1 : ಕನಸುಗಳು
ತಿಳುವಳಿಕೆಯಿಲ್ಲದವರಿಗೆ ವ್ಯರ್ಥ
ಹಾಗು ಅಶುದ್ಧ ಆಕಾಂಕ್ಷೆಗಳು
ಇರುತ್ತವೆ
ಕನಸುಗಳು ಮೂರ್ಖರಿಗೆ ರೆಕ್ಕೆಬರುವಂತೆ
ಮಾಡುತ್ತವೆ.
2 : ಕನಸುಗಳ ಮೇಲೆ ಮನಸ್ಸಿಡುವವನು ನೆರಳನು
ಹಿಡಿಯಹೋದವನಂತೆ
ಗಾಳಿಯನು ಬೆನ್ನಟ್ಟಿಹೋದವನಂತೆ.
3 : ಕನಸಿನ ದರ್ಶನವು, ಇದಕ್ಕೆ ಪ್ರತಿಯಾಗಿ ಅದು
ಇದ್ದಂತೆ
ಮುಖಕ್ಕೆ ಇದಿರಾಗಿ ಅದರ ಪ್ರತಿಬಿಂಬವಿದ್ದಂತೆ.
4 : ಹೊಲೆಯಿಂದ ಯಾವುದು ಶುದ್ಧವಾದೀತು?
ಸಟೆಯಿಂದ ಯಾವುದು ದಿಟವಾದೀತು?
5 : ಭವಿಷ್ಯನುಡಿಗಳು, ಶಕುನಗಳು, ಕನಸುಗಳು
ಇವೆಲ್ಲವು ವ್ಯರ್ಥವೇ
ಪ್ರಸವವೇದನೆಯಲ್ಲಿರುವ ಸ್ತ್ರೀಯ ಮನಸ್ಸಿನಂತೆ
ಇವು ಮನಸ್ಸಿನಲ್ಲಿ ಊಹೆಗಳನ್ನು
ಉದ್ಭವಿಸುತ್ತವೆ.
6 : ಗಮನಿಸಬೇಡ ಇಂಥವುಗಳೆಲ್ಲವನ್ನು
ಮಹೋನ್ನತನಿಂದ ನಿನಗಾಗಿ ಅವು
ಕಳುಹಿಸಲ್ಪಟ್ಟ ಹೊರತು.
7 : ಕನಸುಗಳು ಅನೇಕರನು ಅಡ್ಡಹಾದಿಗೆ ಹಚ್ಚಿವೆ
ಅವುಗಳನು ನೆಚ್ಚಿಕೊಂಡು ಅವರು
ಮೋಸ ಹೋಗಿದ್ದಾರೆ.
8 : ಸುಳ್ಳು ಮಾತು ಬೇಕಿಲ್ಲ ಧರ್ಮಶಾಸ್ತ್ರ
ನೆರವೇರುವುದಕ್ಕೆ
ಜ್ಞಾನ ಪರಿಪೂರ್ಣವಾಗುವುದು
ಸತ್ಯಸಂಧನಿಗೆ.
9 : ಪ್ರಯಾಣ
ದೇಶಸಂಚಾರಮಾಡುವವನು ಅನೇಕ ವಿಷಯ
ಗಳನು ಬಲ್ಲನು
ಅನುಭವಸ್ಥನು ಜ್ಞಾನವನ್ನು ಪ್ರಸಿದ್ಧಿಗೆ
ತರುವನು.
10 : ಅನುಭವವಿಲ್ಲದವನಿಗೆ ತಿಳುವಳಿಕೆ ಕಡಿಮೆ
ಹೆಚ್ಚಾಗಿ ದೇಶಸಂಚಾರ ಮಾಡಿದವನಿಗೆ
ಹೆಚ್ಚು ನಿಪುಣತೆ.
11 : ನಾನು ದೇಶಾಟನೆ ಮಾಡಿದ ಕಾಲದಲಿ
ಅನೇಕ ಸಂಗತಿಗಳನ್ನು ಕಂಡಿರುವೆ
ನನ್ನ ನುಡಿಗೆ ನಿಲುಕದಷ್ಟು ತಿಳುವಳಿಕೆ
ನನಗಾಗಿದೆ.
12 : ಅನೇಕ ಸಾರಿ ನನ್ನ ಪ್ರಾಣಕ್ಕೆ ಅಪಾಯವಿತ್ತು
ಆದರೆ ಈ ತಿಳುವಳಿಕೆಯ ಮೂಲಕ ಪ್ರಾಣ
ಉಳಿಯಿತು.
13 : ದೈವಭಯ
ದೇವರಿಗೆ ಭಯಪಡುವವರ ಆತ್ಮ
ಬದುಕುತ್ತದೆ
ಏಕೆಂದರೆ ತಮ್ಮನು ಕಾಪಾಡುವವರ ಮೇಲೆ
ಅವರ ನಿರೀಕ್ಷೆಯಿದೆ.
14 : ದೇವರಿಗೆ ಭಯಪಡುವವನು
ಅಂಜುವುದಿಲ್ಲ
ದೇವರೇ ಅವನ ನಿರೀಕ್ಷೆಯಾಗಿರುವುದರಿಂದ,
ಅಳುಕಿ ಹಿಂಜರಿಯುವುದಿಲ್ಲ.
