Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಸಿರಾಖ


1 : ಐಶ್ವರ್ಯ ದೇಹವು ಕೊರಗುತ್ತದೆ ಹಣದ ನಿಮಿತ್ತ ನಿದ್ರೆ ಹೋಗಿಬಿಡುತ್ತದೆ ಅದರ ಚಿಂತೆಯಿಂದ ಆ ದೇಹ ಕರಗುತ್ತದೆ ಹೀಗೆ ನಿದ್ದೆಗೆಡುವುದರಿಂದ.
2 : ಚಿಂತೆಯಿಂದ ನಿದ್ರೆಗೆಟ್ಟವನಿಗೆ ನಿದ್ರೆಯ ಬಯಕೆಯಿದೆ ಕಠಿಣವಾದ ಕಾಯಿಲೆಯಿಂದಲೂ ನಿದ್ರೆ ಭಂಗವಾಗುತ್ತದೆ.
3 : ಧನವಂತನು ಕಷ್ಟಪಡುವನು ಹಣಕೂಡಿಸಲಿಕ್ಕೆ ಅದನ್ನು ಬಿಟ್ಟರೂ ಬೇಕಾದಷ್ಟು ಸುಖವಿದೆ ಅವನಿಗೆ.
4 : ಬಡವನು ಜೀವನಾಂಶಕ್ಕಾಗಿ ಕಷ್ಟಪಡಬೇಕು ಅದನ್ನು ಬಿಟ್ಟರೆ ಮತ್ತಷ್ಟು ಕೊರತೆಯಿಂದ ನರಳಬೇಕು.
5 : ಬಂಗಾರವನ್ನು ಬಯಸುವವನನ್ನು ನೀತಿವಂತನೆಂದು ಎಣಿಸಲಾಗದು ಲಾಭದ ಗೀಳು ಇರುವವನು ಅದರಿಂದಲೇ ಭ್ರಷ್ಟನಾಗುವನು.
6 : ಹಣಗಳಿಕೆಗೆಂದು ಅನೇಕರು ಹಾಳಾಗಿಹೋದರು ಅವರ ಕಣ್ಣೆದುರಿಗೇ ಬಂದಿತು ಅವರ ನಾಶನವು.
7 : ಯಾವುದಕ್ಕೆ ಅರ್ಪಣೆ ಸಲ್ಲಿಸಿದರೋ ಅದೇ ಪರಿಣಮಿಸಿತು ಅವರಿಗೆ ಎಡವುಗಲ್ಲಾಗಿ ಅದರಿಂದ ಮೋಸಹೋದವರು ಮೂರ್ಖರೇ ಸರಿ.
8 : ನಿರ್ದೋಷಿಯಾದ ಸಿರಿವಂತನೇ ಭಾಗ್ಯವಂತನು ಹಣವನ್ನು ಬೆನ್ನುಹತ್ತಿ ಹೋಗಲಿಲ್ಲ ಆತನು.
9 : ಅಂಥವನು ಯಾರು? ಅವನನ್ನು ಧನ್ಯನೆಂದೇ ಹೊಗಳಬೇಕು ಏಕೆಂದರೆ ಜನರಾರೂ ಮಾಡದ ಅದ್ಭುತ ಕಾರ್ಯವನ್ನೇ ಅವನು ಮಾಡಿರುವನು.
10 : ಐಶ್ವರ್ಯ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣನಾದವನು ಯಾರು? ಅಂಥವನು ತನ್ನಲ್ಲೇ ಹೆಚ್ಚಳಪಡುವುದು ನ್ಯಾಯವಾದುದು; ಏಕೆಂದರೆ ತಪ್ಪುಮಾಡಲು ಶಕ್ತಿಯಿದ್ದರೂ, ಅವನು ಅದನ್ನು ಮಾಡಲಿಲ್ಲ; ಕೆಡುಕು ಮಾಡಲು ಬಲವಿದ್ದರೂ ಅವನು ಅದನ್ನು ಗೈಯಲಿಲ್ಲ.
