Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಮಿತ್ರದ್ರೋಹ ಪ್ರತಿಯೊಬ್ಬ ಪರಿಚಿತನು ‘ನಾನು ನಿನ್ನ ಸ್ನೇಹಿತ’ ಎನ್ನಬಹುದು ಆದರೆ ಕೆಲವರು ಹೆಸರಿಗೆ ಮಾತ್ರ ಸ್ನೇಹಿತರು.
2 : ಆಪ್ತಮಿತ್ರನೇ ತಿರುಗಿಕೊಂಡು ಶತ್ರುವಾದರೆ ಆ ದುಃಖ ಸಾವಿನ ದುಃಖಕ್ಕೆ ಸಮಾನವಲ್ಲವೆ?
3 : ಓ ಕೆಟ್ಟ ಕಲ್ಪನೆಯೇ! ನೀನು ಏತಕ್ಕಾಗಿ ಸೃಷ್ಟಿಯಾದೆ? ಭೂಲೋಕವನ್ನೆಲ್ಲ ಮೋಸದಿಂದ ಮುಚ್ಚುವುದಕ್ಕಾಗಿಯೆ?
4 : ಒಡನಾಡಿ ಸಂತೋಷಪಡುವನು ಸ್ನೇಹಿತನು ಸುಖವಾಗಿರುವಾಗ ಆದರೆ ವಿರೋಧಿಯಾಗುವನವನು ಆ ಸ್ನೇಹಿತ ಕಷ್ಟದಲ್ಲಿರುವಾಗ.
5 : ಹೊಟ್ಟೆಗಾಗಿ ಸ್ನೇಹಿತನೊಂದಿಗೆ ದುಡಿಯುವ ಒಡನಾಡಿಯೂ ಇದ್ದಾನೆ ಇಂಥವನು ಯುದ್ಧಕಾಲದಲ್ಲಿ ಗುರಾಣಿ ಹಿಡಿಯುತ್ತಾನೆ.
6 : ಪ್ರಾಮಾಣಿಕ ಸ್ನೇಹಿತನನು ಮರೆತುಬಿಡಬೇಡ ನಿನ್ನ ಸೌಭಾಗ್ಯದಲ್ಲಿ ಅವನನು ಅಲಕ್ಷಿಸಬೇಡ.
7 : ಸಲಹೆಗಾರರ ಬಗ್ಗೆ ಎಚ್ಚರಿಕೆ ಆಲೋಚನೆ ಕೊಡುವ ಪ್ರತಿಯೊಬ್ಬನು ಅದನ್ನು ಹೊಗಳುತ್ತಾನೆ ಆದರೆ ಸ್ವಂತ ಹಿತಕ್ಕಾಗಿ ಆಲೋಚನೆ ಕೊಡುವಂಥವರೂ ಇದ್ದಾರೆ.
8 : ಎಚ್ಚರಿಕೆಯಿಂದಿರು ಸಲಹೆಗಾರರ ವಿಷಯದಲ್ಲಿ ಮನಬಿಚ್ಚುವುದಕ್ಕೆ ಮುಂಚೆ ಅವನಿಗೆ ಬೇಕಾದುದೇನೆಂದು ತಿಳಿ. ಆಲೋಚನೆ ಹೇಳುತ್ತಿರಬಹುದು ಸ್ವಂತ ಲಾಭಕ್ಕಾಗಿ ಆ ಸಲಹೆಯನ್ನು ಬಳಸಿಕೊಳ್ಳಬಹುದು ನಿನಗೆ ವಿರೋಧವಾಗಿ.
9 : ತೀರ್ಮಾನಿಸಿ ಹೇಳಬಹುದವರು, ‘ನಿನ್ನ ದಾರಿ ಸರಿಯಾಗಿದೆ’ ಎಂದು ಆದರೆ ನಿನಗೇನು ಸಂಭವಿಸುವುದೋ ಎಂದು ನೋಡುವರು ದೂರ ನಿಂತುಕೊಂಡು.
10 : ಸಂದೇಹ ದೃಷ್ಟಿಯಿಂದ ನಿನ್ನ ಕಾಣುವವ ನೊಂದಿಗೆ ಆಲೋಚನೆ ಮಾಡಬೇಡ ನಿನ್ನ ಮೇಲೆ ಹೊಟ್ಟೆಕಿಚ್ಚು ಪಡುವವನಿಗೆ ನಿನ್ನ ಮನಸ್ಸನ್ನು ಬಿಚ್ಚಬೇಡ.
