1 : ಮಾನವನ ದುರವಸ್ಥೆ
ತಾಯಗರ್ಭದಿಂದ ಹೊರಬಂದ
ದಿನದಿಂದ, ಭೂಮಾತೆಯಲ್ಲಿ
ಅಡಕವಾಗುವ ತನಕ
ಆದಾಮನ ಮಕ್ಕಳ ಮೇಲೆ ಇಡಲಾಗಿದೆ
ಒಂದು ಭಾರವಾದ ನೊಗ
ಪ್ರತಿಮನುಷ್ಯನಿಗಾಗಿ ಉಂಟುಮಾಡಲಾಗಿದೆ
ತೀವ್ರವಾದ ಕಷ್ಟಸಂಕಟ.
2 : ಮನಸ್ಸು ಕದಲುತ್ತದೆ ಮುಂಬರುವ
ಘಟನೆಗಳ ನಿರೀಕ್ಷೆಯಿಂದ
ಮರಣದಿನದ ಭಯದಾಲೋಚನೆಯಿಂದ.
3 : ಮಹಿಮಾಸನದಲಿ ಕುಳಿತಿರುವವನಿಂದ
ತನ್ನನ್ನೆ ತಗ್ಗಿಸಿಕೊಂಡು ಬೂದಿಮಣ್ಣಿನಲಿ
ಕುಳಿತಿರುವವನ ತನಕ.
4 : ಕೆನ್ನೀಲಿ ವಸ್ತ್ರ ಮುಕುಟಧಾರಿಯಾದವನಿಂದ
ನಾರಿನ ನಿಲುವಂಗಿಯನು ಧರಿಸಿರುವವನ ತನಕ
ಎಲ್ಲರನ್ನು ಆವರಿಸಿದೆ ಈ ಭಯ
5 : ಕೋಪ, ಹೊಟ್ಟೆಕಿಚ್ಚು, ಅಸಮಾಧಾನ,
ತೊಂದರೆತಾಪತ್ರಯಗಳು
ಮರಣಭಯ, ಕೋಪ, ಜಗಳ-ಇವೆಲ್ಲವು
ಪ್ರಾಪ್ತವಾಗುವುವು.
ರಾತ್ರಿಕಾಲದೊಳು, ಹಾಸಿಗೆಯಲ್ಲಿ
ಮಲಗಿರುವಾಗಲು
ಉದ್ಭವಿಸುವುವು ಹೊಸ ಹೊಸ ಚಿಂತೆ
ಪೇಚಾಟಗಳು.
6 : ಅವನಿಗೆ ವಿಶ್ರಾಂತಿಯೇ ಇಲ್ಲ, ಇದ್ದರೂ
ಅತ್ಯಲ್ಪವೇ
ಅವನ ಮನಸ್ಸಿಗೆ ಕನಸುಗಳಿಂದಲೂ
ಕಳವಳವೇ.
ನಿದ್ರೆಮಾಡುವಾಗ ಬಾಸವಾಗುವುದು ದಿನದಲಿ
ಕಾವಲಿದ್ದಂತೆ
ಹಾಗು ಯುದ್ಧದಲ್ಲಿ ತಪ್ಪಿಸಿಕೊಂಡು
ಓಡಿಹೋಗುವ ಯೋಧನಂತೆ.
7 : ಬಿಡುಗಡೆಯಾದಂತಾಗುವುದರಲ್ಲೇ
ಎಚ್ಚರಗೊಳ್ಳುವನು
ಅವನಿಗೇ ಆಶ್ಚರ್ಯ, ಭಯವೆಲ್ಲಾ
ಭ್ರಾಂತಿಯೆಂದು !
8 : ಮನುಷ್ಯನಿಂದ ಪಶುಪ್ರಾಣಿಗಳವರೆಗೆ
ಸಕಲ ಜೀವಿಗಳಿಗೂ ಇದೇ ಗತಿ
ಆದರೆ ಪಾಪಿಗಳಿಗೆ ಏಳರಷ್ಟು ದುರ್ಗತಿ !
