1 : ಸೂರ್ಯ
ಉನ್ನತದಲ್ಲಿ ನಿರ್ಮಲ ಆಕಾಶ
ಎಷ್ಟೋ ಪ್ರಭಾವವುಳ್ಳದ್ದು
ಗಗನದ ದೃಶ್ಯ ಎಷ್ಟೋ ಮಹಿಮೆಯುಳ್ಳದ್ದು!
2 : ಸೂರ್ಯನು ಉದಯವಾಗಿ ಸಾರುತ್ತಾನೆ
ಶುಭಸಂದೇಶ
ಏರುವ ರವಿ ಎಷ್ಟು ಆಶ್ಚರ್ಯಕರ, ಎಂಥ
ಮಹೋನ್ನತ ಸಾಧನ !
3 : ಭೂಮಿಯನ್ನೆಲ್ಲಾ ಒಣಗಿಸುತ್ತಾನೆ
ಮಧ್ಯಾಹ್ನದೊಳು
ಯಾರಿಂದ ಸಾಧ್ಯ ಅವನ ಉರಿಯ ತಾಪವನು
ಸಹಿಸಲು?
4 : ಕುಲುಮೆಯನ್ನು ಊದುವವನು ಕಾವಿನ
ಕೆಲಸದಲ್ಲೇ ಇರುತ್ತಾನೆ
ಸೂರ್ಯನಾದರೋ ಮೂರರಷ್ಟು ತೀಕ್ಷ್ಣ
ಆಗಿದ್ದು ಪರ್ವತಗಳನ್ನೇ ಸುಡುತ್ತಾನೆ.
ಬಿಸಿ ಹವೆಬಿಡುತ್ತಾ ಹೊಳೆಯುವ ಕಿರಣಗಳಿಂದ
ಕಣ್ಣುಗಳನ್ನೆ ಕುಕ್ಕಿಸುತ್ತಾನೆ.
5 : ಅವನನ್ನು ರಚಿಸಿದ ಸರ್ವೇಶ್ವರ ಘನವಂತ
ಆತನ ಅಪ್ಪಣೆಯಂತೆ ಹಿಡಿದೋಡುತ್ತಾನೆ
ರವಿ ತನ್ನ ಪಥ.
6 : ಚಂದ್ರ
ಚಂದ್ರನು ಸಹ ಕಾಣಿಸಿಕೊಳ್ಳುತ್ತಾನೆ
ಸದಾ ಸಮಯಕ್ಕೆ ಸರಿಯಾಗಿ
ಪ್ರಪಂಚಕ್ಕೆ ಗುರುತನ್ನು ತೋರಿಸುತ್ತಾನೆ,
ವಿಶೇಷ ದಿನಗಳನ್ನು ಸೂಚಿಸಿ.
7 : ಹಬ್ಬದ ದಿನಗಳು ಸೂಚಿತವಾಗುವುದು
ಚಂದ್ರನಿಂದಲೇ
ಅವನ ಬೆಳಕು ಕಡಿಮೆಯಾಗುತ್ತಾ ಬರುವುದು
ಹುಣ್ಣಿಮೆಯಾದ ಮೇಲೆ.
8 : ತಿಂಗಳು ಸಹ ಕರೆಯಲಾಗುತ್ತದೆ ಚಂದ್ರನ
ಹೆಸರಿನಿಂದ
ಬೆಳೆಯುತ್ತಾನೆ ಆಶ್ಚರ್ಯಕರವಾಗಿ
ಪೂರ್ಣವಾಗುತ.
ಆಕಾಶದಲಿ ಹೊಳೆಯುತ್ತಿರುವನು
ಮಹೋನ್ನತ ಗಣಗಳ ಸಾಧನವಾಗಿ
ಗಗನ ಮಂಡಲದ ತಾರಾಗಣಗಳಿಗೆ
ಬೆಳಗುವ ಪತಾಕೆಗೆ ಸಮನಾಗಿ.
9 : ನಕ್ಷತ್ರಗಳು
ಮಿಣುಗುವ ನಕ್ಷತ್ರಗಳು ಆಕಾಶದ
ಸೌಂದರ್ಯಸೊಬಗುಗಳು
ಮಹೋನ್ನತ ಸರ್ವೇಶ್ವರನ
ದೇದೀಪ್ಯಮಾನವಾದ ಆಭರಣಗಳು.
10 : ಇವೆಲ್ಲವು ನಿಂತುಕೊಳ್ಳುತ್ತವೆ ತಮಗೆ
ನಿಯಮಿತ ಸ್ಥಳಗಳಲಿ
ಅವು ಬಳಲಿಹೋಗುವುದಿಲ್ಲ ತಮ್ಮ ಕಾವಲಿನಲಿ
ಅನುಸರಿಸುತ್ತವೆ ಈ ಪರಿ ಪರಿಶುದ್ಧನ
ಅಣತಿ.
