Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಮೋಶೆ ಆ ಯಕೋಬನ ಸಂತತಿಯಿಂದ ಬರ ಮಾಡಿದನು ದಯಾಶೀಲನೊಬ್ಬನನ್ನು, ದೇವರಿಗೂ ಮಾನವರಿಗೂ ಪ್ರಿಯನಾದ ವ್ಯಕ್ತಿಯೊಬ್ಬನನ್ನು, ಅವನೇ ಮೋಶೆ ಎಂಬವನು, ಪೂನ್ಯ ಸ್ಮರಣೆಗೆ ಯೋಗ್ಯನಾದವನು.
2 : ಇವನನ್ನು ಏರಿಸಿದನು ಮಹಿಮಾಪದವಿಗೆ ವೈರಿಗಳೂ ಭಯಪಡುವಂಥ ಘನತೆಗೆ.
3 : ಇವನ ಬಾಯಿಮಾತಿನ ಮೂಲಕವಾಗಿ ಸರ್ವೇಶ್ವರ ನಡೆಸಿದನು ಅದ್ಭುತಗಳನ್ನು ಅನಿರೀಕ್ಷಿತವಾಗಿ ಘನತೆಗೇರಿಸಿದವನನ್ನು ಅರಸರುಗಳ ಎದುರಿನಲ್ಲಿ ಕೊಟ್ಟನವನಿಗೆ ತನ್ನ ನಿಬಂಧನೆಗಳನ್ನು ತನ್ನ ಜನರ ಹಿತಕ್ಕಾಗಿ ತೋರಿಸಿದನು ತನ್ನ ಮಹಿಮಾ ಪ್ರಭಾವವನ್ನು ಅವನಿಗಾಗಿ.
4 : ಇವನ ಸತ್ಯಸಾತ್ವಿಕತೆಗಳಿಗಾಗಿ ಇವನನ್ನು ಪ್ರತಿಷ್ಠಿಸಿದನಾತ ಸಕಲ ಮಾನವರಲ್ಲಿ ಇವನನ್ನೇ ಆಯ್ದುಕೊಂಡನಾತ.
5 : ಇವನು ಕೇಳುವಂತೆ ಮಾಡಿದನು ತನ್ನ ವಾಣಿಯನ್ನು ಕಾರ್ಗತ್ತಲಿಗೆ ಕೊಂಡೊಯ್ದು, ಮುಖಾಮುಖಿ ಯಾಗಿ ಕೊಟ್ಟನವನಿಗೆ ಆಜ್ಞೆಗಳನ್ನು ಜೀವದಾಯಕ ಹಾಗು ಜ್ಞಾನದಾಯಕ ನಿಯಮವದು ಯಕೋಬನೊಡನೆ ಮಾಡಿಕೊಂಡ ಒಡಂಬಡಿಕೆಯದು ಇಸ್ರಯೇಲರಿಗೆ ಬೋಧಿಸಬೇಕಾಗಿದ್ದ ನ್ಯಾಯವಿಧಿಗಳವು.
6 : ಆರೋನ ಅನಂತರ ಇವನಂತೆ ಪೂಜ್ಯ ಆರೋನನನ್ನು ಮೇಲಕ್ಕೆತ್ತಲಾಯಿತು ಇವನು ಮೋಶೆಯ ಅಣ್ಣನೂ ಲೇವಿಯ ಕುಲದವನೂ ಆಗಿದ್ದನು.
7 : ಸರ್ವೇಶ್ವರ ನಿತ್ಯ ಒಡಂಬಡಿಕೆಯೊಂದನ್ನು ಸ್ಥಾಪಿಸಿದ ಇವನೊಂದಿಗೆ ತನ್ನ ಜನರ ಹಿತಕ್ಕಾಗಿ ಯಾಜಕತ್ವವನ್ನು ಅನುಗ್ರಹಿಸಿದ ಇವನಿಗೆ ಅಲಂಕರಿಸಿದ ಇವನನ್ನು ಸುಂದರವಾದ ಆಭರಣಗಳಿಂದ ಸಿಂಗರಿಸಿದನು ಪ್ರತಿಭಾಯುತ ನಿಲುವಂಗಿಯಿಂದ.
