Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಈ ಕೆಳಗಿನ ವಿಷಯಗಳನ್ನು ಕುರಿತು ನಾಚಿಕೊಳ್ಳಬೇಡ ಯಾರ ದಾಕ್ಷಿಣ್ಯಕ್ಕೋಸ್ಕರವೂ ಪಾಪದಲ್ಲಿ ಬೀಳಬೇಡ:
2 : ಮಹೋನ್ನತನ ಧರ್ಮಶಾಸ್ತ್ರ ಹಾಗು ಆತನ ಒಡಂಬಡಿಕೆ ಕುರಿತು ದುರ್ಜನರಿಗೆ ಕೊಡಬೇಕಾದ ನ್ಯಾಯವಾದ ತೀರ್ಪು ಕುರಿತು;
3 : ಪಾಲುಗಾರನಿಂದ, ಹಾದಿಕಾರನಿಂದ ತೆಗೆದುಕೊಳ್ಳಬೇಕಾದ ಲೆಕ್ಕ ಕುರಿತು ಸ್ನೇಹಿತರ ಆಸ್ತಿಯಿಂದ ಕೊಡಬೇಕಾದ ಪಾಲು ಕುರಿತು;
4 : ನ್ಯಾಯವಾದ ಬಟ್ಟು, ತಕ್ಕಡಿ ಕುರಿತು ಬಹಳವಾಗಲಿ, ಅಲ್ಪವಾಗಲಿ, ಬರುವ ಸಂಪಾದನೆ ಕುರಿತು;
5 : ವ್ಯಾಪಾರದಿಂದ ಬರುವಂಥ ನ್ಯಾಯವಾದ ಆದಾಯ ಕುರಿತು ಮಕ್ಕಳನ್ನು ಶಿಸ್ತಿನ ಪ್ರಕಾರ ತಿದ್ದುವುದನ್ನು ಕುರಿತು ತಪ್ಪಿತಸ್ಥ ಆಳಿಗೆ ರಕ್ತ ಬರುವಷ್ಟು ಹೊಡೆಯುವುದನ್ನು ಕುರಿತು.
6 : ದುಷ್ಟ ಹೆಂಡತಿಯಿದ್ದರೆ, ಬೀಗ ಹಾಕುವುದು ಒಳಿತು, ಬಹಳ ಕೈಗಳು ಆಡುತ್ತಿದ್ದರೆ, ಮುಚ್ಚಿಡುವುದು ಮೇಲು.
7 : ನೀನು ಕೊಡುವುದನ್ನು ಅಂಕೆತೂಕಗಳಿಂದ ಕೊಡು; ಕೊಡುವುದನ್ನೂ ತೆಗೆದುಕೊಳ್ಳುವುದನ್ನೂ ಬರೆದಿಡು.
8 : ಬುದ್ಧಿ ಹೇಳಲು ನಾಚಬೇಡ ದಡ್ಡನಿಗೆ, ಮೂರ್ಖನಿಗೆ ಯುವಕನೊಂದಿಗೆ ವಾದಿಸುವ ಹಣ್ಣುಮುದುಕನಿಗೆ. ಆಗ ನೀನು ಸುಶಿಕ್ಷಿತನಾಗುವೆ ಸಕಲಮಾನವರಿಗೂ ಸಮ್ಮತನಾಗುವೆ.
