1 : ಧರ್ಮಶಾಸ್ತ್ರಜ್ಞ
ಹೀಗಲ್ಲ, ಮಹೋನ್ನತನ ಧರ್ಮ
ಶಾಸ್ತ್ರವನ್ನು ಮನಸ್ಸಿಟ್ಟು
ಧ್ಯಾನಿಸುವವನು:
ಪೂರ್ವಜರ ಜ್ಞಾನವನ್ನು ಅಧ್ಯಯನ
ಮಾಡುವನವನು
ಪ್ರವಾದನೆಗಳನ್ನು ಅರಿಯುವುದರಲ್ಲಿ ಸಮಯ
ಕಳೆಯುವನವನು.
2 : ಈತ ಸುಪ್ರಸಿದ್ಧ ಜನರ ಹೇಳಿಕೆಗಳನ್ನು
ಕಾದಿರಿಸಿಕೊಳ್ಳುವನು
ಸಾಮತಿಗಳ ಸೂಕ್ಷ್ಮ ಚರ್ಚೆಗಳಲ್ಲಿ
ಭಾಗವಹಿಸುವನು.
3 : ಒಗಟುಗಳ ಗೂಡಾರ್ಥವನ್ನು ಹುಡುಕಿ
ತೆಗೆಯುವನು
ಸಾಮತಿಗಳ ಅವ್ಯಕ್ತ ಅರ್ಥವನ್ನು
ಅರಿತವನಾಗಿರುವನು.
4 : ಗಣ್ಯವ್ಯಕ್ತಿಗಳ ಮಧ್ಯೆ ಸೇವೆ ಕೈಗೊಳ್ಳುವನು
ಆಳುವವರ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವನು
ಪರದೇಶಗಳಲ್ಲಿಯೂ ಸಂಚಾರಮಾಡುವನು
ಮಾನವನಲ್ಲಿರುವ ಒಳಿತು-ಕೆಡುಕುಗಳನ್ನು
ಪರೀಕ್ಷಿಸುವನು.
5 : ಮುಂಜಾನೆಯೇ ಆಸಕ್ತಿಯಿಂದ ಎದ್ದೇಳುವನು
ತನ್ನ ಸೃಷ್ಟಿಕರ್ತ ದೇವನಿಗೆ ಮೊರೆಯಿಡುವನು
ಮಹೋನ್ನತನ ಸನ್ನಿಧಿಯಲಿ ವಿಜ್ಞಾಪಿಸಿ,
ಬಾಯ್ದೆರೆದು ಬೇಡಿಕೊಳ್ಳುವನು
ತನ್ನ ಪಾಪಗಳಿಗೆ ಆತನಲಿ ಕ್ಷಮೆಯನ್ನು
ಯಾಚಿಸುವನು.
6 : ಸರ್ವೋಚ್ಛ ಸರ್ವೇಶ್ವರನ ಚಿತ್ತವಾದರೆ,
ತುಂಬುವುದವನಲ್ಲಿ ತಿಳುವಳಿಕೆಯ
ಚೈತನ್ಯವು
ಸುರಿಸುವನವನು ಸುಜ್ಞಾನದ ಮಾತುಗಳನು
ಪ್ರಾರ್ಥನೆಯ ಸಮಯದಲ್ಲಿ ಆ
ಸರ್ವೇಶ್ವರನಿಗೆ
ಮಾಡುವನು ಕೃತಜ್ಞತಾಸ್ತುತಿಯನ್ನು.
7 : ಸರಿಯಾಗಿ ಸಾಗಿಸುವನು
ತನ್ನಾಲೋಚನೆಗಳನ್ನು
ಮನನ ಮಾಡುವನು ಗುಪ್ತವಿಚಾರಗಳನ್ನು.
