1 : ಪ್ರತೀಕಾರ ಮಾಡುವವನು
ಸರ್ವೇಶ್ವರನಿಂದ ಪ್ರತೀಕಾರ
ಹೊಂದುವನು
ಅವನ ಪಾಪಗಳನ್ನು ಸರ್ವೇಶ್ವರ
ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುವರು.
2 : ಕ್ಷಮೆನೀಡು ನಿನ್ನ ನೆರೆಯವನು ಮಾಡಿದ
ತಪ್ಪಿಗೆ
ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು
ನಿನ್ನ ಪಾಪಗಳಿಗೆ.
3 : ನೆರೆಯವನ ಮೇಲೆ ಮುನಿಸಿಟ್ಟುಕೊಂಡರೆ
ದೇವರಿಂದ ಕ್ಷಮೆಹೊಂದಲು ಆದೀತೆ?
4 : ತನ್ನಂಥ ಮನುಷ್ಯನ ಮೇಲೆ ಅವನಿಗೆ
ಕರುಣೆಯಿಲ್ಲದಿರೆ
ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೆ?
5 : ಕೇವಲ ನರಮಾನವನಾದವನು ಇಂಥ
ಸಿಡುಕಿಟ್ಟುಕೊಂಡರೆ
ಇವನ ಪಾಪಗಳಿಗೆ ದೋಷಪರಿಹಾರ
ಮಾಡುವವರು ಯಾರಿದ್ದಾರೆ?
6 : ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು
ಹಗೆತನವನು ತೊರೆದುಬಿಡು
ಸಾವು ಮರಣಗಳನ್ನು ನೆನೆದು
ದೇವರ ಆಜ್ಞೆಗಳನ್ನು ಪಾಲನೆಮಾಡು.
7 : ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು
ನೆರೆಯವನ ಮೇಲೆ ಮುನಿಸಬೇಡ
ಮಹೋನ್ನತನ ಒಡಂಬಡಿಕೆಯನ್ನು ನೆನಸಿ
ಕೊಂಡು ತಪ್ಪು ನೆಪ್ಪುಗಳನ್ನು ವೀಕ್ಷಿಸಬೇಡ.
8 : ಕಲಹ
ಕಲಹದಿಂದ ದೂರ ಇರು; ಆಗ ಪಾಪಗಳನ್ನು
ಕಡಿಮೆಮಾಡಿಕೊಳ್ಳುವೆ
ಕೋಪಿಷ್ಠನು ಕಲಹವೆಂಬ ಬೆಂಕಿಗೆ ಎಣ್ಣೆ
ಹೊಯ್ಯುತ್ತಾನೆ.
9 : ಪಾಪಾತ್ಮನು ಕಿಡಿಹಾಕುತ್ತಾನೆ ಸ್ನೇಹವಿದ್ದಲ್ಲಿ
ಕಲಹ ಹುಟ್ಟಿಸುತ್ತಾನೆ ಸಮಾಧಾನವಿದ್ದಲ್ಲಿ.
10 : ಸೌದೆಯು ಎಷ್ಟೋ ಅಷ್ಟೇ ಬೆಂಕಿ;
ಕಲಹ ಎಂಥದೋ ಅಂಥದೇ ಕ್ರೋಧ,
ಮನುಷ್ಯನ ಬಲವೆಷ್ಟೋ ಅಷ್ಟೇ ರೌದ್ರ;
ಐಶ್ವರ್ಯ ಹೆಚ್ಚಿದಂತೆ ಹೆಚ್ಚುತ್ತದೆ
ಕೋಪ.
11 : ಫಕ್ಕನೆ ಆರಂಭವಾದ ಕಚ್ಚಾಟ
ಕಿಚ್ಚನು ಹೊತ್ತಿಸುತ್ತದೆ
ತಟ್ಟನೆ ಹುಟ್ಟಿದ ಬಡಿದಾಟ
ರಕ್ತಪಾತಕ್ಕೆ ಒಯ್ಯುತ್ತದೆ.
12 : ಕಿಡಿ ಉರಿಯುವುದು ಊದಿದರೆ
ಅದು ಆರುವುದು ಉಗುಳಿದರೆ
ಇವೆರಡೂ ಬರುವುದು ಬಾಯಿಂದಲೇ.
13 : ಸುಳ್ಳು ಅಪವಾದ
ಶಾಪಹಾಕು ಕಿವಿಯೂದುವವರಿಗೆ;
ಎರಡು ನಾಲಗೆಯುಳ್ಳವರಿಗೆ
ಕಾರಣ, ಇಂಥವರು ಕೆಡಕುಮಾಡಿರುವರು
ಅನೇಕ ಶಾಂತಿಪುರುಷರಿಗೆ.
14 : ಮೂರನೆಯವನ ನಾಲಗೆ ಅನೇಕರನ್ನು
ಕದಲಿಸಿಬಿಟ್ಟಿದೆ
ಅವರನ್ನು ಜನಾಂಗದಿಂದ ಜನಾಂಗಕೆ
ಚದರಿಸಿಬಿಟ್ಟಿದೆ.
