1 : ಮಗನೇ, ಬಡವನ ಜೀವನಾಧಾರವನ್ನು
ಕಸಿದುಕೊಳ್ಳಬೇಡ
ಗತಿಗೆಟ್ಟು ಬಂದವನನ್ನು ಬಹು ಸಮಯ
ಕಾಯಿಸಬೇಡ.
2 : ಹಸಿದವರನ್ನು ಗೋಳಾಡಿಸಬೇಡ
ಕಷ್ಟದಲ್ಲಿರುವವರನ್ನು ಕಾಡಬೇಡ.
3 : ನೊಂದ ಹೃದಯವನ್ನು ಇನ್ನೂ
ನೋಯಿಸಬೇಡ
ಗತಿಯಿಲ್ಲದವನಿಗೆ ದಾನಮಾಡಲು
ತಡಮಾಡಬೇಡ.
4 : ಕುಗ್ಗಿದವನ ಮೊರೆಯನ್ನು ತಿರಸ್ಕರಿಸಬೇಡ
ಬಡವನಿಂದ ಮುಖವನ್ನು ತಿರುಗಿಸಿಕೊಳ್ಳಬೇಡ.
5 : ಗತಿಗೆಟ್ಟು ಕೇಳುವವನಿಗೆ ಕಣ್ಣು ತಪ್ಪಿಸಬೇಡ
ನಿನ್ನನ್ನು ಶಪಿಸಲು ಅವನಿಗೆ ಆಸ್ಪದಕೊಡಬೇಡ.
6 : ವೇದನೆಯಲ್ಲಿರುವ ಅವನು ನಿನ್ನನ್ನು
ಶಪಿಸಿಯಾನು
ಅವನ ಸೃಷ್ಟಿಕರ್ತನು ಅವನ ಮೊರೆಯನ್ನು
ಕೇಳಿಯಾನು.
7 : ಪ್ರೀತಿಪಾತ್ರನಾಗಿರು ಸಭಿಕರಿಗೆ
ನಿನ್ನ ತಲೆಬಾಗಿಸು ಹಿರಿಯರಿಗೆ.
8 : ಬಡವನಿಗೆ ಕಿವಿಗೊಡು
ಸನ್ನುಡಿಗಳಿಂದ ಅವನಿಗೆ ಸದುತ್ತರ ಕೊಡು.
9 : ತುಳಿತಕ್ಕೀಡಾದವರನ್ನು ಪಾರುಮಾಡಲು
ಹೆದರಬೇಡ
ನ್ಯಾಯತೀರಿಸುವಾಗ ಚಂಚಲಚಿತ್ತನಾಗಿ
ಇರಬೇಡ.
10 : ಅನಾಥರಿಗೆ ತಂದೆಯಂತಿರು
ವಿಧವೆಗೆ ಪತಿಯಂತೆ ಆಧಾರವಾಗಿರು.
ಆಗ ನೀನು ಪರಾತ್ಪರನಿಗೆ ಮಗನಾಗುವೆ
ತಾಯಿ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು
ಆತನಿಂದ ಪಡೆಯುವೆ.
11 : ಸುಜ್ಞಾನವೆಂಬಾಕೆ ಮಕ್ಕಳನ್ನು
ಉನ್ನತಿಗೆ ಏರಿಸುವಳು
ತನ್ನನ್ನು ಅರಸುವವರನ್ನು
ತನಗೇ ವಶಮಾಡಿಕೊಳ್ಳುವಳು.
12 : ಆಕೆಯನ್ನು ಪ್ರೀತಿಸುವವನು,
ಪ್ರೀತಿಸುವುದು ಜೀವವನ್ನೇ
ತಡವಿಲ್ಲದೆ ಆಕೆಯನ್ನು ಅರಸುವವನು
ಪಡೆವನು ಅಮಿತಾನಂದವನ್ನೇ.
13 : ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು
ಆಗುವನು ಕೀರ್ತಿವಂತ
ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ
ದೇವರ ಆಶೀರ್ವಾದ.
13 : ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು
ಆಗುವನು ಕೀರ್ತಿವಂತ
ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ
ದೇವರ ಆಶೀರ್ವಾದ.
14 : ಆಕೆಗೆ ಸೇವೆಮಾಡುವವನು ಪರಮಪಾವನನನ್ನು
ಸೇವೆ ಮಾಡುತ್ತಾನೆ,
ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ
ಪ್ರೀತಿಸುತ್ತಾನೆ.
15 : ಆಕೆಗೆ ಕಿವಿಗೊಡುವವರು
ಜನಾಂಗಗಳಿಗೆ ನ್ಯಾಯತೀರಿಸುವರು,
ಆಕೆಗೆ ಗಮನಕೊಡುವವರು
ಸುರಕ್ಷಿತವಾಗಿ ಬದುಕುವರು.
16 : ಆಕೆಯನ್ನು ನೆಚ್ಚಿಕೊಂಡಿರುವವನು
ಪಡೆಯುವು ಆಕೆಯನ್ನು ಬಾಧ್ಯವಾಗಿ
ಆತನ ಪೀಳಿಗೆಯೂ ಆಕೆಯನ್ನು
ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ.
