1 : ಮಕ್ಕಳ ಪಾಲನೆ
ಮಗನನ್ನು ಪ್ರೀತಿಸುವ ತಂದೆ ಅವನಿಗೆ
ಪೆಟ್ಟು ಕೊಡುತ್ತಿರುತ್ತಾನೆ ಆಗಾಗ್ಗೆ.
ಕೊನೆಗೆ ಆ ಮಗನಿಂದಲೇ ಉಪಶಮನ
ಪಡೆಯುತ್ತಾನೆ.
2 : ತನ್ನ ಮಗನನ್ನು ಶಿಕ್ಷಿಸುವವನು ಅವನಿಂದ
ಸುಖ ಪಡೆಯುವನು
ತನ್ನ ಪರಿಚಿತರಲ್ಲಿ ಅವನನ್ನು ಕುರಿತು
ಹೆಮ್ಮೆಪಡುವನು.
3 : ಮಗನಿಗೆ ಬೋಧನೆ ನೀಡುವವನು
ಶತ್ರುವನ್ನು ಸಂಕಟಪಡಿಸುವನು
ಆದರೆ ಆ ಮಗನಿಗಾಗಿ ಸ್ನೇಹಿತರಲಿ
ಸಂತೋಷಪಡುವನು.
4 : ತಂದೆ ತೀರಿಹೋದರೂ ತೀರದಂತಿದ್ದಾನೆ
ತನ್ನಂಥ ಮಗನನ್ನು ಬಿಟ್ಟುಹೋಗಿದ್ದಾನೆ.
5 : ಮಗನನ್ನು ಕಂಡು ಸಂತೋಷಪಟ್ಟನು
ಜೀವಿಸುವಾಗ
ದುಃಖಿತನಾಗಿರಲಿಲ್ಲ ತಾನು ಸಾಯುವಾಗ.
6 : ವೈರಿಗಳಿಗೆ ಪ್ರತೀಕಾರ ಮಾಡುವುದಕ್ಕೆ
ಸ್ನೇಹಿತರಿಗೆ ದಯೆತೋರಿಸುವುದಕ್ಕೆ
ಒಬ್ಬನನು ಬಿಟ್ಟುಹೋಗಿದ್ದಾನೆ.
7 : ತನ್ನ ಮಗನನ್ನು ಮುದ್ದಿಸುವವನು
ಅವನ ಗಾಯಗಳನ್ನು ಕಟ್ಟುವನು
ಅವನು ಅಳುವಾಗಲೆಲ್ಲ ಮನಸ್ಸಿನಲ್ಲೇ
ಮರುಗುತ್ತಿರುವನು.
8 : ಪಳಗಿಸದ ಕುದುರೆ ಚಂಡಿಯಾಗುವುದು
ಮನಬಂದಂತೆ ನಡೆಯಲು ಬಿಟ್ಟ ಮಗ
ಹಟಮಾರಿಯಾಗುವನು.
9 : ಮುದ್ದಿಸಿ ಮಗನನ್ನು ಬೆಳೆಸಿದರೆ
ಅವನಿಂದ ನಿನಗೆ ಕಂಟಕವಾಗುವುದು
ಅವನೊಂದಿಗೆ ಸರಸವಾಡಿದರೆ
ಮುಂದೆ ನಿನಗೆ ಸಂಕಟವಾಗುವುದು
10 : ಅವನೊಂದಿಗೆ ನಗೆಯಬೇಡ;
ದುಃಖ ಪಡಬೇಕಾದೀತು
ಕೊನೆಯಲಿ ಹಲ್ಲು ಕಡಿಯಬೇಕಾದೀತು!
11 : ಚಿಕ್ಕವನಾಗಿರುವಾಗ ಮಗನಿಗೆ ಸ್ವಾತಂತ್ರ್ಯ
ಕೊಡಬೇಡ
ಅವನ ಮೂರ್ಖತನವನ್ನು ನೋಡಿ
ಅಲಕ್ಷ್ಯ ಮಾಡಬೇಡ.
12 : ಅಂಕೆಯಲ್ಲಿಡು ಮಗನನ್ನು
ಚಿಕ್ಕವನಾಗಿರುವಾಗಲೇ
ಅವನ ಬೆನ್ನಿಗೆ ಏಟುಕೊಡು
ಎಳೆಯವನಾಗಿರುವಾಗಲೇ.
ಇಲ್ಲವಾದರೆ, ಬೆಳೆಯುವನು
ಮದೋನ್ಮತ್ತನಾಗಿ, ಅವಿಧೇಯನಾಗಿ
ನಿನ್ನ ಮನಸ್ಸನ್ನು ನೋಯಿಸುವನು
ತೀಕ್ಷ್ಣವಾಗಿ.