9 : ಮರಣ, ರಕ್ತಪಾತ, ಜಗಳ, ಖಡ್ಗ,
ಅನಾಹುತ,
ಬರ, ಸಂಕಟ, ದಂಡನೆ – ಇವೆಲ್ಲ
ಕೆಡುಕರಿಗೆಂದು ನಿರ್ಮಿತ
ಜಲಪ್ರಳಯ ಬಂದುದೇ ಇಂಥವರ ದೆಸೆಯಿಂದ.
10 : ಮರಣ, ರಕ್ತಪಾತ, ಜಗಳ, ಖಡ್ಗ,
ಅನಾಹುತ,
ಬರ, ಸಂಕಟ, ದಂಡನೆ – ಇವೆಲ್ಲ
ಕೆಡುಕರಿಗೆಂದು ನಿರ್ಮಿತ
ಜಲಪ್ರಳಯ ಬಂದುದೇ ಇಂಥವರ ದೆಸೆಯಿಂದ.
11 : ಮಣ್ಣಿನಿಂದಾದುದೆಲ್ಲ ಹಿಂದಿರುಗಬೇಕು
ಮಣ್ಣಿಗೆ
ನೀರಿನವುಗಳು ಮರಳಬೇಕು ನೀರಿಗೆ.
12 : ಕೆಡುಕಿನ ಪರಿಣಾಮ
ಲಂಚಕೋರತನ, ಅನ್ಯಾಯ-ಇವುಗಳೆಲ್ಲ
ಅಳಿದುಹೋಗುವುವು
ಎಂದೆಂದಿಗೂ ನೆಲೆಯಾಗಿರುವುದು
ಪ್ರಾಮಾಣಿಕತೆಯು.
13 : ಅನ್ಯಾಯಗಾರನ ಆಸ್ತಿ ಬತ್ತಿಹೋಗುವುದು
ನದಿಯಂತೆ
ಅದೃಶ್ಯವಾಗುವುದು ಮಳೆಯ ಮುಂಚೆ
ಬಡಿಯುವ ಸಿಡಿಲಿನಂತೆ.
14 : ಧಾರಾಳವಾಗಿ ನೀಡುವವನು
ಹರ್ಷಗೊಳ್ಳುವನು
ದುರ್ಜನನು ಸಂಪೂರ್ಣವಾಗಿ
ಸೋತು ಹೋಗುವನು.
15 : ಕೊಂಬೆಗಳು ಹೆಚ್ಚಾಗುವುದಿಲ್ಲ ದುರ್ಜನರ
ಸಂತತಿಗೆ
ಬರಡುಬೇರುಗಳಂತಿರುವರವರು ಬರೀ
ಬಂಡೆಯ ಮೇಲೆ.
16 : ಜೊಂಡುಹುಲ್ಲು ನೀರಿನಲ್ಲೇ, ನದಿಯ
ದಡದಲ್ಲೇ ಬೆಳೆಯುತ್ತದೆ
ಆದರೆ ಎಲ್ಲ ಹುಲ್ಲುಗರಿಕೆಗಿಂತ ಮುಂಚಿತವಾಗಿ
ಕೀಳಲ್ಪಡುತ್ತದೆ.
17 : ದಯೆಯು ಭಾಗ್ಯವಾದ ಉದ್ಯಾನವನ
ದಾನಧರ್ಮ ಎಂದೆಂದಿಗೂ ಶಾಶ್ವತ.
18 : ಜೀವನದ ಸ್ವಾರಸ್ಯ
ದುಡಿವವನ ಹಾಗು ಉಂಡು
ತೃಪ್ತನಾಗಿರುವವನ ಜೀವನ ಮಧುರ
ನಿಧಿ ಕಂಡುಕೊಂಡವನ ಜೀವನ
ಇವೆರಡಕ್ಕಿಂತಲೂ ಉತ್ತಮ.
19 : ಸಂತಾನಪ್ರಾಪ್ತಿಯಿಂದ, ನಗರ
ನಿರ್ಮಾಣದಿಂದ
ಸ್ಥಿರವಾಗಿಸುವರು ತಮ್ಮ ನಾಮವನು
ನಿರ್ದೋಷಿಯಾದ ಮಡದಿಯೋ
ಉತ್ತಮ ಇವೆರಡಕ್ಕಿಂತಲು.