8 : ತಾನು ಕಲಿತುಕೊಂಡ ಶಿಕ್ಷಣವನ್ನು
ಪ್ರಕಟಿಸುವನು
ಸರ್ವೇಶ್ವರನ ಒಡಂಬಡಿಕೆಯ
ಧರ್ಮಶಾಸ್ತ್ರದಲ್ಲಿ ಹೆಚ್ಚಳಪಡುವನು.
9 : ಅನೇಕರು ಹೊಗಳುವರು ಅವನ
ಜ್ಞಾನವನ್ನು
ಅದು ಅಳಿಸಿಹೋಗದು ಲೋಕಾಂತ್ಯದವರೆಗು.
ಮರೆತುಹೋಗದು ಅವನ ಸ್ಮರಣೆ
ಉಳಿಯುವುದು ಅವನ ಹೆಸರು
ತಲತಲಾಂತರದವರೆಗು.
10 : ಜನಾಂಗಗಳು ಅವನ ಜ್ಞಾನವನ್ನು
ಘೋಷಿಸುವರು
ಇಸ್ರಯೇಲ್ ಸಭೆಯು ಅವನನ್ನು
ಹೊಗಳುವುದು.
11 : ಹೀಗೆ ಮುಂದುವರೆದರೆ ಸಾವಿರ ಜನಕ್ಕಿಂತ
ಕೀರ್ತಿಶ್ರೇಷ್ಠನಾಗುವನು
ಸತ್ತರೆ ಇನ್ನೂ ಹೆಸರುವಾಸಿಯಾಗುವನು.
12 : ಸರ್ವೇಶ್ವರನ ಸ್ತುತಿ
ನನ್ನ ಆಲೋಚನೆಗಳನ್ನು ಇನ್ನೂ ಹೇಳುವೆ
ಪೂರ್ಣಚಂದ್ರನಂತೆ ನಾ ತುಂಬಿಕೊಂಡಿರುವೆ.
13 : ಭಕ್ತಿಯುಳ್ಳ ಮಕ್ಕಳೇ, ನನ್ನ ಮಾತನ್ನು ಕೇಳಿರಿ
ನದಿಯ ದಂಡೆಯಲ್ಲಿ ಬೆಳೆಯುವ
ಗುಲಾಬಿಗಿಡದಂತೆ ವಿಕಾಸಗೊಳ್ಳಿರಿ.
14 : ಧೂಪದ ಸುವಾಸನೆಯನ್ನು ಬೀರಿರಿ
ನೈದಿಲೆಯಂತೆ ಹೂ ಬಿಡಿರಿ
ಸುತ್ತಲೂ ಸುಗಂಧವನ್ನು ಹರಡಿರಿ,
ಸ್ತುತಿಗೀತೆ ಹಾಡಿರಿ
ಸರ್ವೇಶ್ವರನನ್ನು ಆತನ ಎಲ್ಲಾ
ಕಾರ್ಯಗಳಿಗಾಗಿ ಕೊಂಡಾಡಿರಿ.
15 : ಕೀರ್ತನೆಗಳಿಂದ, ಕಿನ್ನರಿಗಳಿಂದ
ಆತನ ಸ್ತುತಿಗೈಯಿರಿ:
ಆತನ ನಾಮವನ್ನು ಈ ಪರಿ ಘನಪಡಿಸಿರಿ:
16 : ಅತ್ಯುತ್ತಮವಾಗಿದೆ ಸರ್ವೇಶ್ವರನ
ಕಾರ್ಯಗಳೆಲ್ಲ
ಸಕಾಲದಲಿ ನೆರವೇರುವುವು ಆತನ
ಆಜ್ಞೆಗಳೆಲ್ಲ.
17 : ಹೇಳದಿರಲಿ ಯಾರೂ ‘ಇದು ಏನು?
ಅದು ಏಕೆ?’ ಎಂದು
ಸಕಾಲದಲಿ ತಿಳಿಯುವುದು ಅವುಗಳ
ಫಲಿತಾಂಶವು.