13 : ನಿನ್ನ ಮಗನನ್ನು ಶಿಕ್ಷಿಸು, ಕಟ್ಟುನಿಟ್ಟಾಗಿ ನಡೆಸು
ಆಗ ನಿನಗೆ ಶೋಕತರದು ಅವನ ಬಾಳು –
ಮಾನಗೆಟ್ಟು.
14 : ಆರೋಗ್ಯ
ರೋಗಪೀಡಿತನಾದ ಸಿರಿವಂತನಿಗಿಂತಲೂ
ಸ್ವಸ್ಥನೂ ದೃಢಕಾಯನೂ ಆದ ಬಡವನೇ
ಮೇಲು.
15 : ಆರೋಗ್ಯವೂ ದೇಹಸ್ವಸ್ಥತೆಯೂ
ಚಿನ್ನಕ್ಕಿಂತಲೂ ಮೇಲು
ಗಟ್ಟಿಮುಟ್ಟಾದ ಕಾಯ ಅಪಾರ
ಧನಕ್ಕಿಂತಲೂ ಲೇಸು.
16 : ದೃಢಕಾಯಕ್ಕಿಂತ ಮೇಲಾದ ಐಶ್ವರ್ಯವಿಲ್ಲ
ಹೃದಯಾನಂದಕ್ಕಿಂತ ಮಿಗಿಲಾದ
ಆನಂದವಿಲ್ಲ.
17 : ಕಷ್ಟದಲಿ ಬಳಲುವುದಕ್ಕಿಂತ ಸಾವೇ ಲೇಸು
ಸದಾ ಬೇನೆಯಿಂದ ನರಳುವುದಕ್ಕಿಂತ ಶಾಶ್ವತ
ಶಾಂತಿ ಲೇಸು.
18 : ಮುಚ್ಚಿದ ಬಾಯಿಯ ಮೇಲೆ ಮೃಷ್ಟಾನ್ನ
ಸಮಾಧಿಯ ಮೇಲೆ ರಾಶಿ ಅನ್ನ, ಏನು
ಲಾಭ?
19 : ನೈವೇದ್ಯದಿಂದ ವಿಗ್ರಹಕ್ಕೆ ಲಾಭವಿದೆಯೆ?
ಅದಕ್ಕೆ ತಿನ್ನಲೂ ಮೂಸಲೂ ಸಾಧ್ಯವೆ?
ಸರ್ವೇಶ್ವರನಿಂದ ದಂಡನೆ ಪಡೆದವನೂ
ಅದರಂತೆಯೇ.
20 : ಕನ್ನಿಕೆಯನ್ನಪ್ಪಿ ನಿಟ್ಟುಸಿರುಬಿಡುವ
ನಪುಂಸಕನಂತೆ
ಕಣ್ಣಿನಿಂದ ನೋಡಿ ಮೂಲುಗುತ್ತಾನಷ್ಟೆ.
21 : ಸಂತೋಷ
ಚಿಂತೆಗೊಳಗಾಗಬೇಡ
ನಿನ್ನ ಆಲೋಚನೆಯಲ್ಲೇ ಕುಗ್ಗಬೇಡ.
22 : ಮನೋಲ್ಲಾಸವೇ ಮನುಷ್ಯನಿಗೆ ಜೀವ
ಸುಖಸಂತೋಷವೇ ದೀರ್ಘಾಯುಷ್ಯ.
23 : ಸುಖವನ್ನು ಅನುಭವಿಸು,
ಮನಸ್ಸಿಗೆ ಸಮಾಧಾನ ಕೊಡು
ಚಿಂತೆಯನ್ನು ದೂರ ಮಾಡು;
ಅದು ನಾಶಗೊಳಿಸಿದೆ ಅನೇಕರನ್ನು
ಅದರಿಂದ ಪ್ರಯೋಜನ ಇರದು ಯಾರಿಗು.
24 : ಸಿಟ್ಟೂ ಹೊಟ್ಟೇಕಿಚ್ಚೂ
ಆಯುಷ್ಯವನ್ನು ಕಡಿಮೆಮಾಡುತ್ತವೆ
ಚಿಂತೆಯು ಅಕಾಲದ ಮುಪ್ಪನ್ನು
ಬರಮಾಡುತ್ತದೆ.
25 : ಸಂತೋಷದ ಮತ್ತು ಸರಳ ಹೃದಯದ ವ್ಯಕ್ತಿ
ಅನ್ನ ಆಹಾರಗಳಿಂದ ಪಡೆವನು ಸಂತೃಪ್ತಿ.