9 : ಮಗಳ ಬಗ್ಗೆ ತಂದೆಯ ಚಿಂತೆ ಮಗಳಿಗೆ ಗೊತ್ತಿಲ್ಲದೆಯೆ ತಂದೆ ನಿದ್ದೆಗೆಡುತ್ತಾನೆ: ಆಕೆಯ ಚಿಂತೆ ನಿದ್ರೆಯನ್ನು ಹಾರಿಸಿಬಿಡುತ್ತದೆ. ಆಕೆ ಯುವತಿಯಾಗಿರುವಾಗ ವಯಸ್ಸೆಲ್ಲಿ ಕಳೆದುಹೋಗುವುದೋ ಎಂಬ ಚಿಂತೆ, ಮದುವೆಯಾದಾಗ ಎಲ್ಲಿ ಅಪಮಾನಕ್ಕೆ ಗುರಿಯಾಗುವಳೋ ಎಂಬ ಚಿಂತೆ;
10 : ಕನ್ಯಾವಸ್ಥೆಯಲ್ಲಿ ಗರ್ಭಿಣಿಯಾಗಿ ಎಲ್ಲಿ ಹೆತ್ತವರ ಮನೆಯಲೇ ಉಳಿದು ಬಿಡುವಳೋ ಎಂಬ ಚಿಂತೆ, ಗಂಡನಿರುವಾಗಲೂ ಎಲ್ಲಿ ಅಡ್ಡದಾರಿ ಹಿಡಿಯುವಳೋ ಎಂಬ ಚಿಂತೆ, ಮದುವೆಯಾದ ಮೇಲೆ ಎಲ್ಲಿ ಬಂಜೆಯಾಗುವಳೋ ಎಂಬ ಚಿಂತೆ.
11 : ಮೊಂಡು ಮಗಳನ್ನು ಹದ್ದುಬಸ್ತಿನಲ್ಲಿಟ್ಟು ಕಾಯಬೇಕು: ನಿನ್ನ ಶತ್ರುಗಳೆದುರಿನಲಿ ನಿನ್ನನವಳು ನಗೆಗೀಡುಮಾಡದಂತೆ ಊರಲ್ಲಿ ಎಲ್ಲರು ಆಡಿಕೊಳ್ಳಲು ಆಸ್ಪದವಾಗದಂತೆ ಜನರಲ್ಲಿ ಅವಳು ಅಪಕೀರ್ತಿಗೊಳಗಾಗದಂತೆ ಎಲ್ಲರ ಎದುರಿನಲ್ಲಿ ನಿನ್ನನ್ನು ಅವಮಾನಕ್ಕೆ ಗುರಿಪಡಿಸದಂತೆ.
12 : ಚೆಲುವಿಕೆಗಾಗಿಯೇ ಯಾರನ್ನು ದಿಟ್ಟಿಸಿ ನೋಡಬೇಡ ಮಹಿಳೆಯರ ಮಧ್ಯೆ ಕುಳಿತುಕೊಳ್ಳಬೇಡ.
13 : ನುಸಿಬರುವುದು ಬಟ್ಟೆಯಿಂದ ಹೆಂಗಸಿಗೆ ಕೆಟ್ಟತನ ಬರುವುದು ಹೆಂಗಸರಿಂದ.
14 : ಗಂಡಸಿನ ಗಡಸುತನವೇ ಲೇಸು ಸವಿಮಾತಿನ ಹೆಂಗಸಿಗಿಂತ ನಿನ್ನನ್ನು ಅವಮಾನಕೆ ಗುರಿಪಡಿಸುವ ಮಹಿಳೆಗಿಂತ.
15 : ಪ್ರಕೃತಿಯಲ್ಲಿ ಪರಮಾತ್ಮನ ಮಹಿಮೆ ಸರ್ವೇಶ್ವರನ ಕೆಲಸಗಳನ್ನು ಕುರಿತು ಈಗ ನೆನಪು ಮಾಡಿಕೊಡುತ್ತೇನೆ: ನಾನು ಕಂಡ ಸಂಗತಿಗಳನ್ನು ವಿವರಿಸುತ್ತೇನೆ: ಸರ್ವೇಶ್ವರನ ವಾಣಿಯ ಪ್ರಕಾರ ಆತನ ಕಾರ್ಯ ನೆರವೇರಿದೆ ಸೃಷ್ಟಿಸಮಸ್ತವೂ ಆತನ ಆಜ್ಞೆಗಳನ್ನು ಅನುಸರಿಸುತ್ತವೆ.
16 : ಪ್ರಕಾಶಕೊಡುವ ಸೂರ್ಯ ಎಲ್ಲವನ್ನು ದೃಷ್ಟಿಸುವನು ಸರ್ವೇಶ್ವರನ ಕೆಲಸ ಆತನ ಮಹಿಮೆಯಿಂದ ತುಂಬಿರುವುದು.
