1 : ಔತಣ
ಔತಣಕ್ಕೆ ಪಾರುಪತ್ಯನಾಗಿರ
ಬೇಕಾದಾಗ ಉಬ್ಬಿಕೊಳ್ಳಬೇಡ
ಆಮಂತ್ರಿತರಲಿ ನೀನೂ ಒಬ್ಬನೆಂದು ತಿಳಿ
ಅವರೊಂದಿಗಿರುವಾಗ;
ಊಟಕ್ಕೆ ಕುಳಿತುಕೊ, ಎಲ್ಲರನು ಶ್ರದ್ಧೆಯಿಂದ
ಉಪಚರಿಸಿದ ಬಳಿಕ.
2 : ಕುಳಿತುಕೊ ನೀನು ವಹಿಸಿಕೊಂಡ ಕರ್ತವ್ಯ
ತೀರಿದ ನಂತರ
ಆಗ ನಿನಗೆ ಸಂತೋಷವಾಗುವುದು
ಅತಿಥಿಗಳ ನಿಮಿತ್ತ
ಕಾರ್ಯ ನೆರವೇರಿದ್ದಕ್ಕಾಗಿ ನಿನಗೆ ನೀಡುವರು
ಅಭಿವಂದನ.
3 : ಹಿರಿಯನೇ, ಮಾತಾಡು; ನಿನಗದು
ತರವಾದುದು
ತಿಳುವಳಿಕೆಯಿಂದ ಸಮರ್ಪಕವಾಗಿ ಮಾತಾಡು
ಆದರೆ ಸಂಗೀತಕ್ಕೆ ಅಡ್ಡಿಮಾಡದಿರು.
4 : ಗಾಯನ ನಡೆಯುವಾಗ ದೀರ್ಘ ಭಾಷಣ
ಮಾಡಬೇಡ
ಅಕಾಲದಲಿ ನಿನ್ನ ವಿದ್ವತ್ತು ತೋರಿಸಬೇಡ.
5 : ಮದ್ಯಪಾನದ ಕೂಟದಲ್ಲಿ ಸಂಗೀತ ವಾದ್ಯ
ಚಿನ್ನದ ಮಧ್ಯೆ ಕೂರಿಸಿದ ಮಾಣಿಕ್ಯ.
6 : ಮದ್ಯಪಾನದೊಂದಿಗೆ ಇಂಪಾದ ಗಾಯನ
ಆಹ್ಲಾದಕರ
ಚಿನ್ನದಲಿ ಕೂರಿಸಿದ ಪಚ್ಚೆಯಂತೆ ಸುಂದರ.
7 : ಯುವಕನೇ, ಅಗತ್ಯವಿದ್ದಾಗ ಮಾತ್ರ ಮಾತಾಡು
ಅದೂ ಕನಿಷ್ಟಪಕ್ಷ ಎರಡುಬಾರಿ,
ವಿನಂತಿಸಿದಾಗ ಮಾತ್ರ ಮಾತಾಡು.
8 : ವಿಷಯಗಳು ಅನೇಕವಿದ್ದರೂ, ಸಂಗ್ರಹಿಸಿ
ಹೇಳು ಸ್ವಲ್ಪದರಲಿ
ವಿಷಯ ಗೊತ್ತಿದ್ದರೂ, ನೀನಿರು
ಮೌನ ಪಂಡಿತನ ತರಹದಿ.
9 : ಸರಿಸಮಾನನಂತೆ ವರ್ತಿಸಬೇಡ
ಹಿರಿಯರ ನಡುವೆ ಇರುವಾಗ
ಹರಟಬೇಡ ಇನ್ನೊಬ್ಬರು
ಮಾತಾಡುತ್ತಿರುವಾಗ.
10 : ಮಿಂಚು ಹೊಳೆಯುವುದು ಗುಡುಗಿನ ಮುಂಚೆ
ಸನ್ಮಾನ ನಡೆಯುವುದು ಸಂಕೋಚವುಳ್ಳವನ
ಮುಂದೆ.
11 : ಊಟದಿಂದ ಏಳು ಕೊನೆಯವನಾಗಿರದೆ,
ತಕ್ಕ ಸಮಯದಲ್ಲಿ ಎದ್ದುಬಿಡು
ವಿಳಂಬ ಮಾಡದೆ ಬೇಗನೆ ಮನೆಗೆ
ಹೋಗಿಬಿಡು.