8 : ಬಲಪಡಿಸಿದವನನ್ನು ಪೂರ್ಣ ಗೌರವದಿಂದ ಹೊದಿಸಿದ ನಾರುಮಡಿಯ ಒಳವಸ್ತ್ರ ನಿಲುವಂಗಿಗಳಿಂದ ‘ಏಫೋದು’ ಎಂಬ ಗಂಭೀರ ತೊಡಿಗೆಯಿಂದ.
9 : ಚಿನ್ನದ ದಾಳಿಂಬ ಹಾಗು ಗೆಜ್ಜೆಗಳಿದ್ದವು ಅವನಾ ನಿಲುವಂಗಿಗೆ ನಡೆದುಹೋಗುವಾಗ ಸದ್ದು ಮಾಡುವುದಕ್ಕೆ ದೇವಾಲಯದಲ್ಲಿ ಸೇವೆ ಮಾಡುವಾಗ ಶಬ್ದ ಕೇಳಿಸುವುದಕ್ಕೆ ತನ್ನ ಜನಾಂಗದವರಾ ಶಬ್ದ ಕೇಳಿ ನೆನಪಿಗೆ ತಂದುಕೊಳ್ಳಲಿಕ್ಕೆ.
10 : ಶೃಂಗರಿಸಿದವನನ್ನು ಸರ್ವೇಶ್ವರ ಚಿನ್ನದ, ನೀಲ ಮತ್ತು ಊದವರ್ಣದ ದಾರದಿಂದ ಕಸೂತಿಯವರು ತಯಾರಿಸಿದ ದೀಕ್ಷಾವಸ್ತ್ರದಿಂದ ಅದರೊಂದಿಗೆ ದೈವನಿರ್ಣಯಗಳನ್ನು ಸೂಚಿಸುವಂಥ ‘ಊರಿಮ್’ ಮತ್ತು ‘ತುಮ್ಮಿಮ್’ಗಳಿಂದ.
11 : ಶೃಂಗರಿಸಿದ ಕಸೂತಿ ಕೆಲಸದವರು ತಯಾರಿಸಿದ, ಹುರಿಮಾಡಿದ ಕಡುಗೆಂಪು ವರ್ಣದ ದಾರದಿಂದ; ಇಸ್ರಯೇಲ್ ಕುಲಗಳ ಪ್ರಕಾರ ಜ್ಞಾಪಕಾರ್ಥ ಅಕ್ಷರಗಳನ್ನು ಕೊರೆಯಿಸಿದ; ಮುದ್ರಾರತ್ನದಂತೆ ಕೆತ್ತಿಸಿದ, ಅಕ್ಕಸಾಲಿಗನಿಂದ ಕುಂದಣದಲ್ಲಿ ಕಟ್ಟಿಸಿದ ರತ್ನಗಳಿಂದ.
12 : ಇರಿಸಿದನು ಆತನ ಮೇಲೆ ಚಿನ್ನದ ಕಿರೀಟ, ಪೂಜಾಪೇಟ ಕೆತ್ತಿಸಿದನು ಅದರ ಮೇಲೆ “ಸರ್ವೇಶ್ವರನಿಗೆ ಮೀಸಲು” ಎಂಬ ಪ್ರತಿಷ್ಠಿತ ವಾಕ್ಯ. ಎಂಥ ಗೌರವಾನ್ವಿತ ಅಲಂಕಾರ! ಸುಂದರವಾಗಿ ಕಂಗೊಳಿಸುವ ಅಮೂಲ್ಯ ಕಸೂತಿ ಕೆಲಸ!
13 : ತತ್ಪೂರ್ವದಲ್ಲಿರಲಿಲ್ಲ ಇಂಥ ಸೊಗಸಾದ ವಸ್ತುಗಳು ಧರಿಸುವಂತಿರಲಿಲ್ಲ ಅವುಗಳನ್ನು ಪರಕೀಯರಾರು ಅವನ ಮಕ್ಕಳು ಹಾಗು ಸಂತಾನದವರು ಮಾತ್ರ ಧರಿಸಬಹುದಾಗಿತ್ತು.
14 : ಇವನು ತಪ್ಪದೆ ಅರ್ಪಿಸಬೇಕಾಗಿತ್ತು ದಿನಕ್ಕೆ ಎರಡು ಬಾರಿ ದಹನಬಲಿಗಳನ್ನು.
