1 : ಪೂರ್ವಜರ ಸ್ತುತಿ
ವಂದನೆ ಸಲ್ಲಿಸೋಣ ನಾವೀಗ
ಪ್ರಸಿದ್ಧ ಪುರುಷರಿಗೆ
ನಮ್ಮನ್ನು ಪಡೆದ ನಮ್ಮ ಕುಲದ
ಮೂಲಪಿತೃಗಳಿಗೆ.
2 : ಪ್ರಕಟಿಸಿಹನು ಸರ್ವೇಶ್ವರ ತನ್ನ
ಮಹಾಮಹಿಮೆಯನ್ನು
ತೋರ್ಪಡಿಸಿಹನು ಮೊದಲಿಗಿಂತಲೂ
ತನ್ನ ಮಹಾಶಕ್ತಿಯನು.
3 : ತಮ್ಮ ತಮ್ಮ ರಾಜ್ಯಗಳನು ಆಳಿದವರು,
ತಮ್ಮ ಶಕ್ತಿಯಿಂದ ಹೆಸರು ಗಳಿಸಿಕೊಂಡವರು,
ತಮ್ಮ ತಿಳುವಳಿಕೆಯಿಂದ ಆಲೋಚನೆ
ನೀಡಿದವರು,
ಪ್ರವಚನಗಳಿಂದ ಸಂದೇಶವನು
ಸಾರಿದವರು;
4 : ತಮ್ಮ ಸಲಹೆಗಳಿಂದ ಜನಾಂಗಕ್ಕೆ
ಮುಂದಾಳಾದವರು,
ತಮ್ಮ ತಿಳುವಳಿಕೆಯಿಂದ ಜನಾಂಗಕ್ಕೆ
ವಿದ್ಯಾವಂತರಾದವರು,
(ಜ್ಞಾನಮಯವಾಗಿತ್ತು ಇವರು ನೀಡಿದ
ಬೋಧನೆಯು)
5 : ರಾಗಗಳನ್ನು ಕಂಡು ಹಿಡಿದವರು
ಗೀತೆಗಳನ್ನು ರಚಿಸಿ ಕಲಿಸಿದರು.
6 : ತಮ್ಮ ನಿವಾಸಗಳಲ್ಲಿ ಶಾಂತಿಯಿಂದ ಬಾಳಿದ
ಸಮರ್ಥ ಶ್ರೀಮಂತರು.
7 : ಇವರೆಲ್ಲರು ತಮ್ಮ ಜೀವನಕಾಲದಲ್ಲಿ
ಗೌರವಕ್ಕೆ ಪಾತ್ರರಾಗಿದ್ದರು;
ಆಯಾಕಾಲದಲ್ಲಿ ಭೂಷಣಪ್ರಾಯರಾಗಿ
ಹೋದರು.
8 : ಇವರಲಿ ಕೆಲವರು ತಮ್ಮ ಹೆಸರುಗಳನ್ನು
ಕೆತ್ತಿ ಹೋದರು
ಆ ಹೆಸರುಗಳು ಅವರ ಕೀರ್ತಿಯನ್ನು
ಸಾರುತ್ತಿರುವುವು.
9 : ಇನ್ನು ಕೆಲವರು ಯಾವ ಸ್ಮಾರಕವೂ ಇಲ್ಲದೆ
ಎಂದೂ ಇಲ್ಲದ್ದವರಂತೆ ಗತಿಸಿಹೋದರು
ಹುಟ್ಟಲಿಲ್ಲವೇನೋ ಎಂಬಂತೆ
ಕಣ್ಮರೆಯಾಗಿ ಹೋದರು
ಅವರ ನಂತರ ಅವರ ಮಕ್ಕಳು ಸಹ ಅವರಂತೆ
ಹೋಗಿಬಿಟ್ಟರು.
10 : ಆದರೆ ಅವರು ದಯಾಳುಗಳಾಗಿದ್ದರು
ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು.
11 : ಒಳ್ಳೆಯ ಸೊತ್ತು ಸದಾ ಉಳಿಯುವುದು
ಅವರ ಪೀಳಿಗೆಯಲ್ಲಿ
ಅವರ ಮಕ್ಕಳು ಸ್ಥಿರವಾಗಿರುವರು
ಒಡಂಬಡಿಕೆಯ ಅನುಸರಣೆಯಲ್ಲಿ.
12 : ಅವರ ಸಂತಾನ ಸ್ಥಿರವಾಗಿರುವುದು
ಒಡಂಬಡಿಕೆಯ ಪಾಲನೆಯಲ್ಲಿ
ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು
ಅದರ ಅನ್ವೇಷಣೆಯಲ್ಲಿ.
13 : ಉಳಿಯುವುದು ಅವರ ಸಂತಾನ ಎಂದೆಂದಿಗು
ಅವರ ಗೌರವ ಅಳಿಸಿಹೋಗದು.
14 : ಸಮಾಧಾನದಲ್ಲಿ ಅವರ ದೇಹಗಳಿಗೆ
ಸಮಾಧಿಯಾಯಿತು
ಜೀವಂತವಾಗುವುದು ಅವರ ಹೆಸರು
ತಲತಲಾಂತರದವರೆಗೂ.
