1 : ಸರ್ವೇಶ್ವರನಲಿ ಭಯಭಕ್ತಿ ಇದ್ದರೆ
ಅಂಥವನಿಗೆ ಯಾವ ಹಾನಿಯೂ
ತಟ್ಟದು
ಶೋಧನೆಯ ಸಮಯದಲಿ ಆತನಿಗೆ ಮೇಲಿಂದ
ಮೇಲೆ ಸಂರಕ್ಷಣೆ ದೊರಕುವುದು.
2 : ಬುದ್ಧಿವಂತನು ಧರ್ಮಶಾಸ್ತ್ರವನು
ದ್ವೇಷಿಸನು
ಅದರ ಬಗ್ಗೆ ಕಪಟಿಯಾಗಿರುವವನು
ಬಿರುಗಾಳಿಗೆ ಸಿಕ್ಕ ಹಡಗಿನಂತಿರುವನು.
3 : ವಿವೇಕಿಗೆ ಧರ್ಮಶಾಸ್ತ್ರದಲಿ
ಭರವಸೆಯಿರುತ್ತದೆ
ಅದು ಅವನಿಗೆ ನೀತಿವಾಕ್ಯದಂತೆ
ನಂಬಲರ್ಹವಾಗಿರುತ್ತದೆ.
4 : ನಿನ್ನ ಭಾಷಣ, ತಯಾರಿಸಿದ್ದಾಗಿದ್ದರೆ ಅದನು
ಜನರು ಆಲಿಸುವರು
ವಿಷಯಗಳನ್ನೆಲ್ಲ ಸಂಗ್ರಹಿಸಿಕೊಂಡ
ವನಾಗಿದ್ದರೆ ಉತ್ತರಹೇಳು.
5 : ಮೂರ್ಖನ ಹೃದಯ ಬಂಡಿಯ ಚಕ್ರದಂತೆ
ಅವನ ಆಲೋಚನೆ ಉರುಳುವ ಇರಸಿನಂತೆ.
6 : ಬೀಜದ ಕುದುರೆಯು ಅಣಕಿಸುವ
ಗೆಳೆಯನಂತಿದೆ
ಅದರ ಮೇಲೆ ಯಾರು ಕೂತರೂ
ಅದು ಕೆನೆಯುತ್ತದೆ.
7 : ಅಸಮಾನತೆ
ವರ್ಷದಲಿ ಪ್ರತೀದಿನದ ಬೆಳಕು ಬರುವುದು
ಸೂರ್ಯನಿಂದಲ್ಲವೆ?
ಹೀಗಿರುವಲ್ಲಿ ಒಂದು ದಿನ ಇನ್ನೊಂದಕ್ಕಿಂತ
ಪವಿತ್ರವಾದುದು ಹೇಗೆ?
8 : ಅವು ವೈಶಿಷ್ಟ್ಯ ಪಡೆದಿರುವುದು ಸರ್ವೇಶ್ವರನ
ಜ್ಞಾನದಿಂದಲೇ
ಋತುಗಳು, ಹಬ್ಬ ದಿನಗಳು ಬೇರೆ ಬೇರೆ
ಆಗಿರುವುದು ಆತನಿಂದಲೇ.
9 : ಅವುಗಳಲ್ಲಿ ಕೆಲವನು ಗುರುತಿಸಿ ಪವಿತ್ರ
ಗೊಳಿಸಿದನು
ಇನ್ನು ಕೆಲವನು ಸಾಧಾರಣ ದಿನಗಳನ್ನಾಗಿ
ಮಾಡಿದನು.
10 : ನರಮಾನವರೆಲ್ಲರು ಉತ್ಪನ್ನವಾದುದು
ಭೂಮಿಯಿಂದಲೇ
ಆದಾಮನೂ ನಿರ್ಮಿತನಾದುದು
ಮಣ್ಣಿನಿಂದಲೇ.
11 : ಸರ್ವೇಶ್ವರನ ತನ್ನ ಸಂಪೂರ್ಣ ಜ್ಞಾನದಿಂದ
ಅವರಲಿ ವ್ಯತ್ಯಾಸವಿರಿಸಿದನು
ಅವರ ಹಾದಿಗಳನ್ನು ವಿಧವಿಧವಾಗಿ
ನೇಮಿಸಿದನು.