ಜಲವು ಕುಪ್ಪೆಯಾಗಿ ನಿಂತಿತು ಆತನ
ಅಪ್ಪಣೆಗೆ
ಜಲಾಶಯಗಳು ನಿಂತವು ಕೇವಲ ಆತನ
ಬಾಯಿಮಾತಿಗೆ.
18 : ಆತನು ಮೆಚ್ಚುವುದೆಲ್ಲವೂ ನಡೆಯುವುದು
ಆತನ ಅಪ್ಪಣೆಯ ಮೇರೆಗೆ
ತಡೆಯೊಡ್ಡುವವನಾರೂ ಇಲ್ಲ
ಆತನ ರಕ್ಷಣಾಕಾರ್ಯಕ್ಕೆ.
19 : ಎಲ್ಲಾ ಜೀವಿಗಳ ಕಾರ್ಯಕಲಾಪಗಳು
ಆತನ ಎದುರಿನಲ್ಲಿವೆ
ಯಾವುದೂ ಮರೆಯಾಗಿರಲು ಸಾಧ್ಯವಿಲ್ಲ
ಆತನ ಕಣ್ಣಿಗೆ.
20 : ಆತನ ದೃಷ್ಟಿ ಹರಿಯುವುದು
ಯುಗಯುಗಾಂತರಕ್ಕೆ
ಆಶ್ಚರ್ಯವಾದುದೇನೂ ಇಲ್ಲ
ಆತನ ನಯನಕ್ಕೆ.
21 : ಯಾರೂ ಅನ್ನದಿರಲಿ ‘ಇದು ಏನು?
ಅದು ಏಕೆ?’ ಎಂದು
ಅದರದರ ಉಪಯೋಗಕ್ಕಾಗಿಯೇ
ನಿರ್ಮಿಸಲಾಗಿದೆ ಒಂದೊಂದು ವಸ್ತುವು.
22 : ಆತನ ಆಶೀರ್ವಾದ ಆವರಿಸಿತು
ಒಣಭೂಮಿಯನ್ನು ಹೊಳೆಯಂತೆ
ಅದನ್ನು ತೋಯಿಸಿತು ಮಹಾಪೂರದಂತೆ.
23 : ಆತ ನೀರನ್ನು ಉಪ್ಪು ನೀರನ್ನಾಗಿ
ಮಾರ್ಪಡಿಸಿದಂತೆ
ಆತನ ಕೋಪ ಅನ್ಯರಿಗೆ ತಗಲುವುದು
ಪೂರ್ವಾರ್ಜಿತ ಆಸ್ತಿಯಂತೆ.
24 : ಸಜ್ಜನರಿಗೆ ಆತನ ಮಾರ್ಗಗಳು
ಸರಾಗವಾಗಿವೆ
ಆದರೆ ದುರ್ಜನರಿಗೆ ಅವು ತೊಡಕಾಗಿವೆ.
25 : ಆದಿಯಿಂದ ಒಳ್ಳೆಯವು ನಿರ್ಮಿತವಾದವು
ಒಳ್ಳೆಯವರಿಗೆ
ಅಂತೆಯೇ ಕೆಟ್ಟವುಗಳು ನಿರ್ಮಿತವಾದವು
ಪಾಪಿಗಳಿಗೆ.
26 : ನೀರು, ಬೆಂಕಿ, ಕಬ್ಬಿಣ, ಉಪ್ಪು
ಗೋದಿ ಹಿಟ್ಟು,
ಜೇನುತುಪ್ಪ, ಹಾಲು, ದ್ರಾಕ್ಷಾರಸ, ಎಣ್ಣೆ,
ಬಟ್ಟೆಗಳು
ಇವು ಮಾನವ ಜೀವನಕ್ಕೆ ಎಲ್ಲಕ್ಕಿಂತ
ಮುಖ್ಯವಾದವುಗಳು.