11 : ಅಂಥವನಲ್ಲಿಯೇ ಸ್ಥಿರವಾಗಿರುವುದು ಅವನ ಆಸ್ತಿ ಅವನ ಔದಾರ್ಯದ ನಿಮಿತ್ತ ಸಭಿಕರು ಮಾಡುವರು ಸ್ತುತಿ.
12 : ಭೋಜನಾಕೂಟಗಳು ಯಥೇಚ್ಛ ಆಹಾರವಿರುವ ಔತಣಕ್ಕೆ ಕುಳಿತಾಗ ಹೊಟ್ಟೆಬಾಕನಾಗಬೇಡ ‘ಅಪ್ಪಾ! ಎಷ್ಟೊಂದು ತಿಂಡಿ-ತಿನಸಿದೆ’ ಎಂದು ಕೊಳ್ಳಬೇಡ.
13 : ತಿಂಡಿಪೋತನ ಕಣ್ಣು ಕೆಡುಕೆಂಬುದನ್ನು ನೆನಪಿನಲ್ಲಿಡು ಎಲ್ಲಾ ಸೃಷ್ಟಿಗಳಲ್ಲಿ ಕಣ್ಣಿಗಿಂತ ಕೆಟ್ಟದು ಯಾವುದು? ಆದ್ದರಿಂದಲೇ ಪ್ರತಿಮುಖದಲ್ಲೂ ಕಣ್ಣೀರು ಬರುವುದು.
14 : ಕಂಡ ಕಂಡದ್ದಕ್ಕೆಲ್ಲಾ ಕೈಚಾಚಬೇಡ ಬಡಿಸಿಕೊಳ್ಳುವಾಗ ಪಕ್ಕದವನ ಕೈಗೆ ಅಡ್ಡಿಯಾಗಬೇಡ.
15 : ನಿನಗಿರುವಂತೆಯೇ ಇತರ ಅತಿಥಿಗಳಿಗೂ ಆಶೆಯಿದೆಯೆಂಬುದನು ಗಮನಿಸು ಪ್ರತಿಯೊಂದರಲ್ಲೂ ಮರ್ಯಾದೆಯಿಂದ ವರ್ತಿಸು.
16 : ಬಡಿಸಿದುದನ್ನು ಭುಜಿಸು ಸಭ್ಯನಂತೆ ಅಸಹ್ಯವಾಗಿ ನುಂಗದಿರು ಗಬಗಬನೆ.
17 : ಊಟಮುಗಿಸುವುದರಲ್ಲಿ ಮೊದಲಿಗನಾಗಿರು ವುದು ಸಭ್ಯ ಪದೇ ಪದೇ ಬಡಿಸಿಕೊಳ್ಳುವುದು ಅಸಹ್ಯ.
18 : ಬಹುಜನರ ಊಟದ ಪಂಕ್ತಿಯಲ್ಲಿ ತಿನ್ನಲು ತೊಡಗಬೇಡ ಎಲ್ಲರಿಗು ಮುಂದಾಗಿ.
19 : ಮರ್ಯಾದಸ್ಥನು ಸ್ವಲ್ಪದರಲ್ಲೇ ಪಡೆವನು ಸಂತೃಪ್ತಿ ಉಸಿರಾಡಲು ಅವನು ಕಷ್ಟಪಡನು ಹಾಸಿಗೆಯಲ್ಲಿ.
20 : ಮಿತವಾಗಿ ಉಣ್ಣುವುದರಿಂದ ಬರುವುದು ಸುಖನಿದ್ರೆ ಇಂಥವನು ಎದ್ದೇಳುತ್ತಾನೆ ನಸುಕಿನಲ್ಲೇ ಬುದ್ಧಿ ಸ್ವಾಧೀನದಲ್ಲಿರುತ್ತದೆ ಅಂಥವನಿಗೆ. ನಿದ್ದೆಗೇಡು, ಪಿತ್ತದೋಶ, ಹೊಟ್ಟೆಶೂಲೆ ತಪ್ಪವು ಅತೃಪ್ತನಿಗೆ.
21 : ಬಲವಂತದಿಂದ ತಿನ್ನಿಸಿದರೆ, ಎದ್ದೇಳುವುದೇ ಉಚಿತ. ಆಗ ನಿನಗೆ ದೊರಕುವುದು ಸುಕ್ಷೇಮ.