17 : ಸರ್ವೇಶ್ವರನ ಮಹತ್ಕಾರ್ಯಗಳನ್ನು ವಿವರಿಸುವ ಶಕ್ತಿಯನ್ನು ಆತ ಕೊಟ್ಟಿಲ್ಲ ತನ್ನ ದೇವದೂತರಿಗೂ. ಎಲ್ಲವೂ ತನ್ನ ಮಹಿಮೆಯಲ್ಲೇ ನೆಲೆಗೊಂಡಿರುವಂತೆ ಸ್ಥಾಪಿಸಿದವ ಸರ್ವಶಕ್ತನಾದ ಸರ್ವೇಶ್ವರನೇ.
18 : ಮಹೋನ್ನತ ಸರ್ವೇಶ್ವರ ತಿಳಿದಿರುವನು ಸರ್ವಜ್ಞಾನವನು, ಯುಗದ ಲಕ್ಷಣವನು; ಎಂದೇ ಪರಿಶೋಧಿಸಿಹನು ಪ್ರಪಾತವನು, ಹೃದಯವನು; ಬಲ್ಲನಾತನು ಅವುಗಳ ತಂತ್ರಕುತಂತ್ರಗಳನು.
19 : ಪ್ರಕಟಪಡಿಸುವನು ಹಿಂದೆ ನಡೆದವುಗಳನು ಮುಂದೆ ನಡೆಯುವಂಥವುಗಳನು ಶ್ರುತಪಡಿಸಬಲ್ಲನಾತನು ಗುಪ್ತವಾದುವುಗಳ ಸುಳಿವನು.
20 : ಯಾವ ಕಲ್ಪನೆಯೂ ಆತನಿಂದ ತಪ್ಪಿಸಿಕೊಳ್ಳದು ಯಾವ ಮಾತೂ ಆತನಿಗೆ ಮರೆಯಾಗಿರದು.
21 : ಯುಗಯುಗಾಂತರಕ್ಕೂ ಇರುವಾತನವನು ತನ್ನ ಜ್ಞಾನದ ಮಹತ್ಕಾರ್ಯಗಳನು ಕ್ರಮಪಡಿಸಿದರುವನು ಅದಕ್ಕೆ ಯಾವುದನ್ನು ಕೂಡಿಸಲಿಲ್ಲ, ಯಾವುದನ್ನು ಅದರಿಂದ ಕಳೆದಿಲ್ಲ ಸಲಹೆಗಾರನ ಅಗತ್ಯವೂ ಆತನಿಗಿರಲಿಲ್ಲ.
22 : ಆಹಾ, ಆತನ ಕಾರ್ಯಗಳು ಎಷ್ಟು ಅಪೇಕ್ಷಣೀಯ! ಆತನ ಕೆಲಸಗಳು ಎಷ್ಟು ತೇಜೋಮಯ!
23 : ಇವೆಲ್ಲವು ಅವುಗಳ ಪ್ರಯೋಜನಕ್ಕನುಸಾರ ಜೀವಿಸುತ್ತವೆ ನಿತ್ಯಕ್ಕೂ ಉಳಿಯುತ್ತವೆ, ಆತನಿಗೆ ವಿಧೇಯವಾಗಿರುತ್ತವೆ.
24 : ಎಲ್ಲ ಸಂಗತಿಗಳಿರುವುವು ದ್ವಂದ್ವವಾಗಿ ಒಂದು ಇನ್ನೊಂದಕ್ಕೆ ಎದುರಾಗಿ ಆತ ಯಾವುದನ್ನೂ ಮಾಡಿಲ್ಲ ಅಪೂರ್ಣವಾಗಿ.
25 : ವೈಶಿಷ್ಟ್ಯತೆಯಲ್ಲಿ ಒಂದು ಪರಿಪೂರ್ಣಗೊಳ್ಳುತ್ತದೆ ಇನ್ನೊಂದರಿಂದ. ಆತನ ಮಹಿಮೆಯನ್ನು ಪೂರ್ತಿಯಾಗಿ ಗ್ರಹಿಸಲು ಯಾರಿಂದ ಸಾಧ್ಯ?

· © 2017 kannadacatholicbible.org Privacy Policy