27 : ಈ ವಸ್ತುಗಳೆಲ್ಲ ಇರುವುದು ಭಕ್ತರ ಹಿತಕ್ಕಾಗಿ
ಪಾಪಿಗಳಿಗೆ ಅವು ಪರಿಣಮಿಸುವುವು
ಕೆಡುಕಾಗಿ.
28 : ಮುಯ್ಯಿ ತೀರಿಸುವುದಕ್ಕೆಂದು ನಿರ್ಮಿತವಾಗಿವೆ
ಕೆಲವು ಚಂಡಮಾರುತಗಳು
ಪ್ರಕೋಪಗೊಂಡಾಗ ತೀಕ್ಷ್ಣವಾಗಿರುವುವು
ಅವುಗಳ ಭಾದೆಗಳು
ತಮ್ಮ ಬಲವನ್ನು ತೋರಿಸುವುವು
ಪರಿಸಮಾಪ್ತಿಯ ಕಾಲದೊಳು
ಹೀಗೆ ತಣಿಸುವುವು ಅವುಗಳನ್ನು
ನಿರ್ಮಿಸಿದಾತನ ಕೋಪವನ್ನು.
29 : ಬೆಂಕಿ, ಆಲಿಕಲ್ಲು, ಕ್ಷಾಮ, ಸಾವು
ಇವು ಮುಯ್ಯಿ ತೀರಿಸಲೆಂದೇ ನಿರ್ಮಿತವಾದವು.
30 : ಕಾಡುಮೃಗಗಳ ಹಲ್ಲುಗಳು, ಚೇಳು,
ಹೆಬ್ಬಾವುಗಳು ಆದುವು ಅದಕ್ಕಾಗಿಯೆ
ಅಧರ್ಮಿಗಳು ನಾಶವಾಗುವಂತೆ ಅವರನ್ನು
ಶಿಕ್ಷಿಸುವ ಕತ್ತಿಯೂ ಇದೆ.
31 : ಅವು ಆನಂದಗೊಳ್ಳುವುವು ಆತನ
ಅಪ್ಪಣೆಯಲ್ಲಿ
ಅಗತ್ಯಬಿದ್ದರೆ ಒದಗಲು ಸಿದ್ಧವಾಗಿವೆ
ಈ ಲೋಕದಲ್ಲಿ
ಆತನ ಮಾತನ್ನು ಅವು ಮೀರವು
ತಕ್ಕ ಸಮಯ ಬಂದಲ್ಲಿ.
32 : ಇದನ್ನೆಲ್ಲ ಆಲೋಚನೆ ಮಾಡಿ ಬರೆದಿಟ್ಟೆ
ಮೊದಲಿನಿಂದಲೇ ನಾನು ನಿಶ್ಚಯಿಸಿದಂತೆ.
33 : ಸರ್ವೇಶ್ವರನ ಕಾರ್ಯಗಳೆಲ್ಲವು ಒಳ್ಳೆಯವು
ತಕ್ಕಕಾಲದಲ್ಲಿ ಒದಗಿಸುವನಾತ
ಅಗತ್ಯವಿದ್ದವುಗಳನ್ನು.
ಯಾರೂ ಹೇಳಲಾರರು ‘ಇದು ಅದಕ್ಕಿಂತ
ಕೆಟ್ಟದು’ ಎಂದು
ಸೂಕ್ತಸಮಯದಲ್ಲಿ ಸಮರ್ಥನೆಗೊಳ್ಳುವುವು
ಅವು ಸರಿಯಾದವುಗಳೆಂದು.
34 : ಈಗ ಹಾಡಿರಿ ನಿಮ್ಮ ಹೃದಯದಿಂದಲೂ
ಬಾಯಿಂದಲೂ ಸ್ತುತಿಗೀತೆಯನ್ನು;
ಕೀರ್ತಿಸಿರಿ ಸರ್ವೇಶ್ವರನ ನಾಮವನ್ನು.