12 : ಕೆಲವರನು ಆಶೀರ್ವದಿಸಿ ಮೇಲಕ್ಕೆತ್ತಿದನು
ಇನ್ನು ಕೆಲವರನು ಪ್ರತ್ಯೇಕಿಸಿ ತನ್ನ ಬಳಿಗೆ
ತಂದುಕೊಂಡನು
ಮತ್ತೆ ಕೆಲವರನು ಶಪಿಸಿ, ಹೀನಸ್ಥಿತಿಗೆ
ಇಳಿಸಿದನು
ಹಾಗು ಅವರ ಆ ಸ್ಥಾನದಿಂದ ಅವರನು
ತಳ್ಳಿಹಾಕಿದನು.
13 : ಆತನ ಹಾದಿಗಳೆಲ್ಲ ಆತನ ಸುಚಿತ್ತದ
ಪ್ರಕಾರ ಇವೆ
ಕುಂಬಾರನ ಕೈಯೊಳಗಿನ ಜೇಡಿಮಣ್ಣಿನಂತೆ
ಮನುಷ್ಯರು ಸೃಷ್ಟಿಕರ್ತನ ಕೈಯಲ್ಲಿರುವುದು
ಅಂತೆಯೆ
ಆತನು ಅವರಿಗೆ ಮಾಡುತ್ತಾನೆ
ತನಗೆ ಸರಿಕಂಡಂತೆ.
14 : ಕೆಡುಕಿಗೆ ಇದಿರಾಗಿದೆ ಒಳಿತು
ಸಾವಿಗೆ ಇದಿರಾಗಿದೆ ಜೀವವು
ಅಂತೆಯೆ ಸದ್ಧರ್ಮಿಗೆ ಇದಿರಾಗಿ
ಅಧರ್ಮಿಯು.
15 : ಈ ರೀತಿ ಮಹೋನ್ನತನ ಕಾರ್ಯಗಳಿವೆ,
ನೋಡು;
ದ್ವಂದ್ವಗಳು, ಒಂದರ ಇದುರಾಗಿ ಇನ್ನೊಂದು.
16 : ದ್ರಾಕ್ಷಿಯನು ಕೂಡಿಸುವವರ ಹಿಂದೆ
ಹಕ್ಕಲಾಯುವವನಂತೆ
ಕೊನೆಯಲಿ ನಾನು ಎಚ್ಚೆತ್ತುಕೊಂಡೆ;
17 : ಸರ್ವೇಶ್ವರನ ಕೃಪೆಯಿಂದ ನಾನವರಿಗಿಂತ
ಮುಂದಾದೆ
ದ್ರಾಕ್ಷಿ ಕೂಡಿಸುವವನಂತೆ ನಾನು ತೊಟ್ಟಿಯನು
ತುಂಬಿದೆ.
18 : ನೋಡು, ನಾನು ಶ್ರಮಪಟ್ಟಿದ್ದು
ನನ್ನೊಬ್ಬನಿಗೋಸ್ಕರವೇ ಅಲ್ಲ:
ಶಿಕ್ಷಣವನ್ನು ಅರಸುವವರೆಲ್ಲರಿಗೋಸ್ಕರ
ಕೂಡ.
19 : ಜನಾಂಗಗಳಲ್ಲಿ ಗಣ್ಯರೆನಿಸಿಕೊಂಡವರೇ,
ನನ್ನನ್ನು ಆಲಿಸಿರಿ
ಜನಾಧಿಪತಿಗಳೇ, ನನಗೆ ಲಕ್ಷ್ಯಕೊಟ್ಟು ಕೇಳಿರಿ.
20 : ಸ್ವಾತಂತ್ರ್ಯ
ಮಗನಿಗೆ, ಹೆಂಡತಿಗೆ, ಸಹೋದರನಿಗೆ,
ಸ್ನೇಹಿತನಿಗೆ ಇವರಾರಿಗಾಗಲೀ
ಅಧಿಕಾರ ನಡೆಸಗೊಡಬೇಡ ನೀನು
ಜೀವದಿಂದಿರುವಾಗ;
ದುಡುಕಿನಿಂದ ಪರರಿಗೆ ಕೊಟ್ಟುಬಿಡಬೇಡ
ನಿನ್ನ ಆಸ್ತಿಪಾಸ್ತಿಯಿಂದ
ತರುವಾಯ ಬಂದೀತು ಅದನ್ನು ಪಶ್ಚಾತ್ತಾಪ
ದಿಂದ ತಿರುಗಿ ಕೇಳುವ ಸಂದರ್ಭ!
21 : ನೀನು ಬದುಕಿರುವಾಗ,
ನಿನ್ನಲಿ ಉಸಿರಿರುವಾಗ
ನಿನ್ನನೇ ಯಾರಿಗೂ ಒಪ್ಪಿಸಿಬಿಡಬೇಡ.
