗಿ ಮಹಿಮೆಯ ಮುಕುಟ ಕೊಡಲಾಯಿತವನಿಗೆ ಅದಕ್ಕಾಗಿ.
7 : ನಾಶಗೊಳಿಸಿದನು ಸುತ್ತಲೂ ಇದ್ದ ಶತ್ರುಗಳನ್ನು ಸೋಲಿಸಿದನು ತನ್ನ ವಿರೋಧಿಗಳಾದ ಫಿಲಿಷ್ಟಿಯರನ್ನು ಮುರಿದು ಪುಡಿಪುಡಿಮಾಡಿದನು ಅವರ ಕಳಸಕೊಂಬನ್ನು ಹಾಗೆಯೇ ಇರುವುದದು ಇಂದಿನವರೆಗು.
8 : ಪರಿಶುದ್ಧನು, ಮಹೋನ್ನತನು ಆದಾತನಿಗೆ ಸಲ್ಲಿಸಿದನು ಧನ್ಯವಾದ ತನ್ನ ಎಲ್ಲ ಕಾರ್ಯಗಳಲ್ಲೂ ಗಂಭೀರ ವಚನಗಳಿಂದ. ಆತನನ್ನು ಕೀರ್ತಿಸಿ ಹಾಡಿದನು ಪೂರ್ಣಹೃದಯದಿಂದ, ತನ್ನ ಸೃಷ್ಟಿಕರ್ತನನ್ನು ಪ್ರೀತಿವಾತ್ಸಲ್ಯದಿಂದ.
9 : ಇದಲ್ಲದೆ ಗಾಯಕರನ್ನಿರಿಸಿದನು ಬಲಿಪೀಠದ ಮುಂದೆ ಮಧುರ ಗೀತವನ್ನು ಹಾಡಿ ವಂದಿಸುವಂತೆ.
10 : ವಿಜೃಂಭಣೆಯನ್ನು ತಂದನು ಉತ್ಸವಗಳಿಗೆ ಉತ್ಸವಕಾಲಗಳಿಗಿತ್ತನು ಪೂರ್ಣವಾದ ಕ್ರಮಬದ್ಧತೆ. ಏರ್ಪಡಿಸಿದನು ಆ ಸಂದರ್ಭಗಳಲ್ಲಿ ಸರ್ವೇಶ್ವರನ ಶ್ರೀನಾಮವನ್ನು ಕೀರ್ತಿಸುವಂತೆ ಪವಿತ್ರಾಲಯದಲ್ಲಿ ಬೆಳಗಿನಿಂದ ಆ ಧ್ವನಿ ಕೇಳಿಬರುವಂತೆ.
11 : ಸರ್ವೇಶ್ವರ ಪರಿಹರಿಸಿದನು ಇವನ ಪಾಪವನ್ನು ಶಾಶ್ವತವಾಗಿಸಿದನು ಅವನ ಕೀರ್ತಿ ಪತಾಕೆಯನ್ನು. ಒಡಂಬಡಿಕೆಮಾಡಿ ಶಾಶ್ವತಗೊಳಿಸಿದನು ಅರಸೊತ್ತಿಗೆಯನ್ನು ದಯಪಾಲಿಸಿದನವನಿಗೆ ಇಸ್ರಯೇಲರಲ್ಲಿ ಮಹಿಮಾ ಸಿಂಹಾಸನವನ್ನು.
12 : ಸೊಲೊಮೋನನು ದಾವೀದನ ತರುವಾಯ ಎದ್ದವನು ಬುದ್ಧಿವಂತನಾದ ಅವನ ಮಗನು ತಂದೆಯ ನಿಮಿತ್ತ ನೆಮ್ಮದಿಯಿಂದ ಬಾಳಿದ ಸೊಲೊಮೋನನು.
13 : ಸೊಲೊಮೋನನು ಆಳಿದ್ದು ಶಾಂತಿಯುತ ಕಾಲದಲ್ಲಿ ದೇವನೇ ಏರ್ಪಡಿಸಿದ್ದನು ಸಮಾಧಾನ ನೆಲೆಸಿರುವಂತೆ ಸುತ್ತಮುತ್ತಲಲ್ಲಿ; ತನ್ನ ಹೆಸರಿಗಾಗಿ ಇವನೊಂದು ಪವಿತ್ರಾಲಯವನ್ನು ನಿರ್ಮಿಸುವಂತೆ ಈ ಪರಿ ಶಾಶ್ವತವಾದ ಪವಿತ್ರ ಸ್ಥಾನವನ್ನು ತನಗೆ ಸಿದ್ಧಗೊಳಿಸುವಂತೆ.
14 : ನಿನ್ನ ತಾರುಣ್ಯದಲ್ಲೆ ನೀನೆಷ್ಟು ಜಾಣನಾದೆಯಲ್ಲಾ ! ನದಿಯಂತೆ ಜ್ಞಾನದಿಂದ ತುಂಬಿಹರಿದೆಯಲ್ಲಾ!
15 : ಧರೆಯೆಲ್ಲಾ ತುಂಬಿಕೊಂಡಿತು ನಿನ್ನ ಪ್ರತಿಭೆಯಿಂದ ತುಂಬಿಸಿದೆ ಅದನ್ನು ನಿನ್ನ ಒಗಟು ಜ್ಞಾನೋಕ್ತಿಗಳಿಂದ.
16 : ನಿನ್ನ ಹೆಸರು ಹಬ್ಬಿತು ದೂರದ್ವೀಪಗಳವರೆಗೆ ಶಾಂತಿಸಮಾಧಾನಕ್ಕೆ ನೀನು ಪ್ರಿಯ ಹೆಸರಾದೆ.