15 : ಪ್ರತಿಷ್ಠಿಸಿದನು ಮೋಶೆ ಆರೋನನನ್ನು, ಪವಿತ್ರ ತೈಲದಿಂದ ಅಭಿಷೇಕಿಸಿದವನನ್ನು ಸರ್ವೇಶ್ವರನಿಗೆ ಸೇವೆ ಮಾಡುವುದಕ್ಕೂ ಯಾಜಕ ಕಾರ್ಯಗಳನ್ನು ನಡೆಸುವುದಕ್ಕೂ ಜನರನ್ನು ಆತನ ನಾಮದಲ್ಲಿ ಆಶೀರ್ವದಿಸುವುದಕ್ಕೂ ಶಾಶ್ವತ ಒಡಂಬಡಿಕೆಯಾಯಿತದು ಆಕಾಶವಿರುವವರೆಗೂ ಅವನಿಗೂ ಅವನ ಸಂತಾನಕ್ಕೂ.
16 : ಸರ್ವೇಶ್ವರನಿಗೆ ಬಲಿಯನ್ನು ಅರ್ಪಿಸುವುದಕ್ಕೆ ಧೂಪ, ಸುಗಂಧಬಲಿಗಳನ್ನು ಜ್ಞಾಪಕಾರ್ಥವಾಗಿ ಒಪ್ಪಿಸುವುದಕ್ಕೆ ಜನರಿಗೋಸ್ಕರ ದೋಷಪರಿಹಾರ ಮಾಡುವುದಕ್ಕೆ ಜೀವಿಗಳಲ್ಲೆಲ್ಲಾ ಆತನನ್ನೆ ಆಯ್ದುಕೊಳ್ಳಲಾಯಿತು.
17 : ಇಸ್ರಯೇಲರಿಗೆ ನಿಬಂಧನೆಗಳನ್ನು ಬೋಧಿಸುವುದಕ್ಕೆ ತನ್ನ ಧರ್ಮಶಾಸ್ತ್ರದ ಮೂಲಕ ಅವರಿಗೆ ಜ್ಞಾನಪ್ರಕಾಶ ನೀಡುವುದಕ್ಕೆ ಕೊಟ್ಟನವನಿಗೆ ಆಜ್ಞಾವಿಧಿನಿಯಮಗಳನ್ನು ದೈವನಿರ್ಣಯದ ಒಡಂಬಡಿಕೆಗಳಲ್ಲಿ ಅಧಿಕಾರವನ್ನು.
18 : ಪರಕೀಯರು, ದಾತಾನ – ಅಭೀರಾಮರು, ಅವರ ಪಂಗಡದವರು, ಕೋರಹನು ಹಾಗು ಅವನ ಗುಂಪಿನವರು ಮರುಭೂಮಿಯಲ್ಲಿ ಅವನ ಮೇಲೆ ಅಸೂಯೆಪಟ್ಟರು ಬಹುಕೋಪರೌದ್ರದಿಂದ ಅವನ ಸುತ್ತ ಒಟ್ಟಾಗಿ ಕೂಡಿಬಂದರು.
19 : ಇದು ಹಿಡಿಸಲಿಲ್ಲ ಸರ್ವೇಶ್ವರನ ಮನಸ್ಸಿಗೆ, ದೃಷ್ಟಿಗೆ, ಅವರನ್ನು ನಾಶಗೊಳಿಸಲು ಗುರಿಪಡಿಸಿದ ತನ್ನ ಕೋಪಾಗ್ನಿಗೆ. ಅದ್ಭುತವನ್ನು ನಡೆಸಿದನು ಅವರಿಗೆ ವಿರುದ್ಧವಾಗಿ, ಅವರಿಲ್ಲದಂತೆ ಮಾಡಿದ ಬೆಂಕಿಗೆ ಆಹುತಿಯಾಗಿಸಿ.