15 : ಯಾರ ಕಡೆಗೆ ಅವನ ಗಮನ?
ಯಾರು ಅವನಿಗೆ ಆಶ್ರಯ?
ದೇವರಿಗೆ ಭಯಪಡುವವನ ಆತ್ಮ ಧನ್ಯ !
16 : ಸರ್ವೇಶ್ವರನ ಕಟಾಕ್ಷ ತನ್ನನು ಪ್ರೀತಿಸುವವರ
ಮೇಲೆ
ಅಂಥವರಿಗೆ ಬಲವಾದ ರಕ್ಷಣೆ ಹಾಗು ಆಶ್ರಯ
ಆತನೇ.
ಆತನೇ ಬಿಸಿಗಾಳಿಯಿಂದ ರಕ್ಷಿಸುವ ಮರೆ,
ಮಧ್ಯಾಹ್ನದ ತಾಪವ ತಪ್ಪಿಸುವ ಹೊದಿಕೆ.
ಎಡವದಂತೆ ಕಾಯುವವನು, ಬೀಳದಂತೆ
ಕಾಪಾಡುವವನು ಆತನೇ.
17 : ಆತನು, ಆತ್ಮವನ್ನು ಚೈತನ್ಯಗೊಳಿಸಿ,
ಕಣ್ಣುಗಳನ್ನು ಕಳೆಗೊಳಿಸುವನು;
ಕ್ಷೇಮ, ಜೀವ, ಆಶೀರ್ವಾದಗಳನ್ನು
ದಯಪಾಲಿಸುವನು.
18 : ಬಲಿಯರ್ಪಣೆ
ಅನ್ಯಾಯದಿಂದ ಗಳಿಸಿದವುಗಳನ್ನು ಬಲಿಯಾಗಿ
ಅರ್ಪಿಸುವುದು ಕುಚೇಷ್ಟೆಯಷ್ಟೇ
ದುಷ್ಟರ ಕುಚೇಷ್ಟೆಯಿಂದ ಗಿಟ್ಟದು ಮೆಚ್ಚಿಗೆ.
19 : ಅಧರ್ಮಿಗಳ ಅರ್ಪಣೆಗಳಲ್ಲಿ ಮಹೋನ್ನತನಿಗೆ
ಸಂತೋಷವಿಲ್ಲ
ಅವರ ಅನೇಕ ಯಜ್ಞಗಳ ನಿಮಿತ್ತ ಪಾಪ
ನಿವಾರಣೆ ದೊರಕುವುದಿಲ್ಲ.
20 : ಬಡವರ ಸ್ವತ್ತಿನಿಂದ ಯಜ್ಞಪಶುವನ್ನು
ತರುವವನು
ತಂದೆಯ ಎದುರಿನಲ್ಲೇ ಮಗನನ್ನು
ಕೊಲ್ಲುವಂಥವನು.
21 : ಹಸಿದವನ ಅನ್ನ ಬಡವನ ಜೀವಾಧಾರ
ಅದನ್ನು ಕಸಿದುಕೊಳ್ಳುವವನು ಕೊಲೆಗಾರ.
22 : ನೆರೆಯವನ ಜೀವನಾಧಾರವನು ಕಿತ್ತು
ಕೊಳ್ಳುವುದು ಕೊಲೆಗೆ ಸಮಾನ
ತನ್ನ ಆಳಿನ ಕೂಲಿಯನು ಹಿಡಿದುಕೊಳ್ಳುವುದು
ರಕ್ತಪಾತಕ್ಕೆ ಸಮಾನ.
23 : ಒಬ್ಬನು ಕಟ್ಟುವುದು, ಇನ್ನೊಬ್ಬನು
ಕೆಡವುವುದು;
ಇದರಿಂದೇನು ಲಾಭ, ಕಠಿಣ ದುಡಿಮೆಯ
ಹೊರತು?
24 : ಒಬ್ಬನು ಪ್ರಾರ್ಥಿಸುವುದು, ಇನ್ನೊಬ್ಬನು
ಶಪಿಸುವುದು;
ಇವರಲ್ಲಿ ಯಾರ ಮಾತನು ದೇವರು
ಆಲಿಸುವುದು?
25 : ಶವ ಮುಟ್ಟಿದ ಮೇಲೆ ಸ್ನಾನ ಮಾಡಿದವನು
ತಿರುಗಿ ಅದನ್ನು ಮುಟ್ಟಿದರೆ ಸ್ನಾನದಿಂದಾದ
ಲಾಭವೇನು?
26 : ಅಂತೆಯೇ ತನ್ನ ಪಾಪಗಳಿಗಾಗಿ ಉಪವಾಸ
ಮಾಡಿ ಪುನಃ ಪಾಪಮಾಡುವವನು;
ಇಂಥವನ ಮೊರೆಯನು ಕೇಳುವರಾರು? ದೇಹ
ದಂಡನೆಯಿಂದ ಅವನಿಗಾದ ಲಾಭವೇನು?