11 : ಮುಗಿಲು ಬಿಲ್ಲು
ಮಳೆಬಿಲ್ಲನು ನೋಡು: ಅದನ್ನುಂಟು
ಮಾಡಿದಾತನನ್ನು ಕೊಂಡಾಡು
ಅದು ಹೊಳೆಯುವಾಗ ಎಷ್ಟು ರಮ್ಯವಾಗಿದೆ
ನೋಡು !
12 : ಆಕಾಶವನ್ನೆಲ್ಲ ಬಳಸುವುದು ಕಾಂತಿಯ
ಆವರಣದಿಂದ
ಬಿಲ್ಲಂತೆ ಅದು ಬಗ್ಗಿರುವುದು,
ಮಹೋನ್ನತನ ಕೈಗಳಿಂದ.
13 : ಪ್ರಕೃತಿಯ ಅದ್ಭುತಗಳು
ಸರ್ವೇಶ್ವರ ತನ್ನ ಅಪ್ಪಣೆಯ ಪ್ರಕಾರ
ಹಿಮಬೀಳುವಂತೆ ಮಾಡುತ್ತಾನೆ
ತನ್ನ ನ್ಯಾಯತೀರ್ಪಿನ ಸಿಡಿಲುಗಳನ್ನು
ತೀವ್ರವಾಗಿ ಕಳುಹಿಸುತ್ತಾನೆ.
14 : ಈ ಕಾರಣ ತೆರೆಯುವುವು ನಿಧಿನಿಲಯಗಳು
ಹಕ್ಕಿಗಳಂತೆ ಹಾರಿಬರುವುವು ಮೋಡಗಳು.
15 : ಆತನ ಅಪಾರಶಕ್ತಿಯಿಂದ ಬಲಗೊಳ್ಳುತ್ತವೆ
ಮೋಡಗಳು
ಸಣ್ಣಗೆ ಒಡೆದು ಚದುರುತ್ತವೆ ಆಲಿಕಲ್ಲುಗಳು.
16 : ಬೆಟ್ಟಗಳು ನಡುಗುವುವು ಆತನು
ಪ್ರತ್ಯಕ್ಷವಾದಾಗ
ತೆಂಕಣಗಾಳಿ ಬೀಸುವುದು ಆತನಿಗೆ
ಇಷ್ಟವಾದಾಗ
ಅಂತೆಯೇ ಬಡಗಣ ಗಾಳಿ, ಸುಂಟರಗಾಳಿ
ಆತನಿಗೆ ಇಷ್ಟಬಂದಾಗ.
17 : ಆತನ ಗುಡುಗಿನ ಶಬ್ದಕ್ಕೆ ಜಗ
ಗುರಿಯಾಗುತ್ತದೆ ವೇದನೆಗೆ
ಮಂಜನು ಚಿಮುಕಿಸುವನಾತ
ಹಕ್ಕಿಗಳು ಹಾರಿಬರುವಂತೆ
ಮಿಡಿತೆಗಳು ಧರೆಗೆ ಇಳಿದು ಬರುವ ಹಾಗೆ.
18 : ಬೆರಗಾಗುವುವು ಕಣ್ಣುಗಳು ಅದರ ಬಿಳುಪಿನ
ಚೆಲುವಿಗೆ
ಚಕಿತಗೊಳ್ಳುವುದು ಹೃದಯ ಅದರ ಹನಿಹನಿಗೆ.
19 : ಭೂಮಿಯ ಮೇಲೆ ಆತ ಸುರಿಸುವನು
ಇಬ್ಬನಿಯನು ಉಪ್ಪಿನಂತೆ
ಹೆಪ್ಪುಗಟ್ಟಿದಾಗ ಅದಾಗುವುದು ಮುಳ್ಳಿನ
ಮೊನೆಯಂತೆ.
20 : ನೀರ್ಗಲ್ಲಾಗುವುದಾ ನೀರು ಬಡಗಣ ಶೀತಲ
ಗಾಳಿಬೀಸಲು
ಅದು ಹರಡಿ ನೆಲೆಸುವುದು ಎಲ್ಲ ನೀರಿನ
ಗುಂಡಿಗಳ ಮೇಲೂ
ಆ ನೀರೇ ಆಗ ಕವಚ
ಧರಿಸಿಕೊಂಡಂತಾಗುವುದು.
21 : ಪರ್ವತಗಳ ಕಬಳಿಸಿ, ಅರಣ್ಯವನು
ಸುಡುವುದು ಗಾಳಿ
ಹಸಿರು ಹುಲ್ಲನ್ನೆಲ್ಲಾ ಬೆಂಕಿಯಂತೆ
ದಹಿಸಿಬಿಡುವುದಾ ಗಾಳಿ.