11 : ಸ್ತ್ರೀಯೊಂದಿಗೆ ಅವಳ ಸವತಿಯನ್ನು ಕುರಿತು ಹೇಡಿಯೊಂದಿಗೆ ಯುದ್ಧವನ್ನು ಕುರಿತು ವರ್ತಕನೊಂದಿಗೆ ವ್ಯಾಪಾರವನ್ನು ಕುರಿತು ಕೊಳ್ಳುವವನೊಂದಿಗೆ ಮಾರುವುದನ್ನು ಕುರಿತು ಮತ್ಸರಿಯೊಂದಿಗೆ ಕೃತಜ್ಞತೆಯನ್ನು ಕುರಿತು ನಿರ್ದಯಿಯೊಂದಿಗೆ ದಯೆಯನ್ನು ಕುರಿತು ಸೋಮಾರಿಯೊಂದಿಗೆ ಕೆಲಸದ ರೀತಿಯನ್ನು ಕುರಿತು ಅನಿಯತ ಕೂಲಿಯಾಳಿನೊಂದಿಗೆ ಕೆಲಸ ಮುಗಿಸುವುದನ್ನು ಕುರಿತು ಮೈಗಳ್ಳ ಸೇವಕನೊಂದಿಗೆ ದೊಡ್ಡ ಯೋಜನೆಯನ್ನು ಕುರಿತು ಆಲೋಚನೆ ಕೇಳಬೇಡ: ಅವರು ಕೊಡುವ ಸಲಹೆಯನು ಗಮನಿಸಬೇಡ.
12 : ಆದರೆ ಯಾವನು ದೇವಾಜ್ಞೆಗಳನ್ನು ಸರಿಯಾಗಿ ಅನುಸರಿಸುತ್ತಾನೆಂದು ತಿಳಿದಿದೆಯೋ ಯಾವನ ಮನೋಭಾವ ನಿನ್ನ ಮನೋಭಾವದಂತಿದೆಯೋ ನೀನು ಕಷ್ಟದಲ್ಲಿದ್ದಾಗ ಯಾವನು ನಿನ್ನೊಂದಿಗೆ ದುಃಖಿಸುತ್ತಾನೋ ಅಂಥ ಸತ್ಪುರುಷನೊಂದಿಗಿದ್ದು ಆಲೋಚನೆಯನ್ನು ಕೇಳಿಕೊ.
13 : ನಿನ್ನ ಅಂತರಂಗದ ಆಲೋಚನೆಯೇ ಸ್ಥಿರವಾದುದು ನಿನಗೆ ಅದಕ್ಕಿಂತ ವಿಶ್ವಾಸ ಪಾತ್ರವಾದುದಿಲ್ಲ ಇನ್ನಾವುದು.
14 : ಎತ್ತರದ ಬುರುಜಿನ ಮೇಲಿರುವ ಏಳು ಮಂದಿ ಕಾವಲುಗಾರರಿಗಿಂತ ಮನುಷ್ಯನ ಅಂತರಂಗ ನೀಡುವ ಎಚ್ಚರಿಕೆಯೇ ಹೆಚ್ಚು ಸೂಕ್ತ.
15 : ಮೇಲಾಗಿ ಪ್ರಾರ್ಥನೆ ಮಾಡು ಮಹೋನ್ನತನಿಗೆ ನಿನ್ನನು ಸತ್ಯದ ಮಾರ್ಗದಲ್ಲಿ ನಡೆಸುವಂತೆ.
16 : ಸುಜ್ಞಾನ – ಆತ್ಮವಿಶ್ವಾಸ ಯಾವ ಕೆಲಸಕ್ಕಾದರೂ ಯೋಜನೆಯೇ ಮೊದಲು ಯಾವ ಕಾರ್ಯಸಾಧನೆಗೂ ಆಲೋಚನೆಯೇ ಮುಂದು.
17 : ನಾಲ್ಕು ಯೋಚನೆಗಳು ಬೇರೂರುವುದು ಹೃದಯದಲೇ ಅಲ್ಲಿಂದ ತಲೆಯೆತ್ತುತ್ತವೆ ಒಳಿತು-ಕೆಡುಕು, ಜೀವ ಹಾಗೂ ಸಾವು ಇವುಗಳನ್ನು ನಿರಂತರ ಆಳುವಂಥದು ನಾಲಗೆಯು.
18 : ನಾಲ್ಕು ಯೋಚನೆಗಳು ಬೇರೂರುವುದು ಹೃದಯದಲೇ ಅಲ್ಲಿಂದ ತಲೆಯೆತ್ತುತ್ತವೆ ಒಳಿತು-ಕೆಡುಕು, ಜೀವ ಹಾಗೂ ಸಾವು ಇವುಗಳನ್ನು ನಿರಂತರ ಆಳುವಂಥದು ನಾಲಗೆಯು.