17 : ಆಶ್ಚರ್ಯಚಕಿತರಾದರು ಪರದೇಶದವರು ನಿನ್ನ ಜ್ಞಾನೋಕ್ತಿಗಳಿಗಾಗಿ ನಿನ್ನ ಕೀರ್ತನೆ, ಒಗಟುಗಳಿಗಾಗಿ, ಅವುಗಳ ಅರ್ಥ ವಿವರಣೆಗಾಗಿ.
18 : ದೇವರಾದ ಸರ್ವೇಶ್ವರನ ಹೆಸರಿನಿಂದಲೆ, ‘ಇಸ್ರಯೇಲರ ದೇವರು’ ಎಂದೆನಿಸಿಕೊಂಡಾತನಿಂದಲೆ ಚಿನ್ನವನ್ನು ತಗಡಿನಂತೆ ಶೇಖರಿಸಿದೆ ಬೆಳ್ಳಿಯನ್ನು ಸೀಸದಂತೆ ರಾಶಿಮಾಡಿದೆ.
19 : ಬಗ್ಗಿಸಿದೆ ನಿನ್ನ ನಡುವನ್ನು ಹೆಂಗಸರಿಗೆ ಅದರಿಂದ ನಿನ್ನ ದೇಹ ಅಧೀನವಾಯಿತವರಿಗೆ.
20 : ಹೀಗೆ ನಿನ್ನ ಗೌರವವನ್ನು ಮಲಿನಮಾಡಿಕೊಂಡೆ ನಿನ್ನ ಮಕ್ಕಳ ಮೇಲೆ ದೇವಕೋಪವನ್ನು ಬರಮಾಡಿಕೊಂಡೆ. ಹೀಗೆ ನಿನ್ನ ಸಂತಾನವನ್ನು ಅಶುದ್ಧಗೊಳಿಸಿದೆ ಈ ಮೂರ್ಖತನಕ್ಕಾಗಿ ನಾನು ವ್ಯಸನಗೊಂಡೆ !
21 : ಇದರಿಂದ ಇಬ್ಭಾಗವಾಯಿತು ನಿನ್ನ ದೊರೆತನ ಅವಿಧೇಯ ರಾಜ್ಯವೊಂದು ಆಳಿತು ಎಫ್ರಯಿಮಿನಿಂದ.
22 : ಸರ್ವೇಶ್ವರನೋ ತನ್ನ ದಯೆಯನೆಂದೂ ತಪ್ಪಿಸುವುದಿಲ್ಲ ಆತ ತನ್ನ ಕಾರ್ಯ ಯಾವುದನ್ನೂ ನಾಶಗೊಳಿಸುವುದಿಲ್ಲ ತಾನಾಯ್ದುಕೊಂಡ ಸಂತಾನವನ್ನು ಅಳಿಸಿಬಿಡುವುದಿಲ್ಲ ತನ್ನನ್ನು ಪ್ರೀತಿಸುವವನ ಸಂತಾನವನ್ನು ತೆಗೆದು ಹಾಕುವುದಿಲ್ಲ. ಉಳಿಸಿದನಾತ ಒಂದು ಜನಶೇಷವನ್ನು ಇಸ್ರಯೇಲಿಗೆ ಅವರಿಂದ ಒಂದು ಬೇರನ್ನು ಅನುಗ್ರಹಿಸಿದನು ದಾವೀದನಿಗೆ.
23 : ರೆಹಬ್ಬಾಮನು ಮತ್ತು ಯಾರೊಬ್ಬಾಮನು ಹೀಗೆ ಸೊಲೊಮೋನನು ವಿಶ್ರಮಿಸಿಕೊಂಡನು ತನ್ನ ಪೂರ್ವಜರೊಂದಿಗೆ ತನ್ನ ಸಂತಾನದಲಿ ರೆಹಬ್ಬಾಮನನ್ನು ಬಿಟ್ಟುಹೋದನು ತನ್ನ ಹಿಂದೆ. ಅಜ್ಞಾನಿಯೂ ಅವಿವೇಕಿಯೂ ಆಗಿದ್ದನಿವನು ಜನಾಂಗದಲ್ಲೆ. ಆನರು ತಿರುಗಿಬೀಳುವಂತೆ ಮಾಡಿದನಿವನು ತನ್ನ ದುರಾಲೋಚನೆಯಿಂದಲೇ. ನೆಬಾಟನ ಮಗನಾದ ಯಾರೊಬ್ಬಾಮನು ಕೂಡ ಅಂತವನೇ. ಇಸ್ರಯೇಲರು ಪಾಪಮಾಡುವಂತೆ ಪ್ರಚೋದಿಸಿದವನು ಅವನೇ ಎಫ್ರಯಿಮಿಗೆ ಪಾಪಮಾರ್ಗವನ್ನು ತೆರೆದಿಟ್ಟವನು ಅವನೇ.
24 : ಇವರ ಪಾಪಗಳು ಹೆಚ್ಚಿದವು ಬಹಳವಾಗಿ ನಾಡಿನಿಂದ ಹೊರಗೆ ದಬ್ಬಲ್ಪಟ್ಟರು ಈ ಕಾರಣಕ್ಕಾಗಿ.
25 : ಎಲ್ಲ ಬಗೆಯ ದುಷ್ಟತನದಲ್ಲಿ ನಿರತರಾದರವರು ಪ್ರತೀಕಾರವು ಅವರ ಮೇಲೆ ಬರುವವರೆಗು.

· © 2017 kannadacatholicbible.org Privacy Policy