17 : ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ
ಅಡ್ಡದಿಡ್ಡ ನಡೆಯುವಳು;
ಅವನಲ್ಲಿ ಅಳುಕು ಅಂಜಿಕೆಗಳನ್ನು
ಹುಟ್ಟಿಸುತ್ತಾ ಸಾಗುವಳು;
ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ
ಶಿಕ್ಷೆಯಿತ್ತು ಬಾಧಿಸುವಳು;
ನೀತಿನಿಯಮಗಳಿಂದ ಆತನನ್ನು
ಪರೀಕ್ಷಿಸುವಳು.
18 : ತದನಂತರ ಅವನನ್ನು ನೇರವಾದ ಮಾರ್ಗಕ್ಕೆ
ತಿರುಗಿಸುವಳು
ಅವನಲ್ಲಿ ಸಂತೋಷವನ್ನು ಮೂಡಿಸುವಳು
ಅವನಿಗೆ ತನ್ನ ಗುಟ್ಟುಗಳನು ತಿಳಿಸುತ್ತಾ
ನಡೆಯುವಳು.
19 : ಆಗಲೂ ಅವನು ಅಡ್ಡದಾರಿ ಹಿಡಿದರೆ,
ಅವನನ್ನು ತೊರೆದುಬಿಡುವಳು
ತಾನು ಮಾಡಿದ್ದನು ತಾನೇ ಉಣ್ಣಲೆಂದು
ಕೈಬಿಟ್ಟುಬಿಡುವಳು.
20 : ಆತ್ಮವಿಶ್ವಾಸ
ಸಂದರ್ಭನೋಡಿಕೊಂಡು, ದುರಾತ್ಮನ ಬಗ್ಗೆ
ಎಚ್ಚರದಿಂದಿರು;
ನಿನ್ನ ಅಂತರಾತ್ಮದ ವಿಷಯದಲಿ
ನಾಚಿಕೆಪಡದಿರು.
21 : ಒಂದು ವಿಧವಾದ ನಾಚಿಕೆಯಿದೆ,
ಪಾಪವೇ ಅದರ ಫಲ;
ಮತ್ತೊಂದು ವಿಧವಾದ ನಾಚಿಕೆಯಿದೆ,
ಕೀರ್ತಿಕೃಪೆಗಳೇ ಅದರ ಫಲ.
22 : ಇತರರ ಮುಖಸ್ತುತಿ ಮಾಡಿ
ನಿನಗೇ ಹಾನಿ ತಂದುಕೊಳ್ಳಬೇಡ,
ಮಿತಿಮೀರಿ ತಲೆಬಾಗಿ
ನೀನೇ ನೆಲಸಮವಾಗಬೇಡ.
23 : ಪರರಿಗೆ ಹಿತವಾಗಿದ್ದಲ್ಲಿ,
ನಿನ್ನ ಮಾತನ್ನು ತಡೆಹಿಡಿಯಬೇಡ,
ನಿನ್ನಲ್ಲಿರುವ ಜ್ಞಾನ ಬೆಳಕನ್ನು ಅಡಗಿಸಬೇಡ.
24 : ಮಾತಿನಿಂದ ಜ್ಞಾನ ಪ್ರಕಟವಾಗುತ್ತದೆ,
ಸನ್ನುಡಿಯಿಂದ ಶಿಕ್ಷಣ ವ್ಯಕ್ತವಾಗುತ್ತದೆ.
25 : ಮಾತಾಡಬೇಡ ಎಂದೂ ಸತ್ಯಕ್ಕೆ ವಿರುದ್ಧವಾಗಿ,
ಬದಲಿಗೆ ನಾಚಿಕೆಪಡು ನಿನ್ನ ಅಜ್ಞಾನಕ್ಕಾಗಿ.
26 : ನಿನ್ನ ಪಾಪಗಳನ್ನು ಒಪ್ಪಿಕೊಳ್ಳಲು ನಾಚಿಕೆ
ಪಡಬೇಡ,
ನದಿಯ ಓಟವನ್ನು ತಡೆಹಿಡಿಯಲು
ಪ್ರಯತ್ನಿಸಬೇಡ.
27 : ಮೂಢನಿಗೆ ಅಡಿಯಾಳಾಗಬೇಡ,
ಬಲವಂತನ ಪಕ್ಷ ವಹಿಸಬೇಡ.
28 : ಮರಣದ ಪರ್ಯಂತರ ಹೋರಾಡು
ಸತ್ಯಕ್ಕಾಗಿ
ದೇವರಾದ ಸರ್ವೇಶ್ವರ ಕಾದಾಡುವನು
ನಿನಗಾಗಿ.
29 : ಮಾತಾಡುವುದಕ್ಕೆ ತವಕಪಡಬೇಡ,
ಕೆಲಸಮಾಡಲು ಮೈಗಳ್ಳನೂ ಉದಾಸೀನನೂ
ಆಗಬೇಡ.
30 : ನಿನ್ನ ಮನೆಯಲ್ಲಿ ಹುಲಿಯಂತಿರಬೇಡ,
ನಿನ್ನ ಸೇವಕರ ಎದುರಿನಲ್ಲಿ
ಚಂಚಲನಾಗಿರಬೇಡ.
31 : ತೆಗೆದುಕೊಳ್ಳುವುದರಲ್ಲಿ
ಕೈಯೊಡ್ಡುವವನಾಗಿರಬೇಡ,
ಹಿಂದಕ್ಕೆ ಕೊಡುವುದರಲ್ಲಿ
ಬಿಗಿಮುಷ್ಟಿಯಾಗಿರಬೇಡ.