19 : ಒಬ್ಬನು ಚತುರ, ಇನ್ನೊಬ್ಬನಿಗೆ ಆಲೋಚನೆ ಕೊಡುವುದರಲ್ಲಿ ಆದರೆ ಸ್ವಂತ ಆತ್ಮಕೆ ಅವನು ನಿರುಪಯೋಗಿ.
20 : ಒಬ್ಬನು ಮಾತಿನ ಮಲ್ಲ, ಆದರೆ ಅಪ್ರಿಯ; ಇಂಥವನು ಹೊಟ್ಟೆಗಿಲ್ಲದ ನಿರ್ಗತಿಕ.
21 : ಕಾರಣ, ಸರ್ವೇಶ್ವರನ ಪ್ರೀತಿಯನ್ನು ಅವನು ಗಳಿಸಿಲ್ಲ ಆದ್ದರಿಂದ ಅವನು ತೀರಾ ಸುಜ್ಞಾನರಹಿತ.
22 : ಇನ್ನೊಬ್ಬನು ತಾನು ಜಾಣನೆಂದು ನೆನೆಸುತ್ತಾನೆ ತನ್ನ ತೀರ್ಪುಗಳೇ ನಂಬಲು ಅರ್ಹವೆಂದು ಘೋಷಿಸುತ್ತಾನೆ.
23 : ಆದರೆ ಸುಜ್ಞಾನಿ ತನ್ನ ಜನರಿಗೆ ನೀಡುತ್ತಾನೆ ಶಿಕ್ಷಣ ಅವನ ತಿಳುವಳಿಕೆಯ ಫಲಗಳು ಶಾಶ್ವತ.
24 : ಸುಜ್ಞಾನಿಯ ಮೇಲೆ ಸುರಿಸಲಾಗುವುದು ಆಶೀರ್ವಾದಗಳು ನೋಡಿದವರೆಲ್ಲರು ಅವನು ಧನ್ಯನೆಂದು ಹೇಳುವರು.
25 : ಮನುಷ್ಯನ ಜೀವನದ ದಿನಗಳು ಎಣಿಕೆಯಾಗಿವೆ ಆದರೆ ಇಸ್ರಯೇಲಿನ ದಿನಗಳು ಅಗಣಿತವಾಗಿವೆ.
26 : ಸುಜ್ಞಾನಿ ತನ್ನ ಜನರಿಗೆ ವಿಶ್ವಾಸಪಾತ್ರ ಅವನ ಹೆಸರು ಉಳಿಯುವುದು ಚಿರಕಾಲ.
27 : ತಿಂಡಿಯಲ್ಲಿ ಇತಿ-ಮಿತಿ ಮಗನೇ, ಜೀವನದಲಿ ನಿನ್ನನ್ನೇ ಪರೀಕ್ಷಿಸಿಕೊ ಕೆಟ್ಟದ್ದೇನೆಂದು ತಿಳಿದು ಅದಕೆ ಎಡೆಕೊಡದಂತೆ ನೋಡಿಕೊ.
28 : ಏಕೆಂದರೆ, ಎಲ್ಲವೂ ವಿಹಿತವಾಗಿರುವುದಿಲ್ಲ ಎಲ್ಲರು, ಎಲ್ಲದರಲ್ಲಿ ಮೆಚ್ಚಿಕೆ ಪಡೆಯುವುದಿಲ್ಲ.
29 : ಪ್ರತಿಯೊಂದು ವಿಶಿಷ್ಟ ಭೋಜನಕ್ಕೂ ಕಾತುರವಾಗಿರಬೇಡ ತಿನ್ನುವ ಪದಾರ್ಥಗಳಲ್ಲಿ ಅತ್ಯಾಶೆಯುಳ್ಳವ ನಾಗಿರಬೇಡ.
30 : ರೋಗ ಉತ್ಪತ್ತಿಯಾಗುವುದು ಅತಿಯಾದ ತಿಂಡಿ-ತಿನಸುಗಳಿಂದ ಉದರಶೂಲೆಯೂ ಆರಂಭವಾಗುವುದುಂಟು ಅದರಿಂದ.
31 : ಅನೇಕರು ತೀರಿಹೋದರು ಅತಿಯಾದ ಭೋಜನದಿಂದ ನಿನ್ನ ಜೀವನದ ದಿನಗಳನು ಹೆಚ್ಚಿಸಿಕೋ ಎಚ್ಚರಿಕೆಯಿಂದ.

· © 2017 kannadacatholicbible.org Privacy Policy