22 : ನೀನು ನಿನ್ನ ಮಕ್ಕಳ ಕೈಯಿಂದ
ಕೇಳುವುದಕ್ಕಿಂತಲು
ಅವರೇ ನಿನ್ನನ್ನು ಕೇಳಿ ಪಡೆದುಕೊಳ್ಳುವುದು
ಮೇಲು.
22 : ನೀನು ನಿನ್ನ ಮಕ್ಕಳ ಕೈಯಿಂದ
ಕೇಳುವುದಕ್ಕಿಂತಲು
ಅವರೇ ನಿನ್ನನ್ನು ಕೇಳಿ ಪಡೆದುಕೊಳ್ಳುವುದು
ಮೇಲು.
23 : ನಿನ್ನ ಕಾರ್ಯಗಳಲ್ಲೆಲ್ಲ ನಿನ್ನ ಕೈಯೇ
ಮೇಲಾಗಿರಲಿ
ನಿನ್ನ ಗೌರವಕ್ಕೆ ಕುಂದು ಬಾರದಂತಿರಲಿ.
24 : ನಿನ್ನ ಜೀವನದ ದಿನಗಳು ಮುಗಿಯುತ್ತಿರಲು
ಮರಣಕಾಲದಲಿ ನಿನ್ನ ಆಸ್ತಿಯನು
ಹಂಚಿಕೊಡು.
25 : ಸೇವಕರು
ಮೇವು, ಕೋಲು, ಹೊರೆ ಕತ್ತೆಗೆ
ಅನ್ನ, ಶಿಕ್ಷಣ, ಕೆಲಸ ಊಳಿಗದವನಿಗೆ.
26 : ನಿನ್ನ ಊಳಿಗದವನಿಗೆ ಕೆಲಸಹಚ್ಚು,
ಆರಾಮವಾಗುವುದು ನಿನಗೆ
ಕೆಲಸವಿಲ್ಲದೆ ಬಿಟ್ಟರೆ ಅವನು ಸ್ವಾತಂತ್ರ್ಯ
ಹುಡುಕುವನು.
27 : ನೊಗ, ಬಾರುಗಳು ಎತ್ತಿನ ಹೆಗಲಿಗೆ
ಕೈಕೋಳ, ಉಪದ್ರವಗಳು ದುಷ್ಟ
ಊಳಿಗದವನಿಗೆ.
28 : ಅವನು ಮೈಗಳ್ಳನಾಗದಂತೆ ದುಡಿಮೆ ಹೆಚ್ಚಿಸು
ಏಕೆಂದರೆ ಸೋಮಾರಿತನ ತುಂಟತನವನ್ನು
ಕಲಿಸುವುದು.
29 : ಅವನಿಗೆ ಸರಿಯಾದ ಕೆಲಸವನ್ನು ಕೊಡು
ಅವಿಧೇಯನಾದರೆ ಬೇಡಿಗಳ ಭಾರವನ್ನು
ಹೆಚ್ಚಿಸು.
30 : ಯಾರ ವಿಷಯದಲೂ ಮಿತಿಮೀರಬೇಡ
ವಿಚಾರವಿಲ್ಲದೆ ಯಾವುದನ್ನು ಮಾಡಬೇಡ.
31 : ನಿನಗೊಬ್ಬ ಊಳಿಗದವನಿದ್ದರೆ ಅವನನ್ನು
ನೋಡಿಕೊ ನಿನ್ನಂತೆ
ಅವನನ್ನು ಕೊಂಡುಕೊಂಡಿದ್ದೀಯೆ
ನೆತ್ತರವಿತ್ತೆ.
32 : ನಿನಗೊಬ್ಬ ಊಳಿಗದವನಿದ್ದರೆ ನಿನ್ನಂತೆಯೆ
ಅವನನು ಸುಧಾರಿಸು
ನಿನ್ನ ಸ್ವಂತ ಪ್ರಾಣದಂತೆ, ಅವನ ಅಗತ್ಯ
ನಿನಗುಂಟು.
33 : ಅವನನ್ನು ನಿರ್ದಯದಿಂದ ಕಂಡರೆ
ಓಡಿಹೋಗಿ ಬಿಟ್ಟಾನು
ಆಗ ಅವನನು ಹುಡುಕಿಕೊಂಡು ಎಲ್ಲೆಡೆ
ಸುತ್ತಬೇಕಾದೀತು.