20 : ಸರ್ವೇಶ್ವರ ನೀಡಿದ ಆರೋನನಿಗೆ ಹೆಚ್ಚಿನ ಗೌರವವನ್ನು ಅನುಗ್ರಹಿಸಿದವನಿಗೆ ಸ್ವಾಸ್ತ್ಯವನ್ನು ಏರ್ಪಡಿಸಿದ ಬೆಳೆಯ ಪ್ರಥಮ ಫಲ ಅವನಿಗೆ ಸಲ್ಲುವಂತೆ ಅವನಿಗೇ ಮೊದಲು ಆಹಾರವು ಸಮೃದ್ಧಿಯಾಗಿ ಒದಗುವಂತೆ.
21 : ತನಗೇ ಅರ್ಪಿತವಾದ ಬಲಿಯರ್ಪಣೆಗಳನ್ನು ಕೊಟ್ಟನಾತನು ಇವನಿಗೂ ಇವನ ಸಂತಾನಕ್ಕೂ. ಹೀಗೆ ಅವರು ಅವುಗಳನ್ನೇ ತಿನ್ನುವಂತೆ ಆಯಿತು.
22 : ಆದರೆ ಅವನಿಗಿರಲಿಲ್ಲ ನಾಡಿನಲ್ಲಿ ಸ್ವಂತ ಆಸ್ತಿ, ಇರಲಿಲ್ಲ ಪಾಲು ನಾಡಿನ ಜನರಲ್ಲಿ, ಏಕೆಂದರೆ ಸರ್ವೆಶ್ವರನೇ ಆಗಿದ್ದ ಅವನ ಪಾಲು ಹಾಗು ಆಸ್ತಿ.
23 : ಫೀನೆಹಾಸನು ಎಲ್ಲಾಜಾರನ ಮಗ ಫೀನೆಹಾಸನು ಮೂರನೆಯವನು ಸನ್ಮಾನ್ಯರಲ್ಲಿ, ಆಸಕ್ತಿಯುಳ್ಳವನಾಗಿದ್ದನಾತ ಸರ್ವೇಶ್ವರನ ಭಯಭಕ್ತಿಯಲ್ಲಿ. ಧೈರ್ಯದಿಂದ ಎದ್ದುನಿಂತು ಪ್ರತಿಭಟಿಸಿದ ಜನರು ಧರ್ಮಭ್ರಷ್ಠರಾದ ಸಮಯದಲ್ಲಿ. ದೋಷಪರಿಹಾರ ಮಾಡಿದ ಇಸ್ರಯೇಲರ ಪರವಾಗಿ.
24 : ಆದ್ದರಿಂದ ಸಮಾಧಾನ ಒಡಂಬಡಿಕೆ ಮಾಡಲಾಯಿತು ಇವನೊಂದಿಗೆ ಪವಿತ್ರಸ್ಥಾನದಲ್ಲಿ ಜರನ ಮುಂದಾಳಾಗಿರುವಂತೆ ಆತನಿಗೂ ಅವನ ಸಂತತಿಗೂ ಯಾಜಕತ್ವದ ಶಾಶ್ವತ ಗೌರವ ದೊರಕುವಂತೆ.
25 : ಒಡಂಬಡಿಕೆ ಮಾಡಿಕೊಂಡ ಸರ್ವೇಶ್ವರ ಯೆಹೂದಕುಲದ ಜೆಸ್ಸೆಯ ಮಗ ದಾವೀದನೊಂದಿಗೆ ಮಗನಿಂದ ಮಗನಿಗೆ ಅವರದೇ ಆಯಿತು ಅರಸೊತ್ತಿಗೆ ಅಂತೆಯೇ ಆರೋನನ ಸ್ವಾಸ್ತ್ಯ ಕೊಡಲಾಯಿತು ಆತನ ಪೀಳಿಗೆಗೆ.
26 : ದೇವಜನರಲ್ಲಿದ್ದ ಒಳ್ಳೆಯವುಗಳು ನಾಶವಾಗದಂತೆ ತಲೆಮಾರಿನಿಂದ ತಲೆಮಾರಿಗೆ ಅವರ ಕೀರ್ತಿ ಉಳಿಯುವಂತೆ ನೀತಿಯಿಂದ ಅವರಿಗೆ ನ್ಯಾಯತೀರಿಸುವಂತೆ ದೇವರು ನೀಡಲಿ ಸುಜ್ಞಾನವನ್ನು ನಿಮಗೆ.

· © 2017 kannadacatholicbible.org Privacy Policy