22 : ತೀವ್ರವಾಗಿ ಬರುವ ಮಂಜು ಎಲ್ಲಕೂ
ಕ್ಷೇಮಕರ
ಶೆಕೆಯ ನಂತರ ಬರುವ ಇಬ್ಬನಿ ಸುಖಕರ.
23 : ತನ್ನ ಸಂಕಲ್ಪದನುಸಾರ ಶಾಂತಪಡಿಸುವನಾತ
ಸಾಗರಗಳನ್ನು
ಅವುಗಳಲ್ಲಿ ನೆಟ್ಟಿಹನು ದ್ವೀಪಗಳನು.
24 : ಸಮುದ್ರ ಪ್ರಯಾಣಮಾಡುವವರು
ತಿಳಿಸುವರು ಅದರ ಗಂಡಾಂತರಗಳನು
ಚಕಿತರಾಗುವೆವು ಹೀಗೆ ಕಿವಿಯಿಂದ
ಕೇಳಿದವುಗಳ ಕುರಿತು.
25 : ಅಲ್ಲಿಯೂ ಇರುವುವು ವಿಲಕ್ಷಣವಾದ,
ಅಗಾಧವಾದ ಸೃಷ್ಟಿಗಳು
ಬಗೆಬಗೆಯ ಜೀವಿಗಳು, ಹಲವಾರು ಜಾತಿಯ
ಜಲಚರಗಳು.
26 : ಆತನ ದೂತರು ದಡಸೇರುವುದು
ಆತನ ದೆಸೆಯಿಂದಲೆ
ಎಲ್ಲಕ್ಕು ಆಧಾರವಾಗಿರುವುದು
ಆತನ ಮಾತೊಂದೇ.
27 : ನಾನು ಎಷ್ಟು ಮಾತುಗಳನ್ನಾಡಿದರೂ
ಕಡಿಮೆಯೆ
ನನ್ನ ಮಾತಿನ ಸಾರಾಂಶ ಇದುವೇ:
“ಎಲ್ಲವೂ ಆತನೆ”.
28 : ನಮಗೆ ಬಲವೆಲ್ಲಿಂದ ಬಂದೀತು ಆತನನು
ಘನಪಡಿಸುವುದಕ್ಕೆ?
ಆತನೇ ದೊಡ್ಡವನು ಆತ ಗೈದ
ಸಕಲ ಕೆಲಸಕಾರ್ಯಗಳಿಗೆ.
29 : ಭಯಂಕರನು, ಘನವಂತನು ಸರ್ವೇಶ್ವರ
ಆತನ ಶಕ್ತಿಸಾಮಥ್ರ್ಯ ಆಶ್ಚರ್ಯಕರ.
30 : ಸರ್ವೇಶ್ವರನನ್ನು ನೀವು ಮಹಿಮೆಪಡಿಸುವಾಗ
ನಿಮ್ಮ ಕೈಯಿಂದಾದಷ್ಟು ಆತನನ್ನು
ಕೀರ್ತಿಸಿರಿ
ಆದರೂ ಆತ ಮಿಗಿಲಾಗಿರುವನು; ಆತನನ್ನು
ಕೀರ್ತಿಸುವಾಗ ದಣಿಯದೆ ಶಕ್ತಿಯನ್ನೆಲ್ಲ
ಬಳಸಿರಿ.
ಏಕೆಂದರೆ ಸಾಕಾಗುವಷ್ಟು ಆತನನ್ನು ನೀವು
ಹೊಗಳಲಾರಿರಿ.
31 : ಆತನನ್ನು ನೋಡಿದವರು ಯಾರಿದ್ದಾರೆ
ಆತನನ್ನು ವಿವರಿಸಲಾಗುವಂತೆ?
ಆತನನ್ನು ಘನಪಡಿಸುವವರು ಯಾರಿದ್ದಾರೆ
ಆತನಿದ್ದಂತೆ?
32 : ಇವುಗಳಿಗಿಂತಲೂ ಹೆಚ್ಚಾಗಿ ಇನ್ನು ಅನೇಕ
ವಿಷಯಗಳು ಮರೆಯಾಗಿವೆ
ಆತನ ಕೆಲಸಕಾರ್ಯಗಳಲ್ಲಿ ನಾವು ನೋಡಿದ್ದು
ಅತಿ ಸ್ವಲ್ಪವೇ.
33 : ಎಲ್ಲವನು ಮಾಡಿದವನು ಸರ್ವೇಶ್ವರನೇ
ಜ್ಞಾನವನು ಅನುಗ್ರಹಿಸಿಹನು ಭಕ್ತರಿಗೆ.