20 : ಮಧುಪಾನ ಮತ್ತು ಸಂಗೀತ ಮನಸ್ಸಿಗೆ
ಆಹ್ಲಾದಕರ
ಜ್ಞಾನ ಪ್ರೇಮ ಇವೆರಡಕ್ಕಿಂತಲು ಉತ್ತಮ.
21 : ಕೊಳಲು ಮತ್ತು ತಂತಿವಾದ್ಯ ಸೂಸುತ್ತವೆ
ಇಂಪಾದ ನಾದ
ಮಧುರವಾದ ನಾಲಗೆ ಇವೆರಡಕ್ಕಿಂತಲೂ
ಮೋದ.
22 : ನಿನ್ನ ಕಣ್ಣು ಆಶಿಸುತ್ತದೆ ಅಂದಚಂದವನು
ವಸಂತ ಪಚ್ಚೆ ಇವೆರಡಕ್ಕಿಂತಲೂ ಮೋಜು.
23 : ಸ್ನೇಹಿತನಾಗಲೀ ಗೆಳೆಯನಾಗಲೀ
ಸಂಧಿಸುವುದು ಸಂತೋಷಕರ
ಗಂಡನೊಂದಿಗೆ ಹೆಂಡತಿಯಿರುವುದು
ಇವೆರಡಕ್ಕಿಂತಲೂ ಮಧುರ.
24 : ಸಹೋದರ ಮತ್ತು ಸಹಾಯ ಆಪತ್ಕಾಲಕ್ಕೆ
ಹಿತಕರ
ಇವೆರಡಕ್ಕಿಂತಲೂ ದಾನಧರ್ಮ ಕ್ಷೇಮಕರ.
25 : ಬೆಳ್ಳಿಬಂಗಾರದಿಂದ ಬಾಳು ಭದ್ರ
ಒಳ್ಳೆಯ ಆಲೋಚನೆ ಇವೆರಡಕ್ಕಿಂತಲು
ಸುಸ್ಥಿರ.
26 : ಮನಸ್ಸನ್ನು ಮೇಲೆತ್ತುತ್ತವೆ ಐಶ್ವರ್ಯ ಮತ್ತು ಶಕ್ತಿ
ಇವೆರಡಕ್ಕಿಂತಲೂ ಮೇಲು ದೇವರಲ್ಲಿ
ಭಯಭಕ್ತಿ.
ದೇವರ ಭಕ್ತಿಯಲ್ಲಿ ಕೊರತೆಯೆಂಬುದಿಲ್ಲ
ಸಹಾಯ ಹುಡುಕುವ ಅವಶ್ಯಕತೆಯಿಲ್ಲ.
27 : ದೇವರಲ್ಲಿ ಭಯಭಕ್ತಿಯು ಭಾಗ್ಯವಾದ
ಉದ್ಯಾನವನ
ಅದು ಭಕ್ತನನ್ನು ಆವರಿಸುವ ಉತ್ತಮ
ಭೂಷಣ.
28 : ಭಿಕ್ಷೆ
ಮಗನೇ, ಬೇಡ ನಿನಗೆ ತಿರುಕರ ಬಾಳು
ತಿರುಪೆಗಿಂತ ಮರಣವೇ ಲೇಸು.
29 : ಮತ್ತೊಬ್ಬನ ಊಟದ ಮೇಲೆ ಕಣ್ಣಿಡುವವನ
ಬಾಳು ಜೀವನವಲ್ಲ
ಇಂಥವನ ಮನ ಹೆರವರ ಅನ್ನದಿಂದ ಮಲಿನ.
ಆದರೆ ಜ್ಞಾನಿ ಹಾಗು ಸುಶಿಕ್ಷಿತನು ಬದುಕುವನು
ಎಚ್ಚರಿಕೆಯಿಂದ.
30 : ನಾಚಿಕೆಯಿಲ್ಲದವನ ಬಾಯಲ್ಲಿ
ತಿರುಪೆಯೂ ಸಿಹಿ
ಆದರೆ ಅವನ ಒಡಲಲ್ಲೆಲ್ಲಾ ಬೆಂಕಿಯ ಉರಿ.