22 : ಮಗನೇ, ನನ್ನ ಮಾತನ್ನು ಕೇಳು: ನನ್ನನ್ನು ತಿರಸ್ಕರಿಸದಿರು ಕೊನೆಗೆ ಅರಿತುಕೊಳ್ಳುವೆ ನಾನು ಹೇಳಿದ್ದು ನಿಜವೆಂದು ಕೆಲಸದಲ್ಲಿ ಚುರುಕಾಗಿರು; ನಿನಗೆ ಯಾವ ರೋಗವು ಬಾರದು.
23 : ಧಾರಾಳವಾಗಿ ಊಟ ಬಡಿಸುವವನನ್ನು ಜನರು ಹೊಗಳುವರು ಅವನನ್ನು ಕುರಿತ ಜನಾಭಿಪ್ರಾಯ ನಂಬಲರ್ಹವಾಗುವುದು.
24 : ಔತಣದ ವಿಷಯದಲ್ಲಿ ಜಿಪುಣವಾದವನನ್ನು ಊರೇ ತೆಗಳುವುದು ಅವನ ಜಿಪುಣತನದ ಸುದ್ದಿ ವೇಗವಾಗಿ ಹರಡುವುದು.
25 : ಸುರಪಾನದಲ್ಲಿ ಶೂರತನವನ್ನು ತೋರಿಸದಿರು ಸುರೆಯು ಅನೇಕರನ್ನು ಸೂರೆಗೊಂಡು ಇರುವುದು.
26 : ಬೆಂಕಿಯ ಹದ ತಿಳಿಯುತ್ತದೆ ಉಕ್ಕಿಗೆ ನೀರು ಕುಡಿಸಿದಾಗ ಸೊಕ್ಕಿನ ಕುಡುಕರ ಪರೀಕ್ಷೆಯಾಗುವುದು ಅವರು ಕುಡಿದು ಕಡಿದಾಡುವಾಗ.
27 : ಮಿತವಾಗಿ ತೆಗೆದುಕೊಂಡರೆ, ದ್ರಾಕ್ಷಾರಸದಲ್ಲಿದೆ ಚೈತನ್ಯ ದ್ರಾಕ್ಷಾರಸವಿಲ್ಲದವರ ಜೀವನದಲ್ಲೇನಿದೆ ಸ್ವಾರಸ್ಯ? ಮನುಷ್ಯನ ಸಂತೋಷವೇ ಅದರ ನಿರ್ಮಾಣದ ಉದ್ದಿಶ್ಯ.
28 : ತಕ್ಕ ಸಮಯದಲ್ಲಿ, ಮಿತವಾದ ಅಳತೆಯಲ್ಲಿ ಸೇವಿಸುವುದರಿಂದ ಮದ್ಯಪಾನ ತರುತ್ತದೆ ಮನಸ್ಸಿಗೆ ಉಲ್ಲಾಸ, ಹೃದಯಕ್ಕೆ ಆನಂದ.
29 : ಮಿತಿಮೀರಿ ಕುಡಿಯುವುದರ ಪರಿಣಾಮ ಕಡಿದಾಟ, ಬಡಿದಾಟ, ಮನಸ್ಸಿಗೆ ಉಪಟಳ.
30 : ಕುಡುಕತನ ಮೂರ್ಖನನು ಕೇಡಿನ ತನಕ ಸಿಟ್ಟಿಗೆಬ್ಬಿಸುತ್ತದೆ ಬಲವನು ಕುಂದಿಸುತ್ತದೆ, ಹೊಡೆದಾಟ ಹೆಚ್ಚಿಸುತ್ತದೆ.
31 : ನಿನ್ನೊಂದಿಗೆ ಕುಡಿಯುತ್ತಿರುವ ನೆರೆಯವನನು ಗದರಿಸಬೇಡ ಅವನು ಸಂತೋಷದಿಂದಿರುವಾಗ ಹೀಯಾಳಿಸಬೇಡ ಕೆಟ್ಟ ಮಾತನು ಆಡಬೇಡ; ಸಾಲ ತೀರಿಸೆಂದು ಪೀಡಿಸಬೇಡ.

· © 2017 kannadacatholicbible.org Privacy Policy