12 : ಅಲ್ಲಿ ಸಂತೋಷದಿಂದ ಕಾಲ ಕಳೆ;
ಮನಸ್ಸಿಗೆ ಬಂದಂತೆ ಮಾಡು
ಆದರೆ ಸೊಕ್ಕಿನ ಮಾತುಗಳನ್ನಾಡಿ
ಪಾಪಕಟ್ಟಿಕೊಳ್ಳದಿರು.
13 : ನಿನ್ನ ಸೃಷ್ಟಿಕರ್ತನನು ಕೊಂಡಾಡು
ಇವೆಲ್ಲವುಗಳಿಗಾಗಿ
ತನ್ನ ಒಳ್ಳೆಯ ವಸ್ತುಗಳಿಂದ ನಿನಗೆ
ಕೊಡುವನಾತ ಧಾರಾಳವಾಗಿ.
14 : ದೈವಭಯ
ಸರ್ವೇಶ್ವರನಿಗೆ ಭಯಪಡುವವನು
ಸುಶಿಕ್ಷಣ ಪಡೆಯುವನು
ಹೊತ್ತಾರೆ ಎದ್ದು ಆತನನು ಹುಡುಕುವವನು,
ದಯೆಯನು ಹೊಂದುವನು.
15 : ಧರ್ಮಶಾಸ್ತ್ರವನು ಅರಸುವವನು ಅದರಿಂದ
ಭರಿತನಾಗುವನು
ಕಪಟಿಯಾದರೋ ಅದರಿಂದಲೆ
ಎಡವಿ ಬೀಳುವನು.
16 : ಸರ್ವೇಶ್ವರನಿಗೆ ಭಯಪಡುವವರು
ನ್ಯಾಯವನು ಕಂಡುಕೊಳ್ಳುವರು
ತಮ್ಮ ಸತ್ಕಾರ್ಯಗಳನು ದೀಪದಂತೆ
ಬೆಳಗಿಸುವರು.
17 : ದುರಾತ್ಮನು ಗದರಿಕೆಗೆ ತಲೆ
ತಪ್ಪಿಸಿಕೊಳ್ಳುವನು
ತನಗೆ ಇಷ್ಟಬಂದ ತೀರ್ಮಾನವನೇ
ಹುಡುಕಿಕೊಳ್ಳುವನು.
18 : ಬುದ್ಧಿವಂತನು ಇತರರ ಆಲೋಚನೆಯನು
ತೃಣೀಕರಿಸನು
ಪರಕೀಯನೂ ಗರ್ವಿಷ್ಠನೂ ತನ್ನಷ್ಟಕ್ಕೆ
ಏನು ಮಾಡಿದರೂ ಅಂಜನು, ತಲ್ಲಣಿಸನು.
19 : ಆಲೋಚನೆಯಿಲ್ಲದೆ ಏನನ್ನೂ ಮಾಡಬೇಡ
ಮಾಡಿದ ಮೇಲೆ ಮರುಗಬೇಡ.
20 : ತಿಕ್ಕಾಟದ ಹಾದಿಗೆ ಹೋಗಬೇಡ
ಕಲ್ಲುದಾರಿಯಲಿ ಎಡವಬೇಡ
ಸಮವಾದ ಹಾದಿಯಲಿ ಮೈಮರೆತಿರಬೇಡ.
21 : ತಿಕ್ಕಾಟದ ಹಾದಿಗೆ ಹೋಗಬೇಡ
ಕಲ್ಲುದಾರಿಯಲಿ ಎಡವಬೇಡ
ಸಮವಾದ ಹಾದಿಯಲಿ ಮೈಮರೆತಿರಬೇಡ.
22 : ನಿನ್ನ ಸ್ವಂತ ಮಕ್ಕಳ ವಿಷಯದಲಿ
ಎಚ್ಚರಿಕೆಯಿಂದಿರು.
23 : ಪ್ರತಿಯೊಂದು ಕಾರ್ಯಸಾಧನೆಯಲ್ಲು
ನಿನ್ನಲ್ಲೆ ನಂಬಿಕೆಯಿಟ್ಟು ವರ್ತಿಸು,
ದೈವಾಜ್ಞೆಗಳನ್ನು ಕೈಗೊಳ್ಳುವ ರೀತಿ ಇದು.
24 : ಧರ್ಮಶಾಸ್ತ್ರದಲ್ಲಿ ನಂಬಿಕೆಯಿಡುವವನು
ಆಜ್ಞೆಗಳನು ಗಮನಿಸುವನು
ಸರ್ವೇಶ್ವರನಲಿ ಭರವಸೆಯಿಟ್ಟವನು ನಷ್ಟವನು
ಅನುಭವಿಸನು.