ಬಲವುಳ್ಳ ಪಟ್ಟಣಗಳನ್ನು ಕೆಡವಿಬಿಟ್ಟಿದೆ
ಮಹಾತ್ಮರ ಮನೆಗಳನ್ನು ಮಣ್ಣುಪಾಲಾಗಿಸಿದೆ.
15 : ಮೂರನೆಯವನ ನಾಲಗೆ ಶೂರಸ್ತ್ರೀಯರನ್ನು
ಹೊರಕ್ಕಟ್ಟಿದೆ
ಅವನ ದುಡಿಮೆಯ ಫಲವೇ ಅವನಿಗೆ
ದೊರಕದಂತಾಗಿ ಮಾಡಿದೆ.
16 : ಅದಕ್ಕೆ ಲಕ್ಷ್ಯಕೊಡುವವನು ಸಮಾಧಾನ
ಹೊಂದುವುದಿಲ್ಲ
ಶಾಂತಿಯಿಂದ ಜೀವಿಸುವುದಿಲ್ಲ.
17 : ಚಾಟಿಯ ಹೊಡೆತ ಮೈಮೇಲೆ
ಬರೆ ಎಬ್ಬಿಸುತ್ತದೆ
ನಾಲಗೆಯ ಹೊಡೆತ ಎಲುಬುಗಳನ್ನು
ಮುರಿಯುತ್ತದೆ.
18 : ಕತ್ತಿಯಿಂದ ಅನೇಕರು ಬಿದ್ದಿದ್ದಾರೆ
ನಾಲಗೆಯಿಂದ ಇನ್ನೂ ಅನೇಕರು ಸತ್ತಿದ್ದಾರೆ.
19 : ಮೂರನೆಯವನ ನಾಲಗೆಯಿಂದ
ರಕ್ಷಿಸಲ್ಪಟ್ಟವನು
ಅದರ ಕೋಪಕ್ಕೆ ಆಹುತಿಯಾಗದವನು
ಅದರ ನೊಗಕ್ಕೆ ಬಿಗಿಯಲ್ಪಡದವನು
ಅದರ ಕಟ್ಟುಗಳಿಂದ ಕಟ್ಟಲ್ಪಡದವನು
ಧನ್ಯನು !
20 : ಏಕೆಂದರೆ ಅದರ ನೊಗ ಕಬ್ಬಿಣದ ನೊಗವು
ಅದರ ಕಟ್ಟು ಕಂಚಿನ ಕಟ್ಟು.
21 : ಅದರಿಂದಾಗುವ ಮರಣ ದುರ್ಮರಣ
ಅದಕ್ಕಿಂತ ಪಾತಾಳವೇ ಶ್ರೇಷ್ಟ.
22 : ಸಜ್ಜನರ ಮೇಲೆ ಅದು ತನ್ನ ಆಳ್ವಿಕೆ ನಡೆಸಲು
ಸಾಧ್ಯವಿಲ್ಲ
ಅದರ ಉರಿಯಲ್ಲಿ ಅವರು ಸುಟ್ಟು
ಹೋಗುವುದಿಲ್ಲ.
23 : ಸರ್ವೇಶ್ವರನನ್ನು ಬಿಟ್ಟವರು ಬೀಳುವರು
ಅದರಲ್ಲಿ
ಅದು ಆರದೆ ಉರಿಯುತ್ತಿರುತ್ತದೆ ಅವರಲ್ಲಿ
ಅವರ ಮೇಲೆ ಎರಗುವುದು ಸಿಂಹದಂತೆ
ಅವರನ್ನದು ಬಗಿದುಹಾಕುವುದು ಚಿರತೆಯಂತೆ.
24 : ನಿನ್ನ ಸೊತ್ತಿನ ಸುತ್ತಲೂ ಮುಳ್ಳುಬೇಲಿ
ಹಾಕಿಕೊ
ನಿನ್ನ ಬೆಳ್ಳಿಬಂಗಾರವನ್ನು ಬೀಗಹಾಕಿ
ಭದ್ರಪಡಿಸಿಕೊ.
25 : ಅಂತೆಯೆ ನಿನ್ನ ಮಾತುಗಳಿಗೆ ತಕ್ಕಡಿ
ಕಲ್ಲುಗಳನು ಇಟ್ಟುಕೊ
ನಿನ್ನ ಬಾಯಿಗೆ ಅಗುಳಿಯನ್ನು ಮಾಡಿಕೊ.
26 : ಜಾಗ್ರತೆಯಿಂದಿರು ಅದರಲಿ ಜಾರಿಬೀಳದಂತೆ
ಬಿದ್ದುಬಿಟ್ಟೀಯೆ ನಿನಗಾಗಿ
ಹೊಂಚಿಕೊಂಡಿರುವವನ ಮುಂದೆ !