14 : ಸಮಾಧಾನದಲ್ಲಿ ಅವರ ದೇಹಗಳಿಗೆ
ಸಮಾಧಿಯಾಯಿತು
ಜೀವಂತವಾಗುವುದು ಅವರ ಹೆಸರು
ತಲತಲಾಂತರದವರೆಗೂ.
15 : ಕುಲದವರು ಪ್ರಸಿದ್ಧಪಡಿಸುವರು ಅವರ
ಜ್ಞಾನವನು
ಸಭೆಯು ಸಾರುವುದು ಅವರ ಕೀರ್ತಿಯನು.
16 : ಹನೋಕ
ಸರ್ವೇಶ್ವರನಿಗೆ ಮೆಚ್ಚಿಕೆಯಾಗಿದ್ದರಿಂದ
ಹನೋಕನು ಒಯ್ಯಲ್ಪಟ್ಟನು
ಹೀಗೆ ಪರಿವರ್ತನೆಯ ಆದರ್ಶವಾದನು
ಸಮಸ್ತ ಪೀಳಿಗೆಗು.
17 : ನೋಹ
ನೋಹನು ಕಂಡುಬಂದನು
ಸಂಪೂರ್ಣ ಸತ್ಯವಂತನಾಗಿ
ಅಂಗೀಕೃತನಾದನು ಪ್ರಕೋಪದ ಕಾಲದಲ್ಲಿ
ಲೋಕಕ್ಕೆ ಬದಲಾಗಿ
ಹೀಗೆ ಜಗತ್ತಿಗೊಂದು ಜನಶೇಷ ಉಳಿಯಿತು
ಪ್ರಳಯಕಾಲದಲ್ಲಿ.
18 : ಅವನೊಂದಿಗೆ ನಿತ್ಯವಾದ
ಒಡಂಬಡಿಕೆಗಳಾದವು
ಎಲ್ಲ ಪ್ರಾಣಿಗಳು ಪ್ರಳಯದಿಂದ
ನಾಶವಾಗುವುದಿಲ್ಲವೆಂದು.
19 : ಅಬ್ರಹಾಮ
ಅಬ್ರಹಾಮನು ತಂದೆಯಾದನು ಅನೇಕ
ಜನಾಂಗಗಳಿಗೆ
ಪ್ರಖ್ಯಾತಿಯಲ್ಲಿ ಯಾವನು ಸಿಗನು
ಸರಿಸಮಾನನು ಅವನಿಗೆ.
20 : ನಡೆದುಕೊಂಡನವನು ಮಹೋನ್ನತನ
ಇಚ್ಛೆಯಂತೆ
ಮಾಡಿಕೊಂಡನಾತ ಒಡಂಬಡಿಕೆಯನ್ನು
ಅವನೊಂದಿಗೆ
ಒಡಂಬಡಿಕೆಯನ್ನು ಸ್ಥಿರಪಡಿಸಿದನಾತ ಅವನ
ದೇಹದಲ್ಲೇ
ನಂಬಿಗಸ್ಥನಾಗಿ ಕಂಡುಬಂದನವನು
ಅಗ್ನಿಪರೀಕ್ಷೆಯ ಕಾಲದಲ್ಲೇ.
21 : ಎಂದೇ ಅವನ ಸಂತಾನದ ಮೂಲಕ ಎಲ್ಲ
ಜನರಿಗೆ ಆಶೀರ್ವಾದವಿರುವುದೆಂದು
ಧರೆಯ ದೂಳಿನಂತೆ ಅವನ ಸಂತಾನ
ಹೆಚ್ಚುವುದೆಂದು
ಅವನ ಸಂತಾನವು ನಕ್ಷತ್ರಗಳಷ್ಟು
ಅಧಿಕವಾಗುವುದೆಂದು
ಸಮುದ್ರದಿಂದ ಸಮುದ್ರದವರೆಗು,
ನದಿಯಿಂದ ಭೂಮಿಯ ಕಟ್ಟಕಡೆಯವರೆಗು
ವನಿಗೆ ಸ್ವಾಸ್ತ್ಯವನ್ನು ಕೊಡುವೆನೆಂದು
ಸರ್ವೇಶ್ವರ ಆಣೆಯಿಟ್ಟು ವಾಗ್ದಾನಮಾಡಿದನು.
22 : ಇಸಾಕ, ಯಕೋಬ
ಅಬ್ರಹಾಮನ ನಿಮಿತ್ತ ಆತನ ಮಗ
ಇಸಾಕನೊಂದಿಗೆ ಮಾಡಲಾಯಿತು ಅದೇ
ವಾಗ್ದಾನ.
23 : ಸ್ಥಿರಗೊಳಿಸಿದನು ಸರ್ವೇಶ್ವರ ಎಲ್ಲ
ಮಾನವರಿಗೂ
ಒದಗಲಿರುವ ಆ ಆಶೀರ್ವಾದವನ್ನು,
ಒಡಂಬಡಿಕೆಯನ್ನು;
ಯಕೋಬನ ತಲೆಯ ಮೇಲೆ ಹೊರಿಸಿದನು
ಆ ಹೊಣೆಗಾರಿಕೆಯನ್ನು;
ಅವನನ್ನು ದೃಢಗೊಳಿಸಿ, ಸೊತ್ತನ್ನು ಕೊಟ್ಟು,
ಹನ್ನೆರಡು ಕುಲಗಳಿಗೆ ವಿಭಾಗಿಸಿದನು
ಆ ಪಾಲನ್ನು.